“ಕ್ಯಾನ್ಸರ್ ಮುಕ್ತ ಬದುಕು ಆರಂಭವಾಗುವುದು ನಿಮ್ಮ ಅಡುಗೆಮನೆಯಲ್ಲಿ” ಹೀಗಂತ ಹೇಳಿದ್ದು ಡೇವಿಡ್ ಸರ್ವನ್ ಶ್ರಿಬರ್. ಡೇವಿಡ್ ಒಬ್ಬ ಡಾಕ್ಟರ್ ಹಾಗೆಯೇ ಮಿದುಳು ಕ್ಯಾನ್ಸರ್ ಸರ್ವೈವರ್ ಕೂಡ ಹೌದು. ಕ್ಯಾನ್ಸರ್’ನ ನಂತರ ಡೇವಿಡ್ ಗಮನ ಹರಿಸಿದ್ದು ಆಹಾರಪದಾರ್ಥಗಳ ಮೇಲೆ. ನಾವು ತೆಗೆದುಕೊಳ್ಳವ ಆಹಾರ ಕ್ಯಾನ್ಸರ್ ಉಂಟಾಗುವುದನ್ನ ತಡೆಗಟ್ಟಬಲ್ಲದೇ, ಸರ್ವೈವರ್’ಗಳು ಪುನಃ ಕ್ಯಾನ್ಸರ್’ಗೆ ಒಳಗಾಗದೆ ಇರುವಂತೆ ತಮ್ಮ ಆಹಾರದಲ್ಲಿಯೇ ಬದಲಾವಣೆಯನ್ನ ಮಾಡಿಕೊಳ್ಳಬಹುದೇ ಎಂದು ವಿಚಾರಮಾಡಿ ಅಂತಹ ಆಹಾರಶೈಲಿಯನ್ನು ಅಳವಡಿಸಿಕೊಂಡಿದ್ದಾನೆ ಹಾಗೂ ಆ ಕುರಿತು ಇತರೆ ಕ್ಯಾನ್ಸರ್ ರೋಗಿಗಳೊಂದಿಗೆ, ಸಾಮಾನ್ಯರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾನೆ ಜೊತೆಗೆ “ಆಂಟಿ-ಕ್ಯಾನ್ಸರ್; ಎ ನ್ಯೂ ವೇ ಆಫ್ ಲೈಫ್”(Anticancer: a new way of life) ಎಂಬ ಪುಸ್ತಕವನ್ನು ಕೂಡ ಬರೆದಿದ್ದಾನೆ.
ಕ್ಯಾನ್ಸರ್ ವಿರೋಧಿ ಆಹಾರಪದಾರ್ಥಗಳನ್ನು ದಿನನಿತ್ಯ ಹೆಚ್ಚು ಹೆಚ್ಚು ಬಳಸುವುದು ನಮಗಿರುವ ಸುಲಭ ಮಾರ್ಗಗಳಲ್ಲಿ ಒಂದು. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ಪ್ರತಿನಿತ್ಯ ಹಣ್ಣು ಹಾಗೂ ತರಕಾರಿಗಳಿಂದ ಕೂಡಿದ ಡಯಟ್’ನ್ನು ಅನುಸರಿಸುವುದು ಒಳ್ಳೆಯದು ಅದರಲ್ಲೂ ಕೊನೆಪಕ್ಷ ಐದು ಬಾರಿ ಸರಿಯಾದ ಪ್ರಮಾಣದಲ್ಲಿ ಎನ್ನುತ್ತಾರೆ. ಕ್ಯಾನ್ಸರ್’ನ್ನು ದೂರವಿರಿಸಲು ಸಹಾಯವಾಗಿರುವ ಕೆಲ ಆಹಾರಪದಾರ್ಥಗಳು ಇಂತಿವೆ.
