X
    Categories: ಕಥೆ

ಪಾರಿ ಭಾಗ -೪

ಮರುದಿನ ಮಲ್ಲಪ್ಪಗೌಡರು ಮಹದೇವಸ್ವಾಮಿಯ ಬೆಂಗಳೂರಿನಲ್ಲಿರುವ ಗೆಳೆಯ ಯಲ್ಲಪ್ಪನಿಗೆ ಕರೆ ಮಾಡಿ ಪಂಚಾಯ್ತಿಯ ವಿವರಗಳನ್ನು ತಿಳಿಸಿ ಅವರನ್ನು ಊರಿಗೆ ಕರೆದುಕೊಂಡು ಬರುವಂತೆ ಹೇಳಿದರು.ಮಲ್ಲಪ್ಪಗೌಡರೇ ಖುದ್ದಾಗಿ ತಾವೇ ರೈಲ್ವೆ ಸ್ಟೇಷನ್ಗೆ ಬರುವುದಾಗಿ ತಿಳಿಸಿದ್ದರು.ವಿಷಯ ತಿಳಿದ ಪಾರ್ವತಿ ಮಹದೇವಸ್ವಾಮಿ‌ ಖುಷಿಯಾಗಿದ್ದರು..ಮಹದೇವಸ್ವಾಮಿ ಉಳಿದುಕೊಂಡಿದ್ದು ಯಲ್ಲಪ್ಪನ ಮನೆಯಲ್ಲಿಯೇ..ಯಲ್ಲಪ್ಪ ತನ್ನ ಕೆಲಸ ಮುಗಿಸಿ ಮನೆಗೋಡಿ ಬಂದವನೇ ವಿಷಯವನ್ನು ತಿಳಿಸಿ ” ಸ್ವಾಮಿ ಸಂಜಿಮುಂದ ಊರಿಗೆ ಟ್ರೇನ್ ಐತಿ..ನೀವು ರೆಡಿ ಆಗ್ರಿ.‌.ನಾನೂ ನಿಮ್ ಜೋಡಿನ ಊರಿಗೆ ಬರ್ತನಿ..ಇಲ್ಲೆ ಹೊರಗ ಹೋಗಿ ಲಘುನ ಎಟಿಮ್’ದಾಗ ರೊಕ್ಕಾ ತಕ್ಕೊಂಡ್ ಬರ್ತನಿ”ಎಂದು ಹೇಳುತ್ತಲೇ ಲಗುಬಗೆಯಿಂದ ಹೊರಗೋಡಿದ.ಇವರಿಬ್ಬರ ಸಂತೋಷಕ್ಕೆ ಎಲ್ಲೆ ದಾಟಿದಂತಾಗಿತ್ತು.ಆದರೂ ಒಳಗೊಳಗೆ ಭಯ..ಇಂತದ್ದೆ ಸಿನಿಮಾ ನೋಡಿದ್ದ ಪಾರಿಗೆ ಮುಂದಿನ ಪರಿಣಾಮ ಭಯಂಕರವಾದರೆ ಎನಿಸತೊಡಗಿತು.ಗಟ್ಟಿ ಮನಸು ಮಾಡಿ ಮೂವರೂ ಊರಿನ ಟ್ರೇನ್ ಹತ್ತಿದ್ದಾಯ್ತು.ಊರಿನ ಪಂಚರಲ್ಲಿಬ್ಬರಾದ ಮಲ್ಲಪ್ಪಗೌಡರು,ಸುಬ್ಬಣ್ಣನವರಿಗೆ ಬರುವ ವಿಷಯ ಮೊದಲೇ ತಿಳಿಸಿದ್ದರಿಂದ ಅವರೂ ರೇಲ್ವೆ ಸ್ಟೇಷನ್ನಿಗೆ ಬಂದು ಕಾಯ್ದಿದ್ದರು.ಯಾರೋಬ್ಬರೂ ಏನೂ ಮಾತಾಡಲಿಲ್ಲ.ಮೌನವಾಗಿಯೇ ಶಾಂತಸ್ವಾಮಿಯವರ ಮನೆ ತಲುಪಿದರು. ಶಾಂತಸ್ವಾಮಿಯವರಿಗೂ ಅವರ ಪತ್ನಿಗೂ ಒಂದು ಮಾತಾಡದಂತೆ ಸೂಚಿಸಿದ್ದರಿಂದ ಅವರಿಬ್ಬರೂ ಸುಮ್ಮನಿದ್ದರು. ಪಾರಿ ಮನೆ ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ ತಡೆಯಲಾರದೇ ಸಾವಿತ್ರಮ್ಮನವರು “ನಿಂದ್ರ ಪಾರೀ..ನೀ ಇಲ್ಲೇ ಪಡಸಾಲ್ಯಾಗ ಕೂತ್ಕಾ..ಹಿರಿಯಾರು ತೀರ್ಮಾನ ಮಾಡೀದ ಮ್ಯಾಲ ಒಳಕ್ಕ ಬರವಂತಿ” ಎಂದು ಅವಳತ್ತ ಕೆಕ್ಕರಿಸಿ ನೋಡುತ್ತಾ ಮಗನನ್ನು ಒಳಗೆ ಕರೆದುಕೊಂಡು ಹೋದರು.

