ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಲೇ ಇವೆ. ಕೇವಲ ದಾಳಿಯಲ್ಲ, ಹಾಡು ಹಗಲೇ ಬರ್ಬರವಾಗಿ ಕೊಂದು ಹಾಕಲಾಗುತ್ತಿದೆ. ಅಮಾಯಕರನ್ನು ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಪೋಲಿಸರು, ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೇ ಹಿಂದೂ ಸಂಘಟನೆಗಳ ವಿರುದ್ಧ ಹೋರಾಡಿಯೆಂದು ಅಭಯ ತೋರಿದರೆ, ರಕ್ತಪಾತವಲ್ಲದೇ ಇನ್ನೇನು ಆಗಲು ಸಾಧ್ಯ?
ರಾಜ್ಯದಲ್ಲಿ ಸರಣಿ ಕೊಲೆಗಳ ಪರ್ವವನ್ನು ಕಳೆದ ವರ್ಷದಿಂದಲೇ ಆರಂಭಿಸಲಾಗಿದೆ. ಕ್ರೂರಿ, ಮತಾಂಧ, ಕನ್ನಡ ವಿರೋಧಿ ಟಿಪ್ಪುವಿನ ಜನ್ಮ ದಿನಚರಣೆಯ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪರ ಬಲಿಯನ್ನು ಪಡೆಯಲಾಯಿತು. ಸರ್ಕಾರ, “ಕುಟ್ಟಪ್ಪ ತೀರಿಕೊಂಡಿದ್ದು ಕಾಲು ಜಾರಿ” ಎಂದು ಪ್ರಕರಣಕ್ಕೆ ಷರಾ ಬರೆದು ಬಿಟ್ಟಿತು. ಅಲ್ಲಿಗೆ, ಕೇರಳದಿಂದ ಲಾರಿಗಳಲ್ಲಿ ಕೋಮು ದಳ್ಳುರಿಗೆ ಜನರನ್ನು ಕರೆಸಿದ್ದು ಸತ್ಯವಾ? ಕರೆಸಿದ್ದು ಯಾರು? ಅದರ ಹಿಂದಿನ ಕೈವಾಡವೇನು? ಹಾಗೂ ಅಂದಿನ ಗಲಾಟೆ ಸಂದರ್ಭದ ವಿಡಿಯೋ ಹರಿದಾಡುತ್ತಿದ್ದರೂ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಜನರೆಷ್ಟು? ಅವರಿಗೆಲ್ಲಾ ಯಾವ ರೀತಿಯ ಶಿಕ್ಷೆಯಾಯಿತು ಎಂಬಿತ್ಯಾದಿ ಪ್ರಶ್ನೆಗಳು, ಕುಟ್ಟಪ್ಪರೊಂದಿಗೆ ಮಣ್ಣು ಸೇರಿಕೊಂಡವು!
ಅನಂತರ 2016 ಮಾರ್ಚ್ ತಿಂಗಳಲ್ಲಿ, ಅಕ್ರಮ ಮಸೀದಿ ನಿರ್ಮಾಣವನ್ನು ತಡೆದರೆಂಬ ಕಾರಣಕ್ಕೆ ಮೈಸೂರಿನಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಿ.ಜೆ.ಪಿ.