X

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..

ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ಟರು,ಅದು ಕೊಟ್ರಪ್ಪ ಮಾಸ್ಟರು. ನನ್ನ ನೆಚ್ಚಿನ, ಜೀವನದಲ್ಲಿ ನೆನೆಪಿಟ್ಟುಕೊಳ್ಳುವಂತಹ ವ್ಯಕ್ತಿತ್ವದವರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ. ಗರಿಷ್ಟ ಅಂಕ ಇಪ್ಪತೈದು. ಸರಿ ಸುಮಾರು ಎಲ್ಲಾ ವಿಷಯಗಳಲ್ಲೂ ಇಪ್ಪತ್ತರ ಮೇಲೆಯೇ ಗಳಿಸಿದ ನೆನೆಪು ನನಗೆ ,ಅದಕ್ಕೆಂದೇ ಒಮ್ಮೆ ತರಗತಿಯ ಮಾನೀಟರ್ ಆದದ್ದೂ ಉಂಟು. ಹಾಗೆಯೇ ಇರಲು ಒಂದು ದಿನ..

 

“ಸ್ವಾತಂತ್ರೋತ್ಸವ ಆಚರಣೆಯ ಅಂಗವಾಗಿ ಈ ವರ್ಷ ಪ್ರಬಂದ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ, ಯಾರಾದರು ಪ್ರಬಂಧ ಬರೆಯುವವರಿದ್ದರೆ.. ಕೊಟ್ರಪ್ಪ ಮಾಸ್ಟರ್ ಹತ್ತಿರ ಹೆಸರು ಕೊಡಿ” ಎಂದೇಳಿ ಸುಲೋಚನ ಮೇಡಂ ಹೊರಟು ಹೋದರು. ನಮಗೋ ಪ್ರಬಂಧವೆಂದರೇನು  ಗೊತ್ತೇ ಇರಲಿಲ್ಲ. ಆಗ ಕೊಟ್ರಪ್ಪ ಮಾಸ್ಟರ್ “ನಿಮಗೆ ಒಂದು ವಿಷಯ ಕೊಡ್ತಾರೆ ಅದರ ಬಗ್ಗೆ ಬರೀಬೇಕು”..ಯಾರ್ ಚೆನ್ನಾಗಿ ಬರೀತಾರೆ ಅವ್ರೀಗೆ ಬಹುಮಾನ” ಎಂದಾಕ್ಷಣ “ಸಾರ್ ಯಾ ವಿಷ್ಯ” ಎಂದೆ “ಅದು ಅವತ್ತೇ ಗೊತ್ತಾಗುತ್ತೊ..” ಎಂದು ನನ್ನ ಕುತೂಹಲಕ್ಕೆ ಬ್ರೇಕ್ ಹಾಕಿದರು. ಮತ್ತು ನನ್ನ ಹೆಸರನ್ನೂ ಬರೆದುಕೊಂಡರು.

 

ನಾನೋ ಕ್ಲಾಸ್ ಮಾನಿಟರ್,.ಸ್ಪರ್ಧೆಯಲ್ಲಿ ಭಾಗವಹಿಸದಿದ್ದರೆ ಹೇಗೆ? ಹಾಗಾಗಿ ನನ್ನದೂ ಒಂದು ಕೈ ಹಾಕಿದೆ. ನನ್ನ ಕಾಂಪಿಟೇಷನ್ ತರಗತಿಯ ಎಲ್ಲಾ ವಿಧ್ಯಾರ್ಥಿಗಳ ಜೊತೆ ಇರಲಿಲ್ಲ..ಇದ್ದಿದ್ದು ಕೇವಲ ನಿರು,ಶಿವಲೀಲ, ಮತ್ತು ಪೂರ್ಣಿಮ ಈ ಮೂವರ ಜೊತೆ ಮಾತ್ರ ಏಕೆಂದರೆ ಅವರೂ ಎಲ್ಲಾ ಪರೀಕ್ಷೆಗಳಲ್ಲಿ ಇಪ್ಪತೈದಕ್ಕೆ ಇಪ್ಪತ್ತರ ಮೇಲೆ ತೆಗೆದವರು.

ಅವತ್ತಿನ ದಿನ ಬಂದೇ ಬಿಟ್ಟಿತು..ವಿಷಯ ಬಲು ರೋಚಕವಾಗಿತ್ತು.

