ಕಿರ್… ಕಿರ್… ಕಿರ್…
ತಲೆ ಮೇಲೆ ಹಳೇ ಫ್ಯಾನ್ ಜೋರಾಗಿ ಕಿರುಚುತ್ತಾ , ಅತ್ತಿಂದಿತ್ತ ತನ್ನ ಅಕ್ಷದಲ್ಲೇ ತೂಗಾಡುತ್ತಾ ಮೆಲ್ಲನೆ ತಿರುಗುತ್ತಿತ್ತು. ಮ್ಯೂಸಿಯಮ್’ಗಳಲ್ಲಿರುವ ಪುರಾತನ ವಸ್ತುಗಳ ಪ್ರಾಯವಿರಬಹುದು ಅದಕ್ಕೆ. ಗಾಳಿ ಬರದಿದ್ದರೂ ಫ್ಯಾನಿನ ಕರ್ಕಶ ಶಬ್ದ ಕೇಳುತ್ತಾ ನಿದ್ರಿಸುವುದು ಅಭ್ಯಾಸವಾಗಿ ಹೋಗಿತ್ತು ಸುದಾಮನಿಗೆ. ಆದರೆ ಅವನ ಮಡದಿ ಸವಿತಾಳಿಗೆ ಹಾಗಲ್ಲ.
“ಛೇ.. ಈ ಹಾಳಾದ ಫ್ಯಾನ್ ಶಬ್ದ, ಇದನ್ನು ಚೇ೦ಜ್ ಮಾಡಿ ಕೊಡ್ಲಿಕ್ಕೆ ಮನೆ ಓನರ್ ಹತ್ರ ಹೇಳಿದ್ರಾ? ಗಾಳಿಯಂತೂ ಬರೋದಿಲ್ಲ,ಅದು ತೂಗಾಡುವುದು ನೋಡಿದ್ರೆ ತಲೆ ಮೇಲೆ ಈಗಲೋ ಆಗಲೊ ಬೀಳುವಂತಿದೆ. ನಿಮ್ ಹತ್ರ ಎಷ್ಟು ಸರ್ತಿ ಹೇಳಿದರೂ ಅಷ್ಟೇ. ಅದೊಂದು ಸಲ ನಿಮ್ಮ ತಲೆ ಮೇಲೆ ಬಿದ್ರಷ್ಟೇ ನಿಮ್ಗೆ ಬುದ್ಧಿ ಬರೋದು” ಎಂದು ದಬಾಯಿಸಿ ಮಗ್ಗುಲ ಬದಲಾಯಿಸಿದಳು.
ಸುದಾಮನಿಗೆ ಇದು ತಿಳಿಯದ ವಿಷ್ಯವೇನಲ್ಲ. ಮನೆ ಮಾಲೀಕನಿಗೆ ಬಾಡಿಗೆ ಕೊಡುವ ದಿವಸ ಈ ವಿಷಯ ತಪ್ಪದೆ ನಿವೇದಿಸುತ್ತಲೇ ಇದ್ದಾನೆ. ಆದರೆ ಸಿಕ್ಕಿದ್ದು ಪೊಳ್ಳು ಭರವಸೆ ಮಾತ್ರ. ಒಂದು ಸ್ವ೦ತ ಮನೆ ಕಟ್ಟಬೇಕೆಂಬುದು ಅವನ ಕನಸು ಕನಸಾಗೇ ಉಳಿದಿತ್ತು. ಪ್ರೈವೇಟು ಕಂಪನಿಯೊಂದರಲ್ಲಿ ಅಕೌಂಟ್ ಸೆಕ್ಷನ್ನಲ್ಲಿ ದುಡಿಯುತ್ತಿದ್ದ ಅಲ್ಪ ಸಂಬಳದಲ್ಲಿ ಮನೆ ಖರ್ಚು ಅಲ್ಲಿಂದಲ್ಲಿಗೆ ಸರಿ ಹೋಗುತಿತ್ತು. ಇನ್ನು ಬೆಳೆಯುತ್ತಿರುವ ಎರಡು ಹೆಣ್ಣು ಮಕ್ಕಳನ್ನು ನೋಡುವಾಗ ಮನೆ ಕಟ್ಟುವುದು ಅಷ್ಟರಲ್ಲೇ ಇದೆ ಅಂತ ಅಂದುಕೊಳ್ಳುತ್ತಿದ್ದ. ಸವಿತಾ ಅತ್ತಿಂದಿತ್ತ ಹೊರಳಾಡುವುದನ್ನು ನೋಡಿ ಇನ್ನೂ ಅವಳಿಗೆ ನಿದ್ದೆ ಬಂದಿಲ್ಲವೆಂದು ತಿಳಿದು ತನ್ನ ಚಿ೦ತೆಯನ್ನು ಅವಳಲ್ಲಿ ಹೇಳಿಕೊ೦ಡ.
