ಅನ್ವೇಷಣೆ ಹಾಗೂ ಸಂಶೋಧನೆ. ಬುದ್ದಿಜೀವಿ ಎನಿಸಿಕೊಂಡಿರುವ ಮಾನವನ ವಿಕಸನದ ಎರಡು ಮೆಟ್ಟಿಲುಗಳು. ಗಿಡ ಬಳ್ಳಿಗಳನ್ನು ದೇಹಕ್ಕೆ ಸುತ್ತಿಕೊಂಡು, ಹಸಿ ಹಸಿ ಮಾಂಸವನ್ನು ಗಬಗಬನೆ ತಿಂದು ಎಲ್ಲೆಂದರಲ್ಲಿ ಇದ್ದು ಬಿದ್ದು ಎದ್ದು ವಾಸಿಸುತ್ತಿದ್ದ ಜೀವಿಯೊಂದು ಇಂದು ಮೈಯ ತುಂಬೆಲ್ಲ ವಿವಿಧ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ಹೊತ್ತು, ಸಾವಿರಾರು ಬಗೆಯ ಆಹಾರವನ್ನು ಆಸ್ವಾದಿಸುತ್ತಾ, ಮೊಬೈಲು ಇಂಟರ್ನೆಟ್ಗಳೆಂಬ ವಸ್ತುಗಳನ್ನು ತನ್ನ ಜೀವನದ ಬಹುಮುಖ್ಯ ಅಂಗವನ್ನಾಗಿ ಮಾಡಿಕೊಂಡಿದೆ ಎಂದರೆ ಅದಕ್ಕೆ ಅನ್ವೇಷಣೆ ಹಾಗೂ ಸಂಶೋಧನೆ ಎಂಬ ಕ್ರಿಯೆಗಳು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅದು ಕಲ್ಲನ್ನು ಜಜ್ಜಿ ಬೆಂಕಿ ಹೊತ್ತಿಸುವುದರಿಂದ ಹಿಡಿದು ಸಹಸ್ರ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಯಾವುದೊ ಒಂದು ನಕ್ಷತ್ರದ ಬಗ್ಗೆ ಅಧ್ಯಯನ ಮಾಡುವವರೆಗೂ ವಿಸ್ತರಿಸಿದೆ ಎಂದರೆ ಅದಕ್ಕೆ ಮಾನವನ ಕುತೂಹಲ ಹಾಗೂ ಆ ಕುತೂಹಲದ ವ್ಯಕ್ತ ರೂಪ ಅನ್ವೇಷಣೆ ಹಾಗೂ ಸಂಶೋಧನೆಗಳೇ ಕಾರಣ ಎನ್ನಬಹುದು.
‘ಕಾರು ಅದೆಷ್ಟೇ ಶ್ರೀಮಂತವಾಗಿದ್ದರೂ ತಲುಪುವ ಗುರಿ ಬದಲಾಗದು’ ಎಂಬಂತೆ ಇಂದಿನ ನಾವುಗಳು ಉಪಯೋಗಿಸುವ ಎಲ್ಲಾ ವಸ್ತುಗಳು ಮಹತ್ತರವಾದ ಅನ್ವೇಷಣೆಗಳು ಎನ್ನಲಾಗದು. ಉದಾಹರಣೆಗೆ ಮಾರುಕಟ್ಟೆಯಲ್ಲಿ ನಾವಿಂದು ನೂರಾರು ಬಗೆಯ ಮೊಬೈಲ್ ಫೋನುಗಳನ್ನು ನೋಡುತ್ತೇವೆ. ಅವುಗಳಲ್ಲಿ ಕೆಲವು ಕೆಲವೇ ನೂರು ರೂಪಾಯಿಗಲ್ಲಿ ದೊರೆತರೆ ಕೆಲವು ಲಕ್ಷ ತೆತ್ತರೂ ಸಿಗವು. ಹಾಗಾದರೆ ಲಕ್ಷ ತೆತ್ತ ಮಾತ್ರಕ್ಕೆ ಆ ಫೋನಿನ ಮುಖೇನ ನಾವು ಸೌರಮಂಡಲದ ನೆರೆಯ ಗ್ರಹಗಳೊಟ್ಟಿಗೇನು ಸಂವಹಿಸಲಾಗುವುದಿಲ್ಲ. ಅಲ್ಲೂ ಸಹ ಒಂದು ಸಾಮಾನ್ಯ ಫೋನಿನಂತೆ ಶಬ್ದ ತರಂಗಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಷ್ಟೇ. ನಿಜವಾದ ಅನ್ವೇಷಣೆ ಎಂದು ಕರೆಯಲ್ಪಡುವುದು ಶಬ್ದತರಂಗಗಳೇ ಏನೆಂಬುದು ಸರಿಯಾಗಿ ಅರಿಯದ ಕಾಲದಲ್ಲಿ ಒಂದು ಸಾಧನದಿಂದ ಮತ್ತೊಂದು ಸಾಧನಕ್ಕೆ ಆಡುವ ಪದಗಳನ್ನು ಕಳಿಸಿ ಜಗತ್ತನೇ ನಿಬ್ಬೆರಾಗಾಗಿಸಿದಾಗ. ಸಂವಹನದ ಒಂದು ಹೊಸ ಮಾಧ್ಯಮವನ್ನೇ ಸೃಷ್ಟಿಸಿದಾಗ!
