X

ಸಾಂತ್ವನ

ಪ್ರತಿ ಹುಣ್ಣಿಮೆಯ ಸರಿ ರಾತ್ರಿ

ಬಸಿವ ಬೆಳದಿಂಗಳ

ಬೊಗಸೆಯಲಿ ಹಿಡಿದಿಟ್ಟು

ಇನ್ನೆರಡು ದಿನ ಬಿಸಿಲಲ್ಲೊಣಗಿಸಿ

ಹೊಸ ನಕ್ಷತ್ರಗಳ ಅಂಟಿಸುತ್ತೇನೆ

ಅಮಾವಾಸ್ಯೆಗೆ!..

ಒಮ್ಮೊಮ್ಮೆ ಮಿಂಚುಹುಳುಗಳು

ಹುಟ್ಟಿಕೊಳ್ಳುತ್ತವೆ ನನ್ನ ಕಣ್ಣಿನಲ್ಲೂ..

 

ಹರಿದ ಜೋಗಿಯ ಅರಿವೆಯ

ತೇಪೆ ಕೊನೆಯಲ್ಲಿ ಜೋಲುತಿಹ

ತಂಬೂರಿ ಸ್ವರಗಳ ಕೊಡು ನನಗೆ..

ನೆಂದಿವೆ ಕಾಗದಗಳು ಶಾಯಿಯಲ್ಲಿ

ಮರುಕ್ಷಣ ಒಣ ಪದಗಳು..

ಫಸಲು ನಾಳೆ ಹಸಿರಾಗಬೇಕಂತೆ!

ಬಿಸಿ ಸಾರಾದರೂ ಬರಲಿ ಹಳಸಿದನ್ನಕ್ಕೆ..

 

ಬತ್ತಿದ ಕೊರಕಲುಗಳ ನಕ್ಷೆ ಹಿಡಿ

ನನ್ನೆದೆಯ ಗದ್ದೆಯಲಿ ಮರು ವ್ಯವಸಾಯ..

ಒಂಟಿ ಕಾಲ ಧ್ಯಾನದ ಬೆಳ್ಳಕ್ಕಿಗೆ

ಹೇಳಿದ್ದೇನೆ ಹಸಿದುಕೊಂಡಿರಲು..

ಚೌಕಟ್ಟಿನಲ್ಲಿನ ಚಿತ್ರಕ್ಕೆ

ಗಟ್ಟಿ ದಾರ ಕಟ್ಟಿ

ಹಳೆಗೋಡೆ ಮೇಲೆ

ತೊಳೆದ ಮೊಳೆ ಹೊಡೆದು

ತೂಗುಹಾಕಬೇಕು ಸಮ್ಮತಿಸು..

 

ಪರಿಚಯವಿಲ್ಲದ ರಾತ್ರಿಯಲಿ

ಬೇಲಿಗೂಟಗಳ ಕಿತ್ತೆಸೆದು

ಬಾನಂಗಳಕೆ ಕಾಲು ಚಾಚಿ

ಮಲಗಬೇಕು ನನ್ನದೇ ನೆರಳ ಹೊದ್ದು..

ಕನಸುಗಳಾದರೂ ಗುರುತಿಸಿಕೊಳ್ಳಲಿ ಬೇರಿಳಿದು..

ಮುದುರಿ ಕೂರಲಿ ವಿಶ್ವವೇ ನನ್ನೊಳಗೆ

ಪ್ರೀತಿ ಕೊಟ್ಟು ಸಾಕಿಕೊಳ್ಳುತ್ತೇನೆ;

ಮೊಗ್ಗುಗಳ ಮೈದಡವುವುದು ಗೊತ್ತೆನಗೆ…

 

-‘ಶ್ರೀ’ ತಲಗೇರಿ

Facebook ಕಾಮೆಂಟ್ಸ್

ಶ್ರೀ ತಲಗೇರಿ: ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...
Related Post