X

ಜಾವಾ ಬೈಕಿಗೆ ಮತ್ತೆ ಜೀವ ಬರುತ್ತಿದೆ!


ಪ್ರತಿ ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಒಂದು ಬೈಕ್ ಬರುವ ಶಬ್ಧ. ಅದನ್ನು ಕೇಳಿದ ಮೇಲೆಯೇ ನಿದ್ದೆ ಮಾಡುವುದು. ಗಡಿಯಾರಕ್ಕಿಂತ ಆ ಶಬ್ಧ ಹೆಚ್ಚು ಮುಖ್ಯವಾಗಿತ್ತು. ಆ ಬೈಕ್ ಮಾತ್ತಾವುದು ಅಲ್ಲ, ಒಂದು ಕಾಲದಲ್ಲಿ ಜಗತ್ತಿನ ರಸ್ತೆಗಳಲ್ಲಿ ಮೆರೆದ ಜಾವಾ ಕಂಪನಿಯ ಯೆಜಡಿ ರೋಡ್ ಕಿಂಗ್! ನನಗೆ ಆ ಬೈಕ್ ಯಾವುದು ಎಂಬುದು ಗೊತ್ತಾದಾಗ ಹತ್ತು ವರ್ಷ ವಯಸ್ಸು. ಹತ್ತು ವರ್ಷಗಳ ಕಾಲ ಸತತ ಅದೇ ಶಬ್ಧವನ್ನು ಕೇಳಿ ಕೇಳಿ ಇಂದಿಗೂ ಆ ಯೆಜಡಿ ಬೈಕ್ ಮರೆತು ಹೋಗಿಲ್ಲ. ಈ ಜಾವಾ ಕಂಪನಿಯ ಬೈಕಿನಲ್ಲಿ ನನ್ನ ಬಾಲ್ಯದ ಕೆಲವು ನೆನಪುಗಳಿವೆ. ಇವತ್ತಿಗೂ ಕೆಲವರು ಹೇಳುತ್ತಾರೆ “ಜಾವಾದಂತಹ ಬೈಕ್ ಇನ್ನೂ ಬಂದಿಲ್ಲ” ಅಂತ! ಕೇಳಿದರೆ, “ಇವತ್ತು ಮಾರುಕಟ್ಟೆಗೆ ಬಂದರೆ ಖರೀದಿ ಮಾಡಲು ನಾವು ರೆಡಿ” ಎನ್ನುತ್ತಾರೆ. ಅಂತವರಿಗೆ ಒಂದು ಖುಷಿ ಸುದ್ದಿ. ಜಾವಾ ಮೊಟರ್ ಬೈಕ್ ಮತ್ತೆ ಭಾರತಕ್ಕೆ ಬರುತ್ತಿದೆ. ಎಂಬತ್ತರ ಅಥವಾ ತೊಂಬತ್ತರ ದಶಕದಲ್ಲಿ ನೀವು ಈ ಬೈಕನ್ನು ನೋಡಿರುತ್ತೀರಾ. ಅದನ್ನು ಓಡಿಸಿ ಆನಂದಿಸಿರುತ್ತೀರಾ, ಇಲ್ಲವೇ ಆನಂದಿಸಿದವರ ಅನುಭವವನ್ನು ಕೇಳಿರುತ್ತೀರಾ. ನಿಮಗೆ ಈ ಬೈಕ್ ಮತ್ತೆ ಬರುತ್ತಿದೆ ಎಂಬ ಸುದ್ದಿ ಕೇಳಿ ಹೇಗೆನಿಸುತ್ತಿದೆ?

ಇಷ್ಟೆಲ್ಲಾ ಕೇಳಿದ ಮೇಲೆ ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳೋಣ ಅನಿಸುತ್ತಾ ಇದೆ. ಹೀಗಾಗಿ ಒಮ್ಮೆ‌ ಇತಿಹಾಸವನ್ನು ಇಣುಕಿ ನೋಡೋಣ.

