X

ತಪೋವನದೆಡೆಗಿನ ತಪಸ್ಸಿನ ತಪೋಭಂಗ- ಭಾಗ ೧

ಕಡಿದಾದ ಗುಡ್ಡಗಳ ಮೇರು ತುದಿಯಲ್ಲಿ, ಮೌನಕ್ಕೆ ಸಾಕ್ಷಿಯಾಗಿ, ಮಹಾ ತಪಸ್ವಿಗಳ ವ್ರತಕ್ಕೆ ನೆರಳಾಗಿ, ಹಿಂದೂಗಳ ಪುರಾತನ ಸಂಸ್ಕಾರಕ್ಕೆ, ಸಂಸ್ಕೃತಿಗೆ ತಾಯಿ ಬೇರಾಗಿ, ನನ್ನಂಥ ವೀಕ್ ಎಂಡ್ ಬೈರಾಗಿಗಳ ಹಗಲು ಕನಸಾಗಿ, ಹಿಮಾಲಯದ ಭಾವ ಸ್ಪರ್ಶತೆಗೆ ತಣ್ಣನೆಯ ತಂಪನೀಯುತ್ತ.. ಒಮ್ಮೊಮ್ಮೆ ಹಿಮದಲ್ಲಿ ಮುಚ್ಚಿ ಹೋಗುತ್ತಾ.. ಇನ್ನೊಮ್ಮೆ ಹುಟ್ಟುವ ಗಂಗೆಗೆ ಜೀವ ಸೆಲೆ ತುಂಬುತ್ತ ತನ್ನ ಮೌನ ಮುಂದುವರೆಸಿದೆ ತಪೋವನ.

  ಹೀಗೆ ತಪೋವನ ಇರುವುದಾದರೂ ಎಲ್ಲಿ ಎಂದು ನೀವು ಗೂಗಲ್ ಮ್ಯಾಪ್ ನಲ್ಲಿ ಹುಡುಕಿದರೆ ದಾರಿಯನ್ನೇ ತೋರಿಸುವುದಿಲ್ಲ. ಹಿಮಾಲಯದ ಮಧ್ಯದಲ್ಲಿ ಒಂದು ಚುಕ್ಕಿಯಿಟ್ಟು ತಪೋವನ ಎಂದು ಬರೆದಿರುತ್ತದೆ ಅಷ್ಟೇ. ಆಗ ಅನ್ನಿಸುವುದು ತಪೋವನ ಎಂದರೆ ಇಷ್ಟೇ ಇರಬಹುದು ಎಂದು. ದೂರವನ್ನು ಕ್ರಮಿಸುವುದು ಮ್ಯಾಪಿನಲ್ಲಿ ಬಹಳ ಸುಲಭ. ಸಿನೆಮಾಗಳಲ್ಲಿ ಕಟ್ಟಿ ಹಾಕಿಕೊಂಡ ಹೀರೊ ಹೇಗೆ ಸುಲಭವಾಗಿ ಬಿಡಿಸಿಕೊಂಡು ಬಿಡುತ್ತಾನೆ ಆದರೆ ನಿಜ ಜೀವನದಲ್ಲಿ ಅದು ಸಾಧ್ಯವೇ..!?

  ತಪೋವನದ ಬಾಗಿಲು ತಟ್ಟಬೇಕೆಂದರೆ ದೆಹಲಿಯಿಂದ ಹೃಷಿಕೇಶದ ಮಾರ್ಗವಾಗಿ ಉತ್ತರಕಾಶಿ ತಲುಪಬೇಕು. ಅಲ್ಲಿಂದ ಚಾರಧಾಮಗಳಲ್ಲಿ ಒಂದಾದ ಗಂಗೋತ್ರಿಗೆ ಹೋಗಬೇಕು. ಗಂಗೋತ್ರಿಯೆಂಬ ಈ ಪುಟ್ಟ ಊರು ಸಮುದ್ರ ಮಟ್ಟದಿಂದ 3400 ಮೀಟರ್ ಎತ್ತರದಲ್ಲಿದೆ. ರಸ್ತೆಗಳು ಸರಿಯಿದ್ದರೆ ಜನವರಿಯಿಂದ ಮಾರ್ಚ್ ವರೆಗೆ ಬಿಟ್ಟು ಉಳಿದ ದಿನಗಳಲ್ಲಿ ವಾಹನಗಳು ಅಲ್ಲಿಯವರೆಗೂ ಹೋಗುತ್ತವೆ. ಅಲ್ಲಿಗೆ ಒಂದು ಹಂತದ ಪಯಣ ಮುಗಿದಂತೆ. ಅಲ್ಲಿಂದ ಮುಂದೆ ಶುರುವಾಗುವುದೇ ಪ್ರಯಾಸ. ಗಂಗೋತ್ರಿಯಿಂದ ತಪೋವನ 18 ಕಿಲೋಮೀಟರ್ ಚಾರಣ. ಗಂಗೆ ಹುಟ್ಟುವ ಘೋಮುಖವನ್ನು ಬಳಸಿಕೊಂಡು ತಪೋವನ ತಲುಪಲು ಬೆಳಿಗ್ಗೆಯಿಂದ ಸಂಜೆಯವರೆಗೆ ಆಗುತ್ತದೆಯಂತೆ. ನಾನಂತು ನೋಡಿಲ್ಲ. ಆ ತಪೋವನ ತಲುಪಲು ನನ್ನ ಪ್ರಯತ್ನ ಸಾಲದೋ? ಅಥವಾ ಉತ್ತರಾಖಂಡದ ಜನರ ಭಾಷೆಯಲ್ಲೇ ಹೇಳಬೇಕೆಂದರೆ ಎಲ್ಲದಕ್ಕೂ ಶಿವನ ಆಶೀರ್ವಾದ ಬೇಕು. ಅದೇ ಸಿಗಲಿಲ್ಲವೋ ನಾ ತಿಳಿಯೇ. ಆದರೆ ಇಂದಿಗೂ ತಪೋವನದೆಡೆಗಿನ ನನ್ನ ತಪ್ಪಸ್ಸು ಭಂಗವಾಗೆ ಉಳಿದಿದೆ. ಈ ಕನಸಿನತ್ತ ನನ್ನ ಪಯಣ ಶುರುವಾದ ದಿನ 2013 ಜೂನ್ 14.

