X

ಕೆಸರಲ್ಲಿ ಅರಳಬೇಕಾಗಿದ್ದ ಕರ್ನಾಟಕ ಬಿಜೆಪಿ ಕೊಳೆತು ಹೋಗುತ್ತಿದೆಯಲ್ಲ?

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ, ೧೫೦ ಸೀಟುಗಳನ್ನು ಗೆಲ್ಲುವುದೇ ನಮ್ಮ ಮುಂದಿನ ಗುರಿ ಅಂತ ಆನೆ ನಡೆದಿದ್ದೇ ದಾರಿ ಆನ್ನೋ ರೀತಿಯಲ್ಲಿ ಮುನ್ನುಗ್ಗುತ್ತಿರುವ ಯಡಿಯೂರಪ್ಪನವರದ್ದು ಒಂದು ಕಥೆಯಾದರೆ, ಯಡಿಯೂರಪ್ಪ ನಮ್ಮ ನಾಯಕ, ಆದರೆ ರಾಯಣ್ಣ ಬ್ರಿಗೇಡ್ ಮಾಡಿರುವುದು ಯಡಿಯೂರಪ್ಪನವರನ್ನು ಸಿಎಂ ಮಾಡಲಲ್ಲ, ಹಾಗೇ ಹೀಗೇ ಅಂತ ಕ್ಷಣಕ್ಕೊಂದು ಹೇಳಿಕೆ ನೀಡಿ ಯಡಿಯೂರಪ್ಪಗೆ ಟಾಂಗ್ ಕೊಡಲು ಯತ್ನಿಸುತ್ತಿರುವ ಈಶ್ವರಪ್ಪನವರದ್ದು ಒಂದು ವ್ಯಥೆ.! ಇವರಿಬ್ಬರ ಮುಸುಕಿನ ಗುದ್ದಾಟದಲ್ಲಿ ಪಕ್ಷದ ವರ್ಚಸ್ಸು ಪಾತಾಳಕ್ಕಿಳಿಯುತ್ತಿದ್ದರೂ ಕರ್ನಾಟಕ ಬಿಜೆಪಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಅನ್ನೋ ರೀತಿಯಲ್ಲಿರುವ ಹೈಕಮಾಂಡಿನದ್ದು ಇನ್ನೊಂದು ಕಥೆ. ಭಾರತೀಯ ಜನತಾ ಪಕ್ಷದ ದಕ್ಷಿಣದ ಹೆಬ್ಬಾಗಿಲು ಕರ್ನಾಟಕದಲ್ಲಿ ಪಕ್ಷ ಒಡೆದ ಮನೆಯಾಗಿರುವುದಕ್ಕೆ ಕೈಗನ್ನಡಿಯಾದಂತಿದೆ ಮೇಲಿನ ಕಥೆ ಮತ್ತು ವ್ಯಥೆಗಳು!

ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನಾಗಿ ನಾನು ಬೆಳೆಯಬೇಕೆಂದು ಶತಾಯಗತಾಯ ಪ್ರಯತ್ನ ಪಡುತ್ತಿರುವ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಇದನ್ನು ಕಾರ್ಯಗತಗೊಳಿಸಲು ಕಂಡುಕೊಂಡ ಮಾರ್ಗ ಬ್ರಿಗೇಡ್ ಪಾಲಿಟಿಕ್ಸ್. ಈ ಮೂಲಕ ಕರ್ನಾಟಕ ಬಿಜೆಪಿಯ ಭಿನ್ನಮತದ ಎರಡನೇ ಅಧ್ಯಾಯಕ್ಕೆ ನಾಂದಿ ಹಾಡಿದ್ದೇ ಈಶ್ವರಪ್ಪ ಅಂದರೆ ತಪ್ಪಾಗಲಾರದು. ಯಡಿಯೂರಪ್ಪ ಪಕ್ಷಾಧ್ಯಕ್ಷರಾದ ಮೇಲೆ ನಡೆದ ಪದಾಧಿಕಾರಿ ನೇಮಕ ಸಂದರ್ಭದಲ್ಲಿ ಎದ್ದ ಭಿನ್ನಮತದ ಕಿಡಿ ಇನ್ನೂ ಆರಿಲ್ಲ. ಈ ಕಿಡಿ ದಿನೇ ದಿನೇ ಕಾಳ್ಗಿಚ್ಚಿನಂತೆ ಹಬ್ಬಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಿ ತೆಗೆಯುವತ್ತ ಸಾಗಿದೆ. ಹಿಂದ(ಹಿಂದುಳಿದವರು ಮತ್ತು ದಲಿತರು) ಫಾರ್ಮುಲಾ ಮೂಲಕ ಭಾರತೀಯ ಜನತಾ ಪಕ್ಷದ ವೋಟ್ ಬ್ಯಾಂಕ್ ಭದ್ರಗೊಳಿಸುವುದು ಈ ಸಂಘಟನೆಯ ಉದ್ದೇಶ ಎಂದಿದ್ದ ಈಶ್ವರಪ್ಪ ಯಡಿಯೂರಪ್ಪನವರ ಹಿಡಿತವನ್ನು ರಾಜ್ಯ ಬಿಜೆಪಿಯಲ್ಲಿ ಸಡಿಲಗೊಳಿಸುವ ಉದ್ದೇಶದಿಂದಲೇ ರಾಯಣ್ಣ ಬ್ರಿಗೇಡ್ ಕಟ್ಟಲು ಫೀಲ್ಡಿಗೆ ಇಳಿದಿದ್ದರು ಎಂಬುದು ಇದೀಗ ಗುಟ್ಟಾಗೇನೂ ಉಳಿದಿಲ್ಲ.

ಯಡಿಯೂರಪ್ಪನವರ ನೆರಳಲ್ಲೇ ಬೆಳೆದ ಈಶ್ವರಪ್ಪಗೆ ಮಾಸ್ ಲೀಡರ್ ಅನ್ನೋ ವರ್ಚಸ್ಸಂತೂ ಇಲ್ಲ. ಅಹಿಂದ ಅಲೆಯ ಮೂಲಕ ಸಿದ್ಧರಾಮಯ್ಯ ಮುಂಚೂಣಿಗೆ ಬಂದರೂ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೊಂಡೊಯ್ದಿದ್ದು ಬಿಜೆಪಿ ನಾಯಕರ ಸ್ವಯಂಕೃತ ಅಪರಾಧಗಳು. ಎಲ್ಲೋ ಸಿದ್ಧರಾಮಯ್ಯ ಮಾದರಿಯಲ್ಲೇ ತಾನೂ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವುದು ಈಶ್ವರಪ್ಪ ಮುಂದಾಲೋಚನೆ ಇರಬಹುದು. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಮಹಾತ್ವಾಕಾಂಕ್ಷೆ ಇರಬೇಕು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಈಶ್ವರಪ್ಪ ರಾಜ್ಯ ನಾಯಕರಾಗಿ ಹೊರ ಹೊಮ್ಮಲು ರಾಜಕೀಯವಾಗಿ ಇನ್ನೂ ಬೆಳೆಯಬೇಕು ಅನ್ನುವುದು ರಾಜಕೀಯ ಪಂಡಿತರ ಅನಿಸಿಕೆ. ಈಶ್ವರಪ್ಪನವರಿಗೆ ನಾಲಗೆಯಲ್ಲಿ ಹಿಡಿತ ಇಲ್ಲದಿರುವುದು ಕೂಡಾ ಅವರನ್ನು ರಾಜ್ಯ ಮಟ್ಟದಲ್ಲಿ ಜನ ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಕಾರಣಗಳಲ್ಲೊಂದು. ಬಹಳ ತುರಾತುರಿಯಲ್ಲಿ ರಾಜ್ಯ ರಾಜಕೀಯದಲ್ಲಿ ಮುಂಚೂಣಿಗೆ ಬರಲೇಬೇಕೆಂಬ ಪ್ರಯತ್ನ  ಈಶ್ವರಪ್ಪರದ್ದು.