“ಸ್ವಂತ ಮನೆ ಅಂತ ಆಗ್ಬೇಕಾದ್ರೆ ಏನಾದ್ರು ಪವಾಡ ನಡಿಬೇಕಷ್ಟೇ, ಎಲ್ಲ ನಮ್ಮ ಹಣೆಬರಹ.”
ಸವಿತಾ ಅವನ ಪಕ್ಕಕ್ಕೆ ತಿರುಗಿ ಏನೋ ನೆನಪಿಗೆ ಬಂದವಳಂತೆ.
“ರೀ, ನಿನ್ನೆ ಒಬ್ಬ ಮುಖಲಕ್ಷಣ ಹೇಳುವವನು ಬಂದಿದ್ದ. ನಿಮ್ಗೆ ಸದ್ಯದಲ್ಲೇ ಅದೃಷ್ಟ ಖುಲಾಯಿಸಲಿದೆ ಅಂತ ಹೇಳಿದ . ಅವನು ಹೇಳಿದ ಹಾಗೆ ಆದರೆ … “
“ಹಹ್ಹಹ … ಒಬ್ಬೊಬ್ಬರು ಒಂದೊಂದು ಹೇಳೋದು ನೀನು ಅದನ್ನೆಲ್ಲ ನಂಬೋದು ಸರಿ ಹೋಯಿತು ” ಅಂತ ಗಹಿ ಗಹಿಸಿ ನಕ್ಕ.
ಹಲವು ಗ೦ಟೆಗಳ ಹೊರಳಾಟದ ನಂತರ ಹೇಗೋ ನಿದ್ದೆ ಹತ್ತಿತ್ತು ಇಬ್ಬರಿಗೂ.
ಯಾವತ್ತಿನಂತೆಯೇ ಬೆಳಬೆಳಗ್ಗೆಯೇ ನೀರಿನ ಸಮಸ್ಯೆ. ಪಕ್ಕದ ಮನೆಯವರ ಬಾವಿಯಿಂದ ನೀರು ಸೇದಿ ಮಕ್ಕಳನ್ನು ಹೊರಡಿಸಿ ಶಾಲೆಗೆ ಕಳುಹಿಸಿ, ತಾನೂ ಹೊರಟು ಏದುಸಿರು ಬಿಡುತ್ತಾ ಕ೦ಪನಿ ತಲುಪಿದಾಗ ಅರ್ಧ ಗ೦ಟೆ ಲೇಟಾಗಿತ್ತು. ಹೆದರುತ್ತಲೇ ಮ್ಯಾನೆಜರ್ ಛೇ೦ಬರಿಗೆ ನುಗ್ಗಿದ.
“ಏನ್ರೀ ಇದು ಯಾವತ್ತೂ ಲೇಟು ? ಇನ್ನು ಇದನ್ನು ಸಹಿಸೊಕಾಗಲ್ಲ. ನಾಳೆಯಿ೦ದ ಲೇಟ್ ಮಾಡಿದ್ರೆ ಅರ್ಧ ದಿನದ ಸ೦ಬಳ ಕಟ್” ಅ೦ತ ಗುಡುಗುತ್ತಲೇ ಅಟೆ೦ಡೆನ್ಸ್ ರಿಜಿಸ್ಟರ್ ಅವನತ್ತ ಎಸೆದ.
