ಕ್ರಾಂತಿ ಎನ್ನುವುದು ಭ್ರಾಂತಿಯಾಗದಿರಲಿ

ನಿರಾಶೆಯ ಕಗ್ಗತ್ತಲು ಆವರಿಸಿದಾಗ ಕ್ರಾಂತಿಯೆಂಬುದು ಕೇವಲ ಭ್ರಾಂತಿಯಾಗಿಯೇ ಉಳಿಯುತ್ತದೆ. ಒಂದು, ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಕೊಂಚ ಅವಲೋಕಿಸಿ. ಇಲ್ಲಿ ಪ್ರಸ್ತುತ ಪಡಿಸುವ ವಿಚಾರಗಳು ಒಂದು ಸರಕಾರವನ್ನು ತೆಗಳುವ ಅಥವಾ ಹೊಗಳುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಹಾಗಾಗಿ, ಓದುಗರು ಪೂರ್ವಗ್ರಹರಾಗುವ ಅವಶ್ಯಕತೆ ಇಲ್ಲ. ನಾಲ್ಕು ಅಥವಾ ಐದು ವರ್ಷಗಳ ಹಿಂದೆ, ದೇಶದ ಆರ್ಥಿಕ ನೀತಿಗಳನ್ನು ಕುರಿತಾದ ಅಥವಾ ದೇಶ ಅನುಭವಿಸುತ್ತಿರುವ ಯಾವುದೇ ಅತಿ ದೊಡ್ಡ ಪಿಡುಗುಗಳನ್ನು ಕುರಿತಾದ ವಿಚಾರ ಸಂಕಿರಣಗಳಿರಲಿ, ಸಂದರ್ಶನಗಳಿರಲಿ, ಅವೆಲ್ಲವೂ ಬಹುತೇಕ ಅಂತ್ಯಗೊಳ್ಳುತ್ತಿದ್ದುದು ಒಂದೇ ತರ್ಕದೊಂದಿಗೆ, ಈ ದೇಶದಲ್ಲೊಂದು ಕ್ರಾಂತಿಯಾಗಬೇಕಿದೆ. ಆರ್ಥಿಕ ನೀತಿಗಳನ್ನು, ಸಾಮಾಜಿಕ ರೀತಿಗಳನ್ನು ಬದಲಾವಣೆಗೆ ಒಡ್ಡುವ ಮಹಾಕ್ರಾಂತಿಗೆ ಭಾರತ ಒಳಗಾಗಬೇಕಿದೆ. ಪ್ರಾಯಶಃ ಹಾಗೊಂದು ತಾರ್ಕಿಕ ಅಂತ್ಯವನ್ನು ನೀಡುತ್ತಿದ್ದವರಿಗೆ ಮುಂದೊಂದು ದಿನ ಅಂತಹುದೇ ಕ್ರಾಂತಿಯೊಂದರಲ್ಲಿ ತಾವೂ ಪಾಲುದಾರರಾಗಬೇಕಿದೆ ಅನ್ನುವ ಕನಿಷ್ಠ ಗ್ರಹಿಕೆಯೂ ಇದ್ದಿರಲಿಕ್ಕಿಲ್ಲ. ಹಾಗೊಂದು ವೇಳೆ ಏನಾದರೂ ಮಹಾ ಅದ್ಭುತ ಸಂಭವಿಸಿದರೂ ತಾವು ಮಾತ್ರ ಹೇಗಾದರೂ ಬಚಾವಾದೇವು, ಎಷ್ಟೆಂದರೂ ಇದು ಭಾರತ ದೇಶವಲ್ಲವೇ, ಇಲ್ಲಿ ಎಲ್ಲಾ ನಡೆಯುತ್ತದೆ ಅನ್ನುವ ಭಂಡ ಧೈರ್ಯ ಇದ್ದಿರಬಹುದು. ತನ್ನನ್ನು ಒಳಗೊಳ್ಳದ ಕ್ರಾಂತಿಯ ಫಲಾನುಭವಿ ಮಾತ್ರ ತಾನಾದರೆ ಸಾಕು ಅನ್ನುವ ದುರಾಸೆಯ ಪರಾಕಾಷ್ಠೆ ತುಂಬಿದ್ದ ಜನರೇ ನಮ್ಮ ನಡುವೆ ಇದ್ದವರು ಅನ್ನುವುದು ಸದ್ಯಕ್ಕೆ ಗೋಚರವಾಗುತ್ತಿರುವ ಸತ್ಯ.

