ಸುಮಾರು ವರ್ಷಗಳ ಹಿಂದೆ ಡಿಡಿ ನ್ಯಾಷನಲ್ ಚಾನೆಲ್’ನಲ್ಲಿ ’ಫಿಲ್ಮೋತ್ಸವ್’ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ರಾಜ್ ಕಪೂರ್, ವಹೀದಾ ರೆಹ್ಮಾನ್, ದೇವಾನಂದ್, ಮನೋಜ್ ಕುಮಾರ್ ಇಂತಹ ಹಲವು ಪ್ರಸಿದ್ಧ ಕಲಾಕಾರರ ಚಿತ್ರಗಳನ್ನ ಅದರಲ್ಲಿ ಹಾಕುತ್ತಿದ್ದರು. ನಾನು ಆಗ ೬ನೇ ಕ್ಲಾಸಿನಲ್ಲೋ ಅಥವಾ ೭ನೇ ಕ್ಲಾಸಿನಲ್ಲೋ ಇದ್ದೆ. ಪ್ರತಿ ಭಾನುವಾರ ೧೨ ಗಂಟೆಗೆ ತಪ್ಪದೇ ಈ ಕಾರ್ಯಕ್ರಮವನ್ನು ನೋಡುತ್ತಿದ್ದೆ. ಬಾಲ್ಯ ಅನ್ನೋದು ತುಂಬಾ ಅತ್ಯಮೂಲ್ಯ ಘಟ್ಟವಾಗಿರುತ್ತದೆ. ಸಣ್ಣ ವಿಷಯಗಳು ಕೂಡ ಮಹತ್ವದ ಪರಿಣಾಮ ಬೀರಿರುತ್ತದೆ. ನನಗೂ ಆ ಸಮಯದಲ್ಲಿ ನೋಡಿದ ಮನೋಜ್ ಕುಮಾರ್ ಅವರ ’ಶೋರ್’ ಚಿತ್ರ ಅದೇನೋ ಮನಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಅದರಲ್ಲೂ ’ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡನ್ನಂತೂ ಈಗಲೂ ಆಗಾಗ ಗುನುಗುತ್ತಿರುತ್ತೇನೆ. ಅದರ ಸಾಹಿತ್ಯವಂತೂ ಅದ್ಭುತವಾಗಿದೆ. ಅದರಲ್ಲಿನ ’ಕುಚ್ ಪಾಕರ್ ಖೋನಾ ಹೈ, ಕುಚ್ ಖೋಕರ್ ಪಾನಾ ಹೈ’ ಅನ್ನುವ ಸಾಲು ಮಾತ್ರ ಮನಸ್ಸಿನಿಂದ ಜಾರಲೇ ಇಲ್ಲ. ಏನಾದರೊಂದನ್ನ ಪಡೆಯುವುದಕ್ಕೆ, ಕಳೆದುಕೊಳ್ಳುವುದು ಅಷ್ಟೊಂದು ಅವಶ್ಯಕವಾ ಅನ್ನುವ ಪ್ರಶ್ನೆ ಮಾತ್ರ ಬಹಳ ಕಾಲದವರೆಗೆ ಕಾಡುತ್ತಲೇ ಇತ್ತು.