ಜಾವಾ ಕಂಪನಿ ಸ್ಥಾಪನೆ ಆಗಿದ್ದು 1929 ರಲ್ಲಿ. Frantisek Janecek ಎಂಬುವವರು Czechoslovakia ದಲ್ಲಿ ಅದನ್ನು ಶುರುಮಾಡಿದ್ದು (ಇವತ್ತು ಅದು Czech Republic). JAWA ಹೆಸರು ಬಂದಿದ್ದು  ಸಂಸ್ಥಾಪಕರಾದ Janeček and Wanderer ಅವರುಗಳ ಹೆಸರಿನ ಮೊದಲೆರಡು ಅಕ್ಷರದ ಮೇಲೆ. ಹೀಗೆ ಶುರುವಾದ ಬೈಕ್ ಕಂಪನಿ 1950 ರ ವೇಳೆಗೆ ಎಷ್ಟು ಜನಪ್ರಿಯತೆ ಪಡೆದುಕೊಂಡಿತು ಅಂದರೆ ಕಂಪನಿಯ ವಿನ್ಯಾದ ಬೈಕ್’ಗಳು ಸುಮಾರು ನೂರಾ ಇಪ್ಪತ್ತು ದೇಶಗಳಲ್ಲಿ ಮಾರಾಟವಾಗುತ್ತಿತ್ತು. ಮುಂದೆ ಏನಾಯಿತೋ ಖಚಿತ ಮಾಹಿತಿ ಇಲ್ಲ ಆದರೆ ನನ್ನ ಪ್ರಕಾರ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ಅಳವಡಿಸಿಕೊಳ್ಳಲಿಲ್ಲವಾಗಿದ್ದರಿಂದ 1990ರ ನಂತರ ಮಾರುಕಟ್ಟೆಯಿಂದಲೇ ಮಾಯವಾಯಿತು ಎನ್ನಬಹುದು. ಇವತ್ತು ಬಹಳ ಜನ ನೆನೆಸಿಕೊಳ್ಳುತ್ತಾರೆ! ಹಾಗಿದ್ದರೆ ಭಾರತಕ್ಕೆ ಈ ಜಾವಾ ಬೈಕ್ ಗಳು ಬಂದಿದ್ದು ಯಾವಾಗ?

ಭಾರತದಲ್ಲಿ ಜಾವಾ ಬೈಕ್ ಬಂದಿದ್ದು 1950ರ ಸುಮಾರಿಗೆ. ಮೈಸೂರಿನ ಐಡಿಯಲ್ ಜಾವಾ ಕಂಪನಿ ಬೈಕ್ ತಯಾರಿಸಿ ದೇಶದ ಮೂಲೆ ಮೂಲೆಗಳಲ್ಲಿ ಮಾರಾಟ ಮಾಡುತ್ತಿತ್ತು. ಇಂದೂ ಹುಡುಕಿದರೆ ನಿಮಗೆ ಜಾವಾ350 ಅಥವಾ ಯೆಜಡಿ ಬೈಕಗಳು ಸಿಗುತ್ತವೆ. Jawa Classic, Jawa 350, Yezdi Roadking ಈ ಮೂರು ಮಾಡೆಲ್ ಭಾರತದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಭಾರತದಲ್ಲಿ ಜಪಾನೀ ಕಂಪನಿಗಳ ಪ್ರಭಾವ ಹೆಚ್ಚಾಯಿತು, ಕಾಂಪಿಟೇಷನ್ ತೀವ್ರವಾಯಿತು ಜಾವಾ ಕಂಪನಿ ಬೈಕ್’ಗಳ ಸೇಲ್ ಕಡಿಮೆ ಆಗುತ್ತಾ ಹೋದವು. ಅದಲ್ಲದೆ ಕಂಪನಿ ಫೋರ್ ಸ್ಟ್ರೋಕ್ ಇಂಜಿನ್ ಮಾಡುವುದರಲ್ಲಿ ವಿಫಲವಾಯಿತು. ಆಮೇಲೆ‌ 1996ರಲ್ಲಿ ಜಾವಾ ಕಂಪನಿಯೇ ಬಂದಾಯಿತು! ಒಟ್ಟಾರೆ ಹೇಳಬೇಕು ಅಂದರೆ ಜಪಾನೀ ಕಂಪನಿಗಳೊಡನೆ ಪೈಪೋಟಿ ಮಾಡಲಾಗದೆ ಐಡಿಯಲ್ ಜಾವಾ ಕಂಪನಿ ಭಾರತದಲ್ಲಿ ಮುಚ್ಚಿ ಹೋಯಿತು. ಹಾಗಿದ್ದರೆ ಇವತ್ತು ಜಾವಾ ಕಂಪನಿಯ ಬೈಕ್ ಭಾರತಕ್ಕೆ ತರಲು ಹೇಗೆ ಸಾಧ್ಯ? ಜಗತ್ತಿನಲ್ಲಿ ಇನ್ನೆಲ್ಲಾದರೂ ಜಾವಾ ಬೈಕ್ ಗಳು ಓಡಾಡುತ್ತಿವೆಯೇ? ಎಂಬ ಪ್ರಶ್ನೆಗಳು ಕಾಡುವುದು ಸಹಜ.