ದಿನಾ ಬೈಗುಳ ಕೇಳಿ ರೋಸಿ ಹೋಗಿತ್ತು ಸುದಾಮನಿಗೆ. ತನ್ನ ಕಷ್ಟ ಇವರಿಗೆ ಅರ್ಥ ಆಗಲ್ಲ ಅ೦ತ ಲೇಟಾಗಲು ಕಾರಣ ಏನೂ ಕೊಡಲು ಹೋಗಲಿಲ್ಲ. ತಣ್ಣಗೆ ಸಾರಿ ಸರ್ … ಅಂದು ಬಿಟ್ಟು ಅಲ್ಲಿಂದ ಮೆಲ್ಲಗೆ ನುಣುಚಿಕೊಂಡ. ಮನಸ್ಸು ಕುದಿಯುತ್ತಲೇ ಇತ್ತು. ತಾನು ಕೆಲಸಕ್ಕೆ ಸೇರಿ ಹದಿನೈದು ವರುಷಕ್ಕೂ ಮೇಲೆ ಆದರೂ ಇನ್ನು ಅಸಿಸ್ಟೆ೦ಟ್ ಆಗಿಯೇ ಇದ್ದೇನೆ. ನಂತರ ಬಂದವರೆಲ್ಲ ಈಗಾಗಲೇ ತನ್ನನ್ನು ಮೀರಿಸಿ ಮುಂದೆ ಹೋಗಿದ್ದಾರೆ. ತನಗಿಂತಲೂ ಕಿರಿಯವ ತನ್ನ ಮೇನೇಜರ್ ಆಗಿ ತನ್ನ ಮೇಲೆ ಅಧಿಕಾರ ಚಲಾಯಿಸುತ್ತಾನೆ. ಉನ್ನತ ವಿಧ್ಯಾಭ್ಯಾಸ ಮಾಡದಿದ್ದುದರ ಫಲ ಇದು. ಇಲ್ಲದಿದರೆ ಈ ಗತಿ ಬರುತ್ತಿರಲಿಲ್ಲ ಎಂದು ಹಲುಬಿದ.
ತನ್ನ ಟೇಬಲ್ ಬಳಿ ಬಂದು ಕುಳಿತು ಕಂಪ್ಯೂಟರ್ ಆನ್ ಮಾಡಿ ಕೆಲಸ ಶುರುಮಾಡಿದ. ಆದರೆ ಮನಸ್ಸು ಮಾತ್ರ ತನ್ನ ಜೀವನ ಎತ್ತ ಸಾಗುತ್ತಿದೆ ಎಂಬುದರಲ್ಲೇ ಕಳೆದು ಹೋಗಿತ್ತು. ಹಾಗೂ ಹೀಗೂ ಲಂಚ್ ಟೈಮ್ ಬಂತು. ತನ್ನ ಬುತ್ತಿ ತೆಗೆದು ಊಟದ ಶಾಸ್ತ್ರ ಮುಗಿಸಿದ. ಇನ್ನೂ ಹದಿನೈದು ನಿಮಿಷಗಳ ಕಾಲ ಲಂಚ್ ಬ್ರೇಕ್ ಇದೆ ಎಂದು ಕೊಂಡು ತನ್ನ ಇಮೈಲ್ ಗಳನ್ನು ಚೆಕ್ ಮಾಡತೊಡಗಿದ. ಐದಾರು ಹೊಸ ಇಮೈಲ್ ಗಳು ಬಂದಿದ್ದವು. ಅದರಲ್ಲಿ ಕೆಲವು ಕ೦ಪನಿಗೆ ಸಂಬಂಧಿಸಿದ್ದು. ಆದರೆ ಇನ್ನೊಂದು ಇಮೈಲ್ ಅವನ ಗಮನ ಸೆಳೆಯಿತು.
“ಕ೦ಗ್ರಾಜುಲೇಶನ್ಸ್”
ಅರೆ! ಯಾರಪ್ಪಾ ಇದು, ತನಗೆ ಯಾಕೆ ವಿಶ್ ಮಾಡಿದ್ದು ಅ೦ತ ಕಳುಹಿಸಿದವರ ಹೆಸರು ನೋಡಿದ.
’ಜೋನ್ ಪೀಟರ್’ ಎ೦ದಿತ್ತು. ಕೂಡಲೇ ಅದನ್ನು ಓಪನ್ ಮಾಡಿ ಓದಲು ಶುರು ಮಾಡಿದ.
“ಕ೦ಗ್ರಾಜುಲೇಶನ್ಸ್ ಮಿ. ಸುದಾಮ, ಈ ವರ್ಷದ ಜೆಮೆಲ್ ಲಾಟರಿ ಲಕ್ಕಿ ಡ್ರಾದಲ್ಲಿ ನೀವು ವಿಜಯಿ ಆಗಿದ್ದೀರಿ. ಬಹುಮಾನದ ಮೊತ್ತ ಎರಡು ಕೋಟಿ ರೂಪಾಯಿಗಳನ್ನು ಪಡೆಯಲು ಮಿ, ಜಾನ್ ಅವರನ್ನು ಸಂಪರ್ಕಿಸಿ ” ಎಂದಿತ್ತು.