ಹೀಗೆ ಇಂದಿನ ನಮ್ಮ ಆಧುನಿಕ ಜೀವನ ಶೈಲಿ ಎಂಬುದು ಹಲವಾರು ಸಂಶೋಧನೆ ಹಾಗೂ ಅನ್ವೇಷಣೆಗಳ ಫಲವಾಗಿದೆ. ಹಾಗಾದರೆ ಪ್ರಾಣಿಗಳಂತಿದ್ದ ಮಾನವ ನಾಗರೀಕನಾಗಿ, ನಾಗರೀಕತೆಯಿಂದ ವೈಜ್ಞಾನಿಕನಾಗಿ ಬೆಳೆಯಲು ಕಾರಣವಾದ ‘ಮಹತ್ತರವಾದ’ ಅನ್ವೇಷಣೆಗಳಾದರೂ ಯಾವುವು?
1.ಬೆಂಕಿಯ ಸೃಷ್ಟಿ ಹಾಗೂ ನಿಯಂತ್ರಣ :
ಬೆಂಕಿಯ ಉಪಯೋಗ ಮಾನವನ ಸಂತತಿಯ ಮೊಟ್ಟ ಮೊದಲ ಅನ್ವೇಷಣೆ ಎನ್ನಬಹುದು. ನೈಸರ್ಗಿಕವಾಗಿ ಬೆಂಕಿಯೇನೊ ಕಾಣುತ್ತಿತ್ತು ಆದರೆ ಅದನ್ನು ಸೃಷ್ಟಿಸುವುದಾಗಲಿ ಅಥವಾ ನಿಯಂತ್ರಿಸುವುದಾಗಲಿ ಮಾನವನಿಗೆ ತಿಳಿದಿರಲಿಲ್ಲ. ಹಸಿ ಮಾಂಸವನ್ನು ಸುಡುವುದರಿಂದ ಹಿಡಿದು ಪ್ರಾಣಿಗಳಿಂದ ರಕ್ಷಣೆಗಾಗಿ, ರಾತ್ರಿಯ ಕತ್ತಲೆಯನ್ನು ಹೋಗಲಾಡಿಸಲು ಹಾಗೂ ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿ ಸಹಕಾರಿಯಾಯಿತು. ಇಂದಿನ ಸಿಡಿಮದ್ದುಗಳಿಂದ ಹಿಡಿದು ನಭೋಮಂಡಲಕ್ಕೆ ಉಪಗ್ರಹಗಳನ್ನು ಚಿಮ್ಮಿಸುವ ತಂತ್ರಜ್ಞಾನಕ್ಕೂ ಅಡಿಪಾಯ ಹಾಕಿಕೊಟ್ಟಿತು. ಬೆಂಕಿಯ ಸೃಷ್ಟಿ ಹಾಗೂ ನಿಯಂತ್ರಣ ಮಾನವ ಇತಿಹಾಸದ ಅತಿ ಮಹತ್ವವಾದ ಹಾಗೂ ಅಷ್ಟೇ ಪರಿಣಾಮಕಾರಿಯಾದ ಮೊದಲ ಅನ್ವೇಷಣೆ. ಅಲ್ಲದೆ ನಂತರದ ಎಲ್ಲಾ ಅನ್ವೇಷಣೆಗಳಿಗೂ ಅಡಿಪಾಯವನ್ನು ಹಾಕಿಕೊಟ್ಟಿತು.
