X

ಸುಂದರ ನಾಳೆಗಳಿಗಾಗಿ ಇಂದಿನ ಕರ್ತವ್ಯಗಳು

ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ್ಲಿ ಆನಾದಿ ಕಾಲದಿಂದಲೂ ಉಳಿತಾಯ ಅನ್ನೋದು ಜೀವನದ ಭಾಗವಾಗಿ ಬಂದಿದೆ. ಬ್ಯಾಂಕುಗಳ ಅಸ್ತಿತ್ವಕ್ಕೂ ಮೊದಲೇ ನಮ್ಮವರು ಹಣ ಉಳಿಸುವ ಅಭ್ಯಾಸ ಬೆಳಸಿಕೊಂಡಿದ್ದರು, ಆದ್ದರಿಂದಲೇ ಅವರು ಉಳಿಕೆಯ ಹಣವನ್ನು ಇಂತಹ ಡಬ್ಬಿಗಳಲ್ಲಿ ಇಟ್ಟು ಕಾಪಾಡುತ್ತಿದ್ದರು. ಇದಕ್ಕೆ ಆನೇಕ ಕಾರಣಗಳು ಉಂಟು, ‘ಭಾರತದ ಕೃಷಿಯು ಮಳೆಯ ಜೊತೆಗಿನ ಜೂಜಾಟ’ ಅನ್ನೋ ಮಾತೊಂದು ಆನಾದಿ ಕಾಲದಿಂದಲೂ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಹೀಗಾಗಿ ಮುಂದಿನ ಕಷ್ಟ ದಿನಗಳ ಅರಿವು ತಿಳಿದಿದ್ದ ನಮ್ಮ ಜನರು ಉಳಿತಾಯದ ಹವ್ಯಾಸವನ್ನು ಬೆಳಸಿಕೊಂಡಿದ್ದರು.

ಸ್ವಾತಂತ್ರ್ಯದ ನಂತರ ಭಾಗಶಃ ಭಾರತೀಯ ಬ್ಯಾಂಕುಗಳು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದವು, ಕಾರಣ ಅಂದರೆ, ಬ್ಯಾಂಕಿನ ಸೌಲಭ್ಯಗಳು ಕೇವಲ ನಗರ ಜನರಿಗೆತ್ತು ಕೈಗಾರಿಕೆಗಳಿಗೆ ಮಾತ್ರ ಅನ್ನೊ ಭಾವನೆ ಅವರದಾಗಿತ್ತು. ಆದರೆ ಭಾರತೀಯರ ಮನಸ್ಥಿತಿಯನ್ನು ಅರಿಯಾಗಿ ತಿಳಿದ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಸುಮಾರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಸೌಲಭ್ಯಗಳು ದೊರೆಯುವಂತೆ ಮಾಡುತ್ತಾರೆ. ಮುಂಚೆ ಮತ್ತು ಅಲ್ಲಿಂದ ಮುಂದೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ತುಂಬಾ ಉತ್ತಮವಾಗಿದೆ, ಯಾಕಂದರೆ ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತಮ ಆಡಳಿತ ಮತ್ತು ಕಟ್ಟು ನಿಟ್ಟಿನ ಕ್ರಮಗಳು.