 ಆ ಚಿಕ್ಕ ಹಳ್ಳಿಯಲ್ಲಿ ಇದು ಮೊದಲನೆ ಅಪರೂಪದ ಮದುವೆಯಾಗಿದ್ದರಿಂದ ಇವರಿಬ್ಬರೂ ಬಂದ ಸುದ್ದಿ ತಿಳಿದ ಊರ ಜನ ಶಾಂತಸ್ವಾಮಿಯವರ ಮನೆ ಮುಂದೆ ಜಮಾಯಿಸಿದ್ದರು.ದುರುಗಪ್ಪ,ಮಲ್ಲವ್ವ ತಲೆತಗ್ಗಿಸಿ ನಿಂತಿದ್ದರು.ಮಲ್ಲಪ್ಪಗೌಡರೇ ಮಾತಿಗೆ ಶುರುವಿಟ್ಟುಕೊಂಡರು.”ಆಗಿದ್ದು ಆತು..ಮದುವಿ ಅಂತೂ ಆಗೇತಿ‌..ನಾಳೆ ಒಂದ್ ಛಲೋ ಟೈಂ ನೋಡಿ ಪಾರಿಗೆ ಲಿಂಗಧೀಕ್ಷೆ ಮಾಡಿದ್ರಾತು..ಇದನ್ನ ಇನ್ನ ಇಲ್ಲಿಗೆ ನಿಲ್ಲಸ್ರಿ..ಅವ್ರವ್ರ ಬಾಳೆ ಅವ್ರು ನೋಡ್ಕೊಳ್ಳಿ..ಪಾರೀ ಏಳ ಮ್ಯಾಲ..ಮಾದೇವಸ್ವಾಮಿ ಬಾ ಇಲ್ಲೆ..ದೊಡ್ಡ ಘನಕಾರ್ಯ ಮಾಡೀರಿ..ಸ್ವಾಮೇರ ಕಾಲಿಗೆ ಬಿದ್ದು ತಪ್ಪಾತಂತ ಕೇಳ್ರಿ…” ಅಂತ ಹೇಳಿ ಅವರಿಬ್ಬರನ್ನು ಶಾಂತಸ್ವಾಮಿಯವರ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿ” ಸ್ವಾಮೇರ ಒಂದ್ ಹತ್ ಕಪ್ ಚಾ ಮಾಡಸ್ರಿ..ಕುಡಿದು ಮನಿ ಕಡೆ ಹೊಂಡೋನು..ನಾಕೈದು ದಿನದಿಂದ್ ಇದ ಆತು.”ಅನ್ನುತ್ತ ಬಾಯಲ್ಲಿನ ಅಡಿಕೆ ರಸ ಉಗುಳಿ ಬಾಯ್ತೊಳೆಯಲು ಎದ್ದರು..ಮೊದಲೇ ಈ ಮಾತುಕತೆಯಾಗಿದ್ದರಿಂದ ಊರ ಪಂಚರೆಲ್ಲರು ಅವರ ಮಾತಿಗೆ ಹೂಂ ಗುಟ್ಟಿದರು.