ತಾನು ತುಂಬಾ ವರ್ಷಗಳಿಂದ ಜೆಮೆಲ್ ಕಂಪನಿಯ ಇಮೇಲ್ ಬಳಸುತ್ತಿದ್ದು ಇದೇ ಮೊದಲ ಬಾರಿ ಇಂತಹ ಲಾಟರಿ ವಿಷಯ ಗಮನಕ್ಕೆ ಬಂದಿತ್ತು. ಅರೆ ಕ್ಷಣ ಸ್ತಂಭೀಬೂತನಾದ ಸುದಾಮ. ತನ್ನೆರಡೂ ಕಣ್ಣುಗಳನ್ನು ನಂಬಲಾರದಂತಹ ಸ್ಥಿತಿ.
‘ ಎರಡು ಕೋಟಿ ರೂಪಾಯಿಗಳು ‘
ಪುನಃ ಪುನಃ ಅದನ್ನೇ ಓದಿದ. ಮನಸ್ಸು ಸಂತಸದಿಂದ ಕುಣಿಯುತ್ತಿತ್ತು. ಜೋರಾಗಿ ಕಿರುಚಿ ಇದನ್ನು ಎಲ್ಲರಿಗೂ ತಿಳಿಸಲು ಮನಸ್ಸು ಹಾತೊರೆಯುತ್ತಿತ್ತು. ಆದರೆ ಕಂಪನಿಯಲ್ಲಿ ಒಳ್ಳೆಯ ಗೆಳೆಯರು ಯಾರೂ ಇಲ್ಲ. ಎಲ್ಲರೂ ಸ್ವಹಿತ ಕಾಯುವವರೇ. ಇಮೇಲ್ ಅನ್ನು ಕ್ಲೋಸ್ ಮಾಡಿ ಕೆಲವು ಕ್ಷಣಗಳ ಕಾಲ ಸುಮ್ಮನೆ ಕುಳಿತ. ಏನೂ ತೋಚುತ್ತಿರಲಿಲ್ಲ. ರಜೆ ಹಾಕಿ ಮೊದಲು ಈ ಸಂತಸದ ಸುದ್ದಿಯನ್ನು ಸವಿತಾಳಿಗೆ ಹೇಳಬೇಕೆಂದುಕೊಂಡ.
ತಲೆ ನೋವಿನ ಸಬೂಬು ನೀಡಿ ಮ್ಯಾನೇಜರ್ ನಿಂದ ಹೇಗೋ ರಜೆ ಗಿಟ್ಟಿಸಿಕೊಂಡು ಸ್ಕೂಟರ್ ಏರಿ ಸ್ಟಾರ್ಟ್ ಮಾಡಲು ಕಿಕ್ ಹೊಡೆದ. ಎಂದಿನಂತೆಯೇ ಹಲವು ಕಿಕ್ ನಂತರವೂ ಸ್ಟಾರ್ಟ್ ಆಗಲೊಲ್ಲದು. ಸಿಟ್ಟು ನೆತ್ತಿಗೇರಿತು. ಲಾಟರಿ ಹಣ ಬಂದ ಕೂಡಲೇ ಮೊದಲು ಈ ಡಬ್ಬಾ ಸ್ಕೂಟರ್ ಮಾರಿ ಒಳ್ಳೆಯ ಕಾರು ತಗೋಬೇಕು ಅಂದುಕೊಂಡ. ಶತ ಪ್ರಯತ್ನದ ನಂತರ ಸ್ಟಾರ್ಟ್ ಆದ ಸ್ಕೂಟರನ್ನು ಮನೆ ಕಡೆ ಚಲಾಯಿಸಿದ.
ಮನೆಗೆ ತಲುಪುತ್ತಲೇ ಬಾಗಿಲಬಳಿ ಬಂದು ಒಂದೇ ಸಮನೆ ಬೆಲ್ ಮಾಡಿದ.
ಬಾಗಿಲು ತೆರೆದ ಸವಿತಾ,
“ಏನ್ರೀ ಇದು ಈ ಹೊತ್ನಲ್ಲಿ, ಮೈಗೆ ಹುಷಾರಿಲ್ವ? ಏನಾಯ್ತು ?”
“ಅದೆಲ್ಲ ಹೇಳ್ತೀನಿ , ಆ ಮುಖ ಲಕ್ಷಣ ಹೇಳುವವನು ಯಾರು ? ಅವನಿಗೆ ಸ್ವೀಟ್ ಕೊಡಿಸಬೇಕು. ಅವನು ಹೇಳಿದ ಹಾಗೆಯೇ ಆಯಿತು ನೋಡು. ಹೊಡೆಯಿತು ನಮಗೆ ಎರಡು ಕೋಟಿಯ ಲಾಟರಿ “.
