X

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ ಅವರಿಬ್ಬರ ಸಾಮರ್ಥ್ಯದ ಅಂತರವನ್ನು ಕಟ್ಟಿಕೊಡಬಹುದು. ಪಟೇಲರು ಸ್ವತಂತ್ರ ಬಂದ ಒಂದು ವರ್ಷ ಒಂದು ತಿಂಗಳಲ್ಲಿ ಸುಮಾರು ೫೬೦ ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತಕ್ಕೇ ಸೇರಿಸಿದರೆ ನೆಹರೂ  ಗೋವೆಯಂತ ಚಿಕ್ಕ ರಾಜ್ಯವನ್ನು ಭಾರತಕ್ಕೆ ಸೇರಿಸಿಕೊಳ್ಳಲು ತೆಗೆದುಕೊಂಡಿದ್ದು ೧೪ ವರ್ಷ.

ಸ್ವಾತಂತ್ರ್ಯದ ಮೊದಲು ಎಲ್ಲ ರಾಜರುಗಳಿಗೆ ೨೯೪೭ ಆಗಷ್ಟ ೧೫ರೊಳಗೆ ದೇಶಕ್ಕೆ ಸೇರುವಂತೆ ಹೇಳಿದರು. ಒಪ್ಪದಿದ್ದರೆ ಕಠಿಣ ಕ್ರಮವನ್ನು ಕೈಗೊಳ್ಳುವದಾಗಿ ಹೇಳಿದರು. ಪ್ರತಿರಾಜನನ್ನು ಭೇಟಿ ಮಾಡಿ ಮನವೊಲಿಕೆಗೆ ಪಟೇಲರು ಮುಂದಾದರು.  ಸ್ವಾತಂತ್ರ್ಯ ನಂತರ ಮುಸ್ಲಿಮರೇ ಅಧಿಕವಾಗಿರುವ ಲಕ್ಷದ್ವೀಪ ಆ ಕಡೆ ಪಾಕಿಸ್ತಾನಕ್ಕೂ ಸೇರದೆ ಇತ್ತ ಭಾರತಕ್ಕೂ ಸೇರದೆ ತಟಸ್ಥವಾಗಿತ್ತು. ಪಟೇಲರು ಆಗ ಭಾರತದ ಗೃಹ ಸಚಿವರಾಗಿದ್ದರು. ಲಕ್ಷದ್ವೀಪವನ್ನು ಆದಷ್ಟು ಬೇಗ ಭಾರತದ ಅಧೀನಕ್ಕೆ ಒಳಪಡಿಸಲು ಹವಣಿಸುತ್ತಿದ್ದರು. ನೆಹರೂ  ಪಾಕಿಸ್ತಾನದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ. ಇಲ್ಲದಿದ್ದರೆ ಅಲ್ಲಿನ ಪ್ರಜೆಗಳಿಗೆ ಬೇಸರವಾದೀತು ಎಂದರು. ಗಾಂಧೀಜಿಯೂ ಪಟೇಲರ ನಡೆ ಸರಿಯಾದದ್ದು ಎಂದು ಹೇಳಿ ಲಕ್ಷದ್ವೀಪ ಅಧೀನ ಪಡೆಸಿಕೊಳ್ಳಲು ಹಸಿರು ನಿಶಾನೆ ತೋರುತ್ತಿದ್ದಂತೆ ಪಟೇಲರು ಕಾರ್ಯೋನ್ಮುಖರಾಗಿ ನೌಕಾಪಡೆ ಕಳಿಸಿ ಲಕ್ಷದ್ವೀಪವನ್ನು  ವಶಪಡಿಸಿಕೊಳ್ಳುತ್ತಾರೆ. ಇದಾದ ಕೆಲವೇ ಗಂಟೆಗಳಲ್ಲಿ ಪಾಕ್ ನೌಕಾಪಡೆ ದ್ವೀಪದೆಡೆಗೆ ಬರುತ್ತಿದ್ದು ಆಗಲೇ ತ್ರಿವರ್ಣ ಧ್ವಜವು ಹಾರಾಡುತ್ತಿದ್ದನ್ನು ನೋಡಿ ಭಾರತದ ವಶವಾಗಿದೆ ಎಂದರಿತು ವಾಪಾಸಾಗುತ್ತಾರೆ. ಲಕ್ಷದ್ವೀಪ ಈಗಲೂ ಭಾರತದ ಭಾಗವಾಗಿದೆ ಎಂದರೆ ಅದು ಪಟೇಲರ ಅವತ್ತಿನ ಸಮಯಪ್ರಜ್ಞೆಯ ಫಲವಷ್ಟೆ.

