ನಾನು ಎಂತಹ ಮನುಷ್ಯ ಎಂಬುದು ನನಗೆ ಗೊತ್ತು. ಯಾವುದಾದರೂ ಒಂದು ಹುಚ್ಚು ಅಂಟಿಕೊಂಡು ಬಿಟ್ಟಿತೆಂದರೆ ಅದರಲ್ಲೇ ಕಳೆದು ಹೋಗುವಷ್ಟು ಅಬ್ಬೇಪಾರಿ. ಕೆಲವರು ಇರುವುದೇ ಹಾಗೆ. ಪ್ರೀತಿಸಿದರೆ, ಪ್ರೀತಿಸಿರುವವರು ನನಗೆ ಮಾತ್ರ ಸ್ವಂತ ಎನ್ನುವಷ್ಟು ಅತಿರೇಕ. ಓದಲು ಕುಳಿತರೆ ಊಟ ಮಾಡಿರುವೆನಾ? ಮಲಗುವ ಸಮಯವಾ? ಸ್ನಾನ ಮಾಡಿ ಎಷ್ಟು ದಿನಗಳಾದವು? No. ಅರಿವೆ ಪರಿವೆಗಳೇ ಇಲ್ಲದ ಓದು. ಪ್ರವಾಸ, ಟ್ರೆಕಿಂಗ್ ಎಂದು ಬ್ಯಾಗ್ ಬೆನ್ನಿಗೇರಿಸಿ ಹೊರಟರೆ ಎಷ್ಟು ಕಿಲೋಮೀಟರ್ ನಡೆದದ್ದು? ಕಾಲು ಪದ ಹೇಳುತ್ತಿದೆಯಾ? ಮೆದುಳಿಗೆ ಮತ್ತು ದೇಹದ ಸಂತುಲನ ಉಳಿದಿದೆಯಾ? ಇಲ್ಲ.. ಆ ಬಗ್ಗೆ ಯೋಚನೆಯೇ ಬರುವುದಿಲ್ಲ. ಆನೆ ನಡೆದದ್ದೇ ದಾರಿ ಎಂಬಂಥ ಬದುಕು. ಸಾವಿರ ಸಾವಿರ ಕಿಲೋಮೀಟರ್ ಬೈಕ್, ಕಾರ್ ಹತ್ತಿ ಹೊರಟು ಬಿಡುವವರು, ಕೆಲಸವೆಂದರೆ ಹೆಂಡತಿ ಮಕ್ಕಳನ್ನು ಮರೆತು ಕೂರುವವರು, ಹಗಲಿನಲ್ಲೂ ಕುಡಿಯುವವರು, ಸೋಷಿಯಲ್ ಮೀಡಿಯಾಗಳಲ್ಲೇ ಕಳೆದು ಹೋಗುವವರು, 3D, 4D ಆಟಗಳಿಗೆ ತಮ್ಮನ್ನು ಮಾರಿಕೊಳ್ಳುವವರು ಯೋಚಿಸುತ್ತ ಹೋದರೆ ಜಗತ್ತೇ ಚಟಮಯ ಎನ್ನಿಸಿ ಬಿಡುತ್ತದೆ. ಅತಿಯಾಗಿ ಯಾವುದನ್ನೇ ಮಾಡಿದರು ಅದು ಚಟವೇ. ಇಂತಹ ಸಾಲಿನಲ್ಲಿ ನಿಲ್ಲುವ ನಾನು ಯಾವುದೇ ಹವ್ಯಾಸ ರೂಢಿಸಿಕೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸುತ್ತೇನೆ. ಯಾಕೆಂದರೆ ಹವ್ಯಾಸಗಳು ಚಟವಾಗಿ ಮಾರ್ಪಡಲು ನನ್ನಂಥವರಿಗೆ ಬಹಳ ಸಮಯ ಬೇಡ. ದೆಹಲಿಯಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ನನಗೆ ವೀಕ್ ಎಂಡ್ ಪಾರ್ಟಿಗಳು, ಸೆಲೆಬ್ರೇಷನ್ ಪಾರ್ಟಿಗಳು, ಆಫೀಸ್ ಟ್ರಿಪ್’ಗಳು ಎಂದರೆ ಸ್ವಲ್ಪ ನೀರಸವೆನ್ನಿಸುತ್ತದೆ. ಯಾಕೆಂದರೆ ಈ ಪಾರ್ಟಿಗೂ, ಕುಡಿತಕ್ಕೂ ಒಂದು ಅವಿನಾಭಾವ ಸಂಬಂಧ. ಅದೂ ದೆಹಲಿಯೆಂಬ ನಗರದಲ್ಲಿ ನೂರರಲ್ಲಿ 75% ಜನ ಕುಡಿಯುತ್ತಾರೆ. “ಕೊನೆ ಪಕ್ಷ ಪಾರ್ಟಿಗಳಲ್ಲಿ ಒಂದು ಬಿಯರ್ ತೆಗೆದುಕೊಳ್ಳುವುದು ತಪ್ಪಲ್ಲ” ಎಂಬುದು ಅವರೆಲ್ಲರ ಒಮ್ಮತ. ಹೀಗೆ ಪಾರ್ಟಿಗಳಿಗೆ ಹೋದಾಗಲೆಲ್ಲ ನನ್ನಂತ dry man ಗಳಿಗೆ ಬೇಕಷ್ಟು ಬಿಟ್ಟಿ ಸಲಹೆ ಬರುತ್ತವೆ. “You can have 1 peg man..” “ಒಂದು ಬಿಯರ್ ದೇಹಕ್ಕೇನು ಹಾನಿ ಮಾಡಲ್ಲ..” ಹಾಗೆ.. ಹೀಗೆ.. ಆದರೆ ಇಂದಿಗೂ ನಾ ಅದರಿಂದ ದೂರವಿದ್ದೇನೆ ಎಂದರೆ ಕಾರಣ ನನಗೆ ಹವ್ಯಾಸಗಳು ಚಟವಾಗಲು ಬಹಳ ಸಮಯ ಬೇಡ. ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಕಾರಣ ತಿಳಿಯಲು ನಾಲ್ಕು ವರ್ಷ ಹಿಂದಕ್ಕೆ ಹೋಗಬೇಕು.
2012 ಏಪ್ರಿಲ್ 18 ಕ್ಕೆ ನಾನು HCL join ಆದೆ. ಉತ್ತರ ಪ್ರದೇಶದ ನೋಯ್ಡಾ ನನ್ನ ವರ್ಕಿಂಗ್ ಲೊಕೇಶನ್. ಆಗ ನನ್ನ ಜೊತೆ ಪಿಜಿಯಲ್ಲಿ ಜೊತೆಯಾದವರು ಮುಕುಂದ, ಅಮೋಘ, ಸಂದೀಪ, ವಿಜಯ ಹಾಗು ಶ್ರೀನಿವಾಸ. ನಾವೆಲ್ಲರೂ ಒಂದೇ ಕಾಲೇಜಿನಲ್ಲಿ ಓದಿದವರು ಮತ್ತು HCL ಗೆ ಒಟ್ಟಿಗೆ ಸೇರಿದವರು. ಹೀಗೆ ನೋಯ್ಡಾದಲ್ಲಿ ಒಂದೇ ರೂಮಿನಲ್ಲಿ ಬರೋಬ್ಬರಿ ಆರು ಜನ ಬ್ಯಾಚಲರ್ ಲೈಫ್ ನಡೆಸುವ ಸಮಯದಲ್ಲಿ ವೀಕ್ ಎಂಡ್ ಬಂತೆಂದರೆ ಪ್ರವಾಸದ ಮಾತುಕತೆ ಏಳುತ್ತಿತ್ತು. ಆಗೆಲ್ಲ ನಾನು “ನೀವು ಹೋಗ್ರಪಾ.. ನಾ ಬರಲ್ಲ..” ಎಂದು ಕೈ ಎತ್ತಿ ಬಿಡುತ್ತಿದ್ದೆ. “ಏನ್ ಗೌತಿ ನೀನು? ಎಲ್ಲ ಹೊರಟಿದೀವಿ.. ಬರಕ್ಕೇನು?? ಯಾರು ಇಲ್ದೊದಾಗ ಇಲ್ಲಿ ಏನ್ ಮಾಡ್ಬೇಕಂತ ಪ್ಲಾನ್ ನಿಂದು?” ಎಂದು ಕಾಲೆಳೆಯುತ್ತಿದ್ದರು. ಅವರು ಏನೇ ಹೇಳಿದರು ನನ್ನದು ಒಂದೇ ಹಠ.
