ಭಾಗ-೧
ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ನೀಡುತ್ತಿರುವ ಹಿತವಾದ ತಂಗಾಳಿ..!! ಅದಕ್ಕೆ ಖುಷಿಗೊಂಡು ತಲೆದೂಗುತ್ತಿರುವ ಮರ ಗಿಡಗಳು..!!
ಒಟ್ಟಿನಲ್ಲಿ ರವಿಯ ಆಗಮನ ಪ್ರಕೃತಿಯಲ್ಲಿ ಹೊಸ ಚೈತನ್ಯವನ್ನು ಉಂಟು ಮಾಡಿತ್ತು..!! ಅವಳಿಗೂ ಅಷ್ಟೇ..!! ಪ್ರತಿದಿನದಂತೆ ಇಂದೂ ಹೊಸ ಉತ್ಸಾಹದಿಂದ ತನ್ನ ಕೆಲಸ ಆರಂಭಿಸಿದ್ದಳು..ಮನೆ ಅಂಗಳ ತುಂಬ ಬಿದ್ದಿದ್ದ ಕಸ, ಕಡ್ಡಿಗಳು,ತರೆಗೆಲೆಗಳು ಎಲ್ಲವನ್ನೂ ಗುಡಿಸಿ ಒಪ್ಪ ಮಾಡುವುದು ಅವಳ ಬೆಳಗಿನ ಅಭ್ಯಾಸಗಳಲೊಂದು..!! ಕೈಯಲ್ಲಿದ್ದ ಪೊರಕೆಯಿಂದ ಅಂಗಳ ಗುಡಿಸಿ ಚಂದ ಮಾಡುತ್ತಿರಬೇಕಾದರೆ ತೋಟದ ಕಡೆಯಿಂದ ಅವಳ ತಂದೆ
ಮಂಜುನಾಥ ರೈಗಳು ಬಂದವರು ಮನೆಯ ಸಿಟೌಟಿನಲ್ಲಿ ಉಸ್ಸಪ್ಪಾ ಎಂದು ಕುಳಿತರು..”ಕವಿತಾ..ಕೆಲಸ ಇನ್ನೂ ಮುಗಿದಿಲ್ವಾ..?!” ಅಕ್ಕರೆಯಿಂದ ಮಗಳನ್ನು ಪ್ರಶ್ನಿಸಿದರು..”ಇಜ್ಜಿ ಪಪ್ಪಾ..ಇತ್ತೆ ಆಪುಂಡು..(ಇಲ್ಲ ಅಪ್ಪ..ಈಗ ಆಗುತ್ತೆ)” ಎಂದ ಕವಿತ ಕೆಲಸ ಮುಂದುವರಿಸಿದಳು..
ಮಂಜುನಾಥ ರೈಗಳು ಪುತ್ತೂರಲ್ಲೇ ಶ್ರೀಮಂತ ಕೃಷಿಕರು..ಸುಮಾರು ಹತ್ತು ಎಕರೆ ಅಡಿಕೆ,ತೆಂಗಿನ ತೋಟ,ಐದು ಎಕರೆಯಷ್ಟು ಕೃಷಿ ಭೂಮಿ ಇದ್ದು ಹತ್ತಕ್ಕೂ ಹೆಚ್ಚು ಹಸುಗಳು ಹೊಂದಿದ್ದು ಹಾಲಿನ ವ್ಯಾಪಾರ ಬೇರೆ ಇದೆ..ವರ್ಷವೂ ನಡೆಯುವ ಕಂಬಳದಲ್ಲಿ ಇವರು ಸಾಕಿರುವ ಕೋಣಗಳದೇ ಮೇಲುಗೈ..!! ಹಾಗೆ ಸಂಪಾದಿಸಿದ ಕಪ್ಗಳು ಹಲವಾರು ಮನೆಯ ಹಾಲ್ನಲ್ಲಿ ಕಾಣಿಸುತ್ತದೆ..ಅವರ ಹೆಂಡತಿ ಎರಡು ವರ್ಷಗಳ ಹಿಂದೆ ಹೃದಯಾಪಘಾತದಿಂದ ತೀರಿಕೊಂಡಿದ್ದರು..ಆದರೆ ಅವರ ತಾಯಿ ಶಾರದಮ್ಮ ಇನ್ನೂ ಬದುಕಿರುವುದು ವಿಶೇಷ..!!ಇನ್ನು ಅವರ ಇಬ್ಬರು ಮಕ್ಕಳಲ್ಲಿ ದೊಡ್ಡವಳು ಮಗಳು ಕವಿತ..!! ಇನ್ನೊಬ್ಬ ಮಗ ಕರಣ್..!!