ಯ ಕೆ. ರಾಜುರನ್ನು ಹಾಡು ಹಗಲೇ ಕೊಲ್ಲಲಾಯಿತು. ಅಕ್ಟೋಬರ್‍ನಲ್ಲಿ ಬೆಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್‍ರನ್ನು ಸಂಘದ ಗಣವೇಷದಲ್ಲಿರುವಂತೆಯೇ ಹತ್ಯೆಗೈದರು. ರುದ್ರೇಶ್‍ರ ಸಾವಿನ ಕಹಿ ಇನ್ನೂ ಮಾಸಿರಲಿಲ್ಲ, ಅಷ್ಟರಲ್ಲಾಗಲೇ ಕೇವಲ ಮೂರು ವಾರಗಳ ಅಂತರದಲ್ಲಿ ಮತ್ತೆ ಮೈಸೂರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತ ಮಾಗಳಿ ರವಿ ಶವವಾಗಿ ದೊರೆತ. ರವಿ ಕೊಲೆಯಾಗಿ ಮೂರು ದಿನಗಳಾಗಿದ್ದಷ್ಟೇ ಅಂದರೆ ನವಂಬರ 7 ರಂದು ಬೀದರ್‍ನಲ್ಲಿ ಮತ್ತೆ ಬಿ.ಜೆ.ಪಿ. ಕಾರ್ಯಕರ್ತ ಸುನೀಲ್ ಡೊಂಗ್ರೆಯ ಕೊಲೆಯಾಯಿತು. ಸುನೀಲ್ ಕೊಲೆಯ ಮಾರನೇ ದಿನವೇ ಅನಾಣ್ಯೀಕರಣ ಚರ್ಚೆ ಆರಂಭವಾದದ್ದರಿಂದ ಸುನೀಲ್ ಕೊಲೆ ಹೆಚ್ಚು ಚರ್ಚೆ ಆಗಲೇ ಇಲ್ಲ. ಸ್ಥಳೀಯ ಶಾಸಕರೊಬ್ಬರನ್ನು ಬಿಟ್ಟರೇ, ರಾಜ್ಯಮಟ್ಟದ ಯಾವೊಬ್ಬ ನಾಯಕನೂ ಆ ಕಡೆ ತಲೆ ಹಾಕಿಲ್ಲ. ವಿರೋಧ ಪಕ್ಷ ನಾಯಕರಂತೂ ಕೇಳುವುದೇ ಬೇಡ. ಸಾಕಷ್ಟು ಕೆಲಸಗಳ ನಡುವೆ ಅವರಿಗೆ ಇದಕ್ಕೆಲ್ಲಾ ಪುರಸೊತ್ತಾದರೂ ದೊರೆತೀತೆ?
ಇದೀಗ ಶೃಂಗೇರಿಯಲ್ಲಿ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಅಭೀಷೆಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೊಂದು ಆತ್ಮಹತ್ಯೆಯೇ ನಿಜವಾಗಿದ್ದರೂ, ಈ ಷಡ್ಯಂತ್ರದಲ್ಲಿ ಕಾಣದ ಕೈಗಳ ಕೈವಾಡ ಅಭಿಷೇಕ್ ಬರೆದಿಟ್ಟ ಡೆತ್‍ನೋಟಲಿ ಸ್ಪಷ್ಟವಾಗುತ್ತದೆ. ಅಭಿಷೇಕ್‍ನ ಡೆತ್‍ನೋಟ್ ನೋಡಿದ ಯಾರಿಗಾದರೂ ಕರಳು ಚುರ್ ಎನ್ನದಿದ್ದೀತೆ? “ಮಾಡದ ತಪ್ಪಿಗೆ ನನ್ನ ಮೇಲೆ ಕೇಸ್ ಹಾಕಲಾಗಿದೆ. ಇದರಿಂದ ಮನೆ ಮತ್ತು ಸಮಾಜದಲ್ಲಿ ಮುಖ ತೋರಿಸಲಾಗುವುದಿಲ್ಲ. ಸರ್ಕಾರಿ ಕೆಲಸ ಪಡೆದು, ತಂದೆ-ತಾಯಿಯರನ್ನು ಸಾಕಬೇಕೆಂದುಕೊಂಡಿದ್ದೆ. ಆದರೆ ಎಫ್.ಐ.