X

ರಾಷ್ಟ್ರವಿರೋಧಿ ಚಿಂತನೆಗೆ ಹಲವು ಮುಖ…

ಇಷ್ಟು ದಿನ ಎಲ್ಲಿದ್ದರು ಇವರೆಲ್ಲ ? ಇವರೆಲ್ಲ ಯಾರು? ಭಾರತದ ಸಾರ್ವಭೌಮತೆಗೆ ಸದಾ ಧಕ್ಕೆ ತರುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಮಾನವನ್ನು ಹರಾಜಾಕುವವರು, ದೇಶಕ್ಕಾಗಿ ಪ್ರಾಣ ಕೊಡುವ ಸಾವಿರಾರು ಸೈನಿಕರ ಆತ್ಮಸ್ಥೈರ್ಯವ ಕುಗ್ಗಿಸುವವರು, ದೇಶದ ಪ್ರಧಾನಿಯನ್ನು ಮನಬಂದಂತೆ ಹೀಯಾಳಿಸುತ್ತಿರುವವರು, ಜ್ಞಾನಾರ್ಜನೆಯ ಕೇಂದ್ರವಾದ ವಿಶ್ವ ವಿದ್ಯಾಲಯಗಳಲ್ಲಿ ದೇಶ ವಿರೋಧಿ ಘೋಷಣೆ ಕೂಗುವವರು, ಪಾಕಿಸ್ತಾನವೆಂಬ ಪಾಪಿ ರಾಷ್ಟ್ರದ ಸ್ನೇಹ ಹಸ್ತ ಚಾಚುತ್ತಿರುವವರು, ರಾಷ್ಟ್ರ ವಿರೋಧಿ ಚಟುವಟಿಕೆಯ ಸಂಘಟನೆಗಳಿಗೆ ಹಿನ್ನೆಲೆಯಾಗಿ ನಿಂತವರು ಎಲ್ಲಿದ್ದರು ಇವರೆಲ್ಲ ಕಳೆದ ಹತ್ತು ವರ್ಷದ ಹಿಂದೆ?