ಭಾರತ, ಪಾಕಿಸ್ತಾನ ಎಂಬ ಆಯ್ಕೆಯನ್ನು ರಾಜರ ಮುಂದೆ ಇಡುವ ಮುನ್ನ ಪಟೇಲರು ಹಲವಾರು ತಂತ್ರಗಳನ್ನು ರೂಪಿಸಬೇಕಾಯಿತು. ಸ್ವತಂತ್ರದ ನಂತರವೂ ಬ್ಯಾಟನ್ ಅವರನ್ನು ಗವರ್ನರ್ ಜನರಲ್ ಆಗಿಯೇ ಮುಂದುವರೆಸಿದರು ಇದರಿಂದ ಜಿನ್ನಾ, ಬ್ಯಾಟನ್ ಮಧ್ಯದ ಸ್ನೇಹ ಶಿಥಿಲವಾಯಿತು. ಅದಲ್ಲದೆ ನಮ್ಮ ಕೆಲವು ರಾಜರುಗಳ ಮನಸ್ಸನ್ನು ಪಟೇಲರಿಗಿಂತ ಚೆನ್ನಾಗಿ ಬ್ಯಾಟನ್ ಅರಿತಿದ್ದರು. ಹೀಗಾಗಿ ಬ್ಯಾಟನ್ ಅವರನ್ನು ಮುಂದೆ ಇಟ್ಟುಕೊಂಡೆ ರಾಜರ ಮನಸ್ಸನ್ನು ಕುದುರಿಸುವ ಕೆಲಸಕ್ಕೆ ಇಳಿದರು ಯಶಸ್ಸೂ ಪಡೆದರು. ಭೂಪಾಲದ ರಾಜ ಪಾಕಿಸ್ತಾನಕ್ಕೆ ಸೇರುವ ಇಂಗಿತ ವ್ಯಕ್ತ ಪಡಿಸಿದ.ಭೂಪಾಲದ ರಾಜನ ಘೋಷಣೆಯ ಹಿಂದೆ ಜಿನ್ನಾನ ಕುಮ್ಮಕ್ಕು ಇತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಭೂಪಾಲ ಮತ್ತು ಪಾಕಿಸ್ತಾನಗಳ ಮಧ್ಯೆ ಜೋಧಪುರ, ಇಂಧೋರ, ಉದಯಪುರ, ಬರೋಡಾಗಳು ಇದ್ದವು. ಅಂದರೆ ಜಿನ್ನಾನ ಉದ್ದೇಶ ಈಗಿನ ಪಾಕಿಸ್ತಾನದಿಂದ ಹಿಡಿದು ಬಾಂಗ್ಲಾದೇಶದವರೆಗೆ ಒಟ್ಟು ಭಾರತದ ಅರ್ಧದಷ್ಟು ಪಾಕಿಸ್ತಾನಕ್ಕೆ ಸೇರಿಸುವ ಹೊಂಚಿತ್ತು.ಇವೆಲ್ಲಾ ರಾಜ್ಯಗಳಿಗೆ ಜಿನ್ನಾ ಆಮಿಷವೊಡ್ಡುತ್ತಲೇ ಇದ್ದ. ಬ್ಯಾಟನ್ ಅವರ ಮುಂದಾಳತ್ವದಲ್ಲಿ ಪಟೇಲರು ಜೋಧಪುರ, ಪಾಟಿಯಾಲಾ, ಜಯಪುರಗಳ ವಿಲೀನಗೊಳಿಸಿದರು. ಇವರೆಲ್ಲರಿಗಿಂತ ಮೊದಲೇ ಗ್ವಾಲಿಯರ್ ರಾಜ ಸ್ವಇಚ್ಛೆಯಿಂದ ಭಾರತಕ್ಕೆ ಸೇರಿಕೊಂಡನು.

