X

ಇದು ಫಾರೆಸ್ಟ್ ” ‘ಬರ್ನಿಂಗ್’ ಇಶ್ಯೂ”!

ನಮ್ಮಲ್ಲಿ ಒಂದು ಮಾತಿದೆ, “ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ನಿಂತರು” ಎಂದು. ಕೊನೆ ಕ್ಷಣದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಒದ್ದಾಡುವವರಿಗೆ ಹೀಗೆನ್ನುತ್ತಾರೆ.  ಇದು ತುಂಬಾ ಹಳೆಯದಾಯಿತೆನಿಸುತ್ತದೆ. ಸದ್ಯದ ಮಟ್ಟಿಗೆ ಆ ಮಾತನ್ನೇ ತುಸು ಹೀಗೆ ಬದಲಿಸಿ ಹೇಳಿದರೆ ಸೂಕ್ತವೆನಿಸುತ್ತದೆ. “ಕಾಡಿಗೆ ಬೆಂಕಿ ಬಿದ್ದ ಮೇಲೆ, ನಂದಿಸುವುದು, ನಿಯಂತ್ರಿಸುವುದು ಹೇಗೆಂದು ನಾಡಲ್ಲಿ ಕುಳಿತು ಸಭೆ ಮಾಡಿದರು” ಹಳೆಯ ಗಾದೆಗಿಂತಲೂ ಇದು ಸ್ವಲ್ಪ  ಹೆಚ್ಚೇ ಪವರ್’ಫುಲ್.

ಬಿರು ಬೇಸಿಗೆ ಕಾಲಿಡುತ್ತಿದ್ದಂತೆ ರಾಜ್ಯದ ಕೆಲವು ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ರುದ್ರನರ್ತನ ಆರಂಭವಾಗುತ್ತದೆ. ಯಾರೋ ಸೇದಿ ಎಸೆದ ಬೀಡಿಯ ಮುಂಡಿನಿಂದಲೇ ಬೆಂಕಿ ಹೊತ್ತಿಕೊಳ್ಳುವುದೂ ಇದೆ ಮತ್ತು ಬಿದ್ದ ಬೆಂಕಿಯ ಜ್ವಾಲೆಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವರೂ ಇದ್ದಾರೆ. ಆದರೆ ಬೆಂಕಿಯನ್ನು ಅಂಕೆಗೆ ತರುವುದು ಮಾತ್ರ ಯಾರಿಗೂ ಬೇಕಾಗಿಲ್ಲ ಬಿಡಿ.

ಇತ್ತ ನಾಡಿನಲ್ಲಿ ಜನರ ಒಡಲು ಯಾವ್ಯಾವುದೋ ಸಮಸ್ಯೆಯ ಬಿಸಿಗೆ ಸಿಕ್ಕಿ ಉರಿಯುತ್ತಿದ್ದರೆ ಅತ್ತ ಕಾಡು ಅಗ್ನಿಯ ಜ್ವಾಲೆಗೆ ಸಿಕ್ಕು ಸುಟ್ಟು ಕರಕಲಾಗುತ್ತಿದೆ.

ಎರಡೂ ಕಡೆಯಲ್ಲಿ, ಸ್ಪಂದಿಸಿ ಪರಿಹರಿಸಬೇಕಾದವರು ಮಾತ್ರ ಪಕ್ಷ ರಾಜಕಾರಣದ ಪೈಪೋಟಿಯಲ್ಲಿ ಯಾರ್ಯಾರದೋ ನಡುವೆ ಕಿಡಿ ಹೊತ್ತಿಸುವ, ಇನ್ಯಾರದೋ ಮಧ್ಯೆ ಎದ್ದಿರುವ ದ್ವೇಷ, ಅಸೂಯೆಯ ಜ್ವಾಲೆಯನ್ನು ತಹಬಂಧಿಗೆ ತರುವಲ್ಲಿಯೇ ತಲ್ಲೀನರಾಗಿದ್ದಾರೆ. ಅನ್ಯಾಯವಾಗಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿರುವ ಅರಣ್ಯ ಅಸಹಾಯಕತೆಯಿಂದ ರೋಧಿಸುತ್ತಿದ್ದರೆ, ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿರೆಂಬ ಪರಿಸರ ಪ್ರೇಮಿಗಳ ಕೂಗು ಅರಣ್ಯರೋಧನವಾಗಿ ಮಾರ್ಪಟ್ಟಿದೆ. ವನ್ಯಸಂಪತ್ತು ಅನ್ಯಮಾರ್ಗವಿಲ್ಲದೆ ನಾಶವಾಗುತ್ತಿದೆ.