 ಮರುದಿನ ಊರ ದೇವಿಯ ದೇವಸ್ಥಾನದಲ್ಲಿ ಪಾರಿಗೆ ಒಂದೊಳ್ಳೆ ಮಹೂರ್ತದಲ್ಲಿ ಶಾಂತಸ್ವಾಮಿಯವರು ಮನಸಿಲ್ಲದ ಮನಸ್ಸಿನಿಂದ ಲಿಂಗಧೀಕ್ಷೆ ಮಾಡಿದರು..ಸಾವಿತ್ರಮ್ಮನವರು ದೇವಸ್ಥಾನಕ್ಕೆ ಹೋಗದೇ ಮನೆಯಲ್ಲಿಯೇ ಉಳಿದಿದ್ದರು. ಅವರಿಗಾದ ನೋವನ್ನು ತಿಳಿದು ದೇವಸ್ಥಾನಕ್ಕೆ ಬರಲು ಯಾರೂ ಒತ್ತಾಯಿಸಲಿಲ್ಲ..

ಅಂತೂ ಮಾದಿಗರ ಮನೆಯ ಪಾರಿ ಸ್ವಾಮಿಗಳ ಮನೆ ಸೊಸೆಯಾಗಿದ್ದಳು. ಆದರೆ ದಿನಗಳು ಪಾರಿ ಅಂದುಕೊಂಡಂತೆ ನಡೆಯಲಿಲ್ಲ.