ಪ್ರಧಾನಿಯೆಂಬ ಮಹಾಶಯ ಬಾಯಿ ಮುಚ್ಚಿ ಕುಳಿತಿದ್ದನಲ್ಲ ಅವನಂತೆಯೇ ಇವರೂ ಸುಮ್ಮನಿದ್ದರು. ಯಾವ್ಯಾವ ಸಂಘಟನೆಗೆ ಎಲ್ಲೆಲ್ಲಿ ಎಷ್ಟು ಸಂದಾಯವಾಗಬೇಕಿತ್ತೋ, ಯಾರ್ಯಾರಿಗೆ ಎಷ್ಟು ಸವಲತ್ತುಗಳು ಸಿಗಬೇಕಿತ್ತೋ ಅಷ್ಟು ಸವಲತ್ತುಗಳು ಸಲೀಸಾಗಿ ದೊರಕುತಿತ್ತಲ್ಲ ಹಾಗಾಗಿ ಸದ್ದಿಲ್ಲದೆ ಸುಖವಾಗಿ ಮೆರೆದಾಡುತ್ತಿದ್ದರು. ದೆಹಲಿ ಲುತ್ಯೇನ್ಸ್ ಗಳ ಆರ್ಭಟ ಮಾಧ್ಯಮ ಜಗತ್ತನ್ನು ಸಲೀಸಾಗಿ ಆಡಿಸುತ್ತಿದ್ದ ಸಮಯ ಅದು, ಭಾರತವನ್ನು ಬೇರೆ ರಾಷ್ಟ್ರಗಳಲ್ಲಿ ಎಷ್ಟು ಕೆಳಮಟ್ಟದಲ್ಲಿ ಚಿತ್ರಿಸಿಕೊಡಬೇಕೋ ಅಷ್ಟು ಕೆಳಮಟ್ಟದಲ್ಲಿ ಚಿತ್ರಿಸಿ ಕಂಡ ಕಂಡವರಿಂದ ಹಣ ಪೀಕುತ್ತಿದ್ದ ಈ ಲುತ್ಯೇನ್ಸ್ ಗಳು ತಿಂದುಂಡುಕೊಂಡು ಸುಖವಾಗಿದ್ದರು. ಯಾವಾಗ ಮೋದಿ ಈ ದೇಶದಲ್ಲಿ ಅಧಿಕಾರಕ್ಕೆ ಬಂದರೋ ಆವಾಗ ಇವರ ಆಟಗಳು ಬಂದಾದವು. ಹೊರ ರಾಷ್ಟ್ರಗಳಿಂದ ಹರಿದು ಬರುತ್ತಿದ್ದ ಕೋಟಿ ಕೋಟಿ ಹಣಗಳನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತ ನಮ್ಮದು ದಲಿತರ, ಹಿಂದುಳಿದವರ, ತುಳಿತಕ್ಕೊಳಗಾದವರ ಮೇಲೆತ್ತುವ ಸಮಾಜಸೇವಾ ಸಂಸ್ಥೆ ಎಂದು ಮುಖವಾಡ ಧರಿಸಿದ್ದ ಅದೆಷ್ಟೋ ಸಂಘಟನೆಗಳ ಮಗ್ಗಲು ಮುರಿದಿದ್ದು ಮೋದಿ. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಹೆಸರಲ್ಲಿ ನಡೆಯುತ್ತಿದ್ದ ಅಪಾರ ಅಕ್ರಮಗಳ, ದೇಶವಿರೋಧಿ ಚಟುವಟಿಕೆಗಳ ಮೇಲೆ ವರದಿ ತರಿಸಿಕೊಂಡ  ಮೋದಿ ಸರಕಾರ ಎಲ್ಲ ಸಂಸ್ಥೆಗಳ ಕಾರ್ಯಚಟುವಟಿಕೆಯ ಮೇಲೆ ಹದ್ದಿನ ಕಣ್ಣಿರಿಸಿತ್ತು. ಯಾವಾಗ ಈ ಸ್ವಯಂ ಸೇವಾ ಸಂಸ್ಥೆಗಳ(NGO) ಬಂಡವಾಳ ಬಯಲಾಯಿತೋ ನಮೋ ಸರಕಾರ ಸಾವಿರಾರು ಸಂಸ್ಥೆಗಳ ನೋಂದಣಿಯನ್ನು ರದ್ದುಮಾಡಿತು. ಅಲ್ಲಿಗೆ ದೇಶದ ಒಳಗಿದ್ದು ಭಾರತಾಂಬೆಯ ತುಂಡು ಮಾಡುವ ಕನಸು ಹೊತ್ತಿದ್ದ ಸಾವಿರಾರು ಸ್ವಯಂ ಘೋಷಿತ ಮಾನವ ಹಕ್ಕುಗಳ ಹೋರಾಟಗಾರರ ಆಟಾಟೋಪ ಒಂದು ಹಂತಕ್ಕೆ ತಣ್ಣಗಾಗಿತ್ತು. ಆದರೆ ಅದಾಗಲೇ ಅವರ ಜೇಬು ತುಂಬಿರುವ ಸಾವಿರಾರು ಕೋಟಿ ಹಣ ಅವರ ಹಾರಾಟಕ್ಕೆ ಸಾಕಿತ್ತು. ಊರಿಗೊಂದು ಮಾರಿಗೊಂದು ಸಂಘಟನೆಯ ಕಟ್ಟಿಕೊಂಡು ಒಂದು ಹಂತಕ್ಕೆ ಅವರು ಗಟ್ಟಿಯಾಗಿಬಿಟ್ಟಿದ್ದರಲ್ಲ ಅದನ್ನು ಸರಿಪಡಿಸಲು ಸಾಧ್ಯವೇ? ಆಗಲೇ ಶುರುವಾಗಿದ್ದು ನೋಡಿ “ಮಕ್ಕಳಾಟ”. ಒಳಗಿನಿಂದಲೇ ದೇಶ ವಿರೋಧಿ ಕೃತ್ಯ ನಡೆಸಿ ಯಶಸ್ವಿಯಾಗಲೂ ಹೊರಟಿದ್ದ ಆ ಸಂಘಟನೆಗಳು ನೇರವಾಗಿ ಅಖಾಡಕ್ಕೆ ಧುಮುಕಿದ್ದು  ಕಮ್ಮುನಿಸ್ಟ್ ಚಿಂತನೆಗಳ ಮೂಲಕ, ಕನಯ್ಯ ಕುಮಾರನ ಮೂಲಕ ಅಥವಾ ಮೊನ್ನೆ ಮೊನ್ನೆ ಸುದ್ಧಿಯಾದ ಗುರ್ಮೆಹೆರ್ ಕೌರ್ ಮೂಲಕ.