ಸ್ಟೆಫಿ ಎಂಬ ಕ್ಯಾನ್ಸರ್ ಸರ್ವೈವರ್ ‘I missed being a child’ ಎಂದಿದ್ದಳು. ತನ್ನ ೮ನೇ ವಯಸ್ಸಿಗೆ ಕ್ಯಾನ್ಸರ್’ಗೆ ಒಳಗಾಗಿದ್ದ ಈಕೆಯ ಬಾಲ್ಯವಿಡೀ ಕ್ಯಾನ್ಸರ್’ನೊಂದಿಗೆಯೇ ಕಳೆದಿತ್ತು. ಬಾಲ್ಯ ಅನ್ನೋದು ಎಲ್ಲರ ಬದುಕಿನ ಒಂದು ಸುಂದರ ಅಧ್ಯಾಯವಾಗಿರುತ್ತದೆ. ಅದರ ನೆನಪುಗಳು ಈಗಲೂ ನಮ್ಮ ಮನಸ್ಸನ್ನ ಮುದಗೊಳಿಸುತ್ತದೆ. ಆದರೆ ಈಕೆಗೆ ಮಾತ್ರ ಬಾಲ್ಯದ ನೆನಪುಗಳು ಯಾವುವು ಇಲ್ಲವೇ ಇಲ್ಲ. ಅವೆಲ್ಲ ಕ್ಯಾನ್ಸರ್’ನಿಂದ ತುಂಬಿಹೋಗಿವೆ. ಆಕೆ ಕೂಡ ಎಲ್ಲರಂತೆ ಇರಬಯಸಿದ್ದಳು. ಎಲ್ಲ ಮಕ್ಕಳಂತೆ ಹೊರಗೆ ಹೋಗಿ ಆಟ ಆಡುತ್ತಾ ಕಾಲ ಕಳೆಯ ಬಯಸಿದ್ದಳು. ಆದರೆ ಆಕೆ ಯಾವಾಗಲೂ ಬೆಡ್ ಮೇಲೆ ಇರಬೇಕಾಗಿತ್ತು. ಸಣ್ಣ ಸಣ್ಣ ಕೀಟಲೆಗಳನ್ನ ಮಾಡುತ್ತ ಅಮ್ಮ ಗದರಿಸುವುದನ್ನ ಕೇಳ ಬಯಸಿದ್ದಳು. ತನ್ನ ಸಹೋದರನೊಂದಿಗೆ ಆಟಿಕೆಗಳಿಗಾಗಿ ಜಗಳ ಮಾಡಬಯಸಿದ್ದಳು. ಜೋರಾಗಿ ಕಿರುಚಾಡುತ್ತಾ, ನಗುತ್ತಾ ಮನೆಯೆಲ್ಲಾ ಓಡಾಡಬಯಸಿದ್ದಳು ಆದರೆ ಇವು ಯಾವುವು ಆಗಲಿಲ್ಲ. “ನನ್ನ ಬದುಕಿನ ತುಂಬಾ ಪ್ರಮುಖ ಘಟ್ಟ ಹಾಗೆಯೇ ಕಳೆದುಹೋಗಿತ್ತು” ಎನ್ನುತ್ತಾಳೆ ಸ್ಟೆಫಿ. ಇಂದು ಆಕೆಯ ಬಳಿ ಎಲ್ಲವೂ ಇದೆ. ಅವಳು ಬಯಸಿದಂತಹ ವೃತ್ತಿ, ಮನೆ, ಕುಟುಂಬ, ಮುದ್ದಾದ ಮಗ. ಅದೆಲ್ಲದರ ಜೊತೆ ಆಕೆ ಇತರ ಕ್ಯಾನ್ಸರ್ ರೋಗಿಗಳಿಗೆ ಒಬ್ಬ ಆತ್ಮೀಯ ಬಂಧುವಾಗಿದ್ದಾಳೆ. ಅಲ್ಲಲ್ಲಿ ಸೆಮಿನಾರ್ ಮಾಡುತ್ತಾ, ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ. ಇವೆಲ್ಲವೂ ’ಬಾಲ್ಯ’ ಎಂಬ ಬೆಲೆ ತೆತ್ತ ಮೇಲೆಯೇ ಸಿಕ್ಕಿದ್ದೇನೋ ಎನಿಸುತ್ತದೆ. ಇದು ಈಕೆಯ ಕಥೆ ಮಾತ್ರವಲ್ಲ. ಬಾಲ್ಯದಲ್ಲಿಯೇ ಕ್ಯಾನ್ಸರ್’ಗೆ ಒಳಗಾಗಿದ್ದವರೆಲ್ಲರ ಕಥೆ. ಅವರೆಲ್ಲರ ಬಾಲ್ಯ ಅಪೂರ್ಣವೇ!