 ಮಹದೇವಸ್ವಾಮಿ ಅಷ್ಟೇನು ಜವಾಬ್ದಾರಿಯುತ ಹುಡುಗ ಅಲ್ಲ.ಮೊದಲೇ ಪೋಲಿತನ ಮೈಗೂಡಿಸಿಕೊಂಡವ.ಅವನ ಬುದ್ದಿ ಗೊತ್ತಿದ್ದ ಸಾವಿತ್ರಮ್ಮ ಶಾಂತಸ್ವಾಮಿಯವರು ಊರಪಂಚರು ರಹಸ್ಯವಾಗಿ ಹೇಳಿಕೊಟ್ಟಂತೆ ನಡೆದುಕೊಂಡು ಮಹದೇವಸ್ವಾಮಿಯನ್ನು ಸ್ವಲ್ಪ ಸ್ವಲ್ಪವಾಗಿ ಬದಲಾಯಿಸಲು ಪ್ರಯತ್ನಿಸತೊಡಗಿದರು. ಪಾರ್ವತಿಗೆ ಮನೆಯ ಹಿಂದಿನ ಕೋಣೆಯನ್ನು ಬಿಟ್ಟುಕೊಡಲಾಯಿತು. ಅವಳಿಗೆ ಶಾಂತಸ್ವಾಮಿಯವರ ಮನೆಯ ಸಂಪ್ರದಾಯದಂತೆ ಲಿಂಗಧೀಕ್ಷೆ ಆಗಿದ್ದರೂ ದೇವರಕೋಣೆ ಮತ್ತು ಅಡಿಗೆ ಮನೆ ಪ್ರವೇಶವಿರಲಿಲ್ಲ.ಆ ಕೋಣೆಗೇ ಊಟ ತಂದುಕೊಡುತ್ತಿದ್ದ ಮಹದೇವಸ್ವಾಮಿ.ಇಂದಲ್ಲ ನಾಳೆ ಸರಿ ಹೋದೀತು ಎಂದು ಪಾರಿ ಸುಮ್ಮನಿದ್ದಳು.ಬರಬರುತ್ತ ಮಹದೇವಸ್ವಾಮಿ ತಂದೆ ತಾಯಿಯ ಮಾತಿನಂತೆ ಬದಲಾಯಿಸತೊಡಗಿದ. ಪಾರಿ ಅವನಿಗೆ ಹಳಬಳಂತೆ ಕಾಣತೊಡಗಿದಳು.ಸಂಬಂಧಿಯೊಬ್ಬರ ಹುಡುಗಿಯ ಫೋಟೋ ತೋರಿಸಿದ ಸಾವಿತ್ರಮ್ಮನಿಗೆ ಮಗನನ್ನು ಬದಲಾಯಿಸುವ ಪ್ರಯತ್ನ ಯಶಸ್ವಿಯಾಗುವಂತೆ ಕಂಡಿತು.ಊರ ಪಂಚರ ಉಪಾಯದಂತೆ ಪಾರ್ವತಿಯನ್ನು ಹೊಡೆಯದಂತೆ,ಪೋಲಿಸ್ ಕೇಸಾಗದಂತೆ ಹೊರಹಾಕುವ ಪ್ರಯತ್ನ ಮೂವರಿಂದಲೂ ದಿನವೂ ನಡೆದೇ ಇತ್ತು. ಮಹದೇವಸ್ವಾಮಿ ಆರು ತಿಂಗಳೊಳಗೆ ಅವಳ ಕೊಣೆಗೆ ಹೋಗುವುದೇ ಬಿಟ್ಟಿದ್ದ. ಪಾರಿ ಕರೆದರೂ ಏನೋ ನೆಪ ಹೇಳಿ ನುಣುಚಿಕೊಳ್ಳುತ್ತಿದ್ದ. ಆ ಕೋಣೆಯಲ್ಲಿ ಒಂಟಿಯಾಗಿದ್ದಳು ಪಾರಿ. ಎಷ್ಟೋ ರಾತ್ರಿಗಳನ್ನ ಅಳುತ್ತಲೇ ಕಳೆದಳು. ಮಹದೇವಸ್ವಾಮಿ ಪೂರ್ತಿ ಬದಲಾಗಿದ್ದ.ಪಾರಿಯ ಮುಖ ನೋಡುವುದೇ ಬಿಟ್ಟುಬಿಟ್ಟಿದ್ದ. ತಾನು ಆ ಮನೆಯಲ್ಲಿ ಅಸ್ಪೃಶ್ಯಳ ಹಾಗೆ ಬದಕುತ್ತಿರುವ ಬಗ್ಗೆ ಪಾರಿಗೆ ಅಸಮಾಧಾನ ಶುರುವಾಗಿತ್ತು.