ಭಾರತವೆಂದರೆ ಒಂದು ಜಾತ್ಯಾತೀತ ರಾಷ್ಟ್ರ ಆದರೆ ಜಾತಿಗಳ ಆಧಾರದಲ್ಲಿ ಅಥವಾ ಕೆಳಜಾತಿಯವರು ನೀವು ನಿಮ್ಮ ಹಕ್ಕಿಗಾಗಿ ಹೊಡೆದಾಡಿ ಎಂದು ಬಡವರನ್ನು ಎತ್ತಿಕಟ್ಟಿ ಸಮಾಜದ ಶಾಂತಿಯನ್ನು ಕದಡುವುದರ ಮೂಲಕ ಮತ್ತು ಪ್ರಮುಖವಾಗಿ ದೇಶಕ್ಕಾಗಿ ಮಡಿದ ಸಾವಿರಾರು ಸೈನಿಕರನ್ನು ಕನಿಷ್ಟಪಕ್ಷ ನೆನೆಯದೇ ಯುದ್ಧ ಮಾಡುವುದು ತಪ್ಪು,”ಪಾಕಿಸ್ತಾನ” ನನ್ನ ತಂದೆಯನ್ನು ಕೊಲ್ಲಲಿಲ್ಲ ಎಂದು ಹುತಾತ್ಮ ಸೈನಿಕನ ಮಗಳ ಬಾಯಲ್ಲಿ ಹೇಳಿಸುವಷ್ಟರ ಮಟ್ಟಿಗೆ ಈ ಸಂಘಟನೆಗಳು ಕೆಲಸ ಮಾಡುತ್ತಿವೆಯಲ್ಲ ಹೇಗೆ ಇದು ಸಾಧ್ಯ? ದೇಶದ ಸಾರ್ವಭೌಮತೆಗೆ ಧಕ್ಕೆ ತಂದು ಕಲಿಯುವ ಮನಸ್ಸುಗಳಲ್ಲಿ ದೇಶ ವಿರೋಧಿ ಚಿಂತನೆಗಳನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಈ “ಆಜಾದಿ ಗ್ಯಾಂಗ್” ತನ್ನ ಬೇರನ್ನು ಅದೆಷ್ಟು ವಿಸ್ತರಿಸಿದೆ ನೀವೇ ನೋಡಿ. ಒಬ್ಬ ಮೋದಿ ಇದನ್ನು ಎಷ್ಟು ತಡೆಯಬಲ್ಲ? ದೇಶದ ಹಿತಾಸಕ್ತಿಗೆ ತನ್ನ ಸರ್ವಸ್ವವನ್ನೂ ಸಮರ್ಪಿಸಿದ ಮೋದಿಯ ಕೈ ಬಲಪಡಿಸಿ ಭಾರತಾಂಬೆಯ ರಕ್ಷಣೆ ಮಾಡದಿದ್ದಲ್ಲಿ ನೀವು ಕಂಡ ನಾಳೆ ನಿಮ್ಮದಾಗಲು ಸಾಧ್ಯವೇ ಇಲ್ಲ.