ಯಾಕೆ ಈ ವಿಷಯದ ಬಗ್ಗೆ ಪ್ರಸ್ತಾಪ ಅಂದರೆ, ೨೦೦೮-೦೯ರ ಸಮಯದಲ್ಲಿ ಇಡೀ ಜಗತ್ತನ್ನೇ ನಡುಗಿಸಿದ ಹಣಕಾಸಿನ ಕುಸಿತದಿಂದ ಭಾರತ ಅಷ್ಟಾಗಿ ನೋವು ಅನುಭವಿಸಲಿಲ್ಲ. ಭಾರತೀಯರ ದೂರದೃಷ್ಟಿ, ಉಳಿತಾಯ ಮನೋಭಾವನೆ, ಕಟ್ಟನಿಟ್ಟಿನ ಬ್ಯಾಂಕಿಂಗ್ ವ್ಯವಸ್ಥೆ, ರಕ್ಷಣಾತ್ಮಕ ಆರ್ಥಿಕತೆ ಮತ್ತು ಸಾಲಕ್ಕೆ ಅಂಜುವ ಭಾರತೀಯರ ಮನೋಭಾವನೆ ಇದಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಆದರೆ ಇಂದಿನ ಯುವಜನತೆ ಮತ್ತು ಅವರ ಹಣಕಾಸಿನ ನಿರ್ವಹಣೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಮತ್ತೆ ಹಣಕಾಸಿನ ಕುಸಿತ ಸಂಭವಿಸಿದರೆ ಅದರ ಮೊದಲ ಬಲಿ ಭಾರತವಾಗುತ್ತದೆ ಅನ್ನುವದರಲ್ಲಿ ಯಾವುದೇ ಸಂಶಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳಾಗಿವೆ, ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡುವ ಯುವಕರಿಗೆ ಕೆಲಸ ಸಿಗುವ ಯಾವುದೇ ನಂಬಿಕೆ ಇಲ್ಲ, ಇನ್ನು ಕೆಲಸ ಸಿಕ್ಕಿದ ಮರುದಿನವೇ ಕ್ರೆಡಿಟ್ ಕಾರ್ಡಿಗೆ ಅರ್ಜಿ ಹಾಕುವ ಜನ ಮಾತ್ರ ಮುಂದಿನ ದಿನಗಳಲ್ಲಿ ಬರುವ ಕಷ್ಟಗಳ ಬಗ್ಗೆ ಸಣ್ಣ ಯೋಚನೆ ಕೂಡ ಮಾಡುವುದಿಲ್ಲ. ಹಿಂದಿನ ದಿನಗಳಲ್ಲಿ ಹಣ ಹೊಂದಿಸಿ ನಂತರ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುತ್ತಿದ್ದ ಜನರ ಹವ್ಯಾಸ ಈಗಿನ ಜನರಲ್ಲಿ ಮರೆಯಾಗಿದೆ, ಎಲ್ಲವನ್ನೂ ಸಾಲದ ಮೇಲೆ ಕೊಳ್ಳುವ ಒಂದು ಅಭ್ಯಾಸವಾಗಿದೆ, ಆದರೆ ಆ ಸಾಲ ತೀರಿಸಲು ಬೇಕಾದ ಹಣದ ಬಗ್ಗೆ ಯೋಚನೆ ಕೂಡ ಇಲ್ಲ, ಮಾಡುತ್ತಿರುವ ಕೆಲಸ ಹೋದರೆ ತಿನ್ನುವ ತುತ್ತು ಅನ್ನಕ್ಕೂ ಗತಿಯಿಲ್ಲದ ಕಾಲದಲ್ಲಿ ಸಾಲ ತೀರಿಸಲು ಸಾಧ್ಯವೇ?

