X

ಕಾಡುವ ಪೈಜಾಮ ಹುಡುಗ

ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ ಸಿನಿಮಾಗಳು ನಮ್ಮ ಮನಸನ್ನು ತಟ್ಟಿ ಹಲವಾರು ದಿನಗಳು ಕಾಡುತ್ತಲೇ ಇರುತ್ತವೆ. ಮನೋರಂಜನೆಯೊಂದೇ ಸಿನೆಮಾಗಳ ಗುರಿ ಅಲ್ಲದೇ  ಅದನ್ನು ಮೀರಿ ಏನೋ ಒಂದು ಸಂದೇಶ ಅಥವಾ ಭಾವನೆಗಳ ಸಂಘರ್ಷ ನಮ್ಮ ಮನಸ್ಸಿನಲ್ಲಿ ಅದು ಹುಟ್ಟುಹಾಕಿ ನಮ್ಮನ್ನು  ಆಲೋಚನೆಗೀಡುಮಾಡುವುದು ಕೂಡ ಅದರ ಉದ್ದೇಶ ಎಂದು ಭಾವಿಸುವವರು ಸಿನಿಮಾ ಪ್ರೇಮಿಗಳು.

ಬಿಡುಗಡೆಗೊಂಡ ಬಹುತೇಕ ಸಿನಿಮಾಗಳು ಈ ಎಲ್ಲ ಉದ್ದೇಶಗಳನ್ನು ಈಡೇರಿಸುವುದು ಕಡಿಮೆ ಎಂದೇ ಹೇಳಬಹುದು. ಆಗೊಮ್ಮೆ ಈಗೊಮ್ಮೆ ಭಾರತೀಯ ಸಿನಿಮಾಗಳು ಇಂತಹ ಚಿತ್ರಗಳನ್ನು ಕೊಡುತ್ತವೆಯಾದರೂ ದೊಡ್ಡ ಮಟ್ಟದ ಪ್ರಚಾರವೂ ಗಳಿಕೆಯೂ ಸಿಗುವುದು ಅಪರೂಪವೇ ಸರಿ. ಈ ನಿಟ್ಟಿನಲ್ಲಿ ಬ್ರಿಟಿಷ್ ಚಿತ್ರವಾದ “ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ” ಒಂದು ಅಪರೂಪದ ಚಿತ್ರವೆಂದು ಹೇಳಲಡ್ಡಿಯಿಲ್ಲ. ಐರಿಶ್ ಕಾದಂಬರಿ ಬರಹಗಾರ ಜಾನ್ ಬೋಯ್ನೆ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧಾರಾವಾಗಿಟ್ಟುಕೊಂಡು ಮಾರ್ಕ್ ಹರ್ಮನ್ ಅವರು ಚಿತ್ರಕಥೆ  ಬರೆದು  ೨೦೦೮ ರಲ್ಲಿ ಚಲನಚಿತ್ರವನ್ನು ನಿರ್ದೇಶಿಸಿದರು. ಬ್ರಿಟಿಷ್ ಇಂಡಿಪೆಂಡೆಂಟ್ ಫಿಲಂ ಅವಾರ್ಡ್ ನಲ್ಲಿ ಮೂರು , ಗೋಯ ಅವಾರ್ಡ್ಸ್ (ಸ್ಪಾನಿಶ್) ನಲ್ಲಿ ಬೆಸ್ಟ್ ಯೂರೋಪಿಯನ್  ಫಿಲಂ ಅವಾರ್ಡ್, ಐರಿಶ್ ಫಿಲಂ ಅಂಡ್ ಟೆಲಿವಿಷನ್ ಅವಾರ್ಡ್ನಲ್ಲಿಯೂ ಬೆಸ್ಟ್ ಇಂಟರ್ನ್ಯಾಷನಲ್ ಫಿಲಂ ಪ್ರಶಸ್ತಿಗಳನ್ನು ಬಾಚಿದ ಈ ಚಿತ್ರ ಹಲವಾರು ವಿಮರ್ಶಕರ ಮನ ಗೆದ್ದಿತ್ತು.