ತನ್ನ ಪ್ರಾಣ ಈ ದೇಶಕ್ಕೆ ಸೀಮಿತ ಎಂದು ಗಡಿಯಲ್ಲಿ ಬಂದೂಕು ಹಿಡಿದು ನಿಂತಿರುವ ಸಿಪಾಯಿಗಳ ಅಗ್ರಗಣ್ಯ ಕೆಲಸವಾದ “ಸರ್ಜಿಕಲ್ ಸ್ಟ್ರೈಕ್” ಗೆ ಸಬೂತು ಕೇಳುವ ಪಾಪಿಗಳಿಗೆ ಏನೆನ್ನಬೇಕೋ ತಿಳಿಯುತ್ತಲೇ ಇಲ್ಲ. ಪಾಕಿಸ್ತಾನದೆಡೆಗೆ ಮುಖ ಮಾಡಿ ಬಂದೂಕು ಹಿಡಿದಿರುವ ಸೈನಿಕ ತನ್ನ ತಾಯ್ನಾಡಿನ ರಕ್ಷಣೆಗೆ ಪ್ರಾಣಕೊಡಲೂ ತಯಾರಿರುವಾಗ ಆತನ ಆತ್ಮಸ್ಥೈರ್ಯ ಒಂದು ಕ್ಷಣ ಕುಗ್ಗಲು “ಭಾರತ್ ತೇರೆ ತುಕಡೇ ಹೋಂಗೆ” ಎಂಬ ಈ ಘೋಷಣೆ ಸಾಕಲ್ಲವೇ? ಹೊರಗಿರುವ ಉಗ್ರಗಾಮಿಗಳನ್ನು ನೇರವಾಗಿ ಎದುರಿಸಿ ಉಡಾಯಿಸಬಹುದು ಆದರೆ ಭಾರತಾಂಬೆಯ ಅನ್ನವ ತಿಂದು ತಾಯ್ಗಂಡತನ ಪ್ರದರ್ಶಿಸುತ್ತಿರುವ ಪರವಾನಿಗೆ ಸಹಿತವಾಗಿರುವ ಆಂತರಿಕ ಉಗ್ರಗಾಮಿಗಳನ್ನು ಏನು ಮಾಡೋಣ?

ಇವರು ಧರಿಸಿರುವ ಮುಖವಾಡ ಎಂತದ್ದು ಎಂದರೆ ಮೇಲ್ನೋಟಕ್ಕೆ ಇವರು ಭಾರತದ ಉದ್ಧಾರಕರು ಎನ್ನಬಹುದು. ಬ್ರಷ್ಟಾಚಾರ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಹೋರಾಟ ಮಾಡುವ ರಾಜಧಾನಿಯ ನಾಯಕ ರಾಷ್ಟವಿರೋಧಿ ಘೋಷಣೆ ಕೂಗಿದವನ ಪರ ನಿಲ್ಲುತ್ತಾನೆ, ಅಜ್ಮಲ್ ಕಸಬ್ ನನ್ನು ತನ್ನ ಪ್ರೇರಕ ಶಕ್ತಿ ಎಂದುಕೊಂಡಿರುವವನಿಗೆ ಸೊ ಕಾಲ್ಡ್ ಮಾಧ್ಯಮವೊಂದು ವೇದಿಕೆ ಕಲ್ಪಿಸುತ್ತದೆ,ಸಾವಿರಾರು ಅಮಾಯಕರ ಜೀವ ತಿಂದವನ ಸ್ವಾಗತಕ್ಕೆ ಕಮಾನು ಕಟ್ಟಲು “ಅಹಿಂದ” ಸರಕಾರ ತಯಾರಾಗಿರುತ್ತದೆ ಏನಾಗಿದೆ ಇವರಿಗೆಲ್ಲ? ಭಾರತಾಂಬೆಯ ಈ ಮಣ್ಣನ್ನು ಮಲಿನಗೊಳಿಸುತ್ತಿರುವ ಈ ಮತಿಹೀನರಿಗೆ ಉತ್ತರ ಕೊಡುವವಾನ್ಯಾರೋ ಕಾಣೆ. ಆದರೆ ನನ್ನ ರಾಷ್ಟ್ರದ ರಕ್ಷಣೆ ನನ್ನ ಮೂಲ ಕರ್ತವ್ಯ ಎಂದುಕೊಂಡರೆ ಮಾತ್ರ ಭಾರತಾಂಬೆ ನಗಬಲ್ಲಳು.