ಕವಿತ ಹೆಚ್ಚೇನು ಓದಿರಲಿಲ್ಲ..ಪಿಯುಸಿ ಮುಗಿಸಿ ಕಷ್ಟಪಟ್ಟು ಮುಗಿಸಿದವಳಿಗೆ ಕಂಕಣ ಭಾಗ್ಯ ಕೂಡಿ ಬಂದಿತ್ತು..ನೋಡಲು ಸುಂದರವಾಗಿರುವ ಅವಳನ್ನು ಒಂದೇ ನೋಟದಲ್ಲಿ ಮೆಚ್ಚಿ ಮದುವೆಯಾಗಿದ್ದ ಸುರೇಶ್ ರೈ ಎಂಬವನು..!! ಆದರೆ ಅವಳ ದುರಾದೃಷ್ಟವೇನೋ..ಅವನು ಮದುವೆಯಾಗಿ ಎರಡು ತಿಂಗಳಿಗೆ ಆಕ್ಸಿಡೆಂಟಲ್ಲಿ ತೀರಿಕೊಂಡಿದ್ದ..ವಿಧವೆಯಾದ ಅವಳ ಅಳಲನ್ನು ಕೇಳುವವರು,ಮನಸ್ಸನ್ನು ಅರ್ಥ ಮಾಡುವವರು ಗಂಡನ ಮನೆಯಲ್ಲಿ ಇರಲಿಲ್ಲ..ಎಲ್ಲರೂ ಅವಳನ್ನು ಬೈಯುವವರೇ..ನಿನ್ನಿಂದಲೇ ಮಗ ತೀರಿಕೊಂಡಿದ್ದು,ನಿನ್ನ ಹಾಳು ದೆಸೆಯಿಂದಲೇ ಅವನು ಸತ್ತಿದ್ದು ಎಂದು ಅತ್ತೆ ಮಾವರ ಬೈಗುಳಕ್ಕೆ ಬೇಸತ್ತು ಹೋಗಿದ್ದಳು..ಅವಳಾದರೂ ಏನು ಮಾಡುತ್ತಾಳೆ ಪಾಪ..!! ಇದನ್ನೆಲ್ಲ ತಿಳಿದ ಮಂಜುನಾಥ ರೈಗಳು ಗಂಡನ ಮನೆಯವರಿಗೆ ಬೈದು ಛೀಮಾರಿ ಹಾಕಿ ಮಗಳನ್ನು ಕರೆದುಕೊಂಡು ಬಂದಿದ್ದರು..ಆಮೇಲೆ ಕವಿತ ಅತ್ತ ಕಡೆ ತಲೆ ಹಾಕಿರಲಿಲ್ಲ..ತವರು ಮನೆಯಲ್ಲೇ ಆರಾಮವಾಗಿದ್ದಳು..ಇನ್ನು ರೈಗಳ ಮಗ ಕರಣ್’ನ ಬಗ್ಗೆ ಹೇಳುವುದಾದರೆ ಬುದ್ಧಿವಂತ..!! ಸದಾ ಓದಿನಲ್ಲಿ,ಆಟೋಟ ಸ್ಪರ್ಧೆ ಎಲ್ಲರದಲ್ಲೂ ಮುಂದು..!! ಈಗ ಬೆಂಗಳೂರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ
ಮಾಡುತ್ತಿದ್ದಾನೆ..!!
“ಹಲೋ” ಎಂದು ಹತ್ತಿರದಲ್ಲಿ ಕೇಳಿಸಿದ ಗಂಡಸು ಸ್ವರಕ್ಕೆ ಹಾಡನ್ನು ಹಾಡುತ್ತಾ ಅಂಗಳ ಗುಡಿಸುತ್ತಿದ್ದವಳು ಬೆಚ್ಚಿಬಿದ್ದು ನೋಡಿದಳು..ಬೆನ್ನಿಗೆ ಬ್ಯಾಗ್ ಏರಿಸಿಕೊಂಡ ಅಪರಿಚಿತ ಯುವಕನೊಬ್ಬ ನಿಂತಿದ್ದ..ನಸು ಹಾಲು ಬಿಳುಪಿನ ಮೈಬಣ್ಣದ ಗುಂಗುರು ಕೂದಲಿನ ಬೆಕ್ಕಿನ ಕಂಗಳ ಚೆಲುವ..!! “ಹಲೋ ಇದು ಮಂಜುನಾಥ ರೈಗಳ ಮನೆ ತಾನೇ..?!” ಎಂದು ಪ್ರಶ್ನಿಸಿದ..”ಹುಂ” ಎಂದು ತಲೆಯಾಡಿಸಿದವಳತ್ತ ನೋಡಿದ..ಅವಳುಟ್ಟಿದ್ದ ನಸು ಗುಲಾಬಿ ಬಣ್ಣದ ಸೀರೆಯಲ್ಲಿ ಆಗ ತಾನೇ ಅರಳಿದ ಹೂವಿನಂತೆ ಸುಂದರವಾಗಿ ಕಂಡಳು..!! ಹಾಲು ಬಿಳುಪಿನ ಮೈ ಬಣ್ಣದ ಸುಂದರವಾದ ಮೈ ಮಾಟ.. ಚಂದಿರನಂತೆ ದುಂಡಗಿರುವ ಮುಖದಲ್ಲಿ ಬಿಲ್ಲಿನಂತೆ ಬಾಗಿರುವ ಹುಬ್ಬುಗಳು,ಎಂತವರನ್ನೂ ತನ್ನತ್ತ ಸೆಳೆಯಬಲ್ಲ ಕಂಗಳು,ಚಿಕ್ಕದಾದ ಮೂಗಿನಲ್ಲಿ ಹೊಳೆಯುತ್ತಿರುವ ಮೂಗುತ್ತಿ,ಕೆಂಪಗಿನ ಚೆಂದುಟಿಗಳ ಮಧ್ಯೆ ಬೆಳ್ಳಗಿನ ದಂತಪಂಕ್ತಿಗಳು..