ಒಂದು ಪತ್ರಿಕೆ ನಾಲ್ಕು ವರ್ಷದ ಹಿಂದೆ ಹೀಗೆ ಹೆಡ್ ಲೈನ್ಸ್ ಕೊಟ್ಟಿತ್ತು, ” ಮಿಸ್ಟರಿ ಎಂಡ್ಸ್, ಮಿಸ್ತ್ರಿ ಬಿಗಿನ್ಸ್”. ಅದೇ ಪತ್ರಿಕೆಯ ಹೆಡ್ ಲೈನ್ಸ್ ನಾಲ್ಕು ವರ್ಷಗಳ ನಂತರ ಹೀಗಿತ್ತು, ” ಮಿಸ್ತ್ರಿ ಎಂಡ್ಸ್, ಮಿಸ್ಟರಿ ಬಿಗಿನ್ಸ್”. ಸೈರಸ್ ಮಿಸ್ತ್ರಿಯವರನ್ನು ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು ವ್ಯಾಪಾರದ ಕ್ಷೇತ್ರದಲ್ಲಿ ಈ ವರ್ಷದ ಬ್ಲಾಕ್ ಬಸ್ಟರ್ ಸುದ್ದಿ. ಟಾಟಾ ಸಮೂಹ ಕಂಪನಿಗಳಿಗೆ ಒಂದೂವರೆ ಶತಮಾನದ ಇತಿಹಾಸವಿದೆ. ಈ ಇತಿಹಾಸದಲ್ಲಿ ಇಲ್ಲಿಯವರೆಗೆ ಆರು ಮಂದಿ ಅಧ್ಯಕ್ಷರು ಆಡಳಿತ ನಿರ್ವಹಿಸಿದ್ದಾರೆ. ಸರ್ ನರ್ವೋಜಿ ಟಾಟಾ ಅವರನ್ನು ಬಿಟ್ಟರೆ ಉಳಿದೆಲ್ಲವರೂ ಹಲವು ದಶಕಗಳ ಅಪೂರ್ವ ಸೇವೆ ಸಲ್ಲಿಸಿದವರೆ. ಕೇವಲ ನಾಲ್ಕು ವರ್ಷಗಳಲ್ಲೇ ಮಿಸ್ತ್ರಿಯವರನ್ನು ಯಾಕೆ ಅಧ್ಯಕ್ಷ ಹುದ್ದೆಯಿಂದ ಇಳಿಸಲಾಯಿತು ಎನ್ನುವುದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಮಿಸ್ತ್ರಿಯವರನ್ನು ಬೆಂಬಲಿಸುತ್ತಿರುವವರದ್ದು, ಎರಡನೆಯದು ರತನ್ ಟಾಟಾರವರ ಕಡೆಯವರದ್ದು, ಇನ್ನು ಮೂರನೆಯದು ನಿಜವಾದದ್ದು. ಆದರೆ ಮೂರನೇ ಸತ್ಯವಾದ ಕಾರಣವನ್ನು ಯಾರೂ ಹೇಳುತ್ತಿಲ್ಲ.
ಮೊದಲನೆಯ ಕಾರಣ ಅಂದರೆ ಸೈರಸ್ ತಾನು ಟಾಟಾರವರ ಕೈಗೊಂಬೆಯಾಗಲು ಬಯಸಲಿಲ್ಲ. ಅದಕ್ಕೆ ರತನ್ ಟಾಟಾ ಇವರನ್ನು ತೆಗೆದರು ಎನ್ನುವುದು. ಈ ಮೊದಲು ಚೇರ್ಮನ್ ಆಯ್ಕೆ ಕಮಿಟಿಯಲ್ಲಿದ್ದ ಮಿಸ್ತ್ರಿ ಸ್ವತಃ ತಾವೇ ಚೇರ್ಮನ್ ಆದದ್ದು ಅದೂ ಒಂದು ಮಿಸ್ಟರಿಯೇ! “ರತನ್ ಟಾಟಾ ಹಾಗೂ ಲಾರ್ಡ್ ಕುಮಾರ್ ಭಟ್ಟಾಚಾರ್ಯ ಅವರು ಸೈರಸ್ ಮಿಸ್ತ್ರಿಯವರಿಗೆ ಸಮೂಹ ಕಂಪನಿಗಳ ಅಧ್ಯಕ್ಷ ಪದವಿ ಆಫರ್ ಮಾಡಿದಾಗ ತಾನು ನಿರಾಕರಿಸಿದ್ದೆ. ಆದರೆ ಇನ್ನಾವ ಬೇರೆ ಅಭ್ಯರ್ಥಿಗಳು ಇರಲಿಲ್ಲ ಎಂಬ ಕಾರಣಕ್ಕೆ, ತಾನು ಕೆಲವು ಷರತ್ತಗಳನ್ನು ಇಟ್ಟು ಅದಕ್ಕೆ ಒಪ್ಪಿಕೊಂಡ ಮೇಲೆಯೇ ತಾನೂ ಒಪ್ಪಿಕೊಂಡೆ” ಎಂದು ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ಅವರಿಗೆ ಸಮಯ ಕೊಡಬೇಕಿತ್ತು ಎನ್ನುವುದು ಸೈರಸ್ ಬೆಂಬಲಿಗರ ವಾದ. ‘ಸೈರಸ್ ಮಿಸ್ತ್ರಿ ಡಾರ್ಕ್ ಹಾರ್ಸ್ ಆಗಿದ್ದರು, ಇನ್ನು ಸ್ವಲ್ಪ ಸಮಯ ಕೊಟ್ಟಿದ್ದರೆ ಎಲ್ಲರೂ ಅಚ್ಚರಿ ಪಡುವಂತಹ ಕೆಲಸ ಮಾಡಿ ತೋರಿಸುತ್ತಿದ್ದರು’ ಎನ್ನುತ್ತಾರೆ ಬಹಳಷ್ಟು ಜನ. ಅವರ ಪ್ರಕಾರ ”ರತನ್ ಟಾಟಾ ಅವರು ಸೈರಸ್ ಅವರನ್ನು ಉತ್ತರಾಧಿಕಾರಿ ಮಾಡಿದ ಮೇಲೆ ಅವರಿಗೆ ಸ್ವಲ್ಪವಾದರೂ ಸಮಯ ಕೊಡಬೇಕಿತ್ತು.” ಅದೂ ಹೌದಲ್ಲವೆ? ಜೆ ಆರ್ ಡಿ ಯವರು ರತನ್ ಟಾಟಾರವರನ್ನು ಅಧಿಕೃತವಾಗಿ ಚೇರ್ಮನ್ ಆಗಿ ಮಾಡಿದಾಗ ಇದ್ದ ವಿರೋಧಗಳು ಕಡಿಮೆಯೆ? ದರ್ಬಾರಿ ಸೇಠ್, ಅಜಿತ್ ಕೆಲ್ಕರ, ರಸ್ಸಿ ಮೋದಿ ಎಲ್ಲರೂ ವಿರೋಧಿಸಿದವರೆ. ಅಂದು ನಾನಿ ಪಾಲ್ಕಿವಾಲ್ ಅಥವಾ ಸೂನಾವಾಲ್ ಅವರ ಬೆಂಬಲ ಇರದೇ ಹೋದರೆ ಇಂದು ರತನ್ ಟಾಟಾ ಆ ಸ್ಥಾನದಲ್ಲಿ ಇರುತ್ತಿರಲಿಲ್ಲ ಅಲ್ಲವೆ? ಹೊರಗಿನವರಾಗಿ ಕಳೆದ ನಾಲ್ಕು ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ ಸೈರಸ್ ಕಾರ್ಯನಿರ್ವಹಣೆಯಲ್ಲಿ ಏನೂ ದೋಷಗಳು ಕಾಣುವುದಿಲ್ಲ. ಎಲ್ಲಾ ಓಕೆ ಅನಿಸುತ್ತದೆ. ಸಂಪೂರ್ಣ ಟಾಟಾ ಸಮೂಹ ಕಂಪನಿಗಳ ಬ್ಯಾಲೆನ್ಸ್ ಶೀಟ್ ನೋಡಿದರೆ ಒಂದೆರಡನ್ನು ಬಿಟ್ಟು ಉಳಿದೆಲ್ಲವೂ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಮತ್ಯಾಕೆ ಅವರನ್ನು ತೆಗೆದರು ಎಂಬುದು ಯಕ್ಷ ಪ್ರಶ್ನೆ. ಮೊದಲನೆಯ ಗುಂಪಿನವರ ಪ್ರಕಾರ ತಪ್ಪು ಸೈರಸ್ ಅವರದ್ದಲ್ಲ ಎಲ್ಲವೂ ರತನ್ ಟಾಟಾ ಮಾಡಿದ ಕೆಲಸ ಎನ್ನುತ್ತಾರೆ.