ಚಿತ್ರದ ಕಥೆ ಎರಡನೇ ವಿಶ್ವ ಮಹಾಯುದ್ಧದ ಕಾಲದ ಬರ್ಲಿನ್ ನಲ್ಲಿ ವಾಸವಾಗಿದ್ದ ರಾಲ್ಫ್ ಮತ್ತು ಎಲ್ಫ್ ದಂಪತಿಗಳು ಹಾಗೂ  ಅವರ ಇಬ್ಬರು ಮಕ್ಕಳಾದ ಹನ್ನೆರಡು ವರ್ಷದ ಗ್ರೆತೆಲ್ ಮತ್ತು ಎಂಟು ವರ್ಷದ ಬ್ರೂನೋನ  ಜೀವನದಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಕಥೆ ಬ್ರೂನೋನ ಮೂಲಕವೇ ಸಾಗುತ್ತದೆ. ತನ್ನ ಗೆಳೆಯರೊಂದಿಗೆ ಖುಷಿಯಾಗಿದ್ದ ಬ್ರೂನೋ ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಒಂದು ಕೆಟ್ಟ ಸುದ್ದಿ ಅವನಿಗಾಗಿ ಕಾದಿರುತ್ತದೆ. ತನ್ನ ತಂದೆಗೆ ಬಡ್ತಿಯೊಂದಿಗೆ ನಗರದಿಂದ ದೂರ ಹಳ್ಳಿಯೊಂದರಲ್ಲಿದ್ದ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ಒಂದಕ್ಕೆ ವರ್ಗವಾಗಿರುತ್ತದೆ. ತನ್ನ ಗೆಳೆಯರನ್ನು ಬಿಟ್ಟು ಅಲ್ಲಿಗೆ ಹೋಗಲು ಒಪ್ಪದ ಬ್ರೂನೋನನ್ನು ತಂದೆ ತಾಯಿಯರರಿಬ್ಬರೂ ತರಹೆವಾರಿ ಆಮಿಷ ಒಡ್ಡಿ ಅವನನ್ನು ಒಪ್ಪಿಸಲು ಪ್ರಯತ್ನಿಸುತ್ತಾರೆ.

ಚಿತ್ರದ ಪ್ರಥಮ ಸೀನಿನಲ್ಲೇ ಸ್ವಚ್ಚಂದದಿಂದ ತನ್ನ ಗೆಳೆಯರೊಂದಿಗೆ ಓಡುತ್ತಾ ಬರುವ ಬ್ರೂನೋ ಒಂದು ಕಡೆಯಾದರೆ, ಅಲ್ಲಲ್ಲಿ ನಾಜಿ ಕ್ಯಾಂಪ್ ಗಳಿಗೆ ಜ್ಯೂಗಳನ್ನು  ಕೊಂಡೊಯ್ಯುವ ವಿಪರ್ಯಾಸದ ದೃಶ್ಯವನ್ನೂ  ನಮಗೆ ತೋರಿಸಲಾಗುತ್ತದೆ. ಭಾರವಾದ ಮನಸ್ಸಿನಿಂದಲೇ ಬ್ರೂನೋ ತನಗೆ ತುಂಬಾ ಇಷ್ಟವಾಗಿದ್ದ ಮನೆಯನ್ನು ಹಾಗು ಜೀವದ ಗೆಳೆಯರನ್ನೂ ಬಿಟ್ಟು ಹೊಸ ಮನೆಯನ್ನು ತಲುಪುತ್ತಾನೆ. ತನ್ನನ್ನು ಬಿಟ್ಟು ಉಳಿದವರೆಲ್ಲರೂ ಹೊಸ ಮನೆಯ ಬಗ್ಗೆ ಕಾತುರರಾಗಿರುತ್ತಾರೆ. ಹೊಸ ಮನೆ ಪಕ್ಕದಲ್ಲಿ ತನಗೆ ಆಡಲು ಯಾರು ಗೆಳೆಯರಿಲ್ಲದ್ದು ಬ್ರುನೋಗೆ ಬೇಸರವನ್ನುಂಟು ಮಾಡಿತ್ತು. ತನ್ನ ರೂಮಿನ ಕಿಟಿಕಿಯಿಂದ ಕಾಣುತ್ತಿದ್ದ ಕ್ಯಾಂಪ್ ನಲ್ಲಿ ಯಾರಾದರೂ ಗೆಳೆಯರು ದೊರೆತಾರೇ? ಎಂದು ಅಮ್ಮನನು ಪ್ರಶ್ನಿಸುತ್ತಿದ್ದ ಅವನಿಗೆ ಅಲ್ಲಿರುವವರು ಮನುಷ್ಯರೇ ಅಲ್ಲ, ಅವರೊಂದಿಗೆ ಸೇರಬಾರದೆಂಬ ಎಚ್ಚರಿಕೆಯು  ಅಪ್ಪ, ಅಮ್ಮ ಇಬ್ಬರಿಂದಲೂ ದೊರೆಯುತ್ತದೆ. ಅವರ ಮನೆಯಲ್ಲಿದ್ದ ಜ್ಯೂಯಿಶ್  ಕೆಲಸಗಾರನ ಪಾತ್ರ ಒಂದರ ಮೂಲಕ ನಾಜಿಗಳ ಕ್ರೌರ್ಯ, ಅವರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಒಂದೊಂದಾಗಿ ಬಿಡಿಸಿ ಹೇಳುತ್ತಾನೆ ನಿರ್ದೇಶಕ. ಒಂದೊಂದು ಕ್ಷಣ ಕೂಡ ಭಯದಿಂದಲೇ  ಬದುಕುವ ಆತ ಯಾರಾದರೂ ಕರೆದರೇ ಬೆಚ್ಚಿ ಬೀಳುತ್ತಿರುತ್ತಾನೆ. ಪ್ರತಿ ಕ್ಷಣವೂ ಸಾವನ್ನು ನಿರೀಕ್ಷಿಸುತ್ತಿರುವವನ ಮನಸ್ಥಿತಿ ಹೇಗಿರಬಹುದೆಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.

 

ಒಂಟಿತನ ಹಾಗು ಆ ಕ್ಯಾಂಪ್ ನ ಬಗ್ಗೆ ಇದ್ದ ಕುತೂಹಲವೂ ದಿನೇ ದಿನೇ  ಬ್ರೂನೋನನ್ನು ಕಾಡತೊಡಗಿತು. ಒಂದು ದಿನ ಯಾರು ಇಲ್ಲದ ಸಮಯ ನೋಡಿ ತನ್ನ ಮನೆಯ ಹಿಂಬಾಗದಿಂದ ಆ ಕ್ಯಾಂಪ್ ನ ಬಳಿ ಓಡಿ ಹೋದ ಬ್ರೂನೋ ಕಂಡದ್ದು ಕ್ಯಾಂಪ್ ನ ಸುತ್ತಲೂ  ಹಾಕಿದ್ದ ವಿದ್ಯುತ್ ಬೇಲಿಯ ಹಿಂದೆ ಕುಳಿತಿದ್ದ ಹುಡುಗ ಶ್ಮುಯೆಲ್.

ಎಂಟು ವರ್ಷದ ಇಬ್ಬರು ಹುಡುಗರ ಮುಗ್ಧ ಸಂಭಾಷಣೆಗಳು ತುಂಬಾ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಪರಿಚಯ ಸ್ನೇಹವಾಗಿ ಮಾರ್ಪಡುವುದು. ಸಮಯ ಸಿಕ್ಕಿದಾಗಲೆಲ್ಲ ಶ್ಮುಯೆಲ್ ನನ್ನು ಭೇಟಿ ಮಾಡಲು ಓಡುತ್ತಾ ಕ್ಯಾಂಪ್ ಬಳಿ ಹೋಗುವುದು ನಡೆದೇ  ಇತ್ತು. ಬ್ರುನೋಗೆ ಕೊನೆಗೂ ಒಬ್ಬ ಗೆಳೆಯ ಸಿಕ್ಕಿದ್ದ. ಜೊತೆಯಲ್ಲಿ  ಆಡಲು ಕ್ಯಾಂಪಿನ  ಹೊರಗಿದ್ದ ವಿದ್ಯುತ್ ಬೇಲಿ ಅಡ್ಡವಾಗಿತ್ತು. ಚಿಕ್ಕವಯಸ್ಸಿನಲ್ಲೇ ಹೇಗೆ ನಾಜಿಸಂನ್ನು ಮಕ್ಕಳ ತಲೆಗೆ ತುಂಬಲಾಗುತ್ತಿತ್ತು ಎಂಬುದನ್ನು ಗ್ರೆತೆಲ್ ನ ಪಾತ್ರದ ಮೂಲಕ ತೋರಿಸಲಾಗಿದೆ.