” ಲಾಟರೀನ ? ಎರಡು ಕೋಟಿ? ಹಹ್ಹಹ … ಒಳ್ಳೆ ತಮಾಷೆ ಕಣ್ರೀ … “
“ಅಲ್ಲ ಕಣೇ ನಿಜವಾಗ್ಲೂ, ಈಮೇಲ್ ಬಂದಿದೆ. ಲಾಟರಿ ನಾನು ಯೂಸ್ ಮಾಡೋ ಈಮೇಲ್ ಕಂಪನಿಯವರದ್ದೇ. ಈ ವರ್ಷದ ಲಕ್ಕಿಡ್ರಾನಲ್ಲಿ ನನ್ನ ಹೆಸರು ಬಂದಿದೆಯಂತೆ. ಅವರ ಫೋನ್ ನಂಬರ್ ಅಡ್ರೆಸ್ ಎಲ್ಲ ಕೊಟ್ಟಿದ್ದಾರೆ. ಅವರಿಗೆ ಫೋನ್ ಮಾಡಿದ್ರೆ ಹಣ ಹೇಗೆ ತಲುಪಿಸ್ತಾರೆ ಅಂತ ಹೇಳ್ತಾರಂತೆ ” ಅಂತ ಒಂದೇ ಉಸಿರಿನಲ್ಲಿ ವಿವರವನ್ನೆಲ್ಲಾ ಒಪ್ಪಿಸಿದ.
ಸವಿತಾಳಿಗೆ ಇದು ಕನಸೋ ನನಸೋ ಅಂತ ತಿಳಿಯದೆ ಹಾಗೆಯೇ ಕಲ್ಲಿನಂತೆ ನಿಂತಳು. ಎರಡು ಕೋಟಿ ಅಂದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾದಂತೆಯೇ. ಸ್ವಂತ ಮನೆ, ಕಾರು, ಇಬ್ಬರು ಹೆಣ್ಣು ಮಕ್ಕಳ ಮದುವೆ ಎಲ್ಲದಕ್ಕೂ ಈ ಹಣ ಧಾರಾಳ ಸಾಕು. ಸ್ವಂತ ವ್ಯಾಪಾರ ಏನಾದ್ರು ಶುರು ಮಾಡಿದ್ರೆ ಇವರ ಈ ಕಂಪನಿ ಬವಣೆಯೂ ತಪ್ಪುತ್ತೆ. ದೇವರು ಕೊನೆಗೂ ಕಣ್ಣು ಬಿಟ್ಟ ಅಂತ ಮನಸ್ಸಿನಲ್ಲೇ ದೇವರಿಗೆ ಧನ್ಯವಾದ ಹೇಳಿದಳು.
ಪುನಃ ವಾಸ್ತವಕ್ಕೆ ಬಂದು,
“ಹಾಗಾದ್ರೆ ಫೋನ್ ಮಾಡಿ ವಿವರ ತಿಳ್ಕೊಳ್ಳಿ ಬೇಗ “
“ಅದಕ್ಕೂ ಮೊದಲು ಆನಂದನ ಅಂಗಡಿ ಹತ್ರ ಹೋಗಿ ಅವನತ್ರ ಇದರ ವಿಷಯ ತಿಳಿಯುವುದು ಒಳ್ಳೇದು ಅನ್ಸುತ್ತೆ.”.
“ಹಾಂ .. ಅದೂ ಸರೀನೆ, ಅವನಿಗೆ ಈ ತರದ್ದೆಲ್ಲ ಚೆನ್ನಾಗಿ ಗೊತ್ತಿರುತ್ತೆ ಈಗಲೇ ಹೋಗಿ “
“ಸರಿ”
ಸುದಾಮ ಪುನಃ ಸ್ಕೂಟರನ್ನೇರಿ ಆನಂದನ ಅಂಗಡಿ ಹತ್ರ ಬಂದ. ಜೆರಾಕ್ಸ್ ಅಂಗಡಿ ಇಟ್ಟು ಕೊಂಡರೂ ಅವನ ವ್ಯವಹಾರ ದಲ್ಲಾಳಿತನವೇ . ರಿಯಲ್ ಎಸ್ಟೇಟ್, ಹಳೆಯ ವಾಹನ ಮಾರಾಟ ಹೀಗೆ ಏನುಂಟು ಏನಿಲ್ಲ. ವ್ಯವಹಾರ ಕುದುರಿಸುವುದರಲ್ಲಿ ಎತ್ತಿದ ಕೈ. ಸುದಾಮನ ಬಾಲ್ಯದ ಗೆಳೆಯ. ಅವನಿಗೆ ಬಾಡಿಗೆ ಮನೆ, ಸ್ಕೂಟರ್ ಎಲ್ಲವನ್ನು ಬಹಳಷ್ಟು ಕಡಿಮೆ ಬೆಲೆಗೆ ಏರ್ಪಾಡು ಮಾಡಿಕೊಟ್ಟಿದ್ದ. ಸುದಾಮನನ್ನು ಕಂಡ ಕೂಡಲೇ
“ಬಾ ಮಾರಾಯ , ಇವತ್ತು ರಜೆ ಹಾಕಿದ್ಯಾ , ಏನು ವಿಶೇಷ” ಎಂದು ಸ್ವಾಗತಿಸಿದ.