ಬೆರ್ರಿ ಹಣ್ಣುಗಳು :
ಬೆರ್ರಿ ಹಣ್ಣುಗಳು ಉತ್ತಮ ಕ್ಯಾನ್ಸರ್ ವಿರೋಧಿ ಆಹಾರವನ್ನಾಗಿ ಪರಿಗಣಿಸಲಾಗಿದೆ. ಬೆರ್ರಿ ಹಣ್ಣುಗಳು ಹೆಚ್ಚು ಆಂಟಿ-ಆಕ್ಸಿಡೆಂಟ್ಸ್’(Anti-oxidants)ಗಳನ್ನು ಹೊಂದಿದ್ದು ಜೀವಕೋಶಗಳನ್ನ ಹಾಳುಮಾಡುವ ಫ್ರೀ ರ್ಯಾಡಿಕಲ್ಸ್(Free radicals)’ಗಳನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್’ನ ಹರಡುವಿಕೆಯನ್ನು ಕೂಡ ಕಡಿಮೆಮಾಡಬಲ್ಲದು. ಹಾಗಾಗಿ ನಿಮ್ಮ ಡಯಟ್’ನಲ್ಲಿ ಬ್ಲುಬೆರ್ರಿ, ಬ್ಲ್ಯಾಕ್’ಬೆರ್ರಿ ಸ್ಟ್ರಾಬೆರಿಗಳನ್ನು ಸೇರಿಸಿಕೊಳ್ಳಿ.
ಬೆಳ್ಳುಳ್ಳಿ:
ಒಂದು ವರದಿಯ ಪ್ರಕಾರ ಪ್ರತಿನಿತ್ಯ ಹೆಚ್ಚು ಬೆಳ್ಳುಳ್ಳಿಯನ್ನು ಬಳಸುವವರು ಕ್ಯಾನ್ಸರ್’ಗೆ ಒಳಗಾಗುವುದು ಬಹಳ ಕಡಿಮೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಅನ್ನನಾಳ, ಹೊಟ್ಟೆ ಹಾಗೂ ಕೊಲೊನ್’ಗಳ ಕ್ಯಾನ್ಸರ್’ನ್ನು ದೂರವಿರಿಸುತ್ತದೆ. ಇವುಗಳು ಕ್ಯಾನ್ಸರ್’ಕಾರಕ ಅಂಶಗಳನ್ನು ಕಾರ್ಯನಿರ್ವಹಿಸದಂತೆ ತಡೆಯುತ್ತದೆ. ಕ್ಯಾನ್ಸರ್ ಸೆಲ್’ಗಳನ್ನು ಮತ್ತೆ ವಿಭಜನೆಯಾಗುವುದನ್ನು ಕೂಡ ತಡೆಯುತ್ತದೆ ಎನ್ನಲಾಗಿದೆ.
ಟೊಮ್ಯಾಟೋ:
ಹಾರ್ವರ್ಡ್’ನ ಅಧ್ಯಯನದ ಪ್ರಕಾರ ಟೋಮ್ಯಾಟೊ ಬಳಕೆ ಗಂಡಸರನ್ನು ಪ್ರೊಸ್ಟ್ರೇಟ್ ಕ್ಯಾನ್ಸರ್’ನಿಂದ ದೂರವಿಡುತ್ತದೆ ಎಂದು. ಟೊಮ್ಯಾಟೋನಲ್ಲಿ ಲೈಕೋಪೀನ್ ಎಂಬ ಆಂಟಿ-ಆಕ್ಸಿಡೆಂಟ್ ಅತಿ ಹೆಚ್ಚು ಪ್ರಮಾಣದಲ್ಲಿದ್ದು ನಮ್ಮ ಜೀವಕೋಶಗಳ ಡಿ.ಎನ್.ಎ’ಗಳನ್ನ ಹಾನಿಯಾಗದಂತೆ ರಕ್ಷಿಸುತ್ತದೆ.
