X

ಪೂರ್ಣಚಂದ್ರ, ತೇಜಸ್ವಿ!

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಮಾತುಂಟು ಆಂಗ್ಲಭಾಷೆಯಲ್ಲಿ. ಜನರಿಗೆ ಸುದ್ದಿ ಬೇಕು. ಹಿಂದೆಲ್ಲ ದಿನಕ್ಕೊಮ್ಮೆ ಮಾತ್ರ ವೃತ್ತ ಪತ್ರಿಕೆಗಳು ಬರುತ್ತಿದ್ದುದರಿಂದ ಬೆಳಗಿನಿಂದ ಸಂಜೆಯವರೆಗೆ ಜನ ಪತ್ರಿಕೆಗಳ ಸುದ್ದಿಗಳನ್ನು ಜಗಿಯುತ್ತಿದ್ದರು. ಅಂದರೆ ಆಯಾ ದಿನದ ಸುದ್ದಿ ಇಡೀ ದಿನ ಜನರ ಬಾಯಲ್ಲಿ ನಲಿಯುತ್ತಿತ್ತು. ಆದರೆ ಈಗ ಜಾಲತಾಣಗಳ, ಅಂತರ್ಜಾಲ ಸುದ್ದಿ ವಾಹಿನಿಗಳ, ವಿವಿಧ ಬಗೆಯ ಟಿವಿ ಚಾನೆಲುಗಳ ಮತ್ತು ಅವುಗಳು ಗಳಿಗೆಗೊಮ್ಮೆ ಬಿತ್ತರಿಸುವ ಬ್ರೇಕಿಂಗ್ ನ್ಯೂಸ್‍ನ ಕಾಲ ನೋಡಿ! ಹಾಗಾಗಿ ಮುಂಜಾನೆ ಕೇಳಿದ ಸುದ್ದಿ ಮಧ್ಯಾಹ್ನಕ್ಕೆಲ್ಲ ಹಳತಾಗಿರುತ್ತದೆ. ಮಧ್ಯಾಹ್ನದ ಬಿಸಿಬಿಸಿ ಬಿರ್ಯಾನಿಯಂಥ ಸುದ್ದಿ ಸಂಜೆ ಹೊತ್ತಿಗೆ ಹಳಸಿದ ತಂಗಳನ್ನವಾಗಿರುತ್ತದೆ. ಯಾಕೆ ಈ ಮಾತು ಬಂತೆಂದರೆ ನವೆಂಬರ್ 14ರಂದು ಸೂಪರ್‍ಮೂನ್ ಬಂದಿದೆ! ಕೇವಲ ಒಂದು ತಿಂಗಳ ಹಿಂದೆಯಷ್ಟೇ ಒಂದು ಸೂಪರ್ ಮೂನ್ ಬಂದು ಹೋಗಿತ್ತೆಂಬ ಸುದ್ದಿಯನ್ನು ಸಂಪೂರ್ಣ ಮರೆತೇ ಬಿಟ್ಟು ಜನ ಈ ಸೂಪರ್-ಡೂಪರ್ ಚಂದ್ರನನ್ನು ಕಾಣಲು ತಾರಸಿಗಳಲ್ಲಿ ಕಾಲ್ತುಳಿತವಾಗುವಷ್ಟು ಸೇರಿ ಬಿಟ್ಟಿದ್ದಾರೆ! ಇರಲಿ ಬಿಡಿ, ಟಿವಿಗಳೆದುರು ಕೂತು ಅದೇ ಅದೇ ಸುಟ್ಟ ಬದನೇಕಾಯಿಯಂಥ ರಾಜಕಾರಣಿಗಳ ಮುಖ ನೋಡಿ ನಿಡುಸುಯ್ಯುವ ಬದಲು ಸ್ವಲ್ಪ ನಮ್ಮ ತಲೆ ಮೇಲಿರುವ ತಂಪಾದ ಚಂದ್ರನ ಪೂರ್ಣಬಿಂಬವನ್ನು ಕಂಡು ಕಣ್ತುಂಬಿಸಿಕೊಂಡು ಸಂತೋಷ ಪಡೋಣ!

ಚಂದ್ರ ನಮ್ಮ ಗೆಳೆಯ. ಸೂರ್ಯನ ಉರಿಕೆಂಡದಂಥ ಕೆಂಪು ಮುಖ ಇವನದಲ್ಲ. ಇವನು ತಂಪಾದ ಹಿಮಗಡ್ಡೆಯ ತುಂಡಿನಂತೆ ಆಪ್ಯಾಯಮಾನ. ಅರಳೆಯ ಉಂಡೆಯನ್ನು ಯಾರೋ ಊದಿ ಹಾರಿ ಬಿಟ್ಟಿದ್ದಾರೇನೋ ಎಂಬಷ್ಟು ಹಗುರವಾಗಿ ಆತ ತೇಲುತ್ತ ಹೋಗುವ ಚಂದವೇ ಚಂದ. ಅದೆಷ್ಟು ಮಕ್ಕಳಿಗೆ ಈ ಚಂದಮಾಮ ಊಟ ತಿನ್ನಿಸಿ ಹೊಟ್ಟೆ ತುಂಬಿಸಿಲ್ಲ? ಶ್ರೀರಾಮನಂಥ ಶ್ರೀರಾಮನೇ ಚಿಕ್ಕವನಿದ್ದಾಗ ಚಂದ್ರ ಬೇಕೆಂದು ಹಠ ಮಾಡಿ ಗೋಳಾಡಿ ಕೌಸಲ್ಯೆಗೆ ಅನಾಸಿನ್ ತಿನ್ನಿಸಿದ್ದನಂತೆ. ಕೊನೆಗೆ ಆಕೆ ಕನ್ನಡಿ ತಂದು ತೋರಿಸಿ ನೋಡಪ್ಪಾ, ಆ ಬಾನೆತ್ತರದ ಬಿಳಿರೊಟ್ಟಿಯನ್ನು ಇದರೊಳಗೆ ಹಿಡಿದು ಬಿಟ್ಟಿದ್ದೇನೆಂದು ಸಮಾಧಾನ ಮಾಡಬೇಕಾಯಿತಂತೆ. ಕುಡುಕನೊಬ್ಬ ಅಕಾಸ್ಮಾತ್ತಾಗಿ ಬಾವಿಯೊಳಗೆ ಇಣುಕಿ, ಅಯ್ಯಯ್ಯೋ ಚಂದ್ರ ಹೋಗಿ ಈ ಬಾವಿಗೆ ಬಿದ್ದಿದ್ದಾನಲ್ಲಾ ಎಂದು ರಂಪ ರಾಮಾಯಣ ಮಾಡಿ ಹಗ್ಗ ತಂದು ಆತನನ್ನು ಬಾವಿಯಿಂದ ಹೊರ ಹಾಕಿ ಆಕಾಶಕ್ಕೆ ಹಾರಿಸಿದ ಕತೆ ಚಿಕ್ಕವರಿದ್ದಾಗ ಕೇಳಿದ್ದರೆ, ನೆನಪಿದ್ದರೆ, ಈ ಸಲದ ಮಕ್ಕಳ ದಿನಾಚರಣೆಗೆ ನಿಮ್ಮ ಮಕ್ಕಳಿಗೂ ಹೇಳಿ, ಕತೆಗಳನ್ನು ಜೀವಂತವಿಡುವುದಕ್ಕೆ ಸುಸಂದರ್ಭ ಇದು. ಇನ್ನಷ್ಟು ಮತ್ತಷ್ಟು ಕತೆ ಹೇಳು ಎಂದು ಮಗು ಪೀಡಿಸಿದರೆ ಅಟ್ಟದಲ್ಲಿ ಇಟ್ಟು ಮರೆತ “ಚಂದಮಾಮ”ನನ್ನು ಹೊರಗೆಳೆಯಿರಿ. ಮಕ್ಕಳನ್ನೇನು, ದೊಡ್ಡವರನ್ನು ಬಿಟ್ಟಿದ್ದಾನೆಯೇ ಈ ಕಿಲಾಡಿ? ಚಂದ್ರನೆಂದರೆ ಪ್ರೇಮ, ಚಂದ್ರನೆಂದರೆ ವಿರಹ. ಪ್ರೇಮ ವಿರಹಗಳೆರಡೂ ತುತ್ತತುದಿಗೇರಿದಾಗ ನೆನಪಾಗುವುದು ಚಂದ್ರನೇ. ಯಾವ್ಯಾವ ಸಂಗತಿಗಳೆಲ್ಲ ನಮ್ಮ ಪ್ರೇಮದಲ್ಲಿ ಬಂದು ಹೋದವಲ್ಲೋ ಕೃಷ್ಣಾ ಎಂದು ರಾಧೆ ವ್ಯಥೆಪಟ್ಟು ಹಾಡುವ “ಮೋಹನ ಮುರಲಿ”ಯಲ್ಲಿ ಆಕೆ ನೆನಪಿಸಿಕೊಳ್ಳುವುದು ಮೊದಲು ಈ ಮಹರಾಯನನ್ನೇ.