“ವಿಶೇಷ ಇದೆ, ನೀನು ಫ್ರೀ ತಾನೇ? “
“ವ್ಯಾಪಾರ ಡಲ್ಲು , ನೋಡು ಸುಮ್ಮನೇ ಕೂತಿದ್ದೇನೆ ನೊಣ ಹೊಡಿತಾ” ಅಂತ ನಸುನಕ್ಕ.
“ನಿಂಗೆ ಜೆರಾಕ್ಸ್ ಮಾಡಿಯೇ ಅಗಬೇಕ? ಸುಮ್ನೆ ಒಂದೆರಡು ಜಾಗದ ವ್ಯವಹಾರ ಕುದುರಿದ್ರೆ ತಿಂಗಳಿನದ್ದು ಆಯ್ತಲ್ಲ ” ಅಂತ ಕಾಲೆಳೆದ ಸುದಾಮ. ಹಾಗೆ ಬಂದ ವಿಷಯದ ಬಗ್ಗೆ ಹೇಳುತ್ತಾ,
“ನನಗೊಂದು ಲಾಟರಿ ಹೊಡೆದಿದೆ ಮಾರಾಯ “
“ನಿಂಗೆ ಲಾಟರಿ ತೆಗೆಯುವ ಹುಚ್ಚಿತ್ತಾ ? ನಂಗೆ ಗೊತ್ತೇ ಇರ್ಲಿಲ್ಲ, ಎಷ್ಟು ? ಒಂದು ಲಕ್ಷವಾ ಅಲ್ಲ ಐನೂರಾ?” ಅಂತ ನಗಲು ಶುರು ಮಾಡಿದ.
“ಇದು ಆ ಲಾಟರಿ ಅಲ್ಲ , ಜೆಮೈಲ್ ಗೊತ್ತಲ್ವಾ ನಿಂಗೆ, ಅವರ ಬಳಕೆದಾರರಲ್ಲಿ ಯಾರಾದ್ರು ಒಬ್ರಿಗೆ ವರ್ಷಕ್ಕೊಂದು ಸಲ ಲಕ್ಕಿ ಡ್ರಾ ಮೂಲಕ ಎರಡು ಕೋಟಿ ರೂಪಾಯಿ ಕೊಡುತ್ತಾರೆ . ಈ ವರ್ಷದ್ದು ನಂಗೆ ಬಂದಿದೆ” ಅಂತ ಹೇಳಿ ಆನಂದನ ಪ್ರತಿಕ್ರಿಯೆಗಾಗಿ ಕಾದ.
ತಬ್ಬಿಬಾಗುವ ಸರದಿ ಆನಂದನದು. ಕ್ಷಣಗಳ ಮೌನದ ನಂತರ ಸಾವರಿಸಿಕೊಂಡು,
“ಏನು ಹೇಳ್ತಿ ಮಾರಾಯ, ಎರಡು ಕೋಟಿ ? ಅದೃಷ್ಟ ಅಂದ್ರೆ ನಿಂದು. ಇನ್ನು ನಿನ್ನನು ಯಾರೂ ಹಿಡಿವವರಿಲ್ಲ” .