 ದುರುಗಪ್ಪ ಮಲ್ಲವ್ವ ಮಗಳ ಕಡೆ ತಿರುಗಿ ನೋಡಿರಲಿಲ್ಲ. ಪಾರಿ ತಾನಿಂತಹ ತಪ್ಪು ಮಾಡಬಾರದಿತ್ತು ಅಂತ ರಾತ್ರಿಯಿಡಿ ಹೊರಳಾಡಿ ನಿಟ್ಟುಸಿರು ಬಿಡುತ್ತಿದ್ದಳು. ಇತ್ತೀಚೆಗೆ ಬದುಕೇ ಬೇಡವೆನಿಸಿತ್ತವಳಿಗೆ.”ಕೆಳಜಾತಿಯವಳಾದರೂ ಕೂಲಿ ಮಾಡಿದ್ದರೆ ನೆಮ್ಮದಿಯಿತ್ತು. ಆ ನೆಮ್ಮದಿ ದೊಡ್ಡ ಜಾತಿಯ ಮನೆಯ ಸೊಸೆಯಾದರೂ ಇಲ್ಲ..ನನಗ್ಯಾಕೆ ಬೇಕಿತ್ತು ಇಂತಹ ಬದುಕು..?”ಎಂದು ಚಿಂತಿಸಿ ಹೈರಾಣಾಗಿದ್ದಳು. ಒಂದು ಮಗುವಾದರೆ ಸರಿ ಹೋಗಬಹುದು ಅಂದುಕೊಂಡಳು.ಮಹದೇವಸ್ವಾಮಿ ಅವಳ ಹತ್ತಿರ ಸುಳಿಯುವುದನ್ನೇ ಬಿಟ್ಟುಬಿಟ್ಟಿದ್ದ. ಕತ್ತಲಿನ ಕೋಣೆಯ ಒಂಟಿ ಹುಡುಗಿ ನೊಂದು ಹೋಗಿದ್ದಳು.ಮನೆಯವರ ತಾತ್ಸಾರದಿಂದ ರೋಸಿ ಹೋದ ಪಾರಿ ಒಂದು ದಿನ ಸಂಜೆ ಮನೆ ಹೊಸ್ತಿಲಿನ ಹೊರಗಡಿಯಿಟ್ಟಳು.ಈ ಜಾತಿಯ ಸಮಸ್ಯೆ ಇಷ್ಟು ಬೇಗ ಬಗೆಹರಿಯುವುದಲ್ಲವೆನ್ನುವ ಕಟು ಸತ್ಯ ಅವಳಿಗೆ ಗೊತ್ತಾಗಿತ್ತು.ಅವಳು ಮನೆ ಹೊಸ್ತಿಲು ದಾಟುವಾಗ ” ನಿಂತ್ಕ…ಒಮ್ಮೆ ನೀ ಹೆಜ್ಜಿ ಹೊರಗ ಇಟ್ರ ಮತ್ತ ಒಳಗ ಕಾಲ ಇಡಂಗಿಲ್ಲ ನೋಡು..ಹಾಕಿದ್ ತಿಂದ್ ತೆಪ್ಗ ಬಿದ್ದಿರು..ಇಲ್ಲಾ ಅಂದ್ರ ಹೊಂಡು..” ಅಂದ ಅತ್ತೆಯ ಮಾತು ಕಿವಿಗೆ ಕಾದ ಸೀಸ ಹುಯ್ದಂತಾಯಿತು.ವಿಧಿಯಿಲ್ಲ..ಇಂತ ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನಿನ್ನು ಬದುಕಿರಲಾರೆನೆನ್ನುವ ಸತ್ಯ ಅವಳಿಗೆ ಗೊತ್ತಾಗಿತ್ತು. ಒಂದು ಮಾತಾಡದೇ ಹೊರಟೇ ಬಿಟ್ಟಳು.

