X
    Categories: ಕಥೆ

ಮರಳು -೨

ಹಿಂದಿನ ಭಾಗ:

ಮರಳು-೧

ಗೌರಿಯನ್ನು ಕಾಣಲು ಭರತನ ಕಣ್ಣುಗಳು ಹಾತೊರೆಯುತ್ತವೆ.

‘ನಿಮ್ ಅಜ್ಜಿ ತೀರೋದ್ಮೇಲೆ ಈಕೇನೇ ಮನಿಗ್ಬಂದು ಚೂರು-ಪಾರು ಕೆಲ್ಸ ಮಾಡ್ಕೊಡ್ತಾವಳೆ’ ಎಂದು ಸುಮ್ಮನಾದರು.

‘ಕಾಫಿ…’ ಎನ್ನುತಾ ಲೋಟವನ್ನಿಟ್ಟ ತಟ್ಟೆಯನ್ನು ಮುಂದೆ ಹಿಡಿದ ಗೌರಿಯನ್ನು ಒಮ್ಮೆ ಭರತ ನೋಡುತ್ತಾನೆ. ಬಾಲ್ಯದ ಆಕೆಯನ್ನು ಗುರುತು ಹಿಡಿಯುವುದು ಕಷ್ಟಸಾಧ್ಯವಾಗಿರುತ್ತದೆ. ಬಣ್ಣ ಕೊಂಚ ಮಂದವಾದರೂ ಲಕ್ಷಣವಾದ ಮೈಕಟ್ಟು. ಮಧುರವಾದ ಧ್ವನಿ. ಸ್ವರಸಾಧನೆಗೆ ಹೇಳಿಮಾಡಿಸಿದ ಹಾಗಿದೆ ಎಂದುಕೊಳ್ಳುತ್ತಾನೆ.

‘ಥ್ಯಾಂಕ್ಯು..ಇಟ್ಸ್ ರಿಯಲಿ ನೈಸ್’  ಎಂದು ಕಾಫಿಯನ್ನು ಕುಡಿದು ಹೇಳಿ, ‘ಈ ಹಾಳಾದ್ ಇಂಗ್ಲಿಷ್ಪದಗಳು ಎಲ್ಲಿ ಹೋದ್ರು ಬಿಡಲ್ಲ’ ಎನ್ನುಕೊಳ್ಳುತಿರುವಾಗಲೇ,

‘ಇಟ್ಸ್ ಮೈ ಪ್ಲೆಷರ್..’ ಎಂದು ಗೌರಿ ಮುಗುಳ್ನಗುತ್ತಾಳೆ.

‘ನೀವ್ ಈಗ ಏನ್ಮಾಡ್ಕೊಂಡಿದ್ದೀರಾ.?’ ಎಂದು ಕೇಳಿದ ಭರತನ ಪ್ರಶ್ನೆಗೆ,

‘ನಿನ್ನಷ್ಟೇನ್ ಇಲ್ಲಬಿಡಪ್ಪ. TCH ಮಾಡಿ ಇಲ್ಲೇ ಸ್ಕೂಲ್ ಮಕ್ಳಿಗೆ ಟೀಚ್ ಮಾಡ್ತಾ ಇದ್ದೀನಿ’ ಎಂದಳು. ತನ್ನ ಬಹುವಚನದ ಪ್ರಶ್ನೆಗೆ ಅವಳ ಏಕವಚನ ಉತ್ತರ ತನ್ನ ಬಗ್ಗೆ ಅವಳಿಗಿರುವ ಅನ್ಯೂನ್ಯತೆ ಎಂದು ಖುಷಿಪಡುತ್ತಾನೆ.

ಮಧ್ಯಾಹ್ನ ಹೊಟ್ಟೆ ತುಂಬಿದರು ಸಾಕೆನಿಸದಷ್ಟು ರುಚಿಯಾದ ಊಟವನ್ನು ತಿಂದು ವಿಶ್ರಮಿಸಿದ ಭರತ ಮೇಲೆದ್ದಾಗ ಸಂಜೆ ಐದಾಗಿರುತ್ತದೆ. ಭರತ ಎದ್ದು ರೆಡಿಯಾಗಿ ಅಟ್ಟವನ್ನು ಏರುತ್ತಾನೆ. ಅಟ್ಟದ ಮೇಲಿನ ಮರದ ಹಲಗೆಗಳ ಮೇಲೆ ಚೌಕಾಬರೆ ಆಟದಮನೆಯ ಹಚ್ಚುಗಳು ಇನ್ನೂ ಹಾಗೆಯೇ ಇರುತ್ತವೆ. ಬಾಲ್ಯದಲ್ಲಿ ಅಜ್ಜನನ್ನು ಕಾಡಿ-ಬೇಡಿ ರಾತ್ರಿಯಿಡಿ ಅಟ್ಟದ ಮೇಲೆ ಚೌಕಬರೇ ಆಡಿದ ನೆನಪುಗಳು ಮರುಕಳಿಸುತ್ತವೆ. ಗೆಲ್ಲುವವರೆಗೂ ಬಿಡದೆ ಆಡುತ್ತಿದ್ದ ಭರತನ ಉಪಟಳಕ್ಕೆ ಸಾಕಾಗಿ ಕೊನೆಗೆ ಅಜ್ಜ ಬೇಕಂತಲೇ ಸೋತುಬಿಡುತ್ತಿದ್ದರು. ನಂತರವೇ ಅವರಿಗೆ ಹೋಗಿ ಮಲಗಲು ಅವಕಾಶ ಎಂದು ನೆನೆಪಾಗಿ ಭರತ ತನ್ನಲ್ಲೇ ನಗುತ್ತಾನೆ. ಅಟ್ಟದ ಸಣ್ಣಬಾಗಿಲಿನಿಂದ ಮಾಳಿಗೆಯ ಮೇಲೆ ಬಂದು ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯನ್ನು ಎಳೆದು ಪಶ್ಚಿಮಕ್ಕೆ ಮುಖಮಾಡಿ ಕೂರುತ್ತಾನೆ. ಮನೆ ಕೊಂಚ ಎತ್ತರದ ಪ್ರದೇಶದಲ್ಲಿದ್ದಿದ್ದರಿಂದ ದೂರದೂರದ ಹೊಲ-ಗದ್ದೆ,ಗಿಡಮರಗಳು ಸುತ್ತಲೂ ಕಾಣತೊಡಗಿದ್ದವು. ಮನೆಯ ಪಕ್ಕದದಲ್ಲೇ ಬೆಳೆದಿದ್ದ ಹಲಸಿನ ಮರಗಳ ಎಲೆಗಳ ನಡುವೆ ಸೂರ್ಯನ ಸೌಮ್ಯವಾದ ಸಂಜೆಯ ಕಿರಣಗಳು ಹೊರಹೊಮ್ಮುತ್ತಿದ್ದವು. ಸಿಟಿಯಲ್ಲೆಂದೂ ಕಾಣದ ಗುಬ್ಬಚ್ಚಿಗಳು, ಅಳಿಲುಗಳು ಹಾಗು ಇನ್ನು ಹಲವು ಬಗೆ ಬಗೆಯ ಹಕ್ಕಿಗಳು ಮರದ ತುಂಬೆಲ್ಲಾ.