ಹಾವಿನಂತೆ ಇಳಿಬಿದ್ದ ನೀಳವಾದ ಜಡೆ ಅವಳ ಅಂದವನ್ನು ಇನ್ನೂ ಹೆಚ್ಚುವಂತೆ ಮಾಡಿತ್ತು..ಸೊಂಟಕ್ಕೆ ಒಂದು ಕೈಯನ್ನು ಇರಿಸಿ ಇನ್ನೊಂದು ಕೈಯಲ್ಲಿ ಪೊರಕೆ ಹಿಡಿದುಕೊಂಡು ನಿಂತಿದ್ದ ಮನಮೋಹಕ ಭಂಗಿಗೆ ಅವನು ಅವಳಿಂದ ಕಣ್ಣು ಕೀಳದಾದ..ಅವನ ನೋಟಕ್ಕೆ ಅವಳ ಗುಲಾಬಿ ಕೆನ್ನೆಗಳು ರಂಗೇರಿದ್ದು ನಾಚಿಕೆಯಿಂದ ತಲೆ ತಗ್ಗಿಸಿದಳು..”ಯಾರಪ್ಪಾ ಅದು..?!” ಮಂಜುನಾಥ ರೈಗಳು ಪ್ರಶ್ನಿಸಿದಾಗ ಇಬ್ಬರೂ ಎಚ್ಚೆತ್ತರು..ಏನೂ ಮಾತನಾಡದೆ ಕವಿತ ಅಲ್ಲಿಂದ ಕಾಲ್ಕಿತ್ತಳು..ತನ್ನ ನೀಳವಾದ ಜಡೆಯನ್ನು ಬೀಸುತ್ತಾ ಹೋಗುತ್ತಿರುವ ಅವಳನ್ನೇ ನೋಡುತ್ತಿದ್ದ ಅವನು ಹೇಳಿದ..”ಸಾರ್..ಅದು ನಾನು ತರುಣ್..ಬೆಂಗಳೂರಿನಿಂದ ಬಂದಿದ್ದೀನಿ..” “ಓ..ಹೌದಾ..?!” ಎಂದವರ ಧ್ವನಿಯಲ್ಲಿ ಅಚ್ಚರಿಯಿತ್ತು..
“ನಿಮ್ಮನ್ನು ಇಂಟರ್ವ್ಯೂ ಮಾಡುವುದಕ್ಕೋಸ್ಕರ ಜನಧ್ವನಿ ಎಂಬ ಪತ್ರಿಕೆಯಿಂದ ಬಂದಿದ್ದೇನೆ..” ತರುಣ್’ನ ಮಾತಿಗೆ ಇನ್ನೂ ಆಶ್ಚರ್ಯಗೊಂಡರು ರೈಗಳು..”ಇಂಟರ್ವ್ಯೂ..?!” ಖುಷಿಯಿಂದ ಉಬ್ಬಿ ಹೋದರು..
“ಹೌದು ಸಾರ್..ಕಂಬಳದ ಬಗ್ಗೆ..ಪ್ರತೀ ವರ್ಷ ನಿಮ್ಮ ಕೋಣಗಳಂತೆ ಕಂಬಳದಲ್ಲಿ ವಿನ್ ಆಗೋದು..ಹಾಗೆಂದು ಕೇಳ್ಪಟ್ಟೆ..ಅದು ನಿಜವಲ್ವಾ..?!” “ಹೌದು..ಹೌದು..ಯಾವಾಗಲೂ ಇಲ್ಲಿನ ಕೋಣಗಳೇ ಪಸ್ಟ್ ಬರೋದು..!!”
ಹೆಮ್ಮೆಯಿಂದ ಹೇಳಿದರು..”ಅದಕ್ಕೆ ಸಾರ್ ನಿಮ್ಮ ಇಂಟರ್ವ್ಯೂ ಮಾಡೋಣವೆಂದು ಬಂದೆ..ಅಲ್ಲದೆ ನಾಳೆ ನಡೆಯುವ ಕಂಬಳವನ್ನು ಲೈವ್ ಆಗಿ ನೋಡಿದ ಹಾಗೂ ಆಯಿತಲ್ವಾ..?! ಎಂದ ತರುಣ್ ಸಣ್ಣದಾಗಿ ನಕ್ಕು ತನ್ನ ಹಲ್ಲುಗಳನ್ನು ಪ್ರದರ್ಶಿಸಿದ..”ಒಳ್ಳೆಯದಾಯಿತು..” ಎಂದವರು “ಕವಿತಾ..ಕವಿತಾ..” ಮಗಳನ್ನು ಕರೆದರು..ಮನೆಯೊಳಗಿನಿಂದ ಹೊರ ಬಂದು ಕವಿತ “ಏನಪ್ಪಾ..?!” ಎಂದು ಕೇಳಿದಳು..”ಇವ್ರು..ನನ್ನ ಇಂಟರ್ವ್ಯೂ ಮಾಡಲು ಬೆಂಗಳೂರಿನಿಂದ ಬಂದಿದ್ದಾರೆ..