ಕರ್ನಾಟಕದಲ್ಲೆಲ್ಲ ಮಳೆಗಾಲ ಪ್ರಾರಂಭವಾಗುವ ಸಮಯ. ಆದರೆ ದೆಹಲಿ ಹಾಗಲ್ಲ. ಇನ್ನೂ ಸುಡು ಸುಡು ಸುಡುವ ದಿನಗಳು. ದೆಹಲಿಯಿಂದ ನೋಯ್ಡಾಕ್ಕೆ ಬಹಳ ದೂರವೇನಿಲ್ಲ. ಹಾಗಾಗಿ ನಾನು ಯಾರಾದರೂ ಇರುವುದೆಲ್ಲಿ ಎಂದು ಕೇಳಿದರೆ ದೆಹಲಿ ಎಂದು ಬಿಡುತ್ತೇನೆ. ಜನ ಬೇಗ ಗುರುತಿಸಲಿ ಎಂಬ ಕಾರಣಕ್ಕೆ ಹಾಗನ್ನುತ್ತೇನೋ? ಅಥವಾ ಎಷ್ಟೇ ಹೇಳಿದರೂ ದೇಶದ ರಾಜಧಾನಿ ದೆಹಲಿಯಲ್ಲಿದ್ದೀರಾ!? ಎಂದು ಜನ ಇನ್ನೊಮ್ಮೆ ಕೇಳಲಿ ಎಂಬ ಸ್ವಾರ್ಥವೋ? ನಾ ಅರಿಯೆ.

 

  ರೂಮಿನಿಂದ ಆಫೀಸ್ ಎಂಟು ಕಿಲೋಮೀಟರ್ ಆಗುತ್ತಿತ್ತು. ಹಾಗಾಗಿ ದಿನಾಲು ರಿಕ್ಷಾ ಹಿಡಿದು ಹೋಗುತ್ತಿದ್ದೆವು. ಇದ್ದ ಆರು ಜನರಲ್ಲಿ ಮೊದಲು ಎದ್ದು ತಯಾರಾಗುವವರದು ಮೊದಲನೇ ಶಿಫ್ಟ್. ಅಂದು ಜೊತೆ ಬಂದವನು ಅಮೋಘ. ಸಾಧಾರಣವಾಗಿ ರಾಜಕೀಯ ಪರಿಸ್ಥಿತಿ, ಕಾಲೇಜ್ ಲೈಫ್, ಚಂದದ ಹುಡುಗಿಯರು, ಎದ್ವಾ ತದ್ವಾ ಕೆಲಸ ಕೊಡುವ ಮ್ಯಾನೇಜರ್ ಗಳ ಮೇಲೆ ಕೇಂದ್ರೀಕೃತವಾಗುವ ಮಾತುಕತೆ ದಿಢೀರನೆ ಹಿಮಾಲಯದ ದಿಕ್ಕಿಗೆ ತಿರುಗಿತ್ತು. ಮುಂಜಾನೆ ಆರು ಗಂಟೆಗೆ ಉದಯಿಸುವ ಸೂರ್ಯ ಒಂಬತ್ತಕ್ಕೆಲ್ಲ ಮೇಲೆ ಬಂದು ಬಿಸಿಲಿನ ಝಳ ಸುಡುತ್ತಿತ್ತು. ಜೊತೆಗೆ ಟ್ರಾಫಿಕ್ ಬೇರೆ. ಎಂಟು ಕಿಲೋಮೀಟರ್ ಸಾಗಲು ಕಡಿಮೆಯೆಂದರೂ 45 ನಿಮಿಷಗಳು ಬೇಕೇ ಬೇಕು.  ಇಂಥ ಸಮಯದಲ್ಲಿ ಹಿಮಾಲಯದ ವಿಷಯ ಮಾತನಾಡುವುದೇ ನಮಗೆ ಐಸ್ ಕ್ರೀಮ್ ತಿಂದಷ್ಟು ತಂಪೆನ್ನಿಸುತ್ತಿತ್ತು.  ಈ ಮೊದಲೇ ಅಮೋಘ ನೈನಿತಾಲ್, ಜಿಮ್ ಕಾರ್ಬೆಟ್ ಎಲ್ಲ ಕಡೆ ಹೋಗಿ ಬಂದದ್ದರಿಂದ ಅದರ ಸುಂದರತೆಯನ್ನು ಆತನೇ ಹೆಚ್ಚು ವಿವರಿಸುತ್ತಿದ್ದ. ನನಗೂ ಒಂದು ವರ್ಷದಿಂದ ಅವರು ಮಾಡಿದ ಟ್ರಿಪ್ ಗಳು, ಹಿಮಾಲಯದ ಬಗೆಗಿನ ಆಸ್ಥೆ ಎಲ್ಲವೂ ಸೇರಿ ಒಂದು ಟ್ರಿಪ್ ಮಾಡಲೇಬೇಕೆಂದು ನಿರ್ಧರಿಸಿದ್ದೆ.  “ಅಮೋಘ, ಇವತ್ ರಾತ್ರಿ ಹಿಮಾಲಯದ್ ಕಡೆ ಹೋಗೇ ಬಿಡೋಣ..” ಎಂದೆ.

