ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು ಒಂದೆರೆಡು ಲೈನುಗಳನ್ನು ಸಾವಕಾಶದಿಂದ ಹೇಳಿ ಕೊನೆಗೆ ಪ್ಯಾನೆಲ್ ನ ಒಬ್ಬರನ್ನು ತಮ್ಮ ಅಭಿಪ್ರಾಯವನ್ನು ಮುಂದಿಡಲು ಹೇಳುತ್ತಾನೆ. ಆದರೆ ಅವರು ಬಾಯಿತೆರೆದು ಒಂದೆರೆಡು ವಾಕ್ಯಗಳನ್ನು ಹೇಳಿ ಮುಗಿಸುವುದರೊಳಗೆ ಅವರನ್ನು ಅಲ್ಲಿಗೇ ತಡೆದು, ಅವರಂದ ವಿಚಾರಗಳಿಗೆ ವ್ಯತಿರಿಕ್ತವಾಗಿ ತನ್ನ ಒಂದೆರೆಡು ಸೊ ಕಾಲ್ಡ್ ದುಬಾರಿ ಇಂಗ್ಲಿಷ್ ಪದಗಳನ್ನು ಸೇರಿಸಿ ಒಮ್ಮೆಲೇ ಅರಚುತ್ತಾನೆ. ಕಿರುಚುತ್ತಾನೆ. ಮಧ್ಯದಲ್ಯಾರೋ ಒಬ್ಬರು ತಮ್ಮ ವಿಚಾರವನ್ನು ಹೇಳ ಹೊರಟರೆ ಅವರನ್ನೂ ತಬ್ಬಿಬ್ಬಾಗುವಂತೆ ಅರಚಿ ಬಾಯಿ ಮುಚ್ಚಿಸುತ್ತಾನೆ. ನೋಡ ನೋಡುತ್ತಲೇ ಚರ್ಚೆ ಹೆಂಡಕುಡುಕರ ಅಂಗಡಿಯಂತಾಗಿ ಬಿಡುತ್ತದೆ. ಹೀಗೆ ಸುಮಾರು ಒಂದು ಘಂಟೆಗಳ ಕಾಲ ನೆಡೆಯುವ ಈ ಚರ್ಚಾ ಕೂಟ ಅಥವಾ ಕಿತ್ತಾಟ, ಆ ನಿರೂಪಕನ ವಿಚಾರಧಾರೆಯ ಹಿನ್ನುಡಿಗಳೊಂದಿಗೇ ಮುಕ್ತಾಯಗೊಳ್ಳುತ್ತದೆ! ನೋಡುಗ ಇದು ಚರ್ಚಾ ಕೂಟವೊ, ಊರ ಸಂತೆಯೋ ಅಥವಾ ಹನಿ ಸಿಂಗ್ ನ ರ್ಯಾಪ್ ಪದ್ಯವೋ ಎಂಬ ಗೊಂದಲದಲ್ಲಿ ಮುಳುಗುತ್ತಾನೆ. ಸ್ವಲ್ಪ ಕಾಲ ಏಕಾಂತದ ಮೊರೆ ಹೋಗುತ್ತಾನೆ.
ಅದೊಂದು ಕಾಲವಿತ್ತು. ಅಲ್ಲಿ ಬರುತ್ತಿದ್ದದ್ದು ಒಂದೇ ಚಾನಲ್ಲು. ಸಂಜೆ ಟಿವಿಯ ಮುಂದೆ ಮಕ್ಕಳು ಕಾಣೆಯಾಗಿವೆ ಅಂದುಕೊಂಡರೆ ಅದು ಬಹುಪಾಲು ವಾರ್ತೆಗಳ ಸಮಯ. ಹದಿನೈದು ನಿಮಿಷದ ಅಥವಾ ಅರ್ಧ ತಾಸಿನ ಆ ಸುದ್ದಿ ಸಮಾಚಾರಗಳು ಆದಷ್ಟು ವಿಷಯಗಳನ್ನು ಸಂಕ್ಷಿಪ್ತವಾಗಿ, ಎಥಾವತ್ತಾಗಿ ಬಿತ್ತರಿಸುತ್ತಿದ್ದವು. ಒಮ್ಮೆ ವಾರ್ತೆಗಳನ್ನು ನೋಡಿದರೆ ನೋಡುಗನಿಗೆ ಮತ್ತೆಲ್ಲೋ ಅದರ ಆಧಾರವನು ಹುಡುಕುವ ಅವಶ್ಯಕತೆಯಿರಲಿಲ್ಲ. ದಿನಪತ್ರಿಕೆಗಳನ್ನು ಒಂದು ಪಕ್ಷ ಓದದೇ ಇದ್ದರೂ ಪರವಾಗಿಲ್ಲ, ಆದರೆ ದೂರದರ್ಶನದ ವಾರ್ತೆಗಳನ್ನು ಮಾತ್ರ ತಪ್ಪದೆ ನೋಡಬೇಕು. ಇಲ್ಲವಾದರೆ ದಿನವೇ ಅಪೂರ್ಣವಾದಂತಿತ್ತು ಅಂದಿನ ನೋಡುಗನಿಗೆ.
