X

ಕ್ಯಾನ್ಸರ್’ನೊಂದಿಗಿನ ಹೋರಾಟ ಇನ್ನೂ ನಿಂತಿಲ್ಲ…   

            ಕೆಲ ದಿನಗಳ ಹಿಂದೆ ಶಾನ್ ಸ್ವಾರ್ನರ್ ಒಂದು ವೀಡಿಯೋವನ್ನು ಹಾಕಿದ್ದ. ಸದ್ಯದರಲ್ಲೆ ನಾರ್ತ್ ಪೋಲ್’ಗೆ ಹೊರಡಲಿರುವ ಶಾನ್ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾನೆ. ಅದಕ್ಕೆ ಸಂಬಂಧಪಟ್ಟ ಹಾಗೆಯೇ ತನ್ನನ್ನ ತಾನು ತರಬೇತು ಮಾಡಿಕೊಳ್ಳುತ್ತಿದ್ದಾನೆ. ಅಂತಹ ವೀಡಿಯೋ ಒಂದನ್ನ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದ. ನಾನು ಯಾವಾಗಲೂ ಆತನನ್ನ ಅಚ್ಚರಿಯಿಂದ ನೋಡುತ್ತಿರುತ್ತೇನೆ. ಪ್ರತಿ ಸಲವೂ ಹೊಸದೇನೋ ಒಂದು ಆತನಿಂದ ಕಲಿಯಲು ಸಿಗುತ್ತದೆ. ಎಂತಹ ದೊಡ್ಡ ಕನಸನ್ನಾದರೂ ಕಾಣಬಹುದು, ಅದನ್ನ ಸಾಕಾರ ಮಾಡಿಕೊಳ್ಳಬಹುದು ಎಂದು ಪದೇ ಪದೇ ತೋರಿಸುತ್ತಿರುತ್ತಾನೆ. ಇನ್ನು ಆ ಕನಸಿಗೆ ತನ್ನನ್ನ ತಾನು ಸಮರ್ಪಿಸಿಕೊಳ್ಳುವ ರೀತಿ ಇದೆಯಲ್ಲ ಅದು ಯಾರನ್ನಾದರೂ ಬೆರಗುಗೊಳಿಸುವಂಥದ್ದು!! ಇದೇ ವಿಷಯವನ್ನು ಆತನ ಬಳಿ ಹೇಳಿದಾಗ, ಆತ ಅದಕ್ಕೆ ನೀಡಿದ ಉತ್ತರ ನನ್ನನ್ನ ಇನ್ನೂ ಅಚ್ಚರಿಗೊಳಿಸಿತ್ತು. “ನಾನು ಕ್ಯಾನ್ಸರ್’ನ್ನು ಎರಡು ಬಾರಿ ಗೆದ್ದಿದ್ದೇನೆ, ಆದರೆ ಅದರೊಂದಿಗೆ ಹೋರಾಡುವುದನ್ನ ಬಿಟ್ಟಿಲ್ಲ” ಎಂದಿದ್ದ. ಆತನ ಈ ಉತ್ತರ ನನ್ನ ಮನಸ್ಸಿಗೆ ನಾಟಿತ್ತು! ಸಾಕಷ್ಟು ಹೊತ್ತು ಇದರ ಬಗ್ಗೆಯೇ ಯೋಚಿಸುತ್ತಿದ್ದೆ. ಆತನ ಬಗ್ಗೆ ಇನ್ನಷ್ಟು ಹೆಮ್ಮೆ ಉಂಟಾಗಿತ್ತು. ಆದರೆ.. ಆ ಮಾತಿನ ಆಳ ಅರ್ಥವಾಗಿರಲಿಲ್ಲ…!