ಅಮೋಘ ಮುಖದ ಮೇಲೆ ನಗು ತಂದುಕೊಂಡ. ಅವನಿಗೆ ಯಾವುದಾದರೂ ವಿಷಯದ ಬಗ್ಗೆ ಅನುಮಾನವಿದ್ದಾಗ ಹೀಗೆ ಹುಣಸೆ ಹಣ್ಣು ತಿಂದ ಮುಖ ಮಾಡಿ ನಗುತ್ತಾನೆ. ಆತನ ಸಂಶಯವನ್ನು ನಾನು ಕ್ಷಣದಲ್ಲೇ ಅರಿತಿದ್ದೆ. “ಇಲ್ಲಪಾ, ಪಕ್ಕಾ.. ಸೋಮವಾರ, ಮಂಗಳವಾರ ರಜೆ ಬಿಸಾಕಿ ಹೊರಟು ಬಿಡೋಣ. ನೀನು ಬರ್ತೀಯೋ ಬಿಡ್ತೀಯೋ ನಾನಂತೂ ಹೋಗೋದು ಗ್ಯಾರೆಂಟಿ..” ಎಂದು ದೃಢವಾಗಿ ಹೇಳಿ ಹೊರಗೆ ನೋಡುತ್ತ ಕುಳಿತೆ.

 

   “ಗೌತಿ, ಮಾತು ಮಾತಾಗಿರ್ಬೇಕು..” ಎಂದ. ಅಂದರೆ ಹೊರಡುವುದು ಆತನಿಗೂ ಓಕೆ ಆದರೆ ನಂತರ ನಾನು ಹಿಂದೆ ಸರಿಯುವಂತಿಲ್ಲ. “ಡನ್..” ಎಂದೆ ನಾನೂ.

 ಅಲ್ಲಿಂದ ಶುರುವಾದ ನನ್ನ ಪ್ರವಾಸಗಳು ಹೀಗೆ ಪ್ರಯಾಸವಿಲ್ಲದೆ ಪ್ರಾರಂಭವಾಗಿ ಬಿಡುತ್ತವೆ. ವಾರಗಟ್ಟಲೆ ಯೋಚಿಸಿ, ಹವಾಮಾನ ವರದಿ ನೋಡಿ, ಅಲ್ಲಿನ ಹೋಟೆಲ್ ಗಳಲ್ಲಿ ಜಾಗ ಸಿಗುತ್ತದೆಯೋ ಇಲ್ಲವೋ ನೋಡಿಕೊಂಡು ತಯಾರಿ ನಡೆಸುವ ಎಷ್ಟೋ ಪ್ರವಾಸಗಳು ತಯಾರಿಯಲ್ಲಿಯೇ ಉಳಿದು ಹೋಗುತ್ತವೆ. ಇದು ಸಹ ನನಗೆ ಅನುಭವ ಕಳಿಸಿದ ಪಾಠ.

  ಇತ್ತೀಚೆಗಷ್ಟೇ ಕಾರ್ಗಿಲ್, ಲೇಹ್, ಶ್ರೀನಗರ ಎಂದುಕೊಂಡು ಮೈ ಮೇಲೆ ಭೂತ ಹೊಕ್ಕವನಂತೆ ದೇಶದ ಗಡಿಯಲ್ಲೆಲ್ಲ ಬೈಕ್ ಓಡಿಸಿದ್ದೆನಲ್ಲ ಅದಕ್ಕೂ ಕೂಡ ನನ್ನ ಸಿದ್ಧತೆ nill ಎಂದೇ ಹೇಳಬಹುದು. ಶುಕ್ರವಾರ ಆಫೀಸ್ ನಿಂದ ಬೇಗ ಬಂದು ಹೆಂಡತಿಯ ಬಳಿ ಹೊರಡು ನಡಿ ಎನ್ನುತ್ತಾ ಬ್ಯಾಗ್ ಬೆನ್ನಿಗೇರಿಸಿ ಗಾಡಿಯ key ಗೆ ತಡಕಿದಾಗಲೇ ಹೆಂಡತಿ ಖುಷಿಯಿಂದ ಹೌ ಹಾರಿದ್ದು. ಇದರ ಬಗ್ಗೆ ಮುಂದೊಮ್ಮೆ ಮಾತಾಡೋಣ.