ಕ್ರುಸಿಫೆರಸ್ ತರಕಾರಿಗಳು:
ಎಲೆಕೋಸು, ಹೂಕೋಸು ಬ್ರಾಕೊಲಿಗಳನ್ನೊಳಗೊಂಡ ಗುಂಪನ್ನ ಕ್ರುಸಿಫೆರಸ್ ತರಕಾರಿಗಳು ಎನ್ನಲಾಗುತ್ತದೆ. ಇವುಗಳು ಕ್ಯಾನ್ಸರ್’ನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವರದಿಗಳ ಪ್ರಕಾರ ಇವು ಉತ್ತಮ ಆಂಟ್-ಇನ್’ಫ್ಲಾಮೇಟರಿ(Anti-Inflammetary)ಯಾಗಿವೆ. ಇವುಗಳು ಡಿ.ಎನ್.ಎ’ಗಳಿಗೆ ಹಾನಿಯುಂಟುಮಾಡುವ ಫ್ರೀ-ರ್ಯಾಡಿಕಲ್’(Free radicals)ಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್’ಕಾರಕ ರಾಸಾಯನಿಕಗಳಿಂದ ರಕ್ಷಣೆ ನೀಡುವುದಲ್ಲದೇ, ಟ್ಯೂಮರ್’ಗಳ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸುತ್ತದೆ. ಹಾಗೆಯೇ ಕ್ಯಾನ್ಸರ್ ಜೀವಕೋಶಗಳನ್ನು ಸಾಯುವಂತೆ ಪ್ರೇರೇಪಿಸುತ್ತದೆ. ಎಲೆಕೋಸು ಹಾಗೂ ಬ್ರಾಕೊಲಿಯಲ್ಲಿರುವ ಸಲ್ಫೋರಫೇನ್ಸ್ ಹಾಗೊ ಇಂಡೋಲ್ಸ್ ಎಂಬ ಆಂಟಿ-ಆಕ್ಸಿಡೆಂಟ್ಸ್ ಡಿ.ಎನ್.ಎ ರಚನೆಯನ್ನು ಕಾಪಾಡುತ್ತದೆ.
ಗ್ರೀನ್ ಟೀ:
ಕ್ಯಾನ್ಸರ್’ನಲ್ಲಿ ಮೆಟಾಸ್ಟೇಸಿಸ್ ಬಹಳ ಅಪಾಯಕಾರಿ. ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕ್ಯಾನ್ಸರ್ ಸೆಲ್’ಗಳು ಹರಡುವುದನ್ನ ಮೆಟಾಸ್ಟೆಸಿಸ್ ಎನ್ನುವರು. ಇಂತಹ ಮೆಟಾಸ್ಟೆಸಿಸ್’ನ್ನು ತಡೆಗಟ್ಟುವಲ್ಲಿ ಗ್ರೀನ್ ಟೀ ಬಹಳ ಸಹಾಯಕಾರಿ. ಇದು ಟ್ಯೂಮರ್’ ಬೆಳೆಯಲು ಸಹಾಯಕವಾಗುವ ಆಂಜಿಯೋಜೆನೆಸಿಸ್’ನ್ನು ತಡೆಯುತ್ತದೆ ಅಲ್ಲದೇ, ಟ್ಯೂಮರ್’ ಹರಡದಂತೆ ನೋಡಿಕೊಳ್ಳುತ್ತದೆ. ಟೀನಲ್ಲಿರುವ ಆಂಟಿ-ಆಕ್ಸಿಡೆಂಟ್ ಕ್ಯಾಟೆಚಿನ್ಸ್ ಫ್ರೀ ರ್ಯಾಡಿಕಲ್’(Free radicals)ಗಳನ್ನ ಜೀವಕೋಶಗಳಿಗೆ ಹಾನಿ ಮಾಡದಂತೆ ತಡೆಯುತ್ತದೆ ಜೊತೆಗೆ ಟ್ಯೂಮರ್’ಗಳ ಗಾತ್ರ ಚಿಕ್ಕದಾಗುವಂತೆ ಮಾಡುತ್ತದೆ. ಬ್ಲ್ಯಾಕ್ ಟೀ ಹಾಗೂ ಗ್ರೀನ್ ಟೀ ಎರಡರಲ್ಲೂ ಈ ಕ್ಯಾಟೆಚಿನ್ಸ್’ಗಳಿವೆ ಆದರೆ ಗ್ರೀನ್ ಟೀಯಲ್ಲಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಿದೆ. ಇವುಗಳು ಡಿಟಾಕ್ಸಿಫೈಯಿಂಗ್ ಎಂಜ಼ೈಮ್’ಗಳನ್ನ ಕೂಡ ಹೊಂದಿದ್ದು ಇವೂ ಕೂಡ ಕ್ಯಾನ್ಸರ್’ನ್ನ ತಡೆಯಬಲ್ಲದು.