ನಾನು ಶಾನ್ ಬಗ್ಗೆ ಸಾಕಷ್ಟು ಸಲ ಹೇಳಿದ್ದೇನೆ. ಇಂದು ಆತನ ಬದುಕು ಹೇಗಿದೆ ಎಂದರೆ, ’ಬದುಕು ಇದ್ದರೆ ಹೀಗೆ ಇರಬೇಕು’ ಎನ್ನುವಷ್ಟರ ಮಟ್ಟಿಗೆ ಸುಂದರವಾಗಿದೆ. ಆದರೆ ಸ್ವಲ್ಪ ವರ್ಷಗಳ ಹಿಂದಿನ ಆತನ ಬದುಕು ಇದ್ದ ರೀತಿಯನ್ನು ನೋಡಿದರೆ ಖಂಡಿತವಾಗಿಯೂ ಹಾಗನಿಸುವುದಿಲ್ಲ. ಟೀನೇಜ್ ಎಂಬ ಸುಂದರವಾದ ಘಟ್ಟ ಕ್ಯಾನ್ಸರ್’ನಲ್ಲಿ ಮುಳುಗಿಹೋಗಿತ್ತು. ಆ ವಯಸ್ಸಿನಲ್ಲಿ ಆತನ ಗೆಳೆಯರು ಶಾಲೆ, ಕ್ರೀಡೆ, ಗರ್ಲ್ ಫ್ರೆಂಡ್ಸ್ ಎಂದು ಸಮಯ ಕಳೆಯುತ್ತಿದ್ದರೆ ಈತ ಮಾತ್ರ ಆಸ್ಪತ್ರೆಗಳಲ್ಲಿ ದಿನ ಕಳೆಯುತ್ತಿದ್ದ. ಅದೂ ಕೂಡ ಎರೆಡೆರಡು ಬಾರಿ ಕ್ಯಾನ್ಸರ್’ಗೊಳಗಾಗಿದ್ದು. ೨ನೇ ಬಾರಿಯಂತೂ ಸಾಕಷ್ಟು ಸಮಯ ಮೆಡಿಕಲಿ ಇಂಡ್ಯೂಸಡ್ ಕೋಮಾದಲ್ಲಿದ್ದ. ಹಾಗಾಗಿ ಆ ಸಮಯ ಆತನ ಪಾಲಿಗೆ ಇರಲೇ ಇಲ್ಲ. ಆತನಿಗೆ ತಾನು ೧೬ನೇ ವರ್ಷಕ್ಕೆ ಕಾಲಿಟ್ಟಿದ್ದು ಕೂಡ ಗೊತ್ತಾಗಲಿಲ್ಲ. ಈಗ ಆತ ಏನೇ ಆಗಿದ್ದರೂ ತನ್ನ ಬದುಕಿನ ಕೆಲ ಅತ್ಯಮೂಲ್ಯ ವರ್ಷಗಳ ಬೆಲೆ ತೆತ್ತ ಮೇಲೆಯೇ ಇರಬೇಕು.!!