  ಒಂದು ಪ್ರವಾಸಕ್ಕೆ ಹೊರಡಬೇಕು ಎಂದಾಗ ಎಲ್ಲಿಗೆ ಎಂಬ ಪ್ರಶ್ನೆ ಮೂಡಿತ್ತು. ಆಫೀಸಿಗೆ ಹೋದ ಕೂಡಲೇ ಗೂಗಲ್ ಮ್ಯಾಪ್ ತೆಗೆದು ಕುಳಿತ ನಾವು ಹಲವು ಊರುಗಳನ್ನು ತಡಕಾಡಿದೆವು. ಹೋದರೆ ಹಿಮಾಲಯದ ಗರ್ಭಕ್ಕೆ ಹೋಗಬೇಕು ಎಂಬುದು ನನ್ನ ಮಾತು. ಹುಡುಕಾಡಿ, ಹುಡುಕಾಡಿ ಕೊನೆಗೂ ಗಂಗೆಯ ಮೂಲ ಗಂಗೋತ್ರಿಗೆ ಹೋಗಿ, ಅಲ್ಲಿಂದ ಗೋಮುಖದ ದಾರಿಯಿಂದ ತಪೋವನಕ್ಕೆ ಹೋಗಬೇಕು ಎಂದು ನಿರ್ಧರಿಸಿದೆವು. ಗೂಗಲ್ ಮ್ಯಾಪ್ ನೋಯ್ಡಾದಿಂದ ಗಂಗೋತ್ರಿಗೆ 12 ಗಂಟೆ ದಾರಿ ತೋರಿಸುತ್ತಿತ್ತು. ಅಂದರೆ ಮರುದಿನ ಸಂಜೇಗೆಲ್ಲ ಗಂಗೋತ್ರಿ ತಲುಪಿ ಬಿಡುತ್ತೇವೆ. ರಾತ್ರಿ ಅಲ್ಲಿಯೇ ಉಳಿದು, ಬೆಳಿಗ್ಗೆ ಬೆಳಿಗ್ಗೆ ಚಾರಣ ಪ್ರಾರಂಭಿಸಿ ಬಿಟ್ಟರೆ ಸಂಜೇಗೆಲ್ಲ ಗೋಮುಖ ಸೇರಿ ಬಿಡುತ್ತೇವೆ. ಮಾರನೆಯ ದಿನ ಅಲ್ಲಿಂದ 5 ಕಿಲೋಮೀಟರ್ ದೂರದ ತಪೋವನ ನೋಡಿ ಮತ್ತೆ ಕೆಳಗಿಳಿಯುವುದು. ಹತ್ತುವುದಕ್ಕಿಂತ ಇಳಿಯುವುದು ಸುಲಭ ಮತ್ತು ಹತ್ತಿದ ಅರ್ಧದಷ್ಟು ಕಡಿಮೆ ಸಮಯ ಸಾಕು. ಮರುದಿನ ಅಂದರೆ ಬುಧವಾರಕ್ಕೆಲ್ಲ ಮತ್ತೆ ಆಫೀಸ್ ಗೆ ಬಂದು ಬಿಡಬಹುದು. “Wonderfull Plan..!!” ಮನಸ್ಸಿಗೆ ಕುಳಿತಲ್ಲೇ ಕುಳಿತಿರಲು ಸಾಧ್ಯವಾಗಲಿಲ್ಲ. ನಮ್ಮ ಯೋಚನೆಯನ್ನು ಉಳಿದ ನಾಲ್ವರಿಗೆ ಹೇಳಿದರೆ ಏನೇನೋ ಕಾರಣ ಹೇಳಿ ಎಲ್ಲರು ತಪ್ಪಿಸಿಕೊಂಡರು. ಆದರೆ ನಾನೂ ಅಮೋಘ ಮಾತ್ರ ಏನಾದರಾಗಲಿ, ತಪೋವನದ ಚಳಿಯಲ್ಲಿ ಕುಳಿತು ತಪಸ್ಸು ಮಾಡಲೇಬೇಕೆಂದು ಸಿದ್ದರಾಗಿ ಬಿಟ್ಟೆವು. ಆ ದಿನ ಆಫೀಸ್ನಲ್ಲಿ ಅಂತೂ ಇಂತು ಕಾಲಹರಣ ಮಾಡಿ, ಮ್ಯಾನೇಜರ್ ಗೆ ರಜೆ ಅರ್ಜಿ ಹಾಕಿ, ಉಳಿದವರಿಗೆ ಕೈ ಬೀಸಿ ಹೊರಗೆ ಬಿದ್ದೆವು.