‘ಅಬ್ಬಾ..ಅದ್ಭುತ!’ ಎಂದುಕೊಂಡು ಮನಸ್ಸಿಗೆ ಹಿತವಾದ ರಾಗವೊಂದನ್ನು ಗುನುಗಿಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ ‘ಕಾಫಿ..’ ಎಂದು ತಟ್ಟೆಯನ್ನು ಹಿಡಿದು ಭರತನ ಹಿಂದೆ ಗೌರಿ ಬಂದು ನಿಲ್ಲುತ್ತಾಳೆ. ಕಾಫಿಯನ್ನು ಕುಡಿದ ನಂತರ ಮನಸ್ಸಿಗೆ ಇನ್ನೂ ಹಿತವಾಗುತ್ತದೆ.

‘ಕಾಫಿ ತುಂಬ ಚೆನ್ನಾಗಿದೆ… ಏನ್ ಇವತ್ ಸ್ಕೂಲ್ಗೆ ಹೋಗಿಲ್ವಾ’ ಎಂದು ಕೇಳುತ್ತಾನೆ.

‘ಇಲ್ವೋ. ಹೋದ್ವಾರ ಅಷ್ಟೇ ಎಕ್ಸಾಮ್ಸ್  ಮುಗ್ದಿದೆ. ಹಾಗಾಗಿ ಇನ್ನೆರ್ಡ್ವಾರ ರಜಾ ಹಾಕಿದ್ದೀನಿ’ ಎನ್ನುತ್ತಾಳೆ.

ಸ್ವಲ್ಪ ಹೊತ್ತು ಸುಮ್ಮನಿದ್ದ ಗೌರಿ, ‘ನಿಮ್ಮ್ ಅಜ್ಜನ್ನ ಹೀಗೆ ಒಬ್ಬರನ್ನೇ ಬಿಟ್ಟ್ಹೋಗೋಕೆ ಅದೇಗೆ ಮನ್ಸ್ ಬರುತ್ತೆ ನಿಮ್ಗೆ..ಹ?’ ಎಂದು ಕೊಂಚ ಏರುದನಿಯಲ್ಲಿ ಕೇಳುತ್ತಾಳೆ. ಮಿಂಚಿನಂತೆ ಬಂದ ಆಕೆಯ ಅಚಾನಕ್ ಪ್ರಶ್ನೆಗೆ ಭರತನಿಗೆ ಏನು ಉತ್ತರಿಸಬೇಕೆಂದು ಅರಿಯುವುದಿಲ್ಲ.

‘ದುಡ್ಡು ದುಡ್ಡು. ಅದೆಷ್ಟು ಅಂತ ದುಡ್ಡಿನಿಂದೆ ಓಡ್ತಿರಾ..? ಹೆತ್ತ್ ಅಪ್ಪಅಮ್ಮನ್ನೇ ಬಿಟ್ಟು ಅದೇನು ಸಿಗುತ್ತೋ ನಿಮ್ಗೆ ಹಣ ಮಾಡೋದ್ರಲ್ಲಿ’ ಎಂದ ಅವಳ ಮಾತಿಗೆ ಕ್ಷಣ ಮಾತ್ರದಲ್ಲೇ ಕುಪಿತಗೊಂಡ ಭರತ ನಂತರ ‘ಈಕೆ ನನ್ನ ಮನದಾಳದ ಮಾತನ್ನೇ ಆಡುತ್ತಿದ್ದಾಳೆ’ ಎಂದುಕೊಂಡು ಸುಮ್ಮನಾಗುತ್ತಾನೆ.

‘ಭರತ್, ಐ ಯಾಮ್ ನಾಟ್ ಬ್ಲೇಮಿಂಗ್ ಯು ಬಟ್, ಇಲ್ಲಿ ಇಷ್ಟ್ ದೊಡ್ಡಮನೆ, ಆಸ್ತಿ-ಪಾಸ್ತಿ ಎಲ್ಲ ಬಿಟ್ಟು ಆ ಹಾಳಾದ್ ಸಿಟಿ ಯಾಕ್ ಸೇರ್ಕೊಂಡ್ರು ನಿಮ್ ಅಪ್ಪ ಅಂತ ಗೊತ್ತಿಲ್ಲ’ ಎಂದು ಸುಮ್ಮನಾದಳು.

‘ಯು ನೊ ವಾಟ್, ನೀವು ನನ್ನ ಮನಸ್ಸಲ್ಲಿ ಇರೋದನ್ನೇ ಹೇಳ್ಬಿಟ್ರಿ. ನನಗೂ ಈ ಕೃತಕ ಸಿಟಿ ಲೈಫ್ ಸಾಕನ್ಸಿಬಿಟ್ಟಿದೆ.. ಆದ್ರೆ ಏನ್ಮಾಡೋದು’ ಎಂದು ಸುಮ್ಮನಾಗುತ್ತಾನೆ.

