ಅಲ್ಲೊಬ್ಬ ಶ್ರಮಜೀವಿ ಹಗಲಿರುಳು ತನ್ನ ಹೊಲದಲ್ಲಿ ನೆಟ್ಟ ಸಸಿಯನ್ನು
ಅವನು ನಂಬಿದ್ದು ತನ್ನ ಕರುಣೆಯಿಂದ ಫಲ ನೀಡುವ ಭೂಮಿತಾಯನ್ನು
ಆ ತಾಯ ಆಜ್ಞೆ ಮೀರದ ಮೋಡಗಳು ಹನಿಸಿದ್ದು, ಮಳೆಯಾಗಿ ತಲುಪಿದ್ದು ಭೂಮಿಯನ್ನು.
ಸಸಿಯು ಗಿಡವಾಗಿ, ಸೂರ್ಯನ ಬೆಳಕು ಆಹಾರವಾಗಿ, ಹೂವಾಗಿ ಅರಳಿ ನೀಡಿತು ನಗುವನ್ನು
ಕಾಲ ಕಾಲಕ್ಕೆ ಅರಳಿ ನಿಂತ ಇನ್ನಷ್ಟು ಹೂವುಗಳು ಬೀಜಗಳಾಗಿ ತಲುಪಿದವು ರೈತನನ್ನು.
.
ಇನ್ನೊಬ್ಬ ಶ್ರಮಜೀವಿ ಗಾಣದಲ್ಲಿ ಹಗಲಿರುಳು ದುಡಿದು ನೀಡಿದ ಎಣ್ಣೆಯನ್ನು..
ಅಲ್ಲೊಬ್ಬ ಶ್ರಮಜೀವಿ ಹಸಿಯಾದ ಮಣ್ಣನ್ನು ಹಸನಾಗಿಸಿ ಮಾಡಿದ ಹಣತೆಯನ್ನು…
ಹತ್ತಿರದಲ್ಲೆಲ್ಲೋ ಮತ್ತೊಬ್ಬರು ಬೆಳೆದ ಹತ್ತಿಯ ಹೊಸೆದು ನೀಡಿದರು ಬತ್ತಿಯನ್ನು..
ಎಲ್ಲಿಯ ಹೂವು ? … ಎಲ್ಲಿಯ ಎಣ್ಣೆ ? …. ಎಲ್ಲಿಯ ಮಣ್ಣು ?….. ಎಲ್ಲಿಯ ಹಣತೆ?
ಸಸಿಯು ಚಿಗುರಾಗಿ, ಮೊಗ್ಗು ಹೂವಾದಾಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದೇ ?
ಬೀಜ ಗಾಣದಲ್ಲಿ ತೈಲವಾಗುವಾಗುವುದು , ಮಣ್ಣು ದೀಪವಾಗುವಾಗುವುದು ಮತ್ತೊಂದು ಹಂತವಲ್ಲವೇ?
ಕಾಲ ಕಾಲಕ್ಕೆ ಬದಲಾಗುವ ನಿಯಮಗಳಿಗೆ ಓಗೊಟ್ಟು ಸೃಷ್ಟಿಯ ಸಕಲ ಜೀವಿಗಳೂ
ತಮಗಾಗಿ ಬದುಕದೆ ನಿಸ್ವಾರ್ಥದಿಂದ ಸಾರ್ಥಕ್ಯ ಪಡೆಯುವಂತೆ
ಪ್ರಕೃತಿಯ ವಿಸ್ಮಯಗಳಲ್ಲಿ ತಾನು ಒಬ್ಬನೆಂದು ಮನುಜನೇಕೆ ಅರಿಯಲಾರ?
ತನ್ನ ಸ್ವಾರ್ಥ ಮರೆತೇಕೆ ಬದುಕಲಾರ? ತಮವೆಂಬ ಅಹಂಕಾರವನ್ನೇಕೆ ತೊರೆಯಲಾರ?
ಕಾಯವೆಂಬ ಹಣತೆಯನ್ನು ಕರುಣೆ ಎಂಬ ಎಣ್ಣೆಯಿಂದ ಭರಿಸಿ, ಸ್ನೇಹವೆಂಬ ಬತ್ತಿಯಿಂದ ಹಸನಾಗಿಸಿ,
ಹೃದಯವೈಶಾಲ್ಯ ಎಂಬ ಬೆಳಕನ್ನು ನೀಡುವ ದೀಪಗಳಾಗೋಣ …
ಮನೆ ಮನಸ್ಸುಗಳನ್ನು ಬೆಳಗುವ ಹಣತೆಗಳಿಂದ ಸಿಂಗರಿಸಿ ಬೆಳಕಿನ ಹಬ್ಬವನ್ನು ಸಾರ್ಥಕಗೊಳಿಸೋಣ…
ಮಣ್ಣ ಹಣತೆಗಳನ್ನೇ ಬೆಳಗೋಣ …
(Say No to Chineese Lamps ..!)
— ಮಯೂರಲಕ್ಷ್ಮೀ
mayuralakshmi88@gmail.com
Facebook ಕಾಮೆಂಟ್ಸ್