ನಂತರ ಬಂದ ಕೇಬಲ್ ಹಾಗು ಸ್ಯಾಟಲೈಟ್ ಗಳ ತಂತ್ರಜ್ಞಾನಕ್ಕೆ ಮೊಬೈಲು ಹಾಗು ಇಂಟರ್ನೆಟ್ಗಳೆಂಬ ಅದ್ಬುತ ಟಚ್ ಗಳಿಂದ ಟಿವಿ ಚಾನೆಲ್ಗಳ ಸಂಖ್ಯೆ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. (ತೊಂಬತ್ತರ ದಶಕದಲ್ಲಿ ದೇಶದಲ್ಲಿ ದೂರದರ್ಶನವು ಆರ್ಥಿಕವಾಗಿ ಸುಧಾರಣೆ ಹೊಂದಲು ಇತರ ಖಾಸಗಿ ಚಾನೆಲ್’ಗಳಿಗೆ ಅವಕಾಶ ನೀಡಿದ್ದೂ ಒಂದು ಕಾರಣವೆಂಬುದನ್ನ ಇಲ್ಲಿ ನೆನಸಿಕೊಳ್ಳಬೇಕು) ಹೀಗೆ ಒಂದರಿದೊಂದು, ರಾಜಕೀಯ ಪಕ್ಷಗಳಿಂದ, ಉದ್ಯಮಿಯಿಂದ, ನಟ-ನಟಿಯರಿಂದ, ಇನ್ನೂ ಹುಟ್ಟದೇ ಇರುವ ಮೊಮ್ಮಕ್ಕಳಿಗೆ ಆಸ್ತಿಯನ್ನು ಮಾಡಿಡುವ ಹಾಗೆ ಉಳ್ಳವರು ಟಿವಿ ಚಾನೆಲ್ ಗಳನ್ನ ಶುರುಮಾಡಿದರು. ಕಾಲಾಂತರದಲ್ಲಿ ಇವುಗಳ ನಡುವಿನ ಪೈಪೋಟಿ ಹಿಂದೆಂದೂ ಕಂಡರಿಯದಂತೆ ಹೆಚ್ಚಿತು. ಪರಿಣಾಮವಾಗಿ ಸುದ್ದಿಗಳು ಬಣ್ಣ ಮೆತ್ತಿದ ವ್ಯಾಪಾರದ ಸರಕುಗಳಾಗ ತೊಡಗಿದವು. ಆದರೆ ಈ ಸರಕುಗಳು ಊರು, ನಾಡು, ಗಡಿಗಳಿಗನುಗುಣವಾಗಿ ತಮ್ಮ ಬಣ್ಣವನ್ನು ಬದಲಿಸತೊಡಗಿದವು!