‘ನಮ್ಮ ಹಳ್ಳಿಗೆ ಬಂದು ಒಂದೆರ್ಡ್ದಿನ ಎಲ್ರಿಗೂ ಹಾಗೆ ಅನ್ಸೋದು ಮಿಸ್ಟರ್ ಭರತ್.3ಜಿ ಸ್ಪೀಡ್ನಲ್ಲಿ ಇಂಟರ್ನೆಟ್ ಯಾವಾಗ್ ಸಿಗಲ್ವೋ ತಕ್ಷಣ ವಾಪಾಸ್ ಓಡೋಗ್ತೀರಾ ನೀವು..ಕೃತಕ ಸಿಟಿ ಲೈಫ್ನ ಹುಡ್ಕೊಂಡು’ ಎಂದು ನಗಲಾರಂಭಿಸುತ್ತಾಳೆ. ಕ್ಷಣಗಳಿಂದೆಯಷ್ಟೇ ಕುಪಿತಕೊಂಡಂತಿದ್ದ ಆಕೆಯ ಕಣ್ಣುಗಳು ನಗುವಿನ ಕಡಲಲ್ಲಿ ಅರಳಿದ್ದವು. ಭರತ ಆ ಕಣ್ಣುಗಳನ್ನೇ ದಿಟ್ಟಿಸಿ ನೋಡತೊಡಗಿದ. ಕೊಂಚ ಹೊತ್ತು ನಕ್ಕು, ಯಾವಾಗ ಭರತನ ಕಣ್ಣುಗಳು ತನ್ನ ಕಣ್ಣುಗಳನ್ನು ದಿಟ್ಟಿಸುತ್ತಿವೆ ಎಂದರಿತಾಗ ಗೌರಿ ಭರತನ ಬಳಿಯಿದ್ದ ಲೋಟವನ್ನೂ ತೆಗೆದುಕೊಳ್ಳದೆ ಬೇಗನೆ ಅಟ್ಟವನ್ನಿಳಿದು ಒಳಹೋಗುತ್ತಾಳೆ.

‘ಭರತ.ಬಾರಪ್ಪಕೆಳಗೆ. ದೊಡ್ಡೆಗೌಡ್ರು ನಿನ್ನ ಮಾತಾಡ್ಸ ಬೇಕಂತೆ’ ಎಂದು ಅಜ್ಜ ಕರೆದಾಗ ಭರತ ಅಂಗಳಕ್ಕೆ ಇಳಿದು ಬರುತ್ತಾನೆ. ಅಜ್ಜ ಕೆಲಸದ ಆಳುಗಳೊಡನೆ ಯಾವುದೊ ವಿಷಯದ ಬಗ್ಗೆ ಮಾತನಾಡತೊಡಗುತ್ತಾರೆ. ದೊಡ್ಡೆಗೌಡರ ಬಳಿ ಬಂದು ಕೂತ ಭರತ ಅವರು ತನ್ನನು ಮೊದಲೇ ರೈಲಿನಲ್ಲಿ ಏಕೆ ಗುರುತಿಸಿಲ್ಲವೆಂದು ನೇರವಾಗಿ ಕೇಳುತ್ತಾನೆ.

‘ನೀನೆ ನನ್ನ ಗುರ್ತ್ ಹಿಡಿಯದವನು,ಇನ್ ಈ ಮುದುಕಪ್ಪ ನಿನ್ನ ಹೇಗ್ ಗುರ್ತ್ ಹಿಡೀಬಹುದು? ಆದ್ರೂ ನಾ ನಿನ್ನ ಪಕ್ಕಕ್ಕೆ ಬಂದ್ಕೂತಾಗ್ಲೆ ನಂಗೆ ನೀನು ಪಟೇಲ್ರ ಮೊಮ್ಮಗ ಭರತ ಅಂತ ಗೊತ್ತಾಯಿತ್ತು. ನೀನು ಮಲ್ಗಿ ನಿದ್ರೇಲಿ ಕನವರಿಸೋದ ನೋಡೇ ನೀನು ಯಾವುದೊಂದು ಚಿಂತೆಯಲ್ಲಿದ್ದೀಯ ಅಂತನೂ ತಿಳೀತು. ನನ್ನ ಬಗ್ಗೆ  ಜಾಸ್ತಿ ಹೇಳಿ ನೀನು ಪರಿಸರನ ಖುಷಿಯಿಂದ ನೋಡ್ತಾ ಇದ್ದ ಭಾವವನ್ನು ಹಾಳ್ಮಾಡೋದು ಬೇಡೆಂದು ನಿಂಗೆ ಏನು ಹೇಳ್ಲಿಲ್ಲ. ಚಿಂತೆ ಮಾಡ್ಬೇಡ ಮಗ, ಇದು ಹಳ್ಳಿ. ನೀನ್ಬೇಡ ಅಂದ್ರು ನಿನ್ನ ರಕ್ತದಲ್ಲಿ ಇರಾದು ಇದೆ ಮಣ್ಣಿನ್ಸಾರ. ನಿಂಗೆ ಶಾಂತಿ, ನೆಮ್ಮದಿ ಸಿಗೋದು ಅಂದ್ರೆ ಅದು ಈ ನೆಲದಾಗೆ ಮಾತ್ರ. ಸ್ವಿಟ್ಜರ್ಲ್ಯಾಂಡ್ಗು ಹೋದ್ರು ಸಿಗಾಕಿಲ್ಲ..ನೆನಪಿರ್ಲಿ’ ಎಂದು ಸುಮ್ಮನಾಗುತ್ತಾರೆ. ದೊಡ್ಡೆಗೌಡ್ರ ಮಾತು ಭರತನಿಗೆ ಹಿತವೆನಿಸುತ್ತದೆ. ಆತನಿಗೆ ತನ್ನ ಮನದಲ್ಲಿನ ತುಮುಲಗಳನ್ನೆಲಾ ಒಮ್ಮೆಲೇ ಹೇಳಿ ಮನಸ್ಸನ್ನು ಹಗುರಾಗಿಸಿಕೊಳ್ಳಬೇಕೆನಿಸುತ್ತದೆ.ಅಷ್ಟರಲ್ಲೇ ದೂರದಿಂದೆಲ್ಲೋ ಭಜನೆಯ ಸದ್ದು ಶುರುವಾಗುತ್ತದೆ.

