ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೧
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು ? ||
ಅಚ್ಚರಿಯ ತಂತ್ರವಿದು ; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ – ಮಂಕುತಿಮ್ಮ || ೩೧ ||
ಈ ಪದ್ಯದ ಹಿನ್ನಲೆಯಾಗಿ ಹಿಂದಿನ ಪದ್ಯವನ್ನು (ಮೂವತ್ತನೆಯದು) ನೋಡಿದರೆ, ಇದೊಂದು ರೀತಿ ಅದರ ಮುಂದುವರೆದ ಭಾಗವೆನ್ನಬಹುದು. ಅಲ್ಲಿ ಕಣ್ಣೆದುರಿಗಿರುವ ವಾಸ್ತವವನ್ನೆ ನಂಬಬಾರದು ಎಂದರೆ ಮತ್ತೇನನ್ನು ನಂಬುವುದೊ ? ಎಂದು ದಬಾಯಿಸಿದ ಮಂಕುತಿಮ್ಮ, ಇಲ್ಲ ಸ್ವಲ್ಪ ತಗ್ಗಿದ ಭಾವದಲ್ಲಿ ಆ ಕಣ್ಣಿಗೆ ಕಾಣಿಸದ್ದರ ಹಿಂದೆಯು ನಿಜಕ್ಕೂ ಏನಾದರೂ ಇರಬಹುದೇ ? ಎಂದು ಆಲೋಚಿಸುತ್ತಾನೆ – ತೆರೆದ, ಬಿಚ್ಚು ಮನದ ಮತ್ತೊಂದು ಭಾವವನ್ನು ಪ್ರಕಟವಾಗಿ ತೋರಿಸುತ್ತ.
‘ಒಂದು ವೇಳೆ ಆ ಸತ್ಯವೆನ್ನುವುದು ನಿಜಕ್ಕೂ ಸುಳ್ಳು (ಮಿಥ್ಯೆ) ಎಂಬ ಮುಖವಾಡ, ಪರದೆಯ ಹಿಂದೆ ಅಡಗಿಕೊಂಡಿರಬಹುದೆ? ಯಾವುದೊ ಪುರುಷಾರ್ಥ, ಘನೋದ್ದೇಶದಿಂದ ಮುಸುಕುಧಾರಿ ವೇಷ ಹಾಕಿಕೊಂಡು ಬೇಕೆಂತಲೆ ಕಾಣಿಸಿಕೊಳ್ಳದೆ ಅಡಗಿ ಕೂತಿದೆಯೆ? ಆ ಮರಯಲ್ಲಡಗಿ ಕೂತದ್ದನೆ ನಾವು ಸತ್ಯವೆಂದು ನಂಬಬೇಕೆ (ನಚ್ಚುವುದೆ) ?’ – ಹೀಗೆಲ್ಲಾ ಗೊಂದಲದಲ್ಲಿ , ದ್ವಂದ್ವದಲ್ಲಿ ಮುಳುಗುತ್ತದೆ ಕವಿಯ ಮನಸು. ಕಾಣದ್ದನು ನಂಬೆನೆನ್ನುವ ವಾಸ್ತವವಾದಿಯ ನಿರಾಕರಣೆ ನಾಸ್ತಿಕತೆಯ ಅಂಶಕ್ಕೆ ಇಂಬು ಕೊಡುವಂತಿದ್ದರೆ, ಇಲ್ಲಿ ಕಾಣಿಸಿಕೊಳ್ಳುವ ಅನುಮಾನ ‘ನಮಗೆ ಮೀರಿದ್ದದೇನೊ ಸತ್ಯ ಇದ್ದರೂ ಇರಬಹುದೇ ?’ ಎನ್ನುವ ಆಸ್ತಿಕತೆಯತ್ತ ಓಲುವ ಇಂಗಿತವನ್ನೀಯುತ್ತದೆ.
ಆದರೆ ಇಲ್ಲಿ ನಿಜಕ್ಕು ಅನಾವರಣವಾಗುವುದು, ಆಸ್ತಿಕ-ನಾಸ್ತಿಕ ಭಾವಗಳೆರಡನ್ನು ಮೀರಿದ ಸತ್ಯಾನ್ವೇಷಣೆಯ, ಜಾಗೃತ ಪ್ರಜ್ಞೆಯ ಜಿಜ್ಞಾಸೆ. ಒಟ್ಟಿನಲ್ಲಿ ಈ ಗೊಂದಲಕ್ಕೊಂದು ನೇರ ಸರಳ ಪರಿಹಾರ ಕಾಣಿಸದೆಂದು ಅರಿವಾದ ಕವಿ ಹೃದಯ ಅದನ್ನು ಬದಿಗಿತ್ತು, ಆ ರೀತಿಯ ಸೃಷ್ಟಿಯನ್ನು ರೂಪಿಸಿದ, ರಚಿಸಿದ ಸೃಷ್ಟಿಕರ್ತನ ತಂತ್ರದ ಚಾಕಚಕ್ಯತೆಯತ್ತ ಹೊರಳಿಬಿಡುತ್ತದೆ – ಕೊನೆಯೆರಡು ಸಾಲುಗಳಲ್ಲಿ. ಯಾಕೆ ಸ್ವತಃ ತಾನೇ ಸೃಜಿಸಿದ ನಿಸರ್ಗ, ಪ್ರಕೃತಿಸಹಜ ನಿಯಮಗಳನ್ನು (ಸಾಜತೆ) ಈ ಬ್ರಹ್ಮಸೃಷ್ಟಿ ಪರಿಪಾಲಿಸುವುದಿಲ್ಲ? ಯಾಕೆ ತನಗೆ ಮಾತ್ರ ತನದೇ ಆದ ಬೇರೇನೊ ತಂತ್ರ, ನಿಯಮವನ್ನು ಹಾಕಿಕೊಂಡಂತೆ ಕಾಣಿಸುತ್ತಿದೆ ? ಸಹಜದಲ್ಲೆ ತಮ್ಮನ್ನು ಅನಾವರಣಗೊಳಿಸಿಕೊಳ್ಳುವ ಬದಲು, ಅಗೋಚರ ಬ್ರಹ್ಮಾಂಡದಿಂದ ಹಿಡಿದು ದೃಗ್ಗೋಚರ ಅಸ್ತಿತ್ವದವರೆಗೆ ಈ ಬ್ರಹ್ಮಸೃಷ್ಟಿಗಳೇಕೆ ಹೊರಗೆ ನಿಚ್ಚಳವಾಗಿ ಕಾಣಿಸಿಕೊಳ್ಳದೆ, ಗೋಚರವಾಗದ ಸುಳ್ಳಿನ ಮರೆಯಲ್ಲಡಗಿರುವ ಸತ್ಯದಂತೆ ಪ್ರವರ್ತಿಸುತ್ತವೆ? ಏನೀ ತಂತ್ರದ ಹಿನ್ನಲೆ, ಗುಟ್ಟು? ಅಂತಿಮದಲ್ಲಿ ಅದೇನೇ ಇದ್ದರೂ, ಈ ಬ್ರಹ್ಮಸೃಷ್ಟಿಯ ಪ್ರಕ್ರಿಯೆಯು ನಾವು ಕಾಣುವ ಸಾಮಾನ್ಯ ಭೌತಿಕ ನಿಯಮಕ್ಕೆ ಅಪವಾದದಂತೆ ಇರುವುದು ಮಾತ್ರ ನಿಜ ಎಂದು ಒಪ್ಪಿಕೊಳ್ಳುತ್ತ, ತನ್ನ ಬ್ರಹ್ಮ ಸೃಷ್ಟಿಯ ಕುರಿತಾದ ವಿಸ್ಮಿತಭಾವವನ್ನು ಪ್ರಕಟಪಡಿಸುತ್ತಾನೆ ಮಂಕುತಿಮ್ಮ.
ಈ ರೀತಿ ಹಲವಾರು ಪದ್ಯಗಳಲ್ಲಿ ಬರುವ ಸೃಷ್ಟಿಯ ಗುಟ್ಟಿನ ಕುರಿತಾದ ಹುಡುಕಾಟ, ಈ ವಸ್ತು-ವಿಷಯ ಕವಿಯನ್ನು ಸಾಕಷ್ಟು ಕಾಡಿರುವ ಸುಳಿವು ನೀಡುತ್ತದೆ. ಆ ಕಾಡುವಿಕೆಯ ಹುಡುಕಾಟದಲ್ಲಿ ಉಂಟಾದ ಸೋಲು, ಗೆಲುವು, ದಿಗ್ಭ್ರಮೆ, ವಿಷಾದ, ಖೇದ, ಉದ್ವೇಗಾದಿ ಭಾವಗಳೆಲ್ಲವೂ ನೇರ ಅಥವ ಪರೋಕ್ಷವಾದ ಪದ ಲಾಲಿತ್ಯದ ರೂಪದಲ್ಲಿ ಆವಿರ್ಭವಿಸಿ, ಅನುಭವದ ಮೂಸೆಯಲ್ಲಿ ಹೊರಳಾಡಿ ಬಂದು, ಈ ನಾಲ್ಕು ಸಾಲಿನ ಪದ್ಯಸಾರ ರೂಪಾಗಿ ಅವತರಿಸಿಕೊಂಡ ಸಮ್ಮಿಶ್ರಣ ಭಾವದ ಕುರುಹನ್ನು ಇಲ್ಲಿಯೂ ಕಾಣಬಹುದು. ಮೊದಲೆರಡು ಸಾಲು ಸುಳ್ಳಿನ ಹಿಂದೆ ಅಡಗಿಕೊಂಡ ಕಾರಣದ ಗುಟ್ಟು ಬಿಡಿಸಲಾಗದೆ ಸೋತ ಹತಾಶೆಯ ದನಿ ಸೂಸಿದರೆ, ಕೊನೆಯೆರಡು ಸಾಲಲ್ಲಿ ಸೋತೆನೆಂದು ಕೈಕಟ್ಟಿ ಕೂರದೆ ನಿಸರ್ಗ ಸಹಜವಲ್ಲದ ಈ ತಂತ್ರಗಾರಿಕೆಯನ್ನು ಬ್ರಹ್ಮಸೃಷ್ಟಿ ಯಾಕೆ ಬಳಸಿಕೊಂಡಿತೆಂದು ಅನ್ವೇಷಣೆಗೆ ಹೊರಟ ದನಿ ಕಾಣಿಸುತ್ತದೆ – ಕವಿಯ ಜೀವನೋತ್ಸಾಹ ಮತ್ತು ಸೋಲಿಗೆ ಕುಗ್ಗದೆ, ಜಗ್ಗದೆ ಮುನ್ನಡೆವ ಛಲವನ್ನು ತೋರಿಸುತ್ತ; ಆ ಪಯಣದಲ್ಲೆ ಓದುಗರಿಗೆ ಜೀವನದರ್ಶನವನ್ನೂ ಮಾಡಿಸುತ್ತ !
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್