 

“ತೆಂಗಿನಮರ”

ಪ್ರಬಂಧ ಬರೆಯಬೇಕಾದದ್ದು ಇದರ ಮೇಲೆ. ಏನೆಂದು ಬರೆಯಬಹುದು..? ನಮ್ಮ ಮನೆಯ ಹತ್ತಿರ ತೆಂಗಿನ ಮರವಿಲ್ಲ..ಮತ್ತು ನಮ್ಮ ತೆಂಗಿನ ತೋಟವಂತೂ ಇಲ್ಲವೇ ಇಲ್ಲ. ಅಂತೂ ಅವರು ಕೊಟ್ಟ  ಹಾಳೆಯ ಮೇಲೆ ನನಗೆ ತೋಚಿದ್ದನ್ನು ಬರೆದು ಕೊಟ್ಟೆ. ನನ್ನ ತ್ರಿಮಿತ್ರರೂ ಬರೆದು ಕೊಟ್ಟಾಯಿತು.

ಎಲ್ಲರಂತೆ ನಾನೂ ನಿರುಗೆ ಕೇಳಿದೆ “ನಿರು..ನೀ ಎಷ್ಟು ಬರೆದೆ?”

ಅದಕ್ಕೆ “ನಾನು ಹದಿನಾಲ್ಕು ಲೈನ್ ಬರೆದಿದ್ದೇನೆ” ಎಂದ, ನನಗೋ ತುಂಬಾ ಬೇಸರವಾಯಿತು. ಕಾರಣ ನಾ ಬರೆದದ್ದು ಕೇವಲ ಹದಿಮೂರುವರೆ ಲೈನ್ ಮಾತ್ರ. ಹಾಗಾಗಿ ನಿರುಗೆ ಪಕ್ಕಾ ಬಹುಮಾನ ಎಂದು ಮನೆ ಕಡೆಗೆ ನೆಡೆದೆ.

ಸ್ವಾತಂತ್ರ ದಿನಾಚರಣೆ ನಮಗಂತೂ ಖುಷಿಯೋ ಖುಷಿ..ಏಕೆಂದರೆ ಬೆಳೆಗ್ಗೆ ಹತ್ತಾದರಾಯಿತು,ಕಾರ್ಯಕ್ರಮ ಮುಗಿದ ನಂತರ ನಮಗೂ ಶಾಲೆಗೂ ಸಂಬಂಧವಿಲ್ಲದಂತೆ ಓಡಿ ಹೊಗುತ್ತಿದ್ದೆವು. ಅದಿರಲಿ…ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಊರಿನ ಹಿರಿಯ ನಾಗರಿಕರು, ಸ್ವಾತಂತ್ರ ಹೋರಾಟಗಾರರೂ ಆದ ಸನ್ಮಾನ್ಯ ಶ್ರೀ ಶಂಕರ ಗೌಡರು. ಅಧ್ಯಕ್ಷರಾಗಿ ಶ್ರೀ ಕುಬೇರಪ್ಪ, ಶಾಲೆಯ ಮುಖ್ಯೋಪಾಧ್ಯಾಯರು. ಏಳರಿಂದ ಎಂಟು ಊರೆಲ್ಲಾ ಪ್ರಭಾತ್ ಫೇರಿ ಮುಗಿಸಿದ ನಂತರ ಅತಿಥಿಗಳ ಭಾಷಣಕ್ಕೆ ಕುಳಿತಿದ್ದೆವು. ಪ್ರಾರ್ಥನಾ ಗೀತೆ ಮುಗಿಯಿತು,ದೇಶ ಭಕ್ತಿ ಹಾಡಾದ ನಂತರ ಭಾಷಣ ಶುರುವಾಯಿತು. ಆದರೆ ನನಗೆ ಯಾವುದರ ಮೇಲೂ ಅಷ್ಟೊಂದು ಆಸಕ್ತಿ ಇರಲಿಲ್ಲ ಒಂದನ್ನು ಬಿಟ್ಟು. ಅದುವೇ ಪಕ್ಕದ ಟೇಬಲ್ ಮೇಲೆ ನೀಟಾಗಿ ಜೋಡಿಸಿಟ್ಟ ಬಹುಮಾನಗಳು ಅದರಲ್ಲೂ ಆ “ಪ್ಲೈವುಡ್” (ರೈಟಿಂಗ್ ಪ್ಯಾಡ್) ಆದರೆ ನನಗೆ ಸಿಗಬೇಕಲ್ಲಾ..? ಯಾವ ಕ್ರೀಡೆಯಲ್ಲೂ ಬಹುಮಾನ ಬಂದಿರಲಿಲ್ಲ. ಪ್ರಬಂಧ ಬರೆದದ್ದು ನೆನಪೇ ಇರಲಿಲ್ಲ. ಹಾಗಾಗಿ ಭಾಷಣ  ಮುಗಿದ ನಂತರ ಬಹುಮಾನ ತೆಗೆದುಕೊಳ್ಳುವವರನ್ನ ನೋಡುತ್ತಾ ಕುಳಿತುಕೊಂಡೆ.

