X
    Categories: ಕಥೆ

ಪಾರಿ ಭಾಗ ೬

ಪಾರಿಯ ಬದುಕಲ್ಲಿ ಮತ್ತದೇ ಕರಾಳ ದಿನಗಳು ಪ್ರಾರಂಭವಾದಾಗ ಪಾರಿ ಖಿನ್ನತೆಯ ಕೊನೆಯ ಹಂತ ತಲುಪಿದ್ದಳು.ಅವರ ತಿರಸ್ಕಾರಕ್ಕೆ ಅವರು ಕೊಟ್ಟ ಅನ್ನವೂ ಸೇರದಂತಾಗಿತ್ತು.ಮತ್ತಾರು ತಿಂಗಳೊಳಗೆ ಬದುಕು ಬೇಡವೆನ್ನುವಷ್ಟು ಬೇಸರವಾಗಿತ್ತು ಪಾರಿಗೆ‌.ಪಾರಿ ಪೂರ್ಣ ಕೃಶಳಾಗಿದ್ದಳು.

 ಅದೊಂದು ದಿನ ಊರ ಪಂಚರರಲ್ಲೊಬ್ಬರಾದ ಸುಬ್ಬಣ್ಣನವರು ಶಾಂತಸ್ವಾಮಿಗಳ ಮನೆಗೆ ಮಗಳ ಮದುವೆಗೆ ಒಳ್ಳೆಯ ದಿನಾಂಕ ಗೊತ್ತುಪಡಿಸಲು ಬಂದಿದ್ದರು.ಸಿಟಿಯಲ್ಲಿ ಓದುತ್ತಿದ್ದ ಮಗಳು ಶೋಭಳಿಗೆ(ಪುಟ್ಟಿ) ಹೆಂಡತಿಯ ತಮ್ಮ ಮನೋಜನೊಂದಿಗೆ ಮದುವೆ ಗೊತ್ತು ಪಡಿಸಿದ್ದರು. ಪರೀಕ್ಷೆಗಳು ಮುಗಿದ ಮೇಲೆ ಮದುವೆ ಮಾಡುವುದಾಗಿ ತೀರ್ಮಾನಿಸಲಾಗಿತ್ತು. ಶಾಂತಸ್ವಾಮಿಯವರು ಪಂಚಾಂಗ ನೋಡುತ್ತಿರುವಾಗ ಪಡಸಾಲೆಯಲ್ಲಿ ಕುಳಿತ ಸುಬ್ಬಣ್ಣನವರಿಗೆ ಪಾರಿಯ ಮುಸಿ ಮುಸಿ ಅಳು ಕೇಳಿಸುತ್ತಿತ್ತು.ಅವಳಷ್ಟೇ ವಯಸ್ಸಿನ ಮಗಳಿರುವ ಸುಬ್ಬಣ್ಣನವರಿಗೆ ಪಾರಿಯ ಈ ಸ್ಥಿತಿಗೆ ತಾನೂ ಕಾರಣ ಆಗಿಬಿಟ್ಟೆನಲ್ಲಾ..! ಛೇ..! ಗೌಡನಿಗೆ ತಾನು ಕೈಜೋಡಿಸಬಾರದಿತ್ತು ಅನ್ನಿಸಿತು.ಮನೆಗೆ ಬಂದ ಸುಬ್ಬಣ್ಣನವರಿಗೆ ಯಾಕೋ ಮನಸ್ಸೇ ಸರಿ ಇರಲಿಲ್ಲ.ಹೊಟ್ಟೆಯಲ್ಲಿ ಅದೇನೋ ತಳಮಳ.ಸುಬ್ಬಣ್ಣನವರಿಗೆ ಇದು ಏನೋ ಕೆಟ್ಟ ಘಟನೆ ನಡೆಯುವ ಮುನ್ಸುಚನೆ ಅನ್ನಿಸುತ್ತಿತ್ತು‌. ಹಾಗೆಯೇ ಕುರ್ಚಿಗೊರಗಿ ಕಣ್ಮುಚ್ಚಿದರು.