ಈಗ ರಾಂಜಾಸ್ ಕಾಲೇಜ್ ನಲ್ಲಾದ ಘಟನೆಯನ್ನೇ ನೋಡಿ,ದೇಶ ವಿರೋಧಿ ಘೋಷಣೆ ಕೂಗಿರುವ ಮತ್ತು ದೇಶದ್ರೋಹಿ ಎಂಬ ಹಣೆಪಟ್ಟಿ ಹೊತ್ತಿರುವ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠಿತ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಕಾರ್ಯಕ್ರಮದ ಅತಿಥಿಯನ್ನಾಗಿ ಕರೆಸುತ್ತಾರೆ ಎಂದರೆ ಅದು ಎಷ್ಟು ಸರಿ? ಆತ ಅಲ್ಲಿಗೆ ಬಂದು ಮತ್ತೆ ನಮ್ಮ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವುದಿಲ್ಲ ಎಂದು ಏನು ಗ್ಯಾರಂಟೀ? ಆದರೆ ಇದನ್ನು ತಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತನ್ನೇ ದೋಷಿ ಎಂದು ಮಾಧ್ಯಮಗಳು ಕರೆದವಲ್ಲ ಏನೆನ್ನಬೇಕು ನಮ್ಮ ದೇಶದ ಮಾಧ್ಯಮವನ್ನು? ಮಾದ್ಯಮಗಳ ಪಾಲಿಗೆ  ಎಡಪಂಥೀಯ ವಿದ್ಯಾರ್ಥಿಗಳು ಬಂದ್ ನಡೆಸಿದರೆ ಅದು ಹೋರಾಟ ಅದೇ ಪರಿಷತ್ತಿನ ವಿದ್ಯಾರ್ಥಿಗಳು ನಡೆಸಿದರೇ? ಅದು ಗೂಂಡಾಗಿರಿ. ನೀವು ನಿಮ್ಮ ಮನೆಯವರ ಜೊತೆ ಸಂತೋಷದ ಕ್ಷಣವನ್ನು ಕಳೆಯುತ್ತಿರುತ್ತೀರಿ ಆದರೆ ಅದೇ ಅಲ್ಲಿ ಸಿಯಾಚಿನ್ ನಲ್ಲಿ ನಿಮ್ಮ ಸಂತೋಷಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದು ಒಬ್ಬ ಸೈನಿಕ ಹಗಲೂ ರಾತ್ರಿ ಎನ್ನದೆ ನಿಂತಿರುತ್ತಾನಲ್ಲ ಅವನಿಗೆ ಮನೆ, ಸಂಸಾರ ಇಲ್ಲವಾ? “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಯು ಸೈನಿಕರ ಶಕ್ತಿಯನ್ನು ನೂರ್ಮಡಿಗೊಳಿಸುವ ಮಂತ್ರವಾಗಿದ್ದರೆ ಜಾತ್ಯಾತೀತ ಮುಖವಾಡ ಧರಿಸಿದವರಿಗೆ ಅದು “ಬಲಪಂಥೀಯರ ಘೋಷ ವಾಕ್ಯ” ಏನೆನ್ನೋಣ ಈ ಹೋರಾಟಗಾರರಿಗೆ?

ಒಂದಂತೂ ಸತ್ಯ “ರಾಷ್ಟ್ರೀಯತೆಯ” ವಿಷಯ ಬಂದಾಗ ನಾನು ನಾನು ಯಾವಾಗಲೂ ವಿದ್ಯಾರ್ಥಿ ಪರಿಷತ್ತಿನ ಪರ. ಸ್ವಾಮೀ ನಮಗೆ ದೇಶ ಮೊದಲು ಅದಾದ ನಂತರ ಈ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಪ್ರಮುಖವಾಗಿ ಸಿದ್ದಾಂತಗಳು. ರಾಷ್ಟ್ರ ಮೊದಲೆಂಬ ಪ್ರಧಾನಿ, ರಾಷ್ಟ್ರವೇ ತಾಯಿ ಎಂದು ಕಲಿಸಿದ  ಸಂಘಟನೆಯ ಜೊತೆಗೆ ಸದಾ ನಾವಿದ್ದೇವೆ. ರಕ್ತಪಿಪಾಸುಗಳಾಗಿರುವವರ ಆರ್ಭಟ ಜೋರಾಗುವ ಮೊದಲು ವಂದೇಮಾತರಂ ಗೀತೆ ರಾಷ್ಟ್ರವ್ಯಾಪಿ ಆವರಿಸಲಿ ಎಂಬುದೇ ನನ್ನ ಆಶಯ.  

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post