ಶ್ರೀಗಂಧದ ಸಿರಿಯಾಗಿ
ಜೀವನದಿ ಕಾವೇರಿಯಾಗಿ
ಸಹ್ಯಾದ್ರಿ ಗಿರಿ ಶಿಖರವಾಗಿ
ಹಚ್ಚಹಸುರನೇ ಹೊದ್ದು
ನಿತ್ಯ ಕಂಗೊಳಿಸುತಿಹಳು
ಕನ್ನಡ ತಾಯಿ ಭುವನೇಶ್ವರಿ
ಬೇಲೂರು,ಹಳೆಬೀಡು
ಬಾದಾಮಿ,ಹಂಪೆ,ಐಹೊಳೆ
ಪಟ್ಟದಕಲ್ಲು,ಶ್ರವಣಬೆಳಗೊಳ
ಶಿಲ್ಪಕಲಾ ವೈಭವ ಶೋಭಿತ
ಮುಂಚೂಣಿಯಲಿ ಮೆರೆದಿಹಳು
ಕನ್ನಡ ಸಿರಿದೇವಿ ಭುವನೇಶ್ವರಿ
ಪಂಪ,ರನ್ನ,ಪೊನ್ನ,ಜನ್ನ,ಹರಿಹರ
ಸರ್ವಜ್ಞ,ಪುರಂದರದಾಸ,ಕನಕದಾಸ
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮ
ಕವಿಪುಂಗವರ ಸಾಹಿತ್ಯ ಮಾಲೆ ತೊಟ್ಟು
ಹಳೆಗನ್ನಡ,ಆಧ್ಯಾತ್ಮಿಕ ಕಂಪು ಇಂಪು ಸೂಸಿ
ರಾರಾಜಿಸುತಿಹಳು ತಾಯಿ ಭುವನೇಶ್ವರಿ
ಕುವೆಂಪು,ಬೇಂದ್ರೆ,ಮಾಸ್ತಿ,ತರಾಸು
ಡಿ.ವಿ.ಗುಂಡಪ್ಪ,ಶಿವರಾಮ ಕಾರಂತ
ಆಧುನಿಕ ಸಾಹಿತ್ಯ ಸೃಷ್ಟಿಯ ಹರಿಕಾರರ
ಹೊಸಗನ್ನಡ ಸಾಹಿತ್ಯವ ಮುಡಿಗಿಟ್ಟು
ಕನ್ನಡ ಭಾಷೆಯ ಸಿರಿಯ ತಿಲಕವನಿಟ್ಟು
ಸಿಂಗರಿಸಿ ಬೆಳಗುತಿಹಳು ತಾಯಿ ಭುವನೇಶ್ವರಿ
ಕಲೆ ಸಾಹಿತ್ಯ ಸಂಸ್ಕೃತಿ ನೀಡಿ
ಕನ್ನಡ ಸಂಗೀತದಾ ಇಂಪಿನ ಮೋಡಿ
ಪ್ರೀತಿ ಸ್ನೇಹ ಒಲುಮೆಯ ಒಡನಾಡಿ
ನಡೆಯಾಗಿ ನುಡಿಯಾಗಿ ಕನ್ನಡವಾಗಿ
ಜ್ಞಾನ ದೀವಿಗೆ ಹಚ್ಚಿ ಬೆಳಗಿಹಳು
ಕರ್ನಾಟಕದ ಮಾತೆ ಭುವನೇಶ್ವರಿ
ನಡೆ ಕನ್ನಡ ನುಡಿ ಕನ್ನಡ
ಉಸಿರಾಡುವ ಗಾಳಿಯು ಕನ್ನಡ
ಹರಿದಾಡುವ ನೆತ್ತರು ಸಹ ಕನ್ನಡ
ಮುಲಿಲೆತ್ತರ ಹಾರುತಿದೆ ಬಾವುಟ ಕನ್ನಡ
ರಾಜ್ಯೋತ್ಸವ ಮೊಳಗಿದೆ ಜಯ ಕನ್ನಡ
ಜಯವಾಗಲಿ ಕರುನಾಡ ತಾಯಿ ಭುವನೇಶ್ವರಿ
ಪ್ರಕಾಶ ತದಡಿಕರ
ಕಲಂಬೋಲಿ
prakasht512@gmail.com
Facebook ಕಾಮೆಂಟ್ಸ್