X

ಪದಕಗಳಿಷ್ಟೇ?! ಇದು ಸಹಜ ಪ್ರಶ್ನೆ…  ಆದರೆ……

ಆಕೆ ದೇಶಕ್ಕಾಗಿ ಸೆಣೆಸಿ ಬೆಳ್ಳಿಯ ಪದಕವೇನೋ ತಂದಿದ್ದಾಳೆ. ಸಂತೋಷ. ಭಾರತೀಯ ಬ್ಯಾಡ್ಮಿಂಟನ್ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಧನೆಯನ್ನು ಮಾಡಿರುವ ಪಿ ವಿ ಸಿಂಧು ಕೋಟ್ಯಾನುಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುವುದರಲ್ಲಿ ದೂಸರಾ ಮಾತೆ ಇಲ್ಲ. ದೇಶದ ಕ್ರೀಡೆಯ ಬಗ್ಗೆ ಮುತುವರ್ಜಿ ವಹಿಸುವವರು, ನಾಯಕರುಗಳು ಈಗ ಮಾಡಬೇಕಾದ ಕಾಮನ್’ಸೆನ್ಸ್  ಕೆಲಸ ಆಕೆಗೊಂದು ಉತ್ತಮ ಇನ್ಸ್’ಟಿಟ್ಯೂಟ್ ಅಥವಾ ಆಕೆಯ ಆಟದಲ್ಲಿ ಮತ್ತಷ್ಟು ಸುಧಾರಣೆ ಬರಲು ಉತ್ತಮ ಫೀಲ್ಡ್ ಗಳ ನಿರ್ಮಾಣವೊ, ಅಥವಾ ಒಳ್ಳೆಯ ದರ್ಜೆಯ ಕ್ರೀಡಾ ಸಲಕರಣೆಗಳೋ, ಅಥವಾ ಇನ್ನೂ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಏರ್ಪಡಿಸಿ ಈ ಮೂಲಕ ಇನ್ನೂ ಹೆಚ್ಚಿನ ಬಲಿಷ್ಠ ಆಟಗಾರರೊಡನೆ ಸೆಣೆಸಲು ಅವಕಾಶವನ್ನು ಕಲ್ಪಿಸಿ ಮುಂದಿನ ಒಲಿಂಪಿಕ್ಸ್’ನಲ್ಲಿ ಚಿನ್ನ ಗೆಲ್ಲುವಂತೆ ಆಕೆಯನ್ನು ಹುರಿದುಂಬಿಸುವುದು. ರಾಜ್ಯದ, ದೇಶದ ಕ್ರೀಡಾ  ಮುಂದಾಲೋಚನೆ ಇರುವ ಯಾವುದೇ ವ್ಯಕ್ತಿ ಮಾಡಬೇಕಾದ ಕೆಲಸವಿದು ಎನ್ನುವುದು ಒಬ್ಬ ಸಾಮಾನ್ಯನಿಗೂ ಗೊತ್ತು.