ಗೊತ್ತಾ..ತರುಣ್ ಅಂತ ” ಮಗಳಿಗೆ ಪರಿಚಯಿಸಿದರು..”ಹುಂ” ಎಂದವಳು ಅವನ ಕಡೆ ನೋಡಿ ಮುಗುಳ್ನಕ್ಕಳು..ತರುಣ್ “ಹಾಯ್..” ಎಂದು ತಾನೂ ನಕ್ಕ..ಇಬ್ಬರ ಕಂಗಳು ಒಂದು ಕ್ಷಣ ಬೆರೆತವು..”ಇವಳು ನನ್ನ ಮಗಳು ಕವಿತ..” ಎಂದ ಅವರಿಗೆ ಅವನು ನಗುತ್ತಾ ಉತ್ತರಿಸಿದ “ಗೊತ್ತಾಯಿತು ಬಿಡಿ..” “ಹೇಗೆ ಗೊತ್ತಾಯ್ತು..?!” ರೈಗಳು ಅಚ್ಚರಿಯಿಂದ ಪ್ರಶ್ನಿಸಿದರು..”ನೀವೇ ಕವಿತ ಎಂದು ಕೂಗಿದ್ರಲ್ಲ..ಆಗಲೇ ಅನಿಸಿತ್ತು ಇವರು ನಿಮ್ಮ ಮಗಳೆಂದು..” ಎಂದು ಹೇಳಿದ ಕವಿತಳ ಕಡೆ ಒಲವಿನ ನೋಟ ಬೀರುತ್ತಾ..ಅವಳಿಗೆ ಅವನ ನೋಟದಿಂದ ಒಮ್ಮೆ ತಪ್ಪಿಸಿದರೆ ಸಾಕೆಂದೆನಿಸಿತ್ತು..”ಹೋ..ಹೌದಲ್ಲ..” ಎಂದು ನುಡಿದವರು “ಇವರಿಗೆ ತಿಂಡಿ ಕಾಫಿಗೆ ವ್ಯವಸ್ಥೆ ಮಾಡು..” ಎಂದರು ಮಗಳಿಗೆ..ಕವಿತ ಸರಿಯೆಂದು ಹೇಳಿ ಒಳಗೆ ಹೋದಳು..”ಏರ್ಯವು ಬತ್ತ್ನೆ(ಯಾರು ಬಂದಿದ್ದು)..?!” ಎನ್ನುತ್ತಾ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆಯೊಳಗಿನಿಂದ ಹೊರ ಬಂದರು ಶಾರದಮ್ಮ..!! ಸುಕ್ಕುಗಟ್ಟಿದ ಮೈಕೈ..ಬಾಗಿದ ಸೊಂಟದ ಮೇಲೆ ಕೈ ಇಟ್ಟುಕೊಂಡಿದ್ದವರ ವಯಸ್ಸು ಸುಮಾರು ಎಂಬತ್ತಾಗಿರಬಹುದು..”ಅವು ಎನ್ನ ಇಂಟರ್ವ್ಯೂ ಮಲ್ಪೆರ ಬತ್ತ್ನೆ..ತರಣ್ ಇಂಬ್ಯೆನ ಪುದರು(ನನ್ನ ಇಂಟರ್ವ್ಯೂ ಮಾಡಲು ಬಂದಿರೋದು..ತರುಣ್ ಅಂತ ಇವನ ಹೆಸರು)..!!” ಎಂದು ತಾಯಿಗೆ ಹೇಳಿದರು..”ಏರ್ ನಟ್ಟುನಾಯೆನಾ..?! ಅಯ್ಯೋ..ಆಯೆನ್ ಕಡಪುಡ್ನ ಬುಡುದು ನನಲ ದಾಯೆಗ್ ಉಂತಾವ್ನೇ..ಇತ್ತೆ ಏರೆನ್ಲಾ ನಂಬ್ಯರ ಬಲ್ಲಿ ಮಗಾ..?! (ಯಾರು ಬೇಡುವವನಾ..?! ಅಯ್ಯೋ..ಅವನನ್ನು ಕಳುಹಿಸುವುದು ಬಿಟ್ಟು ಇನ್ನೂ ಯಾಕೆ ಇರಿಸಿಕೊಂಡಿದ್ಯಾ..?! ಈಗ ಯಾರನ್ನೂ ನಂಬಬಾರದು ಮಗನೆ..?!)” ಎಂದರು ಅವರು..ರೈಗಳು ತಲೆ ಚಚ್ಚಿಕೊಂಡರು..
ತರುಣ್ ಏನೂ ಅರ್ಥವಾಗದೆ ಕುಳಿತುಕೊಂಡಿದ್ದ..”ಇವರು ನನ್ನ ತಾಯಿ..ಸರಿಯಾಗಿ ಕಿವಿಯೂ ಕೇಳಲ್ಲ..ಕಣ್ಣೂ ಕಾಣಲ್ಲ..” ಎಂದರು..ಅವನು ತಲೆಯಾಡಿಸಿದ..ಶಾರದಮ್ಮ ತಮ್ಮ ತಮ್ಮಲ್ಲೇ ಗೊಣಗುತ್ತಾ ಅಲ್ಲೇ ಕುಳಿತರು..