ಅಷ್ಟೊತ್ತಿಗೆ ಸುಬ್ಬಣ್ಣನವರ ಫೋನ್ ರಿಂಗಣಿಸಿದ್ದನ್ನು ಕೇಳಿ ಕಣ್ತೆರೆದರು.ಬಂದ ಕರೆ ಸಿಟಿಯಲ್ಲಿ ಓದುತ್ತಿದ್ದ ಮಗಳದಾಗಿತ್ತು. ಯಾಕೋ ಯಾವತ್ತೂ ನಡುಗದ ಕೈ ಕರೆ ಸ್ವೀಕರಿಸುವಾಗ ನಡುಗತೊಡಗಿತು. ನಡುಗುವ ಕೈಗಳಿಂದಲೇ ಮೊಬೈಲ್ ಕಿವಿಗಿಟ್ಟುಕೊಂಡರು.”ಅಪ್ಪಯ್ಯಾ..ಆರಾಮದೀಯೇನು?”ಅಂದ ಮಗಳ ಧ್ವನಿ ಕೇಳಿದ ಸುಬ್ಬಣ್ಣನವರಿಗೆ ಸ್ವಲ್ಪ ಸಮಾಧಾನವೆನಿಸಿತು.”ಹೂನವ್ವಾ..ಆರಾಮದೀನಿ..ನೀ ಹೆಂಗದಿ?ಯಾವತ್ತೂ ಮಧ್ಯಾಹ್ನ ಫೋನ್ ಮಾಡ್ದಾಕಿ ಅಲ್ಲ ನೀ..ಅದೇನ ಕ್ಲಾಸು,ಅದೂ ಇದೂ ಅಂತ ಸಂಜಿಮುಂದ ಮಾಡ್ತಿದ್ದಿ..ಇವತ್ಯಾಕ ಮಧ್ಯಾಹ್ನನ ಮಾಡಿದೀ? ಮತ್ತ ಊರ್ಗೆ ಯಾವಾಗ ಬರ್ತಿ?ಹೆಂಗೂ ಪರೀಕ್ಷೆ ಇವತ್ಗೆ ಮುಗಿತಾವು ಅಂದಿದ್ದಿ.. ನಿಂಗ ನಿನ್ನೆ ಹೇಳಿದ್ನಲ್ಲ..ಮದ್ವಿ ತಾರೀಖು ಗೊತ್ ಮಾಡ್ತನಿ ಅಂತ..ಈಗರ ಸ್ವಾಮೇರ ಮನಿಗೆ ಹೋಗಿ ಗೊತ್ ಮಾಡ್ಕಂಡು ಬಂದನಿ..ಮುಂದಿನ್ ತಿಂಗ್ಳ ಹದಿನೈದಕ್ಕ ಛಲೋ ದಿನ ಐತಿ ಅಂತ ಹೇಳ್ಯಾರ..ಹೆಂಗೂ ಪರೀಕ್ಷೆ ಮುಗುದಾವಲ್ಲಾ..ಅಲ್ಲೆ ನಿಲ್ಬ್ಯಾಡ..ಬಂದ್ಬಿಡು..ಮದುವಿ ತಯಾರಿ ಮಾಡ್ಕೊಬೇಕಲ್ಲಾ ಮತ್ತ..”ಎಂದು ಒಂದೇ ಉಸಿರಿಗೆ ಮಾತನಾಡುತ್ತಿದ್ದ ಸುಬ್ಬಣ್ಣನವರಿಗೆ ಅತ್ತಲಿನ‌ ಮೌನ ತುಸು ಬೆದರಿಸಿತು.ಕರೆ ತುಂಡಾಗಿದೆಯೇನೋ ಎಂದು ಪರಿಶೀಲಿಸಲು “ಹಲೋ…ಪುಟ್ಟಕ್ಕಾ..ಮಾತಾಡವ್ವಾ..ಕೇಳ್ತನೂ ಹೇಳಿದ್ದು?”