ಒಬ್ಬ  ಡಾಕ್ಟರ್ ತನ್ನ ಡ್ಯೂಟಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರಲೇಬೇಕು, ಶಿಕ್ಷಕನ ಕೆಲಸ ಏನಿದ್ದರೂ ಶಾಲೆಯಲ್ಲಿದ್ದುಕೊಂಡೇ, ಪೋಲಿಸಪ್ಪ ಠಾಣೆಯಲ್ಲಿ, ಜನರ ಮಧ್ಯದಲ್ಲಿ ಇರದೇ ಕಾರ್ಯನಿರ್ವಹಿಸಲಾದೀತೆ?, ಕರಿ ಕೋಟು ತೊಟ್ಟ ಮೇಲೆ ವಕೀಲನೊಬ್ಬನ ಕಾರ್ಯಕ್ಷೇತ್ರವೇನಿದ್ದರೂ ಕೋರ್ಟ್. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಇದಕ್ಕೆ ಶುದ್ಧ ಅಪವಾದವೇ ಸರಿ. ಅರಣ್ಯಾಧಿಕಾರಿಗಳಾಗಿಯೂ ಅವರು ಕಾಡಿನತ್ತ ಸುಳಿಯುವುದೇ ಇಲ್ಲ. ಸುಳ್ಳು ವರದಿ ಪೊಳ್ಳು ಲೆಕ್ಕಗಳನ್ನು ಇಲ್ಲೇ ಕುಳಿತು ಸಿದ್ದಪಡಿಸುವ ಮೂಲಕ ಕಾಡಿನ ಕಾಳಜಿ ಮಾಡುತ್ತಿರುವ ಇವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ. ಅರಣ್ಯಾಧಿಕಾರಿಗಳಾಗಿ ಅವರು ಕಾಡಿಗೆ ನೀಡುವ ಭೇಟಿಯ ಸಂಖ್ಯೆ, ಪ್ರಾಣಿಗಳು ನಾಡಿಗೆ ನೀಡುವ ಭೇಟಿಯ ಸಂಖ್ಯೆಗಿಂತಲೂ ಕಡಿಮೆಯಿರುತ್ತದೆ ಎನ್ನುವುದು ತಮಾಷೆಯಷ್ಟೇ ಅಲ್ಲ. ಈ ಅಧಿಕಾರಿಗಳು ಕಾಡಿನತ್ತ ತಲೆಹಾಕುವುದೇನಿದ್ದರೂ ತಮ್ಮ ಬೇಟೆಯ ಗಂಟಿನ ಡೀಲ್ ಕುದುರಿಸುವ ಅವಶ್ಯಕತೆ ಇದ್ದಾಗ ಮಾತ್ರವೆನಿಸುತ್ತದೆ. ಬೆಂಕಿ ಸೀಸನ್’ನ ಕಡು ಬೇಸಿಗೆಯಲ್ಲಿ ಅಲ್ಲಲ್ಲಿ ಅಗ್ನಿ ದುರಂತಗಳಾಗಿ ಅರಣ್ಯ ಸಂಪತ್ತು ನಾಶವಾಗುವುದು ಎಷ್ಟು ನಿಜವೋ, ಈ ಅವಧಿಯಲ್ಲಿ  ಬಿಡುಗಡೆಯಾಗುವ ಫಂಡ್’ನಿಂದ ಆಯಕಟ್ಟಿನ  ಅಧಿಕಾರಿಗಳ ವೈಯಕ್ತಿಕ ಸಂಪತ್ತು ನಿರಂತರವಾಗಿ ಹೆಚ್ಚುತ್ತಿರುವುದೂ ಅಷ್ಟೇ ನಿಜ!

ಹಾಗಾಗಿ ಎಲ್ಲೇ ಬೆಂಕಿ ಬಿದ್ದರೂ ಅಷ್ಟು ಸುಲಭಕ್ಕೆ ಆ ಬಿಸಿ ತಾಕಬೇಕಾದವರನ್ನು ತಾಕುವುದೇ ಇಲ್ಲ. ಆದರೆ ಈ ಬಾರಿ ಸದಾ, ಕಾಡಿಗೆ ಬಿದ್ದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕೆಲವರ ಅಂಡಿಗೇ  ಬೆಂಕಿಬಿದ್ದಿದೆ ಎನ್ನುವುದೇ ತುಸು ಸಮಾಧಾನಕರ ಸಂಗತಿ.

ಇನ್ನೂ ನಗೆಪಾಟಲಿನ ಸಂಗತಿಯೆಂದರೆ, ನಾಡಿನ ಏ.ಸಿ ಕಚೇರಿಯ ಮೆತ್ತನೆ ಆಸನದ ಮೇಲೆ ಕುಳಿತು ಅಧಿಕಾರ ಚಲಾಯಿಸುವವರಿಗೆ  ಸರ್ಕಾರ ದಿನಕ್ಕೊಂದು ವಿನೂತನ ಸೌಲಭ್ಯ, ಸಲಕರಣೆಗಳನ್ನು ಒದಗಿಸುತ್ತದೆ. ಆದರೆ ಕಾಡಿನಲ್ಲಿರುವ ಅರಣ್ಯ ರಕ್ಷಕ ಸಿಬ್ಬಂದಿಗಳು ಮಾತ್ರ ಇನ್ನೂ ಅದೇ ಸೊಪ್ಪು ಸದೆಗಳನ್ನು ಹಿಡಿದುಕೊಂಡು ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಬೇಕಾದರೆ, ಅವರಿಗೆ ಉಪಯುಕ್ತವಾಗುವ ಅಗತ್ಯ ಸಲಕರಣೆಯೊಂದನ್ನು ಕಂಡುಹಿಡಿದು ಒದಗಿಸುವುದು ಸಾಧ್ಯವಿಲ್ಲವೇ?

ಓವರ್ ಡೋಸ್: ತಪ್ಪಿಯೂ ಕಾಡಿನತ್ತ ಸುಳಿಯದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹುಡುಕಿಕೊಂಡೇ ಇರಬೇಕು, ಕಾಡುಪ್ರಾಣಿಗಳು ಆಗಾಗ ನಾಡಿಗೆ ಲಗ್ಗೆಯಿಡುವುದು.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post