X

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೪

೦೩೪. ಕೈಗೆಟುಕದ ತತ್ವದ ಸರಕು

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |

ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು ||

ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೊ! |

ಅಷ್ಟೆ ನಮ್ಮಯ ಪಾಡು ? – ಮಂಕುತಿಮ್ಮ || ೩೪ ||

ಎಷ್ಟೆಲ್ಲ ಓದಿ, ಹುಡುಕಾಡಿ, ಅಧ್ಯಯನ ಮಾಡಿ, ಚರ್ಚಿಸಿ, ತರ್ಕಿಸಿ, ಚಿಂತಿಸಿ ಎಲ್ಲಾ ತರದ ಲಾಗ ಹಾಕಿದರು ಅಷ್ಟು ಸುಲಭದಲಿ ಕೈಗೂಡುವ ಸರಕದಲ್ಲ ಈ ಪರಬ್ರಹ್ಮದ ಸೃಷ್ಟಿಯ ರಹಸ್ಯ ಎಂದರಿವಾಗುತ್ತಿದ್ದಂತೆ ನಿಧಾನವಾಗಿ ಮೂಡುವ ನಿರಾಶೆ, ಹತಾಶೆಯಾಗಿ ಪದಗಳ ರೂಪಾದ ಪದ್ಯವಿದು.

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |

ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು ||

ಎಲ್ಲಾ ಸಂಗತಿಗಳನ್ನು, ಅರಿಯಲು ಬೇಕಾದ ಜ್ಞಾನದ ಸರಕನ್ನು ಸಮೀಕರಿಸಿಕೊಂಡು ಇನ್ನಾದರೂ ಈ ಸೃಷ್ಟಿಯ ರಹಸ್ಯವನ್ನು ಬಿಡಿಸೋಣವೆಂದು ಚಿಂತನೆಗೆ ಕುಳಿತರೆ, ಆ ಸಲಕರಣೆಗಳೆಲ್ಲ ಗುಟ್ಟು ಬಿಡಿಸಲು ಸಹಕರಿಸುವ ಬದಲು, ಮತ್ತಷ್ಟು ಅನುಮಾನ, ಶಂಕೆಗಳನ್ನು ಹುಟ್ಟು ಹಾಕುತ್ತ ಇನ್ನಷ್ಟು ಗೊಂದಲದ ಗೂಡಾಗಿಸುತ್ತಿದೆ – ಆ ಸೃಷ್ಟಿಯ ಕಥೆಯನ್ನ. ಸಂಶಯಗಳನ್ನು ಬಿಡಿಸಹೊರಟಾಗ ಸಿಗುವ ಉತ್ತರವೆ ಮತ್ತಷ್ಟು ಸಂಶಯ ಆಗುವುದಾದರೆ, ಮೂಲ ಸಂಶಯವನ್ನು ಬಿಡಿಸುವುದಾದರೂ ಎಂತು? ಹೀಗೆ ಪುಂಖಾನುಪುಂಖವಾಗಿ ಬೆಳೆದ ಅಸಂಖ್ಯಾತ ಅನುಮಾನಗಳ ಭಾರವನ್ನು ಹೊತ್ತುಕೊಂಡೆ ನರನು, ಇದೆಲ್ಲದರ ಮೂಲದಲೆಲ್ಲೊ ಒಂದೆಡೆ ಸೃಷ್ಟಿ ರಹಸ್ಯದ ಮೂಲತತ್ವ ಅಡಗಿದೆ, ಅದು ಸಿಕ್ಕರೆ ಈ ಅಸಂಖ್ಯಾತ ಶಂಕೆಗಳಿಗೆಲ್ಲ ಒಂದೆ ಬಾರಿಗೆ ಸಿದ್ದ ಉತ್ತರ ಸಿಕ್ಕಿಬಿಡುತ್ತದೆ ಎನ್ನುವ ಆಸೆಯಲ್ಲಿ ಸಿಕ್ಕಸಿಕ್ಕೆಡೆಯಲ್ಲಿ ಕೆದಕಿ, ಬೆದಕಿ ನೋಡುತ್ತಲೇ ಇದ್ದಾನೆ. ಆದರೂ ಉತ್ತರ ಮಾತ್ರ ಕೈಗೆ ಸಿಗದೆ ತಡಕಾಡಿಸುತ್ತಲೆ ಇದೆ.

ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೊ! |

ಅಷ್ಟೆ ನಮ್ಮಯ ಪಾಡು ? – ಮಂಕುತಿಮ್ಮ || ೩೪ ||

ಹೀಗೆ ಸ್ವತಃ ಹುಡುಕಿ ಹುಡುಕಿ ಸುಸ್ತಾದ ಕವಿಮನ ಕೊನೆಗೆ ಬೇಸತ್ತು ರೋಸೆದ್ದು ಹೋಗಿ,  ಬಹುಶಃ ಹೀಗೆ ಹುಡುಕಿಸಿ ಕಷ್ಟಪಡಿಸಬೇಕೆಂದೆ ಆ ಬ್ರಹ್ಮದ ಇಚ್ಛೆಯಾಗಿರಬೇಕು; ಅದರಿಂದಲೆ ‘ಬರಿಯ ಹುಡುಕಾಡುವ, ತಡಕಾಡುವ ಗೋಳಿನ ಪಾಡು ಮಾತ್ರ ನಮದಾಗುತ್ತಿದೆಯೆ ಹೊರತು ಅದರ ಉತ್ತರವನ್ನರಿಯುವ ಆಹ್ಲಾದತೆಯಲ್ಲ’ ಎಂದು ಮರುಗುತ್ತಲೆ ತೀರ್ಮಾನಕ್ಕೆ ಬಂದುಬಿಡುತ್ತದೆ. ಹಾಗೆಂದು ತನ್ನ ಸೋಲನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ತೋರುತ್ತದೆ – ತನ್ನ ಕೈಸೇರದ ಸತ್ಯದ ಶೋಧನೆಯ ಆಸೆಗೆ ಎಳ್ಳು ನೀರು ಬಿಡುತ್ತ, ಮತ್ತದನ್ನು ವಿಧಿ ಬರಹ ಎಂದು ಒಪ್ಪಿಕೊಳ್ಳುವ ನಿರಾಶೆಯ ಮೂಲಕ.

ಕವಿ ಈ ಸಾರವನ್ನು ಸೃಷ್ಟಿಯ ಮೂಲತತ್ವಕ್ಕೆ ಅನ್ವಯಿಸಿ ಹೇಳುವ ಮಾತಿನಂತೆ ಕಂಡರೂ, ನೈಜದಲ್ಲಿ ಬದುಕಿನ ಎಲ್ಲ ಮಜಲುಗಳಲ್ಲೂ ಅನ್ವಯವಾಗುವ ಮಹತ್ತರ ಸತ್ಯ ಇದು. ನಾವು ದಿನನಿತ್ಯ ಹೊಡೆದಾಡುವ ಬಹುಪಾಲು ವಿಷಯಗಳೆಲ್ಲ ಬರಿಯ ಹೊರಗಿನ ಸಹಸ್ರಾರು ಹುಸಿ ಪದರ(ಆವರಣ)ಗಳಾಗಿರುತ್ತವೆಯೆ ಹೊರತು ಅಂತರಾಳದ ನೈಜ ಹೂರಣವಲ್ಲ. ಮೂಲ ತತ್ವವೆನ್ನುವುದು ಹೂರಣವಿದ್ದಂತೆ. ಅದನ್ನು ಗುರುತಿಸಿ, ಅರ್ಥೈಸಿಕೊಂಡು ಸರಿಪಡಿಸಿಕೊಂಡರೆ ಅದರ ಸುತ್ತಲ ಆವರಣಗಳು ತಂತಾನೆ ಸಕ್ರಮವಾಗಿಬಿಡುತ್ತವೆ – ಪೂರ್ತಿ ಅರ್ಥವಾಗಲಿ, ಬಿಡಲಿ.