   ಮೊನ್ನೆ ನನಗೊಂದು ಮೇಲ್ ಬಂದಿತ್ತು. ಯಾವುದೋ  ಕ್ಯಾನ್ಸರ್ ಸೈಟ್’ನಲ್ಲಿ ನನ್ನ ಮೇಲ್ ಅಡ್ರೆಸ್ ಸಿಕ್ಕಿತೆಂದು ತಿಳಿಸಿದ್ದರು. ಹೆಚ್ಚಿನ ವಿವರ ಏನೂ ಇರಲಿಲ್ಲ. ಬಹುಶಃ ಯಾರೋ ಕ್ಯಾನ್ಸರ್ ಸರ್ವೈವರ್ ಇರಬೇಕು ಎಂದುಕೊಂಡೇ ಉತ್ತರಿಸಿದ್ದೆ. ನಂತರ ತಿಳಿದದ್ದು ಆತ ಈಗ ತಾನೇ ಕ್ಯಾನ್ಸರ್’ಗೆ ಒಳಗಾಗಿದ್ದು, ನೋಯ್ಡಾದ ಆಸ್ಪತ್ರೆಯಲ್ಲಿ ತನ್ನ ಮೊದಲ ಕೀಮೋ ತೆಗೆದುಕೊಳ್ಳುವ ತಯಾರಿಯಲ್ಲಿದ್ದಾನೆ ಎಂದು! ಒಂದು ಕ್ಷಣ ಏನು ಹೇಳುವುದು ಎಂದು ಯೋಚಿಸಿದೆ. ಯಾಕೆಂದರೆ ಅಂತಹ ಒಂದು ಕ್ಷಣವನ್ನು ನಾವೂ ಕೂಡ ದಾಟಿಯೇ ಬಂದಿರುತ್ತೇವೆ. ಆ ಸಮಯದಲ್ಲಿ ನಾವು ಏನನ್ನು ಬಯಸುತ್ತಿರುತ್ತೇವೆ ಎನ್ನುವುದು ಚನ್ನಾಗಿಯೇ ಗೊತ್ತಿತ್ತು. ಆಗ ತಾನೇ ಕ್ಯಾನ್ಸರ್ ಇರುವುದು ಗೊತ್ತಾಗಿದೆ ಎಂದಾಗ ಯಾವ ರೀತಿಯಲ್ಲಾದರೂ ಒಂದೇ ಒಂದು ಭರವಸೆಯ ಕಿರಣ ಸಿಕ್ಕಿದರೆ ಸಾಕು ಎಂದೇ ಬಯಸುತ್ತಿರುತ್ತೇವೆ. ಪ್ರತಿ ವ್ಯಕ್ತಿಯಲ್ಲೂ ಅಂತಹದ್ದೇನಾದರೂ ಸಿಗಬಹುದಾ ಎಂದೇ ಎದುರು ನೋಡುತ್ತಿರುತ್ತೇವೆ. ಅದರೆ ಆ ಸಮಯ ಹೇಗಿರುತ್ತದೆ ಎಂದರೆ ಎದುರಿದ್ದವರಿಗೆ ಕೂಡ ಏನು ಹೇಳಬೇಕು ಎಂದು ಗೊತ್ತಾಗುತ್ತಿರುವುದಿಲ್ಲ. “ಎಲ್ಲಾ ಸರಿ ಹೋಗುತ್ತದೆ” ಅಂತ ಹೇಳಿ ಬಿಡುತ್ತಾರೆ ಆದರೆ ಅವರ ಮಾತಿನ ಮೇಲೆ ಅವರಿಗೆ ವಿಶ್ವಾಸವಿಲ್ಲದಂತೆ ಹೇಳಿ ಬಿಟ್ಟಿರುತ್ತಾರೆ. ಇನ್ನು ನಮಗೆ ವಿಶ್ವಾಸ ಬರುವುದು ಎಲ್ಲಿಂದ? ಆ ಮಾತುಗಳು ಸಮಾಧಾನ ನೀಡದಿದ್ದರೂ, ಸಮಾಧಾನವಾದವರಂತೆ ತಲೆ ಹಾಕಬೇಕು. ಅದೊಂಥರ ವಿಚಿತ್ರ ಕ್ಷಣಗಳಾಗಿರುತ್ತದೆ..!! ಆ ಸಂದರ್ಭಕ್ಕೆ ನೆನಪಾಗಿದ್ದು ಶಾನ್! ಆತನ ಕೆಲ ವೀಡಿಯೋಗಳ ಲಿಂಕ್’ನ್ನ ಕಳಿಸಿಕೊಟ್ಟೆ, ಅದರ ಜೊತೆಗೆ “ನಿಮಗೆ ಏನನ್ನಾದರೂ, ಎಂತಹದೇ ಆದರೂ ಹಂಚಿಕೊಳ್ಳಬೇಕು ಎನಿಸಿದಲ್ಲಿ, ಅಥವಾ ಏನನ್ನಾದರು ಕೇಳಬೇಕು ಎನಿಸಿದಲ್ಲಿ ನನಗೆ ಯಾವುದೇ ಸಂಕೋಚವಿಲ್ಲದೇ ಮೇಲ್ ಮಾಡಿ ” ಎಂದು ಬರೆದು ಕಳುಹಿಸಿದೆ. ಶಾನ್ ಹೇಳಿದ ಮಾತುಗಳ ಆಳ ಅರ್ಥವಾಗಿದ್ದು ಆಗ!!! ಆತ ಯಾಕಿನ್ನೂ ಹೋರಾಡುತ್ತಲೇ ಇದ್ದಾನೆ ಎನ್ನುವುದು ಅರ್ಥವಾಗಿತ್ತು.