  ಅದುವರೆಗೂ ಹೊರಗಿನ ಪರಿವೆಯಿಲ್ಲದೆ ಏಸಿ ರೂಮಿನಲ್ಲಿ ಕುಳಿತಿದ್ದ ನನಗೆ ಹೊರಗೆ ಬರುತ್ತಲೇ ಏನೋ ವ್ಯತ್ಯಾಸವಾಗಿದೆ ಎಂದು ಅನ್ನಿಸಿಬಿಟ್ಟಿತು. ಮೂರೂ ಮೂರೂವರೆಯ ಹೊತ್ತಿಗೆಲ್ಲ ಹೊರಬಂದರೆ ಬದನೇಕಾಯಿ ಸುಟ್ಟು ಬಜ್ಜಿಯಾದಂತೆ ಆಗಿಬಿಡುತ್ತೇವಾ ಎಂಬಷ್ಟು ಧಗೆ ಇರುತ್ತದೆ. ಈ ದಿನ ಹಾಗಾಗದೆ ಸೂರ್ಯನ ಕುರುಹೇ ಕಾಣದಂತೆ ಆಗಸವನ್ನೇ ಮುಚ್ಚಿದ ಕಪ್ಪು ಮೋಡಗಳು. ನಾನು ಮಲೆನಾಡಿನ ಹುಡುಗ. ಮಳೆಯ ಮೋಡಗಳ್ಯಾವವು? ಹಾಗೆ ಪುಕ್ಕಟೆ ಸರಿದು ಹೋಗುವ ಮೋಡಗಳ್ಯಾವವು ಎಂಬುದು ಬೇಗ ಅರಿವಾಗಿ ಬಿಡುತ್ತದೆ. ಆಕಾಶದ ತುಂಬೆಲ್ಲ ಕರಿ ಮೋಡ ತುಂಬಿದೆ. ಹೇಗೆ ಸಾಧ್ಯ?? ನಾವು ಬೆಳಿಗ್ಗೆ ಬರುವಾಗ ಬಿಸಿಲಿತ್ತಲ್ಲ..!! ಅದಲ್ಲದೆ ಮಳೆ ಬರುವ ಸಮಯವಲ್ಲ ಇದು. ಬೇಕಂತಲೇ  ನಮ್ಮ ಪ್ರವಾಸಕ್ಕೆ ಅಡ್ಡಿ ಮಾಡಲು ನೋಡುತ್ತಿದೆಯಾ ಮಳೆ ಎಂದುಕೊಳ್ಳುತ್ತಲೇ ಅಮೋಘನ ಮುಖ ನೋಡಿದೆ. ಅಮೋಘ ಮತ್ತದೇ ಹುಣಸೆ ಹಣ್ಣು ತಿಂದ ನಗು ನಕ್ಕ. ಈ ಬಾರಿ ನನ್ನ ಸರದಿ..” ಅಮೋಘ, ಮಾತು ಮಾತಾಗಿರ್ಬೇಕು..” ಎಂದೆ ದೃಢವಾಗಿ. ಏನೂ ಮಾತನಾಡದೆ ತಲೆ ತಗ್ಗಿಸಿ ನನ್ನ ಜೊತೆ ನಡೆಯತೊಡಗಿದ ಆತ.

  ಇದು ನನ್ನ ಮೊದಲ ಚಾರಣವಾಗಿದ್ದರಿಂದ ಏನೇನು ತೆಗೆದುಕೊಂಡು ಹೋಗಬೇಕೆಂಬ ಕಲ್ಪನೆ ಸ್ವಲ್ಪವೂ ಇರಲಿಲ್ಲ. 3-4 ಜೀನ್ಸ್ ಪ್ಯಾಂಟ್, ಶರ್ಟ್ ಗಳು, ಒಂದು ಜಾಕೆಟ್, ಜೊತೆಗೆ ಗೋಮುಖದಲ್ಲಿ ಮಲಗಲು ದಪ್ಪನೆಯ ಚಾದರ ಎಲ್ಲವನ್ನು ಒಂದು ಬ್ಯಾಗಿನಲ್ಲಿ ತುಂಬಿದೆ. ಜೊತೆಯಲ್ಲೊಂದಿಷ್ಟು ಬಿಸ್ಕತ್ ಪ್ಯಾಕ್ ಗಳು, ಕೇಕ್, ವಾಟರ್ ಬಾಟಲ್ ಎಲ್ಲವೂ ಬ್ಯಾಗ್ ಸೇರಿಕೊಂಡವು. ಅಮೋಘ ಕೂಡ ಮಾಡಿದ ಟ್ರಿಪ್ ಗಳಲ್ಲಿ ಹೋಟೆಲ್ ಅಲ್ಲಿ ಉಳಿದು ವಾಪಸ್ ಬಂದ ಅನುಭವಗಳಿದ್ದವೇ ಹೊರತು ಚಾರಣ ಮಾಡಿದವನಲ್ಲ. ಗುಡ್ಡದ ನೆತ್ತಿಯ ಮೇಲೆ, ಆಗಸದ ನಕ್ಷತ್ರಗಳನ್ನು ಎಣಿಸುತ್ತ ಮಲಗುವ ಕಲ್ಪನೆಯೇ ನಮ್ಮಿಬ್ಬರಿಗೂ ದೈತ್ಯ ಬಲ ನೀಡಿತ್ತು. ಹಾಗಾಗಿ ಆ ಕ್ಷಣ ತುಂಬಿದ ಬ್ಯಾಗ್ ಬೆನ್ನಿಗೇರಿಸಿದಾಗಲೂ ಬಹಳ ಹಗುರವಿದ್ದಂತೆ ತೋರಿತು.