“ಈಗ ನಾಲ್ಕನೇ ತರಗತಿಯ ಪ್ರಬಂಧ ಸ್ಪರ್ಧೆಯ ವಿಜೇತರು” ಎಂದು ಹೇಳಿದಾಗಲೂ ನನಗೇನೂ ಅನಿಸಲಿಲ್ಲ ಆದರೆ “ ಮೊದಲನೇ ಬಹುಮಾನ…ಮುಕಾರಿ ನಾಗರಾಜ್” ಎಂದೊಡನೇ ಮೈಯಲ್ಲಾ ರೋಮಾಂಚನವಾಯಿತು. ನೆಲದಿಂದ ಮೇಲೆದ್ದವನೇ ನನ್ನ ನಿಕ್ಕರಿನ ಹಿಂದೆ ಹತ್ತಿದ ಧೂಳನ್ನು ಕೊಡವುತ್ತಾ ವೇದಿಕೆ ಹತ್ತಿರ ಓಡಿದೆ..!

ಅದೇ “ರೈಟಿಂಗ್ ಪ್ಯಾಡ್” ಬಹುಮಾನ..!

ನನ್ನ ಖುಶಿಗೆ ಎಲ್ಲೆಯೇ ಇಲ್ಲದಂತಾಯಿತ್ತು.ಅತೀವ ಸಂತಸದಿಂದ ಕಾರ್ಯಕ್ರಮ ಮುಗಿದ ನಂತರ ಮನೆಗೆ ಓಡಿದೆ. ದಾರಿಯುದ್ದಕ್ಕೂ ಯಾರಾದರು ನನ್ನ ಕಡೆ ನೋಡಿದರೆ ನನ್ನ ಬಹುಮಾನದ ಕಡೆಗೆ ನೋಡುತ್ತಾರೇನೋ ಎನ್ನುವ ಕುತೂಹಲ ಮತ್ತು ಅದರ ಬಗ್ಗೇಯೇ ಕೇಳಲಿ ಎನ್ನುವ ಆಸೆ. ಸ್ವಲ್ಪ ಕೇಳಿದರೆ ಸಾಕು ನನ್ನ ಸಾಧನೆಯ ಮಹಾ ಪರ್ವವನ್ನೇ ಅವರ ಮುಂದಿಡುತ್ತಿದ್ದೆ.

ನಾನೂ ಹಲವರಂತೆ ಜಾಣ ಎನ್ನುವುದಕ್ಕೆ ಇಷ್ಟೇಲ್ಲಾ ಪೀಠಿಕೆ ಹಾಕಬೇಕಾಯಿತು. ಜಾಣ ಎಂದ ಮೇಲೆ ಆ ವಯಸ್ಸಿನಲ್ಲಿ ಸ್ವಲ್ಪ ಗತ್ತು ಇದ್ದೇ ಇರುತ್ತದೆ. ಅದೇ ಗತ್ತಿನಲ್ಲಿದ್ದ ನನಗೆ ಏನಾಯಿತು ಕೆಳಗೆ ನೋಡಿ..