2. ಮಾತು ಹಾಗು ಬರಹ :
ಮಾನವನ ಮೆದುಳಿನ ರಚನೆ ಆತನನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿಸಿತು. ಮಾತು ಸಹ ಆ ಭಿನ್ನತೆಯ ಪರಿಣಾಮವೇ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಮಾನವ ಶಬ್ದಗಳ ಉಚ್ಚಾರಣೆಯನ್ನೇನೋ ನೈಸರ್ಗಿಕವಾಗೇ ಕಲಿತಿರಬಹುದು ಆದರೆ ಆ ಶಬ್ದಗಳಿಗೆ ಒಂದು ಆಕಾರವನ್ನು ನೀಡಿ ಅದನ್ನು ಪರಸ್ಪರರ ನಡುವೆ ಸಂಭಾಷಿಸಲು ಬಳಸಿದ ಜಾಣ್ಮೆಯನ್ನು ಶ್ಲಾಘಿಸಲೇ ಬೇಕು. ಕೇವಲ ನಗುವುದು, ಅಳುವುದು ಹಾಗು ಕೋಪಿಸಿಕೊಳ್ಳುವುದೇ ಭೂಮಿಯ ಮೇಲಿನ ಭಾಗಶಃ ಜೀವಿಗಳ ಅಭಿವ್ಯಕ್ತಿ ಗುಣಗಳಾಗಿದ್ದರೆ, ಮಾನವ ತನ್ನ ಅನ್ವೇಷಣೆಯ ಮೂಲಕ ಪದಗಳೆಂಬ ಹೊಸ ಮಾಧ್ಯಮವನ್ನೇ ಸೃಷ್ಟಿಸಿ ಮುನ್ನಡೆದ. ಅಲ್ಲದೆ ಕಾಲಾಂತರದಲ್ಲಿ ತನ್ನ ಆಗು ಹೋಗುಗಳನ್ನು ತನ್ನ ಮುಂದಿನ ಪೀಳಿಗೆಗೆ ತಿಳಿಸಲು ಕಲ್ಲು ಬಂಡೆಗಳ ಮೇಲೆ ಕೆತ್ತನೆಯಯನ್ನು ಶುರುಮಾಡಿದ. ಕೆತ್ತನೆಯ ಕೆಲಸವೇ ಮುಂದೆ ಚಿತ್ರಗಳಾಗಿ, ಚಿತ್ರಗಳು ಪದಗಳಾಗಿ, ಕೊನೆಗೆ ಆಡುವ ಮಾತಿಗೆ ಬರಹವೆಂಬ ಒಂದು ಹೊಸ ಮೂರ್ತರೂಪವನ್ನೇ ಕೊಟ್ಟ. ಮಾನವ ಅಂದೇನಾದರೂ ಸ್ವರಗಳ ಉಚ್ಚಾರಣೆಯನ್ನು ಸಂವಹನ ಮಾಧ್ಯಮವಾಗಿಸದಿದ್ದರೆ ಹಾಗು ಆ ಸ್ವರಗಳಿಂದ ಬರಹವೆಂಬ ಅನ್ವೇಷಣೆಯ ಫಲವನ್ನು ಗಳಿಸದಿದ್ದರೆ ನಾವಿಂದು ಸಾವಿರ ಸಾವಿರ ಮಾತುಗಳನು ಕಂಪ್ಯೂಟರಿನ ಕೀಬೋರ್ಡ್’ನ ಮುಖೇನ ಕುಕ್ಕಲು ಆಗದಿತ್ತು! ಜಗತ್ತನ್ನು ಇಷ್ಟು ಸುಲಭವಾಗಿ ಅರಿಯಲಾಗದಾಗುತ್ತಿತ್ತು.
3.ಕೃಷಿ :
ಕೃಷಿಯ ಅನ್ವೇಷಣೆ ಸುಮಾರು ೧೦ ಸಾವಿರ ವರ್ಷಗಳ ಹಿಂದೆ ಆಗಿರಬಹುದೆಂದು ಅಂದಾಜಿಸಲಾಗಿದೆ. ಪರಿಸರದಲ್ಲಿ ಸಿಗುವ ಹಣ್ಣು ಹಂಪಲುಗಳು, ಗೆಡ್ಡೆ ಗೆಣೆಸುಗಳು ಹಾಗು ಪ್ರಾಣಿ ಪಕ್ಷಿಗಳನ್ನೇ ಆಹಾರವನ್ನಾಗಿಸಿಕೊಂಡಿದ್ದ ಮಾನವನಿಗೆ ಕೃಷಿಯ ಅನ್ವೇಷಣೆ ವರದಾನವಾಯಿತು. ನೈಸರ್ಗಿಕವಾಗಿ ಸಿಗುತ್ತಿದ್ದ ಆಹಾರವನ್ನು ತಿಂದು ಮುಗಿಸಿದ ನಂತರ ನಾಳಿನ ಆಹಾರಕ್ಕಾಗಿ ಮಾನವ ಅಲೆಯಬೇಕಿತ್ತು. ಹೀಗೆ ಅಲೆಮಾರಿಯಾಗಿದ್ದ ಮಾನವ ಕೃಷಿಯ ಸಲುವಾಗಿ ಒಂದೆಡೆ ನೆಲೆಸಲು ಪ್ರಾರಂಭಿಸುತ್ತಾನೆ. ಆಹಾರ ಸಂಗ್ರಹಣೆಯನ್ನು ಶುರು ಮಾಡುತ್ತಾನೆ. ಕೃಷಿ, ನಾಳಿನ ಹಸಿವನ್ನು ನೀಗಿಸಿತಲ್ಲದೆ ಊರು ನಗರಗಳು ಬೆಳೆಯಲೂ ಸಹ ಸಹಕಾರಿಯಾಯಿತು.