 ಸರಿ ಏಳು ಗಂಟೆಗೆಲ್ಲ ಮೆಟ್ರೋ ಹತ್ತಿ, ದೆಹಲಿಯ ಮಹಾರಾಣಾ ಪ್ರತಾಪ್ ಬಸ್ ಸ್ಟ್ಯಾಂಡ್ ಕಡೆ ನಮ್ಮ ಪ್ರಯಾಣ ಶುರುವಾಯಿತು. ದೆಹಲಿಯಲ್ಲಿ ಸಾಮಾನ್ಯ ದಿನಗಳಲ್ಲಿಯೇ ಆಕಾಶದ ನಕ್ಷತ್ರಗಳು ಕಾಣುವುದಿಲ್ಲ. ಧೂಳು, ಹೊಗೆ ತುಂಬಿಕೊಂಡಿರುತ್ತದೆ. ಅಂದೂ ಹಾಗೆಯೇ ಎಂದುಕೊಂಡು ನಾನೂ ಸುಮ್ಮನಿದ್ದೆ. ಆದರೆ ಮಧ್ಯಾಹ್ನ ನೋಡಿದ ಮೋಡ ಕರಗದೇ ಮತ್ತೂ ಘಾಡವಾಗಿ ನಗುತ್ತಿದೆ ಎಂಬ ಸತ್ಯ ನನಗೆ ತಿಳಿಯಲೇ ಇಲ್ಲ. ಬಸ್ ಏರಿ ಕುಳಿತು ನಾನೂ, ಅಮೋಘ ಎಷ್ಟೋತ್ತು ಮಾತನಾಡಿದೆವೋ? ಯಾವಾಗ ನಿದ್ರೆ ಹತ್ತಿತ್ತೋ ತಿಳಿಯಲಿಲ್ಲ.

  ತಂಪು ಗಾಳಿ ಮುಖಕ್ಕೆ ರಾಚಿ, ಚಳಿ ಚಳಿ ಎನ್ನಿಸಿದಾಗ ನನಗೆ ಎಚ್ಚರವಾಯಿತು. ಟೈಮ್ ನೋಡಿಕೊಂಡೆ. ಬೆಳಗಿನ ಜಾವ ಐದೂವರೆ. ಇನ್ನು ಬೆಳಕು ಹರಿದಿಲ್ಲ. ಹರಿದ್ವಾರದ ಹತ್ತಿರ ಬಂದೆವೇನೋ ಎಂದು ಹೊರಗಡೆ ನೋಡತೊಡಗಿದೆ. ನಾನು ಚಿಕ್ಕವನಿದ್ದಾಗ ಅಜ್ಜ ಅಜ್ಜಿ ಉತ್ತರ ಭಾರತದ ಪ್ರವಾಸ ಮುಗಿಸಿ ಬಂದು ಹೇಳಿದ ಕಥೆಗಳು ಮನಸಲ್ಲಿ ಮೂಡಿದವು. ಅದರಲ್ಲೂ ಗಂಗೆಯನ್ನು ನೋಡಬೇಕು. ಮನೆಯ ದೇವರ ಪೀಠದದಲ್ಲಿ ಗಂಗಾ ನೀರಿನ ತಾಮ್ರದ ಗಿಂಡಿಯೊಂದಿದೆ. ಚಿಕ್ಕವನಿರುವಾಗಿನಿಂದ ದಿನವೂ ಆ ಗಿಂಡಿಯನ್ನು ಎಲ್ಲ ದೇವರ ಜೊತೆ ಹೂವು ಗಂಧ ಹಚ್ಚಿ ಪೂಜಿಸಿದ್ದೇನೆ. ಮರಣ ಕಾಲದಲ್ಲಿ ಗಂಗಾ ನೀರನ್ನು ಬಾಯಿಗೆ ಬಿಟ್ಟರೆ ಅವರು ಸ್ವರ್ಗ ಸೇರುತ್ತಾರೆ ಎಂಬುದು ಪ್ರತೀತಿ. ಪವಿತ್ರತೆಗೆ ಇನ್ನೊಂದು ಹೆಸರು ಗಂಗೆ.

  ನೋಡಬೇಕು.. ಗಂಗಾ ನದಿಯನ್ನು ನೋಡಬೇಕು.. ಅವಳಲ್ಲಿ ಮುಳುಗೆದ್ದು ಶುಭ್ರವಾಗಬೇಕು. “ಗಂಗಾ ಸ್ನಾನ, ತುಂಗಾ ಪಾನ” ಎಂಬ ಮಾತಿದೆ. ತುಂಗಾ ಪಾನವಾಗಿದೆ. ಗಂಗಾ ಸ್ನಾನವಾಗಬೇಕು.. ಎದುರು ನೋಡುತ್ತಿದ್ದೆ.