ಆರ್. ಆಗಿರುವುದರಿಂದ ಇನ್ನೇಲ್ಲಿಯ ಸರ್ಕಾರಿ ಕೆಲಸ?” ಎಂದುಕೊಂಡು ನೇಣಿಗೆ ಶರಣಾಗಿದ್ದಾನೆ. ಈ ಸುಳ್ಳು ಕೇಸ್ ಹಿಂದಿರುವ ಕುತಂತ್ರ ಹೊರ ಬರಬೇಕಲ್ಲವೆ? ಅಭಿಷೇಕ್ ಗೆಳೆಯ, “ಸ್ಥಳೀಯ ಕೆಲ ರಾಜಕಾರಣಿಗಳ ಒತ್ತಡದಿಂದ ಕೇಸ್ ದಾಖಲಾಗಿದೆಯೆಂದು, ಅದಕ್ಕೆ ವೈದ್ಯರ ಸುಳ್ಳು ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಾಗಿದೆ” ಎಂದು ಅಪಾದಿಸಿದ್ದಾನೆ. ಈ ಎಲ್ಲಾ ಸತ್ಯಾಸತ್ಯೆತೆಯ ವಿವರಗಳು ಹೊರ ಬರಬೇಕಿದೆ. ಇದಕ್ಕೆ ಸ್ಥಳೀಯವಾಗಿ ಕುಮ್ಮಕ್ಕು ಕೊಟ್ಟವರಾರು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಪ್ರತಿಪಕ್ಷ ಬಿ.ಜೆ.ಪಿ. ಮತ್ತು ಪರಿವಾರದ ನಾಕತ್ವ ಬಹು ಹಗುರವಾಗಿ ಪರಿಗಣಿಸಿದೆ. ಆದರೆ ವಸ್ತುಸ್ಥಿತಿ ಅಷ್ಟು ಸುಲಭವಾಗಿಲ್ಲವೆಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. Kashmir, Kolkata, Kerala ಹೀಗೆ ಕರ್ನಾಟಕವೂ ‘K’ ಸರಣಿಯ ಭಾಗವಾಗುತ್ತದೆಯಾ ಎಂಬ ಆತಂಕ ಎದುರಾಗಿದೆ. ಗಮನಿಸಿ, ಈ ಮೇಲಿನ ಮೂರು ಪ್ರದೇಶದಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಎಗ್ಗಿಲ್ಲದೇ ಕೊಲ್ಲಲಾಗುತ್ತಿದೆ. ಅವರ ಕುಟುಂಬದ ಮೇಲೆ ನಿರಂತರವಾಗಿ ಹಲ್ಲೆ, ದಾಳಿಗಳೂ ನಡೆಯುತ್ತಲೇ ಇರುವುದನ್ನು ನಾವು ನೋಡುತ್ತಿದ್ದೆವೆ. ಮುಂದೆ ಕರ್ನಾಟಕವೂ ಅದೇ ಪರಿಸ್ಥಿತಿ ಭಾಗವಾದರೂ ಅಚ್ಛರಿಯಿಲ್ಲವೆನ್ನುವಂತಹ ಭಯಾನಕ ಘಟನೆಗಳಿಗೆ ರಾಜ್ಯವೀಗ ಸಾಕ್ಷಿಯಾಗುತ್ತಿದೆ. ಹಾಗೊಂದು ವೇಳೆ ಆ ರೀತಿಯ ರಕ್ತ ಚರಿತ್ರೆ ನಾಡಿನಲ್ಲಿಯೂ ನಡೆದರೆ, ನಾಡಿನ ಭವಿಷ್ಯದ ಗತಿಯೇನು? ಈ ಕುರಿತು ನಾಡಿನ ಎಲ್ಲ ಪ್ರಜ್ಞಾವಂತ ಜನರು ಆಲೋಚಿಸಬೇಕಿದೆ. ಈ ಜೀವ ವಿರೋಧಿ ಮನಸ್ಥಿತಿಯನ್ನು ನಾವೀಗ ತಡೆಯದೆ ಹೋದಲ್ಲಿ ಮುಂದೊಂದು ದಿನ ಇದೇ ಹೆಮ್ಮರವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.
ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಬಿಜೆ.ಪಿ.ಯನ್ನು ಪ್ರಶ್ನಿಸಬೇಕೆಂದರೆ, ಹೇಸಿಗೆಯೆನಿಸುತ್ತದೆ. ಪಕ್ಷ, ಇದುವರೆಗಿನ ಯಾವುದೇ ಸಂದರ್ಭದಲ್ಲೂ ಜನರ ನೋವಿಗೆ ಸ್ಪಂದಿಸಿದ ಉದಾಹರಣೆಗಳೇ ಕಾಣುತ್ತಿಲ್ಲ. ಸರ್ಕಾರ ಸಾಲು ಸಾಲು ಹಳವಂಡಗಳನ್ನು ಸೃಷ್ಟಿಸುತ್ತಿದೆ, ಹಾಡುಹಗಲೇ ರಾಜಾರೋಷವಾಗಿ ಕೊಲೆಗಳು ನಡೆಯುತ್ತಿದ್ದರೂ, ಅದನ್ನು ನ್ಯಾಯಯುತವಾಗಿ ಪ್ರತಿಭಟಿಸುವ ಚೈತನ್ಯವನ್ನೇ ಇದುವರೆಗೂ ತೋರಿಲ್ಲ. ಎಲ್ಲವೂ ಮಲತಾಯಿ ಶ್ರಾದ್ಧವಷ್ಟೇ. ಯಾವೊಂದು ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಹೋರಾಟದ ಮನೋಭಾವವನ್ನೇ ರಾಜ್ಯ ಬಿ.ಜೆ.ಪಿ ಮರೆತಂತಿದೆ. ಕನಿಷ್ಟ ತನ್ನ ಕಾರ್ಯಕರ್ತರ ಸಾವಿಗೂ ನ್ಯಾಯ ಒದಗಿಸಲಾರದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಸದಾ ಅಧಿಕಾರದ ಹಪಾಹಪಿ, ಹಣದ ಆಸೆ, ಪ್ರತಿಷ್ಠೆ, ಗುಂಪುಗಾರಿಕೆಗಳಲ್ಲೇ ಮಗ್ನರಾಗಿರುವ ನಾಯಕರಿರುವಾಗ ಪಕ್ಷ, ತತ್ವ, ಸಿದ್ಧಾಂತಕ್ಕೆಂದು ಕಾರ್ಯಕರ್ತರು ಜೀವ ಬಿಡುವುದರಲ್ಲಿ ಯಾವ ಸಾರ್ಥಕ್ಯವಿದೆ?
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ ಸರಣಿ ಕೊಲೆಗಳನ್ನು ಗಮನಿಸಿದರೆ, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದಂತೂ ಸ್ಪಷ್ಟ. ಬಿ.ಜೆ.ಪಿ. ಹಣದ ಆಸೆಯಿಂದಲೋ, ಅಧಿಕಾರದ ಹಪಾಹಪಿ, ಗುಂಪುಗಾರಿಕೆಯಿಂದಲೊ ನೈಜ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿಲ್ಲವೆಂದುಕೊಳ್ಳೊಣ. ಆದರೆ ಸ್ವತಃ ಸಂಘ ಪರಿವಾರದ ನಾಯಕರಾದರೂ ಈ ಕುರಿತು ಧ್ವನಿ ಎತ್ತಬೇಕಿತ್ತಲ್ಲ? ತನ್ನದೇ ಕಾರ್ಯಕರ್ತರ ಸರಣಿ ಕೊಲೆಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಾಗಲೂ ಕಣ್ಣು ಮುಚ್ಚಿ ಕುಳಿತುಕೊಳ್ಳುವ ದರ್ದೇನು ಹೇಳಿ. ಮಹಾನ್ ಹೋರಾಟಗಳನ್ನು ಸಂಘಟಿಸುವ ಸಾಮರ್ಥ್ಯವಿರುವ ಸಂಘಕ್ಕೆ, ಇದೊಂದು ಪ್ರಶ್ನೆಯೇ ಅಲ್ಲ. ಹಾಗಿದ್ದಾಗಿಯೂ ಯಾಕಿಷ್ಟು ನಿಷ್ಕಾಳಜಿ? ಕಾರ್ಯಕರ್ತರ ಜೀವಕ್ಕೇನು ಬೆಲೆಯಿಲ್ಲವೇ? ಸಂಘದ ನಾಯಕರಿಗೆ ತನ್ನ ಕಾರ್ಯಕರ್ತರ ಕುರಿತು ಕಾಳಜಿ ಇದೆ, ಎನ್ನುವುದಾದರೆ ಯಾರ ಕೊಲೆಯ ಸಂದರ್ಭದಲ್ಲಿ ಸ್ಪಂದನೆ, ಕಾಳಜಿ ವ್ಯಕ್ತವಾಗಿದೆ ತೋರಿಸಲಿ. ಕೇವಲ ಒಂದೆರಡು ದಿನಗಳ ಕಾಲ ನಾಮಕಾವಸ್ತೆ ಪ್ರತಿಭಟಿಸುವುದು, ಪೋಲಿಸ್‍ರಲ್ಲೊಂದು ಪ್ರಕರಣ ದಾಖಲಿಸುವುದು, ಪೋಲಿಸರ, ‘ಪ್ರಕರಣವನ್ನು ಭೇದಿಸಿ ತಪ್ಪಿತಸ್ತರನ್ನು ಶಿಕ್ಷಿಸಲಾಗುವುದು’ ಎನ್ನುವ ಭರವಸೆ ನುಡಿಗಳನ್ನು ಕೇಳಿಕೊಂಡು ಬಂದು, ಅವರ ಕುಟುಂಬಕ್ಕೊಂದಿಷ್ಟು ಪರಿಹಾರ ಒಂದನ್ನು ಒಪ್ಪಿಸಿ, ಕೃತಾರ್ಥರಾದರೆ ಆಯಿತೇ? ಅಲ್ಲಿಗೆ ನಾಯಕರ ಜವಾಬ್ದಾರಿ ತೀರಿತೆ?