‘ನಮ್ಮೂರ ದೇವಿಯ ದೇವಸ್ಥಾನದಿಂದ ಬರ್ತಿರೋ ಸದ್ದು…ಬಾ,ನಿಂಗು ಚೆನ್ನಾಗ್ ಅನ್ಸುತ್ತೆ’ ಎಂದು ದೊಡ್ಡೇಗೌಡರು ಎದ್ದು ನಿಂತರು.

‘ಇವರು ಮಾತಿನಲ್ಲಿ ಎಲ್ಲ ಬಲ್ಲವರಂತಿದ್ದರೂ ಆಚಾರ ವಿಚಾರಗಳಲ್ಲಿ ಹಳ್ಳಿಗರಂತೆ ಗುಂಪಲ್ಲಿ ಗೋವಿಂದ’ ಎಂದು ಅಂದುಕೊಳುತ್ತಾನೆ. ಭಜನೆ,ಪದಗಳೆಂಬುದು ಅರ್ಥವೇ ಗೊತ್ತಿಲ್ಲದೆ ಸುಮ್ಮನೆ ಕಾಲಹರಣಮಾಡುವ ಜನರಗುಂಪುಗಳ ಹವ್ಯಾಸ ಎಂಬುದು ಭರತನ ಅಭಿಪ್ರಾಯವಾಗಿರುತ್ತದೆ. ಬರಲೊಲ್ಲೆ ಎಂದರೆ ಬೇಜಾರು ಮಾಡಿಕೊಂಡಾರು ಎನ್ನುತ ಇಲ್ಲದ ಮನಸ್ಸಿನಲ್ಲಿ ಅವರ ಜೊತೆಗೆ ಹೊರಡುತ್ತಾನೆ.

ಊರ ಮಧ್ಯದಲ್ಲಿದ್ದ ದೇವಾಲಯದ ಬಳಿ ಬಂದು, ಪಕ್ಕದ ಕೆರೆಯಲ್ಲಿ ಕೈಕಾಲುಗಳನ್ನು ತೊಳೆದು ಬಂದ ದೊಡ್ಡೆಗೌಡರನ್ನು ಕುರಿತು.‘ನೀವು ದಿನ ನಿತ್ಯ ಬಳಸೋದು ಇದೆ ನೀರೇ.? ‘ ಎಂದು ಆಶ್ಚರ್ಯದಿಂದ ಕೇಳುತ್ತಾನೆ.

‘ಇಲ್ಲ ಡಿಸಾಲಿನೇಷನ್ ಮಾಡಿರೋ ನೀರನ್ನ ಸಮುದ್ರದಿಂದ ತರಿಸ್ಕೊಂಡು ಉಪಯೋಗಿಸ್ತೀವಿ’ ಎಂದು ಮಾರ್ಮಿಕವಾಗಿ ನಗುತ್ತಾ ಗೌಡರು ದೇವಾಲಯದೊಳಗೆ ಪ್ರವೇಶಿಸುತ್ತಾರೆ. ಗೌಡರ ಬಾಯಿಂದ ವೈಜ್ಞಾನಿಕವಾದ ಇಂಗ್ಲಿಷ್ ಪದವೊಂದು ಇಷ್ಟು ಸರಾಗವಾಗಿ ಮೂಡಿದ್ದು ಭರತನಿಗೆ ಆಶ್ಚರ್ಯವಾಗುತ್ತದೆ. ಅಲ್ಲದೆ ಸಮುದ್ರದ ಉಪ್ಪುನೀರನ್ನು ಬಳಸಲೋಗ್ಯವಾದ ನೀರನ್ನಾಗಿ ಪರಿವರ್ತಿಸುವ ಕ್ರಿಯೆಗೆ ಡಿಸಾಲಿನೇಷನ್ ಎನ್ನುತ್ತಾರೆ ಎಂಬುದು ಎಷ್ಟೋ ಹೊತ್ತಿನ ನಂತರ ನೆನಪಾಗುತ್ತದೆ. ವಾದ್ಯಗಳನ್ನು ನುಡಿಸುತ್ತಾ, ಪದಗಳನ್ನು ಹಾಡುತ್ತಾ ದೊಡ್ಡೇಗೌಡರು ತಲ್ಲೀನರಾಗುತ್ತಾರೆ. ಭರತ ನೆರೆದಿದ್ದ ಹಳ್ಳಿಯ ಜನರ ವೇಷಭೂಷಣಗಳನ್ನು ನೋಡುತ್ತಾ ಗೌಡರ ಪಕ್ಕದಲ್ಲಿ ಕೂರುತ್ತಾನೆ. ಪೇಟೆಯ ಹುಡುಗನೊಬ್ಬ ಹೀಗೆ ಟಿ-ಶರ್ಟು, ಜೀನ್ಸ್ ಪ್ಯಾಂಟನ್ನು ಧರಿಸಿ ದೇವಸ್ಥಾನಕ್ಕೆ ಬಂದು ಕೂತಿರುವುದ ನೋಡಿ ಕೆಲವರು ನಸುನಗುತ್ತಿರುತ್ತಾರೆ.