ಎಂದಾಗ ಅತ್ತಲಿಂದ ಮಾತಾಡುತ್ತಿದ್ದ ಮಗಳು ಶೋಭಳಿಗೆ ಮೈ ತುಸು ಬೆವರಿತು.ಆದರೂ ಧೈರ್ಯ ತಂದುಕೊಂಡು ” ಅಪ್ಪಯ್ಯಾ..ನಾ ಮನೋಜ್ ಮಾವನ್ನಾ ಮದ್ವಿ ಆಗಾಕ ಒಲ್ಲೆ..ನೀ ನಂಗ ಅವನ್ನ ಮದುವಿ ಆಗು ಅಂತ ಹೆಚ್ಚಿಗಿ ಒತ್ತಾಯ ಮಾಡಿದ್ರ ನಾ ಮತ್ತ ಊರ್ಗೆ ಕಾಲಿಡಲ್ ನೋಡು..”ಅಂತ ಅಂದ ಮಗಳ ಮಾತಿಗೆ ಸುಬ್ಬಣ್ಣನವರು ಕೆಂಡಾಮಂಡಲರಾದರು.”ಯಾಕ ನಿನ್ ಸಿಟಿಗೆ ಓದಾಕ ಕಳ್ಸಿದ್ದು ಅವ್ನ..ಅದ ತಪ್ಪಾತು ನೋಡು..ನಾ ಹೇಳಿದ್ರ ಅವ ಕೇಳಿಲ್ಲ..ನೀ ಓದಿ ಕಡದು ಗುಡ್ಡಿ ಹಾಕಿದ್ ಸಾಕು..ಮನಿಗೆ ಬಾ..ತೆಪ್ಗ ಅವನ್ನ ಮದುವಿ ಆಗು..ಗೊತ್ ಮಾಡಿದ್ ಮದುವಿ ಮುರ್ದು ಹೋತು ಅಂದ್ರ ಮನಿ ಮಾನ ಮರ್ಯಾದಿ ಹರಾಜ ಆಕ್ಕತಿ..ನನ್ ಮಾತ್ ಕೇಳ ಪುಟ್ಟಕ್ಕಾ..”ಎಂದು ಜೋರು ಮಾಡಿದರೂ ಅವಳೇನು ಹೇಳುವಳೋ ಎಂದು ಸುಬ್ಬಣ್ಣನವರ ಹೃದಯ ಜೋರಾಗಿ‌ ಹೊಡೆದುಕೊಳ್ಳುತ್ತಿತ್ತು.”ಅಪ್ಪಾಯ್ಯಾ..ನಮ್ ಕಾಲೇಜ್ ಲೆಕ್ಚರ್ನ ನಾ ಇಷ್ಟಾ ಪಟ್ಟಿನಿ..ಮದುವಿ ಆಗಾಕ ಅವ್ರ ಮೊದಲ ನನಗ ಕೇಳಿದ್ರು..ನಾ ಅವ್ರನ್ನ ಮದುವಿ ಆಗಾಕಿ..ಛಲೋ ಕೆಲ್ಸಾನೂ ಐತಿ..ನಾನೂ ಓದಿ ಕೆಲ್ಸಕ್ಕ ಸೇರ್ತನಿ..ಇಷ್ಟು ಓದಿ ಮನೋಜ್ ಮಾವನ್ ಚಾ ಅಂಗಡ್ಯಾಗ ನಾ ಏನ ಲೋಟಾ ತೊಳಿಲೇನು? ನಾ ಎಷ್ಟ ಬ್ಯಾಡಂದ್ರೂ ಮದುವಿ ಗೊತ್ ಮಾಡಿದ್ರಿ..ನಾ ಅಂತೂ ಬಿಲ್ಕುಲ್ ಅವ್ನ ಮದುವಿ ಆಗಂಗಿಲ್ಲ..ನೀ ಹೂಂ ಅಂದ್ರ ಇವರ್ನ ಕರ್ಕಂಡು ಬರ್ತನಿ..