ಆದರೆ, ನಮ್ಮ ಸೊ ಕಾಲ್ಡ್ ರಾಜಕಾರಣಿಗಳು ಮಾತ್ರ ಏನೋ ಹೊಸತೊಂದು ಸಾಧಿಸುವ ಭರದಲ್ಲಿ ಬೆಳ್ಳಿ ಗೆದ್ದ ಆಕೆಯ ಮುಂದೆ ದೇಶದ ಉನ್ನತ ಹಾಗು ಅಷ್ಟೇ ಜವಾಬ್ದಾರಿಯುತವಾದ ಹುದ್ದೆಗಳಲ್ಲೊಂದಾದ ಜಿಲ್ಲಾಧಿಕಾರಿ ಅಥವಾ ಅದಕ್ಕೆ ಸಮನಾದ ಕೆಲಸದ ಪ್ರಸ್ತಾಪವನ್ನು ಹಿಡಿದು ಹೋಗುತ್ತಾರೆ. ವಿಶ್ವದ ನಂಬರ್ ಒನ್ ಆಟಗಾರ್ತಿಯಾಗುವ ಗುರಿಯಿರುವ ಆಕೆಯಲ್ಲಿ ಈ ರೀತಿಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕಾಡುತ್ತಾರೆ. ಸುದ್ದಿಘೋಷ್ಠಿಯನ್ನು ಮಾಡುತ್ತಾರೆ. ಎದೆಯುಬ್ಬಿಸಿಕೊಂಡು ವಿಚಾರವನ್ನು ಜಗತ್ತಿನ ಮುಂದಿಡುತ್ತಾರೆ. ಒಬ್ಬ ಕ್ರೀಡಾಪಟು ತಾಲೂಕು, ಜಿಲ್ಲಾ , ರಾಜ್ಯ, ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದ್ದಲ್ಲಿ ಬೆಳೆದು ಗಳಿಸಿದ ಅನುಭವವನ್ನು ಇದಕ್ಕೆ ಗುಲಗಂಜಿಯಷ್ಟೂ ಸಂಬಂಧವಿಲ್ಲದ ಯಾವುದೊ ಒಂದು ಸರ್ಕಾರೀ ವೃತ್ತಿಗೆ ತುಲನೆ ಮಾಡಿ ಆತನನ್ನು/ಆಕೆಯನ್ನು ಆ ಕುರ್ಚಿಯ ಮೇಲೆ ಹೀಗೆ ಕೂರಿಸುವುಸು ಅದೆಷ್ಟು ಸಮಂಜಸ? ಮೇಲಾಗಿ ಆ ಕ್ರೀಡಾಪಟು ಕೂರುತ್ತಿರುವುದು ಅಆಇಈ ಕಲಿಯುತ್ತಿರುವ ಮಕ್ಕಳಿಗೆ ತಲೆ ಬಾಚಿ, ಚಪ್ಪಲಿ ಹಾಕುವುದನ್ನು ಕಲಿಸಿಕೊಡುವ ವಿಚಾರವಲ್ಲ. ಲಕ್ಷಾನುಲಕ್ಷ  ಜನರ ಕೋಟ್ಯಾನುಕೋಟಿ ಕಷ್ಟಕಾರ್ಪಣ್ಯಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ, ಕಾನೂನುಬದ್ದವಾಗಿ, ನ್ಯಾಯಯುತವಾಗಿ ಅರಿತು, ಬೆರೆತು, ಅವುಗಳಿಗೊಂದು ಸೂಕ್ತ ಪರಿಹಾರವನ್ನು ಕೊಡುವ ಜವಾಬ್ದಾರಿಯುತ ಕೆಲಸ. ಇದು ವರ್ಷವಿಡೀ ಕ್ರೀಡಾ ಅಂಗಳದಲ್ಲೇ ಕಳೆಯಬೇಕಾದ ಇಪ್ಪತ್ತು ಇಪ್ಪತ್ತೊಂದು ವಯಸ್ಸಿನ ಹುಡುಗ ಹುಡುಗಿಯರಿಗೆ ಸಾಧ್ಯವಾಗುವ ವಿಷಯವೇ? ಒಂದು ಪಕ್ಷ ವಯಸ್ಸು ಇಂತಹ ಅಭಿಪ್ರಾಯವನ್ನು ಬದಲಿಸಬಹುದು ಎಂದಿಟ್ಟಿಕೊಳ್ಳೋಣ ಆದರೆ ಕಾಲ? ಈ ಅಮೂಲ್ಯ ಕಾಲವನ್ನು ಕ್ರೀಡಾಪಟು ಆಟದ ಅಂಗಳದಲ್ಲಿ ವಿನಿಯೋಗಿಸಬೇಕೋ ಅಥವಾ ಜವಾಬ್ದಾರಿಯುತ ಸರ್ಕಾರೀ ಹುದ್ದೆಯಲ್ಲಿ ಕಳೆಯಬೇಕೋ ಎಂಬ ಪ್ರಶ್ನೆಯನ್ನು ಹೀಗೆ ಬೇಕಾಬಿಟ್ಟಿ ಉದ್ಯೋಗದ ಆಮಿಷವೊಡ್ಡುವ ಸರ್ಕಾರಗಳು  ಕೇಳಿಕೊಳ್ಳಬೇಕು.