ದುಡಿದುಣ್ಣುವ ರೈತನಿಗೆ ಏನಿಲ್ಲ ರೊಕ್ಕ,

ದುಡಿವ ಬಂಟರಿಗೆ ಬಾರಿ ಬಿಂಕ

ದುಡಿಸಿಕೊಳ್ಳುವ ಜನರಿಗೆ ಬಾರಿಸೊಕ್ಕ

ಅಂಥವರೇ ಆಳಕ ಬರತಾರ ದೇಶಾಕ

ಎಂಬ ಪದದ ಮಧ್ಯೆ ಭರತ ದೊಡ್ಡೇಗೌಡರ ಕಿವಿಯ ಬಳಿ ಹೋಗಿ ‘ಏನಿದರ ಅರ್ಥ.?’ ಎಂದು ಕೇಳುತ್ತಾನೆ. ಅದಕ್ಕೆ ಗೌಡರು ಇದು ಪ್ರಸ್ತುತ ಸಮಾಜದ ವಸ್ತುಸ್ಥಿತಿಯನ್ನು ಬಿಂಬಿಸುವ ಪದವೆಂದೂ, ಇದು ಹಳ್ಳಿಯಲ್ಲದೆ, ದಿಲ್ಲಿಯವರೆಗೂ ಅನ್ವಯಿಸುತ್ತದೆ ಎಂದಾಗ ಭರತನಿಗೆ ತಳಮಳವಾಯಿತು.ಹಳ್ಳಿಗರು ಇಷ್ಟೆಲ್ಲಾ ಯೋಚಿಸಿ ಪದಗಳನ್ನು ರೂಪಿಸುತ್ತಾರೆಯೇ? ಎಂದುಕೊಳ್ಳುತ್ತಾನೆ. ನಂತರ ಪ್ರತಿಪದಗಳ ಮದ್ಯೆ ದೊಡ್ಡೇಗೌಡರ ಬಳಿ ಅದರ ಅರ್ಥವನ್ನು ಕೇಳಿ, ಅವುಗಳ ಒಳಾರ್ಥವನ್ನು ಅರಿಯತೊಡಗುತ್ತಾನೆ.ತಾನೂ ಗುನುಗಬೇಕೆನಿಸುತ್ತದೆ. ಗುನುಗತೊಡಗುತ್ತಾನೆ. ಕೆಲಕ್ಷಣದಲ್ಲೇ ಕೈಯಿಂದ ಕೈಯಿಗೆ ವರ್ಗಾಹಿಸಲ್ಪಡುತ್ತಿದ್ದ ತಾಳ ತನ್ನ ಬಳಿ ಬಂದಾಗ ನಿಧಾನವಾಗಿ ಒಂದನೊಂದು ಕುಕ್ಕುತ್ತಾ ಪದಗಳನ್ನು ಹೇಳತೊಡಗುತ್ತಾನೆ. ನೋಡ ನೋಡುತ್ತಲೇ ನೆರೆದಿದ್ದ ಎಲ್ಲರೊಟ್ಟಿಗೆ ಹಾಡಲಾರಂಭಿಸುತ್ತಾನೆ. ತಾನು ಬಲ್ಲ ಸಂಗೀತ ಜ್ಞಾನದಿಂದ ಪದಗಳು ರಾಗಗಳಾಗಿ ಮೂಡುತ್ತವೆ. ಪದಗಳ ಅರ್ಥಗಳು ತಿಳಿದಾಗ ಭಾವ ಉಕ್ಕಿಬರುತ್ತದೆ. ಎಲ್ಲರೂ ಮಂತ್ರಮುಗ್ದರಾಗಿ ಈತನನ್ನೇ ನೋಡುತ್ತಾರೆ. ಸ್ವರ ವಿಸ್ತಾರವನ್ನು ಮಾಡಿ ಕೊನೆಗೆ ನಿಧಾನಗೊಂಡಾಗ ಪ್ರತಿಯೊಬ್ಬರೂ ಮೌನವಾಗಿರುತ್ತಾರೆ. ಮಕ್ಕಳು ತೆರೆದ ಬಾಯಿಯನ್ನು ಮುಚ್ಚದೇ ಭರತನನ್ನು ನೋಡತೊಡಗುತ್ತಾರೆ. ಭರತನ ಕೆನ್ನೆಗಳ ಮೇಲೆ ಕಣ್ಣೀರು ಹರಿದು ಒಣಗಿರುತ್ತದೆ.

‘ಅಪ್ಪ. ಯಸ್ ವೈನಾಗಿ ಹಾಡ್ತಿಯ ಕಂದ..ದೇವಿ ನಿನ್ನ ಚೆನ್ನಗಿಡ್ತಾಳೆ. ದಿನಾ ಬಂದು ಹಿಂಗೆ ಆಡ್ತಿರು.. ನಿನ್ ಕಷ್ಟ ಎಲ್ಲ ದೂರಾಗುತ್ತೆ’ ಎಂದು ಹಳ್ಳಿಯ ಹಿರಿಯರೊಬ್ಬರು ಭರತನ ಬಳಿ ಬಂದು ಹೇಳುತ್ತಾರೆ. ಊರ ಜನರ ಅಕ್ಕರೆಯ ಮಾತುಗಳು ಭರತನಲ್ಲಿ ಒಂದು ಹೊಸಕಳೆಯನ್ನು ಮೂಡಿಸುತ್ತವೆ.

‘ಮಗ ನಿನ್ನ್ ಒಳ್ಗೆ ಏನೋ ಒಂದ್ಚಿಂತೆ ಇದೆ. ನೀನ್ ಅದ್ಯಾರೊಟ್ಟಿಗೂ ಹೇಳ್ಕೊಂಡಿಲ್ಲ. ನಾನ್ ಅದ್ ಏನು ಅಂತ ಕೇಳದಿಲ್ಲ, ಆದ್ರೆ ಯಾರೊಟ್ಟಿಗಾದ್ರೂ ಅದನ್ನ ಹೇಳ್ಕ.. ಮನ್ಸು ಹಗುರ ಮಾಡ್ಕ’ ಎಂದು ಮನೆಗೆ ಹಿಂದಿರುಗುವಾಗ ದೊಡ್ಡೇಗೌಡರು ಹೇಳಿದರು.

ಅಲ್ಲದೆ ‘ಇಂದು ನಮ್ಮನೇಲಿ ಊಟ’ ಎಂದು ದೊಡ್ಡೇಗೌಡರು ಭರತ ಹಾಗು ಪಟೇಲರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ.

‘ಗೌರಿ. ಭರತಂಗೆ ಸಂಗೀತ ಚೆನ್ನಾಗಿ ಬರುತ್ತೆ ಕಣೆ.. ದೇವಸ್ಥಾನದಲ್ಲಿ ಹೆಂಗ್ಹಾಡ್ದಾ ಅಂತೀಯಾ’ ಎಂದು ದೊಡ್ಡೇಗೌಡರು ಭರತನನ್ನು ಹೊಗಳಿದರು. ‘ಹೌದೇ’ ಎಂದು ಭರತನ ಅಜ್ಜ ಆಶ್ಚರ್ಯದಿಂದ ಕೇಳಿದರು. ಗೌರಿ ಮುಗುಳ್ನಕ್ಕಳು.

