ಬೆಳಗಿನ ಸೂರ್ಯನ ಕಿರಣದ ಜೊತೆಗೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ಪತ್ರಿಕೆ ತಿರುವಿ ಹಾಕಿದ ಮೇಲೆಯೇ ಮನೆಯ ಯಜಮಾನನಿಗೆ ಮುಂದಿನ ಕಾರ್ಯ ಚಟುವಟಿಕೆ ಪ್ರಾರಂಭವಾಗುತ್ತಿತ್ತು. ಚಿಕ್ಕವರಿದ್ದಾಗ ಶಾಲೆಗಳಲ್ಲೂ ಕೂಡಾ ಪ್ರತಿ ನಿತ್ಯ ದಿನಪತ್ರಿಕೆ ಓದುವುದು ಅಭ್ಯಾಸ ಮಾಡಿಕೊಳ್ಳಿ ಎನ್ನುವುದೂ ದಿನನಿತ್ಯದ ಉಪದೇಶವಾಗಿತ್ತು. ಹಾಗೂ ಹೀಗೂ ಐದನೇ ತರಗತಿಗೆ ಬರುವಷ್ಟರಲ್ಲಿ ಬೆಳಗ್ಗೆಯೆದ್ದು ಪುಟ ತಿರುವಿ ಹಾಕುವುದಾದರೂ ಅಭ್ಯಾಸವಾಗುತ್ತಿತ್ತು. ಎಂಟರಿಂದ ಹತ್ತನೇ ತರಗತಿಗೆ ಬರುವಷ್ಟರಲ್ಲಿ ಪಠ್ಯ ಪುಸ್ತಕಕ್ಕಿಂತ ಗಂಭೀರವಾಗಿ ಪತ್ರಿಕೆ ಓದುವುದು ನನಗಂತೂ ಅಭ್ಯಾಸವಾಗಿತ್ತು. ಸುದ್ದಿಗಳನ್ನು ನನ್ನ ಮಟ್ಟಕ್ಕೆ ಅರ್ಥೈಸಿಕೊಂಡು ಓದುತ್ತಿದ್ದೆ.
ವಾಟ್ಸಾಪ್ ಅಂದು ಜೊತೆಗಿರಲಿಲ್ಲ, ಇಂಟರ್‍ನೆಟ್ ಎಂಬುದು ಒಂದಿದೆ ಎಂದು ಪತ್ರಿಕೆ ಓದಿಯಷ್ಟೆ ತಿಳಿದಿತ್ತು. ಇನ್ನು ಮನೆಯಲ್ಲಿ ಟಿವಿ ಇದ್ದರೂ ಅರ್ಧ ಗಂಟೆಯ ಅಗ್ರ ರಾಷ್ಟ್ರೀಯ ವಾರ್ತೆಗಳು ಮಾತ್ರ. ಇನ್ನೆಲ್ಲಾ ಸುದ್ದಿ, ವಿವರ, ವಿಶ್ಲೇಷಣೆಗಳಿಗೂ ಬೆಳಗ್ಗೆ ಕಾತರದಿಂದ ಕಾಯುತ್ತಿದ್ದ ಪತ್ರಿಕೆಯೇ ಉತ್ತರ ಕೊಡುವಂತಿತ್ತು. ಇಂದು ಪತ್ರಿಕೆ ಇಲ್ಲದಿದ್ದರೂ ನಡೆಯುತ್ತದೆ, ಬೆರಳ ತುದಿಯಲ್ಲೇ ಆಪ್‍ಗಳು ಕುಣಿದಾಡುತ್ತಾ ಕ್ಷಣ ಕ್ಷಣಕ್ಕೆ ಮಾಹಿತಿ ಒದಗಿಸುತ್ತದೆ. ಪತ್ರಿಕೆ ಬಂದು ಕದ ಬಡಿಯುವ ಮೊದಲು ಇ-ಪೇಪರ್ ಮನೆಯೊಳಗೇ ನಿಂತಿರುತ್ತದೆ. 24×7 ನ್ಯೂಸ್ ಚಾನಲ್‍ಗಳಂತೂ ಸುದ್ದಿಗಳನ್ನು ಸಾಧ್ಯವಿದ್ದಷ್ಟೂ ಎಳೆದಾಡುತ್ತದೆ.