ಇಲ್ಲಾ ಅಂದ್ರ ಇಲ್ಲ..ನಿಮ್ ನಾಟಕಕ್ಕ ಬಲಿ ಆದ್ಲಲ್ಲ ಆ ಪಾರಿ ಅಲ್ಲ ನಾ..ಓದಿದಾಕಿ..ನಾ ಏನ ಪಾರಿ ಹಂಗ ಅಳ್ಕೊಂತ ಕುಂದ್ರಲ್ಲ..ನಾ ಇವರ್ನ ಮದುವಿ ಆಗಾಕಿ..” ಅಂದ ಶೋಭಳ ಧ್ವನಿಯಲ್ಲಿ ಆವೇಶ ಎದ್ದು ಕಾಣುತ್ತಿತ್ತು.ಸುಬ್ಬಣ್ಣನವರಿಗೆ ತಲೆತಿರುಗಿದಂತಾಯಿತು.”ಪುಟ್ಟಕ್ಕಾ ಹಂಗ ಮಾಡಬ್ಯಾಡ..ನನ್ ಮಾತ ಕೇಳ..”ಎಂದು ಅಲವತ್ತುಕೊಂಡರಾದರೂ ಶೋಭಾ ಹಿಡಿದ ಪಟ್ಟು ಬಿಡಲೇ ಇಲ್ಲ.ಮರುದಿನ ಶೋಭಾ ತಾವಿಬ್ಬರೂ ರಿಜಿಸ್ಟರ್ ಮದುವೆಯಾದ ಸುದ್ದಿಯನ್ನು ಕರೆ ಮಾಡಿ ತಿಳಿಸಿದಾಗ ಸುಬ್ಬಣ್ಣನವರ ಮನೆಯಲ್ಲಿ ಕೋಲಾಹಲವೇ ಎದ್ದಿತ್ತು.ಹಳ್ಳಿಯಲ್ಲಿ ಸುಬ್ಬಣ್ಣನವರು ತಲೆ ಎತ್ತದಂತಾಗಿತ್ತು. ಸುಬ್ಬಣ್ಣನವರಿಗೆ ಈಗೀಗ ಪಾಪ ಪ್ರಜ್ಞೆ ಕಾಡತೊಡಗಿತ್ತು..ಏನಾದರಾಗಲಿ ಪಾರಿಯ ಬದುಕು ಸರಿ ಮಾಡಬೇಕು ಅಂದುಕೊಂಡರು.ಅವರಿಗೆ ಅದಷ್ಟು ಸುಲಭವಲ್ಲ ಅನ್ನುವ ಸತ್ಯ ಗೊತ್ತಿತ್ತು.

 ಸುಬ್ಬಣ್ಣನವರ ಮನೆ ಸುದ್ದಿಯನ್ನ ಗೌರಮ್ಮ ಇನ್ನಷ್ಟು ಇಲ್ಲದ ಒಗ್ಗರಣೆ ಹಾಕಿ ಮನೆಗೆ ಜೋಳ ಹಸನು ಮಾಡಲು ಬಂದ ಹೆಂಗಳೆಯರಿಗೆ “ಕೇಳಿದ್ರೇನವ್ವಾ..ಆ ಪುಟ್ಟಕ್ಕಾ …ಯಾವಾಂಗೋ ಬಸ್ರಿ ಆಗಿದ್ಲಂತ..ಅದ್ಕ ಈ ಮಾನಗೇಡಿ ಸುಬ್ಬಣ್ಣ ಪ್ಯಾಟಿಗೆ ಹೋಗಿ ಮದುವಿ ಮಾಡಿ ಬಂದ ಈಗ ನಾಟಕ್ಕ ಮಾಡಾಕತ್ತಾನ..” ಎಂದು ತಾನೇ ಕಥೆ ಕಟ್ಟಿ ಹೇಳಿದ್ದಳು.ಪಾರಿಯ ಸುದ್ದಿ ಮರೆತ ಜನ ಶೋಭ ಬಸುರಿಯಾದ ಬಗ್ಗೆ ಮಾತನಾಡಿಕೊಂಡರು.

