“ಕಾಶ್ಮೀರದ ಯುವಕರು ಶಸ್ತ್ರಾಸ್ತ್ರ ಹಿಡಿದಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮತ್ತು ಅವರ ಹಕ್ಕುಗಳನ್ನು ಪಡೆಯುವುದಕ್ಕಾಗಿ. ಅವರನ್ನು ಯಾವುದೇ ಬೆದರಿಕೆಗಳಿಂದ ಮಟ್ಟ ಹಾಕಲಾಗದು. ಅವರು ಸಾವಿಗೆ ಅಂಜುವವರಲ್ಲ. ಅವರು ಶಾಸಕ ಅಥವಾ ಮಂತ್ರಿಯಾಗಲು ಹೋರಾಡುತ್ತಿಲ್ಲ. ಅವರು ಹೋರಾಡುತ್ತಿರುವ ಉದ್ದೇಶ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ!” ಇಂತಹ ಅಣಿಮುತ್ತು ಉದುರಿದ್ದು ಯಾವುದೋ ಪಾಕಿಸ್ತಾನದ ನಾಯಕ ಅಥವಾ ಪ್ರತ್ಯೇಕತಾವಾದಿ ನಾಯಕ ಅಥವಾ ಆಜಾದಿ ಗ್ಯಾಂಗಿನ ಸೋ ಕಾಲ್ಡ್ ಯವನಾಯಕನ ಬಾಯಿಂದ ಅಂತ ನೀವು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಮೂರು ಬಾರಿ ಕಾಶ್ಮೀರದ ಮುಖ್ಯಮಂತ್ರಿ, ಕೇಂದ್ರದ ಸಚಿವನೂ ಆಗಿದ್ದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಪರಮೋಚ್ಚ ನಾಯಕ ಫಾರೂಕ್ ಅಬ್ದುಲ್ಲಾ ಇತ್ತೀಚಿಗೆ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ನೀಡಿದ ಹೇಳಿಕೆಗಳಿವು!
ಇಷ್ಟಕ್ಕೇ ಸುಮ್ಮನಾಗದ ಅಬ್ದುಲ್ಲಾ “ಜನರಲ್ ರಾವತ್ ನೀಡಿರುವ ಹೇಳಿಕೆ ದುರದೃಷ್ಟಕರ. ಕಾಶ್ಮೀರದ ಯುವಕರ ಸಮಸ್ಯೆಯನ್ನು ಬುಲೆಟ್, ಗನ್ ಅಥವಾ ಹೇಳಿಕೆಯ ಮೂಲಕ ಪರಿಹರಿಸಲಸಾಧ್ಯ“ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ. ಎನ್ಕೌಂಟರ್ ನಡೆಯುವ ಸ್ಥಳಗಳಿಗೆ ಕಾಶ್ಮೀರದ ದೇಶದ್ರೋಹಿ ಯವಕರು ಲಗ್ಗೆ ಇಟ್ಟು ನಮ್ಮ ಸೈನಿಕರ ಕಾರ್ಯಾಚರಣೆಗೆ ಅಡ್ಡಪಡಿಸುವ ಬಗ್ಗೆ ಫಾರೂಕ್ ಅಬ್ದುಲ್ಲಾ ಹೇಳಿದ್ದನ್ನು ಕೇಳಿದರೆ ಅದು ಹೇಗೆ ಮೂರು ಬಾರಿ ಜಮ್ಮುಕಾಶ್ಮೀರದ ಮುಖ್ಯಮಂತ್ರಿಯಾದರು ಇವರು ಅಂತಾ ಅನ್ನಿಸೋದು ಪಕ್ಕಾ. ಅಬ್ದುಲ್ಲಾ ಪ್ರಕಾರ ಕಾಶ್ಮೀರದ ಜನತೆಗೆ ಪಿಡಿಪಿ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡುವುದು ಬೇಕಿರಲಿಲ್ಲ. ಅದರಿಂದ ಬೇಸೆತ್ತು ಎನ್ಕೌಂಟರ್ ನಡೆಯೋ ಜಾಗಕ್ಕೆ ಅವರು ಲಗ್ಗೆ ಇಡುತ್ತಿರುವುದು ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಇದೇ ಫಾರೂಕ್ ಅಬ್ದುಲ್ಲಾ ಹಿಂದೆ ಅಧಿಕಾರಕ್ಕಾಗಿ ಅವರೀಗ ಕೋಮುವಾದಿ ಎಂದು ಜರಿಯುತ್ತಿರೋ ಬಿಜೆಪಿ ಜೊತೆ ಕೈಜೋಡಿಸಿದ್ದರು! ಒಂದೋ ಅಧಿಕಾರವಿಲ್ಲದೇ ಅಧಿಕಾರದ ಹಸಿವು ಜೋರಾಗಿದೆ ಅಥವಾ ವಯಸ್ಸಾದ್ದರಿಂದ ಮತಿಭ್ರಮಣೆಯಾಗಿರಲೂಬಹುದು. ಇಲ್ಲದಿದ್ದರೆ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರಲಿಲ್ಲ. ಎರಡೂ ದೇಶಗಳು ಶಾಂತಿ ಮಾತುಕತೆ ಮಾಡಬೇಕು ಅಂತಾರಲ್ಲ ಅದೆಷ್ಟು ಬಾರಿ ನಮ್ಮ ಸರ್ಕಾರ ಶಾಂತಿ ಮಾತುಕತೆಗೆ ಹೋಯಿತಾದರೂ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕಿಲ್ಲ? ಪಠಾನ್ ಕೋಟ್, ಉರಿ ದಾಳಿ ನಡೆಸಿದ್ದು ಪಾಕಿಸ್ತಾನವೇ ಅಂತ ಅರ್ಥವಾಗದಷ್ಟು ಹೆಡ್ಡರೇ ಫಾರೂಕ್? ಉಳಿದದ್ದೆಲ್ಲಾ ಬಿಟ್ಟುಹಾಕಿದರೂ ಕಾಶ್ಮೀರದ ಯುವಕರ ಬಗ್ಗೆ ಫಾರೂಕ್ ನೀಡಿದ ಹೇಳಿಕೆ ಮತ್ತೆ ಯುವಕರನ್ನು ಆಜಾದಿ ವಿಷಯದಲ್ಲಿ ಎತ್ತಿ ಕಟ್ಟಲು ನಡೆಸಿದ ಹುನ್ನಾರದಂತಿಲ್ಲವೇ?
ಕೇವಲ ಫಾರೂಕ್ ಅಬ್ದುಲ್ಲಾ ಮಾತ್ರವಲ್ಲ. ನಮ್ಮ ದೇಶದ ವಿರೋಧ ಪಕ್ಷಗಳಲ್ಲಿ ಇದೇ ತರಹದ ಹೇತಲಾಂಡಿ ನಾಯಕರುಗು ಬಹಳಷ್ಟು ಇದ್ದಾರೆ. ಅಷ್ಟೇ ಏಕೆ ಸುಪ್ರೀಂಕೋರ್ಟ್ ವಕೀಲರಿಂದ ಹಿಡಿದು ಪತ್ರಕರ್ತರು, ಉಪನ್ಯಾಸಕರ ಸೋಗಿನಲ್ಲಿರೋ ಬುದ್ಧಿಜೀವಿಗಳೂ ಆಜಾದಿ ಗ್ಯಾಂಗ್ ಬೆಂಬಲಿಸುತ್ತಾ ಬರುತ್ತಾರೆ. ಬಾಯಿ ತೆಗೆದರೆ ಇವರಿಂದ ಬಾಯಿಂದ ಉದುರುವುದು ಆಜಾದಿಯ ಮಂತ್ರ! ಭಾರತವನ್ನು ತುಂಡು ತುಂಡಾಗಿ ಮಾಡುತ್ತೇವೆಂಬ ಘೋಷಣೆ ಮಾಡುವುದು, ಅಫ್ಜಲ್ ಗುರುವನ್ನು ಶಹೀದ್ ಅನ್ನುವುದು, ಅವನ ಜಯಂತಿ ಆಚರಿಸುವುದು, ಬುರ್ಹಾನ್ ವಾನಿ ದೇಶಕ್ಕಾಗಿ ಬಲಿದಾನ ಮಾಡಿದ ಅನ್ನುವುದು, ಯಾಕುಬ್ ಮೆಮನ್ ನಂತಹ ಭಯೋತ್ಪಾದಕರ ಅಂತಿಮ ಸಂಸ್ಕಾರಕ್ಕೆ ಸಾಗರೋಪಾದಿಯಲ್ಲಿ ಜನರನ್ನು ಸೇರಸಿ ಭಾರತದ ವಿರುದ್ಧ ಘೋಷಣೆ ಕೂಗಿಸುವುದು, ಕಾಶ್ಮೀರವನ್ನು ಸ್ವತಂತ್ರವಾಗಿರಲು ಬಿಡಿ ಅನ್ನುವುದು, ದೇಶದ ವಿರುದ್ಧ ಘೋಷಣೆ ಕೂಗಿದ್ದ ಕನ್ನಯ್ಯಕುಮಾರ್ ಉಮರ್ ಖಾಲಿದ್ ಮುಂತಾದವರನ್ನು ನಮ್ಮ ದೇಶದ ವಿಶ್ವವಿದ್ಯಾಲಯಗಳಿಗೆ ಕರೆಸಿ ವಿದ್ಯಾರ್ಥಿಗಳಿಗೆ ಭಾಷಣ ಮಾಡಿಸುವುದು ಇವರ ಪ್ರಕಾರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ.!
ಸಯ್ಯದ್ ಅಲಿ ಗಿಲಾನಿ, ಮೀರ್ವೈಜ್ ಮತ್ತು ಯಾಸೀನ್ ಮಲಿಕ್ ಈ ಮೂರು ವ್ಯಕ್ತಿಗಳು ಸದಾ ಸುದ್ದಿಯಲ್ಲಿರೋ ಕಾಶ್ಮೀರದ ಪ್ರತ್ಯೇಕತಾವಾದಿಗಳು. ಇವರ ಕೆಲಸ ಏನೆಂದರೆ ಪಾಕಿಸ್ತಾನದ ಬೂಟು ನೆಕ್ಕುತ್ತಾ ಕಾಶ್ಮೀರದ ಯುವಕರಿಗೆ ಹಿಂಸೆಗೆ ಮತ್ತು ಸೈನಿಕರ ಮೇಲೆ ಕಲ್ಲೆಸೆಯಲು ಪ್ರಚೋದನೆ ನೀಡುವುದು. ಒಂದು ಕೈಯಲ್ಲಿ ಪಾಕಿಸ್ತಾನದಿಂದ ಹಣ ಸ್ವೀಕರಿಸಿ ಇನ್ನೊಂದು ಕೈಯಲ್ಲಿ ಭಾರತ ಸರ್ಕಾರದ ವತಿಯಿಂದ ಸ್ಟಾರ್ ಹೋಟೆಲುಗಳಲ್ಲಿ ವಾಸ್ತವ್ಯ, ಸರ್ಕಾರಿ ಕಾರು ಮತ್ತು ಇಂಧನ ವೆಚ್ಚಗಳು, ವಿಮಾನಯಾನದ ಖರ್ಚು ವೆಚ್ಚಗಳು, ವಿವಿಐಪಿ ಸೌಲಭ್ಯಗಳು, ಮೆಡಿಕಲ್ ಬಿಲ್ ಮತ್ತು ರಕ್ಷಣೆಗಾಗಿ ಬೆಂಗಾವಲು ಪಡೆ ಸೌಲಭ್ಯವನ್ನೂ ಪಡೆಯುತ್ತಾರೆ. ಇಷ್ಟೆಲ್ಲಾ ಪುಕ್ಸಟ್ಟೆ ಸೌಲಭ್ಯಗಳನ್ನು ಪಡೆದುಕೊಂಡರೂ ಇವರ ಬಾಯಲ್ಲಿ ಬರುವುದು ಮಾತ್ರ ಪಾಕಿಸ್ತಾನದ ಜಪ. ನಾವು ನೀವು ಕಟ್ಟುವ ಟ್ಯಾಕ್ಸ್ ಹಣದಿಂದ ಹುರಿಯತ್ ನಾಯಕರಿಗೆ ಕೊಟ್ಟರೋ ಈ ಎಲ್ಲಾ ಸೌಲಭ್ಯಗಳನ್ನು ಸರಕಾರ ಮೊದಲು ಹಿಂಪಡೆಯಬೇಕು. ಭಾರತದ ಐಕ್ಯತೆ ಮತ್ತು ಭದ್ರತೆಗೆ ಅಭದ್ರತೆ ತರುವವರಿಗೆ ಯಾವುದೇ ಭದ್ರತೆ ನೀಡಬಾರದು. ಕಾಶ್ಮೀರದ ನಿರುದ್ಯೋಗಿ ಯುವಕರನ್ನು ಭಾರತದ ವಿರುದ್ಧ ಹೋರಾಡಲು ಪ್ರೇರೇಪಿಸುವ ಇವರು ಅಪ್ಪಿತಪ್ಪಿಯೂ ತಮ್ಮ ಕುಟುಂಬ ಸದಸ್ಯರನ್ನು ಇದಕ್ಕಾಗಿ ಬಳಸಿಕೊಳ್ಳುವುದಿಲ್ಲ. ಎಲ್ಲರನ್ನೂ ಸುರಕ್ಷಿತರನ್ನಾಗಿ ಬಚ್ಚಿಡುತ್ತಾರೆ.!
ಶಬ್ನಮ್ ಲೋನ್ ಎಂಬಾಕೆ ಬಹಳ ಹಿಂದೆ ಹತನಾದ ಹುರಿಯತ್ ನಾಯಕ ಅಬ್ದುಲ್ ಗನಿ ಲೋನ್ ಪುತ್ರಿ. ಹೇಳಲಿಕ್ಕೆ ಸುಪ್ರೀಂ ಕೋರ್ಟಿನ ಲಾಯರ್ ಆದರೂ ಸದಾ ಬೆಂಬಲ ಸೂಚಿಸುವುದು ದೇಶವಿರೋಧಿಗಳಿಗೆ. ಇರ್ಫಾನ್ ಹಫೀಜ್ ಲೋಧ್, ಅಸ್ಲಂ ಗೋನಿ ಕೂಡಾ ಇದೇ ಸಾಲಿಗೆ ಸೇರಿದವರು. ಸುಪ್ರೀಂಕೋರ್ಟ್ ವಕೀಲೆ ಮಿಹಿರಾ ಸೂದ್ ಕೂಡಾ ಇವರೆಲ್ಲರಿಗಿಂತ ತಾನೇನೂ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ. ಹೇಳುತ್ತಾ ಹೋದರೆ ಪ್ರಗತಿಪರರ ಸೋಗಿನಲ್ಲಿ ದೇಶಕ್ಕೆ ಚೂರಿ ಹಾಕುವ ಇನ್ನೂ ಹಲವರಿದ್ದಾರೆ. ಇವರುಗಳ ಮುಖ್ಯ ಕೆಲಸವೆಂದರೆ ಆಜಾದಿ ಗ್ಯಾಂಗಿಗೆ ಟಿಆರ್ಪಿ ದಕ್ಕಿಸಿಕೊಡುವುದು. ಇವರುಗಳ ಆಟಾಟೋಪವನ್ನು ಒಮ್ಮೆ ಟಿವಿ ಕಾರ್ಯಕ್ರಮಗಳಲ್ಲಿ ನೋಡಬೇಕು! ಭಾರತೀಯ ಸಂವಿಧಾನದ ಆಶಯದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಪ್ರಮಾಣ ಮಾಡಿ ಸುಪ್ರೀಂ ಕೋರ್ಟಿನ ವಕೀಲರಾಗಿದ್ದರೂ ಭಾರತದ ವ್ಯವಸ್ಥೆಗೆ ಭಂಗ ತರಲೆತ್ನಿಸುವ ಕ್ರಿಮಿಗಳಿಗೆ ಸಹಾಯ ಮಾಡುತ್ತಾರೆ. ಸಂಸತ್ ಭವನಕ್ಕೆ ಬಾಂಬಿಟ್ಟ ಅಫ್ಜಲ್ ಗುರುವಿಗೆ ಮರಣದಂಡನೆ ಜಾರಿಗೊಳಿಸಲು ಮಾನವ ಹಕ್ಕುಗಳ ಹೋರಾಟಗಾರರ ರೂಪದಲ್ಲಿ ವಿರೋಧ ಸೂಚಿಸುತ್ತಾರೆ. ಬುರ್ಹಾನ್ ವಾನಿಯ ಎನ್ಕೌಂಟರ್ ನಕಲಿ ಅಂತ ವಾದ ಮಾಡುತ್ತಾರೆ. ಜನಸಾಮಾನ್ಯರ ಮೇಲೆ ಗುಂಡಿನ ಮಳೆ ಸುರಿಸುವ ಉಗ್ರರ ಮೇಲೆ ಕರುಣೆಯ ಮಳೆಯನ್ನೇ ಸುರಿಸುತ್ತಾರೆ. ನಮ್ಮ ಜವಾನರು ವೀರ ಮರಣ ಹೊಂದಿದಾಗ ಮಿಡಿಯದ ಹೃದಯಗಳು ಭಯೋತ್ಪಾದಕರು ಸತ್ತಾಗ ಕ್ಯಾಂಡಲ್ ಹಿಡಿದು ಮೆರವಣಿಗೆ ಮಾಡುತ್ತಾರೆ, ಉಪವಾಸ ಮಾಡಿ ಪೆಟಿಶನ್ ಗಳಿಗೆ ಸಹಿ ಮಾಡುತ್ತಾರೆ!
ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನಕ್ಕೆ ಭಾರತೀಯ ಸೈನ್ಯದ ಬಗ್ಗೆ ಎಷ್ಟೊಂದು ಭಯವಿದೆಯೆಂದರೆ ಪಾಕ್ ಪ್ರಧಾನಿ ನವಾಜ್ ಶರೀಫ್ ಪಕ್ಷದ ಸಂಸದನೊಬ್ಬ ಪಾಕಿಸ್ತಾನದ ಸಂಸತ್ತಿನಲ್ಲಿ ಹಫೀಜ್ ಸಯೀದ್ ಅನ್ನೋ ಕೋಳಿಯನ್ನು ಯಾವ ಚಿನ್ನದ ಮೊಟ್ಟೆ ಇಡುತ್ತೆ ಅಂತ ನಾವಿನ್ನೂ ಸಲಹುತ್ತ ಇದ್ದೇವೆ? ಹಫೀಜ್ ಸಯೀದ್ ನನ್ನು ಭೂಗತ ಮಾಡಿಟ್ಟುಕೊಳ್ಳಿ. ಇಲ್ಲವಾದರೆ ಭಾರತೀಯ ಸೈನ್ಯ ಬಂದು ನಮ್ಮನ್ನೂ ಹೊಡೆದು ಹಾಕಿಬಿಡುವುದು ಪಕ್ಕಾ ಅಂತ ಮನವಿ ಮಾಡುತ್ತಾರೆ! ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡ ಹಿರಿಯ ರಾಜಕಾರಣಿ ಅತ್ಜಾಜ್ ಐಜಜ್ ಪಾಕಿಸ್ತಾನ ಅಸ್ಸೆಂಬ್ಲಿಯಲ್ಲಿ ನಾವೇಕೆ ಉರಿ ದಾಳಿ ಮಾಡಿದ ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಲ್ಲುತ್ತಿದ್ದೇವೆ? ವಿಶ್ವದ ಹಲವು ರಾಷ್ಟ್ರಗಳು ನಮ್ಮನ್ನು ದೂರ ಮಾಡುತ್ತಿವೆ ಅಂತ ಹೇಳಿಕೆ ಕೊಡುತ್ತಾರೆ. ಆದರೆ ಇಲ್ಲಿ ನೋಡಿದರೆ ನಮ್ಮ ವಿರೋಧ ಪಕ್ಷಗಳೇ ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳುತ್ತವೆ. ಜಾತ್ಯಾತೀತರ ವೇಷ ಹಾಕಿಕೊಂಡ ಬುದ್ಧಿಜೀವಿಗಳು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಹಿಂಬಾಗಿಲಿಂದ ಪ್ರಯತ್ನಿಸುತ್ತಿದ್ದಾರೆ!
ರಾಜಕೀಯವೆಂದರೆ ಸೈದ್ಧಾಂತಿಕ ವಿರೋಧಗಳು ಸರ್ವೇಸಾಮಾನ್ಯ. ಅದರೆ ದೇಶದ ಬಗ್ಗೆ, ಸೈನಿಕರ ಬಗ್ಗೆ ತುಚ್ಚವಾಗಿ ಮಾತಾಡಿ ಷಡ್ಯಂತ್ರ ನಡೆಸುವುದು ಖಂಡಿತಾ ಸಹಿಸಲಸಾಧ್ಯ. ಇಲ್ಲಿ ಪ್ರಸ್ತಾಪ ಮಾಡಿರೋ ವ್ಯಕ್ತಿಗಳಲ್ಲದೇ ಇನ್ನೂ ಹಲವು ಎಡಚರರ ಬೆಂಬಲವಿಲ್ಲದೆ ಕನ್ನಯ್ಯ ಕುಮಾರ್, ಉಮರ್ ಖಾಲಿದ್ ಅಂತವರ ಬಾಯಲ್ಲಿ ಆಜಾದಿಯ ಜಪ ಬರಲು ಸಾಧ್ಯವುದೆಯೇ? ಹುತಾತ್ಮ ಕ್ಯಾಪ್ಟನ್ ಮಂದೀಪ್ ಸಿಂಗ್ ಮಗಳು ಗುರುಮೆಹರ್ ಕೌರ್ ಹೇಳಿಕೆಯ ಹಿಂದೆಯೂ ಇವರುಗಳ ಕೈವಾಡವಿರುವುದು ಪಕ್ಕಾ. ದೆಹಲಿ, ಹೌದರಾಬಾದ್, ಜಾದವ್ ಪುರ್ ಮುಂತಾದ ವಿಶ್ವವಿದ್ಯಾನಿಲಯಗಳು ಆಜಾದಿ ಹೋರಾಟಗಾರರ, ದೇಶದ್ರೋಹಿಗಳ ಕಮ್ಮಾರಸಾಲೆಯಾಗುತ್ತಿರುವುದರಲ್ಲಿ ಈ ಸೋ ಕಾಲ್ಡ್ ನಾಯಕರ ಪಾತ್ರ ಬಹಳಷ್ಟಿದೆ. ಇನ್ನಾದರೂ ನಾವುಗಳು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಆಜಾದಿ ಗ್ಯಾಂಗನ್ನು ಹಿಮ್ಮೆಟ್ಟಿಸುವ ಮೊದಲು ಅವರಿಗೆ ಪ್ರೇರಕ ಶಕ್ತಿಯಾಗಿರುವ ನಾಯಕರನ್ನು ತಿರಸ್ಕರಿಸುವ ಕಾರ್ಯ ತುರ್ತಾಗಿ ಶುರುವಾಗಬೇಕಿದೆ.
Facebook ಕಾಮೆಂಟ್ಸ್