  ಬಸ್ಸು ಕುಲುಕುತ್ತಾ ಕುಲುಕುತ್ತಾ ಮುಂದೆ ಸಾಗುತ್ತಿತ್ತು. ಎಲ್ಲ ಕಡೆ ಹೈವೇ ನಿರ್ಮಾಣ ಕಾರ್ಯ ನಡೆಯುತ್ತಿದ್ದರಿಂದ ರೋಡ್ ಸುಸ್ಥಿತಿಯಲ್ಲಿರಲಿಲ್ಲ. ಇದು ಸರ್ವೇ ಸಾಮಾನ್ಯ ವಿಷಯವಾದ್ದರಿಂದ ಹಾಗೆಯೇ ಜೋಲಿ ಹೊಡೆಯುತ್ತ, ಎಗರಿ ಬೀಳುತ್ತಾ ಕುಳಿತಿದ್ದೆ.  ಅರ್ಧ ಗಂಟೆಗೆಲ್ಲ ಕಂಡಕ್ಟರ್ ‘ಹರಿದ್ವಾರ, ಹರಿದ್ವಾರ’ ಎಂದು ಕೂಗಿದ. ಹೃಷಿಕೇಶಕ್ಕೆ ಹೋಗುವ ಬಸ್ಸಾದ್ದರಿಂದ ಬಸ್ ಸ್ಟ್ಯಾಂಡ್ ಗೆ ಹೋಗದೆ ಹರಿದ್ವಾರದಲ್ಲಿ ಇಳಿಯುವವರಿಗೆ ಅನುಕೂಲವಾಗುವಂತೆ ಅಲ್ಲಿಯೇ ಹೊರಗೆ ನಿಲ್ಲಿಸಿದರು.  ರಸ್ತೆಯ ಪಕ್ಕದಲ್ಲಿ ಸುಮಾರು ಹತ್ತು ಮಾರು ಅಗಲವಾಗಿರುವ ಜಾಗದಲ್ಲಿ ಕೆಂಪಾದ ನೀರು ಹರಿದುಕೊಂಡಿತ್ತು. ಅದರ ಎರಡು ಕಡೆಗಳಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತೆ ಕಟ್ಟೆ ಕಟ್ಟಿಡಲಾಗಿತ್ತು. ನನಗೆ ನಂಬಬೇಕೋ.. ಬಿಡಬೇಕೋ.. ಗಂಗೆ ಎಂಬ ಮಹಾನದಿ ಇಷ್ಟು ಸಣ್ಣಕೆ ಹರಿಯುತ್ತಾಳಾ!? ಎಂದು. ಅಮೋಘನಲ್ಲಿ ಕೇಳಿದೆ. “ಏನೋಪಾ, ನನಗು ತಿಳಿವಲ್ದು..” ಎಂದು ನಕ್ಕ ಆತ.

  ಸರಿ, ನಾವು ಕೆಂಪಗೆ ಹರಿಯುತ್ತಿದ್ದ (ನಾವು ಗಂಗಾ ಎಂದು ಭಾವಿಸಿದ್ದ) ನೀರಿನೆಡೆಗೆ ಹೋಗಿ ಮುಖ ತೊಳೆಯಲು ನೀರಿಗೆ ಕೈ ಹಾಕುತ್ತಿದ್ದಂತೆ ಮೈ ಜುಮ್ ಎಂದಿತು. ನೀರು ತಣ್ಣಗೆ ಕೊರೆಯುತ್ತಿತ್ತು. ಮೊದಲ ಬಾರಿಗೆ ಗಂಗೆಯಲ್ಲಿ ಮಿಂದರೆ ಮಾತ್ರ ಪವಿತ್ರವಲ್ಲ ಸ್ವಲ್ಪ ಪ್ರೋಕ್ಷಣೆ ಮಾಡಿಕೊಂಡರೂ ಪವಿತ್ರವೇ ಎಂದೆನ್ನಿಸಿತು.

  ಅಷ್ಟರಲ್ಲಿ ಸ್ಥಳೀಯರಿಬ್ಬರು ಬಂದು ನಾವು ನೋಡುತ್ತಿದ್ದಂತೆಯೇ ಅಂಗಿ, ಪ್ಯಾಂಟ್ ತೆಗೆದಿಟ್ಟು ಒಂದು ಟವೆಲ್ ಸುತ್ತಿಕೊಂಡು ಮೊಳಕಾಲ ನೀರಿಗಿಳಿದು ಬಡಬಡನೆ ಮೂರು ಬಾರಿ ಗಂಗೆಯಲ್ಲಿ ಮುಳುಗೆದ್ದರು. ಅವರು ನೀರಿನಲ್ಲಿ ಮುಳುಗೆದ್ದಿದ್ದಕ್ಕೆ ನನ್ನ ಮೈ ಮೇಲೆ ಚಳಿ ಗುಳ್ಳೆಗಳು ಎದ್ದಿದ್ದವು. ಚಳಿಯೆನೆಂದರೆ ನನಗೇನು ಭಯವಿಲ್ಲ ಎನ್ನುತ್ತಿದ್ದ ನನಗೆ ಗಂಗೆಯಲ್ಲಿ ಮೀಯುವುದು ಕನಸೇ ಎನ್ನಿಸಿ ಬಿಟ್ಟಿತು.