ಆದರೆ ದುರದೃಷ್ಟವಶಾತ್ ನಾವು ಹೂರಣವೆಲ್ಲಿ, ಹೂರಣವಾವುದು (ತತ್ವವೆಲ್ಲಿ, ಯಾವುದು) ಎನ್ನುವ ಹುಡುಕಾಟದಲ್ಲಿಯೆ ಕಳುವಾಗಿಹೋಗುತ್ತೇವೆ. ಆ ಹುಡುಕಾಟದಲ್ಲೇನೊ ಕಂಡಂತೆ ಅನಿಸಿದರೂ ಹತ್ತಿರವಾದಾಗ ಭ್ರಮನಿರಸನ ಕಾದಿರುತ್ತದೆ. ಎಷ್ಟೋ ಬಾರಿ ಅದು ಹುಟ್ಟಿಸುವ ಅನುಮಾನಗಳಿಂದ ಅದು ಸರಿ ದಾರಿಯೋ, ಅಲ್ಲವೋ ಎನ್ನುವ ಅನುಮಾನ ಕಾಡತೊಡಗಿ ದಿಕ್ಕು ತಪ್ಪಿಸುತ್ತದೆ. ಮೂಲತತ್ವವೊಂದು ಸಿಕ್ಕರೆ ಸಾಕು, ಮಿಕ್ಕೆಲ್ಲ ಪರಿಹಾರವಾಗಿಬಿಡುವುದೆಂಬ ಹೋರಾಟ ಕೊನೆಗೆ ನಿರಾಶೆಯ ಅತಾರ್ಕಿಕ ತೀರ್ಮಾನಗಳಲ್ಲಿ ಕೊನೆಯಾಗುತ್ತದೆ.

ಆ ಭ್ರಮನಿರಸನ, ಸೃಷ್ಟಿಯ ಮೂಲದ ಕುರಿತಾಗಿರುವ ಗೊಂದಲದಷ್ಟೆ ಸಹಜವಾಗಿ ನಮ್ಮ ನಿತ್ಯದ ಬದುಕಲ್ಲಿಯೂ ಇದೆ ಎನ್ನುವುದು  ಪ್ರತಿಯೊಬ್ಬರಿಗೂ ಸ್ವಾನುಭವದಿಂದ ಮನವರಿಕೆಯಾಗುವ ಸತ್ಯ. ಸೃಷ್ಟಿಯಂತಹ ಸೃಷ್ಟಿಗೆ ಅಂತಹ ಗೊಂದಲವಿದ್ದ ಮೇಲೆ, ಇನ್ನು ನಮ್ಮಂತಹ ಹುಲು ಮನುಜರದೇನು ಮಹಾ ? ಎನ್ನುವ ಈ ಸಾಲುಗಳಲ್ಲಿನ ಅನಿಸಿಕೆ ಮೇಲ್ನೋಟಕ್ಕಾದರೂ ಸಂತೈಸಿ, ಸಮಾಧಾನ ನೀಡುತ್ತದೆ.

ಅಂತಿಮವಾಗಿ ಇಷ್ಟೆಲ್ಲಾ ಆದರೂ, ಹೇಗೆ ಸೃಷ್ಟಿ ತನ್ನನ್ನು ತಾನು ನಿಭಾಯಿಸಿಕೊಂಡು ನಿರಂತರವಾಗಿ ಮುನ್ನಡೆದಿದೆಯೊ, ಅಂತೆಯೇ ನಮ್ಮ ಪಾಡು ಕೂಡ; ಹೇಗೋ ಬದುಕು ಅನುಮಾನ ಗೊಂದಲಗಳ ಗೂಡಲ್ಲೆ ನೊಂದು, ಬೆಂದು, ಪುಟಿದೆದ್ದು ಮುನ್ನಡೆಯುತ್ತಲೇ ಇರುತ್ತದೆ ಎನ್ನುವುದು ನಾವು ನಿಷ್ಕರ್ಷಿಸಬಹುದಾದ ಸಾರ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post