     ನನ್ನ ದೂರದ ಸಂಬಂಧಿಯೊಬ್ಬರು ಇದೀಗ ಮೂರನೇ ಬಾರಿ ಕ್ಯಾನ್ಸರ್’ಗೆ ಒಳಗಾಗಿದ್ದಾರೆ. ಮೊದಲ ಕೀಮೋ ಈಗಷ್ಟೆ ಮುಗಿದಿದೆ. ಅವರ ಬಗ್ಗೆ ಮಾತನಾಡುತ್ತಾ ಅಮ್ಮ, “ಎಷ್ಟು ವರ್ಷ!! ಇದೆ ಆಗೋಯ್ತು.. ಎಷ್ಟು ಕೀಮೋಗಳೂ, ಎಷ್ಟು ರೇಡಿಯೇಷನ್’ಗಳು.. ಹೇಗೆ ಇದನ್ನೆಲ್ಲ ತಡೆದುಕೊಳ್ಳುತ್ತಾರೋ” ಎನ್ನುತ್ತಿದ್ದರು. ನನಗೆ ಪುನಃ ಪುನಃ ಶಾನ್’ನ ಮಾತುಗಳು ನೆನಪಾಗುತ್ತಿದ್ದವು.!!

   ’ಸರ್ವೈವರ್’ ಎಂದಾದ ತಕ್ಷಣ ಕ್ಯಾನ್ಸರ್’ನೊಂದಿಗಿನ ನಮ್ಮ ಸಂಬಂಧ ಮುಗಿದು ಹೋಗುವುದೇ ಇಲ್ಲ. ಎಲ್ಲೋ ಒಂದು ರೀತಿ ಅದು ನಮಗೆ ಅಂಟಿಕೊಂಡೇ ಇರುತ್ತದೆ. ಅದಕ್ಕೆ ಇರಬೇಕು, ಕ್ಯಾನ್ಸರ್ ಸರ್ವೈವರ್ ಅಂದಾಕ್ಷಣ ನಮಗೇ ಗೊತ್ತಿಲ್ಲದಂತೆ ಒಂದು ಬೆಸುಗೆ ಆಗಿಬಿಟ್ಟಿರುತ್ತದೆ. ಯಾರಿಗೋ ಕ್ಯಾನ್ಸರ್ ಉಂಟಾಗಿದೆ ಎಂದಾಗ ’ನಾವು ಅವರಿಗೇನು ಮಾಡಬಹುದು..? ಏನು ಮಾಡಿದರೆ ಅವರಿಗೆ ಅನುಕೂಲವಾಗುತ್ತದೆ’ ಎಂದು ಯೋಚಿಸುತ್ತಿರುತ್ತೇವೆ. ಕ್ಯಾನ್ಸರಿನೊಂದಿಗೆ ಅವರು ಹೋರಾಡುತ್ತಿದ್ದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕೂಡ ಅಲ್ಲೆಲ್ಲೋ ಅವರ ಹಿಂದೆ ನಿಂತಿರುತ್ತೇವೆ.

ನಟರಾಜ್ ಎಂಬ ಚೆನ್ನೈನ ಸರ್ವೈವರ್ ಒಬ್ಬರು ಒಮ್ಮೆ ಹೇಳುತ್ತಿದ್ದರು, “ಕ್ಯಾನ್ಸರಿನಿಂದ ಈಗ ಬಳಲುತ್ತಿರುವವರಿಗೆ, ಕ್ಯಾನ್ಸರ್’ನ್ನು ಗೆದ್ದ ಎಷ್ಟೋ ಬ್ರೇವ್ ಹಾರ್ಟ್’ಗಳಿದ್ದಾರೆ ಎಂದು ಹೇಳುವ ಅವಶ್ಯಕತೆ ಇದೆ ಅಲ್ಲವೇ..?” ಎಂದು. ಖಂಡಿತವಾಗಿ!! ನಿಜ ಹೇಳಬೇಕೆಂದರೆ, ನಾವೇನು ಆ ಕ್ಷಣದಲ್ಲಿ ಬಹಳ ಧೈರ್ಯವಂತರಾಗಿದ್ದೆವು ಅಂತೇನಿರಲಿಲ್ಲ. ನಮ್ಮ ಬಳಿ ಬೇರೆ ಆಯ್ಕೆಗಳಿರಲಿಲ್ಲ ಅಷ್ಟೇ! ಮನುಷ್ಯನಿಗೆ ತಾವೇನು ಮಾಡಬಲ್ಲೆವು, ಎಂತಹದನ್ನ ಎದುರಿಸುವ ಶಕ್ತಿ ಇದೆ ಎನ್ನುವುದು ಗೊತ್ತಾಗುವುದು ಕೂಡ ಇಂತಹ ಆಯ್ಕೆಯೇ ಇಲ್ಲ ಎನ್ನುವಂತಹ ಸಂದರ್ಭಗಳಲ್ಲಿ!! ನಿಮ್ಮ ಮನಸ್ಥಿತಿ ಹೇಗಿದೆಯೋ ನಾವು ಕೂಡ ಹಾಗೆ ಇದ್ದೆವು. ನಾವು ಕೂಡ ಅದೆಲ್ಲವನ್ನು ದಾಟಿಯೇ ಬಂದಿದ್ದು ಎಂದು ಹೇಳುವ ಅವಶ್ಯಕತೆ ಇದೆ..! ಇದನ್ನೇ ಅವರಿಗೆ ಹೇಳುವ ಪ್ರಯತ್ನ ಕೂಡ ಮಾಡುತ್ತಲೇ ಇರುತ್ತೇವೆ.