4.ಚಕ್ರ :
ಸಂಶೋಧಕರ ಪ್ರಕಾರ ಚಕ್ರದ ಅನ್ವೇಷಣೆ ಸುಮಾರು ೫೦೦೦ ವರ್ಷಗಳ ಹಿಂದೆ ಆಗಿರಬಹುದು ಎಂದು ಊಹಿಸಲಾಗಿದೆ. ಆ ಹೊತ್ತಿಗಾಗಲೇ ಮಾನವ ಕೃಷಿ ಹಾಗು ಹೈನುಗಾರಿಕೆಯನ್ನು ಕಲಿತಿರುತ್ತಾನೆ. ಅದು ಕೃಷಿಯಿಂದ ಬಂದ ಪೈರಾಗಲಿ ಅಥವಾ ವಾಸಸ್ಥಳವನ್ನು ನಿರ್ಮಿಸಿಕೊಳ್ಳಲು ಕಲ್ಲು ಬಂಡೆಗಳಾಗಲಿ ಎಲ್ಲವನ್ನೂ ಮಾನವ ತನ್ನ ಬೆನ್ನ ಮೇಲೆ ಹೊತ್ತು ಸಾಗಬೇಕಿತ್ತು. ಹೆಚ್ಚೆಂದರೆ ದನಕರುಗಳ ಮುಖೇನ ಕೆಲಸವನ್ನು ಮಾಡಿಕೊಳ್ಳುತ್ತಿದ್ದ. ಹಾಗಾಗಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಶಕ್ತಿ ಹಾಗು ಸಮಯ ವ್ಯರ್ಥ ಕೆಲಸವಾಗಿದ್ದಿತ್ತು. ಚಕ್ರದ ಅನ್ವೇಷಣೆ ಈ ಎಲ್ಲ ಕೆಲಸವನ್ನು ಸರಾಗವಾಗಿಸಿತು. ವಸ್ತುಗಳನ್ನು ಸಾಗಿಸುವಾಗ ಎದಿರಾಗುತ್ತಿದ್ದ ಎಲ್ಲ ಸವಾಲುಗಳಿಗೂ ಪರಿಹಾರವನ್ನು ಒದಗಿಸಿತು. ವಸ್ತುಗಳನ್ನು ಹೊತ್ತೊಯ್ಯುವ ಗಾಡಿಗಳು ಶುರುವಾಯಿತು. ನಾಗರಿಕತೆಯ ಭದ್ರ ಆಡಿಪಾಯವಾಯಿತು. ಚಕ್ರದ ವಿನಃ ಪ್ರಸ್ತುತ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು. ಚಕ್ರದ ಅನ್ವೇಷಕ ಯಾರೆಂದು ನಮಗೆ ತಿಳಿಯದಿರಬಹುದು ಆದರೆ ಆತನ ಅಂದಿನ ಆ ಸಂಶೋಧನೆಗೆ ಇಂದಿನ ನಾವೆಲ್ಲರೂ ತಲೆಬಾಗಲೇಬೇಕು.
5.ಮುದ್ರಣಾಲಯ (Printing Press) :
ನಾಗರಿಕತೆಯ ಹಾದಿಯಲ್ಲಿ ಮಾನವ ಬರಹವನ್ನು ಕಲಿತು ಅದನ್ನು ಹಾಳೆಗಳ ಮೇಲೆ ಮೂಡಿಸುವುದ ಅರಿತ. ಹಲವಾರು ಹಾಳೆಗಳನ್ನು ಜೋಡಿಸಿ ಪುಸ್ತಕವೆಂಬ ಮಹಾ ಚೈತನ್ಯವನ್ನು ಹುಟ್ಟು ಹಾಕಿದ. ಇಂದು ನಾವುಗಳು ಇತಿಹಾಸವನ್ನು ಕೊಂಚ ಸರಾಗವಾಗಿ ಅರಿಯಬಲ್ಲರೆಂದರೆ ಅದು ಪುಸ್ತಕಗಳ ಜಾದು ಎನ್ನಬಹುದು. ಸರಿ ಸುಮಾರು ಹದಿನೈದನೆಯ ಶತಮಾನದ ಮಧ್ಯದವರೆಗೂ ಪುಸ್ತಕಗಳು ಮಾನವನ ಕೈಯ ಬರವಣಿಗೆಯಲ್ಲೇ ಮೂಡುತ್ತಿದ್ದವು. ೧೪೪೮ ರಲ್ಲಿ ಜೋಹಾನ್ಸ್ ಗುಟೆನ್ಬರ್ಗ್ ಎಂಬಾತ ಜೆರ್ಮನಿಯಲ್ಲಿ ಪ್ರಿಂಟಿಂಗ್ ಪ್ರೆಸ್ ಯಂತ್ರವನ್ನು ಸಂಶೋಧಿಸುತ್ತಾನೆ. ಆತನ ಈ ಸಂಶೋಧನೆ ಮುದ್ರಣಾಲಯದ ಒಂದು ಹೊಸ ಲೋಕವನ್ನೇ ಸೃಷ್ಟಿಸುತ್ತದೆ. ಅದು ಹಲವು ಬಗೆಯ ಧಾರ್ಮಿಕ ಪುಸ್ತಕಗಳಾಗಲಿ ಅಥವಾ ಯಾರೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರವಾಗಿರಲಿ ಅಥವಾ ಒಂದು ಕಾರ್ಯಕ್ರಮದ ಕಿರುಹೊತ್ತಿಗೆಯಾಗಿರಲಿ(ಪಾಂಪ್ಲೆಟ್) ಅವುಗಳನ್ನೆಲಾ ಸಾವಿರಾರು ಜನರಿಗೆ ಕನಿಷ್ಠ ಸಮಯದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿ ವಿತರಿಸಬಲ್ಲ ಯಂತ್ರವನ್ನು ಹುಟ್ಟು ಹಾಕಿದ ಶ್ರೇಯ ಜೋಹಾನ್ಸ್ ಗುಟೆನ್ಬರ್ಗ್ನಿಗೆ ಸೇರುತ್ತದೆ. ದಿನಪತ್ರಿಕೆ, ಮ್ಯಾಗಜಿನ್ ಹಾಗು ಇಂದಿನ ದೃಶ್ಯ ಮಾಧ್ಯಮಗಳ ಉಗಮಕ್ಕೂ ಒಂದು ನಿಟ್ಟಿನಲ್ಲಿ ಮುದ್ರಣಾಲಯದ ಅವಿಷ್ಕಾರವೇ ಕಾರಣವೆಂದರೆ ಸುಳ್ಳಾಗದು.