“ಅದೆಲ್ಲಾ ಆಮೇಲೆ, ಈಗ ಲಾಟರಿ ಹಣ ಸಿಗಲಿಕ್ಕೆ ಸಹಾಯ ಮಾಡು”
“ಖಂಡಿತ , ಸಿಕ್ಕಿದ ಮೇಲೆ ನಮ್ಮನ್ನೆಲ್ಲಾ ಮರಿಬಾರ್ದು ಅಷ್ಟೇ”
“ಯಾರನ್ನು ಮರೆತರೂ ನಿನ್ನನ್ನು ಮರೆಯುದಿಲ್ಲ , ಸಾಲ್ದಾ? ನೀನು ಬೇಗ ಜೆಮೈಲ್ ಓಪನ್ ಮಾಡು ಅದ್ರಲ್ಲಿ ಡೀಟೇಲ್ಸ್ ಎಲ್ಲಾ ಕೊಟ್ಟಿದ್ದಾರೆ” .
ಆನಂದ ತನ್ನ ಲಾಪ್ಟಾಪ್’ನಲ್ಲಿ ಜೆಮೈಲ್ ಓಪನ್ ಮಾಡಿ ಕೊಟ್ಟ. ಸುದಾಮ ತನ್ನ ಈಮೇಲ್ ಅಕೌಂಟ್ ಓಪನ್ ಮಾಡಿ ಲಾಟರಿ ವಿವರಗಳನ್ನು ಆನಂದನಿಗೆ ತೋರಿಸಿದ.
” ಅವರ ನಂಬರಿಗೆ ಫೋನ್ ಮಾಡಿ ಕೇಳುವ “
” ಅದಕ್ಕೇ ನಿನ್ನ ಹತ್ರ ಬಂದದ್ದು, ನೀನೆ ಫೋನ್ ಮಾಡಿ ಕೇಳು ಮಾರಾಯ “
“ಆಯ್ತು” ಅಂತ ಆನಂದ ಕೂಡಲೇ ಆ ನಂಬರಿಗೆ ಫೋನ್ ಮಾಡಿ ಮಾತಾಡಿದ. ಫೋನ್ ಕಟ್ ಆಗುತ್ತಲೇ ಸುದಾಮ ಕಾತರದಿಂದ
“ಏನು ಮಾಡಬೇಕಂತೆ ? ” .
“ಅವರೊಂದು ಫಾರಂ ಕಳುಹಿಸುತ್ತಾರಂತೆ. ಅದರಲ್ಲಿ ನಿನ್ನ ಎಲ್ಲ ಡೀಟೇಲ್ಸ್ ಫಿಲ್ ಮಾಡಿ ಅವರಿಗೆ ಮೇಲ್ ಮಾಡ್ಬೇಕಂತೆ. ಅವರ ಬ್ಯಾಂಕ್ ಡೀಟೇಲ್ಸ್ ನಿಂಗೆ ಕಳುಹಿಸಿದ್ದಾರಂತೆ. ಅದಕ್ಕೆ ಲಾಟರಿ ಪ್ರೊಸೆಸಿಂಗ್ ಫೀ ಒಂದು ಲಕ್ಷ ಹಾಕಬೇಕಂತೆ” .
“ಒಂದು ಲಕ್ಷ ! ? “
“ಹೌದು, ಎರಡು ಕೋಟಿ ಬರುದಿಲ್ವ ಮಾರಯ, ಈ ಒಂದು ಲಕ್ಷ ಏನು ಮಹಾ, ಹಾಕಿದ್ರಾಯ್ತು “
“ಹಾಗಾದ್ರೆ ಲಾಟರಿ ಹೊಡೆದದ್ದು ಕನ್ ಫ್ಹರ್ಮ್ ತಾನೇ ? “
“ಹೌದು ಮಾರಾಯ, ಇನ್ನೂ ಎಂತ ಸಂಶಯ, ನಾನೇ ಮಾತಾಡಿದೆನಲ್ಲ, ಮೊದ್ಲು ಆ ಫಾರಂ ಬರೆದು ಕಳುಹಿಸು. ಹಣ ನಾಳೆ ಹಾಕಿದ್ರಾಯ್ತು”
” ಹುಂ ” ಎಂದು ಸುದಾಮ ಅವರು ಕಳುಹಿಸಿದ ಫಾರಂ ತುಂಬಿ ಅಲ್ಲಿಂದಲೇ ಕಳುಹಿಸಿದ. ಸ್ವಲ್ಪ ಹೊತ್ತಲ್ಲಿ ಅವರ ಬ್ಯಾಂಕ್ ಖಾತೆ ವಿವರ ಬಂತು.
“ನಾಳೆ ರಜೆ ಹಾಕು, ಹಣ ತಗೊಂಡು ಇಲ್ಲಿ ಬಾ . ನಾಳೆನೇ ಹಾಕಿ ಬಿಡುವ ಲೇಟ್ ಆದ್ರೆ ಸುಮ್ನೆ ತೊಂದ್ರೆ ” ಎಂದು ಎಚ್ಚರಿಸಿದ ಆನಂದ.