ದೊಡ್ಡೇಗೌಡರ ಅಡುಗೆಮನೆ ಹೊಕ್ಕ ಭರತ ತನಗೆ ತಿಳಿದಿದ್ದ ಸೊಪ್ಪಿನ ಸಾರನ್ನು ಮಾಡುತ್ತಾನೆ. ಅದೆಷ್ಟೋ ದಿನಗಳ ನಂತರ ಅಡುಗೆಯನ್ನು ಮಾಡುವಾಗ ಎಲ್ಲಿಲ್ಲದ ಸಂತೋಷ ಭರತನಿಗಾಗುತ್ತದೆ. ಸಾರಿನ ಘಮ ಮನೆಯಲೆಲ್ಲ ಪಸರಿಸುತ್ತದೆ. ಅರ್ಧತಾಸಿನೊಳಗೆ ಸಾರನು ಮಾಡಿಮುಗಿಸಿದ ಭರತನ ವೇಗಕ್ಕೆ ಗೌರಿ ಬೆರಗಾಗುತ್ತಾಳೆ. ಭರತನ ಕೈ ರುಚಿಯನ್ನು ಎಲ್ಲರೂ ಮೆಚ್ಚುತ್ತಾರೆ.

‘ಗೌಡ್ರೆ ದಿನಾ ನಂಗೆ ಇದೆ ಊಟ ಸಿಕ್ಕಿದ್ರೆ ನಾನ್ ಇಲ್ಲೇ ಇದ್ಬಿಡ್ತಿನಿ  …ನಿಮ್ಗೆ ಏನೂ ತೊಂದ್ರೆ ಇಲ್ಲ ತಾನೆ’ ಎಂದು ಭರತ ನಗುತ್ತಾ ಹೇಳಿದಾಗ,

‘ಹೇಗೂ ಅಡುಗೆ ಮಾಡೋಕೆ,ಪಾತ್ರೆ ಉಜ್ಜೋಕೇ ಕೆಲ್ಸದವ್ರು ಬೇಕಾಗಿತ್ತು.ಒಳ್ಳೇದೇ ಆಯಿತು’ ಎಂದು ಅದಕ್ಕೆ ಮರುತ್ತರವಾಗಿ ಗೌರಿ ಹೇಳುತ್ತಾಳೆ.

‘ನಮ್ಮ ಪಟೇಲ್ರುಮನೆ, ನಮ್ಮ್ಮನೆ ಬೇರೆ ಬೇರೆ ಏನಲ್ಲ ಮಗ. ನಮ್ಮನೆ ಅನ್ನ, ಅವ್ರು ಮನೆ ಸಾರು.. ನಮ್ ಗೌರಿ ಇಬ್ರಿಗೂ ಮೊಮ್ಮಗಳು.. ಅಲ್ದೆ ಈ ಹಳ್ಳೀಲಿ ನಾ ನಿಮ್ಮನೆಗೆ ಬರ್ತೀನಿ, ಇರಿ,ಎಲ್ಲೂ ಹೋಗ್ಬೇಡಿ ಅಂತೆಲ್ಲ ನಿಮ್ ಸಿಟಿ ರೀತಿ ಅಲ್ಲ ಮಗ…ಇಡೀಹಳ್ಳೀನೇ ಒಂದ್ಮನೆ.. ನಂಗ್ನೀನಾದ್ರೆ…ನಿಂಗೆ ನಾನು ಅನ್ನೋತರ. ಇಲ್ಲಿ ಯಾರ್ ಮನೆಗೂ ಯಾರ್ ಬೇಕಾದ್ರೂ ಹೋಗ್ಬಹುದು.. ಯಾರ್ ಮನೇಲೂ ಬೇಕಾದ್ರು ಮಲಗಬಹುದು’ ಎನ್ನುತಾರೆ.

ಕೇವಲ ಪುಸ್ತಕಗಳಲ್ಲಿ ಈ ವಿಷಯಗಳನ್ನೆಲ್ಲ ಓದಿದ್ದ ಅನುಭವವಿದ್ದ ಭರತ ಇಂದು ಹಳ್ಳಿಗರೊಬ್ಬರಿಂದ ಈ ಮಾತನ್ನು ಸ್ವತಃ ಕೇಳುವಾಗ ಖುಷಿಯಾಗುತ್ತದೆ. ಗೌರಿ ಬೇಡವೆಂದರೂ ಭರತನಿಗೆ ಹೆಚ್ಚು ಹೆಚ್ಚು ಅನ್ನವನ್ನು ಹಾಗು ಅದಕ್ಕೆ ತುಪ್ಪವನ್ನು ಹಾಕತೊಡಗುತ್ತಾಳೆ

ಊಟವಾದ ಮೇಲೆ ಎಲ್ಲರು ದೊಡ್ಡೇಗೌಡರ ಚಾವಡಿಯ ಮೇಲೆ ಬಂದುಕೂತರು. ಗೌರಿ ಮನೆಯೊಳಗಿಂದ ಚೌಕಾಬರೆಯ ಮಣೆಯನ್ನು ತಂದಳು. ಅದೆಷ್ಟೋ ವರ್ಷಗಳ ನಂತರ ಚೌಕಬರೆ ಆಡಲು ಭರತನಿಗೆ ಎಲ್ಲಿಲ್ಲದ ಸಂತೋಷ. ‘ಅಪ್ಪಾ. ಸೋತ್ರೆ ಸೋತೆ ಅಂತ ಒಪ್ಕೋ.. ನಂಗೆ ನೀನ್ ಗೆಲ್ಲೊ ತನ್ಕ ಆಡೋಕ್ ಆಗಲ್ಲ…’ಎಂದು ಅಜ್ಜ ಆಕಳಿಸುತ್ತಾ ಹೇಳಿದಾಗ ಎಲ್ಲರೂ ನಕ್ಕರು. ಗೌರಿಯ ನೀಳಬೆರಳುಗಳ ಸುಂದರ ಕೈಗಳು ಚೌಕಾಬರೆಯ ಕಾಯಿಗಳನ್ನು ಆಯ್ದು ಎಸೆಯುವುದನ್ನೇ ಭರತನ ಕಣ್ಣುಗಳು ನೋಡುತ್ತಿದ್ದವು. ಆಟದ ಕೊನೆಗೆ ತನ್ನ ಅಜ್ಜ ಗೆದ್ದಾಗ ಭರತ ‘ಅಜ್ಜ.. ಇನ್ನೊಂದೇ ಒಂದು ಆಟ.. ಪ್ಲೀಸ್..ಪ್ಲೀಸ್’ ಎಂದು ಮಕ್ಕಳಂತೆ ರೋಧಿಸುತ್ತಾನೆ. ಅಲ್ಲಿಯವರೆಗೂ ಒಬ್ಬ ಜೆಂಟಲ್’ಮ್ಯಾನ್ ತರ ವರ್ತಿಸುತ್ತಿದ್ದೂ, ಈಗ ಅಜ್ಜನ ತೊಡೆಯ ಮೇಲೆ ಮಗುವಿನಂತೆ ಹಠವಿಡಿಯುತ್ತಿದ್ದ ಭರತನನ್ನು ನೋಡಿ ಗೌರಿ ನಗುತ್ತಾಳೆ. ಭರತನ ರೋಧನೆಗೆ ಮಣಿದು ಎಲ್ಲರು ಮತ್ತೊಮ್ಮೆ ಆಡಲು ಶುರುಮಾಡುತ್ತಾರೆ. ಆದರೆ ಈ ಬಾರಿ ಗೆದ್ದದ್ದು ಮಾತ್ರ ದೊಡ್ಡೇಗೌಡರು.