6.ಸ್ಟೀಮ್ ಎಂಜಿನ್ :
ಕೈಗಾರೀಕರಣದ ಹರಿಕಾರಕವೆಂದೇ ಕರೆಯಲ್ಪಡುವ ಸ್ಟೀಮ್ ಎಂಜಿನ್/ಉಗಿಯಂತ್ರದ ಸಂಶೋಧನೆಯ ಕೀರ್ತಿ ಇಂಗ್ಲೆಂಡಿನ ಸಂಶೋಧಕರಾಗಿದ್ದ ಎಡ್ವರ್ಡ್ ಸೊಮರ್ಸೆಟ್ ಹಾಗು ಥಾಮಸ್ ಸಾರ್ವೆಯವರಿಗೆ ಸಲ್ಲುತ್ತದೆ. ಶಾಖ ಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು ಸೃಷ್ಟಿಸಬಲ್ಲ ಈ ಹೊಸ ಆವಿಷ್ಕಾರ ಜಗತ್ತಿನ ಬೆಳವಣಿಗೆಯ ದಿಕ್ಕನೇ ಬದಲಾಯಿಸಿತು. ಮೊದಲು ಗಣಿಗಳಲ್ಲಿ ಅಡಗಿರುವ ನೀರನ್ನು ಹೊರ ಹಾಕಲು ಬಳಕೆಯಾದ ಎಂಜಿನ್ ಮುಂದೆ ಜಗತ್ತನೇ ಜೋಡಿಸಬಲ್ಲ ಕಾರು, ರೈಲು, ವಿಮಾನ ಅಲ್ಲದೆ ಭಾಗಶಃ ಕಾರ್ಖಾನೆಗಳ ಹುಟ್ಟಿಗೂ ಕಾರಣವಾಯಿತು. ಎಂಜಿನ್ಗಳ ಆವಿಷ್ಕಾರವೇನಾದರೂ ಆಗದೆ ಹೋಗಿದ್ದರೆ ಅಥವಾ ಕೊಂಚ ವಿಳಂಬವಾಗಿದ್ದರೂ ಸಹ ನಮ್ಮ ಇಂದಿನ ಬೆಳವಣಿಗೆಯ ದಿಶೆ ಯಾವ ಹಾದಿಯಲ್ಲಿ ಸಾಗಿರುತ್ತಿತ್ತು ಎಂಬುದ ಊಹಿಸಲಾಗದು. ಅಂದು ಎಂಜಿನ್ನ ಆವಿಷ್ಕಾರವಾಗದಿದ್ದರೆ ಸೈಕಲ್ಲೋ, ಎತ್ತಿನ ಬಂಡಿಗಳೋ ಅಥವಾ ಕುದುರೆ ಗಾಡಿಗಳೋ ಇಂದಿಗೂ ಚಲನೆಯ ಮೂಲವಾಗಿರುತ್ತಿದ್ದವು.