ಚಂದ್ರ ಎಂತೆಂಥ ನಾಗರೀಕತೆಗಳನ್ನು ಉದ್ದೀಪಿಸಿದ್ದಾನೆ, ಬೆಳೆಸಿದ್ದಾನೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಅರೇಬಿಯಾದ ಹಳೆಯ ಗಣಿತಜ್ಞರು; ಮಾತ್ರವಲ್ಲ, ಜನ ಸಾಮಾನ್ಯರು ತಮ್ಮ ದಿನ-ವಾರ-ವರ್ಷಗಳ ಲೆಕ್ಕಕ್ಕಾಗಿ ಚಂದ್ರನನ್ನೇ ಆಶ್ರಯಿಸಿದರು. ತಿಂಗಳು ಎಂಬ ಪರಿಕಲ್ಪನೆ ಹುಟ್ಟಿದ್ದೇ ಚಂದ್ರನಿಂದ ತಾನೇ? ಹದಿನೈದು ದಿನ ಇಳಿದಿಳಿದು ಹೋಗುತ್ತ, ಮತ್ತೆ ಹದಿನೈದು ದಿನ ಬೆಳೆಬೆಳೆಯುತ್ತ ಬರುವ ಇವನು ಅದೆಷ್ಟು ತಲೆಮಾರುಗಳನ್ನು ವಿಜ್ಞಾನದತ್ತ ಪ್ರಚೋದಿಸಿಲ್ಲ? ಸಾಹಿತ್ಯ ಬರೆಯಲು ಪ್ರೇರೇಪಿಸಿಲ್ಲ? ಭಾರತೀಯ ಪಂಚಾಂಗ ಪದ್ಧತಿಯಲ್ಲಿ ಚಾಂದ್ರಮಾನ, ಸೌರಮಾನ ಎಂದು ಎರಡು ಲೆಕ್ಕಗಳು. ಚಾಂದ್ರಮಾನದ ಅಧಿಪತಿಯೂ ಅಸ್ಥಿಭಾರವೂ ಈ ಚಂದ್ರನೇ. ಅರೇಬಿಯಾದಲ್ಲಿ ಹುಟ್ಟಿ ಬೆಳೆದ ಇಸ್ಲಾಮ್ ಮತ ಚಂದ್ರನನ್ನು ದೈವತ್ವಕ್ಕೇರಿಸಿತು. ಗಯಾದಲ್ಲಿ ಹುಟ್ಟಿ ಹರಡಿದ ಬೌದ್ಧ ದರ್ಶನ ಕೂಡ ಚಂದ್ರನನ್ನು, ಹುಣ್ಣಿಮೆಯನ್ನು ಆರಾಧಿಸಿತು. ಯಹೂದ್ಯರಿಗೆ ವಾರದ ಪ್ರಾರ್ಥನೆ ಮುಗಿಸಿ ಊಟಕ್ಕೆ ಕೂರಲು, ಮುಸ್ಲಿಮರಿಗೆ ಹಬ್ಬದ ಉಪವಾಸ ಮುರಿದು ಭೋಜನಾಸಕ್ತರಾಗಲು, ಸಂಕಷ್ಟಹರ ಚತುರ್ಥಿಯ ಉಪವಾಸ ಕೂತ ಹಿಂದೂಗಳಿಗೆ ರಾತ್ರಿಯೂಟ ಮಾಡಲು ಸಿಗ್ನಲ್ ಕೊಡಬೇಕಾದವನು ಚಂದ್ರನೇ. ಹಾಗಾಗಿ, ಜಗತ್ತಿನಲ್ಲಿ ಸಂಪೂರ್ಣ ಸೆಕ್ಯುಲರ್ ಯಾರು ಎಂದರೆ ನಾವು ಈತನನ್ನು ತೋರಿಸಬೇಕು!