  ಮಹದೇವಸ್ವಾಮಿ ಸಂಬಂಧಿಕರ ಮನೆಗೆ ಆಗಾಗ ಹೋಗಿ ಬರುವ ವಿಷಯ ಪಾರಿಯನ್ನು ಚಿಂತೆಗೀಡು ಮಾಡತೊಡಗಿತ್ತು.ಅದೊಂದು ದಿನ ತಾಯಿ‌ಮಗನ ಗುಸುಗುಸು ಅವಳ ಕಿವಿಗೆ ಕೇಳಿಸಿತ್ತು.”ಹುಡುಗಿ ಚಂದ ಅದಾಳ ಬಿಡು ಮಾದೇವಾ..ಚೂರು ವಂಚರಗಣ್ಣು..ಎರಡ್ನೆ ಮದುವಿ..ನೀ ಮಾಡಿರ ಹಲ್ಕಾ ಕೆಲ್ಸಕ್ಕ ಅವ್ರು ಹೆಣ್ ಕೊಡಾಕ ಹೂಂ ಅಂದಿದ್ದ ಹೆಚ್ಚಿಗಿ..ಈ ಪಾರೀ ಇಷ್ಟು ಮಾಡಿದ್ರೂ..ನಾವ್ ಕ್ಯಾರೆ ಅನ್ಲಿಕ್ರೂ ಇನ್ನೂ ತೊಲುಗುವಲ್ಲು..ಆಕಿನ ದೌಡ ಹೊರಗ ಹಾಕ್ಬಕು..”ಅಂದ ಸಾವಿತ್ರಮ್ಮನ ಮಾತು ಪಾರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.ಮಹದೇವಸ್ವಾಮಿ ಫೋನಿನಲ್ಲಿ ಆ ಹುಡುಗಿಯೊಂದಿಗೆ ಹಲ್ಕಿರಿಯುತ್ತ ಮಾತಾಡುವಾಗ ಪಾರಿ ಒಂದೆರಡು ಬಾರಿ ಧ್ವನಿಯೇರಿಸಿ ಮಾತಾಡಿದಾಗಲೂ ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ..ಆ ದಿನ ಬಾಗಿಲ ಮುಂದೆ ಹಾದು ಹೊಲಕ್ಕೆ ಹೋಗುತ್ತಿದ್ದ ತಂದೆಯನ್ನು ಧೈರ್ಯದಿಂದ ಕರೆದಳು ಪಾರಿ.ಕಂಪೌಂಡಿನ ಮೂಲೆಯಲ್ಲಿ ಬಂದು ನಿಂತ ದುರುಗಪ್ಪ ಪೂರ್ತಿ ಸೊರಗಿ ಹೋದವನಂತೆ ಕಂಡ.” ಅಪ್ಪಯ್ಯಾ..ಇಂತ ಬೇವರ್ಸಿ ಹಿಂದ್ ಬಂದ್ ತಪ್ ಮಾಡ್ಬಿಟ್ಟನಿ..ನಾ ಇಲ್ಲಿರಾಕ ಒಲ್ಲೆ..ನನ್ ಕರ್ಕೊಂಡ್ ಹೋಗ..ಮತ್ಯಾವತ್ಗೂ ನಾ ಈ ಮನಿ ಕಡಿ ಕಾಲಿಡಲ್ಲ..ದುಡಕೊಂಡ ತಿಂತನಿ..ನಂಗ ಈ ಜೀವ್ನ ಬ್ಯಾಸರ ಬಂದತಿ..”ಎಂದು ಅಳತೊಡಗಿದಳು.ಮಗಳ ಹೀನಾಯ ಸ್ಥಿತಿ ತಂದೆಗೆ ಅರ್ಥವಾದರೂ ದುರುಗಪ್ಪ “ಸ್ವಲ್ಪ ದಿವ್ಸ್ ತಡ್ಕೊಳವ್ವಾ..ಕಾಲ ಹಿಂಗ ಇರಲ್ಲವ್ವಾ..ಯಾವ್ದೂ ಮನ್ಸಿಗೆ ಹಿಡ್ಕೊಬ್ಯಾಡ..ಒಂದ್ ಕೂಸ ಆಗ್ಲಿ..ಎಲ್ಲಾ ತಾನ ಸರಿ ಹೊಕ್ಕತಿ..ನಂಗ ಹೊಲಕ ಹೋಗಾಕ ವ್ಯಾಳೆ ಆತು..ತಡಾ ಆದ್ರ ಗೌಡ್ರು ಬೈಯ್ತಾರ..ಸಂಜಿಮುಂದ ಬರ್ತನಿ..ನೀ ಸಮಾಧಾನ ಇರವ್ವಾ‌‌..” ಎನ್ನುತ್ತ ಅವಳ ಉತ್ತರಕ್ಕೂ ಕಾಯದೇ ಹೊರಟುಬಿಟ್ಟ.ಅಲ್ಲಿಯೇ ನಿಂತಿದ್ದರೆ ಮಗಳ ಕಣ್ಣೀರಿಗೆ ಕರಗಿಬಿಡುತ್ತೇನೆನ್ನುವುದು ಅವನಿಗೆ ಗೊತ್ತಿತ್ತು.