ಹಿರಿಯರಿಬ್ಬರು ಆಟವನ್ನು ಗೆದ್ದು ಮಲಗಲು ಹೋದ ಮೇಲೆ ಗೌರಿ ಹಾಗು ಭರತ ಮನೆಯ ಜಗುಲಿಯ ಮೇಲೆ ತಿಂಗಳ ಬೆಳಕಿನ ತಂಪಾದ ಆಗಸವನ್ನು ನೋಡುತ್ತಾ ಕೂರುತ್ತಾರೆ.

‘ಅದೆಷ್ಟ್ ವರ್ಷ ಆದ್ಮೇಲೆ ನನ್ಗೆ ಇಷ್ಟ್ ಖುಷಿ ಆಗಿದೆ ಗೊತ್ತಾ…’ ಎಂದು ಭರತ ಗೌರಿಯನ್ನೊಮ್ಮೆ ನೋಡುತ್ತಾನೆ.

‘ನಿಮ್ಮ್ ಅಜ್ಜನ ತೊಡೆ ಮೇಲೆ ಮಗು ತರ ಹಠಪಡ್ಬೇಕಾದ್ರೇನೇ ಅನ್ಕೊಂಡೆ. ಅಲ್ಲ ಭರತ್, ಅಜ್ಜನ್ನ ಇಷ್ಟೊಂದು ಇಷ್ಟಪಡೋನು ಅದ್ಹೇಗೆ ಇಷ್ಟ್ವರ್ಷ ಅವ್ರಿಂದ ದೂರ ಇದ್ದೆ? ಒಮ್ಮೆನೂ ಅವ್ರನ್ನ ನೋಡ್ಬೇಕು ಅನ್ನಿಸ್ಲ್ಲೆ ಇಲ್ವಾ?! ಅಜ್ಜಿ ಹೋದ್ಮೇಲಂತೂ ತುಂಬಾನೇ ಮಂಕಾಗಿದ್ರು ಅವ್ರು.. ನಿಮ್ಮ್ತಂದೆಯವ್ರ ಹೆಸ್ರು ಹೇಳ್ತಾ ರಾತ್ರಿ ಎಲ್ಲ ಕನವರಿಸ್ತಿದ್ರು..ನಿಮ್ಮ್ತಂದೆಗೆ ತುಂಬಾ ಸರಿ ನಮ್ಮ್ ತಾತ ಫೋನ್ಮಾಡೂ ಹೇಳಿದ್ರು.. ಯಾಕೆ ನಿಂಗೆ ಹೇಳ್ಲಿಲ್ವ ಅವ್ರು’ ಎಂದಾಗ ಭರತನಿಗೆ ದಿಗ್ಭ್ರಮೆಯಾಯಿತು. ಪ್ರತಿ ಬಾರಿಯೂ ಅಜ್ಜ ಚೆನ್ನಾಗಿದ್ದಾರೆ ಅನ್ನೊದನ್ನ ಅಮ್ಮನ ಮಾತಲ್ಲಿ ಮಾತ್ರ ಕೇಳಿದ್ದ ಭರತ,ಅಜ್ಜನ ಬಗ್ಗೆ ಅಷ್ಟೇನೂ ಯೋಚಿಸಿರಲಿಲ್ಲ. ಆದರೆ ಈಗ ಗೌರಿಯ ಮಾತುಗಳು ಭರತನಿಗೆ ತೀವ್ರ ಕಳವಳವನ್ನುಂಟು ಮಾಡುತ್ತವೆ. ನಾವೆಲ್ಲ ಇದ್ದರೂ ಅಜ್ಜನಿಗೆ ಯಾರೂ ಇಲ್ಲವಾದೆವ.?ಎಂದನಿಸುತ್ತದೆ. ಅಪ್ಪ-ಅಮ್ಮರ ಮೇಲೆ ಸಿಟ್ಟೂ ಬರುತ್ತದೆ.

‘ನಮ್ಮಪ್ಪಂಗೆ ಅಜ್ಜ ಇಲ್ಲಿರೋ ಆಸ್ತಿನ ಎಲ್ಲಾ ಮಾರಿ,ಬಂದ ದುಡ್ಡಿಂದ ಒಂದು ದೊಡ್ಡ ಫ್ಯಾಕ್ಟರಿ ಕಟ್ಟೋ ಆಸೆ.ಆದ್ರೆ ಅಜ್ಜಂಗೆ ಈ ಹಳ್ಳಿ ಬಿಟ್ಟು ಬರೋ ಮನ್ಸಿಲ್ಲ.. ಒಂದ್ಸಾರಿ ಅಪ್ಪ ಫೋನ್ಮಾಡಿ ನಿನ್ನ ದುಡ್ಡುಬೇಡ, ಆಸ್ತಿನೂ ಬೇಡ, ಎಲ್ಲಾ ನೀನೆ ಹಿಡ್ಕೋ ಎಂದು ಅರಚಿ ಫೋನ್ ಇಟ್ರು.. ಅವತ್ತಿನಿಂದ ಅಜ್ಜನ ಬಗ್ಗೆ ಅಷ್ಟಕ್ಕಷ್ಟೇ ಅವ್ರಿಗೆ.. ನಂಗೂ ಇಲ್ಲಿಗೆ ಬರೋಕ್ಕೆ ಬಿಡ್ಲಿಲ್ಲ’ ಎನ್ನುತ್ತಾನೆ.