ಹೌದು ಕಾಲ ಬದಲಾಗಿದೆ! ಜನರೇಶನ್ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ, ಇನ್ನೂ ಮುಂದೆ ಹೋಗಿ ಹೇಳುವುದಾದರೆ ಎಲ್ಲಾ ಮೂಲ ಸೌಲಭ್ಯಗಳಿಂದ ಒಳಗೂಡಿದ ಮಾಹಿತಿ ಯುಗದಲ್ಲಿ ನಾವಿದ್ದೇವೆ. ಬೇಡವೆಂದರೂ ಮಾಹಿತಿ ಕಿವಿಯೊಳಗೆ ತುಂಬಿ ಹೊರ ಬಂದು ಬಿಡುತ್ತದೆ. ಇದಿಷ್ಟಕ್ಕೂ ನನ್ನ ತಕರಾರು ಏನೂ ಇಲ್ಲ. ಎಲ್ಲಾ ಬದಲಾವಣೆಗಳಿಗೂ ಹೊಸ ತಲೆಮಾರಿನ ನಾನು ಸುಲಭವಾಗಿಯೇ ಒಗ್ಗಿಕೊಂಡಿದ್ದೇನೆ.
ಆದರೆ ಇವೆಲ್ಲದರ ನಡುವೆ ಕಳೆದು ಹೋದಂತೆ ಭಾಸವಾಗುತ್ತಿರುವುದು ಸುದ್ದಿಯೊಳಗಿನ ಸತ್ವ. ಚಿಕ್ಕಂದಿನಿಂದ ಅಮ್ಮ ಮಾಡಿದ ಅಡುಗೆಯನು ಸಾಕಷ್ಟು ಬಾರಿ ರುಚಿಯಲ್ಲ, ಉಪ್ಪಿಲ್ಲ, ಖಾರವಿಲ್ಲ ಎಂದಿರುತ್ತೇವೆ. ಮದುವೆಯಾದ ನಂತರ ಹೆಂಡತಿಯ ಕೈ ಅಡುಗೆ ಮಾತ್ರವಾದಾಗ ಗಂಡ ತನ್ನ ಅಮ್ಮನ ಅಡುಗೆಯನು ನೆನೆದುಕೊಳ್ಳುತ್ತಾನೆ, ತವರು ಮನೆ ಬಿಟ್ಟು ಬಂದ ಹೆಣ್ಣು ಕೂಡಾ ಅಮ್ಮನ ಕೈಯಡುಗೆ ನೆನಪಿಸಿಕೊಳ್ಳುತ್ತಾಳೆ. ಇಂದು ಹಿಂದಿಗಿಂತ ಹೆಚ್ಚು ಸುದ್ದಿಗಳು ನನ್ನೊಂದಿಗಿದೆ. ಆದರೆ ಹಿಂದಿನ ಸವಿಯೇ ಇಲ್ಲ.
ಇದು ನಿಮಗೂ ಅನಿಸಿರಬಹುದು, ಅಥವಾ ಗಮನಿಸದೆಯೂ ಇರಬಹುದು. ಇಂದು ಯಾವುದೇ ಸುದ್ದಿ ಮೊದಲು ವಾಟ್ಸಪ್ ಮೂಲಕ ನಮ್ಮನ್ನು ತಲುಪಿರುತ್ತೆ. ಸುದ್ದಿಯ ಎಳೆ ಲಭಿಸಿದಾಗಲೇ 3ಜಿ/4ಜಿ ವೇಗದಲ್ಲಿ ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ಜಾಲಾಡುತ್ತೇವೆ, ಒಂದಿಷ್ಟು ತಾಣಗಳು ಅರೆಬೆಂದ ಅನ್ನದಂತೆ ಅನಿಸಿದ್ದೂ ಸೇರಿಸಿ ಒಂದಿಷ್ಟು ಉಣ ಬಡಿಸುತ್ತವೆ. ಸಾಮಾನ್ಯ ಸುದ್ದಿಯ ಮೇಲಿನ ಕುತೂಹಲ ಹೆಚ್ಚಾಗಿ ಇಲ್ಲಿಗೇ ನಿಲ್ಲುತ್ತದೆ. ಆದರೆ ಕೆಲವೊಂದು ವಿಷಯಗಳು ಇನ್ನಷ್ಟು ಬೇಕು ಎಂದೆನಿಸುತ್ತದೆ. ಮುಂದೆ ನೇರ ಸಾಗುವುದು ಟಿವಿಯ ಕಡೆಗೆ. ಆಗಷ್ಟೇ ಬಂದ ಮಾಹಿತಿಗಳ ಆಧಾರದ ಮೇಲೆ ಅಲ್ಲಿ ಮಾತುಕತೆ ನಡೆಯುತ್ತದೆ. ಪೂರ್ಣವಾಗಿ ಇನ್ನೂ ಲಭಿಸಿರದ ಮಾಹಿತಿಗಳಲ್ಲಿ ಸಹಜ ಸಂಶಯಕ್ಕೆ ಸಾಕಷ್ಟು ಸಾಧ್ಯತೆಗಳಿರುವುದರಿಂದ ಅಂತಹ ಸಾಧ್ಯತೆಗಳನ್ನು ಲೆಕ್ಕ ಹಾಕಿ ಟಿಆರ್‍ಪಿ ಬರಬಹುದೋ ಎಂದು ತೂಗಿ ಎಲ್ಲೋ ಎಂದೋ ಕಳೆದು ಹೋದ ಸೂಜಿ ಹುಡುಕಾಡುತ್ತಿದ್ದ ಸಾಧಕರನ್ನು ಕರೆಸಿ ಚರ್ಚೆ ಪ್ರಾರಂಭಿಸಿ ಬಿಡುತ್ತದೆ.