ನಮ್ಮ ಮನೆಯ ಹತ್ತಿರವೇ ಇದ್ದ ಗುರುಗಳು ಮಹಾಲಿಂಗಯ್ಯನವರು. ಅವರ ಮತ್ತು ನಮ್ಮ ಮನೆ ಎದಿರು ಬದಿರು ಅಂತಾನೇ ಹೇಳಬಹುದು. ಅವರು ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ಮನೆಯಲ್ಲಿ  ಟೂಷನ್ ಸಹ ಹೇಳುತ್ತಿದ್ದರು. ಹಾಗಾಗಿ ನಾನೂ ಟೂಷನ್’ಗೆ ಹೋಗಲೇಬೇಕಾಗಿತ್ತು. ಅವರಿಲ್ಲದ ವೇಳೆ ಗಣಿತದ ಬಗ್ಗೆ ನಾನೇ ಅಲ್ಲಿಗೆ ಬರುತ್ತಿದ್ದ ಹುಡುಗರಿಗೆ ಹೇಳಿಕೊಡುತ್ತಿದ್ದೆ. ಆ ಕೆಲಸಕ್ಕೆ ಅವರಿಂದ ಪ್ರಸಂಶೆಯೂ ಸಿಗುತ್ತಿತ್ತು. ಅವರಿಗೆ ಸ್ವಂತ ಮಕ್ಕಳು ಆಗ ಇರಲಿಲ್ಲದ್ದಕ್ಕೆ ನಾನೇ ಅವರ ಮನೆಕೆಲಸದಲ್ಲಿ ಮಹಾಲಿಂಗಯ್ಯ ಗುರುಗಳ ಪತ್ನಿಯವರಿಗೆ ಸಹಾಯ ಮಾಡುತ್ತಿದ್ದೆ. ಹಾಗಾಗಿ ಅವರೊಂದಿಗೆ ಹೆಚ್ಚು ಸಲಿಗೆಯಿಂದಲೇ ಇದ್ದೆ. ಆದರೆ ವಿಚಿತ್ರವಾಗಿದ್ದು..

ಒಮ್ಮೆ ಶಾಲೆಯ ಕಟ್ಟೆಯ ಮೇಲೆ ಕುಳಿತು ಕಾಲನ್ನು ಅಲ್ಲಾಡಿಸುತ್ತಾ,ಬಾಯಲ್ಲಿ ಬಬಲ್ ಗಮ್ ಜಗೆಯುತ್ತಾ ನನ್ನ ಸ್ನೇಹಿತರು ಆಡುತ್ತಿದ್ದ ಖೋ..ಖೋ.. ನೋಡುತ್ತಿದ್ದಾಗ ಅಚಾನಕ್ ಆಗಿ ಅಲ್ಲಿಗೆ ಬಂದರು ಮಹಾಲಿಂಗಯ್ಯ ಗುರುಗಳು ಮತ್ತು ರಾಜಣ್ಣನವರು.  ನಾನು ಅವರನ್ನು ನೋಡುತ್ತಿದ್ದಂತೆ ಒಂದು ಚಿಕ್ಕ ಸ್ಮೈಲ್ ಕೊಟ್ಟು ಆಟದ ಕಡೆ ತಿರುಗಿದೆ. ನನ್ನ ಹತ್ತಿರ ಬಂದವರೇ “ಟಪಾರ್” ಎಂದು ಕೆನ್ನೆಗೆ ಬಾರಿಸಿ ಹೊರಟೇ ಹೋದರು. ನನಗೋ ಆಶ್ಚರ್ಯದ ಜೊತೆಗೆ ಕೋಪ ಮತ್ತು ನಾಚಿಕೆಯೂ ಆಯಿತು. ನನ್ನ ಸಮಾನ ವಯಸ್ಸಿನ ಹುಡುಗಿಯರೂ ಅಲ್ಲಿ ಖೋ..ಖೋ.. ಆಡುತ್ತಿದ್ದಾರೆ. ಎಲ್ಲರಿಗೂ ಏನಾಯಿತೆಂದು ಗೊತ್ತಾಗಲೇ ಇಲ್ಲ. ನನಗೇ ಗೊತ್ತಾಗದಿದ್ದಾಗ ಬೇರೆಯವರಿಗೆ ಹೇಗೆ ಗೊತ್ತಾಗಬೇಕೇಳಿ. ನನ್ನ ಮೆಚ್ಚಿನ ಗುರುಗಳು,ಅವರ ಪಟ್ಟದ ಶಿಷ್ಯನೇ ಎಂದು ನನ್ನ ಸಹಪಾಠಿಗಳು ಹೇಳುತ್ತಿರುವಾಗ ಹೀಗೆ ಆಗಿದ್ದಾದರೂ ಹೇಗೆ..ಗೊತ್ತಾಗಲೇ ಇಲ್ಲ. ಅದೇ ಸಿಟ್ಟಿನಲ್ಲಿ ಮನೆಗೆ ಬಂದೆ.