7.ಲಸಿಕೆ (ವ್ಯಾಕ್ಸಿನೇಷನ್) :
ಯಾವುದೇ ಒಂದು ಕಾಯಿಲೆ ಬಾರದ ಹಾಗೆ ಆ ರೋಗಾಣುವಿನ ವಿರುದ್ಧ ಹೋರಾಡಲು ಜೀವಿಯ ದೇಹವನ್ನು ಪೂರ್ವಭಾವಿಯಾಗಿ ಸಜ್ಜಾಗಿಸುವ ಪ್ರಕ್ರಿಯೆಯನ್ನು ವ್ಯಾಕ್ಸಿನೇಷನ್ ಎನ್ನಬಹುದು. ಸಿಡುಬು ಜಗತ್ತನ್ನು ಕಾಡಿದ ಅತ್ಯಂತ ಕ್ರೂರ ಕಾಯಿಲೆ. ಸಿಡುಬು ಬಂತೆಂದರೆ ಸಾವು ಖಚಿತವೆಂದು ಭಾವಿಸಲಾಗುತ್ತಿತ್ತು. ಊರಿಗೆ ಊರೇ ಪಲಾಯನವಾಗಬೇಕಿತ್ತು! ಕ್ರಿ.ಶ 1876ರವರೆಗೂ ಕೋಟ್ಯಾನುಕೋಟಿ ಜನರು ಮಾರಣಾಂತಿಕ ಸಿಡುಬಿಗೆ ಬಲಿಯಾದರು. ಶತಕಗಳು ಕಳೆದರೂ ಮಾನವ ಸಿಡುಬೆಂಬ ದೈತ್ಯಕ್ಕೆ ಔಷಧಿಯನ್ನು ಕಂಡುಹಿಡಿಯಲಾಗಲಿಲ್ಲ.
ಎಡ್ವರ್ಡ್ ಜೆನ್ನರ್. ಶಾಲೆಗಳ ಪಠ್ಯಪುಸ್ತಕಗಳಲ್ಲಿ ಒಮ್ಮೆಯಾದರೂ ಈತನ ಹೆಸರನ್ನು ಕೇಳಿರುತ್ತೇವೆ. ‘ಫಾದರ್ ಆಫ್ ವ್ಯಾಕ್ಸಿನೇಷನ್’ ಎಂಬ ಅನ್ವರ್ಥ ನಾಮದ ಮೂಲಕ. ಜಗತ್ತೇ ಸಿಡುಬಿನ ವೈರಾಣುವನ್ನು ಕೊಲ್ಲಲು ವಿವಿಧ ಬಗೆಗಳನ್ನು ಪ್ರಯತ್ನಿಸಿ ಕೈಕಟ್ಟಿ ಕುಳಿತಾಗ ಎಡ್ವರ್ಡ್ ಜೆನ್ನರ್ ‘ಥಿಂಕ್ ಔಟ್ ಆಫ್ ದಿ ಬಾಕ್ಸ್’ ಎಂಬುವಂತೆ ಒಂದು ವೈರಾಣುವಿನ ವಿರುದ್ಧ ಮತ್ತೊಂದು ವೈರಾಣುವನ್ನು ಬಳಸಿ ಅದು ಬಾರದೆ ಇರುವ ಹಾಗೆ ತಡೆಗಟ್ಟುವ ಒಂದು ಹೊಸ ಬಗೆಯನ್ನೇ ಆವಿಷ್ಕರಿಸಿದ! ಸಿಡುಬಿಗೆ ಈ ಬಗೆಯನ್ನು ಪರೀಕ್ಷೆ ಮಾಡಿ ಯಶಸ್ವಿಯೂ ಆದ. ಜಗತ್ತನ್ನೇ ಸಿಡುಬೆಂಬ ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಿದ. ಜೆನ್ನರ್’ನ ಆವಿಷ್ಕಾರ ಮುಂದಿನ ಹಲವಾರು ಲಸಿಕೆಗಳ ಉಗಮಕ್ಕೆ ಕಾರಣವಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯೇ ಆಯಿತು.
8. ದೂರವಾಣಿ :
ದೂರವಾಣಿ ಅಥವಾ ಟೆಲಿಫೋನ ಆವಿಷ್ಕಾರದ ಮೊದಲು ದೂರ ದೂರದ ಸ್ಥಳಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಸಂದೇಶವನ್ನು ರವಾನಿಸಲು ಇದ್ದ ವ್ಯವಸ್ಥೆ ಟೆಲಿಗ್ರಾಫ್ ಅಥವಾ ಅಂಚೆತಂತಿ. ಟೆಲಿಗ್ರಾಪ್ನಲ್ಲಿ ಕಳುಹಿಸಲಾಗುತಿದ್ದ ಸಂದೇಶ ಕೇವಲ ಸಂಕೇತದ ರೂಪವಾಗಿರುತ್ತಿದ್ದವು. ಅಂತಹ ಕಾಲದಲ್ಲಿ ಮಾನವ ಮಾತನಾಡುವ ಸಾಮಾನ್ಯ ಪದಗಳನ್ನೇ ಒಂದು ತಂತಿಯ ಮುಖೇನ ಯಥಾವತ್ತಾಗಿ ದೂರ ದೂರದ ಜಾಗಕ್ಕೆ ರವಾನಿಸಬಲ್ಲನಾದನೆಂದರೆ ಅದು ನಂಬಲಸಾಧ್ಯವಾಗಿತ್ತು. ಹೀಗೆ ದೂರವಾಣಿಯ ಆವಿಷ್ಕಾರ ದೂರಸಂಪರ್ಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮೂಡಿಸಿತು. ಹಲವಾರು ವಿಜ್ಞಾನಿಗಳ ಸಂಶೋಧನೆಯ ಬಳಿಕ ಟೆಲಿಫೋನ್’ನ ಪೇಟೆಂಟ್ 1876 ರಲ್ಲಿ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂಬೆಲ್’ನ ಪಾಲಾಗುತ್ತದೆ. ಇಂದು ನಾವು ಕಾಣುವ ಮೊಬೈಲ್ ಫೋನ್, ಟೆಲಿವಿಷನ್ ಹಾಗೂ ಇನ್ನು ಹಲವು ತಂತ್ರಜ್ಞಾನಗಳು ದೂರವಾಣಿಯ ಉಪ ಉತ್ಪನ್ನಗಳೇ ಬಿಟ್ಟರೆ ಅವುಗಳು ಹೊಸ ಆವಿಷ್ಕಾರಗಳೆಂದು ಕರೆಸಿಕೊಳ್ಳುವುದಿಲ್ಲ
9. ವಿದ್ಯುತ್ :
ನಮ್ಮ ದೈನಂದಿನ ಜೀವನದ ಅದಷ್ಟೂಇಲೆಕ್ಟ್ರಾನಿಕ್ ವಸ್ತುಗಳಿಗೆ ವಿದ್ಯುತ್ತೇ ಜೀವ. ವಿದ್ಯುತ್’ನ ವಿನಃ ಮಾನವನ ಉಪಯೋಗದ ಅಷ್ಟೆಲ್ಲಾ ವಸ್ತುಗಳು ಸತ್ತು ಬಿದ್ದ ಕಟ್ಟಿಗೆಯಾಗುತ್ತವೆ. ವಿದ್ಯುತ್ತು ನೈಸರ್ಗಿಕವಾಗೇ ಸಿಗುತ್ತಿದ್ದರೂ ಮಾನವನ ಅರಿವಿಗೆ ಬರಲು ಶುರುವಾಗಿದ್ದು ಸುಮಾರು ಹದಿನೆಂಟನೆಯ ಶತಮಾನದ ಆಸುಪಾಸಿನಲ್ಲಿ. ಬೆಂಜಮಿನ್ ಫ್ರಾಂಕ್ಲಿನ್’ನಿಂದಿಡಿದು ನಿಕೋಲಸ್ ಟೆಸ್ಲಾರವರೆಗೂ ನಡೆದ ವಿವಿಧ ಬಗೆಯ ಪ್ರಯೋಗದ ಮೂಲಕ ವಿದ್ಯುತ್ತ್ ಜನರ ಮನೆಮಾತಾಯಿತು. ಆದರೆ ವಿದ್ಯುತ್’ನ ವ್ಯಾಪಕ ಬಳಕೆ ಸಾಧ್ಯವಾದದ್ದು ಥಾಮಸ್ ಎಡಿಸನ್’ನ ವಿದ್ಯುತ್ ಬಲ್ಬ್’ನ ಆವಿಷ್ಕಾರದ ಮೂಲಕ. ವಿದ್ಯುತ್ತ್ ಬಲ್ಬ್’ಗಳು ಜನರ ಜೀವನದ ಅಂಗಗಳಾದವು. ಶತಮಾನಗಳ ಅಂಧಕಾರವನ್ನು ಕ್ಷಣಮಾತ್ರದಲ್ಲಿ ಹೋಗಲಾಡಿಸಿದವು. ವಿದ್ಯುತ್ತ್ ಇಂದು ಮಾನವನ ಒಂದು ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ.
10. ಕಂಪ್ಯೂಟರ್ ಹಾಗು ಇಂಟರ್ನೆಟ್ :
ಆಧುನಿಕ ಜಗತ್ತಿನ ದಿ ಗ್ರೇಟೆಸ್ಟ್ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಹಾಗು ಇಂಟರ್ನೆಟ್’ಗಳು ಮಹತ್ತರವಾದವು. ಕೆಲವೇ ದಶಕಗಳ ಹಿಂದಷ್ಟೇ ಸಂಶೋಧಿಸಲ್ಪಟ್ಟ ಇವುಗಳು ಆಧುನಿಕ ಮಾನವನ ಅವಿಭಾಜ್ಯ ಅಂಗಗಳಾಗುತ್ತಾವೆಂದು ಯಾರು ಸಹ ಭಾವಿಸಿರಲಿಲ್ಲ. ಇಂದು ಜೋತಿಷ್ಯಾತ್ರದಿಂದಿಡಿದು ವಧು-ವರರು ಮದುವೆಯಾಗುವವರೆಗೂ ಇವುಗಳು ಎಲ್ಲರ ಬೇಡಿಕೆಯಾಗಿವೆ ಎಂದರೆ ಇವುಗಳ ಅವಶ್ಯಕತೆ ನಮಗೆ ಎಷ್ಟಿದೆ ಎಂದು ಊಹಿಸಬಹುದು. ಜಗತ್ತು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಶಿಕ್ಷಣ ಹಾಗೂ ಇನ್ನು ಹಲವು ಕ್ಷೇತ್ರಗಳಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡಿದೆ ಎಂದರೆ ಅದಕ್ಕೆ ಕಂಪ್ಯೂಟರ್ ಹಾಗು ಇಂಟರ್ನೆಟ್’ಗಳ ಕೊಡುಗೆ ಅಪಾರವಾದದ್ದು. ಕಂಪ್ಯೂಟರ್’ನ ಆವಿಷ್ಕರಿಸಿದ ಶ್ರೇಯ ಚಾರ್ಲ್ಸ್ ಬ್ಯಾಬೇಜ್ನದಾದರೆ ಇಂಟರ್ನೆಟ್ ಹಲವಾರು ಸಂಶೋಧಕರ ಫಲ. ವಿನ್ಟ್ ಸರ್ಫ್ ಹಾಗು ರಾಬರ್ಟ್ ಖಾಹ್ನ್’ರ ಕೆಲಸವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.
ಹೀಗೆ ಗಿಡಮರಗಳಲ್ಲಿ ವಾಸಿಸುತ್ತಿದ್ದ ಪ್ರಾಣಿಯೊಂದು ಮಾನವನಾಗಿ, ನಾಗರೀಕನಾಗಿ, ವೈಜ್ಞಾನಿಕನಾಗಿ ಹಾಗೂ ಮುಂದೊಂದು ದಿನ ಯಾಂತ್ರಿಕನಾದರೂ ಅವುಗಳಿಗೆಲ್ಲ ಇಂತಹ ಪಾತ್ ಬ್ರೇಕಿಂಗ್ ಅನ್ವೇಷಣೆ ಹಾಗೂ ಸಂಶೋಧನೆಗಳೇ ಕಾರಣವಾದವು ಎನ್ನಬಹುದು. ಅದು ಗೆಲಿಲಿಯೋನ ಅಭಿವೃದ್ಧಿ ಪಡಿಸಿದ ದೂರದರ್ಶಕವಾಗಲಿ ಅಥವಾ ರೈಟ್ ಸಹೋದರರ ವಿಮಾನವಾಗಲಿ ಅಥವಾ ಪೆನಿಸಿಲಿನ್ ಪ್ರತಿಜೀವಕವನ್ನು (Antibiotic) ಕಂಡು ಹಿಡಿದು ವೈದ್ಯಕೀಯ ಕ್ಷೇತ್ರವನ್ನೇ ಪುಳಕಗೊಳಿಸಿದ ಅಲೆಕ್ಸಾಂಡರ್ ಪ್ಲೇಮಿಂಗ್’ನ ಆವಿಷ್ಕಾರವಾಗಲಿ ಅಥವಾ ರೆಫ್ರಿಜಿರೇಟರ್, ಕ್ಯಾಮೆರಾ, ಮೊಬೈಲ್ ಫೋನುಗಳಾಗಲಿ ಹೀಗೆ ಸಾಲು ಸಾಲು ಆವಿಷ್ಕಾರಗಳು ನಮ್ಮ ಇಂದಿನ ಬದುಕನ್ನು ರೂಪಿಸಿವೆ. ಆದರೆ ‘ಗಡಿಯಾರ ಚಿನ್ನದಾದರೂ ಸಮಯವನ್ನು ಹಿಡಿಯಲಾಗದು’ ಎಂಬಂತೆ ಇತ್ತೀಚಿನ ಆವಿಷ್ಕಾರಗಳು ಹೆಚ್ಚಾಗಿ ಕೇವಲ ಮೂಲ ವಸ್ತುವಿಗೆ ಬಣ್ಣ ಲೇಪಿಸಿದಂತೆ ಆಗುತ್ತಿದೆ. ಒಂದು ಮೊಬೈಲ್ ಫೋನನ್ನು ‘ಅಭಿವೃದ್ಧಿ’ ಪಡಿಸಿದಾಗ ನಾವುಗಳು ತೋರುವ ಸಂತಸ ಒಂದು ಹೊಸ ತಳಿಯ ಭತ್ತವನ್ನು ‘ಆವಿಷ್ಕರಿಸಿದಾಗ’ ತೋರದಿರುವುದು ಖೇದನೀಯ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಇಂತಹ ಅಭೂತಪೂರ್ವ ಸಂಶೋಧನೆ ಹಾಗು ಆವಿಷ್ಕಾರಗಳಿಂದ ಪ್ರೇರಿತರಾಗಿ ಇಂತಹದೇ ಹಲವನ್ನು ಮುಂದಿನ ದಿನಗಳಲ್ಲಿ ತರಲು ನಾವೆಲ್ಲರೂ ಶಕ್ತರಾಗಬೇಕು. ಯುಕ್ತರಾಗಬೇಕು.
Facebook ಕಾಮೆಂಟ್ಸ್