ತಂದೆ ಮತ್ತು ಮಗಳು ನಾಜಿಗಳಿಂದ ಪ್ರಭಾವಿತರಾಗಿದ್ದಾರೆ ಅಮ್ಮ ಮತ್ತು ಮಗ ಇದರ ವಿರುದ್ಧ ದನಿ ಎತ್ತಲಾರಂಭಿಸುತ್ತಾರೆ. ಮನೆಯಲ್ಲೇ ಎರಡು ಬಣಗಳಾಗುತ್ತದೆ. ಒಂದೆಡೆ ಗಂಡ ಹೆಂಡಿರ ನಡುವೆ ವೈಷಮ್ಯ ಹೆಚ್ಚಾದರೆ ಬ್ರೂನೋ ಶುಮೆಲರ ಗೆಳೆತನ ಗಾಢವಾಗುತ್ತಾ ಹೋಗುತ್ತದೆ.  ಶುಮೆಲ್ನ  ತಂದೆಯನ್ನು ಹುಡುಕಲೆಂದು ವೇಷಮರೆಸಿ ಬ್ರೂನೋ ನಾಜಿ ಕ್ಯಾಂಪ್ ಒಳಗೆ ಪ್ರವೇಶಿಸುವಲ್ಲಿಂದ ಶುರುವಾಗುವ ಕ್ಲೈಮಾಕ್ಸ್ ಕೊನೆವರೆಗೂ ನಿಮ್ಮ ಉಸಿರು ಬಿಗಿಹಿಡಿಸುವುದು ಮಾತ್ರವಲ್ಲದೆ, ಒಂದೆರಡು ಕಂಬನಿ ಮಿಡಿಯುವಂತೆ ಮಾಡಿ,  ಸಿನಿಮಾ ಮುಗಿದು ಎಷ್ಟೋ ಸಮಯದ ವರೆಗೆ ಕಾಡುತ್ತಲೇ ಇರುತ್ತದೆ.

ಯಾವುದೇ ಕಲಬೆರಕೆ ಇಲ್ಲದ ಅನಾವಶ್ಯಕ ಎಂದೆನಿಸುವ ಒಂದು ದೃಶ್ಯ ಅಥವಾ ಸಂಭಾಷಣೆ  ಇಲ್ಲದ ಚಿತ್ರ ಕಟ್ಟಿಕೊಡುವಲ್ಲಿ ನಿರ್ದೇಶಕ ಸಫಲನಾಗಿದ್ದಾನೆ. ಚಿತ್ರವನ್ನು ಮನೋಹರವಾಗಿ ತೋರಿಸಿದ್ದು ಛಾಯಾಗ್ರಾಹಕ ಬೆನೊಇಟ್  ದೆಲ್ಹೊಮ್. ಅದಕ್ಕೆ ಪೂರಕವಾಗಿ ಹಿನ್ನಲೆ ಸಂಗೀತ ಒದಗಿಸಿದ್ದಾರೆ ಜೇಮ್ಸ್ ಹೊರ್ನರ್. ಎಲ್ಲ ನಟ ನಟಿಯರೂ ಚೆನ್ನಾಗಿಯೇ ಅಭಿನಯಿಸಿದ್ದು, ಬ್ರೂನೋ ಆಗಿ ಅಭಿನಯಿಸಿದ ಅಸ್ಸ ಬಟರ್ಫೀಲ್ಡ್ ಹಾಗು ಶ್ಮುಯೆಲ್ ಆಗಿ ಅಭಿನಯಿಸಿದ ಜಾಕ್ ಸ್ಕ್ಯಾಂಲೋನ್ ರನ್ನು ಮೆಚ್ಚಲೇಬೇಕು. ಸಿನಿಮಾ ಪ್ರೇಮಿಗಳು ಮಿಸ್ ಮಾಡದೇ ನೋಡಬೇಕಾದ ಸಂಗ್ರಹ ಯೋಗ್ಯ ಚಿತ್ರ.

Facebook ಕಾಮೆಂಟ್ಸ್

Harikiran H: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಗ್ರಾಮದಲ್ಲಿ ವಾಸವಾಗಿರುವ ಹರಿಕಿರಣ್. ಮಂಗಳೂರಿನಲ್ಲಿ ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕಾಸರಗೋಡಿನಲ್ಲಿ ಅಲೋಪಥಿಕ್ ಔಷಧಿಗಳ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಕನ್ನಡ ಕಥೆ, ಸಿನಿಮಾ, ಸಂಗೀತ ಮತ್ತು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಅಭಿರುಚಿಯನ್ನು ಹೊಂದಿರುತ್ತಾರೆ. ಕೆಲವೊಂದು ಸಣ್ಣ ಕಥೆಗಳನ್ನು ಕೂಡ ಬರೆದಿದ್ದಾರೆ
Related Post