ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೦
______________________________
ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ?
ಅನುಭವಮುಮದರೊಂದು ನೆಲೆಯಾಗದಿಹುದೇಂ? ||
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅಣಕಿಪುವು ತರ್ಕವನು – ಮಂಕುತಿಮ್ಮ || ೦೫೦ ||
ಯಾವುದು ಸತ್ಯದ ನೆಲೆಗಟ್ಟು ? ಯಾವುದನ್ನು ಮಾತ್ರ ಸತ್ಯವೆಂದು ಪರಿಗಣಿಸಬೇಕು ? ಗ್ರಂಥಗಳಲ್ಲಿರುವ, ತರ್ಕಾಧಾರಿತ ವ್ಯಾಖ್ಯಾನವನ್ನಷ್ಟೆ ಪರಿಗಣಿಸಿ ಅಷ್ಟನ್ನು ಮಾತ್ರವೆ ಸತ್ಯವೆಂದು ಒಪ್ಪಿಕೊಳ್ಳಬೇಕೆ ? ಎನ್ನುವ ಮೂಲಭೂತ ಪ್ರಶ್ನೆ ಇಲ್ಲಿ ಕಾಣಿಸಿಕೊಂಡಿದೆ. ಹಿಂದಿನ ಪದ್ಯ (೦೪೯) ಸತ್ಯ-ಮಿಥ್ಯೆಯ ನಡುವೆ ಸೂಕ್ತ ಸೇತುವೆ ಕಟ್ಟುವ ಮಾತಾಡಿದರೆ ಇಲ್ಲಿ, ‘ಆ ಸತ್ಯದ ನೆಲೆಯೆಲ್ಲಿ?’ ಎಂಬ ಶೋಧನೆಗಿಳಿಯುತ್ತದೆ. ತರ್ಕದ ಶುಷ್ಕ ಕೋಟೆಯ ನಡುವೆ ಹೃದಯದಲುದಿಸುವ ನೂರಾರು ಭಾವಕೋಶದ ದನಿಗಳೂ ಅಷ್ಟೇ ಸಂಗತ ಎನ್ನುವುದು ಇಲ್ಲಿನ ಮುಖ್ಯ ಆಶಯ.
ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ?
ಅನುಭವಮುಮದರೊಂದು ನೆಲೆಯಾಗದಿಹುದೇಂ? ||
ಸತ್ಯವೆನ್ನುವುದು ಇರುವುದಾದರು ಎಲ್ಲಿ, ಯಾವುದದರ ಮನೆ? ಅದೇನು ಬರಿಯ ತರ್ಕದ ನಿಲುಕಿಗೆ ಮಾತ್ರ ಸಿಗುವ ಅಥವಾ ವ್ಯಾಸಂಗ -ಅಧ್ಯಯನದ ಮೂಲಕವಷ್ಟೆ ಅರಿಯಬಹುದಾದ ಸರಕೆ? ತರ್ಕಾಧಾರಿತ ಸುಭದ್ರ ಅಡಿಪಾಯವಿರುವ ಸಿದ್ಧಾಂತಗಳು ಸತ್ಯದ ನೆಲೆಗಳೆಂದೆ ಒಪ್ಪಿಕೊಂಡರೂ, ಅನುಭವವೆನ್ನುವುದು ಸತ್ಯದ ಮತ್ತೊಂದು ನೆಲೆಯಾಗಿರಲು, ಮೂಲವಾಗಿರಲು ಸಾಧ್ಯವಿಲ್ಲವೆ ? ನಮಗೆಷ್ಟೋ ಸತ್ಯದ ಅರಿವಾಗುವುದು ಅನುಭವದ ಮೂಲಕವಾಗಿಯೆ ಅಲ್ಲವೆ ? ಆ ಅನುಭವಗಮ್ಯ ಗ್ರಹಿಕೆಯನ್ನು ಸತ್ಯವೆಂದು ಒಪ್ಪಿಕೊಳ್ಳುವುದು ಸಹ ತಾರ್ಕಿಕವೆ ತಾನೇ ? ಹೀಗೆನ್ನುವಾಗ ನಮ್ಮರಿವಿಗೆ ನಿಲುಕುವ ಸಂಗತಿಯೆಂದರೆ – ಸತ್ಯವೆನ್ನುವುದು ಬರಿಯ ಶಾಸ್ತ್ರಾಧ್ಯಯನ ಮಾಡಿ ವಿದ್ವಾಂಸರೆನಿಸಿದವರ ಪಾಲಿಗೆ ಮಾತ್ರ ದಕ್ಕುವ ವಸ್ತುವೇಕಾಗಿರಬೇಕಿಲ್ಲ. ವಿದ್ಯಾಪಾರಂಗತರಲ್ಲದಿದ್ದವರು ಬರಿಯ ಜೀವನಾನುಭವದಿಂದ ಕೂಡ ಸತ್ಯದರ್ಶನ ಮಾಡಲು ಸಾಧ್ಯ – ಎನ್ನುವುದು.