ಇಂತಿಪ್ಪ ಚಂದ್ರ ಈಗ ಆಕಾಶದಲ್ಲಿ ಮೂಡಿದ್ದಾನೆ. ಮೂಡುವುದೇನು; ಜಿಮ್ನಾಶಿಯಮ್ಮಿನಲ್ಲಿ ರಟ್ಟೆ ಬೆಳೆಸಿದ ಧಾಂಡಿಗನಂತೆ ಮೈಕೈ ತುಂಬಿಕೊಂಡು ಹಿಂದೆಂದಿಗಿಂತ ದೊಡ್ಡವನಾಗಿ ಕಾಣುತ್ತಿದ್ದಾನೆ. ಅವನ ಬೆಳಕಿನ ಪ್ರಕಾಶವೂ ಹೆಚ್ಚಿದೆ. ಇಷ್ಟು ದಿನ ಸಾಧಾರಣ ಟ್ಯೂಬ್‍ಲೈಟಿನಂತೆ ಬೆಳಕು ಬೀರುತ್ತಿದ್ದ ಈ ಮಹಾತ್ಮ ಇವತ್ತು ಮಾತ್ರ ಸಾವಿರ ವೋಲ್ಟಿನ ನಿಯಾನ್ ಬಲ್ಬಿನಂತೆ ಮಾದಕವಾಗಿ ಹೊಳೆಯುತ್ತಿದ್ದಾನೆ. ಏನಿದರ ಗುಟ್ಟು? ಹಿಂದೆಂದಿಗಿಂತ ಈ ಯಪ್ಪ ಇವತ್ತು ಮಾತ್ರ ಇಷ್ಟೊಂದು ಬೆಳೆಯಲು ಕಾರಣವೇನು? ಜನ ಕುತೂಹಲಗೊಂಡಿದ್ದಾರೆ. ಸುದ್ದಿವಾಹಿನಿಗಳು “ಇದು ಕಳೆದ ಎಪ್ಪತ್ತು ವರ್ಷಗಳಲ್ಲೇ ಅತ್ಯಂತ ದೊಡ್ಡ ಚಂದ್ರ! ಸೂಪರ್‍ಮೂನ್! ಇಂಥ ಘಟನೆ ಹಿಂದೆ ನಡೆದಿಲ್ಲ, ಮುಂದೆ ನಡೆಯಲಾರದು! ಇದರಿಂದ ಏನೇನು ಅನಾಹುತಗಳಾಗಬಹುದು? ಸುನಾಮಿ ಏಳಬಹುದೇ? ಭೂಕಂಪಗಳಾಗಿ ಆಸ್ತಿಪಾಸ್ತಿ ಹಾನಿಯಾಗಬಹುದೆ? ಸಮುದ್ರದ ನೀರು ನೂರಾರು ಕಿಲೋಮೀಟರ್ ಒಳನುಗ್ಗಿ ತೀರ ಪ್ರದೇಶಗಳೆಲ್ಲ ಮುಳುಗಿ ಹೋಗಬಹುದೆ?” ಎನ್ನುತ್ತ ಜನರನ್ನು ನಿಜಕ್ಕೂ “ಲ್ಯೂನಾಟಿಕ್” ಸ್ಥಿತಿಗೆ ತಳ್ಳಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿವೆ. ನರೇಂದ್ರ ಮೋದಿಯ ಭಕ್ತರು ಯಾರೋ ಮೋದಿಗೂ ಸೂಪರ್ ಚಂದ್ರನಿಗೂ ಸಂಬಂಧ ಕಲ್ಪಿಸಿ ಹಿಗ್ಗಿದ ಚಂದ್ರನ ಪ್ರಭಾವಳಿಯನ್ನು ಮೋದಿಯ ತಲೆಗಿಟ್ಟು ಖುಷಿ ಪಟ್ಟಿದ್ದಾರೆ. ಚಂದ್ರನನ್ನು ನೋಡುವ ಖುಷಿ, ನೋಡಿದರೆ ಗಣೇಶ ಕೊಟ್ಟ ಶಾಪದಂತೆ ಅಪವಾದ ಹೊರಬೇಕಾದೀತೇ ಎಂಬ ಆತಂಕ, ಕಳೆದ ಎಪ್ಪತ್ತು ವರ್ಷಗಳಲ್ಲಿ ನಡೆಯದ ವಿದ್ಯಮಾನವೊಂದನ್ನು ಕಣ್ತುಂಬಿಸಿಕೊಳ್ಳುವ ಉತ್ಸಾಹ, ಲೋಕದಲ್ಲಿ ಏನೇನು ಅನಾಹುತಗಳಾಗಿ ಹೋದಾವೋ ಎಂಬ ಪುಕುಪುಕು ಎಲ್ಲವೂ ಇದೆ ಈ ಸೂಪರ್‍ಮೂನ್ ಪೌರ್ಣಿಮೆಯ ದಿನ.

ಚಂದ್ರ ಭೂಮಿಗೆ ಸುತ್ತು ಹಾಕುತ್ತಾನೆ. ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಬರುವುದರಿಂದ, ಭೂಮಿಯನ್ನು ಬಿಟ್ಟು ಅರೆಗಳಿಗೆಯೂ ಇರದ ಈ ಚಂದ್ರ ಕೂಡ, ಬಾಣಲೆಯಲ್ಲಿ ಎಣ್ಣೆಯ ಮೇಲೆ ಜಹಾಂಗೀರಿ ಮೂಡಿಸಿದಂತೆ ಸೂರ್ಯನಿಗೂ ಒಂದು ಉದ್ದಂಡ ಪ್ರದಕ್ಷಿಣೆ ಹಾಕುತ್ತಾನೆ. ಭೂಮಿ, ಸೌರಮಂಡಲದ ಇತರ ಗ್ರಹಗಳು ಎಲ್ಲವೂ ತಮ್ಮ ಪ್ರದಕ್ಷಿಣೆ ಹಾಕುವುದು ಕೈವಾರದಲ್ಲಿ ಬಿಡಿಸಿದ ವೃತ್ತದಂತಲ್ಲ. ಬದಲಿಗೆ ಕುಡುಕನೊಬ್ಬ ರಸ್ತೆಯಳೆಯುತ್ತ ಅಡ್ಡಾದಿಡ್ಡಿ ನಡೆಯುತ್ತ ಹಾಕಿದ ದೀರ್ಘವೃತ್ತದಂತೆ. ಅಂದರೆ ಭೂಮಿ ಸೂರ್ಯನಿಗೆ ಕೆಲವೊಮ್ಮೆ ತೀರ ಹತ್ತಿರ ಬಂದು ಹಾಯ್ ಹೇಳುತ್ತದೆ. ಇನ್ನು ಕೆಲವೊಮ್ಮೆ ಮುನಿಸಿಕೊಂಡ ಹೆಂಡತಿಯಂತೆ ದೂರ ಸರಿಯುತ್ತದೆ (ಅಂದ ಹಾಗೆ, ಭೂಮಿ ಸೂರ್ಯನ ಸಮೀಪ ಬಂದಾಗ ಬೇಸಿಗೆ, ದೂರ ಹೋದಾಗ ಚಳಿಗಾಲ ಎಂಬ ಕಲ್ಪನೆ ಎಷ್ಟೋ ಜನರಲ್ಲಿದೆ. ಸಂಪೂರ್ಣವಾಗಿ ತಪ್ಪು ಕಲ್ಪನೆ ಅದು). ವಸುಂಧರೆ ಹೇಗೆ ಸೂರ್ಯನನ್ನು ಅಂಡಾಕಾರದ ದೀರ್ಘವೃತ್ತದಲ್ಲಿ ಸುತ್ತುತ್ತ ಪತಿಭಕ್ತಿ ತೋರಿಸುತ್ತಾಳೋ, ಚಂದ್ರ, ಆಕೆಯ ಮಗ, ಅಮ್ಮನ ನಡೆಯನ್ನು ತಾನೂ ಮೈಗೂಡಿಸಿಕೊಳ್ಳದೆ ಬಿಟ್ಟಾನೇ? ಅವನು ಭೂಮಿಯನ್ನು ಸುತ್ತುವುದು ಕೂಡ ನಿಖರವಾದ ವೃತ್ತಾಕಾರದಲ್ಲಲ್ಲ. ಆತ ತನ್ನ ಅಜಮಾಸು 28 ದಿನಗಳ ಒಂದು ಪರ್ಯಟನೆಯಲ್ಲಿ ಒಮ್ಮೆ ಭೂಮಿಗೆ ಹತ್ತಿರವಾಗುತ್ತಾನೆ; ಇನ್ನೊಮ್ಮೆ ದೂರ ಸರಿಯುತ್ತಾನೆ. ಈ ಹತ್ತಿರ ಮತ್ತು ದೂರದ ನಡುವಿನ ಅಂತರ 30,000 ಮೈಲಿಗಳಷ್ಟಿರುತ್ತದೆ!