ರೈಗಳು ತಾಯಿಯ ಕಿವಿಯ ಬಳಿ ತರುಣ್ ವಿಷಯ ತಿಳಿಸಿದರು..”ಓ..ಅಂದಾ..?! ಎಂಕ್ ಗೊತ್ತಾಯಿಜ್ಜಿ ಮಗಾ(ಓ..ಹೌದಾ..ನನಗೆ ಗೊತ್ತಾಗಲಿಲ್ಲ ಮಗಾ..)..!!”ಎಂದರು..ತರುಣ್ ತಲೆ ಕೆರೆದುಕೊಳ್ಳುತ್ತಾ ತನ್ನ ಮೂವತ್ತರೆರಡು ಹಲ್ಲುಗಳನ್ನು ಪ್ರದರ್ಶಿಸಿದ..ಕವಿತ ಬಂದು ತಿಂಡಿ ಮಾಡಲು ಕರೆದಳು..ರೈಗಳು ಅವನನ್ನು ಕರೆದುಕೊಂಡು ಮನೆಯೊಳಗೆ ಹೋದರು..ಆಗ ತಾನೇ ಹೊಯ್ಯಲಾದ ಬಿಸಿ ಬಿಸಿ ದೋಸೆ ತಿಂದವನು ಟೀ ಕುಡಿದವನಿಗೆ ಹಸಿವು ದೂರವಾಗಿತ್ತು..ಈಗ ಕಂಬಳದ ಬಗ್ಗೆ ಮಂಜುನಾಥ ರೈಗಳ ಬಳಿ ಪ್ರಶ್ನಿಸಿದ..ಅವರು ಅದರ ಬಗ್ಗೆ ವಿವರಿಸಿದರು..
“ಕಂಬಳ ಈ ಕರಾವಳಿ ಕರ್ನಾಟಕ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ..ಇಲ್ಲಿ ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಓಡಿಸಲಾಗುವುದು..ಇದನ್ನು ರೈತರು ಮತ್ತೆ ಇನ್ನಿತರ ವರ್ಗದವರು ಸೇರಿ ಭತ್ತದ ಕೊಯಿಲಿನ ನಂತರ ನಡೆಸ್ತಾರೆ..ಇವುಗಳಲ್ಲಿ ಎರಡು ವಿಧವಿದೆ-ಒಂಟಿಗದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ..!!” ಎಂದರು.. “ಹೌದಾ ಸಾರ್..” “ಹುಂ..ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ..ಗದ್ದೆಯ ಮಣ್ಣಿಗೆ ಮರಳನ್ನು ಸೇರಿಸಿ ಅದರ ಮೇಲೆ ನೀರನ್ನು ನಿಲ್ಲಿಸಲಾಗುತ್ತದೆ..ಇಲ್ಲಿ ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ..”
“ಓಕೆ..ಮುಂದೆ..?!” “ಇನ್ನು ಇಲ್ಲಿ ಜೋಡುಕರೆ ಕಂಬಳ ತುಂಬಾನೇ ಫೇಮಸ್ಸು..!! ಅಕ್ಕ ಪಕ್ಕ ಎರಡು ಕೆರೆಗಳಲ್ಲಿ ತಲಾ ಎರಡು ಕೋಣ ಜೋಡಿಗಳನ್ನು ಓಡಿಸುವುದೇ ವಿಶೇಷ..!! ಇಲ್ಲಿ ಸುಮಾರು 300ಕ್ಕೂ ಹೆಚ್ಚು ಜೋಡಿ ಕೋಣಗಳಿವೆ..ಗೊತ್ತಾ..!! ಕೋಟಿ-ಚೆನ್ನಯ,ಕಾಂತ ಬಾರೆ-ಬೂದ ಬಾರೆ,ಲವ-ಕುಶ,ಜಯ-ವಿಜಯ,ರಾಮ-ಲಕ್ಷ್ಮಣ ಮುಂತಾದ ಮನುಷ್ಯರು ಇಡುವ ಹೆಸರುಗಳನ್ನೇಅವುಗಳಿಗೆ ಇಡುತ್ತೇವೆ..” ತರುಣ್ ಅಚ್ಚರಿಯಿಂದ ಪ್ರಶ್ನಿಸಿದ,”ಏನು ಸಾರ್..ಇಲ್ಲಿ ಮನುಷ್ಯರ ಹೆಸರನ್ನೇ ಇಡುತ್ತೀರಾ..?ಅದೂ ಪ್ರಾಣಿಗಳಿಗೇ..ಅದ್ಯಾಕೆ..?!” ಮಂಜುನಾಥ ರೈಗಳು ಉತ್ಸಾಹದಿಂದೇ ಹೇಳಿದರು,”ಏನು ಅವುಗಳು ಪ್ರಾಣಿಗಳಾ..?! ಇಲ್ಲಪ್ಪ..ಅವುಗಳು ನಮಗೆ ಮಕ್ಕಳಿಗಿಂತಲೂ ಹೆಚ್ಚು..!! ಅವುಗಳನ್ನು ನಾವು ನಮ್ಮ ಮನೆಯ ಸದಸ್ಯರೆಂದೇ ಭಾವಿಸಿ ಮುದ್ದಿನಿಂದ ಹೆಸರಿಟ್ಟು ಸಾಕುತ್ತೇವೆ..ಬನ್ನಿ ಬೇಕಾದರೆ ನಿಮಗೆ ತೋರಿಸುತ್ತೇನೆ..” ಎಂದು ಎದ್ದವರು ಅವನನ್ನು ಹಟ್ಟಿಯ
ಕಡೆಗೆ ಕರೆದುಕೊಂಡು ಹೊದರು..ಅಲ್ಲಿ ಹಟ್ಟಿಯ ಸಮೀಪ ಮರವೊಂದಕ್ಕೆ ಎರಡು ಕೋಣಗಳನ್ನು ಕಟ್ಟಲಾಗಿತ್ತು..”ಇವು ಕೃಷ್ಣ-ಬಲರಾಮರು..” ಎಂದು ಹೇಳಿ ಅವುಗಳ ಸಮೀಪ ಹೋಗಿ ಅಕ್ಕರೆಯಿಂದ ಮೈದಡವಿದರು..