    ಶಾನ್ ನಾರ್ತ್ ಪೋಲ್’ಗೆ ಹೋಗುತ್ತಿರುವುದರಿಂದ ಅದರ ಸಲುವಾಗಿ ಒಂದು ವೀಡಿಯೋ ಮಾಡಲಾಯಿತು. ಕೆಲವೊಂದಿಷ್ಟು ಸರ್ವೈವರ್’ಗಳನ್ನ ಸೇರಿಸಿ ಮಾಡಿದ ವೀಡಿಯೋ ಅದು! ನಮಗೊಂದಿಷ್ಟು ಸಾಲುಗಳನ್ನ ಕೊಡಲಾಗಿತ್ತು ಹಾಗೆಯೇ ಕೆಲವು ಸೂಚನೆಗಳನ್ನ ಕೂಡ. ಕೆಲವು ಬೋರ್ಡ್ ಹಿಡಿದುದರ ಜೊತೆಗೆ ಕೆಲವು ಸಾಲುಗಳನ್ನ ಹೇಳಿ ವೀಡಿಯೊ ಮಾಡಿ ಕಳಿಸಬೇಕಿತ್ತು. ಎಲ್ಲಾ ಸರ್ವೈವರ್’ಗಳ ಒಂದೆರಡು ಸಾಲುಗಳನ್ನ ಒಟ್ಟಿಗೆ ಸೇರಿಸಿ ವೀಡಿಯೋ ಮಾಡಲಾಗಿದೆ. ಅದರಲ್ಲಿ ಸಾಲುಗಳು ನಿಜಕ್ಕೂ ಸ್ಪೂರ್ತಿ ತುಂಬುವಂಥದ್ದು..! ಬಹಳ ಸರಳವಾದದ್ದು ಆದರೂ ಸ್ಪೂರ್ತಿ ತುಂಬುವಂಥದ್ದು! “You too can beat cancer.. You will beat cancer” ಎಂದು. ಒಂದು ಕ್ಷಣಕ್ಕೆ, ನಾವು ಕೂಡ ಆಸ್ಪತ್ರೆಯಲ್ಲಿದ್ದಾಗ, ಈ ರೀತಿ ಯಾರಾದರೂ ಹೇಳಬಹುದಿತ್ತು ಅಂತ ಅನ್ನಿಸದೇ ಇರಲಿಲ್ಲ. ಇಲ್ಲಂತೂ ಕೇವಲ ಒಬ್ಬರಲ್ಲ, ಸಾಕಷ್ಟು ಸರ್ವೈವರ್ ಹೇಳುತ್ತಿದ್ದಾರೆ!!! ಹಾಂ.. ಈಗ ನಾವು ಹೋರಾಡುತ್ತಿರುವುದು ಸ್ವಲ್ಪ ಬೇರೆ ರೀತಿಯಲ್ಲಿ ಇರಬಹುದು.. ಆದರೂ.. ಹೋರಾಡುತ್ತಿರುವುದು ಕ್ಯಾನ್ಸರ್ ವಿರುದ್ಧವೇ!!!