ನಾವೊಬ್ಬರೇ ಇದನ್ನು ನೋಡುವುದು ಯಾಕೋ ನಮಗೆ ಸರಿ ಕಾಣದು, ಗೆಳೆಯನನ್ನು ಕರೆದು ಸಾಧಕ ಭಾದಕಗಳನ್ನ ವಿಶ್ಲೇಷಿಸುತ್ತೇವೆ. ನಮ್ಮ ಮುಂದಿನ ನಡೆ ಸಾಮಾಜಿಕ ಜಾಲತಾಣ. ಇಷ್ಟು ಹೊತ್ತಿಗೆ ನಾವು ಹಿಂಬಾಲಿಸುವ ಒಂದಷ್ಟು ಚಿಂತಕರು, ಮರಿ ಚಿಂತಕರು, ಒಂದಿಷ್ಟು ಬರೆದಿರುತ್ತಾರೆ, ಮಾಮೂಲಿಗಳು ಇವುಗಳಿಗೆಲ್ಲಾ ಜೈ ಎಂದಿರುತ್ತಾರೆ. ಇಷ್ಟು ಹೊತ್ತಿಗೆ ಇವರ ವಿರುದ್ಧ ಚಿಂತಕರ ನಡೆ ಏನಿರಬಹುದು ಎಂಬ ಕುತೂಹಲ ಕೆಟ್ಟದಾಗಿ ನಮ್ಮ ಮೆದುಳಲ್ಲಿ ಕೊರೆಯತೊಡಗುತ್ತದೆ. ಮನರಂಜನೆಗೆಂದೇ ನೆನಪಿಟ್ಟುಕೊಂಡ ಒಂದಷ್ಟು ಹೆಸರುಗಳನ್ನು ನೆನಪಿಸಿ ಫೇಸ್ಬುಕ್‍ನಲ್ಲಿ ಹುಡುಕಲು ಮೊದ¯ ಅಕ್ಷರ ಬರೆದಾಗಲೇ ಸಾಕಷ್ಟು ಬಾರಿ ಹುಡುಕಾಡಿರುವುದರಿಂದ ಮೊದಲ ಸಾಲಿನಲ್ಲಿಯೇ ಆ ಹೆಸರು ಗೋಚರಿಸುತ್ತದೆ. ಅಲ್ಲೂ ಕೂಡಾ ಒಂದಿಷ್ಟು ಓದಿ ಕನ್ಫ್ಯೂಸ್ ಮಾಡ್ಕೊಂಡು ನಮ್ಮದೇ ಸರಿ ಅಂತ ನಾವೂ ನಮ್ಮ ಗೋಡೆ ಮೇಲೆ ಬಾವುಟ ಹಾರಿಸುತ್ತೇವೆ. ಇವುಗಳ ಮೇಲೆ ಪರ ವಿರೋಧಗಳು ಬರುತ್ತದೆ. ಅದಕ್ಕೊಂದಿಷ್ಟು ಉತ್ತರಗಳನ್ನು ತಡಕಾಡಿ ನೀಡುತ್ತೇವೆ.