ದೆಹಲಿಯಿಂದ ಉತ್ತರಾಖಂಡ್ ಹಿಮಾಚಲ್ ಪ್ರದೇಶ ಬಹಳ ಹತ್ತಿರ. ಪ್ರವಾಸಿ ಸ್ಥಳಗಳಾದ ನೈನಿತಾಲ್, ಮನಾಲಿ, ಶಿಮ್ಲಾ, ಜಿಮ್ ಕಾರ್ಬೆಟ್ ಇವೆಲ್ಲ ಆರರಿಂದ ಹತ್ತು ಹನ್ನೆರಡು ತಾಸಿನ ಹಾದಿಯಷ್ಟೇ. ಲಾಂಗ್ ವೀಕ್ ಎಂಡ್ ಬಂತೆಂದರೆ ಮುಗಿಯಿತು ರೂಮಿನಲ್ಲಿ ನಾನೊಬ್ಬನೇ. ವಾಪಾಸ್ ಬಂದಾಗ ಅವರ ಬಾಯಿಯಲ್ಲೇ ಕೇಳಬೇಕು ಆ ವರ್ಣನೆಯನ್ನು. ಮರು ಕ್ಷಣ ಹೊರಟು ನಿಲ್ಲಬೇಕು ಎಂಬಂಥ ವಿವರಣೆ. ಆದರೂ ನಾನವರ ಜೊತೆಯಲ್ಲಿ ಹೊರಟು ನಿಲ್ಲುತ್ತಿರಲಿಲ್ಲ. ಕಾರಣ ಮತ್ತದೇ. ನಾನು ಎಂತಹ ಮನುಷ್ಯ ಎಂಬುದು ನನಗೆ ಗೊತ್ತು. ಪುಸ್ತಕಗಳ ಗೀಳು ಹಿಡಿದು ಯಂಡಮೂರಿ, ವಂಶಿ, ಎಸ್. ಎಲ್. ಭೈರಪ್ಪ, ಕಾರಂತಜ್ಜರು ಅಂದುಕೊಂಡು ಸೆಕೆಂಡ್ ಪಿಯುಸಿಯಲ್ಲಿ ಬರೋಬ್ಬರಿ ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದು, ಆಗ ಅನುಭವಿಸಿದ ಯಾತನೆಗಳು, ಜೀವನ ಕಲಿಸಿದ ಪಾಠಗಳು. I know. ಅನುಭವಗಳೇ ಹಾಗೆ.. ಮನುಷ್ಯನನ್ನು ತಿದ್ದುತ್ತವೆ. ಓದುವ ಮತ್ತು ಭಾವನಾತ್ಮಕ ಜೀವಿಗಳು ಪ್ರಕೃತಿಯೆಡೆಗೆ ಬೇಗ ಮರುಳಾಗುತ್ತಾರೆ. ಹಾಗೇನಾದರೂ ನಾನು ಪ್ರವಾಸದ ಗೀಳು ಹಚ್ಚಿಕೊಂಡು, ಅದು ನನ್ನ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಎಂಬುದೊಂದೇ ಕಾರಣದಿಂದ ನಾ ಪ್ರವಾಸದಿಂದ ದೂರ ಉಳಿದೆ.