‘ನಿಮ್ಮ್ ಅಜ್ಜ ಇಡೀ ಊರಿಗೆ ಮಾರ್ಗದರ್ಶಕರು ಭರತ್. ಅವ್ರು ಸಿಟಿಗ್ಹೋಗ್ತೀನಿ ಅಂದ್ರು ಈ ಊರಿನವ್ರು ಅವ್ರುನ್ನ ಹೋಗಕ್ಕೆ ಬಿಡಲ್ಲ.. ಸ್ಕೂಲು, ಆಸ್ಪತ್ರೆ ಎಲ್ಲ ಅವ್ರೆ ಕಟ್ಸಿರೋದು.. ಆದ್ರೆ ಅಪ್ಪನಂತೆ ಮಗ ಆಗ್ಲಿಲ್ಲ ಅಂತ ಎಲ್ರು ಇವಾಗ್ಲೂ ಅನ್ಕೊಂಡು ಬೇಜಾರ್ಮಾಡ್ಕೊಂತ್ತಾರೆ’ ಎಂದು ಗೌರಿ ಹೇಳಿದಾಗ ಭರತನಿಗೆ ಅಜ್ಜನ ಬಗ್ಗೆ ಹೆಮ್ಮೆ ಎನಿಸುತ್ತದೆ.

‘ಅದ್ಸರಿ ಇಷ್ಟ್ದಿನ ಆದ್ಮೇಲೆ ನೀನ್ಹೇಗ್ಬಂದೆ?’ ಎಂದ ಗೌರಿಗೆ, ತಾನು ಮಾಡುತ್ತಿರುವ ಅರ್ಥಹೀನ ಕೆಲಸ, ಅದರಿಂದ ಉಂಟಾಗಿರುವ ಖಿನ್ನತೆ, ಮನೆಯಲ್ಲಿನ ಅಪ್ಪಅಮ್ಮಂದಿರ ದೈನಂದಿನ ಅರಚಾಟ, ಸ್ವಾರ್ಥತೆ, ತಾನು ಅಂತಹ ಸಮಾಜದಲ್ಲಿ ಒಬ್ಬನಾಗಿಬಿಡುವೆನೆಂಬ ಭಯ ಎನ್ನುತ ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಳ್ಳುತ್ತಾನೆ.. ತುಸು ಸಮಯದ ನಂತರ ‘ಅವಳೂ ಸಹ ನನ್ನ ಬಿಟ್ಟುಹೋದಳು’ ಎನ್ನುತ್ತಾನೆ. ಭರತನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದ ಗೌರಿ ‘ಅವಳು’ ಯಾರೆಂದೂ ಸಹ ಕೇಳುವುದಿಲ್ಲ. ಭರತ ಮುಂದುವರೆಸಿ ‘ಪ್ರೀತಿಯೂ ಸಹ ಇಂದು ಹಣ ಹಾಗು ಚರ್ಮದ ಬಣ್ಣಗಳ ಮೇಲೆ ಡಿಪೆಂಡ್ ಆಗಿರುತ್ತೆ ಗೌರಿ’ ಎಂದಾಗ ಅವಳುನಗುತ್ತಾಳೆ. ನೋಡಲು ಸಾದಾರಣವಾಗಿದ್ದರೂ, ಬಣ್ಣ ತುಸು ಕಪ್ಪಿದ್ದರೂ ಗೌರಿ ಭರತನಿಗೆ ತೀರಾ ಸನಿಹದವಳೆನಿಸುತ್ತಾಳೆ. ‘ಅವಳು’ ಅದೆಷ್ಟೇ ತೆಳ್ಳಗೆ ಬೆಳ್ಳಗಿದ್ದರೂ ಈ ಬಗೆಯ ಭಾವ ಅವಳಲ್ಲಿ ಎಂದಿಗೂ ಮೂಡಿರಲಿಲ್ಲ ಎಂದುಕೊಳ್ಳುತ್ತಾನೆ.

‘ನಿನ್ ಪ್ರಾಬ್ಲಮ್ ಏನಂತ ನಂಗೆ ಗೊತ್ತಾಯಿತು ಬಿಡು.ಒಂದ್ಕೆಲ್ಸ ಮಾಡು.. ನಾಳೆ ಪೂರ್ತಿದಿನ ನನ್ನೊಟ್ಟಿಗೆ ಇರು. ನಿಂಗೆ ನಿಜವಾದ ಹಳ್ಳಿನ ತೋರಿಸ್ತಿನಿ.’ ಎಂದು ಮೇಲೇಳುತ್ತಾಳೆ. ಭರತನಿಗೆ ಇನ್ನೂ ತುಸು ಹೊತ್ತು ಮಾತಾಡಬೇಕೆನಿಸಿದರೂ ಅವಳನ್ನು ಒತ್ತಾಯ ಮಾಡುವುದು ಸರಿಯಲ್ಲವೆಂದೆನಿಸುತ್ತದೆ.

ಮನೆಗೆ ಬಂದ ಭರತ ಮಲಗಿದ್ದ ಅಜ್ಜನನ್ನು ಒಮ್ಮೆ ನೋಡುತ್ತಾನೆ. ತಲೆಗೆ ಕೈಯನ್ನು ಆಧಾರವಾಗಿಸಿ ಮಗ್ಗುಲು ಮಾಡಿ ಮಲಗಿಗೊಂಡಿದ್ದ ಅಜ್ಜನನ್ನು ಕಂಡು ದುಃಖ ಉಕ್ಕಿಬರುತ್ತದೆ. ಅವರ ಬಳಿಗೆ ಹೋಗಿ, ಪಕ್ಕದಲ್ಲಿದ್ದ ಕಂಬಳಿಯನ್ನು ಬಿಡಿಸಿ ಹೊದಿಸಿ, ತನ್ನ ಕೋಣೆಗೆ ಹೋಗಿ ಮಲಗುತ್ತಾನೆ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post