ಐವತ್ತರ ದಶಕದ ಆರಂಭ. ಅಮೆರಿಕೆಯಲ್ಲಿ ವರ್ಣಭೇದ ನೀತಿ ಆಗಿನ್ನೂ ಉಚ್ಚ್ರಾಯ ಸ್ಥಿತಿಯಲ್ಲೇ ಇತ್ತು. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಎಂಬ ಮಹಾನಾಯಕನ ಉಗಮವಾಗಿ, ಕಪ್ಪು ವರ್ಣೀಯರಿಗಾಗಿ ಅವಿರತ ಶ್ರಮ ವಹಿಸುತ್ತಿದ್ದ ಸಂದರ್ಭ. ಸಾಮಾಜಿಕ ತಾರತಮ್ಯ ತಾರಕಕ್ಕೇರಿ, ಕರಿಯರು ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿತ್ತು. ಎಲ್ಲದರಲ್ಲೂ ಬಿಳಿಯರಿಗೇ ಆದ್ಯತೆ, ಕರಿಯರು ಗುಲಾಮಗಿರಿಗೆ ಮಾತ್ರ ಅರ್ಹರು ಅನ್ನುವ ಸ್ಥಿತಿ ಆಗ ಅಮೇರಿಕಾದಲ್ಲಿತ್ತು. ಆ ಸಮಯದಲ್ಲಿ ಲೂಥರ್ ಕಿಂಗ್ ನಡೆಸಿದ ಒಂದು ಹೋರಾಟ, ನಮಗೆ ಇಂದು ಸ್ಫೂರ್ತಿಯಾಗಬಲ್ಲುದು.

ಅಮೇರಿಕದಲ್ಲಿನ  ಬಸ್ಸುಗಳಲ್ಲಿ ಬಿಳಿಯರಿಗೆಂದೇ ಪ್ರತ್ಯೇಕ ಆಸನಗಳಿದ್ದುವು. ಅದೊಂದು ದಿನ, ರೋಸಾ ಪಾರ್ಕ್ ಎಂಬ ಮಹಿಳೆ ತನ್ನ ಮೂವರು ಸ್ನೇಹಿತರೊಂದಿಗೆ ಬಸ್ಸು ಹತ್ತಿ, ಬಿಳಿಯರಿಗಾಗಿ ಮೀಸಲಿಟ್ಟಿದ್ದ ಆಸನದಲ್ಲಿ ಕುಳಿತುಬಿಟ್ಟಿದ್ದಳು. ಇದನ್ನು ಗಮನಿಸಿದ ಚಾಲಕ ಅವರನ್ನು ಎಬ್ಬಿಸಲು ಪ್ರಯತ್ನಿಸಿದ.  ಮಿಕ್ಕವರು ಎದ್ದರೂ ರೋಸಾ ಮಾತ್ರ ಪ್ರತಿಭಟಿಸಿದಳು. ಅದರ ಪರಿಣಾಮವಾಗಿ, ಅವಳು ಪೋಲೀಸರಿಂದ ಬಂಧಿಯಾಗಿ ಜೈಲು ಸೇರಬೇಕಾಯಿತು. ರೋಸಾ ಜೈಲು ಸೇರಿದ ಸುದ್ದಿ ಕರಿಯರ ನಡುವೆ ಕಾಡ್ಗಿಚ್ಚಿನಂತೆ ಹಬ್ಬಿತು. ಲೂಥರ್ ತನ್ನ ನೇತೃತ್ವದಲ್ಲಿ ಕರಿಯ ಜನಾಂಗದವರ ಸಭೆ ನಡೆಸಿ ಎಲ್ಲರಿಗೂ ಒಂದು ಸಂದೇಶ ತಲುಪಿಸಿದ. ಅದೇನೆಂದರೆ, ಇನ್ನು ಮುಂದೆ ಎಲ್ಲಾ ಕರಿಯರೂ ಬಸ್ಸುಗಳನ್ನು ಬಹಿಷ್ಕರಿಸಬೇಕು ಎಂಬುದಾಗಿ. ಮೈಲುಗಟ್ಟಲೆ ದೂರ ಜೀತದ ಕೆಲಸಕ್ಕೆ ಹೋಗುವ ಬಡವ ಕರಿಯರಿದ್ದರು. ಕರಿಯರಲ್ಲಿ ಅಲ್ಪ ಶ್ರೀಮಂತರೂ ಇದ್ದರು. ಆದರೆ, ಎಲ್ಲರೂ ತಮ್ಮ ಶ್ರೇಯೋಭಿವೃದ್ಧಿಗಾಗಿ ಬಸ್ಸುಗಳನ್ನು ಬಹಿಷ್ಕರಿಸಲೇಬೇಕೆಂದು ತೀರ್ಮಾನವಾಯಿತು. ಪ್ರತಿಯೊಬ್ಬ ಕಪ್ಪು ವರ್ಣೀಯನೂ ತಮ್ಮ ನಾಯಕನ ಮಾತನ್ನು ಶಿರಸಾ ಪಾಲಿಸತೊಡಗಿದ. ಎಷ್ಟು ದೂರವಾದರೂ ನಡೆದೇ ಸಾಗತೊಡಗಿದರು. ಕರಿಯರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಬಸ್ಸುಗಳು ಖಾಲಿ ಹೊಡೆಯತೊಡಗಿದವು. ಲೂಥರ್ ಕಿಂಗ್ ಬಿಳಿಯರಿಗೆ ಅಮೋಘವಾದ ಹೊಡೆತವನ್ನೇ ನೀಡಿದ್ದ.