ಇಷ್ಟೆಲ್ಲಾ ಆಗುವಷ್ಟರಲ್ಲಿ ನಮ್ಮಂಥವರು ಸಾಕಷ್ಟು ಮಂದಿ ಇರುವುದರಿಂದ ಆ ಸುದ್ದಿ ತನ್ನ ಮೂಲರೂಪ ಕಳೆದು ಜಗಿದು ಉಗಿದ ಚ್ಯೂಯಿಂಗ್ ಗಮ್‍ನಂತೆ ಆಕಾರ ಬದಲಾಗಿರುತ್ತದೆ. ಇನ್ನು ನ್ಯೂಸ್ ಚಾನೆಲ್‍ಗಳು ಇನ್ನೂ ಒಂದಷ್ಟು ಮುಂದೆ ಹೋಗಿ ಉಗಿದ ಚ್ಯೂಯಿಂಗ್ ಗಮ್‍ನಂತಾಗಿರುವ ಸುದ್ದಿಯನ್ನು ಎತ್ತಿಕೊಂಡು ಮತ್ತೊಂದು ಬಾರಿ ಜಗಿಯಲು ಪ್ರಯತ್ನಿಸುತ್ತದೆ. ಇದೆಲ್ಲಾ ಕತೆಗಳು ಬದಲಾದ ರೂಪಗಳು ಸೇರಿ ಒಂದೊಂದು ಪತ್ರಿಕೆಗಳು ಒಂದೊಂದು ರೀತಿ ತಮಗೆ ಸಿಕ್ಕಿದಂತೆ ಸುದ್ದಿ ಬರೆದಿರುತ್ತದೆ. ಇದು ನಮ್ಮ ಪತ್ರಿಕೆ, ಅದು ಅವರ ಪತ್ರಿಕೆ ಎಂದು ಮೊದಲೇ ಮನಸಲ್ಲಿ ವಿಭಾಗ ಮಾಡಿಟ್ಟಿರುವ ನಾವು ಈ ಸುದ್ದಿ ನಮಗೆ ಗೊತ್ತಿದ್ದೇ ಎಂದು ವರದಿಯ ಮೇಲಿನಿಂದ ಕಣ್ಣು ಹಾಯಿಸಿ ಹೊಸ ಸುದ್ದಿಗಾಗಿ ಎಲ್ಲಾ ಪುಟ ತಿರುವಿ ಹಾಕುತ್ತೇವೆ. ಕೊನೆಗೂ ನಮಗೆ ಅಗಿಯಲು ಸಿಗುವುದು ಜಗಿದ ಚ್ಯೂಯಿಂಗ್ ಗಮ್ ಮಾತ್ರ.
ಸುದ್ದಿ ಮದ್ದಿನಂತಿರಬೇಕು:
ಹರಿದು ಬರುತ್ತಿರುವ ಮಾಹಿತಿಯ ನಡುವೆ ಬೇಕಾದ ಸುದ್ದಿಯ ಆಯ್ಕೆ ಕಷ್ಟ. ಹಿಂದೆ ಸುದ್ದಿಗಾಗಿ ಇದ್ದ ಆಯ್ಕೆಗಳು ನಿಯಮಿತವಾಗಿದ್ದವು. ಇಂದು ಒಂದೇ ಸುದ್ದಿ ಸಾವಿರ ವಿಧಗಳಲ್ಲಿ ನಮ್ಮನ್ನು ತಲುಪುತ್ತಿದೆ. ಸೂಕ್ಷ್ಮವಾಗಿ ಜರಡೆ ಹಿಡಿದು ಯಾವುದು ಸರಿ, ಯಾವುದು ಸುಳ್ಳು ಎಂಬುದನ್ನು ಅರ್ಥೈಸಿಕೊಳ್ಳುವ ಕಲೆಯನ್ನು ನಾವು ವೇಗವಾಗಿ ಕಲಿತುಕೊಳ್ಳಬೇಕಾಗಿದೆ. ಹಾಗೂ ಸುದ್ದಿಯನ್ನು ಸುದ್ದಿಯಾಗಿಯೇ ಗ್ರಹಿಸುವುದೂ ನಾವು ಇಂದು ನೋಡಬೇಕಾಗಿದೆ. ಮಾಹಿತಿಗಳ ಮಾರಾಟಕ್ಕೆ ನೂರು ಮಾರ್ಗಗಳು ಕಾಣುವ ಇಂದಿನ ದಿನದಲ್ಲಿ ಮಾಹಿತಿಯ ಗ್ರಹಿಕೆಗೆ ಮೂರು ಮಾರ್ಗ ಸಿಗದಿರದೆ? ಸುದ್ದಿ ದಿನನಿತ್ಯ ಮದ್ದಿನಂತಿರಬೇಕು. ಹಸಿದ ಹದ್ದಿನಂತೆ ಮನಸಿಗೆ ಧಾಳಿ ಇಡಬಾರದು!
ಶಶಾಂಕ್ ಬಜೆ
shashankbaje@yahoo.in
Facebook ಕಾಮೆಂಟ್ಸ್