  ನೀರಿನಿಂದ ಮೇಲೆದ್ದು ಬಂದ ಅವರಲ್ಲಿ “ಭಾಯಿ ಸಾಬ್, ಗಂಗಾ ಮಯ್ಯಾ ಮೇ ನಹಾನಾ ತಾ.. ಯೇ ಹೀ ಹೇ ಕ್ಯಾ??” (ಸ್ನಾನ ಮಾಡುವ ಜಾಗ ಇದೇನಾ?) ಎಂದು ಕೇಳಿದೆ.

  ಅವರಿಗೂ ತಿಳಿಯಿತು ನಾವು ಹೊಸಬರೆಂದು. ಮೈ ಒರೆಸಿಕೊಳ್ಳುತ್ತ ನಮ್ಮ ಬಳಿ ಬಂದು “ನಹಿ ಭಯ್ಯಾಜಿ, ಯೇ ಥೋ ನಾಲಾ ಹೆ.. ಸ್ನಾನ್ ಘಾಟ್ ಇದರ್ ಸೆ ದೋ ಕಿಲೋಮೀಟರ್ ದೂರ್ ಹೆ..” (ಇದು ನೀರು ಹರಿಯುವ ಕಾಲುವೆ. ಸ್ನಾನ ಮಾಡುವ ಸ್ಥಳ 2km ದೂರದಲ್ಲಿದೆ.) ಎಂದರು.

  ಆಗ ತಿಳಿಯಿತು ಇದು ಗಂಗಾ ನದಿಯಲ್ಲ ಎಂದು. ಗಂಗೆ ಇಷ್ಟು ಸಣ್ಣಕೆ ಹರಿಯುತ್ತಿಲ್ಲ ಎಂದು ಖುಷಿಯೂ ಆಯಿತು.

  ನಾನು ಅವರ ಜೊತೆ ಮಾತಿಗಿಳಿದೆ. ನಾವು ಗಂಗೋತ್ರಿಗೆ ಹೋಗಬೇಕೆಂದಿದ್ದೇವೆ. ಹೇಗೆ? ಚಳಿ ಎಷ್ಟಿರಬಹುದು? ಅದು ಇದು ಎಂದು. ಅವರು ಕೊಟ್ಟ ವಿವರಣೆಯಿಂದ ನನಗೆ ಒಂದಂತೂ ಅರಿವಾಯಿತು. ಇವರೆಂದಿಗೂ ಗಂಗೋತ್ರಿ ನೋಡಿದವರಲ್ಲ ಎಂದು. ಸರಿ ಅವರ ಬಳಿ ಹರಿದ್ವಾರದ ರೋಪು ರೇಷೆ ತಿಳಿದುಕೊಂಡು ಸ್ನಾನ ಮಾಡುವ ಜಾಗಕ್ಕೆ ಹೋಗಿ ಶಿವನ ನಾಮ ಹೇಳಿಕೊಳ್ಳುತ್ತಾ ಗಂಗೆಯಲ್ಲಿ ಮುಳಿಗೆದ್ದೆವು. ಭಕ್ತಿಯ ಪರಾಕಾಷ್ಠೆ ಅದೇಕೋ ಹೆಚ್ಚಿ ದಡದ ಮೇಲೆ ಕುಳಿತು ನಾನು ಧ್ಯಾನವನ್ನು ಮಾಡಿದೆ. ಸರಿ ೭ ಗಂಟೆ ಆಗಿ ಹೋಗಿತ್ತು. ಸಂಜೆಯ ಒಳಗೆ ಗಂಗೋತ್ರಿ ತಲುಪಬೇಕು. ಬೇಗ ಬಸ್ ಸ್ಟಾಂಡ್ ಕಡೆ ಹೋಗಣ ದಾರಿ ಮದ್ಯ ಬೆಳಗಿನ ಉಪಹಾರವನ್ನು ಮುಗಿಸೋಣ ಎಂದುಕೊಂಡು ಗಂಗೆಯ ದಡದಿಂದ ಹೆಜ್ಜೆ ಕೀಳುತ್ತಲೇ ಕಪ್ಪು ಮೋಡಗಳೇ ತುಂಬಿದ್ದ ಆಗಸದಿಂದ ಮೊದಲ ಹನಿ ಮೈ ಮೇಲೆ ಬಿದ್ದಿತು. ಆಗಷ್ಟೇ ಗಂಗೆಯ ಪಾವಿತ್ರತೆಯಲ್ಲಿ ಮುಳಿಗೆದ್ದ ನನಗೆ ಅದರ ಅರಿವಾಗಲಿಲ್ಲ. ಅಮೋಘ ಕೂಡ ಅದರಿಂದ ಹೊರತಾಗಿರಲಿಲ್ಲ.

 

ಮುಂದುವರೆಯುತ್ತದೆ.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post