ಅವುಗಳು ಪ್ರೀತಿಯಂದ ತಮ್ಮ ಯಜಮಾನನ ಕೈಗಳನ್ನು ನೆಕ್ಕಲಾರಂಭಿಸಿದುವು..ತರುಣ್ ಇದನ್ನೆಲ್ಲ ನೋಡುತ್ತಾ ನಿಂತ..ಆಗಲೇ ಅಲ್ಲಿಗೆ ಸುಮಾರು ಇಪ್ಪತ್ತೈದು ವರ್ಷವಿರಬಹುದೇನೋ..ಐದೂವರೆ ಆರಡಿ ಎತ್ತರದ ದೃಢಕಾಯ ತರುಣನೊಬ್ಬ ಬಂದ..”ಇವನು ಸುನಿಲ್..ಕೃಷ್ಣ ಬಲರಾಮರನ್ನು ಓಡಿಸುವುದು ಇವನೇ..” ಎಂದರು ಅವನು ತರುಣ್ ಕಡೆ ನೋಡಿ ಮುಗುಳ್ನಕ್ಕ..”ಚಿಕ್ಕಂದಿನಿಂದಲೇ ಯಾರೂ ಇಲ್ಲ ಇವನಿಗೆ..ನಾನೇ ಸಾಕಿ ಸಲಹಿದ್ದು ಎಲ್ಲ..!! ನನ್ನ ಇನ್ನೊಬ್ಬ ಮಗನೋ ಇಲ್ಲ..ಬಲಗೈ ಭಂಟ ಏನು ಬೇಕಾದರೂ ಕರೆಯಬಹುದು..”ಎಂದು ಹೇಳಿದರು ರೈಗಳು..”ಯಜಮಾನ್ರೆ..ಆ ವಿಷಯವೆಲ್ಲ ಈಗ ಯಾಕೆ..?!” ಎಂದು ವಿನಯದಿಂದ ನುಡಿದ ಸುನಿಲ್..ಪ್ರೀತಿಯಿಂದ ಅವನ ತಲೆ ಸವರಿದರು.. “ಕೋಣಗಳ ಆಹಾರ ಕ್ರಮದ ಬಗ್ಗೆ ಹೇಳಿ” ತರುಣ್’ನ ಪ್ರಶ್ನೆಗೆ ದೀರ್ಘವಾಗಿ ಉಸಿರನ್ನು ಬಿಟ್ಟು ನಂತರ ಆಲೋಚಿಸುತ್ತಾ ನುಡಿದರು..”ನಿತ್ಯ ಎರಡು ಹೊತ್ತು ಹೊಟ್ಟೆ ತುಂಬ ಬೇಯಿಸಿದ ಹುರುಳಿ..ಜೊತೆಗೆ ಬೈಹುಲ್ಲು,ಧಾರಾಳ ನೀರು..ಅಲ್ಲದೆ ಆಗಾಗ ಮೊಳಕೆ ಬರಿಸಿದ ಹುರುಳಿಯ ಸ್ಪೆಶಲ್ ಆಹಾರ..!! ಬೇಸಿಗೆಯಲ್ಲಿ ಕಲ್ಲಂಗಡಿ,ಕುಂಬಳಕಾಯಿಯಂತವುಗಳೇ ಭೋಜನ..!! ಇನ್ನು ಬೊಜ್ಜು ಬಂದರೆ ಎಲ್ಲಿ ಓಟಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಕೆಲವೊಮ್ಮೆ ಹುರುಳಿಯ ಜೊತೆ ತೆಂಗಿನೆಣ್ಣೆಯನ್ನು ಸೇವಿಸಲು ಕೊಡುತ್ತೇವೆ..ಇನ್ನು ದಿನಾ ಬೆಳಗ್ಗೆ ಆಹಾರದ ಬಳಿಕ ಶುದ್ಧ ನೀರಿನಲ್ಲಿ ಸ್ನಾನ..!! ಮತ್ತೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುತ್ತೇವೆ..” “ಓ..ಅದ್ಯಾಕೆ..?!” “ಹಿಂದೆ ಮುಂದೆ ಹೆಜ್ಜೆ ಇಡಲು,ಕೂರಲು ಏಳಲು ತರಬೇತಿಗಾಗಿ..ಇನ್ನು ಇದೆಲ್ಲ ಒಂದೆರಡು ದಿನಗಳ ಉಪಚಾರವಲ್ಲ..ಕಂಬಳ ಇರಲಿ, ಇಲ್ಲದಿರಲಿ ನಮ್ಮ ಕೋಣಗಳಿಗೆ ಯಾವತ್ತೂ ಈ ರೀತಿ ರಾಜ ಮರ್ಯಾದೆ ಇದ್ದೇ ಇರುತ್ತೆ..ಸೈನಿಕನಂಥ ಶಿಸ್ತುಬದ್ಧ ತರಬೇತಿ ಅವುಗಳಿಗೆ ನೀಡಿ ಕಂಬಳಕ್ಕೆ ಅಣಿ ಮಾಡುತ್ತೇವೆ..ಇನ್ನು ಅವಕ್ಕೆ ಅಂದರೆ ಕೋಣಗಳಿಗೆ ಯಜಮಾನ, ಓಟಗಾರ ಮತ್ತು ಆಳುಗಳ ಜೊತೆ ಇರುವ ಅಂಡರ್ಸ್ಟಾಂಡಿಂಗ್ ಅದೆಷ್ಟು ಗಾಢವಾಗಿದೆಯೆಂದರೆ ಪರಸ್ಪರರ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು..!!” “ವೆರೀ ಇಂಟ್ರೆಸ್ಟಿಂಗ್..!!” ಎಂದು ಉದ್ಗಾರ ತೆಗೆದ
ತರುಣ್..