ಸಾಯಂಕಾಲದವರೆಗೆ ಅವರ ಮತ್ತು ನನ್ನ ಮುಖಾಮುಖಿ ಆಗಲೇ ಇಲ್ಲ. ನಾನು ಆ ಸಿಟ್ಟಿನಿಂದ ಹೊರ ಬಂದಿರಲೇ ಇಲ್ಲಾ. ಸಾಯಂಕಾಲವಾದ್ದರಿಂದ ಎಲ್ಲರೂ ಟೂಷನ್ನಿಗೆ ಹೋಗುತ್ತಿದ್ದರು. ನಾನಂತೂ ಟೂಷನ್ನಿಗೆ ಹೊಗುವುದಿರಲಿ ಟೂಷನ್ನಿನ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೆ. ಮನೆಯಲ್ಲಿಯೇ ಓದುತ್ತಾ ಕುಳಿತೆ. ಪುಸ್ತಕದಲ್ಲಿದ್ದ ವಿಷಯ ಯಾವುದೂ ತಲೆಗೆ ಹೋಗುತ್ತಿರಲಿಲ್ಲ. ಆದರೂ ಪುಸ್ತಕದ ಮೇಲೆ ನನ್ನ ಕಣ್ಣು.. ಮನಸು ಮಾತ್ರ ಆ ಹೊಡೆತದತ್ತ..

ದಿನಾಲು ಆರು ಗಂಟೆ ಸಮಯಕ್ಕೆ ಸರಿಯಾಗಿ ಟೂಷನ್ನಿನಲ್ಲಿ ಇರುತ್ತಿದ್ದ ನನ್ನನ್ನು ಮನೆಯಲ್ಲಿಯೇ  ಓದುವುದನ್ನ ನೋಡಿ “ ಯಾಕೆ ಟೂಷನ್ ಇಲ್ವಾ..?” ಎಂದರು ತಂದೆ,

ಅಯ್ಯೋ..ಎಲ್ಲರೂ ಹೋಗ್ತಾ ಇದ್ದಾರೆ..! ಎಂದು ಹಿಂದಿನಿಂದಲೇ ತಾಯಿ ಹೇಳಿದರು..ನಾನೇನು ಮಾತನಾಡದೇ ಹಾಗೆಯೇ ಸುಮ್ಮನಿದ್ದೆ.

“ಎ..ಅಲ್ನೋಡು.. ವೀರೇಶ್ ಬಂದಿದಾನೆ..”ಎಂದು ಹೇಳಿದಳು ತಾಯಿ.

“ಅಮ್ಮಾ ನಾಗರಾಜ್ ನ ಮಾಸ್ತರು ಕರಿತಿದಾರೆ..ಬರದಿದ್ದರೆ ಒದ್ದು ಕರ್ಕೊಂಡು ಬಾ ಅಂಥ ಹೇಳಿದಾರೆ” ಎಂದು ಹೇಳಿ ನನ್ನನ್ನು ಶತಾಯಗತಾಯ ಕರೆದುಕೊಂಡು ಹೋಗಲೇಬೇಕೆನ್ನುವಂತೆ ನಿಂತಿದ್ದ.

’ಹೋಗು ಟೂಷನ್..’ ಎಂದು ತಂದೆ ಹೇಳಿದರು

,”ಇಲ್ಲಾ.. ನಾನು ಇಲ್ಲಿಯೇ ಓದುತ್ತೇನೆ .. ಟೂಷನ್ ನನಗೆ ಬೇಡ’ ಎಂದರೂ, ನನಗೆ ಮನಸ್ಸಿಲ್ಲದಿದ್ದರೂ ಮನೆಯರ ಬೈಗುಳ ತಡೆಯಲಾರದೆ ಗುರುಗಳ ಮನೆಯ ದಾರಿ ಹಿಡಿದೆ.ಸಿಟ್ಟು, ಕೋಪ ಎರಡನ್ನೂ ಜೊತೆಯಲ್ಲಿ ಕರೆದೊಯ್ದೆ..

”ಯಾಕೋ..ಏನಾಯ್ತು ಟೂಷನ್ನಿಗೆ ಬರ್ಲೇ ಇಲ್ಲಾ..? ಗುರುಗಳು ನಾರ್ಮಲ್ಲಾಗಿಯೇ ಕೇಳಿದರು.”ಏನಿಲ್ಲಾ ಸಾರ್ ಸುಮ್ಮನೇ” ಎನ್ನುತಾ ಮೂಲೆಯಲ್ಲಿಯೆ ನಿಂತೆ.

“ ಇರ್ಲಿ ಬಾರೋ ಕುತುಗೋ.. ..ಹೌದು, ಬೆಳಿಗ್ಗೆ ನಾನ್ಯಾಕೆ ಹೊಡ್ದೆ ಗೊತ್ತಾ” ಎಂದೊಡನೇ ಮತ್ತೆ ಟೇಂಪರೇಚರ್ ಏರಿತು ನನಗೆ ಆದರೆ ಏನು ಮಾಡುವುದು. “ಇಲ್ಲಾ ಸಾರ್” ಎನ್ನುತಾ ತಲೆ ತಗ್ಗಿಸಿದ್ದೆ.