ಉತ್ತರ ಇಲ್ಲದೆ ಜೀವನ ನೆಡೆಸುವ ಈ ಯುವಜನತೆ ಅಂತಹ ಕುಸಿತವನ್ನು ಎದುರಿಸಲು ಸಿದ್ಧರಿಲ್ಲ ಅನ್ನೋದು ನಗ್ನ ಸತ್ಯ. ಹೀಗೆ ಕೆಲಸಕ್ಕೆ ಸೇರಿದ ಕ್ಷಣದಿಂದಲೇ ಸಾಲದ ಸುತ್ತ ಸುಳಿಯುವ ಬದಲು ಮುಂದೆ ಬರುವ ಕಷ್ಟದ ದಿನಗಳನ್ನು ಸಂತಸದ ದಿನಗಳಾಗಿ ಪರಿವರ್ತಿಸುವತ್ತ ಗಮನ ವಹಿಸಬೇಕು, ಹೂಡಿಕೆದಾರರ ಜೀವನ ಚಕ್ರದ ಪ್ರಕಾರ ಉತ್ತಮ ಯೋಚನೆಗಳು ಉತ್ತಮ ಅಗತ್ಯವಿದೆ. ಈಗಿನ ಬಹುತೇಕ ಯುವಕರು ತಮ್ಮ ಪೋಷಕರ ಜೊತೆ ಜೀವನ ನೆಡೆಸಲು ಸಿದ್ಧರಿಲ್ಲ, ಇಂತಹ ಸ್ಥಿತಿಯಲ್ಲಿ ನಿಮ್ಮ ನಿವೃತ್ತಿ ಜೀವನವನ್ನು ನಿಮ್ಮ ಮಕ್ಕಳ ಜೊತೆ ಸಾಗಿಸುವ ಅಪೇಕ್ಷೆ ತಪ್ಪಾಗುತ್ತದೆ. ೭೦ರಿಂದ ೮೦ ವರ್ಷಗಳ ಕಾಲ ಬದುಕಿದ್ದ ನಾವು ಇಂದು ೩೦-೩೫ಕ್ಕೆ ಖಾಯಿಲೆಗಳ ಕೂಪಕ್ಕೆ ಬಲಿಯಾಗುತ್ತೇವೆ, ಇನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖರ್ಚುಗಳು ದಿನದಿಂದ ದಿನಕ್ಕೆ ಗಗನಮುಖಿಯಾಗಿ ಬೆಳೆಯುತ್ತಿವೆ.

ಇವನೆಲ್ಲಾ ಒಮ್ಮೆ ನೋಡಿದಾಗ ಕೆಲಸಕ್ಕೆ ಸೇರಿದ ಹೊಸದರಲ್ಲೇ ಮುಂದಿನ ಜೀವನದ ಬಗ್ಗೆ ಯೋಚಿಸುವುದು ತುಂಬಾ ಅಗತ್ಯ. ದುಡಿದ ಹಣವನ್ನೂ ಪೂರ್ತಿಯಾಗಿ ಖರ್ಚು ಮಾಡುವ ಬದಲು ಉಳತಾಯ ಮತ್ತು ಹೂಡಿಕೆಯತ್ತ ಬಳಸಬೇಕು.ಆದರೆ ಹೂಡಿಕೆ ಮಾಡುವಾಗ ಕೆಳಗಿನ ಅಂಶಗಳನ್ನು ಅವಶ್ಯವಾಗಿ ಗಮನಿಸಬೇಕು.

೧. ನಿರಂತರ ಆದಾಯ ಕೊಡುವ ಹೂಡಿಕೆಗಳು,
೨. ಹೂಡಿಕೆಯ ಮೌಲ್ಯ ದಿನದಿಂದ ದಿನಕ್ಕೆ ಬೆಳಯಬೇಕು.
೩. ಹೂಡಿಕೆ ಒಳ್ಳೆಯ ಭದ್ರತೆ ಇರುವುದು ತುಂಬಾ ಅವಶ್ಯ.
೪. ಹೂಡಿಕೆಯ ದ್ರವ್ಯತೆ.
೫. ತೆರಿಗೆ ವಿನಾಯಿತಿ.

