X

ಮಸಣದ ಹೂವು

ಹೃದಯದಲಿ ರಕ್ತ ಹೆಪ್ಪುಗಟ್ಟಿದೆ
ಕಣ್ಣು ಉರಿಯುತಿದೆ
ಸೊಂಟ ಸೋಲುತಿದೆ…
ಆದರೂ ಮೈ ಬೆತ್ತಲಾಗಬೇಕು
ಕಾಡೆಮ್ಮೆಯಂತೆ ಮದಿಸುವವನಿಗೆ
ನಲುಗುತ್ತಾ ಮುಲುಗುತ್ತಾ
ಕೃತಕ ನಗುವ ಮೊಗದೊಳಿಟ್ಟು
ಹೇಸಿಗೆಯ ಹಾಸಿಗೆಯಲ್ಲೇ
ಶೃಂಗಾರ ಸಾಗರದಲ್ಲಿ ನೂಕಿಸಬೇಕು||

ಸೀರೆಯನ್ನ ಎಳೆದೆಳೆದು
ಕುಬುಸವ ಬಿಚ್ಚಿಯೆಸೆದು
ಬೆತ್ತಲೆಯ ಮೈಯಲ್ಲಿ
ಎದೆಯಮುಕಿ ತುಟಿ ಕಚ್ಚಿ
ಕಾಮದಾಟದೀ ವಿಜೃಂಭಿಸುತ್ತಾ
ಕೊರಡಾಗಿ ಸುಖಸಿಗಿವ
ಸಹಸ್ರಾರು ದುಶ್ಶಾಸನರಿಹರಿಲ್ಲಿ
ಕೂಗಿದರೂ ಬಾರ ಕೃಷ್ಣನಿಂದು
ನನ್ನಂತ ಕೃಷ್ಣೆಯ ಕರೆಗೆ||

ಎಂಜಲೆಲೆಗೆ ಹಸಿದ ನಾಯಂತೆ
ಹಾರಿಬಿದ್ದು ಮುಕ್ಕುವಾಗ
ನೆಕ್ಕಿನೆಕ್ಕಿ ನುಂಗುವಾಗ
ಕ್ಷಣಕಾದರೂ ಜೊತೆಗಿರೋ ಅಕ್ಕತಂಗಿ
ಮುದ್ದು ಮಗಳು,ಮಮತೆಯ ತಾಯಿ
ಯಾರೂ ಕಾಣಲಿಲ್ಲವೇ?
ಬೆತ್ತಲೆದೆಯ ಬಳುಕ ಹಿಂದೆ
ಬಚ್ಚಿಟ್ಟಕೊಂಡ ಹೆಪ್ಪಿಟ್ಟುಕೊಂಡ
ನೋವು ಕಾಣಲಿಲ್ಲವೇ?
ಮಗಳಾಗಬಹುದಿತ್ತು ಮೈಮಾರಿಕೊಂಡೆ
ತಾಯಾಗಬಹುದಿತ್ತು ತಲೆಹಿಡುಕಳಾದೆ
ಹೆಂಡತಿಯಾಗಬಹುದಿತ್ತು ಸವತಿಯಾದೆ
ವಿಧಿಯಾಟಕೆ ಬೆಲೆತೆತ್ತೆ ಬಲಿಕೊಟ್ಟೆ
ಮಸಣದ ಹೂವಾದೆ
ನಿತ್ಯ ಮುತ್ತೈದೆಯಾದೆ ||

-ಶುಭಶ್ರೀ ಭಟ್ಟ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post