“ಆದ್ರೂ ಈ ಕಂಬಳ ಮೇಲಿನ ನಿಷೇಧ ನಮಗೆ ತುಂಬಾನೇ ನೋವನ್ನುಂಟು ಮಾಡಿದೆ..” ಎಂದವರ ಧ್ವನಿಯಲ್ಲಿ ಬೇಸರ ಇಣುಕಿತ್ತು..”ಅಲ್ಲ ನಾವು ಮಕ್ಕಳಿಗಿಂತಲೂ ಹೆಚ್ಚು ಚೆನ್ನಾಗಿ ಸಾಕುತ್ತೇವೆ..ಇನ್ನು ಮನೆಯ ಹಿತ್ತಲಲ್ಲಿ ಸ್ವಿಮಿಂಗ್ ಫೂಲ್,ಹಟ್ಟಿಗೆ ಫ್ಯಾನ್..ಇದೆಲ್ಲ ಯಾಕೆ ಅವುಗಳಿಗೆ ಸೆಖೆಯಾಗಬಾರದೆಂದು ಮಾಡುತ್ತೇವೆ..ಇವುಗಳಿಗೋಸ್ಕರ ಮಾಡುವಷ್ಟು ಖರ್ಚನ್ನು ನಮ್ಮ ಮಕ್ಕಳಿಗೂ ಮಾಡಿರಲ್ಲ..ಗೊತ್ತಾ” ಎಂದಾಗ ಎಮೋಷನಲ್ ಆಗಿದ್ದರು ಮಂಜುನಾಥ ರೈಗಳು..!! “ಇನ್ನು ಹೊಡೆಯಬಾರದು ಅಂತ..ಯಾಕೆ ನಾವು ಮಕ್ಕಳು ತಪ್ಪು ಮಾಡಿದರೆ ಹೊಡೆಯಲ್ವಾ..?! ಇನ್ನು ಅದನ್ನು ನಿಷೇಧ ಮಾಡುತ್ತಾರಾ ಹೇಗೆ..?!” ಎಂದಾಗ ಸ್ವಲ್ಪ ಆವೇಷಕ್ಕೆ ಒಳಗಾಗಿದ್ದರು..”ಇನ್ನು ತಮಿಳುನಾಡಲ್ಲಿ ಜಲ್ಲಿಕಟ್ಟು ಆಟ ಎಷ್ಟು ಅಪಾಯಕಾರಿ..ಆ ಆಟದಲ್ಲಿ ಎಷ್ಟು ಸಾವು ನೋವು ಸಂಭವಿಸಿದೆ ಗೊತ್ತಾ..ಅಂತಹ ಆಟಕ್ಕೆ ನಿಷೇಧ ಹಿಂತೆಗೆದಿದ್ದಾರೆ..ಇನ್ನು ಏನೂ ಸಾವು ನೋವು ಸಂಭವಿಸದ ನಮ್ಮ ಕಂಬಳಕ್ಕೆ ನಿಷೇಧ..ತುಂಬ ಚೆನ್ನಾಗಿದೆ..!!” ಎಂದವರ ಮಾತಲ್ಲಿ ವ್ಯಂಗ್ಯವೂ ಇಣುಕಿದ್ದು ಅವನ ಗಮನಕ್ಕೆ ಬಂದಿತ್ತು..
“ಸಾರ್ ಈಗ ಕಂಬಳದ ಮೇಲಿನ ನಿಷೇಧವನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ..!!” ಎಂದ ತರುಣ್ ಮಾತಿಗೆ ಅವರು “ಏನು ತೀರ್ಮಾನಿಸಿದ್ದಾರೋ ಏನೋ..ಆದ್ರೆ ಇಲ್ಲಿ ನಾಳೆ ಕಂಬಳ ನಡೆಸುವುದಂತೂ ಪಕ್ಕಾ..” ಎಂದರು..ಆ ಸಮಯದಲ್ಲಿ “ಪಪ್ಪಾ ಕರಣ್’ನ ಫೋನ್..!!” ಎಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬಂದಳು ಕವಿತ..”ಕೊಡು ಇಲ್ಲಿ ಮಾತಾಡ್ತೀನಿ..ಇಲ್ಲಿಗೆ ಬರ್ತೀನಿ ಅಂತ ಹೇಳಿದವನ ಪತ್ತೆಯೇ ಇಲ್ಲ..ಎಲ್ಲಿಗೆ ಹೋದ ಅವನು..?!” ಮೊಬೈಲ್ ತೆಗೆದುಕೊಂಡವರು ಕರಣ್ ಜೊತೆ ಮಾತನಾಡುತ್ತಾ ಮುಂದಕ್ಕೆ ನಡೆದರು..ತರುಣ್ ಅಲ್ಲಿ ನಿಂತಿದ್ದ ಕವಿತಳನ್ನೇ ನೋಡತೊಡಗಿದ..ಇವನೇನು ನನ್ನ ಹೀಗೆ ನೋಡ್ತಿದ್ದಾನೆ..ಅವಳಿಗೆ ಮುಜುಗರವಾಗಿತ್ತು..”