      ಇದರರ್ಥ ನಾವಿನ್ನೂ ನೋವಿನಲ್ಲೇ ಇದ್ದೇವೆ ಅಂತ ಖಂಡಿತಾ ಅಲ್ಲ. ನಾವು ನಮ್ಮ ಬದುಕನ್ನ ಪ್ರೀತಿಸುತ್ತೇವೆ, ಇತರರಿಗಿಂತ ಸ್ವಲ್ಪ ಹೆಚ್ಚೇ ಸಂತೋಷವಾಗಿದ್ದೇವೆ. ಮೊನ್ನೆ ಶಾನ್ ಹೇಳುತ್ತಿದ್ದ, “ನನ್ನ ಬದುಕಿನಲ್ಲಿ ಆದ ವರ್ಸ್ಟ್ ಥಿಂಗ್ ಎಂದರೆ ಕ್ಯಾನ್ಸರ್, ಹಾಗೆಯೇ ನನ್ನ ಬದುಕಿನಲ್ಲಾದ ಬೆಸ್ಟ್ ಥಿಂಗ್ ಅಂದರೆ ಅದೂ ಕೂಡ ಕ್ಯಾನ್ಸರ್” ಎಂದು. ನಿಜವೇ.. ನಮ್ಮ ಪಾಲಿನ ವರ್ಸ್ಟ್ ಹಾಗೂ ಬೆಸ್ಟ್ ಎರಡೂ ಒಂದೇ ಆಗಿದೆ. ನೋವು ನೋಡಿದ್ದು ಅಲ್ಲೇ, ನಲಿವು ಹುಟ್ಟಿದ್ದೂ ಅಲ್ಲೇ. ನಾವು ಅತ್ಯಂತ ದುರ್ಬಲವಾಗಿದ್ದು ಅಲ್ಲೇ, ಅಲ್ಲಿಂದಲೇ ನಮಗೆ ನಮ್ಮೊಳಗಿರುವ ಶಕ್ತಿಯ ಅನುಭವವಾಗಿದ್ದು. ಕಳೆದುಕೊಂಡಿದ್ದು ಅಲ್ಲೇ, ಅದಕ್ಕಿಂತ ಹೆಚ್ಚು ಪಡೆದುಕೊಂಡಿದ್ದು ಅಲ್ಲಿಂದಲೇ!! ಕ್ಯಾನ್ಸರ್’ನೊಂದಿಗಿನ ಹೋರಾಟ ನಿಂತಿಲ್ಲ ಎಂದಾಗ ಅದರರ್ಥ ನಾವು ಪ್ರತ್ಯಕ್ಷವಾಗಿಯೊ ಅಥವಾ ಪರೋಕ್ಷವಾಗಿಯೋ ಅವರ ಆ ನೋವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರ್ಥ. “ನೀವೂ ಇದನ್ನ ಮಾಡಬಲ್ಲಿರಿ” ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೇ.. ಯಾಕೆಂದರೆ ಅದರ ಅವಶ್ಯಕತೆ ಇದೆ. ಕೆಲ ವರ್ಷಗಳ ಹಿಂದೆ ನಾನು ಶಾನ್’ಗೆ ಮೊದಲ ಬಾರಿ ಮೇಲ್ ಮಾಡಿದಾಗ, “ನಾನು ನಿನಗೆ ಯಾವ ರೀತಿ ಸಹಾಯ ಮಾಡಲಿ ಅಂತ ಹೇಳು ಸಾಕು’ ಎಂದಿದ್ದ. ಆತ ಇಲ್ಲಿ ಬಂದು ನನಗೇನನ್ನೋ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ನಮ್ಮೊಂದಿಗೆ ಯಾರೋ ಇದ್ದಾರೆ ಅಂತನಿಸುವ ಭರವಸೆಯ ಮಾತುಗಳು ಸಾಕಾಗಿರುತ್ತದೆ! ಇಂದಿಗೂ ಹಲವಾರು ಜನ ಅಂತಹ ಭರವಸೆಯ ಮಾತುಗಳಿಗಾಗಿ ಕಾಯುತ್ತಿದ್ದಾರೆ, ಅದಕ್ಕಾಗಿಯೇ ಆತ ಹೇಳಿದ್ದು.. ನಾನಿನ್ನೂ ಕ್ಯಾನ್ಸರ್’ನೊಂದಿಗೆ ಹೋರಾಡುವುದು ಬಿಟ್ಟಿಲ್ಲ ಎಂದು.. ಬಹುಶಃ ಅದಕ್ಕಾಗಿಯೇ ಎಲ್ಲ ಕ್ಯಾನ್ಸರ್ ಸರ್ವೈವರ್’ಗಳು ಇಂದಿಗೂ ಅಂಥವರ ಹಿಂದೆ ನಿಲ್ಲುವ ಪ್ರಯತ್ನ ಮಾಡುತ್ತಾರೆ!!!

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post