 ಹೇಳಿ ಕೇಳಿ ಹಳ್ಳಿಯಲ್ಲಿ ಅಂತದ್ದೊಂದು ಘಟನೆ ನಡೆದದ್ದು.ಅಷ್ಟು ದಿನಗಳ ನಂತರ ಪಾರಿ ಬೀದಿಯಲ್ಲಿ ತನ್ನ ತವರು ಮನೆಯತ್ತ ಹೆಜ್ಜೆ ಹಾಕುತ್ತಿರುವುದನ್ನು ಕಂಡ ಪಕ್ಕದ ಮನೆಯ ನಾಗಮ್ಮ ವಾರಗಿತ್ತಿ ತುಂಗಮ್ಮನಿಗೆ “ಏಯ್ ತುಂಗವ್ವ ಬಾರ ಇಲ್ಲೆ..ನೋಡ್ಬಾ..ಇದಕ್ಕೇನು ಬಂತು ಧಾಡಿ..ಮತ್ತ ಎತ್ಲಾಗ ಹೊಂಟ್ತು..ಮತ್ಯಾರ ಮನಿ ಹಾಳ ಮಾಡಾಕ ಹೊಂಟ್ತೋ ಏನೋ..! ಏನ್ ಕಾಲ‌ ಬಂತು ಅಂತೀನಿ..” ಅಂತ ಅಂದ ಮಾತು ಪಾರಿಯ ಕಿವಿಗೆ ಬಿದ್ದಿತ್ತು. ಬೀದಿಯ ಜನರೆಲ್ಲರ ದೃಷ್ಟಿ ಎದುರಿಸಲಾರದೇ ತಲೆ ಕೆಳಗೆ ಹಾಕಿಯೇ ತನ್ನ ತವರು ಮನೆ ಕಡೆಗೆ ನಡೆದಳು.ಕಣ್ಣೀರುಗಳು ಟಾರಿಲ್ಲದ ರಸ್ತೆಯಲ್ಲಿ ಬಿದ್ದು ಇಂಗುತ್ತಿದ್ದವು.ಬಾಗಿಲಲ್ಲಿ ಬಟ್ಟೆ ತೊಳೆಯುತ್ತಿದ್ದ ಮಲ್ಲವ್ವನಿಗೆ ಎದುರಿಗೆ ನಿಂತ ಮಗಳನ್ನು ಕಂಡು ಇದ್ದ ಕೋಪವೆಲ್ಲ ಕರಗಿ ” ಪಾರೀ..ಏನ ಹಿಂಗ್ ಬಂದಿ..ಏನಾತ? ಯಾಕ ಅಳಾಕತ್ತಿಯವ್ವ..ನಡೀ ಒಳಗ..”ಅಂತ ಕರೆದುಕೊಂಡು ಹೋದಳು.ದುರಗಪ್ಪ ಮನೆಯಲ್ಲಿರಲಿಲ್ಲ.ಪಾರಿ ತನ್ನ ಗೋಳು ಹೇಳಿಕೊಂಡು ಮನಸಾರೆ ಅತ್ತಿದ್ದಳು.ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ದುರುಗಪ್ಪ ಮಗಳ ಗೋಳು ಕೇಳಿ ” ಆವಾಗ ನಿನ್ ಬುದ್ದಿ ಮಣ್ ತಿನ್ನಾಕ ಹೋಗಿತ್ತನು..? ಅವ್ನ ಹಿಂದ ಹೇಳ್ದ ಕೇಳ್ದ ಓಡಿ ಹೋದಿ..ಈಗ್ನೋಡು..ಅವರಾದ್ರ ತಿಳಿದವ್ರು ಅದಾರ..ಈಗ ಪೋಲಿಸ್ ಸ್ಟೇಷನ್ ದಾಗ ನ್ಯಾಯಾ ಹಾಕನಂದ್ರ ನಾವೇನ್ ಓದ್ದವ್ರಾ…ಕೈಯಾಗ ಮೊದ್ಲ ರೊಕ್ಕ ಇಲ್ಲ..ಕೋರ್ಟು ಕಚೇರಿ ಓಡ್ಯಾಡಾಕ ಎಲ್ಲಿಂದ ತರದು? ಭಾಳ ಅಂದ್ರ ಈ ಊರಾಗಿನ ಪಂಚ್ರ ಕಡೆ ನ್ಯಾಯಾ ಕೇಳದು ಅಷ್ಟ..ಗೌಡ್ರ ಮನಿ ಕಡೆ ಹೋಗ್ಬರ್ತನಿ‌..ಇದ ಆತು ಜೀವ್ನ..ನೀ ಮಾಡಿರೋ ಘನಂದಾರಿ ಕೆಲ್ಸಕ್ಕ ನಿಮ್ಮವ್ವ ನಾನು ಎಷ್ಟ ಸಣ್ಣ ಆಗೇವಿ ಗೊತ್ತನು..?” ಎಂದು ವಟಗುಟ್ಟುತ್ತ ಹುಡಿ ಮಣ್ಣಾಗಿದ್ದ ಮುಖ ತೊಳೆಯದೇ ಎದೆಯೊಳಗೆ ಏನಾಗುವುದೋ ಎನ್ನುವ ದುಗುಡ ತುಂಬಿಕೊಂಡು ಊರ ಪಂಚರೊಬ್ಬರಾದ ಮಲ್ಲಪ್ಪಗೌಡರ ಮನೆಗೆ ಭಾರವಾದ ಹೃದಯದೊಂದಿಗೆ ಜೋರು ಹೆಜ್ಜೆಗಳನ್ನಿಟ್ಟು ನಡೆದ..

ಮುಂದುವರಿಯುವುದು..

 

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post