ಲೂಥರನ ಈ ಕ್ರಾಂತಿಯಲ್ಲಿ ನಾವು ನೋಡಬೇಕಾದ್ದು, ಜನರು ಬದಲಾವಣೆಗಾಗಿ ತಮ್ಮನ್ನು ತಾವು ಒಡ್ಡಿಕೊಂಡ ಪರಿ. ಕ್ಷಣಿಕ ಕಷ್ಟಗಳು ಮುಂದಿನ ಸುಖದ ಸೋಪಾನಗಳು ಅನ್ನುವ ದೃಢ ವಿಶ್ವಾಸದೊಂದಿಗೆ ತಮ್ಮ ನಾಯಕನೊಂದಿಗೆ ಹೆಜ್ಜೆ ಹಾಕಿದರು. ಬಸ್ ಬಹಿಷ್ಕಾರವೆಂಬುದು ಚರಿತ್ರೆಯ ಪುಟದಲ್ಲಿ ದಾಖಲಾಗಿ ಹೋಗಿತ್ತು. ಅದುವೇ ಕರಿಯರ ಸಮಾನತೆಗೆ ನಾಂದಿಯಾಗಿತ್ತು. ಕಷ್ಟಗಳು ಎದುರಾದಾಗ, ಯಾವ ಕರಿಯನೂ ಸಬೂಬು ಹುಡುಕಲಿಲ್ಲ. ಅಲ್ಪ ಶ್ರೀಮಂತರಿದ್ದ ಕೆಲವು ಕಪ್ಪುವರ್ಣೀಯರು ಮಿಕ್ಕವರ ಹಾದಿ ತಪ್ಪಿಸಲಿಲ್ಲ. ಒಂದು ಸಮಾಜದ ಉನ್ನತಿಯೇ ಸಂಪೂರ್ಣ ಕ್ರಾಂತಿಯ ಮಹದೋದ್ದೇಶವಾಗಿ ಮಾರ್ಪಾಡಾಗಿ, ಸಾರ್ಥಕ್ಯವನ್ನು ಕಂಡಿತ್ತು.