ಬಿ.ಜೆ.ಪಿ. ನಾಯಕರು ತಪ್ಪು ಹೆಜ್ಜೆಯಿಟ್ಟಾಗ ಸರಿ ದಾರಿಗೆ ತರಬೇಕಾದ ಸಂಘದ ಪ್ರಮುಖರೇ ಹೀಗೆ ಮೈಮರೆತು ಕುಳಿತರೆ ಹೇಗೆ? ನಾಳೆ ಕರ್ನಾಟಕದಲ್ಲೂ ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರದಂತಹ ಸ್ಥಿತಿ ಬರಬಾರದಂತೆ ನೋಡಿಕೊಳ್ಳಬೇಕಿದೆ. ಈಗಾಗಲೇ ರಾಜ್ಯದೆಲ್ಲೆಡೆ ನಡೆದಿರುವ ಸರಣಿ ಕೊಲೆಗಳ ಕುರಿತಾಗಿ ಬೃಹತ್ ಕಾನೂನು ಹೋರಾಟವನ್ನು ಸಂಘಟಿಸಬೇಕಾಗಿದೆ. ಎಲ್ಲಾ ಕೊಲೆಗಳ ಹಿಂದಿರುವ ಕಾಣದ ಕೈಗಳ ನಿಜಸ್ವರೂಪ ಹೊರ ಬಂದಾಗ ಮಾತ್ರ ಈ ರೀತಿಯ ಗೂಂಡಾಗಿರಿಗೆ ಕಡಿವಾಣ ಬೀಳಲು ಸಾಧ್ಯ. ಸದ್ಯ ಈ ಹಿಂದಿನ ಸಾಲು ಸಾಲು ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಅಭಿಷೇಕ್ ಸಾವಿನ ಪ್ರಕರಣದಲ್ಲಿ ರಾಜ್ಯದ ಪೋಲಿಸರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನವೇ ಸರಿ. ಹಾಗಾಗಿ ಸಿ.ಬಿ.ಐ. ಮೂಲಕ ತನಿಖೆಗೆ ಸರ್ಕಾರ ಮುಂದಾಗಲೇಬೇಕಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರ ಹೋರಾಟವನ್ನು ರೂಪಿಸಬೇಕಿದೆ. ಮುಗ್ಧ ಹುಡುಗನ ಸಾವಿಗೆ ಕಾರಣವಾಗಿರುವ ಎಲ್ಲ ಹೀನ ಶಕ್ತಿಗಳಿಗೂ ಕಾನೂನು ರೀತಿಯ ಶಿಕ್ಷೆಯಾಗುವಂತೆ ಜನಾಂದೋಲನವನ್ನು ರೂಪಿಸಬೇಕಿದೆ. ಇಲ್ಲದಿದ್ದಲ್ಲಿ ಅಭಿಷೇಕ್ ಸಾವಿಗೆ ನ್ಯಾಯ ಮರೀಚಿಕೆ ಆಗುವುದು ಮಾತ್ರವಲ್ಲ, ನಾಳೆಯ ದಿನಗಳಲ್ಲಿ ಕರ್ನಾಟಕವೂ ಮತ್ತೊಂದು ಬಂಗಾಳವೊ, ಮತ್ತೊಂದು ಕೇರಳವೊ ಆಗುತ್ತದೆಯಷ್ಟೇ!
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವ ವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ
Facebook ಕಾಮೆಂಟ್ಸ್