ಬರಿಯ ತರ್ಕ, ಅಧ್ಯಯನ ಮಾತ್ರವೆ ಸತ್ಯದ ನೆಲೆಯೆನ್ನುವುದಾದರೆ ಅದನ್ನು ಅಷ್ಟು ಸುಲಭದಲ್ಲಿ ಒಪ್ಪುವುದು ಸಾಧ್ಯವಿಲ್ಲ. ಏಕೆಂದರೆ, ಮನುಜ ಹೃದಯ ಅದೆಷ್ಟೊ ಭಾವಾನುಭೂತಿ, ಅನುಭವ, ಅನುಭಾವಗಳ ಸಮಗ್ರ ಸಮ್ಮಿಶ್ರ ಸಂಗಮ. ಅದರಲ್ಲಿ ಓದಿನಿಂದಲೊ, ತರ್ಕದಿಂದಲೊ, ಅನುಭವದಿಂದಲೊ ಅಥವ ಕೇವಲ ವಿನಾಕಾರಣ ಭಾವದಿಂದಲೊ – ಏನೇನೊ ದನಿಗಳು, ಆಲೋಚನೆಗಳು, ಗ್ರಹಿಕೆಗಳು ಉದಿಸುತ್ತಿರುತ್ತವೆ. ಅವುಗಳಲ್ಲದೆಷ್ಟೊ ಅಂತಿಮವಾಗಿ ತಮ್ಮಂತಾವಾಗಿಯೆ ನಿರ್ಧಾರದ ರೂಪವನ್ನು ತಾಳುವುದುಂಟು; ಅಂತಿಮ ನಿರ್ಧಾರದ ರೂಪುರೇಷೆಯ ಮೇಲೆ ತನ್ನ ಪ್ರಭಾವ ಬೀರುವುದೂ ಉಂಟು. ಆಗೆಲ್ಲ ಅದನ್ನು ಅಧ್ಯಯನ ಗ್ರಹಿಕೆ, ತರ್ಕಕ್ಕೆದುರಾಗಿ ಹೋಲಿಸಿ, ತರ್ಕಾಧ್ಯಯನಾನುಸಾರ ಮಾತ್ರವೇ ನಿರ್ಧರಿಸಬೇಕೆಂಬ ದಾರಿ ಹಿಡಿದು ಹೊರಟರೆ, ಆ ತೀರ್ಮಾನ ವಾಸ್ತವ ಜಗದ ಪರಿಸರದಲ್ಲಿ ಸೂಕ್ತವಾಗಿ ಹೊಂದಾಣಿಕೆಯಾಗದೆಂಬ ನಿಜದರಿವಾಗುತ್ತದೆ. ಸಾಮಾನ್ಯ ಜನಜೀವನದಲ್ಲಿ ಮಾನವೀಯ ಭಾವನೆಗಳ ತಳಮಳದೆದುರು ತರ್ಕ, ಪುಸ್ತಕಜ್ಞಾನದ ಗ್ರಹಿಕೆ ಸೋ
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅಣಕಿಪುವು ತರ್ಕವನು – ಮಂಕುತಿಮ್ಮ ||
ಆ ಹೃದಯದಲ್ಲಿ ಮೂಡುವ ಈ ಪರಿಯ ದನಿ ಕೇಳಿದಾಗೆಲ್ಲ ಅವು ನೇರ ತರ್ಕದ ಮುಖಕ್ಕೆ ಹೊಡೆದು ಅಣಕಿಸುವಂತಿರುತ್ತದೆಯಂತೆ – ಏಕೆಂದರೆ ತರ್ಕ ಬುದ್ಧಿಯಿಂದ ಪ್ರೇರಿತವಾದದ್ದು. ಆದರೆ ಹೃದಯದ ಪ್ರಾಧಾನ್ಯತೆ ಇರುವುದು ಭಾವನಾತ್ಮಕ ಸರಹದ್ದಿನಲ್ಲಿ; ತರ್ಕಾತರ್ಕ ಸೌಜನ್ಯದ ಹಂಗು ಅದಕ್ಕಿರುವುದಿಲ್ಲ. ಅದಕ್ಕೇ, ಸತ್ಯವೆನ್ನುವ ಕಾಠಿಣ್ಯದ ಕೋಟೆಯಲ್ಲಿ ಹೃದಯವಂತಿಕೆ, ಮಾನವೀಯತೆಗು ಒಂದು ನೆಲೆಯಿರಬೇಕು, ಸ್ಥಾನವಿರಬೇಕು. ಹೃದಯದ ಕೋಟೆಯಲ್ಲಿ ಅದನ್ನು ಕಟ್ಟಿಕೊಡುವುದು ಅನುಭವವಾದ್ದರಿಂದ, ಆ ಅನುಭವ ಸತ್ಯದ ಮತ್ತೊಂದು ನೆಲೆಯಾದರೆ ನಿರ್ಧಾರಗಳು, ಮುಖಾಮುಖಿಗಳು ಆ ಅನುಭವದ ಪರಿಧಿಯಲ್ಲಿರುತ್ತವೆ. ಒಂದೆಡೆ ಅವು ತಾರ್ಕಿಕವಾಗಿ ಸಂಗತವಾಗಿದ್ದು, ಜತೆಜತೆಗೆ ಮಾನವ ಅನುಭೂತಿಗಳನ್ನು ಪರಿಗಣಿಸುತ್ತ ಒಂದು ಸಮತೋಲಿತ ನೆಲೆಗಟ್ಟಿನಲ್ಲಿ ಪ್ರಸ್ತುತಗಂಡರೆ, ಎರಡು ಕಡೆಗು ನ್ಯಾಯ ದೊರಕಿಸುತ್ತದೆಂಬ ಆಶಯ ಇಲ್ಲಿ ವ್ಯಕ್ತವಾಗಿದೆ.
ಇದನ್ನೊಂದು ಸರಳ ಉದಾಹರಣೆಯ ಮೂಲಕ ಹೇಳಬೇಕೆಂದರೆ – ವ್ಯಕ್ತಿಯೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ‘ತರ್ಕಬದ್ಧ’ವಾಗಿ ಆಲೋಚಿಸಿ ಅವನ ತಪ್ಪಿಗೆ ಶಿಕ್ಷೆಯಾಗಬೇಕೆನ್ನುತ್ತದೆ ‘ತರ್ಕ ಅಥವಾ ನ್ಯಾಯಶಾಸ್ತ್ರ’. ಅವುಗಳಿಂದ ಪ್ರೇರೆಪಿತವಾಗಿ ಅದಕ್ಕೆ ಅನುಸಾರವಾಗಿ ರೂಪಿಸಿದ ನೀತಿ, ನಿಯಮಗಳ ಹೊತ್ತಗೆ ‘ಯಾವ ತಪ್ಪಿಗೆ ಏನು ಶಿಕ್ಷೆ?’ ಎಂದು ವಿವರಿಸುತ್ತದೆ. ಆದರೆ ಇದೆಲ್ಲದರ ಹೊರತಾಗಿ ನೋಡುವ ಹೃದಯದ ಮಾನವೀಯ ಮಿಡಿತ, ತುಡಿತ, ಅನುಭೂತಿಗಳ ಅನುಭವ ಕಳ್ಳತನದ ಹಿನ್ನಲೆಯನ್ನು ತರ್ಕಾತೀತವಾಗಿ ಕೆದಕುತ್ತದೆ; ಅದರ ಆಳದಲೆಲ್ಲೊ ಅಡಗಿರುವ ಹಸಿವು, ಬಡತನ, ಅಜ್ಞಾನದ ಹಿನ್ನಲೆಯನ್ನು ಮಾನವೀಯ ದೃಷ್ಟಿಯಿಂದ ನೋಡಲೆತ್ನಿಸುತ್ತದೆ – ನ್ಯಾಯಶಾಸ್ತ್ರದ ತರ್ಕ, ನಿಯಮದ ಹೊರತಾಗಿ. ಆ ಎರಡೂ ದೃಷ್ಟಿಕೋನದ ಸಮಗ್ರ ರೂಪವೆ ಸತ್ಯದ ನಿಜವಾದ ಸ್ವರೂಪ ಎನ್ನುವುದು ಇದರೊಳಗಣ ಒಟ್ಟಾರೆ ಆಶಯ.
Facebook ಕಾಮೆಂಟ್ಸ್