ಒಲಿಂಪಿಕ್ಸ್’ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಸಾಧನೆ ಎರಡಂಕಿ ತಲುಪಿಲ್ಲ ಎಂಬ ಕೊರಗು ಅಪ್ಪನ ಆಲದಮರ ಸಸಿಯಾಗಿದ್ದಾಗಿನಿಂದಲೂ ಇದೆ. ಈಜುಗಾರಿಕೆ, ಬಾಸ್ಕೆಟ್ ಬಾಲ್, ಜುಡೋ, ಸೈಕ್ಲಿಂಗ್ ಹೀಗೆ ಇನ್ನೂ ಹಲವು ಕ್ರೀಡೆಗಳಲ್ಲಿ  ಭೂತಕನ್ನಡಿ ಹಿಡಿದು ಹುಡುಕಿದರೂ ನಮ್ಮ  ಒಂದೋ ಎರಡೂ ಹೆಸರುಗಳು ಸಿಕ್ಕವು ಅಷ್ಟೇ. ಅದೂ ಕೇವಲ ಪದಕದ ಮೂರು ಮೈಲು ದೂರಲ್ಲೇ ಬಂದು ಮರೆಯಾದವುಗಳು. ಇದಕ್ಕೆ ಕಾರಣವೆಂದರೆ ಸಾವಿರ ಜವಾಬು ಕೊಡುವ ನಾವುಗಳು ಹೀಗೆ ಉದಯೋನ್ಮುಖ ಪ್ರತಿಭೆಗಳು ಇನ್ನೇನು ಸಾಧನೆಯ ಗುರಿ ಮುಟ್ಟಲು ಒಂದಿಂಚು ಇರುವಾಗಲೇ ಎಡವಿ ಬೀಳುತ್ತಿರುವುದು ಏಕೆಂದು ಕೇಳಿಕೊಳ್ಳಲು ವಿಫಲರಾಗುತ್ತೇವೆ. ಅದು ಹೆಚ್ಚಾಗಿ ಪ್ರದರ್ಶನದ ವೈಫಲ್ಯವಾಗಿದ್ದರೂ ಎಲ್ಲೋ ಒಂದೆಡೆ ಆತನಿಗೆ ಅಥವಾ ಆಕೆಗೆ ತಾನು ಈ ಮಟ್ಟಕ್ಕೆ ಬಂದಿರುವುದೇ ಮಹಾನ್ ಸಾಧನೆ, ಇನ್ನು ಸೋತರು ಚಿಂತೆಯಿಲ್ಲ ಎಂಬ ಸಂತೃಪ್ತಿಯ ಭಾವ ಒಳಗೊಳಗೇ ಮೂಡಿರುತ್ತದೆ. ಅಲ್ಲದೆ ಸರ್ಕಾರಗಳ ಈ ಬಗೆಯ ಪ್ರಸ್ತಾಪಗಳೂ ಅಂತಹ ಮನೋಭಾವಕ್ಕೆ ತಕ್ಕ ಪುಷ್ಟಿಯನ್ನು ತುಂಬುತ್ತವೆ. ಇಂದು ರಾಜ್ಯಮಟ್ಟದಲ್ಲಿ ಸೆಣೆಸಿದರೆ ಈ ಹುದ್ದೆ, ರಾಷ್ಟ್ರಮಟ್ಟಕ್ಕೆ ಹೋದರೆ ಆ ಹುದ್ದೆ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದರೆ ಇಷ್ಟು ದುಡ್ಡು, ಅಷ್ಟು ಫ್ಲ್ಯಾಟು ಎಂಬ ಬಹುಮಾನಗಳಿಗೆ ಅದೆಷ್ಟೋ ಆಟಗಾರ ಆಟಗಳು ಸೀಮಿತವಾಗತೊಡಗಿವೆ. ಈ ಮೂಲಕ ಮುಂದಿನ ಕ್ರೀಡಾ ಪ್ರತಿಭೆಗಳನ್ನೇ ಪರೋಕ್ಷವಾಗಿ ಕಟ್ಟಿ ಕೂರಿಸುತ್ತಿದ್ದೇವೆಯೇ ಎಂಬುದನ್ನು ನಾವು ಅವಲೋಕಿಸಬೇಕಾಗಿದೆ. ಪದಕಗಳು ಬರುತ್ತಿಲ್ಲವೆಂದು ಕೊರಗುವ, ಆರ್ಥಿಕವಾಗಿ ಸಾಕಷ್ಟು ಸದೃಢವೆನಿಕೊಂಡಿರುವ ಭಾರತೀಯರು (ಸರ್ಕಾರಗಳು) ಒಬ್ಬ ಕ್ರೀಡಾಪಟು ದಿನದ 24 ಘಂಟೆಯೂ ಕ್ರೀಡೆಗಾಗಿಯೇ ತೊಡಗಿಸಕೊಳ್ಳಲು ಬೇಕಾದ ಸೌಲಭ್ಯವನ್ನು ಕಲ್ಪಿಕೊಡಲು ಮಾತ್ರ ಜಿಪುಣುತನ ಮಾಡುತ್ತೇವೆ. ನೀನು ನಾಲ್ಕು ಗಂಟೆ ಅಭ್ಯಾಸ ಮಾಡು ಹಾಗು ಉಳಿದ ಎಂಟು ಗಂಟೆ ಕೆಲಸಮಾಡಬೇಕೆಂದು ರೈಲ್ವೆ ಇಲಾಖೆಗೊ ಅಥವಾ ಪೊಲೀಸ್ ಇಲಾಖೆಗೊ ಕಳುಹಿಸುತ್ತೇವೆ. ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಡಿದೆತ್ತುವ ಕ್ರೀಡಾಳುಗಳು ಎದುರಿಸುತ್ತಿರುವ ಗಂಭೀರ ಸವಾಲುಗಳಿವು.

ಇಂದು ಒಬ್ಬ ಜಿಲ್ಲಾಧಿಕಾರಿಯಾಗಿ, ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಥವಾ ರೈಲ್ವೆ ಇಲಾಖೆಯ ಮತ್ಯಾವುದೋ ಉನ್ನತ ಹುದ್ದೆಯನ್ನಲಂಕರಿಸಲು ಒಬ್ಬ ದೇಶದ ನಾಗರಿಕ ಹಗಲು ರಾತ್ರಿಯೆನ್ನದೆ ತನ್ನ ಎಲ್ಲವನ್ನೂ ಅರ್ಪಿಸಿ, ಉತ್ತರಪತ್ರಿಕೆಯಲ್ಲಲ್ಲದೆ ವ್ಯಕ್ತಿಗತವಾಗಿಯೂ ಉತ್ತಮ ಅಂಕವನ್ನು ಗಳಿಸುತ್ತಾನೆ. ಇಂತಹ ಕೇವಲ ಒಂದು ಹುದ್ದೆಗೆ ಸಾವಿರಾರು ಯುವಕ ಯುವತಿಯರು ಅರ್ಹರಾಗಿರುತ್ತಾರೆ. ದೇಶದ ಉನ್ನತಿಗೆ ತಮ್ಮ ನಿಸ್ವಾರ್ಥ ಸೇವೆಯ ಮುಖೇನ ಸಾಧ್ಯವಾದಷ್ಟು ಮಟ್ಟಿನ ಕೊಡುಗೆಯನ್ನು ಕೊಡಲು ಅಣಿಯಾಗಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಆ ಹುದ್ದೆಯ  ಗಂಧ ಗಾಳಿಯೂ ಅರಿಯದ ಯಾರೋ ಒಬ್ಬನನ್ನು ತಂದು ಅಲ್ಲಿಗೆ ಕೂರಿಸಿದರೆ ಇತ್ತ ಕಡೆ ಅದೆಷ್ಟು ಸಾವಿರ ಕನಸುಗಳು ಉದುರಿ ಕಮರಿ ಹೋಗಬಹುದು? ಅಲ್ಲದೆ ಅದೆಷ್ಟು ದಕ್ಷ ಯುವಕರು ಇಂದು ಅಧಿಕಾರಿಗಳಾಗದೆ ವ್ಯವಸ್ಥೆ ಅಸ್ತವ್ಯಸ್ತ ವಾಗಬಹುದು? ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಿಗೆ ಮಾನ್ಯತೆ ಉಳಿಯುತ್ತದೆಯೇ? ಇದಕ್ಕೆಲ್ಲ ನೇರ ಹೊಣೆಯನ್ನು ಹೊರುವವರು ಯಾರು? ಒಟ್ಟಿನಲ್ಲಿ ಆಟಗಾರರಿಗೆ ಉತ್ತಮ ಆಟಗಾರರಾಗಲು ಅಧಿಕಾರಿಗಳಿಗೆ ದಕ್ಷ ಅಧಿಕಾರಿಗಲೂ ಸಾಧ್ಯವಾಗದ ದ್ವಂದ್ವ ಪರಿಸ್ಥಿತಿ ನಿರ್ಮಾಣವಾಗಿ ಹೋಗಿದೆ!