ಏನು ಹಾಗೆ ನೋಡ್ತಿದ್ದೀರಾ..?!” “ಏನಿಲ್ಲ ಸುಮ್ನೆ..ಕವಿತಾವ್ರೇ..ನಿಮ್ಮ ಎಲ್ಲ ಕಥೆ ನನಗೆ ಗೊತ್ತಿದೆ..!!” ಎಂದು ನಗುತ್ತಾ ಹೇಳಿದ..ಅವಳಿಗೆ ಶಾಕ್..!! ಅಪರಿಚಿನಾದ ಇವನಿಗೆ ನನ್ನ ಕಥೆ ಹೇಗೆ ಗೊತ್ತು..?! “ಇವನೊಬ್ಬ..ಇವತ್ತು ಬರಲ್ಲ ಅಂದ..ನಾಳೆ ಬರ್ತಾನಂತೆ..!!” ಎಂದು ಮಗನ ಜೊತೆ ಮಾತು ಮುಗಿಸಿ ಬಂದವರು ಮಗಳ ಕೈಗೆ ಮೊಬೈಲ್ ಕೊಡುತ್ತಾ ಹೇಳಿದರು ರೈಗಳು “ಏನು ಕೆಲಸವಿರುತ್ತೋ ಏನೋ..” ಎಂದ ತರುಣ್..ರೈಗಳು ಮನೆಯತ್ತ ಹೆಜ್ಜೆ ಹಾಕಿದರು..ಆಲೋಚನೆಯಲ್ಲಿ ಮುಳುಗಿದ್ದ ಕವಿತಳಿಗೆ ಮುಗುಳ್ನಗುತ್ತಾ ಕಣ್ಣೊಡೆದವನು ಅವರನ್ನು ಹಿಂಬಾಲಿಸಿದ್ದ.
ರಾತ್ರಿ ಗಂಟೆ ಹನ್ನೆರಡು..ಕತ್ತಲು ಸಂಪೂರ್ಣವಾಗಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು..ಎಲ್ಲ ಕಡೆ ನಿಶ್ಶಬ್ಧ ವಾತಾವರಣ..!! ಎಲ್ಲರೂ ನಿದ್ದೆಯಲ್ಲಿದ್ದ ಸಮಯ..!! ಮರುದಿನದ ಕಂಬಳವನ್ನು ನೋಡುವ ಸಲುವಾಗಿ ತರಣ್ ಮಂಜುನಾಥ ರೈಗಳ ಮನೆಯಲ್ಲಿ ತಂಗಿದ್ದ..ಅವನಿಗೆ ಹೊಸ ಸ್ಥಳವಾಗಿದ್ದ ಕಾರಣವೇನೋ ನಿದ್ದೆ ಹತ್ತಿರವೂ ಸುಳಿಯುತ್ತಿಲ್ಲ..!! ಹಾಗೇ ಆಲೋಚಿಸುತ್ತಾ ಮಲಗಿದವನಿಗೆ ಹೊರಗೆ ಏನೋ ಸದ್ದು ಕೇಳಿಸಿತು..ಏನಿರಬಹುದೆಂದು ಮೆಲ್ಲಗೆ ಕಳ್ಳ ಹೆಜ್ಜೆಯಿಡುತ್ತಾ ರೂಮಿನ ಕಿಟಿಕಿಯಿಂದ ಇಣುಕಿದ..ಹಟ್ಟಿಯ ಭಾಗದಲ್ಲಿ ಕೆಲವು ಲೈಟ್ ಬೆಳಕು ಕಾಣಿಸಿತ್ತು..ಅದರ ಜೊತೆಗೆ ಪಿಸು ಪಿಸು ಮಾತುಗಳು..ಇದೇನಿದು..?! ಎಂದು ಅಚ್ಚರಿಗೊಂಡ.. ಸೀದಾ ರೂಮಿನಿಂದ ಹೊರ ಬಂದವನು ಮುಂಬಾಗಿಲು ತರೆದು ಹಟ್ಟಿಯ ಕಡೆಗೆ ನಡೆದ..ತಣ್ಣಗೆ ಬೀಸುತ್ತಿರುವ ತಂಗಾಳಿಗೆ ಮೈ ಗಡ ಗಡನೆ ನಡುಗುತ್ತಿತ್ತು..ಧೈರ್ಯ ಮಾಡಿ ಹೋದವನಿಗೆ ಅಪಾಯದ ಅರಿವಾಗಲಿಲ್ಲ..!!
ಸಡನ್ನಾಗಿ ಮುಖದ ಮೇಲೆ ಲೈಟಿನ ಬೆಳಕು ಬಿತ್ತು..ಅದನ್ನು ನೋಡಲಾಗದೆ ಕಣ್ಮುಚ್ಚಿದ.. ಆ ಕ್ಷಣ ಹಿಂದಿನಿಂದ ತಲೆಗೆ ಒಂದೇಟು ಬಿತ್ತು..!! ದಡಕ್ಕನೆ ಮುಂದಕ್ಕೆ ಮುಗ್ಗರಿಸಿದವನ ಬಾಯಿಯಿಂದ “ಅಮ್ಮಾ..!!” ಎಂಬ ಕೂಗು ಹೊರ ಬಿತ್ತು..!!
(ಮುಂದುವರೆಯುತ್ತದೆ…)
Facebook ಕಾಮೆಂಟ್ಸ್