ಅಂದು ಸೀರೆಯನ್ನು ತೊಟ್ಟು, ಮುಖದ ಮೇಲೊಂದು ಅಂದದ ಬೊಟ್ಟನ್ನು ಇಟ್ಟು, ವಾರ್ತೆಗಳನ್ನು ಓದುತ್ತಿರುವವರ ಜಾಗದಲ್ಲಿ ಇಂದು, ಯಾವುದೊ ಫ್ಯಾಷನ್ ಷೋ ಗೆ ಹೋಗುವ ಹಾದಿಯಲ್ಲಿ ದಾರಿ ತಪ್ಪಿ ಕ್ಯಾಮೆರಾದ ಮುಂದೆ ಬಂದಂತೆ, ತಳುಕುತ್ತ, ಬಳುಕುತ್ತ, ‘ಅ’ಕಾರಗಳಿಗೆ ‘ಹ’ಕಾರವನ್ನೂ, ‘ಹ’ಕಾರ ಗಳಿಗೆ ‘ಅ’ಕಾರವನ್ನು ಸೇರಿಸಿ ಸುದ್ದಿಗಳು ‘ಇಂಪಾಗಿ’ ಕೇಳಲಿ ಎಂಬಂತೆ, ತಮ್ಮ ಪರದೆಯ ಮುಂದೆ ಬರುವ ಪದಗಳನ್ನು ಅವರುಗಳು ಎಥಾವತ್ತಾಗಿ ಓದುತ್ತಾ ಹೋದರೆ ನೋಡುಗ ಸುದ್ದಿಯನ್ನು ಕೇಳಬೇಕೋ ಅಥವಾ ಅವ(ಳ)ರನ್ನು ನೋಡಬೇಕೋ ಎಂಬ ಪೇಚಾಟದಲ್ಲಿ ಸಿಲುಕಿಕೊಳ್ಳುತ್ತಾನೆ! ಅಲ್ಲದೆ ಸುದ್ದಿಗಳು ಅದೆಷ್ಟೇ ಸೂಕ್ಷ್ಮವಾಗಿದ್ದರೂ, ಕೋಮುಗಳಲ್ಲಿ ಗಲಭೆಯನ್ನು ಹೊತ್ತಿಸುವಂತಿದ್ದರೂ, ‘ದಿ ನೇಷನ್ ವಾಂಟ್ಸ್ ಟು ನೋ’ ಎಂದು ಅರಚಿ, ಮುಂದೊದಗುವ ಪರಿಣಾಮಗಳ ಬಗ್ಗೆ ಕ್ಯಾರೇ ಎನ್ನದ ಇವರಿಗೆ ಪಕ್ವವಾಗದ ಜನಪರ ಕಾಳಜಿ ಎಷ್ಟಿದೆ ಎಂದು ತಿಳಿಯುತ್ತದೆ. ಒಂದು ಚರ್ಚೆ ಎಂದರೆ ಪ್ರತಿಯೊಬ್ಬ ಪ್ಯಾನಾಲಿಸ್ಟಿಗೂ ಸಮಾನ ಅವಕಾಶವನ್ನು ಕೊಟ್ಟು, ಅವರ ವಿಚಾರಧಾರೆಯನ್ನು ಸಾಮಾನ್ಯನಿಗೂ ತಿಳಿಯುವಂತೆ ಹೇಳಬೇಕು. ಆದರೆ ಇಂದು ನಾನೇ ದೊರೆ ಎಂಬಂತೆ ಪ್ಯಾನಾಲಿಸ್ಟ್ ಗಳೇ ತಬ್ಬಿಬ್ಬಾಗುವಂತ ದುಬಾರಿ ಇಂಗ್ಲಿಷ್ ಪದಗಳನ್ನು ಬಳಸಿ ಮನೆಯೊಳಗಿನ ಹುಲಿಯಂತೆ ಅರಚಿ, ನಟಿಸಿದರೆ ಏನು ಬಂತು ಸ್ವಾಮಿ? ಅಷ್ಟಾಗ್ಯೂ ತನ್ನ ನಿಲುವನ್ನೇ ಮುಂದಿಡುವುದೇ ಅಂತಿಮ ಗುರಿಯಾದರೆ ಅದು ಚರ್ಚಾಕೂಟಕ್ಕೆ ಅವಮಾನ ಮೆತ್ತಿದಂತಾಗುವುದಿಲ್ಲವೇ? ನಿರೂಪಕರುಗಳೇ ತಮ್ಮ ವಿಚಾರಗಳು ಸರಿ ಎಂದು ತೋರ್ಪಡಿಸುವುದಾದರೆ ಅದಕ್ಕೆ ಚರ್ಚಾಕೂಟವೇ ಏತಕ್ಕೆ ಬೇಕು? ಹೀಗೆ ಕೇವಲ ತೋರ್ಪಡಿಕೆಯೇ ಹೆಚ್ಚಾಗಿಸಿ ನೋಡುಗನ ಸಾಮನ್ಯ ಅರಿವಿಗೆ ಬಾರದಂತಾಗಿವೆ ಇಂದಿನ ಹೆಚ್ಚಿನ ಸುದ್ದಿ ವಾಹಿನಿಗಳು.