ಬದುಕಿನಲ್ಲಿ ಇಂತಹ ತಿರುವುಗಳ ಬಹಳ ದೊಡ್ಡ ಬದಲಾವಣೆಯನ್ನು ನಮ್ಮಲ್ಲಿ ತರುತ್ತದೆ. ಎಷ್ಟರಮಟ್ಟಿಗೆ ಎಂದರೆ ಇದ್ದಕ್ಕಿದ್ದಂತೆ ನಾವು ತುಂಬಾ ದೊಡ್ಡವರಾಗಿಬಿಟ್ಟೆವೇನೋ ಅಂತ ಅನಿಸಲು ಶುರುವಾಗಿಬಿಡುತ್ತದೆ. ನನ್ನ ಗೆಳೆಯ ಗೆಳತಿಯರು ಫ್ರೆಷರ್ಸ್ ಪಾರ್ಟಿಗೆ ಏನೇನು ಮಾಡಬೇಕು, ಈ ಭಾನುವಾರ ಯಾವ ಸಿನೆಮಾಗೆ ಹೋಗೋದು, ಎಥ್ನಿಕ್ ಡೇ’ಗೆ ಹೇಗೆ ತಯಾರಾಗಿ ಹೋಗಬೇಕು ಅಂತೆಲ್ಲಾ ಯೋಚಿಸುತ್ತಿರಬೇಕಾದರೆ ನಾನೆಲ್ಲೋ ಆಸ್ಪತ್ರೆಯಲ್ಲಿ ಕುಳಿತು ಸಾವು-ಬದುಕಿನ ಬಗ್ಗೆ ಯೋಚಿಸುತ್ತಿದ್ದೆ. ಎಲ್ಲರ ಬದುಕಿನಲ್ಲಿ ಕಾಲೇಜ್ ಲೈಫ್ ಯಾವಾಗಲೂ ನೆನಪಿನಲ್ಲಿ ಉಳಿಯುವಂಥದ್ದು. ನನ್ನ ವಯಸ್ಸಿನವರೆಲ್ಲ ತಮ್ಮ ಕಾಲೇಜ್ ಬದುಕನ್ನ ಅನುಭವಿಸುತ್ತಿರುವಾಗ ನಾನೆಲ್ಲೋ ಒಂಟಿಯಾಗಿ “ಮುಂದೆ?” ಎನ್ನುವಂತಹ ಪ್ರಶ್ನೆಯನ್ನ ಎದುರಿಸುತ್ತಿದ್ದೆ. ನನ್ನ ಬದುಕಿನ ದೊಡ್ಡ ಭಾಗ ಅಲ್ಲೆಲ್ಲೋ ಕಳೆದುಹೋಗಿತ್ತು. ಅದೆಲ್ಲದರ ಪರಿಣಾಮವೇ ಇರಬಹುದು ಇಂದು ನನ್ನನ್ನ ನಾನು ಕಂಡುಕೊಂಡಿದ್ದೇನೆ. ಬದುಕನ್ನ ಪ್ರೀತಿಸುತ್ತಿದ್ದೇನೆ, ನನ್ನನ್ನ ನಾನು ಪ್ರೀತಿಸುತ್ತೇನೆ. “ನಿನ್ನ ಹಿಂದಿನ ದಿನಗಳಿಗೆ ಹೋಗಿ ಕಳೆದುಹೋದದ್ದನ್ನೆಲ್ಲ ಮತ್ತೆ ಪಡೆದುಕೊಳ್ಳುವಂತೆ, ಅದೆಲ್ಲವನ್ನು ಸರಿಪಡಿಸಿಕೊಳ್ಳುವ ಅವಕಾಶ ಕೊಟ್ಟರೆ ಮಾಡುತ್ತೀಯಾ?” ಅಂತ ನೀವೇನಾದರೂ ಕೇಳಿದರೆ ಅದಕ್ಕೆ ನನ್ನ ಉತ್ತರ ’ಇಲ್ಲ’ ಎಂದೇ ಆಗಿರುತ್ತದೆ. ಹಾಂ.. ನಾನು ಕಳೆದುಕೊಂಡಿದ್ದು ಅಮೂಲ್ಯವಾದದ್ದೇ ಆಗಿತ್ತು. ಆದರೆ ನಂತರ ಪಡೆದುಕೊಂಡಿದ್ದು ಮಾತ್ರ ಬೆಲೆ ಕಟ್ಟಲಾಗದ್ದು..! ಈ ಪ್ರಶ್ನೆಗೆ ಬಹುಶಃ ಸ್ಟೆಫಿಯ ಉತ್ತರ ಕೂಡ ಇದೇ ಆಗಿರುತ್ತದೆ, ಹಾಗೆಯೇ ಶಾನ್’ನ ಉತ್ತರ ಕೂಡ.