ಹೆಸರು ಸರ್ವಾನ್ ಸಿಂಗ್. ದೇಶಕ್ಕೆ ಸ್ವಾತಂತ್ರ್ಯ ಬಂದು ಎಳೇ ವರ್ಷಗಳ ನಂತರ ಏಶಿಯನ್ ಗೇಮ್ಸ್ (1954) ಒಂದರಲ್ಲಿ ಭಾರತಕ್ಕೆ ಚಿನ್ನದ ಪದಕವೊಂದು ಬಂದಿತೆಂದರೆ ಅದು ಈತನ ಅದ್ಭುತ ಓಟದಿಂದ ಮಾತ್ರ. ಅಂದು ದೇಶಕ್ಕೆ ಚಿನ್ನದ ಪದಕವನ್ನು ಗೆದ್ದು ತಂದ ಈತ ಮುಂದೆ ಒಲಿಂಪಿಕ್ಸ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ನೀಡುವ ಕನಸ್ಸನ್ನು ವಿಧಿಯ ಆಟ ಕೊನೆಗಾಣಿಸಿತು. ದುರದೃಷ್ಟವಶಾತ್ ಅಪಘಾತವೊಂದರಲ್ಲಿ ತನ್ನ ಕಾಲನ್ನು ಮುರಿದುಕೊಂಡ ಈತನಿಗೆ ಉಳಿದದ್ದು ಜೀವನ ನಿರ್ವಹಣೆಯ ಸಾಲು ಸಾಲು ಸವಾಲುಗಳು. ಸೈನ್ಯದಿಂದ ನಿವೃತ್ತಿ ಹೊಂದಿದ ಮೇಲಂತೂ ಅಕ್ಷರ ಸಹ ನಲುಗಿ ಹೋಗಿದ್ದ ಸಂಸಾರದ ದೋಣಿಯನ್ನು ಸಾಗಿಸಲು ಆತ ತಾನು ಅಂದು ಗೆದ್ದ ಚಿನ್ನದ ಪದಕವನ್ನೂ ಮಾರಬೇಕಾದ ಸನ್ನಿವೇಶ ಎದುರಾಗುತ್ತದೆ. ಅಲ್ಲದೆ ಮುಂದೆ ಟ್ಯಾಕ್ಸಿ ಚಾಲಕನಾಗಿ ತನ್ನ ಇಳಿ ವಯಸ್ಸಿನಲ್ಲಿಯೂ ದುಡಿಯಬೇಕಾಗುತ್ತದೆ. ಇಂದು ಪದಕವೊಂದು ಗೆದ್ದರೆ ರಾಶಿ ರಾಶಿ ಹಣದ ಹೊಳೆಯನ್ನು ಹರಿಸುವ, ಸಿಕ್ಕ ಸಿಕ್ಕ ಉನ್ನತ ಉದ್ದೇಗಳನ್ನು ಪೇರಳೆ ಹಣ್ಣುಗಳಂತೆ ಕಿತ್ತು ಕೊಡುವ ಸರ್ಕಾರಗಳಿಗೆ ದೇಶದ ವಿಜಯಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಈಗಿನ ಹಲವು ಆಟಗಾರರಿಗೆ ಸ್ಪೂರ್ತಿಯ ಅಡಿಗಳಲ್ಲಾದ ಸರ್ವಾನ್ ಸಿಂಗ್’ರಂತ ಹಲವರು ಏತಕ್ಕೆ ಕಣ್ಣಿಗೆ ಕಾಣರು? 