ಜಾವಾ ಬೈಕ್’ಗಳು ಇಂದೂ ಮಧ್ಯ ಅಮೇರಿಕಾ ಹಾಗೂ ರಷ್ಯಾದ ರಸ್ತೆಗಳಲ್ಲಿ ಓಡುತ್ತಿವೆ ಎಂದರೆ ನಂಬುತ್ತೀರಾ? 1960 ರಲ್ಲಿ ವಿನ್ಯಾಸಗೊಂಡ ಜಾವಾ 350 cc ಟು ಸ್ಟ್ರೋಕ್ ಇನ್ನೂ ಮಾರಾಟವಾಗುತ್ತಿದೆ. ಇತ್ತೀಚಿನ ಮೊಡೆಲ್ ಅಂದರೆ Jawa 650, Jawa 650 Style, Jawa 650 Dakar. ಅದಲ್ಲದೆ Jawa 50, Jawa 125, Jawa 250 ಹಾಗೂ Jawa 660 ಮಾರುಕಟ್ಟೆಯಲ್ಲಿದೆ. ಜಾವಾ ಬ್ರಾಂಡ್ ಬಿಎಸ್ಎ ಎಂಬ ಕಂಪನಿಯ ಅಧೀನದಲ್ಲಿದೆ. ಮಹೀಂದ್ರಾ ಕಂಪನಿ ಭಾರತದಲ್ಲಿ ವಿನ್ಯಾಸ ಮಾಡಿ, ತಯಾರಿಸಿ, ಜಾವಾ ಬ್ರಾಂಡ್’ನಲ್ಲಿಯೇ ಮಾರುವ ಹಕ್ಕು ಪಡೆದುಕೊಂಡಿದೆ 2018-2019 ರೊಳಗೆ ಈ ಭಾರತೀಯ ಮೂಲದ ಮಹೀಂದ್ರಾ ಕಂಪನಿ ಜಾವಾ ಹೆಸರಿನಲ್ಲಿ ಹೊಸ ಮೊಡೆಲ್’ಗಳನ್ನು ಬಿಡುಗಡೆ ಮಾಡಲಿದೆ. ಮಹೀಂದ್ರಾ ಕಂಪನಿ ಜಾವಾ ಬೈಕಿಗೆ ಅಂತಾನೆ ಹೊಸ ಶೋ ರೂಂ ಓಪನ್ ಮಾಡುವ ವಿಚಾರದಲ್ಲಿದೆ ಎಂದು ಸುದ್ದಿ ಮಾಧ್ಯಮಗಳು ಹೇಳುತ್ತಿವೆ. ರಾಯಲ್ ಎನಫೀಲ್ಡ್ ತರಹ ಇದನ್ನೂ ಭಾರತದಲ್ಲಿಯೇ ರಿಸರ್ಚ್ ಹಾಗೂ ಡೆವೆಲಪ್ಮೆಂಟ್ ಮಾಡಿ ಭಾರತದಲ್ಲಿಯೇ ತಯಾರಿ ಮಾಡಿ ವಿದೇಶಕ್ಕೂ ರಫ್ತು ಮಾಡುವ ವಿಷನ್ ಮಹೀಂದ್ರಾ ಕಂಪನಿ ಹೊಂದಿದೆ. ಮೇಕ್ ಇನ್ ಇಂಡಿಯಾಕ್ಕೆ ಇದೊಂದು ಹೆಮ್ಮೆಯ ಗರಿ! ಜಾವಾ ಹೆಸರು ಕೇಳಿದವರು, ಅದರ ರೈಡ್ ಅನುಭವಿಸಿದವರು ಎಲ್ಲರೂ ಇನ್ನು ಹೆಚ್ಚು ದಿನ ಕಾಯಬೇಕಿಲ್ಲ!

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post