ಒಮ್ಮೆ ದಲಿತ ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಬಿಎಸ್‌ವೈ ಅವರನ್ನು ಸಿಎಂ ಮಾಡುವುದೇ ಬ್ರಿಗೇಡ್ ಉದ್ದೇಶ ಅನ್ನುವ ಈಶ್ವರಪ್ಪ ಮತ್ತೊಮ್ಮೆ ಯಾರನ್ನೂ ಸಿಎಂ ಮಾಡುವ ಉದ್ದೇಶ ಬ್ರಿಗೇಡಿಗಿಲ್ಲ ಅಂತ ಹೇಳಿಕೆ ಕೊಡುತ್ತಾರೆ. ಯಾವ ರಾಜಕೀಯ ಪಕ್ಷಕ್ಕೂ ಬ್ರಿಗೇಡ್ ಬೆಂಬಲವಿಲ್ಲ ಅಂತಾನೂ ಹೇಳಿಕೆ ಕೊಡುತ್ತಾರೆ. ರಾಜಕೀಯ ಬೆಂಬಲವಿಲ್ಲದೇ ಯಾವುದೇ ಕೆಲಸವಾಗದೆಂಬ ಸತ್ಯ ಅರಿಯದವರೇ ಈಶ್ವರಪ್ಪನವರು? ಹಾಗಾದ್ರೆ ಬ್ರಿಗೇಡ್ ಹೆಸರನ್ನೇಳಿ ಏನನ್ನು ಸಾಧಿಸಲು ಹೊರಟಿದ್ದಾರೆ? ಹಿಂದ ಪಂಗಡಳಿಗಳಿಗೆ ಇದರಿಂದ ಗುಲಗಂಜಿಯಷ್ಟೂ ಉಪಯೋಗವಾಗುವುದು ಅನುಮಾನ. ಮೊದಲೇ ಈಶ್ವರಪ್ಪನವರ ಬಾಯಿಯಿಂದ ಉದುರೋ ಅಣಿಮುತ್ತುಗಳಿಗೆ ಅದರದ್ದೇ ಆದ ಇತಿಹಾಸವಿದೆ. ಇಂತಹ ಸಂದರ್ಭದಲ್ಲಿ ಅವರ ಯಾವ ಮಾತನ್ನು ನಂಬಿ ಹಿಂದ ಸಮುದಾಯ ಅವರನ್ನು ಬೆಂಬಲಿಸುವುದೋ ದೇವರೇ ಬಲ್ಲ. ಆದರೂ ಈಶ್ವರಪ್ಪನವರು ಇದ್ದಕ್ಕಿದ್ದಂತೆ ಹಿಂದ ಜಪ ಶುರು ಮಾಡಲು ಕಾರಣವೇನು? ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪಗೆ ಉತ್ತಮ ಅವಕಾಶಗಳಿದ್ದವು, ಸೋತರೆ ಸೋಲಲಿ, ಚುನಾವಣೆ ನನ್ನ ನೇತೃತ್ವದಲ್ಲೇ ಆಗಲಿ ಅಂತ ಪಕ್ಷದಲ್ಲಿ ತನ್ನ ಹಿಡಿತವನ್ನು ಗಟ್ಟಿ ಮಾಡಬಹುದಾಗಿತ್ತಲ್ಲ? ಆದರೆ ಆಗ ಜವಾಬ್ದಾರಿ ಹೊರಲು ಉತ್ಸುಕತೆ ತೋರದೇ ಈಗ ಏಕಾಏಕಿ ಬ್ರಿಗೇಡ್ ರಾಜಕಾರಣ ಶುರು ಮಾಡಿದ್ದು ಅಧಿಕಾರದ ಲಾಲಸೆಯಿಂದಲ್ಲವೇ?

ಪಕ್ಷದಿಂದ ಹೊರ ಹೋಗಿದ್ದರೂ ಯಡಿಯೂರಪ್ಪನವರನ್ನು ಮತ್ತೆ ಕರೆತಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಮುಂದಿನ ಮುಖ್ಯಮಂತ್ರಿ ನೀವೇ ಅಂತ ಘೋಷಣೆ ಮಾಡಿದ ಹಿಂದಿನ ಉದ್ದೇಶ ಒಂದೇ. ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಮತ್ತಾರೂ ವರ್ಚಸ್ವೀ ನಾಯಕನಿಲ್ಲ ಎಂಬುದು. ಅದರೆ ರಾಜ್ಯಾಧ್ಯಕ್ಷ ಆದ ಮೇಲೆ ಯಡಿಯೂರಪ್ಪ ಮತ್ತದೇ ಸೇಡಿನ ರಾಜಕಾರಣ ಮಾಡಲಾರಂಭಿಸಿದರು. ರಾಜಕೀಯ ಪಟ್ಟುಗಳನ್ನು ಹಾಕಿ ತಾವಂದುಕೊಂಡದ್ದನ್ನು ಸಾಧಿಸುವುದರಲ್ಲಿ ನಿಸ್ಸೀಮ ಯಡಿಯೂರಪ್ಪ. ಇದು ಬಹಳ ಭಾರಿ ಸಾಭೀತಾಗಿದೆ. ಅಧಿಕಾರದಲ್ಲಿದ್ದಾಗ ಭಿನ್ನಮತೀಯರ ಪಟ್ಟಿಗೆ ಮಣಿದು ರಾಜೀನಾಮೆ ನೀಡಿದ್ದ ಶೋಭಾ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿದ್ದು, ಚುನಾವಣೆಯಲ್ಲಿ ಸೋತರೂ ಸೋಮಣ್ಣ ಅವರನ್ನು ಮಂತ್ರಿ ಮಾಡಿದ್ದು, ತಾವು ಅಧಿಕಾರದಿಂದ  ಇಳಿಯುವಾಗ ಸದಾನಂದ ಗೌಡರನ್ನು ಸಿಎಂ ಮಾಡಿದ್ದು, ಮತ್ತವರನ್ನು ಇಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ತದನಂತರ ಕೆಜೆಪಿ ಸ್ಥಾಪನೆ ಮಾಡಿ ಬಿಜೆಪಿಯನ್ನು ಸೋಲಿಸಿದ್ದು ಇವೆಲ್ಲಾ ಯಡಿಯೂರಪ್ಪನವರ ಹಠ ಮತ್ತು ಜಿದ್ದಿನ ರಾಜ‌ಕಾರಣದ ಸಣ್ಣ ಉದಾಹರಣೆಗಳು. ಹಾಗೆಯೇ ಈಗ ಈಶ್ವರಪ್ಪನವರನನ್ನು ವ್ಯವಸ್ಥಿತವಾಗಿ ಪಕ್ಷದಿಂದ ಹೊರ ಹಾಕಲು ಪ್ರಯತ್ನ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

೨೦೧೮ರಲ್ಲಿ ಯಡಿಯೂರಪ್ಪನವರಿಗೆ ೭೫ ವರ್ಷ ಪೂರ್ತಿಯಾಗಲಿದ್ದು ಬಿಜೆಪಿಯ ಆಂತರಿಕ ನಿಯಮದಂತೆ ೭೫ ದಾಟಿದವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲ್ಲ ಅನ್ನೋ ನಿಯಮ ಕರ್ನಾಟಕಕ್ಕೂ ಅನ್ವಯವಾದರೆ ಕರ್ನಾಟಕ ಸಿಎಂ ಸ್ಥಾನಕ್ಕೆ ಅನಾಯಾಸವಾಗಿ ತಾನು ಹೋಗಬಹುದು ಅನ್ನೋ ದೂರದ ಆಸೆ ಈಶ್ವರಪ್ಪನವರದ್ದೇನೋ? ಆದರೆ ಅನಂತಕುಮಾರ್, ಶೋಭಾ ಕರಂದ್ಲಾಜೆ, ಶೆಟ್ಟರ್ ಮತ್ತಿತರರೇನು ಕಡ್ಲೆಪುರಿ ತಿನ್ನುತ್ತಾ ಕೂರುತ್ತಾರೆಯೇ? ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅನಂತ್ ಕುಮಾರ್ ಪರೋಕ್ಷವಾಗಿ ಬಿಎಸ್‌ವೈ ಪರ ಬ್ಯಾಟಿಂಗ್ ಮಾಡುತ್ತಿರುವುದು. ಯಡಿಯೂರಪ್ಪ ನಂತರ ಲಿಂಗಾಯತರ ಬೆಂಬಲ ಪಡೆದು ಬಿಎಸ್‌ವೈ ಉತ್ತರಾಧಿಕಾರಿ ತಾನಾಗಲು ಪ್ರಯತ್ನ ಮಾಡುತ್ತಿದ್ದಾರೆ ಅನಂತ್. ಆದರೆ ತನ್ನ ಆಪ್ತೆ ಶೋಭಾ ಬಿಟ್ಟು ಅನಂತ್’ಗೆ ಮಣೆ ಹಾಕುವರೇ ಯಡಿಯೂರಪ್ಪ ಅನ್ನುವುದೇ ಯಕ್ಷಪ್ರಶ್ನೆ.