ಇಂದು ನಮ್ಮ ದೇಶವೊಂದರಲ್ಲೇ ಸುಮಾರು ಒಂಬೈನೂರು ಟಿವಿ ಚಾನೆಲ್ ಗಳಿವೆ. ಅಂದರೆ ವೀಕ್ಷಕ ಪ್ರತಿ ಎರಡು ನಿಮಿಷಕೊಂದರಂತೆ ಒಂದೊಂದು ಚಾನೆಲ್ ಗಳನ್ನು ಬದಲಿಸುತ್ತಾ ದಿನಪೂರ್ತಿ ನೋಡಿದರೂ ಮಿಕ್ಕಿ ಉಳಿಯುವಷ್ಟು ಚಾನೆಲ್ ಗಳು! ಇಷ್ಟು ದೊಡ್ಡ ಚಾನೆಲ್ ಗಳ ಸಾಗರದಲ್ಲಿ ಪ್ರತಿಯೊಂದು ಚಾನೆಲ್ಗಳು ಪೈಪೋಟಿಗೆ ಬಿದ್ದು ನಾ ಮುಂದು, ತಾ ಮುಂದು ಎನ್ನುತಾ ಸುದ್ದಿಯನ್ನು ತಿರುಚಿ, ಮುರುಚಿ, ‘ಅಳಿಯ ಅಲ್ಲ, ಮಗಳ ಗಂಡನಂತೆ’ ಮಾಡಿ, ಸಿಕ್ಕಿದ್ದನ್ನೆಲ್ಲ ಹಾಗೆಯೇ ವಾಕರಿಸಿ, ಗಬ್ಬೆಬ್ಬಿಸಿ, ಕಿತ್ತಾಡಿಸಿ, ಕೊನೆಗೆ TRP ಎಂಬುವ ಮಹಾ ಅಣೆಕಟ್ಟೆಯ ಮಟ್ಟ ಎಷ್ಟಿದೆ ಎಂದು ಪಿಳಿ-ಪಿಳಿ ಕಣ್ಣನ್ನು ಬಿಟ್ಟು ನೋಡುವುದು ಸಾಮನ್ಯದ ಸಂಗತಿ. ಪ್ರತಿಶತ 80 ರಷ್ಟು ಹಳ್ಳಿಗಳಿರುವ ಒಂದು ದೇಶದಲ್ಲಿ, ಅಲ್ಪ ಸಮಯವನ್ನಷ್ಟೇ ವಾರ್ತೆಗಳನ್ನು ನೋಡಲು ವ್ಯಹಿಸಬಹುದಾದ ಸಾಮನ್ಯ ಜನಗಳ ಮುಂದೆ, ಇಷ್ಟೆಲ್ಲಾ ಸರ್ಕಸ್ ಗಳ ತೋರ್ಪಡಿಕೆಗೆ ಈ TRP ಎಂಬುವ ನಶೆಯೇ ಹೆಚ್ಚಾಗಿ ಕಾರಣವಾಗಿರುತ್ತದೆ. TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಅಂದರೆ ದೃಶ್ಯಮಾಧ್ಯಮದ ಒಂದು ಕಾರ್ಯಕ್ರಮವನ್ನು ವೀಕ್ಷಿಸುವ ಒಟ್ಟು ಜನರ ಸಂಖ್ಯೆಯನ್ನು ನಿರ್ಧರಿಸುವ ವಿಧಾನ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್ ಸಾಧನವೊಂದನ್ನು ಪ್ರದೇಶಗಳಿಗನುಗುಣವಾಗಿ ಹಲವಾರು ಮನೆಗಳಲ್ಲಿ ಅಳವಡಿಸಲಾಗಿರುತ್ತದೆ. ಇವುಗಳ ಮೂಲಕ ಆ ಮನೆಯಲ್ಲಿ ಯಾವ ಕಾರ್ಯಕ್ರಮವನ್ನು ಎಷ್ಟು ಬಾರಿಗೆ, ಯಾವ ಪ್ರಮಾಣದಲ್ಲಿ ವೀಕ್ಷಿಸಲಾಗುತ್ತದೆ ಎಂದು ಅಂದಾಜಿಸಲಾಗುತ್ತದೆ. ಹೀಗೆ ಹಲವಾರು ಪ್ರದೇಶಗಳ ಸರಾಸರಿ ಅನುಪಾತದ ಮೇಲೆ ಒಂದು ಕಾರ್ಯಕ್ರಮದ TRP ನಿಗದಿತವಾಗುತ್ತದೆ. ಒಟ್ಟಾರೆ, ಹೆಚ್ಚಿನ TRP ಸಿಗಲು ಹೆಚ್ಚಿನ ವೀಕ್ಷಣೆ ಅಗತ್ಯ. ಹೆಚ್ಚಿನ ವೀಕ್ಷಣೆಗೆ ಹೆಚ್ಚಿನ ವೀಕ್ಷಕರು ಹಾಗಾಗಿ ಹೆಚ್ಚಿನ ವೀಕ್ಷಕರ ಸೆಳೆಯುವಿಕೆಯೇ ಕೋಟಿ ಸುರಿದು ಕಟ್ಟುವ ಅಷ್ಟೂ ಟಿವಿ ಚಾನೆಲ್ ಗಳ ಬಾಗಶಃ ಗುರಿಯಾಗಿರುತ್ತದೆ.