ಅರಿಶಿನ:
ಅರಿಶಿನದಲ್ಲಿರುವ ಕರ್ಕುಮಿನ್ ಎಂಬ ಅಂಶ ಕ್ಯಾನ್ಸರ್’ನ್ನು ತಡೆಯಬಲ್ಲದು. ಅಲ್ಲದೇ ಇದು ಉತ್ತಮ ಆಂಟಿ-ಇನ್’ಫ್ಲಾಮೇಟರಿಯಾಗಿದೆ. ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಕ್ಯಾನ್ಸರ್’ನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಕಾಳುಮೆಣಸಿನೊಂದಿಗೆ ಸೇವಿಸಿದಲ್ಲಿ ಟ್ಯೂಮರ್’ನ್ನು ಶ್ರಿಂಕ್ ಮಾಡುವುದಲ್ಲದೇ, ಕ್ಯಾನ್ಸರ್ ಪುನಃ ಆಗದಂತೆ ನೋಡಿಕೊಳ್ಳುತ್ತದೆ.
ಕಿತ್ತಳೆ ಬಣ್ಣದ ಹಣ್ಣು ತರಕಾರಿಗಳು:
ಕಿತ್ತಳೆ ಬಣ್ಣದಿಂದ ಕೂಡಿರುವ ಕ್ಯಾರೆಟ್, ಸ್ವೀಟ್ ಪೊಟ್ಯಾಟೋ, ಕಿತ್ತಳೆ ಹಣ್ಣು, ಮಾವು ಇತ್ಯಾದಿ ಕ್ಯಾನ್ಸರ್’ನ್ನು ದೂರವಿರಿಸಬಲ್ಲದು. ಈ ಕಿತ್ತಳೆ ಬಣ್ಣದ ಆಹಾರ ಪದಾರ್ಥಗಳು ಕೆರೊಟಿನಾಯ್ಡ್ ಎಂಬ ಆಂಟಿ-ಆಕ್ಸಿಡೆಂಟ್’ಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊಂದಿರುತ್ತದೆ. ಇವುಗಳು ಕೂಡ ಫ್ರೀ ರ್ಯಾಡಿಕಲ್ಸ್(Free radicals)ಗಳನ್ನ ಸ್ಥಿರಗೊಳಿಸಿ ಜೀವಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಕ್ಯಾರೆಟ್ ಬಗ್ಗೆ ವೆಬ್’ಸ್ಟರ್ ಕೆಹ್ರ್ ಎಂಬಾತ ಹೇಳುವುದನ್ನ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆತ ತನ್ನ ಲೇಖನವೊಂದರಲ್ಲಿ ಪ್ರತಿನಿತ್ಯ ಕೇವಲ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದು ಕ್ಯಾನ್ಸರ್ ಕಡಿಮೆ ಮಾಡಿಕೊಂಡವರು ಇದ್ದಾರೆ ಎನ್ನುತ್ತಾನೆ.