ಭಾರತ ಕ್ರಾಂತಿಗಳನ್ನು ಕಾಣದ ದೇಶವೇನೂ ಅಲ್ಲ. ಇತಿಹಾಸದುದ್ದಕ್ಕೂ ಗುಲಾಮಗಿರಿಗೆ ಒಳಗಾದಾಗಲೆಲ್ಲಾ, ಕ್ರಾಂತಿಗೆ ಮೈಯೊಡ್ದಿಯೇ ಬದಲಾವಣೆಯನ್ನು ಕಂಡಿದೆ. ಗುಲಾಮಗಿರಿಯ ಅಂತ್ಯವಾದಾಗ ಕ್ರಾಂತಿಗಳೂ ನಿಲ್ಲಬೇಕೆಂದೇನೂ ಇಲ್ಲ. ಸಮಾಜವನ್ನು ಕ್ರಿಮಿಯಂತೆ ತಿಂದು ತೇಗುವ ಪಿಡುಗುಗಳು ಆವರಿಸಿದಂತೆಲ್ಲಾ ಕ್ರಾಂತಿಗಳು ನಡೆಯಬೇಕು. ಕ್ರಾಂತಿಯೆಂಬುದು ಸಮಾಜದ ಅವಿಭಾಜ್ಯ ಅಂಗ. ಪ್ರತ್ಯೇಕ ಕಾಲಘಟ್ಟಗಳಲ್ಲಿ ವಿಭಿನ್ನ ಕ್ರಾಂತಿಗಳ ಅಗತ್ಯತೆ ಸಮಾಜಕ್ಕೆ ಇದೆ. ಕೆಲವೊಮ್ಮೆ ಕ್ರಾಂತಿಗಳು ನಮಗರಿವಿಲ್ಲದಂತೆಯೇ ಸಂಭವಿಸಿಬಿಡುತ್ತವೆ. ಕೆಲವೊಮ್ಮೆ ತೀರಾ ಅಗತ್ಯವಾದರೂ ಅದಕ್ಕೆ ನಾವೇ ಅಡ್ದಿಪಡಿಸುತ್ತೇವೆ. ತಾಂತ್ರಿಕತೆ ಪ್ರವೇಶವಾದಂತೆಲ್ಲಾ ನಾವಾಗಿಯೇ ಬದಲಾವಣೆಗೆ ಒಗ್ಗಿಕೊಂಡಿದ್ದೇವೆ. ಮೊಬೈಲ್-ಕಂಪ್ಯೂಟರ್ ಗಳಿಗೆ ನಮ್ಮನ್ನು ನಾವು ಹೊಂದಿಸಿಕೊಂಡಿದ್ದೇವೆ. ಆದರೆ, ಅದೇ ದೇಶದ, ಸಮಾಜದ ವಿಷಯಕ್ಕೆ ಬಂದಾಗ ಕ್ರಾಂತಿಗೆ ಮುನ್ನುಡಿಯಾಗಲು ಹಿಂದಡಿ ಇಡುತ್ತಾ ಬರುತ್ತಿದ್ದೇವೆ. ಅದು ನಮ್ಮ ಭವಿಷ್ಯಕ್ಕೆ ನಾವೇ ಹಾಕುತ್ತಿರುವ ಕಲ್ಲು. ಇತಿಹಾಸದಲ್ಲಿ ಭಾರತೀಯರಿಗೆ ಕ್ರಾಂತಿಯ ಕುರಿತಾಗಿ ಇದ್ದ ವಿಶ್ವಾಸ, ಸಂವೇದನೆಗಳು ಇತ್ತೀಚಿಗಿನ ದಿನಗಳಲ್ಲಿ ಕಳೆದುಹೋಗುತ್ತಿರುವಂತೆ ಭಾಸವಾಗುತ್ತಿದೆ. ರಾಜಕೀಯ ಅಥವಾ ಇನ್ಯಾವುದೋ ಸ್ವಹಿತಾಸಕ್ತಿಗಳು ರಾಷ್ಟ್ರೀ ಯ ಚಿಂತನೆಗಳನ್ನು ಮೀರಿ ಬೆಳೆದು ಸಮಾಜಕ್ಕೆ ಕಂಟಕವಾಗುವ ಎಲ್ಲ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿದೆ.