“ಸರಿ”
ಸುದಾಮ ಮನೆಗೆ ಬಂದ. ಎರಡು ಕೋಟಿ ದಕ್ಕುವ ಸಂತಸ ಒಂದೆಡೆಯಲ್ಲಾದರೆ ಅದಕ್ಕಾಗಿ ಒಂದು ಲಕ್ಷ ಒಟ್ಟು ಮಾಡುವ ಚಿಂತೆ ಹೊಸದಾಗಿ ಸೇರಿಕೊಂಡಿತ್ತು. ಐವತ್ತು ಸಾವಿರ ತಾನು ಕಷ್ಟಪಟ್ಟು ದುಡಿದು ಕೂಡಿಟ್ಟದ್ದಿತ್ತು. ಉಳಿದದ್ದಕ್ಕೆ ಸವಿತಾಳ ಚಿನ್ನ ಮಾರಿದರೆ ಸರಿ ಹೋಗಬಹುದು ಎಂದು ಅವಳಲ್ಲಿ ಈ ವಿಷಯ ಪ್ರಸ್ತಾಪಿಸಿದ. ಅವಳು ಮರುಮಾತಾಡದೆ ತನ್ನೆಲ್ಲಾ ಆಭರಣಗಳನ್ನು ತೆಗೆದು ಕೊಟ್ಟಳು.
ಸದ್ಯಕ್ಕೆ ಲಾಟರಿ ವಿಷಯ ಯಾರಲ್ಲೂ ಹೇಳಬೇಡ ಅಂತ ಸವಿತಾಳಿಗೆ ತಾಕೀತು ಮಾಡಿದ. ಮರುದಿನ ರಜಾ ತಗೊಂಡು ಹಣ, ಒಡವೆ ಜೊತೆ ಆನಂದನ ಅಂಗಡಿ ಬಳಿ ಬಂದ. ನಂತರ ಇಬ್ಬರೂ ಚಿನ್ನವನ್ನು ಮಾರಾಟ ಮಾಡಲು ಸೇಟ್ ಅಂಗಡಿಗೆ ಬಂದರು. ಖಾಯಂ ಗಿರಾಕಿ ಆನಂದ ಜೊತೆಗಿದ್ದುದರಿಂದ ಸುಲಭವಾಗಿ ಹಣಗಿಟ್ಟಿತ್ತು. ಒಂದು ಲಕ್ಷ ರುಪಾಯಿ ಲಾಟರಿಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದೂ ಆಯಿತು. ನಂತರ ಪುನಃ ಲಾಟರಿಯವರಿಗೆ ಫೋನ್ ಹಚ್ಚಿದ ಆನಂದ. ಕೆಲವು ನಿಮಿಷಗಳ ಮಾತು ಕತೆಯ ನಂತರ ಸುದಾಮನಿಗೆ ವಿಷಯ ತಿಳಿಸುತ್ತಾ,
“ನಿನ್ನ ಹಣ ಸಿಕ್ಕಿದೆಯಂತೆ , ಅವರು ಲಾಟರಿ ಹಣವನ್ನು ರಿಸರ್ವ್ ಬ್ಯಾಂಕ್’ಗೆ ವರ್ಗಾಯಿಸುತ್ತಾರಂತೆ . ಒಂದು ವಾರದಲ್ಲಿ ನಿನ್ನ ಅಕೌಂಟಿಗೆ ಬರುತ್ತೆ ಅಂತ ಹೇಳಿದ್ರು. ಇನ್ನು ಒಂದು ವಾರ ಕಳೆದರೆ ನೀನು ಕೋಟ್ಯಾಧೀಶ “
“ಅಬ್ಬಾ, ತುಂಬಾ ಥ್ಯಾಂಕ್ಸ್ ಮಾರಾಯ , ಹಣ ಬೇಗ ಬಂದ್ರೆ ಸಾಕಿತ್ತು ‘ ಅಂತ ನಿಟ್ಟುಸಿರು ಬಿಟ್ಟ ಸುದಾಮ.
ಒಂದು ವಾರ ಲಾಟರಿಯ ಗುಂಗಿನಲ್ಲೇ ಕಳೆದ.
ಹರಿಕಿರಣ್. ಹೆಚ್
h.kiran83@gmail.com
Facebook ಕಾಮೆಂಟ್ಸ್