ಸರಿ, ಈಗ ನಮ್ಮ ಮನಸ್ಸಿನಲ್ಲಿ ಒಂದು ಚಿತ್ರ ಸ್ಪಷ್ಟವಾಯಿತು. ಸೂರ್ಯ, ಆತನ ಸುತ್ತ ಒಂದು ದೀರ್ಘವೃತ್ತದಲ್ಲಿ ಪರಿಭ್ರಮಣ ಮಾಡುತ್ತಿರುವ ಭೂಮಿ. ಭೂಮಿಯ ಸುತ್ತ ಮತ್ತೆ ಅಂಡಾಕಾರದ ವೃತ್ತದಲ್ಲಿ ಪ್ರದಕ್ಷಿಣೆ ಬರುತ್ತಿರುವ ಚಂದ್ರ. ಅಂದರೆ ಭೂಮಿಯು ಸೂರ್ಯನ ಸುತ್ತ ಅದೇ ಟ್ರ್ಯಾಕಿನಲ್ಲಿ ಮತ್ತೆ ಮತ್ತೆ ಸುತ್ತುತ್ತ, ಭೂಮಿಯ ಸುತ್ತಲಿನ ಒಂದು ನಿರ್ದಿಷ್ಟ ಟ್ರ್ಯಾಕಿನಲ್ಲಿ ಚಂದ್ರ ಸುತ್ತುತ್ತ… ಒಟ್ಟಲ್ಲಿ ದೈವಪ್ರೇರಣೆಯಿಂದ ಎಲ್ಲ ಸುಸೂತ್ರವಾಗಿ ನಡೆಯುತ್ತಿದೆ. ಹಾಗೆ ನೀವಂದುಕೊಂಡಿದ್ದರೆ ಅದು ತಪ್ಪು! ಶಾಲೆಯಲ್ಲಿ ಮೇಷ್ಟ್ರು ತಮ್ಮ ಕೆಲಸ ಸುಲಭವಾಗಲಿ ಎಂದು ನಮಗೆ ಹಾಗೆ ಹೇಳಿಕೊಟ್ಟಿರಬಹುದು. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಭೂಮಿ ತಾನು ಒಮ್ಮೆ ಸುತ್ತಾಡಿ ಒಂದು ವರ್ಷದಲ್ಲಿ ಮೂಡಿಸಿದ ಪಥದಲ್ಲಿ ಮರು ವರ್ಷ ಹೋಗುವುದಿಲ್ಲ! ಸರಳವಾಗಿ ಹೇಳಬೇಕೆಂದರೆ ಭೂಮಿ ಹೋದ ದಾರಿಯಲ್ಲಿ ಹಿಂದಿನಿಂದ ಒಬ್ಬ ಪೇಂಟ್ ಹಿಡಿದು ಗಾಳಿಯಲ್ಲಿ ಗೆರೆ ಎಳೆಯುತ್ತಾ ಬರುವ ಸೌಕರ್ಯ ಇದೆಯೆನ್ನಿ. ಆತ ರಸ್ತೆಗೆ ಬಣ್ಣ ಬಳಿದ ಹಾಗೆ ಈ ಭೂಪಥಕ್ಕೆ ಬಣ್ಣ ಬಳಿದು, ಮುಂದಿನ ವರ್ಷಕ್ಕೆ ರಸ್ತೆ ತಯಾರಿಸಿ ಕೂತರೆ, ಆ ಎರಡನೇ ವರ್ಷ ಭೂಮಿ ತಾನು ಹಿಂದೆ ನಡೆದ ದಾರಿಯನ್ನು ಹಾಗೇ ಬಿಟ್ಟು ಹೊಸ ಪಥ ಆಯ್ದುಕೊಳ್ಳುತ್ತದೆ! ಅದಾಗಿ ಮೂರನೇ ವರ್ಷಕ್ಕೆ ಅದರ ಪಥ ಮತ್ತೆ ಬದಲಾಗುತ್ತದೆ! ಭೂಮಿಯ ಈ ಬಗೆಯ ಪಥ ಬದಲಾವಣೆಯನ್ನು ಮನಸ್ಸಿನಲ್ಲೇ ಗೆರೆ ಎಳೆಯುತ್ತಾ ಕಲ್ಪಿಸಿಕೊಂಡು ಹೋದರೆ ಅದು ಹಲವಾರು ಎಸಳುಗಳು ಒಂದರ ಮೇಲೊಂದು ಅಂಟಿ ಕೂತು ಹರಡಿರುವ ಜೀನಿಯಾದಂತಿರುತ್ತದೆ.

ಭೂಮಿಯ ಕತೆ ಹೇಗೋ ಹಾಗೆಯೇ ಮಗರಾಯನ ಕತೆಯೂ ಕೂಡ! ಚಂದ್ರ ಕೂಡ ಭೂಮಿಗೆ ನಿರ್ದಿಷ್ಟವಾದ ರಸ್ತೆಯಲ್ಲೇ ಪ್ರತಿ ತಿಂಗಳು ಸುತ್ತು ಹಾಕುವುದಿಲ್ಲ. ಒಮ್ಮೆ ಹೋಗಿ ಬಂದ ದಾರಿಯಲ್ಲಿ ಆತ ಅಷ್ಟು ಸುಲಭದಲ್ಲಿ ಮರಳಿ ಹೋಗುವವನಲ್ಲ. ಹಾಗಂತ ಅದು ಅಡ್ಡಾದಿಡ್ಡಿಯಾದ ಅಸ್ತವ್ಯಸ್ತ ನಡೆಯೂ ಅಲ್ಲ. ಪ್ರತಿ ಸಲವೂ ಚಂದ್ರ ಭೂಮಿಯನ್ನು ದೀರ್ಘವೃತ್ತಾಕಾರದಲ್ಲೇ ಸುತ್ತುತ್ತಾನೆ. ಆದರೆ ಪ್ರತಿ ಸಲ ತನ್ನ ಪಥ ಹಿಂದಿನದ್ದಕ್ಕಿಂತ ತುಸು ಭಿನ್ನವಾಗಿರುವಂತೆ ನೋಡಿಕೊಳ್ಳುತ್ತಾನೆ. ಕೆಲವೊಮ್ಮೆ ಆತನ ದೀರ್ಘವೃತ್ತದ ಉದ್ದಗಲಗಳು ಕುಗ್ಗುತ್ತವೆ, ಕೆಲವೊಮ್ಮೆ ತುಸು ಹಿಗ್ಗುತ್ತವೆ. ಹೀಗೆಲ್ಲ ಯಾಕಾಗುತ್ತದೆ ಎಂದರೆ ಚಂದ್ರ ಭೂಮಿಯ ಬಗಲಲ್ಲಿರುವ ಕಂದನಾದರೂ ಆತನ ಮೇಲೆ ಸೌರಮಂಡಲದ ಉಳಿದ ಗ್ರಹಚಾರರು ತಮ್ಮ ಪ್ರಭಾವ ಬೀರುತ್ತಲೇ ಇರುತ್ತಾರೆ. ಭೂಮಿಗೆ ಪ್ರದಕ್ಷಿಣೆ ಹಾಕುತ್ತಿರುವಾಗಲೇ ಚಂದ್ರ ಅಕ್ಕಪಕ್ಕದ ಶುಕ್ರ, ಮಂಗಳ, ದೂರದ ಗುರು, ಇನ್ನಷ್ಟು ದೂರದಲ್ಲಿರುವ ಸೂರ್ಯ, ಆಗಾಗ ತಮ್ಮಷ್ಟಕ್ಕೆ ಬಂದು ಹೋಗುವ ದೂರದ ಅತಿಥಿಗಳಾದ ಧೂಮಕೇತುಗಳು – ಹೀಗೆ ಹಲವು ಕಾಯಗಳ ಗುರುತ್ವಕ್ಕೂ ಒಳಗಾಗುವುದರಿಂದ ಆತನ ಪಥ ನಾವು ಪೇಪರಲ್ಲಿ ಕೊರೆದಿಟ್ಟಂಥ ಗಟ್ಟಿ ಹೆದ್ದಾರಿಯಾಗಿರುವುದು ಸಾಧ್ಯವಿಲ್ಲ.