ಕಂಪ್ಯೂಟರ್ ಎಂಬ ಬೈನರಿ ನನ್ನ ತಲೆಗೆ ಹತ್ತಿತು. ಇನ್ನು ಪರವಾಗಿಲ್ಲ ಕೆಲಸ ಕರಗತವಾಗಿದೆ ಎಂಬ ದಿನಗಳು ನನ್ನ ಜೀವನದ ಬಾಗಿಲು ತಟ್ಟುವುದಕ್ಕೂ, ಆಟೋ ಮೇಲೆ ಆಫೀಸ್’ಗೆ ಹೊರಟಿದ್ದ ನನಗೂ ಅಮೋಘನಿಗೂ ಒಂದು ಟ್ರೆಕಿಂಗ್ ಮಾಡಿದರೆ ಹೇಗೆ ಎಂಬ ತುಡಿತ ಹುಟ್ಟುವುದಕ್ಕೂ ಸಾಕ್ಷಿಯಾಗಿ ನಿಂತ ದಿನ 2013 ಜೂನ್ 14. ಅಂದಿನಿಂದ ಶುರುವಾದ ನನ್ನ ಅಲೆತದ ಹುಚ್ಚು ನಿಂತೆ ಇಲ್ಲ.
ಕೆಲವೊಮ್ಮೆ ಸ್ವಚ್ಛವಾಗಿ, ಶುಭ್ರವಾಗಿ ಹರಿಯುವ, ಇನ್ನು ಕೆಲವೊಮ್ಮೆ ಮುನಿದು ಕೆಂಪಾಗಿ ಎಲ್ಲರನ್ನು ಭಯ ಬೀಳಿಸುವ ಗಂಗಾ ಮಯ್ಯಾ ಬಾರಿ ಬಾರಿ ನನ್ನನ್ನು ಕೈ ಬಿಸಿ ಕರೆದಿದ್ದಾಳೆ. ಮಳೆಯಲ್ಲಿ ಕುಸಿ ಕುಸಿದು ಬೀಳುವ , ಬೇಸಿಗೆಯಲ್ಲಿ ಕರ್ರಗೆ ಹೊಳೆಯುವ, ಚಳಿಯಲ್ಲಿ ಮಲ್ಲಿಗೆ ಬಿಳುಪು ಹೊದ್ದು ಮಲಗಿ ಬಿಡುವ ಹಿಮಾಲಯದ ಗಿರಿ ಶಿಖರಗಳ ಮೇಲೆ ನಾನದೆಷ್ಟೋ ಬಾರಿ ಅಂಬೆಗಾಲಿಟ್ಟಿದ್ದೇನೆ. ಕೊರೆಯುವ ಚಳಿಯಲ್ಲಿ, ಹಿಮಾಲಯದ ತಣ್ಣನೆಯ ನೀರಿನಲ್ಲಿ ಮುಳುಗು ಹಾಕಿ, ಉಸಿರೇ ನಿಂತು ಹೋಯಿತೇನೋ ಎಂಬಂತಾಗಿ ಕೊಸಕೊಸ ಕೆಮ್ಮಿದ್ದೇನೆ. ಝರಿಯಾಗಿ ಹರಿದು ಬರುವ ನೀರನ್ನು ಕುಡಿದು ಅದರ ಸಿಹಿಗೆ ಮಾರು ಹೋಗಿದ್ದೇನೆ. ಕಣ್ಣು ಹಾಯಿಸಿದ ಕಡೆ ಕಾಣುವ ದೇವಾಲಯಗಳು, ನಮಸ್ಕರಿಸಿ ಒಳ ಬಾ ಎನ್ನುವ ದೇವ ಜನ್ಮ ಭೂಮಿ, ಆ ನದಿಗಳು, ಆ ನೀರು, ಆ ಹಸಿರು, ಆ ಉಸಿರು ಭಕ್ತಿಯಿಂದ ಬಾವ ತುಂಬಿ ನಮಸ್ಕರಿಸಿದ್ದೇನೆ. ಇನ್ನು ಬದುಕುಳಿಯಲಾರೆ, ಈ ಚಳಿ ನನ್ನನ್ನು ಕೊಂದು ಬಿಡುತ್ತದೆ, ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕಬಾರದಿತ್ತು