X

ಆ ಮೆಟ್ಟಿಲುಗಳಿಗೆ ಇನ್ನಾದರೂ ಮುಕ್ತಿ ಸಿಕ್ಕೀತೆ??!

ನಮ್ಮ ರಾಜ್ಯದ ಮಟ್ಟಿಗೆ ಈ ಮೆಟ್ಟಿಲುಗಳು ಸು(ಕು)ಪ್ರಸಿದ್ಧವೇ ಸರಿ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ವಾರಕ್ಕೆ ಒಂದೆರಡು ಬಾರಿಯಾದರೂ ಸುದ್ದಿಯಾಗದೇ ಹೋಗುವುದಿಲ್ಲ. ಒಂದಷ್ಟು ಪ್ರತಿಭಟನಾಕಾರರಿಗೆ ಈ ಮೆಟ್ಟಿಲುಗಳೇ ತಮ್ಮ ಅಧಿಕೃತ  ಅಡ್ಡಾ.  ಪ್ರತಿಭಟನಾಕಾರರ ಸ್ವರ್ಗ ಅಂತೆನಿಸಿಕೊಳ್ಳುವ ತಾಣ ನಮ್ಮ ರಾಜ್ಯದಲ್ಲಿ ಯಾವುದಾದರೂ ಇದೆಯೆಂದಾದರೆ, ಅದು ಬೆಂಗಳೂರಿನ ಟೌನ್’ಹಾಲ್(ಪುರಭವನ)ನ ವಿಶಾಲ ಮೆಟ್ಟಿಲುಗಳು! ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳ ಕಮಾಲ್’ನಿಂದಾಗಿ ‘ಯುನೆಸ್ಕೊ’ ಘೋಷಣೆಯ ಸುಳ್ಳುಸುದ್ದಿಯೊಂದನ್ನು ಹಂಚುವವರೇ ಎಲ್ಲರೂ. ಪ್ರತಿಭಟನೆಯ ತಾಣಗಳಿಗೆ ಸಂಬಂಧಿಸಿದ ಅಂತಹದೊಂದು (ಸುಳ್ಳು)ಸುದ್ದಿಗೆ ಭಾಜನವಾಗಬಲ್ಲ ಅರ್ಹ ಸ್ಥಳವೇನಾದರೂ ಇದ್ದರೆ ಅದು ಟೌನ್’ಹಾಲ್ ಮುಂದಿನ ಮೆಟ್ಟಿಲುಗಳು ಮಾತ್ರ.

ಮೆಟ್ಟಿಲುಗಳು ಪ್ರಗತಿಯ ಸಂಕೇತ, ಉನ್ನತಿಗೆ ಉಪಮೆ ಎಂದೆಲ್ಲಾ ಕರೆಯುತ್ತೇವೆ. ಆದರೆ ಆ ಮೆಟ್ಟಿಲುಗಳ ಮೇಲೆ ಕುಳಿತು ಕಟ್ಟಿದ್ದನ್ನು ಕೆಡವುವ, ತಮಗಾಗದವರ ಮೇಲೆ  ವೃಥಾ ಕೆಂಡ ಕಾರುವ, ಸಿದ್ಧಾಂತದ ಬಂದೂಕುಗಳನ್ನು ಲೋಡ್ ಮಾಡಿ ಯಾರ್ಯಾರದೋ ಹೆಗಲ ಮೇಲಿಟ್ಟು ಇನ್ಯಾರಿಗೋ ಗುರಿಯಿಡುವುದನ್ನೇ ಹೊಟ್ಟೆಪಾಡಾಗಿಸಿಕೊಂಡಿರುವ ಒರಟು ವರ್ತನೆಯ ‘ಓ(ಲಾ)ರಾಟಗಾರರ’ ಗುಂಪೊಂದು ನಮ್ಮ ರಾಜ್ಯದಲ್ಲಿದೆ. ಇಲ್ಲಿ ಭಾರೀ ಪ್ರತಿಭಟನೆಯಷ್ಟೇ ಅಲ್ಲ ಒಮ್ಮೊಮ್ಮೆ ಪ್ರತಿಭಟನೆಯ ಹೆಸರಲ್ಲಿ ಭೂರಿ ಭಕ್ಷಣೆಯೂ ನಡೆಯುವುದಿದೆ. ಆಹಾರ ಸಂಸ್ಕೃತಿಯ ಹೆಸರಲ್ಲಿ ಈ ಹೋರಾಟಗಾರರ ದಂಡು ಗೋಮಾಂಸದ ತುಂಡುಗಳನ್ನು ಬಕಾಸುರರಂತೆ ಭಕ್ಷಿಸುತ್ತಾ ಮಾಧ್ಯಮದ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದೂ ಇದೇ ಮೆಟ್ಟಿಲುಗಳ ಮೇಲೆಯೇ ಕುಳಿತು. ಎದುರಾಳಿಗಳ ವೈಚಾರಿಕ ಹಾಗೂ ಬೌದ್ಧಿಕ ಸವಾಲುಗಳಿಗೆ ಕೌಂಟರ್ ಕೊಟ್ಟು ಹಿಮ್ಮೆಟ್ಟಿಸಲಾಗದೇ ಸೋತವರ, ಹಿಂಬಾಗಿಲ ಪ್ರಯತ್ನವೇ ಟೌನ್’ಹಾಲ್ ಮೆಟ್ಟಿಲುಗಳ ಮೇಲೆ ಪ್ರತಿಭಟನೆಯ ಕೌಂಟರ್ ತೆರೆಯುವುದು.