ಬ್ರಿಗೇಡ್ ಉದ್ದೇಶ ದಲಿತ ಮತ್ತು ಹಿಂದುಳಿದವರ ಕಲ್ಯಾಣ ಅಂತ ಈಶ್ವರಪ್ಪ ಹೇಳುತ್ತಾ ಬರುತ್ತಿದ್ದರೂ ಯಡಿಯೂರಪ್ಪನವರ ಹಿಡಿತ ಸಡಿಲ ಮಾಡುವುದು ಮತ್ತು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದೇ ಇದರ ಉದ್ದೇಶ ಅನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಈಶ್ವರಪ್ಪನವರ ಆಕ್ರೋಶದ ಕೇಂದ್ರ ಬಿಂದು ಸಂಸದೆ ಶೋಭಾ ಪಕ್ಷದಲ್ಲಿ ತನ್ನ ಪ್ರಾಬಲ್ಯವನ್ನು ಬಿಗಿ ಮಾಡುತ್ತಿರುವುದು ಎನ್ನಲಾಗುತ್ತಿದೆ. ಮತ್ತು ಈಶ್ವರಪ್ಪನವರಿಗೆ ಬೆಂಬಲವಾಗಿ ಆರೆಸ್ಸೆಸ್ ನಾಯಕ ಸಂತೋಷ್ ಮತ್ತು ಜೆಡಿಎಸ್ ಪಕ್ಷದ ಬೆಂಬಲವೂ ಇದೆ ಅನ್ನೋ ಮಾತು ಬೆಂಗಳೂರಿನ ಜಗನ್ನಾಥ ಭವನದ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೆ ರಾಜ್ಯಾದ್ಯಂತ ಸುತ್ತಿ ಪಕ್ಷ ಸಂಘಟನೆ ಮಾಡುವ ವಿಷಯಕ್ಕೆ ಬಂದ್ರೆ ಯಡಿಯೂರಪ್ಪನವರನನ್ನು ಬಿಟ್ಟರೆ ತಾಕತ್ತು ಹೊಂದಿದ ಬೇರೆ ನಾಯಕ ರಾಜ್ಯ ಬಿಜೆಪಿಯಲ್ಲಿಲ್ಲ. ಸಧ್ಯಕ್ಕೆ ಯಡಿಯೂರಪ್ಪನವರ ಮುಂದಿರೋ ಆಯ್ಕೆಗಳು ಎರಡು. ಒಂದೋ ಈಶ್ವರಪ್ಪ ಮತ್ತವರ ಬೆಂಬಲಿಗರನ್ನು ಪಕ್ಷದಿಂದ ಒದ್ದೋಡಿಸಿ ಆಗಿದ್ದಾಗಲಿ ಅಂತ ವಿಧಾನಸಭಾ ಚುನಾವಣೆಗೆ ಮುನ್ನುಗ್ಗುವುದು, ಇಲ್ಲವೋ ಎಲ್ಲರನ್ನೂ ಪ್ರಾಮಾಣಿಕವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು. ಇವೆರಡೂ ಆಗದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಎಡವಟ್ಟುಗಳ ಕೆಸರಿನಲ್ಲಿ ಅರಳಬೇಕಾದ ಕಮಲ ಕೊಳೆತು ಹೋಗುವುದು ಸೂರ್ಯ ಚಂದ್ರರಷ್ಟೇ ಸತ್ಯ.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post