ಕೊನೆಗೂ ಆಗಷ್ಟ ೧೫ರೊಳಗೆ ಎಲ್ಲ ರಾಜ್ಯಗಳು ಭಾರತಕ್ಕೆ ಸೇರಿದವು. ಎಲ್ಲವೂ ಭಾರತವೆಂಬ ಅಮೃತಕ್ಕೆ ಏಕರಸವಾಗಿದ್ದರೂ ಮೂರು ರಾಜ್ಯಗಳು ಮಾತ್ರ ಮೇಲ್ಪದರದಲ್ಲಿ ಬೇರ್ಪಟ್ಟು ನಿಂತಿದ್ದವು.ಮೂರು ರಾಜ್ಯಗಳಲ್ಲಿ ಒಂದೊಂದು ವೈಶಿಷ್ಟ್ಯವಿತ್ತು.ಅವೆಂದರೆ ಜುನಾಗಢ,ಕಾಶ್ಮೀರ ಮತ್ತು ಹೈದ್ರಾಬಾದ್. ಅಲ್ಲಿನ ಪ್ರಜೆಗಳ ಜಾತಿಯ ಆಧಾರದ ಮೇಲೆ ನೋಡುವುದಾದರೆ ಬಹುಸಂಖ್ಯಾತ ಹಿಂದೂಗಳಿದ್ದದ್ದು ಎರಡು ಕಡೆ ಜುನಾಗಢ ಮತ್ತು ಹೈದ್ರಾಬಾದ್, ಮುಸ್ಲಿಂರು ಹೆಚ್ಚಾಗಿದ್ದದ್ದು ಕಾಶ್ಮೀರ. ಹೀಗಾಗಿ ಪಟೇಲರು ಕಾಶ್ಮೀರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಜುನಾಗಢ ಹೈದ್ರಾಬಾದ್ ಭಾರತದ ತೆಕ್ಕೆಗೆ ಹಾಕಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದರು.ಆದರೆ ಜಿನ್ನಾ ಒಳಗಿಂದೊಳಗೆ ಜುನಾಗಢ ಮತ್ತು ಹೈದ್ರಾಬಾದ್ ಎರಡನ್ನೂ ಪಡೆಯುವ ತವಕದಲ್ಲಿದ್ದ.