ಹಾಗಾದರೆ ನೀವೀಗ ಕೇಳಬಹುದು, ಅಮೂಲ್ಯವಾದದ್ದನ್ನ ಪಡೆದುಕೊಳ್ಳುವುದಕ್ಕೆ ನಮ್ಮದೇನನ್ನಾದರೂ ಕಳೆದುಕೊಳ್ಳುವುದು ಅನಿವಾರ್ಯವಾ? ಎಂದು. ಇಲ್ಲ.. ಆ ತರಹ ಒಂದನ್ನ ಪಡೆದುಕೊಳ್ಳುವುದಕ್ಕೆ ಇನ್ನೊಂದನ್ನ ಕಳೆದುಕೊಳ್ಳಲೇಬೇಕು ಎನ್ನುವ ಯಾವುದೇ ನಿಯಮವಿಲ್ಲ. ಆದರೆ ಕಳೆದುಕೊಂಡಾಗ ಮಾತ್ರ ಅದರ ಬೆಲೆ ಅರ್ಥವಾಗುವುದು ಎನ್ನುವುದು ಮಾತ್ರ ಅಕ್ಷರಶಃ ನಿಜ. ಒಮ್ಮೆ ಯಾವುದೋ ಒಂದನ್ನ ಕಳೆದುಕೊಂಡಾಗ, ಅದರ ಬೆಲೆಯನ್ನ ತಿಳಿದುಕೊಂಡಾಗ, ನಮ್ಮಲ್ಲಿ ಇರುವುದರೆಲ್ಲದರ ಬೆಲೆಯನ್ನು ಕೂಡ ಅರ್ಥ ಮಾಡಿಕೊಳ್ಳುತ್ತಾ ಹೋಗುತ್ತೇವೆ. ಅದೇ ತಾನೆ ಬೇಕಾಗಿರುವುದು. ನಮ್ಮಲ್ಲಿ ಏನಿದೆಯೋ ಅದರ ಬೆಲೆಯೇ ತಿಳಿದಿಲ್ಲ ನಮಗೆ, ಅದೇ ಸಮಸ್ಯೆ! ಒಮ್ಮೆ ಏನಾದರೊಂದನ್ನ ಕಳೆದುಕೊಂಡಾಗ, ನಮ್ಮಲ್ಲಿ ಏನಿದೆಯೋ ಅದೆಲ್ಲವನ್ನು ತೂಗಿ ನೋಡಲು ಆರಂಭಿಸುತ್ತೇವೆ. ನಮ್ಮಲ್ಲಿ ಇರುವುದೆಲ್ಲವೂ ಎಷ್ಟು ಅಮೂಲ್ಯ ಎಂದು ಅರ್ಥವಾಗುತ್ತದೆ.
ಹಾಗೆ ನೋಡಿದರೆ ನಾವು ಯಾವುದನ್ನ ಕಳೆದುಕೊಳ್ಳುವುದಿಲ್ಲ. ಬದುಕಿನ ಆರಂಭದಿಂದ ಕೊನೆಯ ತನಕ ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಬರುತ್ತೇವೆ. “ಟೈಮ್ ಇಸ್ ಮನಿ” ಅಂತಾರೆ. ಆದರೆ ಹಣ ಅನ್ನೋದು ಸಮಯದ ಮುಂದೆ ತುಂಬಾ ಚಿಕ್ಕದು. ಅಷ್ಟು ಮೌಲ್ಯಯುತವಾದ ಸಮಯ ಕೂಡ ಪ್ರತಿ ಕ್ಷಣ ನಮ್ಮ ಕೈಯ್ಯಿಂದ ಜಾರಿ ಹೋಗುತ್ತಿರುತ್ತದೆ. ಸಮಯದೊಂದಿಗೆ ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಇರುತ್ತೇವೆ. ಕೊನೆಗೆ ಬದುಕನ್ನ ಕೂಡ. ಆದರೆ ಇದನ್ನೆಲ್ಲಾ ನಾವು ಗಮನಿಸುವುದಿಲ್ಲ ಅಷ್ಟೇ. ಆದರೆ ಒಮ್ಮೆಲೇ ಏನೋ ಒಂದು ಬದಲಾವಣೆ ಬಂದಾಗ, ಬದುಕು ಒಂದು ತಿರುವು ಪಡೆದು ಹೊಸ ದಾರಿಯನ್ನ ಹಿಡಿದಾಗ, ಸ್ವಲ್ಪ ವಿಭಿನ್ನ ಎನಿಸತೊಡಗುತ್ತದೆ. ಸಾಮಾನ್ಯವಾಗಿ ಇಲ್ಲದಿದ್ದಾಗ, ನಾವು ಅಪೇಕ್ಷಿಸಿದ್ದು ಇಲ್ಲದಾದಾಗ ಅಥವಾ ಕಳೆದುಹೋದಾಗ ಅದು ದೊಡ್ಡದಾಗಿ ಕಾಣಲಾರಂಭಿಸುತ್ತದೆ. ಆ ಸವಾಲುಗಳ ಮಧ್ಯೆ ಕಳೆದುಹೋಗಿದ್ದು ಪ್ರಮುಖವಾಗುತ್ತದೆ. ಬದುಕಿನಲ್ಲಿ ಕಳೆದುಹೋದ ಆ ಪ್ರಮುಖವಾದುದೇನೋ ಒಂದನ್ನ ಸಮದೂಗಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಪಡುತ್ತೇವೆ. ಆಗಲೇ ನಾವೇನು ಮಾಡಬಲ್ಲೆವು ಅನ್ನುವುದರ ಅರಿವಾಗೋದು, ಆ ಪ್ರಯತ್ನದ ಪರಿಣಾಮವಾಗಿಯೇ ಅತ್ಯಮೂಲ್ಯವಾದದ್ದು ಸಿಗುವುದು..!
ಕ್ಯಾನ್ಸರ್ ಹೇಳಿಕೊಡುವ ದೊಡ್ಡ ಪಾಠವೇ ಇದು, ಬದುಕು ಎಷ್ಟು ವಿಶಿಷ್ಟವಾದುದು ಎನ್ನುವುದು! ಕ್ಯಾನ್ಸರ್ ಎಂಬ ದೊಡ್ಡ ಬದಲಾವಣೆ ನಮ್ಮನ್ನ ತಟ್ಟಿದಾಗ ನಾವು ಏನನ್ನ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನ ಗಮನಿಸುತ್ತೇವೆ. ನಮ್ಮಲ್ಲಿರುವುದರ ಬೆಲೆ ಅರ್ಥ ಮಾಡಿಕೊಳ್ಳುತ್ತೇವೆ. ಎಲ್ಲವೂ ಅಮೂಲ್ಯವೆನಿಸಿಕೊಳ್ಳತೊಡಗುತ್ತದೆ. ಆದರೆ ಇದೆಲ್ಲವನ್ನು ಅರಿತುಕೊಳ್ಳಲು ಕ್ಯಾನ್ಸರ್ ಎಂಬ ಬದಲಾವಣೆಯೇ ಬೇಕೆಂದೇನಿಲ್ಲ. ಪ್ರತಿದಿನ, ಪ್ರತಿ ಕ್ಷಣ ನಾವು ಏನನ್ನ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನ ಗಮನಿಸಿದರೆ, ನಾವೇನನ್ನು ಹೊಂದಿದ್ದೇವೋ ಅವುಗಳ ಮೌಲ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದರೆ ನಮ್ಮ ಇಡೀ ಬದುಕು ವಿಶಿಷ್ಟವಾಗುತ್ತದೆ, ನಾವು ಪಡೆದುಕೊಳ್ಳುವ ಪ್ರತಿಯೊಂದೂ ಅಮೂಲ್ಯವೇ ಆಗುತ್ತದೆ.
Facebook ಕಾಮೆಂಟ್ಸ್