ಹಸಿರು ಸೊಪ್ಪುಗಳು:
ಹಸಿರು ಸೊಪ್ಪುಗಳು ಬೀಟ-ಕೆರೋಟಿನ್ ಹಾಗೂ ಲ್ಯುಟಿನ್ ಎಂಬ ಆಂಟಿ-ಆಕ್ಸಿಡೆಂಟ್’ಗಳ ಆಗರವಾಗಿವೆ. ಅಮೇರಿಕನ್ ಇನ್’ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರೀಸರ್ಚ್ ನಡೆಸಿದ ಅಧ್ಯಯನದ ಪ್ರಕಾರ ಇವುಗಳು ಕೆಲ ರೀತಿಯ ಕ್ಯಾನ್ಸರ್ ಟ್ಯೂಮರ್’ಗಳ ಬೆಳವಣಿಗೆಯನ್ನ ಕುಂಠಿತಗೊಳಿಸಬಲ್ಲದು.
ದ್ರಾಕ್ಷಿ:
ಕೆಂಪು ದ್ರಾಕ್ಷಿಯ ಸಿಪ್ಪೆಯಲ್ಲಿ ರೆಸ್ವೆರೆಟ್ರಾಲ್ ಎಂಬ ಆಂಟಿ-ಆಕ್ಸಿಡೆಂಟ್ಸ್ ಅತಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇವುಗಳಿಂದ ತಯಾರಿಸಿದ ಜ್ಯೂಸ್ ಹಾಗೂ ರೆಡ್’ವೈನ್ ಕೂಡ ಈ ರೆಸ್ವೆರೆಟ್ರಾಲ್’ಗಳನ್ನು ಹೊಂದಿರುತ್ತದೆ. ಈ ರೆಸ್ವೆರೆಟ್ರಾಲ್’ಗಳು ಕ್ಯಾನ್ಸರ್ ಆರಂಭವಾಗುವುದಕ್ಕೆ ಅಥವಾ ಹರಡಲು ಬಿಡುವುದಿಲ್ಲ. ಪ್ರಯೋಗಾಲಯದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ಹಲವಾರು ರೀತಿಯ ಕ್ಯಾನ್ಸರ್ ಸೆಲ್’ಗಳನ್ನು ಬೆಳೆಯದಂತೆ ತಡೆಯುತ್ತದೆ.
ಬೀನ್ಸ್:
ಬೀನ್ಸ್’ಗಳು ಕೂಡ ಉತ್ತಮ ಆಂಟಿ-ಆಕ್ಸಿಡೆಂಟ್’ನ ಆಕರವಾಗಿದೆ. ಅದರಲ್ಲೂ ಪಿಂಟೋ ಹಾಗೂ ರೆಡ್ ಕಿಡ್ನಿ ಬೀನ್’ಗಳಲ್ಲಿ ಅತ್ಯಂತ ಹೇರಳವಾಗಿ ಆಂಟಿ-ಆಕ್ಸಿಡೆಂಟ್’ಗಳಿವೆ. ಅಲ್ಲದೇ ಇವು ಫೈಬರ್’ನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ಅತಿ ಹೆಚ್ಚು ಫೈಬರ್ ಇರುವ ಆಹಾರ ಪದಾರ್ಥಗಳನ್ನ ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಮಶ್ರೂಮ್:
ಮಶ್ರೂಮ ಒಂದು ಉತ್ತಮ ಕ್ಯಾನ್ಸರ್ ವಿರೋಧಿ ಆಹಾರ ಪದಾರ್ಥ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ವೈಟ್ ಬಟನ್ ಮಶ್ರೂಮ್ ಕ್ಯಾನ್ಸರ್ ತಡೆಯುವಲ್ಲಿ ಉತ್ತಮ ಪಾತ್ರವಹಿಸುತ್ತದೆ. ಇದರಲ್ಲಿರುವ ಲೆಕ್ಟಿನ್ ಎಂಬ ಅಂಶ ಕ್ಯಾನ್ಸರ್’ನ ಬೆಳವಣಿಗೆಯನ್ನ ಕುಂಠಿತಗೊಳಿಸುತ್ತದೆ. ಸುಮಾರು ೨೦೦೦ ಚೈನೀಸ್ ಹೆಣ್ಣುಮಕ್ಕಳ ಮೇಲೆ ಮೇಲೆ ನಡೆಸಿದ ಅಧ್ಯಯನ ಈ ಅಂಶವನ್ನು ಸಾಬೀತುಗೊಳಿಸಿದೆ.