ಚಂದ್ರ ಭೂಮಿಗೆ ಸುತ್ತು ಹಾಕುತ್ತ ಒಮ್ಮೆ ದೂರ ಸರಿಯುತ್ತಾನೆ ಎಂದೆನಲ್ಲ? ಅದನ್ನು ಆಪೋಜಿ ಎನ್ನುತ್ತಾರೆ. ಕೃಷ್ಣ ಪಕ್ಷದ ಚತುರ್ಥಿಯಿಂದ ಶುಕ್ಲ ಪಕ್ಷದ ತದಿಗೆಯವರೆಗಿನ ಅವಧಿ ಎಂದು ಪರಿಗಣಿಸಬಹುದು. ಇನ್ನು ಚಂದ್ರ ಭೂಮಿಯ ತೀರ ಸಮೀಪಕ್ಕೆ ಬಂದಾಗ, ಆ ಅವಧಿಯನ್ನು ಪೆರಿಜಿ ಎನ್ನುತ್ತಾರೆ. ಶುಕ್ಲ ಪಕ್ಷದ ಚತುರ್ಥಿಯಿಂದ ಕೃಷ್ಣ ಪಕ್ಷದ ತದಿಗೆಯವರೆಗಿನ ಅವಧಿ ಎನ್ನಬಹುದು. ಚಂದ್ರ ಆಪೊಜಿಯಲ್ಲಿದ್ದಾಗ, ಸೂರ್ಯನ ಬೆಳಕು ಆತನ ಮೇಲೆ ಸಂಪೂರ್ಣವಾಗಿ ಮತ್ತು ನೇರವಾಗಿ ಬೀಳುವುದರಿಂದ ಚಂದ್ರನ ಇರವು ನಮಗೆ ತಿಳಿಯದಂತಹ ಸನ್ನಿವೇಶ. ಅದೇ ಅಮವಾಸ್ಯೆ. ಆತ ತನ್ನ ಪಥದಲ್ಲಿ ಮುಂದುವರಿಯುತ್ತಾ ಹೋದಂತೆ ಸೂರ್ಯನ ಬೆಳಕು ಆತನ ಮೇಲೆ ಬಿದ್ದು ಪ್ರತಿಫಲಿಸಿ ಭೂಮಿಗೆ ಬಡಿಯುತ್ತ ಬಗೆಬಗೆಯ ವಿನ್ಯಾಸಗಳನ್ನು ಮೂಡಿಸುತ್ತದೆ. ಪಾಡ್ಯದಲ್ಲಿ ಅವನೊಂದು ಬೆಳ್ಳಿಗೆರೆ. ಬಿದಿಗೆ, ತದಿಗೆ, ಚತುರ್ಥಿ ಎನ್ನುತ್ತಾ ಮುಂದೆ ಬಂದಂತೆ ಆತನ ದೇಹದ ಅಂಗಾಂಗಗಳು ಹೆಚ್ಚು ಸ್ಫುಟವಾಗುತ್ತಾ ಹೋಗುತ್ತವೆ. ಆತ ಭೂಮಿಗೆ ತೀರ ಹತ್ತಿರ ಬಂದಾಗ, ಸೂರ್ಯ – ಭೂಮಿ – ಚಂದ್ರ ಒಂದೇ ಗೆರೆಯಲ್ಲಿ ಬಂದು, ಸೂರ್ಯನ ಬೆಳಕೆಲ್ಲ ಚಂದ್ರನ ಅರ್ಧ ಮುಖದ (ಅಂದರೆ ಭೂಮಿಗೆ ಕಾಣುವ ವೃತ್ತಾಕಾರದ ಮುಖ) ಮೇಲೆ ಬಿದ್ದು ಭೂಮಿಗೆ ಪ್ರತಿಫಲಿಸುತ್ತದೆ. ಇದೇ ಪೌರ್ಣಿಮೆ. ಆಗಲೇ ಹೇಳಿದಂತೆ ಚಂದ್ರನ ಪ್ರತಿಯೊಂದು ದೀರ್ಘವೃತ್ತವೂ ಹಿಂದಿನ ಪಥಕ್ಕಿಂತ ಭಿನ್ನವಾಗಿರುವುದರಿಂದ, ಪ್ರತಿ ಸಲದ ಹುಣ್ಣಿಮೆಯಲ್ಲಿ ಆತ ಮತ್ತು ಭೂಮಿಯ ನಡುವಿನ ಅಂತರ ಭಿನ್ನವಾಗಿರುತ್ತವೆ. ಕೆಲವೊಮ್ಮೆ ಆ ದೀರ್ಘವೃತ್ತ ಕಿರಿದಾಗಿ ಚಂದ್ರ ಭೂಮಿಯ ತೀರ ಹತ್ತಿರಕ್ಕೆ ಬಂದು ಬಿಡುತ್ತಾನೆ. ಗಾಬರಿ ಬೀಳುವ ಅಗತ್ಯವೇನೂ ಇಲ್ಲ! ಹಾಗೆ “ತೀರ ಹತ್ತಿರ” ಎಂದಾಗಲೂ ಭೂಮಿಯಿಂದ ಮೂರೂವರೆ ಲಕ್ಷ ಕಿಲೋಮೀಟರ್‍ಗಳಷ್ಟು ದೂರದಲ್ಲೇ ಇರುತ್ತಾನೆನ್ನಿ! “ಅಷ್ಟೊಂದು ದೂರ ನಿಂತರೂ ಸ್ವಲ್ಪ ಹತ್ತಿರ ಬಂದ” ಎಂಬುದಷ್ಟೇ ನಮಗೆ ಸಮಾಧಾನ.

ಭೂಮಿಯಲ್ಲಿ ನಾವು ವರ್ಷಕ್ಕೆ ಕನಿಷ್ಠ ಹನ್ನೆರಡು ಹುಣ್ಣಿಮೆ, ಅಷ್ಟೇ ಸಂಖ್ಯೆಯ ಅಮವಾಸ್ಯೆ ನೋಡುತ್ತೇವೆ. ಪ್ರತಿ 27 ದಿನ, 7 ಗಂಟೆ, 43 ನಿಮಿಷಗಳಲ್ಲಿ ಚಂದ್ರ ತನ್ನ ಒಂದು ಪ್ರದಕ್ಷಿಣೆಯನ್ನು ಮುಗಿಸುವುದರಿಂದ, ನಾವು ವರ್ಷಕ್ಕೆ 13 ಹುಣ್ಣಿಮೆ ನೋಡುವ ಅವಕಾಶವೂ ಇರುತ್ತದೆ. ಚಂದ್ರನ ಒಂದು ಪ್ರದಕ್ಷಿಣಾವಧಿಯಲ್ಲಿ ತಲಾ ಒಂದು ಹುಣ್ಣಿಮೆ ಮತ್ತು ಒಂದು ಅಮವಾಸ್ಯೆ ಜರುಗುತ್ತದೆ. ವರ್ಷದ ಎಲ್ಲ 13 ಹುಣ್ಣಿಮೆಗಳೂ ಒಂದೇ ರೀತಿ ಇರುವುದಿಲ್ಲ. ಕೆಲವು ಹುಣ್ಣಿಮೆಯಲ್ಲಿ ಚಂದ್ರನ ಮುಖ ದೀಪಾವಳಿಯ ಬೋನಸ್ ಸಿಕ್ಕಿದ ಕಾರ್ಮಿಕನಂತೆ ಅಗಲಗೊಂಡಿರುತ್ತದೆ. ಇನ್ನು ಕೆಲವೊಮ್ಮೆ ಎಷ್ಟು ದುಡಿದರೂ ಬಾಸಿನಿಂದ “ಅಂಡರ್ ಫರ್ಮಾಮೆನ್ಸ್” ಎಂಬ ಬಿರುದು ಪಡೆದ ಹತಾಶ ನೌಕರನಂತಿರುತ್ತದೆ. ಇವನ್ನು ಸೂಕ್ಷ್ಮವಾಗಿ ಗುರುತಿಸಿದ ರಿಚರ್ಡ್ ನಾಲಿ ಎಂಬ ಒಬ್ಬ ಅಮೆರಿಕನ್ ಜ್ಯೋತಿಷಿ ವರ್ಷದಲ್ಲಿ ಸಂಭವಿಸುವ ನಾಲ್ಕೈದು ಹುಣ್ಣಿಮೆಗಳಲ್ಲಿ ಚಂದ್ರನ ಗಾತ್ರ, ಬೆಳಕು ಎರಡೂ ಹೆಚ್ಚಿರುತ್ತವೆ ಎಂದು ಹೇಳಿದ. ಹೇಳಿದ ಎಂದರೆ ತಪ್ಪಾಗುತ್ತದೆ. ಯಾಕೆಂದರೆ ಚಂದ್ರನ ಗಾತ್ರ-ಬೆಳಕುಗಳಲ್ಲಿ ಆ ಬಗೆಯ ಬದಲಾವಣೆಗಳು ಆಗುವುದು ಖಗೋಲ ತಜ್ಞರಿಗೆ ಗೊತ್ತಿದ್ದ ವಿಷಯವೇ. ಆದರೆ ರಿಚರ್ಡ್ ಆ ದೊಡ್ಡ ಗಾತ್ರದ ಚಂದ್ರನನ್ನು ಸೂಪರ್ ಮೂನ್ ಎಂದು ಕರೆದ, ಅಷ್ಟೆ. ಇದು ನಡೆದದ್ದು 1979ರಲ್ಲಿ. ತನ್ನ ಯಾವುದೋ ರಾಶಿ ಭವಿಷ್ಯ ಬರೆಯುವ ಕಾಲಮ್‍ನಲ್ಲಿ ಆತ ಈ ಪದಬಳಕೆ ಮಾಡಿರಬೇಕು.

ರಿಚರ್ಡ್ ಸೂಪರ್ ಮೂನ್ ಎಂದು ಬರೆದನಾದರೂ ನಲವತ್ತು ವರ್ಷಗಳ ಕಾಲ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೇ ಹೋಗಲಿಲ್ಲ. ಆದರೆ 2011ರ ಮಾರ್ಚ್ 19ರಂದು ಆ ವರ್ಷದ ಅತ್ಯಂತ ನಿಕಟತಮ ಹುಣ್ಣಿಮೆ ನಡೆಯುವುದೆಂದು ಯಾರೋ ಕಂಡು ಹಿಡಿದರು. ಅಥವಾ ಅಂತಹ ಲೆಕ್ಕಾಚಾರಗಳನ್ನೆಲ್ಲ ಇಟ್ಟುಕೊಂಡಿರುವ ಖಗೋಲತಜ್ಞರು ಯಾರಾದರೂ ಆ ಮಾಹಿತಿಯನ್ನು ಕೊಟ್ಟಿರಬೇಕು. “ಚಂದ್ರ ಈ ಹಿಂದಿಗಿಂತ ಭೂಮಿಗೆ ಹೆಚ್ಚು ಹತ್ತಿರದಲ್ಲಿರುತ್ತಾನೆ” ಎಂಬ ಈ ಮಾತು ಮಾಧ್ಯಮಕ್ಕೆ ತಲುಪಿತು. ಇದು ಒಂದು ಸಹಜ ವಿದ್ಯಮಾನ ಎಂಬುದನ್ನು ಅರಿಯದ ಪತ್ರಕರ್ತರು “ಸೂಪರ್ ಮೂನ್” ಎಂದು ಕರೆದೇ ಬಿಟ್ಟರು. ಕ್ಯಾಚಿ ಎನ್ನಿಸುವ ಶಬ್ದಗಳನ್ನು ಜೇಡನಂತೆ ದಬಕ್ಕನೆ ಹಿಡಿದು ಬಿಡುವ ಆಧುನಿಕರಿಗೆ ಆ ಪದಪುಂಜವಷ್ಟೇ ಸಾಕಾಯಿತು. ಎರಡು-ಮೂರು ದಿನಗಳಲ್ಲಿ ಜಗತ್ತಿನ ಎಲ್ಲ ಪತ್ರಿಕೆಗಳೂ ಸೂಪರ್ ಮೂನ್ ಬಗ್ಗೆ ಬರೆದಿದ್ದವು; ಜನರನ್ನು ತುದಿಗಾಲಲ್ಲಿ ನಿಲ್ಲಿಸಿ ಬಿಟ್ಟಿದ್ದವು! ಸಾಧಾರಣವಾಗಿ ಚಂದ್ರ ಭೂಮಿಯಿಂದ ದೂರಕ್ಕೆ (ಅಂದರೆ ಅಮವಾಸ್ಯೆ) ಹೋದಾಗ, ಎರಡು ಕಾಯಗಳ ನಡುವಿನ ಅಂತರ 4,00,000 ಕಿಲೋಮೀಟರ್‍ಗಳನ್ನು ಮೀರುತ್ತದೆ. ಆದರೆ ಹುಣ್ಣಿಮೆಯ ಸಮಯದಲ್ಲಿ ಅಂತರ 3,57,000ರಿಂದ 3,70,000 ಕಿಲೋಮೀಟರ್‍ಗಳ ನಡುವೆ ಇರುತ್ತದೆ. ಈ ಸಮೀಪ-ದೂರಗಳ ಲೆಕ್ಕಾಚಾರಗಳನ್ನೆಲ್ಲ ಅಳೆದು ತೂಗಿ ಸರಾಸರಿ ದೂರ ತೆಗೆದರೆ ಅದು 3,84,400 ಕಿಲೋಮೀಟರ್‍ಗಳು. ಚಂದ್ರ ತನ್ನ ಸಮೀಪತಮ ಪ್ರಯಾಣದ ಸಂದರ್ಭದಲ್ಲಿ ಭೂಮಿಗೆ ಇನ್ನಷ್ಟು ಹತ್ತಿರನಾಗಿ ಅಂತರ 3,57,000 ಕಿಲೋಮೀಟರ್‍ಗಿಂತಲೂ ಕಡಿಮೆಯಾದರೆ ಅದು ಸೂಪರ್ ಮೂನ್ ಅನ್ನು ಹುಟ್ಟಿಸಬಹುದು. ಈ ವರ್ಷದ ನವೆಂಬರ್ 14ರಂದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:22ಕ್ಕೆ ಚಂದ್ರ ಭೂಮಿಯ ಅತ್ಯಂತ ಸಮೀಪ ಬಂದು ಬಿಡುತ್ತಾನೆ. ಆಗ ಎರಡೂ ಕಾಯಗಳ ನಡುವಿನ ಅಂತರ 3,56,509 (+,-2) ಕಿಲೋಮೀಟರ್‍ಗಳು. ಸರಾಸರಿ ಸಾಮೀಪ್ಯಕ್ಕಿಂತ 30,000 ಕಿಲೋಮೀಟರ್ ಹೆಚ್ಚಿನ ಸಾಮೀಪ್ಯವಾದ್ದರಿಂದ ಚಂದ್ರ ಉಳಿದ ಪೌರ್ಣಮಿಗಳಿಗಿಂತ 14% ಹೆಚ್ಚು ಬೃಹತ್ತಾಗಿ ಕಾಣುತ್ತಾನೆ. ಅದೇ ಕಾರಣದಿಂದ ಆತನ ಪ್ರಕಾಶ 30%ರಷ್ಟು ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ ಆತ ತೇಜಸ್ವೀ ಪೂರ್ಣಚಂದ್ರನಾಗುತ್ತಾನೆ. ಕಳೆದ 68 ವರ್ಷಗಳಲ್ಲಿ ಚಂದ್ರ ತನ್ನ ತಾಯಿ ವಸುಂಧರೆಗೆ ಇಷ್ಟೊಂದು ಸಮೀಪನಾದದ್ದೇ ಇಲ್ಲ ಎಂಬುದು ಈ ಸೂಪರ್ ಮೂನ್‍ನ ವಿಶೇಷ. 1948ರ ಜನವರಿ 26ರಂದು ಚಂದ್ರ ಇಷ್ಟು ಹತ್ತಿರ ಬಂದು ಸರಿದಿದ್ದನಂತೆ. ಇನ್ನು ಮುಂದಿನ 18 ವರ್ಷಗಳ ಕಾಲ ಈ ರೆಕಾರ್ಡ್ ಹಾಗೇ ಇರುತ್ತದೆ. 2034ನೇ ಇಸವಿ ನವೆಂಬರ್ 25ನೇ ತಾರೀಖು ಆತ ಭೂಮಿಗೆ 3,56,446 ಕಿಲೋಮೀಟರ್ ದೂರದಲ್ಲಿರುತ್ತ ಈಗ ಮಾಡಿರುವ ದಾಖಲೆಯನ್ನು ಸ್ವತಃ ಮುರಿದು ಹಾಕಲಿದ್ದಾನೆ. ಆದರೂ ಇವೆರಡೂ ಈ ಶತಮಾನದ ದಾಖಲೆಗಳೇನಲ್ಲ. ಯಾಕೆಂದರೆ 2056ನೇ ಇಸವಿಯ ಡಿಸೆಂಬರ್ 6ರಂದು ಆತ ಭೂಮಿಗೆ ಅದೆಷ್ಟು ಹತ್ತಿರ ಬರುತ್ತಾನೆಂದರೆ ಟೇಪು ಹಿಡಿದು ಅಳೆದರೆ ಆ ದೂರ 3,56,425 ಕಿಲೋಮೀಟರ್‍ಗಳಾಗಿರುತ್ತವೆ. 1930ರ ಜನವರಿ 14ರಂದು ಆತ 3,56,397 ಕಿಲೋಮೀಟರ್ ದೂರವಿದ್ದ. 2257ರ ಜನವರಿ 1ನೇ ತಾರೀಖು ಅವನ ದೂರ ಭೂಮಿಯಿಂದ, 3,56,371 ಕಿಲೋಮೀಟರ್‍ಗಳು. ಇದು ಸದ್ಯಕ್ಕೆ ನಮಗೆ ಕಾಣ ಸಿಗುತ್ತಿರುವ ಮುಂದಿನ ಮುರಿಯಲಾಗದ ದಾಖಲೆ.