ತಾವು ಮುಂದುವರೆಸಿದರು..

“ ..ನೋಡು..ನೀನು ಎಷ್ಟೇ ಬುದ್ದಿವಂತ ಆಗಿರ್ಬಹುದು,ಪರಿಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಮಾರ್ಕ್ಸ್ ತಗಿಬಹುದು, ಆದ್ರೆ.. ನಿನ್ನಲ್ಲಿ ದೊಡ್ಡವರ ಮೇಲೆ ಆಗ್ಲಿ,ಗುರುಗಳ ಮೇಲೆ ಆಗ್ಲಿ ಗೌರವ ಇಲ್ಲದಿದ್ರೆ ಎಲ್ಲವೂ ವ್ಯರ್ಥ..ನೀನೇ ಒಮ್ಮೆ ಯೊಚ್ನೆ ಮಾಡು..ನಾನು ಮತ್ತು ರಾಜಣ್ಣರು ಬರ್ತಾಇದ್ರೆ,ನೀನು ಕಾಲ್ಮೇಲೆ ಕಾಲ್ ಹಾಕ್ಕೊಂಡು..ಚಿಂಗಾಮ್ ತಿನ್ನುತ್ತಾ ಹಲ್ಲ್ ಕಿಸಿತಾ ಇದ್ದಿ…ಎದ್ದು ನಿಂತು ನಮಸ್ಕಾರ ಮಾಡಬೇಕಂತಾ ಸ್ವಲ್ಪನೂ ಗೊತ್ತಿಲ್ಲಾ ನಿನಗೆ, ಯಾರಾದರು ನೋಡಿದ್ರೆ.. ಇದ್ದುನ್ನಾ ನಿಮ್ಮ ಮೇಸ್ಟ್ರು ಕಲಿಸಿದ್ದು ಅಂತಾ ನಮ್ಮನ್ನ ಕೇಳುತ್ತಾರೆ.. ”ಎಂದು ಮಾರುದ್ದಾ ಹೇಳುತ್ತಾ ಹೊರಟು ತಾವು ಹೊಡೆದಿದ್ದಕ್ಕೆ ಸಮರ್ಥನೆ ಕೊಡುತ್ತಾರೆ ಎಂದುಕೊಂಡೆ. ಆದರೆ ಅದು ಸಮರ್ಥನೆ ಆಗಿರದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕಾದ ಕನಿಷ್ಟ ಗುಣವೆಂದು ಅವರ ಪೂರ್ಣಮಾತು ಆಲಿಸದನಂತರವೇ ಗೊತ್ತಾಗಿದ್ದು.

 

ಬಹುಶಃ ಅಂದಿನ ಪೆಟ್ಟು ಜಾಣ ಎಂಬ ಅಹಂನಿಂದ ಹೊರ ಬಂದು ವಿನಯದಿಂದಿರಲು ಸಹಾಯವಾಯಿತೇನೋ..?

Facebook ಕಾಮೆಂಟ್ಸ್

Nagaraj Mukari: ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ಪ್ರಸಕ್ತ ಕಾರವಾರದ ಕೈಗಾ ಅಣು ಸ್ಥಾವರದಲ್ಲಿ ನೌಕರಿ. ನಿಸರ್ಗ ಪ್ರಕಾಶನ, ಹಾಸನ ಅವರಿಂದ 2012ರಲ್ಲಿ ‘ಮಲೆನಾಡಿನ ಕಾನನ’ ಕವಿತೆಗೆ ‘ಕವನ ಕುಸುಮ’ ಪ್ರಶಸ್ತಿ. 2013ರಲ್ಲಿ ಚೊಚ್ಚಲ ಕೃತಿ ‘ನನ್ನ ಹೆಜ್ಜೆಗಳು’ ಕವನ ಸಂಕಲನ, 2016ರಲ್ಲಿ ‘ಲಾಸ್ಟ್ ಬುಕ್’ಅನುಭವ ಬರಹಗಳು ಎರಡನೇ ಕೃತಿ ಬಿಡುಗಡೆ. ಮೂರನೇ ಕೃತಿ ಹನಿಗವನ ಸಂಕಲನ ‘ಪ್ರೂಟ್ಸ್ ಸಲಾಡ್’ ಬಿಡುಗಡೆಯ ಹಂತದಲ್ಲಿ.
Related Post