೮೦% ಹಿಂದೂಗಳಿದ್ದ ಜುನಾಗಢವೆಂಬ ರಾಜ್ಯಕ್ಕೆ ಮುಸ್ಲಿಂ ರಾಜನಿದ್ದ. ಪಟೇಲರ ಹುಟ್ಟೂರು ಸೌರಾಷ್ಟ್ರ ಮತ್ತು ಹಿಂದೂಗಳ ಪವಿತ್ರ ಸೋಮನಾಥ ದೇವಾಲಯ ಅಲ್ಲೇ ಇದ್ದ ಕಾರಣಗಳಿಂದ ಪಟೇಲರಿಗೆ ಈ ಸಂಸ್ಥಾನದ ಕುರಿತು ವಿಶೇಷ ಆಸಕ್ತಿ ಇತ್ತು. ಸರ್ ಶಾ ನವಾಜ್ ಭುಟ್ಟೊನ ಕುಮ್ಮಕ್ಕಿನಿಂದ ನವಾಬ ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸುವ ಬಹಿರಂಗ ಘೋಷಣೆ ಮಾಡಿದ ಅಲ್ಲದೇ ಬ್ಯಾಟನ್ ಅವರ ಕೈಗೆ ಪತ್ರವನ್ನಿತ್ತ. ಬುದ್ಧಿವಂತ ನೆಹರೂ ಲಿಯಾಕತ್ ಅಲಿ, ಮೌಂಟ್ ಬ್ಯಾಟನ್ ಅವರೊಂದಿಗೆ ಮಾತಿಗೆ ಕುಳಿತರು. ಲಿಯಾಕತ್ ಅಲಿ ಜನಮತಗಣನೆ ಮಾಡೋಣ ಅಂದ. ಇತ್ತೀಚೆಗೆ ಉದಯೋನ್ಮುಖ ಬುದ್ಧಿಜೀವಿಯೊಬ್ಬಳು ಕನ್ನಡದ ಚಾನೆಲ್ ಒಂದರಲ್ಲಿ ಪಾಕಿಸ್ತಾನ ವಿಚಾರವಾಗಿ ಈ ಜನ ಮತಗಣನೆಯ ಮಾತೆತ್ತಿದ್ದಳು. ಜನಮತವನ್ನು ಆಧರಿಸಿ ಮಾಡುವುದಾದರೆ ಪ್ರತಿ ರಾಜ್ಯಗಳಲ್ಲೂ ತಾವು ಸ್ವತಂತ್ರರಾಗಬೇಕೆಂಬ ಕೂಗೇಳುತ್ತದೆ. ಅದಲ್ಲದೆ ರಾಷ್ಟ್ರಪರ ನಿಲುವಿರುವ ಜನರನ್ನು ಸದೆಬಡಿಯಲು ಉಗ್ರಪಡೆ ರಚನೆಯಾಗುತ್ತದೆ. ಅಲ್ಲಿಗೆ ಅವರು ರಾಷ್ಟ್ರಕ್ಕೆ ಸೇರುವುದು ಕನಸಿನ ಮಾತೇ. ಲಿಯಾಕತ್ ಅಲಿಯವರ ಮಾತಿಗೆ ನೆಹರೂ ಹುಂಗುಟ್ಟಿದ ಇದಕ್ಕೆ ಕಾದುಕುಳಿತ ಬ್ಯಾಟನ್ ಎಲ್ಲ ರಾಜ್ಯಕ್ಕೂ ಇದೇ ನಿಯಮವೆಂದ.

ಆಗ ಪಟೇಲರು ” ಕಾಶ್ಮೀರದಲ್ಲಿ ಜನಮತಗಣನೆಯಾದರೆ ಹೈದ್ರಾಬಾದಿಗೂ ಅದೇ ಅನ್ವಯವಾಗಲೀ ” ಎಂದರು. ಲಿಯಾಕತ್ ,ಜಿನ್ನಾ ಒಮ್ಮೆ ನಡುಗಿಬಿಟ್ಟರು. ಪಟೇಲರ ಬಗ್ಗೆ ಅರಿತಿದ್ದ ಜಿನ್ನಾ ನಾಲ್ಕು ವಾರಗಳ ಕಾಲ ಜಡವಾಗಿ ಕುಳಿತ. ಆದರೇ ಪಟೇಲರು ಒಳಗಿಂದೊಳಗೆ ಗುಪ್ತಗಾಮಿನಿಯ ಹಾಗೇ ಚಟುವಟಿಕೆ ನಡೆಸಿದ್ದರು. ಹಿರಿಯ ಕಾಂಗ್ರೆಸ್ಸಿಗರಾದ ಸಮಲ್ದಾಸ್ ಗಾಂಧಿಯವರಿಗೆ ಅಲ್ಲೊಂದು ಪರ್ಯಾಯ ಸರ್ಕಾರ ರಚಿಸಲು ಪಟೇಲರು ಹೇಳಿದರು. ಅದರ ಹೆಸರು ಅರ್ಜಿ ಹುಕಮತ್. ಕೊನೆಗೆ ಪಟೇಲರು ಸೇನೆ ನುಗ್ಗಿಸಿ ಜುನಾಗಢವನ್ನು ಭಾರತದ ಸುಪರ್ದಿಗೆ ಒಳಪಡಿಸಿಕೊಂಡರು. ಆದರೆ ಸೇನೆಯ ಮುಂದಾಳು ಅರ್ಜಿ ಹುಕಮತ್ ಆಗಿತ್ತು.ನೆಹರೂ ಜನಮತಗಣನೆಗೆ ಶುರು ಹಚ್ಚಿಕೊಂಡಿದ್ದರು. ಪಾಕಿಸ್ತಾನಕ್ಕೆ ಸೇರಲು ಬಯಸಿದ ಜನ ಒಂದಂದಾಜಿನ ಪ್ರಕಾರ ನೂರಿಪ್ಪತ್ತು ಮಾತ್ರ ಆದರೆ ಇವರು ಒಳಗಿಂದೊಳಗೆ ಎಲ್ಲರನ್ನೂ ಪರಿವರ್ತನೆ ಮಾಡಬಲ್ಲವರಾಗಿದ್ದರು . ಅದಕ್ಕೆ ಜನಮತಗಣನೆಗಿಂತ ಪಟೇಲರು ಹಿಡಿದ ಹಾದಿಯೇ ಸೂಕ್ತವಾಗಿತ್ತು.  ನವಾಬ “ಅರ್ಜಿ ಹುಕಮತ್ ಬೇಡ ಕೇಂದ್ರ ಸರ್ಕಾರವೇ ನಮ್ಮನ್ನಾಳಲೀ” ಎಂದು ಪಲಾಯನ ಮಾಡಿದ.ಸುಮಲ್ದಾಸ್ ಗಾಂಧಿಯವರು ಜುನಾಗಢ ಭಾರತದ ಅಧೀನಕ್ಕೆ ಬಂದಿದ್ದನ್ನು ಬಹಿರಂಗ ಘೋಷಣೆಮಾಡಿದರು. ಸಮಲ್ದಾಸ್ ಗಾಂಧಿ ರಚಿಸಿದ ಈ ಪಕ್ಷ ಪಟೇಲರ ಆದೇಶದ ಮೂಲಕವೇ ಕಟ್ಟಲ್ಪಟ್ಟಿತ್ತು .ಮುಂಬಯಿ ಅದರ ಕೇಂದ್ರವಾಗಿ ಜುನಾಗಢ ವಿಲೀನಕ್ಕೆ ಪ್ರಯತ್ನ ನಡೆಸಿತ್ತು.