೪% ಬಡ್ಡಿಯ ಉಳಿತಾಯದ ಬದಲು ಉತ್ತಮ ಆದಾಯ ಕೊಡುವ ಷೇರು ಮಾರುಕಟ್ಟೆಯತ್ತ ಗಮನವಹಿಸುವುದು ಒಳ್ಳೆಯದು. “Don’t put all eggs in same basket” ಅನ್ನೋ ಸೂತ್ರದ ಪ್ರಕಾರ ತಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಬೇಕು, ಮತ್ತು “You can’t get a baby in a month by making Nine Women Pregnant” ಅನ್ನೋ ತಿಳುವಳಿಕೆ ಕೂಡ ಅವಶ್ಯವಿದೆ. ಅದಕ್ಕೆ ಅನುಸಾರವಾಗಿ ನಮಗೆ ಒಪ್ಪುವ ಹೂಡಿಕೆಗಳನ್ನು ಎಚ್ಚರವಾಗಿ ಅರಿಸಬೇಕು ಉದಾಹರಣೆಗೆ PPF, EPF, NPS, ಬಾಂಡ್ ಮಾರುಕಟ್ಟೆಯತ್ತ ಗಮನ ವಹಿಸಬಹುದು. ಭಾರತೀಯರ ಪಾಲಿಗೆ ಬಂಗಾರ ಮೂಲಭೂತ ವಸ್ತುಗಳ ಸಾಲಿಗೆ ಸೇರುತ್ತದೆ, ಆದರೆ ಕೇವಲ ವಾದವೇ ಬಂಗಾರ ಖರೀದಿಸುವ ಬದಲು ಚಿನ್ನದ ಮೇಲಿನ ಹೂಡಿಕೆ ಉತ್ತಮವಾಗುತ್ತದೆ. ಕೇಂದ್ರ ಸರ್ಕಾರದ ಸವರ್ರನ್ ಚಿನ್ನದ (SGB) ಬಾಂಡುಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ. ಇದಲ್ಲದೇ, ತಮ್ಮ ಬೆಳವಣಿಗೆಗಾಗಿ ನಿರಂತರ ವಿದ್ಯಾಭ್ಯಾಸ ಕೂಡ ಅವಶ್ಯವಾಗುತ್ತದೆ, ಮೌಲ್ಯವರ್ಧಿತ ಶಿಕ್ಷಣ ಉಪಯೋಗವಾಗುತ್ತದೆ.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಜೊತೆ ಗಗನ ಮುಟ್ಟಿರುವ ಅವಶ್ಯ ವಸ್ತುಗಳ ಬೆಳೆಗಳು, ದಿನದಿಂದ ದಿನಕ್ಕೆ ನಾಗಾಲೋಟ ಮಾಡುತ್ತಿರುವ ಸೇವೆಗಳ ಖರ್ಚುಗಳು, ಮುಂದೆ ನಮ್ಮ ಮಕ್ಕಳ ವಿದ್ಯಾಭ್ಯಾಸದ ಹೊಣೆಗಾರಿಕೆ, ಅವರ ಮಾಡುವೆ ಮುಂಜಿಗಳ ವ್ಯಯ ಪಟ್ಟಿ, ಹದಿಹರೆಯದಲ್ಲಿ ನಮ್ಮ ಜೊತೆ ಸಂಬಂಧ ಬೆಳೆಸುವ ಮಾರಕ ಖಾಯಿಲೆಗಳು ಮತ್ತು ನಿವೃತ್ತಿ ನಂತರದ ಜೀವನದ ಬಗ್ಗೆ ಒಮ್ಮೆ ದೀರ್ಘಾಲೋಚನೆ ಮಾಡಿ ಇಂದಿನ ವಿಲಾಸಿ ಖರ್ಚುಗಳ್ಳನ್ನು ಕಡಿತಗೊಳಿಸಿ ಮುಂದಿನ ಸುಖಮಯ ಜೀವನಕ್ಕಾಗಿ ನಮ್ಮ ಹಿರಿಯರ ಹಾಗೆ ಉಳಿತಾಯ/ಹೂಡಿಕೆ ಮಾಡಿದಾಗ ಖಂಡಿತ ನಮ್ಮ ಜೀವನ ಸುಖಕರವಾಗಿರುತ್ತದೆ ಹಾಗೂ ಮುಂದಿನ ಸುಂದರ ನಾಳೆಗಳಿಗಾಗಿ ನಾವು ಮಾಡಬೇಕಾದ ಕರ್ತವ್ಯಗಳು.

ವಿನಯ್ ಕೆಂಕೆರೆ,
ಉಪನ್ಯಾಸಕರು,
ಆಚಾರ್ಯ ಪದವಿ ಶಿಕ್ಷಣ ವಿದ್ಯಾಲಯ,
ಬೆಂಗಳೂರು
vyk1988@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post