ಈ ಮೇಲೆ ಹೇಳಿದ ಆಹಾರ ಪದಾರ್ಥಗಳನ್ನ ನಮ್ಮ ಆಹಾರದಲ್ಲಿ ಹೆಚ್ಚು ಬಳಸುವುದರಿಂದ ಕ್ಯಾನ್ಸರ್’ನ್ನು ದೂರವಿರಿಸಬಹುದು.
ಮೊನ್ನೆ ನನ್ನ ಬಳಿ ಒಬ್ಬರು ಕೇಳುತ್ತಿದ್ದರು, “ನೀವು ಹೊರಗಡೆ ಏನನ್ನೂ ತಿನ್ನುವುದಿಲ್ಲವಾ, ಹೋಟೆಲ್’ಗಳಲ್ಲಿ ಅಥವಾ ಎಲ್ಲಾದರೂ ಹೊರಗೆ ಚಾಟ್ಸ್’ಗಳನ್ನ” ಅಂತ. ಕ್ಯಾನ್ಸರ್ ನಂತರ ನಾವು ತೆಗೆದುಕೊಳ್ಳುವ ಆಹಾರದ ಮೇಲೆ ನಿಗಾ ಇಡಬೇಕು ನಿಜ. ಆದರೆ ಇತರೆ ಕೇವಲ ’ರುಚಿಗಾಗಿ’ ಎನ್ನುವಂತಹ ಆಹಾರಗಳನ್ನ ಸೇವಿಸಲೇಬಾರದು ಅಂತೇನಿಲ್ಲ. ಅಪರೂಪಕ್ಕೊಮ್ಮೆ ತಿನ್ನಬಹುದು.! ನನ್ನ ವಿಷಯ ಹೇಳಬೇಕು ಅಂದರೆ ಇತ್ತೀಚೆಗಂತೂ ಸಿಕ್ಕಾಪಟ್ಟೆ ’ನ್ಯೂಟ್ರಿಶನ್ ನ್ಯೂಟ್ರಿಶನ್’ ಅಂತಿರುತ್ತೀನಿ. ತಟ್ಟೆಗೆ ಹಾಕಿದ ಅಡುಗೆಯಲ್ಲಿ ಅನ್ನ, ಸಾಂಬಾರು, ಪಲ್ಯದ ತರ ಕಾಣೋದಕ್ಕಿಂತ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಫೈಬರ್ ಮಾತ್ರ ಕಾಣುತ್ತಿರುತ್ತೆ.(ಅದರ ಪರಿಣಾಮವೇ ಈ ಲೇಖನ) ಮಧ್ಯೆ ಎಲ್ಲೋ ಒಂದಿನ ಇದ್ದಕ್ಕಿದ್ದ ಹಾಗೆ ಅನಿಸೋಕೆ ಶುರುವಾಗತ್ತೆ, “ಛೇ! ನಾನು ನಾಳೆ ಸತ್ತೋದ್ರೆ, ಗೋಲ್’ಗಪ್ಪಾ ತಿನ್ಲಿಲ್ಲ ಅಂತ ಖಂಡಿತಾ ಪಶ್ಚಾತ್ತಾಪ ಪಡ್ತೀನಿ ಅಂತ” ಹಾಗೆ ಒಂದು ಗೋಲ್’ಗಪ್ಪಾ ಪಾರ್ಟಿ ಆಗತ್ತೆ ಮನೆಯಲ್ಲಿ. ಅಂದರೆ ಅಪರೂಪಕ್ಕೊಮ್ಮೆ ನಿಮಗೆ ಇಷ್ಟವಾಗುವಂತಹ ತಿಂಡಿ ತಿನಿಸನ್ನು ತಿನ್ನಿ ತೊಂದರೆ ಇಲ್ಲ. ತುಂಬಾ ಕಟ್ಟುನಿಟ್ಟಿನಲ್ಲಿಯೇ ಇರಬೇಕು, ಅವುಗಳನ್ನ ಇನ್ನು ಮುಟ್ಟುವುದೇ ಇಲ್ಲ ಎನ್ನುವಂತಿರಬೇಕು ಅಂತಿಲ್ಲ.