ಯಾವಾಗ ಜುನಾಗಢದ ರಾಜ ತಾನು ಪಾಕಿಸ್ತಾನ ಸೇರುವುದಾಗಿ ಹೇಳುತ್ತಾನೋ ಮತ್ತು ಜಿನ್ನಾ ಇದಕ್ಕೆ ಮರೆಯಲ್ಲಿ ನಿಂತು ರಣವೀಳ್ಯ ಕೊಡುತ್ತಾನೋ ಆಗ ಪಟೇಲರಿಗೆ ಅಷ್ಟೇನೂ ಆಸಕ್ತಿಯೇ ಇರದ ಕಾಶ್ಮೀರವನ್ನು ಪಡೆಯಲೇಬೇಕು ಎನಿಸುತ್ತದೆ. ಕಾಶ್ಮೀರ ಮುಸ್ಲಿಂ ಬಾಹುಳ್ಯ ರಾಜ್ಯವಾದ್ದರಿಂದ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದಿದ್ದ ಪಟೇಲರಿಗೆ ಜುನಾಗಢದಲ್ಲಾದ ಬದಲಾವಣೆಗಳಿಂದ ಹಿಂದೂ ಬಾಹುಳ್ಯ ರಾಜ್ಯವನ್ನು ಅವರು ಪಡೆಯಲು ಯತ್ನಿಸಿದರೇ ಮುಸ್ಲಿಂ ಬಾಹುಳ್ಯ ರಾಜ್ಯವನ್ನು ನಾವ್ಯಾಕೇ ಪಡೆಯಬಾರದು ಎನಿಸುತ್ತದೆ.ಜಡ ಜುನಾಗಢವನ್ನೇ ಮೆತ್ತಗಾಗಿಸಿದ ಪಟೇಲರಿಗೆ ಹಿಮದ ಗಡ್ಡೆಯಾದ ಕಾಶ್ಮೀರವನ್ನು ಕರಗಿಸುವುದು ಯಾವ ಲೆಕ್ಕ.

ಕಾಶ್ಮೀರ ಭಾರತಕ್ಕೆ ಸೇರಿದ್ದರ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.

Facebook ಕಾಮೆಂಟ್ಸ್

Rahul Hajare: ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.
Related Post