ಹಾಗಾದರೆ TRP ಎಂಬುದರ ಅವಶ್ಯಕತೆ ನಿಜವಾಗಿಯೂ ನಮಗೆ ಎಷ್ಟರ ಮಟ್ಟಿಗಿದೆ? TRP ಎಂಬೊಂದರ ಅಗೋಚರ ಅಂಖ್ಯೆಯ ಸ್ಪರ್ಧೆಗೆ ಬೀಳುವ ಒಂದೇ ಕಾರಣಕ್ಕೆ ಇಂದು ಹೆಚ್ಚಾಗಿ ವಿಷಯಗಳು ಮಾರ್ಪಾಡಾಗುತ್ತಿವೆ. ಸುದ್ದಿ ವಾಚಕರು ಕ್ಯಾಮೆರಾದ ಮುಂದೆ ನಟರಾಗಿ, ಅಧಿಕಾರಿಗಳಾಗಿ, ನ್ಯಾಯಾಧೀಶರೂ ಆಗುತ್ತಿದ್ದಾರೆ! ಒಂದು ಪಕ್ಷ TRP ಎಂಬುದರ ಕಲ್ಪನೆಯನ್ನೇ ಈ ವ್ಯವಸ್ಥೆಯಿಂದ ತೆಗೆದೊಗೆದರೆ ಚಾನೆಲ್ ಗಳು ತೆಪ್ಪಗೆ ನೈತಿಕತೆಯ ಚೌಕಟ್ಟಿನ ಒಳಗೆ ತಮ್ಮ ಕಾರ್ಯವನ್ನು ನಿರ್ವಹಿಸಬಹುದೆ? ತಾನು ಇನ್ನೊಬ್ಬನಿಗಿಂತ ಹಿಂದಿದ್ದೇನೋ, ಮುಂದಿರುವೆನೋ ಎಂಬುದನ್ನು ಅರಿಯಲೇ ಸಾಧ್ಯವಾಗದಿದ್ದರೆ ಸುದ್ದಿಗಳು ಸರಕಾಗುವುದನ್ನು ತಪ್ಪಿಸಬಹುದಲ್ಲವೇ? ಅಷ್ಟಾಗ್ಯೂ ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ನೋಡುಗ TRPಯ ಆಧಾರದ ಮೇಲೆ ಯಾವ ಸುದ್ದಿ ಸಮಾಚಾರಗಳನ್ನು ನೋಡಿಯಾನು? ವಿಷಯಗಳು ಒಳ್ಳೆಯದಾಗಿದ್ದರೆ ನೋಡುಗ ಎಂದಿಗೂ ಒಲ್ಲೆ ಎಂದಾನು.