ಅನಾಣ್ಯೀಕರಣ, ಬಹುಶಃ ಕಳೆದೆರಡು ದಶಕಗಳಲ್ಲಿ ಭಾರತ ಕಂಡ ಅತೀ ದೊಡ್ಡ ಆರ್ಥಿಕ ಕ್ರಾಂತಿ ಎನ್ನಬಹುದು. ಆದರೆ, ಕ್ರಾಂತಿಗೆ ಮೊದಲ ಹೆಜ್ಜೆ ಇಟ್ಟ ನಂತರ ನಡೆಯುತ್ತಿರುವ ಬೆಳವಣಿಗೆಗಳು ಅಷ್ಟೊಂದು ಆಶಾದಾಯಕವಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಆರ್ಥಿಕ ಕ್ರಾಂತಿಯೊಂದು ಅಲ್ಪದಿನಗಳಲ್ಲಿ ಫಲಿತಾಂಶವನ್ನು ನೀಡುವಂತಾದ್ದಲ್ಲ ಎಂಬುದು ಸಾರ್ವತ್ರಿಕವಾಗಿ ತಿಳಿದಿರುವ ಸತ್ಯ. ಇದರ ಸಫಲತೆಯಾಗಲೀ-ವಿಫಲತೆಯಾಗಲೀ ಅರಿವಾಗಲು ಕನಿಷ್ಟ ವರುಷವಾದರೂ ಬೇಕು. ಸದ್ಯಕ್ಕೆ ನಮಗೆಲ್ಲರಿಗೂ ಬೇಕಾದ್ದು, ವಿಶ್ವಾಸ ಮತ್ತು ನಂಬಿಕೆ. ಇದರೊಂದಿಗೆ ಬದಲಾವಣೆಗಾಗಿ ಕ್ರಾಂತಿಯೊಂದಿಗಿನ ಸ್ವಯಂಪ್ರೇರಿತವಾದ ಹೆಜ್ಜೆ. ನಮ್ಮ ಹೆಜ್ಜೆಯ ಹೊರತಾಗಿಯೂ ವಿಫಲತೆಯನ್ನು ಕಂಡರೆ, ದೂಷಿಸಲು ಸರಕಾರವಂತೂ ಇದ್ದೇ ಇದೆ. ಆದರೆ, ಕೈಜೋಡಿಸದೇ ಕುಳಿತರೆ, ಅದರ ವಿಫಲತೆಗೆ ನಾವೇ ಹೊಣೆಗಾರರಲ್ಲದೇ ಮತ್ಯಾರೂ ಆಗಲಾರರು. ನಾಲಕ್ಕು ಅಥವಾ ಐದು ವರ್ಷಗಳ ಹಿಂದೆ ನಾವೇ ಬಯಸಿದ್ದ ಆರ್ಥಿಕ ಕ್ರಾಂತಿಯ ಅವಕಾಶವೊಂದು ನಮ್ಮ ಮುಂದೆ ಬಂದು ನಿಂತಿದೆ. ಲೂಥರನ ಜನರು ಅನುಭವಿಸಿದ ಬವಣೆ ನಮಗಿಲ್ಲವಾದರೂ ಅಥವಾ ಇದ್ದರೂ ನಾವೇ ಬಯಸಿದ ಬದಲಾವಣೆಗೆ ನಮ್ಮಿಂದಲೇ ತೊಡರುಗಾಲು ಹಾಕುವುದು ವಿಪರ್ಯಾಸವಾಗುತ್ತದೆ. ಒಂದೊಮ್ಮೆ ಜನರ ಸಹಯೋಗದಿಂದ ಸಫಲತೆಯನ್ನು ಕ್ರಾಂತಿ ಕಂಡದ್ದೇ ಆದರೆ ನಾವೇ ಪುಣ್ಯವಂತರು ಅಲ್ಲವೇ? ಆ ನಿಟ್ಟಿನಲ್ಲಿ ಯಾಕೆ ಎಲ್ಲರೂ ಅಲೋಚಿಸಬಾರದು?