ಎರಡನೆಯ ಕಾರಣ ಅಂದರೆ ಸೈರಸ್ ‘ಟಾಟಾ ಫಿಲಾಸಫಿಯನ್ನು ಫಾಲೋ ಮಾಡುತ್ತಿರಲಿಲ್ಲ’ ಎನ್ನುವುದು. ಟಾಟಾ ಲಾಯಲಿಸ್ಟ್’ಗಳ ಪ್ರಕಾರ ಸೈರಸ್ ಮಾಡಿದ ತಪ್ಪು ಅಂದರೆ ಸೈರಸ್ ಮಿಸ್ತ್ರಿಯವರು, ಉತ್ತಮ ಪ್ರದರ್ಶನ ತೋರುತ್ತಿರದ ಕಂಪನಿಗಳನ್ನು ಹಾಗೂ ಪ್ರಾಡಕ್ಟ್ಸ್’ಗಳನ್ನು ಬಂದ್ ಮಾಡುವ ನಿರ್ಧಾರ ಮಾಡಿದ್ದು. ಆ ನಿರ್ಧಾರ ಮಾಡುವಾಗ ಟ್ರಸ್ಟಿನ ಸಲಹೆ ಕೇಳಲಿಲ್ಲವಂತೆ. ಹೀಗೆ ಮಾಡಿದ್ದು ತಪ್ಪು, ಹೀಗಾಗಿ ರತನ್ ಟಾಟಾ ಸರಿ ಎನ್ನುತ್ತಾರೆ. ಕೋರಸ್, ಡೊಕೊಮೊ, ಟಾಟಾ ನ್ಯಾನೊ ಇವೆಲ್ಲವನ್ನೂ ನಿಲ್ಲಿಸುವ ಸ್ಕೆಚ್ ಹಾಕಿದ್ದರು ಸೈರಸ್ ಮಿಸ್ತ್ರಿ. ಟಾಟಾ ಟ್ರಸ್ಟ್’ಗೆ ಇದು ಸರಿ ಕಾಣಲಿಲ್ಲ. ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್’ಗಳ ನಡುವಿನಲ್ಲಿ ಏನು ಸಂಬಂಧ ಇದೆಯಲ್ಲ ಅದು ನಾವು ನೋಡುತ್ತಿರುವ ಇಡೀ ಚಕ್ರವ್ಯೂಹದ ಬಹಳ ಮುಖ್ಯವಾದ ಕೊಂಡಿ. ಟಾಟಾ ಸನ್ಸ್ ಸಂಸ್ಥೆಯ 66% ರಷ್ಟು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ ಅದಕ್ಕೆ ತನ್ನದೇ ಆದ ಕೆಲವು ತತ್ವಗಳಿವೆ. ಅದಕ್ಕೆ ಸೈರಸ್ ಮ್ಯಾಚ್ ಮಾಡುತ್ತಿರಲಿಲ್ಲ. ಸೈರಸ್ ಪ್ರಸ್ತಾವನೆ ಮಾಡಿದ ‘ವಿಷನ್ 2025’ನಲ್ಲಿ ಇಡೀ ಸಂಸ್ಥೆಯ ಅಭಿವೃದ್ಧಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಮೇಲೆಯೇ ಹೆಚ್ಚು ನಿರ್ಧರಿತವಾಗಿತ್ತು. ಹಾಗೆ ಮಾಡಿದರೆ ಉಳಿದ ಕಂಪನಿಗಳ ಗತಿ ಏನು? ಎಂಬುವುದು ಟ್ರಸ್ಟಿನ ಬೋರ್ಡ ಆಫ್ ಡೈರೆಕ್ಟರ್ಸ್’ನ ಪ್ರಶ್ನೆ. ಈ ತರಹದ ಕೆಲವು ನಿರ್ಣಯಗಳು, ಸೈರಸ್ ಕಾರ್ಯ ನಿರ್ವಹಿಸುತ್ತಿದ್ದ ರೀತಿ ಇವೆಲ್ಲ ಟಾಟಾ ಫಿಲಾಸಫಿಯ ವಿರುದ್ಧವಾಗಿಯೇ ಇದೆ ಎಂಬ ಚಿತ್ರವನ್ನು ಮೂಡಿಸಿತು. ಟ್ರಸ್ಟ್ ಪ್ರಕಾರ, ಯಾವ ಕಂಪನಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲವೋ ಅದನ್ನು ಹೇಗೆ ಸರಿ ಮಾಡಬೇಕು ಎಂದು ವಿಚಾರ ಮಾಡಬೇಕೇ ಹೊರತು ಅದನ್ನು ಮುಚ್ಚುವುದು ಸರಿಯಾದ ಉತ್ತರವಲ್ಲ. ಕಂಪನಿಯಲ್ಲಿ ದಶಕಗಳಿಂದ ನಿಯತ್ತಾಗಿ ಕೆಲಸ ಮಾಡುತ್ತಿರುವ ಟಾಪ್ ಎಕ್ಸಿಕ್ಯುಟಿವ್ಸ್’ಗಳು ತುಂಬಾ ಜನ ಇದ್ದಾರೆ ಅವರೆಲ್ಲರ ಪ್ರಕಾರ ಮಿಸ್ತ್ರಿಯವರ ಕಾರ್ಯಶೈಲಿ ಟಾಟಾರವರಿಗಿಂತ ಬೇರೆಯೇ ಇತ್ತು. ಅವರ ಪ್ರಕಾರ ಟಾಟಾರವರ ತಪ್ಪಲ್ಲ, ತಪ್ಪೆಲ್ಲ ಸೈರಸ್ ಮಿಸ್ತ್ರಿಯದು. “ಟಾಟಾರವರು ಮೊದಲು ಮಿಸ್ತ್ರಿಯವರಿಗೆ ತಿದ್ದಲು ಪ್ರಯತ್ನ ಮಾಡಿದರು, ಅದು ಆಗದೇ ಹೋದಾಗ ಹಾರ್ವರ್ಡ್ ಡೀನ್ ನಿತಿನ್ ನಿಹೊರಿಯಾ ಜೊತೆ ಕೂತು ರಾಜೀನಾಮೆ ನೀಡುವಂತೆ ಬೇಡಿಕೆ ಇಟ್ಟರು, ಇದ್ಯಾವುದು ಸೈರಸ್ ಮೇಲೆ ಪ್ರಭಾವ ಬೀರದೆ ಹೋದಾಗ ಬೇರೆ ಮಾರ್ಗವಿಲ್ಲದೆ ಅವರನ್ನು ಚೇರ್ಮನ್ ಪದವಿಯಿಂದ ತೆಗೆಯಬೇಕಾಯಿತು” ಎಂದು ಟಾಟಾ ಕಂಪನಿಗೆ ಹತ್ತಿರವಾದವರು ಸುದ್ದಿ ಮಾಧ್ಯಮಕ್ಕೆ ಹೇಳಿದ್ದಾರೆ.
ನಿಜವಾದ ಕಾರಣ ಹೊರಗೆ ಬಂದ ಮೇಲೆ ಗೊತ್ತಾಗುವುದು. ಆದರೆ ನಾವು ಅರಿಯ ಬೇಕಾದ ವಿಷಯ ಏನು ಅಂದರೆ, ಈ ತರಹದ ಘಟನೆಗಳು ನಡೆದದ್ದು ಮೊದಲ ಬಾರಿ ಅಲ್ಲ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಇಂತಹ ಘಟನೆಗಳು ಹಲವಾರು ಬಾರಿ ನಡೆದಿದೆ. 