ಜೊಳ್ಳು ಸಿದ್ಧಾಂತಕ್ಕೆ ಜೋತು ಬೀಳುವ “ಉಂಡಮನೆಯ ಜಂತಿ ಅಳೆಯುವ” ಮನಃಸ್ಥಿತಿಯ ಕೆಲವು ಹೋರಾಟಗಾರರು ಪ್ರತಿಭಟನೆಗೆ ಅದೇ ಸ್ಥಳವನ್ನು ಆರಿಸಿಕೊಳ್ಳಲು ಕೆಲವು ಕಾರಣಗಳಿವೆ. ಹೀಗೆ ಒಂದರ ಹಿಂದೆ ಒಂದು ಸಾಲಿನಂತೆ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದರಿಂದ ಎಲ್ಲರ ಮುಖವೂ ಸ್ಪಷ್ಟವಾಗಿ ಕ್ಯಾಮೆರಾಕ್ಕೆ ಕಾಣುವ ಮೂಲಕ ಪತ್ರಿಕೆ ಹಾಗೂ ಟಿ.ವಿಗಳಲ್ಲಿ ತಮ್ಮ ಮುಖಮುದ್ರೆಯನ್ನು ಒತ್ತಬಹುದೆಂಬ ಉಪಾಯ ಒಂದಾದರೆ, ಇನ್ನೊಂದು, ಆ ಪ್ರತಿಭಟನೆಗಳಿಗೆ ಸೇರುವುದೇ ಬೆರಳೆಣಿಕೆಯ ಜನ. ಶಾಲೆಗಳಲ್ಲಿ ಮಕ್ಕಳ ಗ್ರೂಫ್ ಫೋಟೊ ತೆಗೆಸುವಾಗ ಬೆಂಚುಗಳನ್ನು ಬೇರೆ ಬೇರೆ ಎತ್ತರಕ್ಕೆ ಜೋಡಿಸಿ ಎಲ್ಲಾ ಮಕ್ಕಳೂ ಕಾಣುವಂತೆ ಅದರ ಮೇಲೆ ನಿಲ್ಲಿಸುವಂತೆ, ಪ್ರತಿಭಟನಾಕಾರರು ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದರಿಂದ ಹತ್ತಿರದಿಂದ ಝೂಮ್ ಮಾಡಿ ಫೋಟೊ ತೆಗೆದು ‘ಭಾರೀ ಪ್ರತಿಭಟನೆ’ ಎಂಬ ಶೀರ್ಷಿಕೆ ನೀಡಲು ಅನುಕೂಲಕರವೆಂಬ ಮಾಸ್ಟರ್ ಪ್ಲ್ಯಾನ್!!  ಯಾವುದಾದರೂ ಕಾರ್ಯಕ್ರಮ ನಡೆಯುತ್ತಿದೆಯೇ ಎಂದು ಇಣುಕಿ ನೋಡುವಂತಾಗಬೇಕಿದ್ದ ಪುರಭವನದ ಆವರಣ ಯಾವ ಪ್ರತಿಭಟನೆ ನಡೆಯುತ್ತಿದೆ ಎಂದು ನೋಡಿ ಮೂಗು ಮುರಿಯುವಂತಾಗಿದೆ. ಯಾರೆಂಬ ಪ್ರಶ್ನೆ ಅನೌಚಿತ್ಯ ಏಕೆಂದರೆ ‘ಕಮ್ಯುನಿಸ್ಟರೆಂಬ’ ಕಮ್ಮಿನಿಷ್ಠರು, ಬುದ್ಧಿಜೀವಿಗಳೆಂಬ ಬದ್ಧತೆಹೀನರು ಹಾಗೂ ಪ್ರಗತಿಪರ ಚಿಂತಕರೆಂಬ ದೇಶದ ಅಹಿತ ಚಿಂತಕರೇ ಅಲ್ಲಿ ಸೇರುವುದೆಂದು ಎಲ್ಲರಿಗೂ ತಿಳಿದಿದೆ. ಟೌನ್’ಹಾಲ್ ಮುಂದಿನ ಮೆಟ್ಟಿಲುಗಳನ್ನು “ಅನಾವಶ್ಯಕ ಪ್ರತಿಭಟನೆಗಳ ತೊಟ್ಟಿಲು” ಎಂದು ಕರೆಯಬಹುದು.

ಪ್ರತಿಭಟನೆಯ ಅನಧಿಕೃತ ಕೇಂದ್ರವಾಗಿರುವ ಈ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟಿಸುವುದನ್ನು ಮಟ್ಟಹಾಕಲು ಚಿಂತಿಸಲಾಗುತ್ತಿದೆಯೆಂಬ ಸುದ್ಧಿ ಕೇಳಿ ಆ ಮೆಟ್ಟಿಲುಗಳಿಗೆ ಅದೆಷ್ಟು ನೆಮ್ಮದಿಯಾಯಿತೋ. ಈ ಸುದ್ದಿ ನಿಜವಾದರೆ,  ಇಲ್ಲಿ ಬಂದು ಅರಚಾಡಿ ನಮ್ಮ ಘನತೆಗೆ ಮಸಿ ಎರಚುತ್ತಿದ್ದಾರೆಂದು ಒಳಗೊಳಗೇ ನೋವುಣ್ಣುತ್ತಿದ್ದ ಮೆಟ್ಟಿಲುಗಳು ಸದ್ಯ ನಿರಾಳವಾಗುವುದರಲ್ಲಿ ಸಂಶಯವಿಲ್ಲ.

ಓವರ್ ಡೋಸ್: ಹೊತ್ತಲ್ಲದ ಹೊತ್ತಲ್ಲಿ ಬಾಗಿಲಿಗೆ ಅಡ್ಡಲಾಗಿ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದು ಕೇಡೆಂಬ ನಂಬಿಕೆಯಿದೆ. ಹಾಗಾದರೆ ಟೌನ್’ಹಾಲ್’ನ ಗತಿ?!!

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post