ಆಗಲೇ ಹೇಳಿದಂತೆ ವರ್ಷದಲ್ಲಿ ಒಂದಲ್ಲ ನಾಲ್ಕೈದು ಸೂಪರ್ ಮೂನ್‍ಗಳು ಬಂದು ಹೋಗುವುದಿದೆ. ಈ ವರ್ಷ ಅಂತಹ ಭಾಗ್ಯ ಮೂರು ಹುಣ್ಣಿಮೆಗಳಿಗೆ. ಅಕ್ಟೋಬರ್ 16, ನವೆಂಬರ್ 14 ಮತ್ತು ಡಿಸೆಂಬರ್ 16 – ಈ ಮೂರೂ ತೇಜಸ್ವೀ ಹುಣ್ಣಿಮೆ, ಅರ್ಥಾತ್ ಸೂಪರ್ ಮೂನ್‍ಗಳೇ. ಆದರೆ ಈ ಮೂರರಲ್ಲಿ ನವೆಂಬರ್‍ನದ್ದು ಹೆಚ್ಚು ಸಮೀಪ. ಹಾಗಾಗಿ ಹೆಚ್ಚು ಗಾತ್ರ, ಹೆಚ್ಚು ಪ್ರಕಾಶ. ಜೊತೆಗೆ ಹೆಚ್ಚು ಪ್ರಚಾರವೂ ಕೂಡ. 68 ವರ್ಷಗಳ ದಾಖಲೆ ಮುರಿವ ಸಾಮೀಪ್ಯ ಇದು ಎಂಬುದೇ ಅಗ್ಗಳಿಕೆ. ಇಂಥ ವಿದ್ಯಮಾನಗಳು ಆಕಾಶದಲ್ಲಿ ಜರುಗಿದಾಗೆಲ್ಲ ಟಿವಿ ಜ್ಯೋತಿಷಿಗಳು ಚಿಗುರಿಕೊಂಡು ಬಿಡುತ್ತಾರೆ. ಸೂಪರ್ ಮೂನ್‍ಗೂ ಭೂಮಿಯ ಸುನಾಮಿ, ಬಿರುಗಾಳಿ, ಭೂಕಂಪ, ಕಾಳ್ಗಿಚ್ಚು, ಆಡಳಿತ ಪಕ್ಷದ ನಿರ್ಲಜ್ಜತನ, ವಿರೋಧಪಕ್ಷಗಳ ನಿಶ್ಚೇಷ್ಟಿತನ – ಎಲ್ಲದಕ್ಕೂ ತಳುಕು ಹಾಕಿ ಬಿಡುತ್ತಾರೆ. ಒಂದಷ್ಟು ಶಾಂತಿ ಹೋಮಗಳನ್ನು ಮಾಡಿಸಿ ಚಂದ್ರನಂತೆ ತಮ್ಮ ಜೇಬುಗಳನ್ನೂ ಹಿಗ್ಗಿಸಿಕೊಳ್ಳುತ್ತಾರೆನ್ನಿ! ಸೂಪರ್ ಮೂನ್ ಎಂಬ ಪರಿಕಲ್ಪನೆ ಜನಪ್ರಿಯವಾಗಿರುವುದೇ ಕಳೆದ ಐದು ವರ್ಷಗಳಿಂದೀಚೆಗೆ. ಆದರೆ ಇದಕ್ಕಿಂತ ಹಿಂದೆ ಸಾವಿರಾರು ಅಲ್ಲ, ಲಕ್ಷಾಂತರ ವರ್ಷಗಳಿಂದ ವರ್ಷಕ್ಕೆ ನಾಲ್ಕೈದರಂತೆ ಸೂಪರ್ ಮೂನ್‍ಗಳು ಆಗಿ ಹೋಗುತ್ತಲೇ ಇವೆ. ಚಂದ್ರ ಮಾಮೂಲಿ ಹುಣ್ಣಿಮೆಯ ದಿನಕ್ಕಿಂತ ಈ ದಿನಗಳಲ್ಲಿ ನಮಗೆ 1,000 ಕಿಲೋಮೀಟರ್‍ಗಳಷ್ಟು ಹತ್ತಿರವಿರುತ್ತಾನೆ ಅಷ್ಟೆ. ನಮ್ಮಿಬ್ಬರ ಮೂರೂವರೆ ಲಕ್ಷ ಕಿಲೋಮೀಟರ್‍ಗಳ ಅಂತರದಲ್ಲಿ ಈ ಸಾವಿರ ಯಾವ ಬದಲಾವಣೆಯನ್ನೂ ತರದು. ಹೆಚ್ಚೆಂದರೆ ಸಮುದ್ರದ ಉಬ್ಬರ ಒಂದೆರಡು ಅಡಿ ಹೆಚ್ಚಬಹುದು. ಈ ಉಬ್ಬರದಿಂದ ಬೀಸುವ ಗಾಳಿ ತುಸು ಜೋರಾಗಿ ಬೀಸಬಹುದು. 2011ರ ಮಾರ್ಚ್ 19, 2012ರ ಮೇ 6, 2013ರ ಜೂನ್ 23, 2014ರ ಆಗಸ್ಟ್ 10, 2015ರ ಸೆಪ್ಟೆಂಬರ್ 28 – ಈ ಇಷ್ಟೂ ದಿನಗಳಲ್ಲಿ ಆಯಾ ವರ್ಷಗಳ ಪ್ರಥಮ ಬಹುಮಾನ ಕೊಡಬಹುದಾದ ಸೂಪರ್ ಮೂನ್‍ಗಳು ಆಗಿ ಹೋಗಿದ್ದವು. ಅದರಿಂದ ಸುನಾಮಿ, ಭೂಕಂಪಗಳು ಆಗುವುದೇ ಆದರೆ ಪ್ರತಿ ವರ್ಷವೂ ಕನಿಷ್ಠ ಒಂದು ಅಂಥ ಅನಾಹುತ ವರದಿಯಾಗಬೇಕಿತ್ತು. ಸೂರ್ಯನ ದೇಹ ಬೃಹತ್ತಾಗಿ ಕಂಡಿತೆಂಬ ಮಾತ್ರಕ್ಕೆ ಅನಾಹುತಗಳು ನಡೆಯುವುದಾಗಿದ್ದರೆ ಸೂರ್ಯನ ಮೈಯುಬ್ಬುವ ಉದಯಾಸ್ತಗಳ ಸಮಯದಲ್ಲೂ ಜಗತ್ತಲ್ಲಿ ಅಲ್ಲಕಲ್ಲೋಲಗಳಾಗಬೇಕಿತ್ತು!

ಅದೆಲ್ಲ ಚಿಂತೆ ಬಿಟ್ಹಾಕಿ! ಸುಮ್ಮನೆ ಒಂದು ತೆರೆದ ವಿಶಾಲ ಬಯಲಿನಲ್ಲಿ ಒಂದೊಳ್ಳೆಯ ದೂರದರ್ಶಕವೋ ಒಳ್ಳೆಯ ಕ್ಯಾಮರವೋ ಇಟ್ಟುಕೊಂಡು ಚಂದ್ರನನ್ನು ಕಣ್ತುಂಬಿಸಿಕೊಳ್ಳಿ. ನಾವಾಗಿ ಚಂದ್ರನವರೆಗೆ ಹೋಗಿ ಬರುವ ಪ್ರಾಪ್ತಿ ಪಡೆದಿಲ್ಲ. ಕನಿಷ್ಠ ಅವನೇ ನಮ್ಮ ಬಳಿ ಕೈ ಕುಲುಕಲು ತುಸು ಹತ್ತಿರ ಬಂದಾಗಲಾದರೂ ಕ್ಷೇಮ ಸಮಾಚಾರ ಮಾತಾಡದಿದ್ದರೆ ಏನು ಚೆನ್ನ? ಹ್ಞಾ, ಹಾಗೇನೇ, ಈ ಸೂಪರ್ ಮೂನ್ ನೆಪದಲ್ಲಿ ಬಯಲಿನಲ್ಲಿ ಕ್ಯಾಂಪ್ ಫೈರ್ ಮಾಡುತ್ತೇವೆಂದು ಹೇಳಿ ಗೋಣಿಗಟ್ಟಲೆ ನೋಟು ತಂದು ಸುಡುವುದಕ್ಕೂ ಇದೊಂದು ಸೂಪರ್ ಸಂದರ್ಭ!

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post