1978 ರಲ್ಲಿ ಫೋರ್ಡ್ ಕಂಪನಿ ಎರಡು ಬಿಲಿಯನ್ ಡಾಲರ್ ಲಾಭವನ್ನು ಗಳಿಸಿತ್ತು. ಫಾದರ್ ಆಫ್ ‘ಫೋರ್ಡ್ ಮಸ್ಟಾಂಗ್’ ಲೀ ಆಯೊಕೊಕಾ ಆವಾಗ ಕಂಪನಿಯ ಪ್ರೆಸಿಡೆಂಟ್ ಆಗಿದ್ದರು. ಇವತ್ತು ಕಂಪನಿಗಳು ಎರಡು ಬಿಲಿಯನ್ ಡಾಲರ್ ಲಾಭ ಮಾಡಿದರೆ ಅದು ಬಹಳ ದೊಡ್ಡ ಸಾಧನೆ, ನಲವತ್ತು ವರ್ಷಗಳ ಹಿಂದೆ ಇದೇ ಲಾಭ ಎಷ್ಟು ದೊಡ್ಡ ಸಾಧನೆ ಆಗಿರಬಹುದು ನೀವೆ ಗ್ರಹಿಸಿ. ಆದರೂ ಫೋರ್ಡ್ ಕಂಪನಿಯ ಆಗಿನ ಚೇರ್ಮನ್ ಆಗಿದ್ದ ಹೆನ್ರಿ ಫೋರ್ಡ್-II, ಲೀ ಆಯೊಕೊಕಾರನ್ನು ಕೆಲಸದಿಂದ ಕಿತ್ತೊಗೆದು ಬಿಟ್ಟರು! ಮತ್ತೊಂದು ಬಹಳ ಜನಪ್ರಿಯ ಉದಾಹರಣೆ ಅಂದರೆ ಸ್ಟೀವ್ ಜಾಬ್ಸ್ ಅವರನ್ನು ಆ್ಯಪಲ್ ಕಂಪನಿಯಿಂದ ಉಚ್ಛಾಟಣೆ ಮಾಡಿದ್ದು. ಯಾರು ಒಂದು ಕಂಪನಿಯನ್ನು ಹುಟ್ಟಿ ಹಾಕಿ, ಬೆಳೆಸಿ ದೊಡ್ಡ ಮಾಡಿದರೋ ಅವರನ್ನೇ ಹೊರ ಹಾಕಿದರೆ ಹೇಗೆನಿಸಬೇಡ? ಜಾನ್ ಸ್ಕಲ್ಲಿ ಎಂಬುವನನ್ನು ಪೆಪ್ಸಿ ಕಂಪನಿಯಿಂದ ಆ್ಯಪಲ್ ಕಂಪನಿಗೆ ತಂದವರೇ ಸ್ಟೀವ್ ಜಾಬ್ಸ್. ನಂತರ ಅವರೇ ಇವರನ್ನು ಕಂಪನಿಯಿಂದ ಹೊರ ಹಾಕುತ್ತಾರೆ. ಸ್ಟಿವ್ ಎಷ್ಟು ನೊಂದಿದ್ದರು ಎಂಬುದನ್ನು ಅವರ ಮಾತಿನಲ್ಲಿ ಗ್ರಹಿಸಬಹುದು. “How can they fire someone who had formed the company? I was out — and very publicly out, what had been the focus of my entire adult life was gone, and it was devastating.I was a very public failure.” ಇದನ್ನೆಲ್ಲ ನೋಡಿದರೆ ಸೈರಸ್ ಮಿಸ್ತ್ರಿಯವರದ್ದು ಮಿಸ್ಟರಿಯೇ ಅಲ್ಲ. ಆದರೆ ಇದರಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲ ಕಲಿಯಬೇಕಾದ ಒಂದು ಮುಖ್ಯ ವಿಷಯವಿದೆ. ನಾವು ಯಾವುದೇ ಕಂಪನಿಯಲ್ಲಿ, ಯಾವುದೇ ಹುದ್ದೆಯಲ್ಲಿ ಇರಬಹುದು ಆದರೆ Aligning with Boss is very very important!