ಆದರೆ ನೀವಿನ್ನೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೀರಿ, ಕೀಮೋವನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದರೆ ಹೊರಗಿನ ತಿಂಡಿ ತಿನಿಸನ್ನು ಮರೆತುಬಿಡಿ!! ಕೀಮೋ ತೆಗೆದುಕೊಳ್ಳುತ್ತಿರುವಾಗ ಯಾವುದೇ ರೀತಿಯ ಇನ್’ಫೆಕ್ಷನ್ ಆಗಬಾರದು. ಅದು ಬಹಳ ಅಪಾಯಕಾರಿ. ಕೀಮೋ ತೆಗೆದುಕೊಳ್ಳುವಾಗ ನಿಮ್ಮ ಆಹಾರ ಹೆಚ್ಚು ಕಟ್ಟುನಿಟ್ಟಿನಿಂದ ಇರುವುದೇ ಒಳ್ಳೆಯದು. ಅಲ್ಲದೇ, ಆ ಸಮಯದಲ್ಲಿ ಕ್ಯಾನ್ಸರ್ ವಿರೋಧಿ ಆಹಾರವನ್ನೇ ಹೆಚ್ಚು ಸೇವಿಸುವುದರಿಂದ ಕ್ಯಾನ್ಸರ್ ಕಡಿಮೆ ಮಾಡುವುದರಲ್ಲಿ ಅವುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಕೀಮೋನಿಂದಾಗಿ ಹಾಗೂ ಅದರ ಸೈಡ್’ ಎಫೆಕ್ಟ್’ಗಳಿಂದಾಗಿ ಹೆಚ್ಚು ಆಹಾರ ಸೇವಿಸಲು ಸಾಧ್ಯವಾಗುದಿಲ್ಲ. ತೂಕ ಕಡಿಮೆಯಾಗುತ್ತದೆ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ಅತ್ಯಂತ ಪೋಷಕಾಂಶಗಳನ್ನು ಹೊಂದಿರುವ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗೋಧಿಹುಲ್ಲಿನ ಜ್ಯೂಸ್ ಬಳಸುವುದು ಉತ್ತಮ!
ನೆಸ್ಲೆಯವರ ಟ್ಯಾಗ್ ಲೈನ್ ಇದೆಯಲ್ಲ ಉತ್ತಮ ಆಹಾರ, ಉತ್ತಮ ಜೀವನ.( “ಗುಡ್ ಫುಡ್, ಗುಡ್ ಲೈಫ್”) ಅದನ್ನೇ ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳೋಣ. ಕ್ಯಾನ್ಸರ್ ವಿರೋಧಿ ಆಹಾರಗಳನ್ನೇ ದಿನನಿತ್ಯ ಹೆಚ್ಚೆಚ್ಚು ಸೇವಿಸುತ್ತಾ ಕ್ಯಾನ್ಸರ್’ನ್ನು ದೂರವಿಡೋಣ.
ಮಾಹಿತಿ ಆಕರ:
Facebook ಕಾಮೆಂಟ್ಸ್