ಆದ ಮಾತ್ರಕ್ಕೆ ದೃಶ್ಯ ಮಾಧ್ಯಮಗಳ ಕಾರ್ಯ ಎಲ್ಲ ಬಗೆಯಲ್ಲೂ ಘಾತಕವಾಗಿದೆ ಹಾಗು ಕೇವಲ TRP ಗಾಗಿಯೇ ಇವೆ ಎಂದು ಹೇಳಲಾಗುವುದಿಲ್ಲ. ದೇಶದ ಅತಿ ಪ್ರಭಾವಿ ವ್ಯಕ್ತಿಗಳಿಂದ ಹಿಡಿದು ಒಬ್ಬ ಸಾಮನ್ಯನನ್ನೂ ಒಂದೇ ದೃಷ್ಟಿಯಿಂದ ನೋಡುವ ಮಾಧ್ಯಮಗಳೂ ಇಂದು ಸಾಕಷ್ಟಿವೆ. ಆದರೆ ಸೀದಾ-ಸಾದಾ ಸುದ್ದಿಗಳಿಗಿಂತ ಕೇವಲ ರಂಜನೀಯ ಸುದ್ದಿಗಳನ್ನೇ ಇಷ್ಟ ಪಟ್ಟು ನೋಡುವ ವೀಕ್ಷಕರಿಗೆ ಇಂತಹ ಮಾಧ್ಯಮಗಳು ರಸದೌತಣವನ್ನು ನೀಡಲಾಗುತ್ತಿಲ್ಲ. ಪರಿಣಾಮವಾಗಿ ಮುಂದೊಂದು ದಿನ ಇವುಗಳು ಮರೆಯಾಗಲ್ಪಡುತ್ತಿರುವುದು ಶೋಚನೀಯ ವಿಷಯ. ವಿಷಯವನ್ನು ವಿಶೇಷಣವಾಗಿಸದೆ ನೆಡೆಯುತ್ತಿರುವ ದೂರದರ್ಶನದ ನೋಡುಗರು ಇಂದು ಎಷ್ಟಿದ್ದಾರೆ ಹೇಳಿ?
ದೃಶ್ಯ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ವಿಚಾರಗಳು ಪಕ್ಷಾತೀತವಾಗಿರದೆ ವಿಚಾರಪೂರಿತವಾಗಿರಬೇಕು. ದಿನವೆಲ್ಲ ಯಾರೋ ಒಬ್ಬರು ಅನ್ನುವ ಬಾಯಿಮಾತಿನ ವಿಚಾರವನ್ನೇ ನಿಜವೆಂದು ನಂಬುವ ಸಾಮನ್ಯ ಜನರ ಆಧಾರ ಇತ್ತೀಚೆಗೆ ಹೆಚ್ಚಾಗಿ ಟಿವಿ ಚಾನೆಲ್ ಗಳೇ ಆಗಿರುತ್ತದೆ. ಇವುಗಳಲ್ಲಿ ಬರುವ ವಿಚಾರಗಳ ಸತ್ಯಾಸತ್ಯತೆಯನ್ನು ಅರಿಯಲು ಬೇರ್ಯಾವ ಮಾರ್ಗವೂ ಹೆಚ್ಚಾಗಿ ಸಾಮಾನ್ಯನಿಗೆ ಇರುವುದಿಲ್ಲ. ಅದೇನೇ ಇದ್ದರೂ ಪುಸ್ತಕವನ್ನು ಎದೆಗವುಚಿಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಉತೀರ್ಣರಾಗಲು ಬಯಸುವ ವಿದ್ಯಾರ್ಥಿಗಳಂತೆ. ಇಂದು ಸುದ್ದಿವಾಹಿನಿಗಳೆಂಬ ಪುಸ್ತಕಗಳ ಶುದ್ದಿ ಕಾರ್ಯ ಶುರುವಾಗಬೇಕಿದೆ. ನೋಡುಗನನನ್ನು ಕೇವಲ ಆಸಕ್ತದಾಯಕನಾಗಿ ಮಾಡುವುದಲ್ಲದೆ ವಿಚಾರಭರಿತನಾಗೂ ಮಾಡುವ ಕಾರ್ಯ ಇಂದು ಸುದ್ದಿ ವಾಹಿನಿಗಳಿಂದ ಆಗಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಭಿವೃದ್ಧಿ ಹೊಂದಿದ ಆರೋಗ್ಯಕರ ಚಿತ್ತಗಳ ಅವಶ್ಯಕತೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ನಮ್ಮ ಮಾಧ್ಯಮಗಳು ಕೆಲಸ ಮಾಡಬೇಕಿದೆ. ಪಾರದರ್ಶಕ ಪ್ರಸಾರದ ಮುಖೇನ ಸಮಾಜದ ಅಭ್ಯುದಯವೂ ಇದರಿಂದ ಸಾರ್ಥಕವಾಗಬೇಕಿದೆ.
Facebook ಕಾಮೆಂಟ್ಸ್