ಹಗಲು ರಾತ್ರಿ ಕೆಲಸ ಮಾಡಿ ಕೊನೆಗೆ ಏನೂ ಸಿಗಲಿಲ್ಲ ಎನ್ನುತ್ತಾ ನೊಂದುಕೊಳ್ಳುತ್ತಾರಲ್ಲ ಅದಕ್ಕೆ ಕಾರಣ ಏನು ಗೊತ್ತಾ? ಅವರು ಮಾಡುವುದು ಒಂದಾದರೆ ಕಂಪನಿ/ಬಾಸ್ ಬಯಸುವುದು ಇನ್ನೊಂದನ್ನು. ಕಂಪನಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಈ ಐದು ವಿಷಯಗಳನ್ನು ಸರಿಯಾಗಿ ಅಳವಡಿಸಿಕೊಂಡಿರಬೇಕು. 1. ಬಾಸ್’ಗೆ ಏನು ಬಯಸುತ್ತಾರೆ ಅಥವಾ ಕಂಪನಿ ಏನು ನಮ್ಮಿಂದ ಬಯಸುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇರಬೇಕು. ಇಲ್ಲ ಅಂದರೆ ಹತ್ತು ಬಾರಿ ಕೇಳಿ ತಿಳಿದುಕೊಳ್ಳಬೇಕು. 2. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಬಾರದು 3. ಕಂಪನಿಯ ಸಂಸ್ಕಾರವನ್ನು ಅರಿತು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು 4. ಮೌಲ್ಯದ ಅರಿವಿರಬೇಕು. 5. ಕೊನೆಯ ಆದರೆ ಮುಖ್ಯವಾದ ಅಂಶ ಅಂದರೆ ಹಿರಿಯರ ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಕೆಲಸ, ಎಷ್ಟೇ ಮುಖ್ಯವಾಗಿರಲಿ, ಮಾಡಬಾರದು. ನಾವು ಮೇಲೆ ನೋಡಿದ ಎಲ್ಲ ‘ಹೈರಿಂಗ್ ಆ್ಯಂಡ್ ಫೈರಿಂಗ್’ ಆಗಿದ್ದು ಹೆಚ್ಚಾಗಿ ಐದರಲ್ಲಿ ಒಂದು ಕಾರಣಗಳಿಂದಾಗಿಯೇ ಹೊರತು ಲಾಭ ಅಥವಾ ನಷ್ಟದ ಮೇಲಿಂದಲ್ಲ. ಒಂದು ವೇಳೆ ನಾವು ಮಾಡುವ ನಿಜ ಪ್ರಯತ್ನದಲ್ಲಿ ನಷ್ಟ ಆದರೆ ಕಂಪನಿಗಳು ಸಹಿಸಿಕೊಳ್ಳುತ್ತವೆ ಆದರೆ ಈ ಐದು ಸೂಕ್ಷ್ಮ ವಿಚಾರಗಳಲ್ಲಿ ಒಂದು ಎಡವಟ್ಟಾದರೂ ನಮ್ಮ ಜೀವನದಲ್ಲಿ ಮಿಸ್ತ್ರಿಯ ಮಿಸ್ಟರಿಯ ಪುನರಾವರ್ತನೆ ಆಗುತ್ತದೆ. ಇದು ಬರೀ ಟಾಪ್ ಮ್ಯಾನೇಜ್ಮೆಂಟ್’ಗೆ ಮಾತ್ರ ಅನ್ವಯವಲ್ಲ ಯಾವುದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿರಿ ನಿಮಗೆ ಅದು ಅನ್ವಯವಾಗುತ್ತದೆ. ಇನ್ನು ಟಾಟಾ ಎಪಿಸೋಡಿಗೆ ಬಂದರೆ ಇದರಿಂದ ಮ್ಯಾನೇಜ್ಮೆಂಟ್’ನಲ್ಲಿರುವವರು ಅಥವಾ ಒಂದು ಕಂಪನಿಯನ್ನು ನಡೆಸುತ್ತಿರುವವರು ಕಲಿಯಬೇಕಾದುದ್ದು ಬಹಳ ಇದೆ. ಇಂದು ದೊಡ್ಡ ದೊಡ್ಡ ಕಾರ್ಪೊರೇಟ್’ಗಳು ಉತ್ತಮ ನಾಯಕತ್ವವನ್ನು ಬೆಳೆಸಲು ವಿಫಲವಾಗಿವೆ. ಈ ಹಿಂದೆ ಇನ್ಫೋಸಿಸ್ ಇದೇ ತಪ್ಪು ಮಾಡಿತ್ತು, ನಂತರ ತಪ್ಪನ್ನು ಸರಿ ಮಾಡಲು ಸ್ವತಃ ನಾರಾಯಣ ಮೂರ್ತಿ ಬರಬೇಕಾಯಿತು. ಇವತ್ತು ರತನ್ ಟಾಟಾ ಅದೇ ಮಾಡುತ್ತಿದ್ದಾರೆ. ಕೊನೆಯ ತನಕ ತಮ್ಮ ಉತ್ತರಾಧಿಕಾರಿಯನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಇವತ್ತು ಹೇಳುತ್ತಿದ್ದಾರೆ ” ಮುಂದಿನ ನಾಲ್ಕು ತಿಂಗಳಲ್ಲಿ ಹೊಸ ಅಧ್ಯಕ್ಷನನ್ನು ತರುತ್ತೇನೆ” ಅಂತ. ಇಂದು ನಾಲ್ಕು ತಿಂಗಳಲ್ಲಿ ಒಳ್ಳೆಯ ಇಂಜಿನಿಯರ್ ಬೇಕೆಂದರೆ ಸಿಗುವುದಿಲ್ಲ ಅಂತಹದರಲ್ಲಿ ನೂರು ಬಿಲಿಯನ್ ಕಂಪನಿಯ ಚೇರ್ಮನ್ ಸಿಗುತ್ತಾನೆಯೇ? ನೊಡೋಣ. ರತನ್ ಟಾಟಾ ತಮ್ಮ ಸಹೋದರ ನೊವೆಲ್ ಟಾಟಾರವರನ್ನೇ ತರಬೇಕು ಎಂದು ನಿರ್ಧಾರ ಮಾಡಿದ್ದರೆ ಆ ಮಾತು ಬೇರೆ. ಇಲ್ಲ ಅಂದರೆ ನಾಲ್ಕು ತಿಂಗಳೊಳಗೆ ಟಾಟಾ ಕಂಪನಿಗೆ ತಕ್ಕ ಚೇರ್ಮನ್ ಹುಡುಕುವುದು ಇಂಪಾಸಿಬಲ್. ಹೀಗಾಗಿ ಕಂಪನಿಯನ್ನು ಬೆಳೆಸುವುದರ ಜೊತೆಗೆ ಸಮರ್ಥ ಉತ್ತರಾಧಿಕಾರಿಯನ್ನು ತಯಾರಿ ಮಾಡುವುದು ಕೂಡ ಅಷ್ಟೇ ಮುಖ್ಯ. ಕೊನೆಯಲ್ಲಿ ಎಲ್ಲರೂ ಅರಿಯಬೇಕಾದ ವಿಷಯ ಅಂದರೆ ಜಾಬ್ ಸೆಕ್ಯುರಿಟಿ ಎನ್ನುವುದು ಚೇರ್ಮನ್ನನಿಗೂ ಇರುವುದಿಲ್ಲ ಎಂಬ ಮಾತಂತು ನಿಜ!
Facebook ಕಾಮೆಂಟ್ಸ್