  ಬದುಕು ನಡೆಸಲು ಇರುವ ಎಲ್ಲ‌ ದಾರಿಗಳು ಪಾರಿಯ ಪಾಲಿಗೆ ಮುಚ್ಚಿ ಹೋಗಿದ್ದವು.ಸಂಜೆ ಬರುವೆನೆಂದು ಹೇಳಿ ಹೋದ ತಂದೆಯ ದಾರಿ ಕಾದಳು ಪಾರಿ.ದುರುಗಪ್ಪ ಬರಲೇ ಇಲ್ಲ.ಅಪ್ಪ ತನ್ನ ಸಮಾಧಾನಕ್ಕೆ ಹಾಗೆ ಹೇಳಿ ಹೋಗಿದ್ದು ಎನ್ನುವುದು ಪಾರಿಗೆ ಅರಿವಾಗಿತ್ತು. ಮಧ್ಯರಾತ್ರಿ ಕಿರುಗುಟ್ಟುವ ಕದದ ಶಬ್ದಕ್ಕೆ ಸಾವಿತ್ರಮ್ಮನವರಿಗೆ ಎಚ್ಚರವಾಗಿತ್ತು. ಪಾರಿ ಹಿಂಬಾಗಿಲಿನಿಂದ ಅಳುತ್ತ ಹೊರ ಹೋಗುತ್ತಿದ್ದಳು.ಮೆಲ್ಲಗೆ ಹೆಜ್ಜೆಯಿಟ್ಟು ಹಿಂದಿನಿಂದ ಬಂದ ಸಾವಿತ್ರಮ್ಮ ಪಾರಿ ಕತ್ತಲೆಯಲ್ಲಿ ಕಾಣೆಯಾದಾಗ ವಿಜಯದ ನಗು ಬೀರಿದರು. ಇನ್ನು ನೆಮ್ಮದಿಯಿಂದ ನಿದ್ರಿಸಬಹುದು ಎಂದುಕೊಂಡರು.ಮಧ್ಯರಾತ್ರಿ ಮನೆ ಬಿಟ್ಟ ಪಾರಿಗೆ ಬದುಕುವ ಆಸೆ ಇರಲಿಲ್ಲ.ಕಬ್ಬಿನ ಗದ್ದೆಯ ಹಾದಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿದ್ದರ ಪರಿವೆಯೂ ಇಲ್ಲದೇ ನಡೆದಿದ್ದಳು..ಕಬ್ಬಿನ‌ ಗದ್ದೆಯಾಚೆಯ ಬಾವಿ ಪಾರಿಯನ್ನು ಕರೆಯುತ್ತಿತ್ತು.ಬದುಕು ಕೊನೆಯ ಹಂತದಲ್ಲಿಯೂ ಕೆಲವೊಮ್ಮೆ ತಿರುವು ಪಡೆದುಕೊಳ್ಳುತ್ತದೆ. ಈಗ ಪಾರಿ ಬದುಕಿನ ಕೊನೆಯ ಹಂತದಲ್ಲಿ ನಿಂತಿದ್ದಾಳೆ..

ಮುಂದುವರಿಯುವುದು…

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post