ಅನಾಣ್ಯೀಕರಣದ ಇನ್ನೊಂದು ಮಗ್ಗುಲನ್ನು ಅವಲೋಕಿಸುವುದು ಇಲ್ಲಿ ಪ್ರಸ್ತುತವಾಗಬಹುದು. ಕೆಲವು ಸಮಯದ ಹಿಂದೆ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಒಂದು ವಿಭಿನ್ನ ಪ್ರಯತ್ನಕ್ಕಿಳಿದಿದ್ದರು. ರಾಜಧಾನಿಯ ಮಾಲಿನ್ಯ ನಿಯಂತ್ರಣಕ್ಕಾಗಿ ಅವರಿಟ್ಟ ದಿಟ್ಟ ಹೆಜ್ಜೆ ಎಂದು ಬೇಕಾದರೂ ಇದನ್ನು ಕರೆಯಬಹುದು. ನಗರದ ಸಮ ಮತ್ತು ಬೆಸ ಸಂಖ್ಯೆಯ ವಾಹನಗಳನ್ನು ದಿನ ಬಿಟ್ಟು ದಿನ ಸಂಚರಿಸಲು ಅನುಮತಿ ನೀಡುವುದಾಗಿ ಘೋಷಿಸಿದ್ದರು. ಅತ್ಯಂತ ಕಲುಷಿತಗೊಂಡ ರಾಜಧಾನಿ ಎಂಬ ಹಣೆಪಟ್ಟಿ ಅಂಟಿಸಿಕೊಂಡ ನಗರವನ್ನು ಶುದ್ಧೀಕರಿಸಲು ಹರಸಾಹಸವೇ ಪಡಬೇಕು ಅನ್ನುವುದು ವಾಸ್ತವ ಸತ್ಯ. ಆ ನಿಟ್ಟಿನಲ್ಲಿ ಆಲೋಚಿಸಿದಾಗ ಆ ವಿಭಿನ್ನ ಪ್ರಯತ್ನ ಶ್ಲಾಘನೀಯ. ದುರಾದೃಷ್ಟವೆಂದರೆ, ಕೇಜ್ರಿವಾಲರ ವಿರೋಧಿಗಳು ಇದನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡರು. ಆಲಸ್ಯದ ಜನರನ್ನಾದರೂ ಕಾನೂನಿನಿಂದ ತಹಬದಿಗೆ ತರಬಹುದು. ರಾಜಕೀಯ ವಿರೋಧಿಗಳನ್ನೇನು ಮಾಡುವುದು? ಎಲ್ಲರೂ ಕೇಜ್ರಿವಾಲರ ಬೆನ್ನು ಬಿದ್ದು ಒಂದು ಒಳ್ಳೆಯ ಕ್ರಾಂತಿಯಾಗಿ ದೇಶದ ಮಿಕ್ಕ ನಗರಗಳಿಗೂ ಆದರ್ಶವಾಗಬಹುದಿದ್ದ ಹೆಜ್ಜೆಯನ್ನು ಹಳ್ಳ ಹಿಡಿಸಿದರು. ಕೇಜ್ರಿವಾಲರ ರಾಜಕೀಯ ನಡೆಗಳೂ  ಇಲ್ಲಿ ವಿಮರ್ಶನೀಯವಾದರೂ ಅವರು ಹುಟ್ಟು ಹಾಕಿದ್ದ ಯೋಚನೆಯನ್ನು ಮಾತ್ರ ಅವಲಂಬಿಸಿ ಈ ಮಾತುಗಳನ್ನು ಹೇಳಲಾಗಿದೆ. ಹೇಗೆ ದೇಶದ ಹಿತಾಸಕ್ತಿಯ ಮುಂದೆ ರಾಜಕೀಯದ ಬೇಳೆ ಬೇಯುತ್ತಿದೆ ಅನ್ನುವುದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು.

ಅಂದು ಕೇಜ್ರಿವಾಲರಿಗೆ ಆದ ಗತಿಯನ್ನೇ ಇಂದು ಮೋದಿಯವರಿಗೆ ಕಾಣಿಸಲು ಎಲ್ಲರೂ ಸಜ್ಜಾಗಿದ್ದಾರೆ. ರಾಜಕೀಯ ಅಸ್ತಿತ್ವ, ಜನಪ್ರಿಯತೆಗೆ ಪೆಟ್ಟು ಬೀಳುತ್ತಿದೆ ಎಂದರಿತವರೆಲ್ಲರೂ ತೊಡೆ ತಟ್ಟಿ ಮೋದಿ ಎಂಬ ವ್ಯಕ್ತಿಯ ಎದುರು ನಿಂತಿದ್ದಾರೆ. ದೇಶವನ್ನು ಮುನ್ನಡೆಸಬೇಕಾಗಿದ್ದ ಆರ್ಥಿಕ ಕ್ರಾಂತಿಯೊಂದು ವೈಯಕ್ತಿಕ ದ್ವೇಷಕ್ಕೆ ಬಲಿಯಾಗುತ್ತಿದೆ. ಮೋದಿ ಸಫಲನಾದರೆ ಬಿಜೆಪಿ ಗೆದ್ದಂತೆ, ಅಲ್ಲಿಗೆ ನಮ್ಮ ಅವನತಿ ಎಂದುಕೊಂಡವರೆಲ್ಲಾ ಭರವಸೆಯ ಬೆಳಕಾಗುವ ಕ್ರಾಂತಿಯ ದಿಕ್ಕನ್ನು ಬದಲಾಯಿಸುವ ಎಲ್ಲಾ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ದೇಶವೊಂದು ಕ್ರಾಂತಿಗೆ ತೆರೆದುಕೊಳ್ಳುತ್ತಿರುವಾಗ ಪ್ರಜೆಗಳ ಆಶಾಭಾವವನ್ನಾಧರಿಸಿ ಬದಲಾವಣೆಯ ಗಾಳಿ ಬೀಸುತ್ತದೆ. ನಿರಾಶೆಯ ಕಗ್ಗತ್ತಲು ಆವರಿಸಿದಾಗ ಕ್ರಾಂತಿಯೆಂಬುದು ಕೇವಲ ಭ್ರಾಂತಿಯಾಗಿಯೇ ಉಳಿಯುತ್ತದೆ.


Vignesh H

<vigneshbht@gmail.com>

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post
whatsapp
line