ಎಂದು ಅನ್ನಿಸಿದ ಕ್ಷಣದಲ್ಲಿ ಮನೆ, ಮನೆಯವರನ್ನು ನೆನೆದು ಕಣ್ಣೀರಾಗಿದ್ದೇನೆ. ಕೆಲವೊಮ್ಮೆ ಅರ್ಧ ಹೊಟ್ಟೆಯಲ್ಲಿ, ಮಲಗಲಸಾಧ್ಯವಾದ ಜಾಗಗಳಲ್ಲಿ ಮಲಗಿ ನಿದ್ದೆಗೈದ ರಾತ್ರಿಯ ಸುಖ!! ಕ್ಷಣದಲ್ಲಿ ಮಿಂಚಿ ಮರೆಯಾಗುವ ಜಿಂಕೆಗಳು,ಕಾಡು ಕುರಿಗಳು, ಚಿರತೆ, ಪ್ರತಿಧ್ವನಿ ಗೈಯ್ಯುವ ದೈತ್ಯ ಬೆಟ್ಟಗಳು, ಕಾಂಡವು ಹಸಿರಾಗಿರುವ ಆಮ್ಲಜನಕದ ಸ್ಫೂರ್ತಿಗಳು, ಕ್ರೂರ ಚಳಿಯಲ್ಲೂ ಹಬೆಯಾಡುವ ಬಿಸಿನೀರಿನ ಬುಗ್ಗೆಗಳು, ಹಸಿ ಕಟ್ಟಿಗೆಯಲ್ಲಿ ಹೊತ್ತಿಸಿದ ಬೆಂಕಿ, ಮೂರೂ ಸಾವಿರ ಕಿಲೋಮೀಟರ್ ಜಗತ್ತಿನ ಅತ್ಯಂತ ಎತ್ತರದ ಜಾಗದಲ್ಲಿ ಓಡಿದ ನನ್ನ ಬೈಕ್, ಹಿಂದೆ ಕುಳಿತ ಹೆಂಡತಿ.
ಮೆಲುಕು ಹಾಕುತ್ತ ಹೋದರೆ ಆ ಸಿಹಿ ಕ್ಷಣಗಳು ಮತ್ತೆ ನನ್ನನ್ನು ಗಿರಿಗಳತ್ತ ಓಡುವಂತೆ ಮಾಡಿ ಬಿಡುತ್ತವೆ. ಇಂತಹ ನನ್ನ ಪ್ರವಾಸಿ ಮನಸ್ಥಿತಿಗೆ ಜೊತೆ ನಿಂತವರು ಮತ್ತದೆ ಗೆಳೆಯರು. ಕೆಲವೊಮ್ಮೆ ನನ್ನ ತಮ್ಮ ಚಿನ್ಮಯ್ ಕೂಡ ಈ ಸಾಹಸದಲ್ಲಿ ಭಾಗಿಯಾಗಿದ್ದಾನೆ. ಇವರೇನು ಬಿಡು ಎಂದು ಕೊಂಡವರೇ ಕೆಲವೊಮ್ಮೆ ನನಗಿಂತ ಮುಂದೆ ಮುಂದೆ ನಡೆದಿದ್ದಿದೆ. ಜಾರಿ ಬಿದ್ದಾಗ ಮೇಲೆತ್ತಿದ್ದಿದೆ. ಆಗಲ್ಲಾ ಎಂದು ನಿಂತು ಬಿಟ್ಟಾಗ ಇತರರ ಹಡಪಗಳನ್ನು ವಿಂಗಡಿಸಿ ಹೊತ್ತು ಗಮ್ಯ ಮುಟ್ಟಿದ್ದಿದೆ. ಜಿಮ್ ಬಾಡಿ ಎಂದು ಕೊಂಡವರನ್ನು ಸೋತು ಸುಣ್ಣವಾದಾಗ ಕೈ ಕೈ ಹಿಡಿದು ನಡೆಸಿದ್ದಿದೆ. ಈಗ ಇವೆಲ್ಲವನ್ನೂ ನಿಮ್ಮ ಮುಂದೆ ತೆರೆದಿಟ್ಟು ನಿಮಗೂ ಕೂಡ ಈ ಪ್ರವಾಸದ ಹುಚ್ಚು ಹಚ್ಚಿದರೆ ಎಂಬ ನನ್ನ ಸಣ್ಣ ಬಯಕೆಯೇ ಈ ಬರವಣಿಗೆಗೆ ಕಾರಣ.
Facebook ಕಾಮೆಂಟ್ಸ್