2007 ರ ಚೊಚ್ಚಲ ವಿಶ್ವಕಪ್ ಭಾರತದ ಪಾಲಾಗಲು ಪ್ರಮುಖ ಪಾತ್ರವಹಿದ್ದ ಜೋಗಿಂದೆರ್ ಶರ್ಮ ಇಂದು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಹಾಗಾದರೆ ಅವನ ಕ್ರಿಕೆಟ್ ಜೀವನ ಅಂದು ಪಾಕಿಸ್ತಾನದ ವಿರುದ್ಧ ಕೊನೆಯ ಓವರ್’ನ್ನು ಎಸೆಯಲು ಮಾತ್ರ ಸೀಮಿತವಾಗಿದ್ದಿತೇ? ಒಂದು ಪಕ್ಷ ಆತ ನಿಜವಾಗಿಯೂ ಒಬ್ಬ ಪೊಲೀಸ್ ಅಧಿಕಾರಿಯೇ ಆಗಬೇಕಿದ್ದಾಗಿದ್ದರೆ ಆತನಿಗೆ ಕ್ರಿಕೆಟ್ ಎಂಬ ಒಳದಾರಿಯೇ ಬೇಕಾಗಿದ್ದಿತೇ?

ಇದು ಕೇವಲ ಒಂದೆರಡು ಆಟಗಾರ ವಿಷಯವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಪ್ರತಿಯೊಬ್ಬ ಭಾರತೀಯ ಆಟಗಾರನಿಗೂ ಎದುರಾಗುತ್ತಿರುವ ಸವಾಲುಗಳಿವು. ಆಟವೋ ಅಥವಾ ಉದ್ಯೋಗವೋ ಎಂಬ ಇಕ್ಕಟಿನ ಸ್ಥಿತಿಯಲ್ಲಿ ಹೆಚ್ಚಿನ ಆಟಗಾರರು ಆಯ್ದುಕೊಳ್ಳುತ್ತಿರುವುದು ಉದ್ಯೋಗವನ್ನೇ. ದೇಶದ ಕೀರ್ತಿಗಿಂತ ಜೀವನ ನಿರ್ವಹಣೆಯೇ ಮುಖ್ಯವೆಂದು ಯೋಚಿಸುವುದರಲ್ಲಿ ಅವರ ತಪ್ಪೇನೂ ಇಲ್ಲ. ಅಸಲಿಗೆ ನಷ್ಟ ಉಂಟಾಗುವುದು ಮಾತ್ರ ದೇಶದ ಕ್ರೀಡಾ ಭವಿಷ್ಯಕ್ಕೆ. ಒಬ್ಬ ಆಟಗಾರ ಆಟಗಾರನಾಗಿಯೇ ನಿವೃತ್ತಿ ಹೊಂದಬೇಕೆ ವಿನಃ ನಾಮ್ಕಾವಾಸ್ಥೆ ಆಗಿ ಹೋಗುವ ಅಧಿಕಾರಿಯಾಗಲ್ಲ.  ಇಂತಹ ಪ್ರಸ್ತುತ ಸ್ಥಿತಿಯಲ್ಲಿ ದೇಶಕ್ಕಾಗಿ ಪದಕವನ್ನು ಗಳಿಸಿಕೊಡೆಂದು ಆಟಗಾರರನ್ನು ಕೇಳುವುದು ಯಾರ ನಾಚಿಕೇಡುತನ, ನೀವೇ ಹೇಳಿ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post