X

ಚಲೋ ಹೆಸರು … ಬಲೇ ಕೆಸರು

“ಉಡುಪಿ ಚಲೋ”, ಮತ್ತದರ ನಂತರದ ಕೆಸರು ಎರೆಚಾಟ, ತಮ್ಮ ಪಾಡಿಗೆ ತಾವು ಎಂಬಂತೆ ಶಾಂತಿ ಸಮನ್ವಯದಿಂದ ಸಾಗುತಿದ್ದ ಉಡುಪಿಗೆ ಬೇಕಿತ್ತೆ?, ಅಗತ್ಯವೇ ಇಲ್ಲದಿದ್ದರೂ ಕಾಲು ಕೆರೆದು …, ಎಗರಿ ಬಂದು ಮಾಡಿದ ಬಲ್ಲಿರೇನಯ್ಯಾ …? ಇರುವಂತಾ ಸ್ಥಳ…? ಎಂಬ ಕುಚೋದ್ಯದ ಜಾಡು ಹಿಡಿದು ಜಾಲಾಡಿದಾಗ ನನಗೆ ತೋಚಿದ ಒಳಸುಳಿಯ ಪರಿಚಯ ತೆರೆದಿಡಬೇಕೆಂಬ ಹಂಬಲವೇ ಈ ಬರವಣಿಗೆ. ವಸ್ತು ನಿಷ್ಟವಾಗಿ ನನಗೆ ತೋಚಿದ ಅಂಶಗಳನ್ನು ನಿಮ್ಮ ಮುಂದಿಡುವ ಮುಂಚೆ ಸಣ್ಣದೊಂದು ಅಫಿಡಾವಿಟ್ಟು. ಜಾತಿಯಲ್ಲಿ ಬ್ರಾಹ್ಮಣ, ಉಡುಪಿ ಜಿಲ್ಲೆಯವನೇ  ಆದರೂ ವಿಶ್ವೇಶತೀರ್ಥರೂ ಸೇರಿದಂತೆ ಸಮಾಜ ಹಾಗು ಸುತ್ತಲಿನ ಜನಜೀವನದ ಉನ್ನತಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಎಲ್ಲ ಹಿರಿಯ, ಕಿರಿಯ ಚೇತನಗಳನ್ನು ಸಮಾನ ಗೌರವ ಮತ್ತು ನಿಷ್ಠೆಯಿಂದ ಆದರಿಸುವವನು ನಾನು.  ಭಕ್ತಿ ಮತ್ತು ಊಟದ ವಿಚಾರಕ್ಕೆ ಬಂದಾಗ, ಎರಡನೆಯದು ನನ್ನಿಷ್ಟ. ಕೃಷ್ಣನ ದರ್ಶನಕ್ಕೆ ಹೋದದ್ದಕ್ಕಿಂತ ಹೆಚ್ಚು ರಥಬೀದಿಗೆ ನಾನು  ಹೋಗಿದ್ದು ಮಿತ್ರ ಸಮಾಜದ ಗೋಳಿ ಬಜೆ ಹುಡುಕಿಕೊಂಡೇ. ಪಂಕ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದ ಪ್ರಸಾದ ರುಚಿ ಎಂಬ ಅರಿವಿದ್ದರೂ ಅವಿಭಜಿತ ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದ್ದು ಒಂದೆರಡೇ ಬಾರಿ, ಅದು ಎಲ್ಲರೊಂದಿಗೆ ಸಾಮೂಹಿಕ ಭೋಜನ ಶಾಲೆಯಲ್ಲೇ.

ಬ್ರಾಹ್ಮಣ್ಯದ ಪ್ರತಿಪಾದನೆಯಾಗಲಿ, ಪರಂಪರೆ, ಕಟ್ಟುಪಾಡುಗಳ ಅನಿವಾರ್ಯತೆಯಾಗಲಿ  ಖಂಡಿತಕ್ಕೂ ನನ್ನ ವಾದದ ತಿರುಳಲ್ಲ. ದಿನ ನಿತ್ಯ ಅನ್ನದಾನದ ಕೈಂಕರ್ಯ, ದಕ್ಷಿಣ ಕನ್ನಡದ ಬಹುತೇಕ ಮಠ, ಮಾನ್ಯಗಳು ಮತ್ತು ದೇವಸ್ಥಾನಗಳಲ್ಲಿ ಹಿಂದಿನಿಂದ ಆರಂಭಿಸಿ ಇಂದಿನ ತನಕ ಏನೇ ತೊಂದರೆ ಎದುರಾದರೂ ನೆಡೆಯುತ್ತಿದೆ ಎಂಬುದು ಗಮನೀಯ ಸಂಗತಿ. ಈ ಸಮಾಜಮುಖಿ ಕಾರ್ಯದಿಂದ ಬ್ರಾಹ್ಮಣರೂ ಸೇರಿದಂತೆ ಎಲ್ಲ ಜಾತಿಯ ಶೋಷಿತ,  ದಮನಿತರ ಜೀವನ ಮಟ್ಟ ಉತ್ತಮಗೊಳಿಸುವಲ್ಲಿ ನಮ್ಮಲ್ಲಿನ ದೇವಸ್ಥಾನಗಳು ಮತ್ತು ಮಠ ಮಾನ್ಯಗಳು ಮಹತ್ತರ ಕೊಡುಗೆ ನೀಡಿವೆ ಎಂಬುದನ್ನು ಬಹುತೇಕರು ಅಲ್ಲಗಳೆಯಲಾರರು ಎಂದು ನನ್ನ ದೃಢ ನಂಬಿಕೆ.

ನೇರವಾಗಿ ವಿಷಯಕ್ಕೆ ಬಂದರೆ, ನನಗೆ ತೋಚಿದ್ದು ಎರಡು ಪ್ರಮುಖ ಪ್ರಶ್ನಗಳು. ಏನು ಈ ಹೋರಾಟದ ಉದ್ದೇಶ ? ಮತ್ತು ಉಡುಪಿ ಯಾಕೆ ಮೊದಲ ಪ್ರಾಶಸ್ತ್ಯದ ಆಯ್ಕೆ? ಉತ್ತರ ಹುಡುಕ ಹೊರಟ ನನಗೆ  ಉತ್ತರ ದೊರೆತದ್ದು, ಚಳುವಳಿಯ ನೇತೃತ್ವ ಹೊತ್ತ ನೇತಾರರು ಎತ್ತಿದ ಪ್ರಶ್ನೆಗಳು ಹಾಗೂ ಅವರ ಆವೇಶ ಭರಿತ ಮಾತುಗಳಲ್ಲೇ ! ಅದನ್ನೇ ಎಳೆ ಎಳೆಯಾಗಿ ಬಿಡಿಸಿಡುವುದರ, ಜೊತೆಗೆ ನನಗೆ ತೋಚಿದ ಒಂದೆರಡು ಅಂಶಗಳನ್ನೂ ನಿಮ್ಮ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆನಷ್ಟೆ.

ಈ ಚಳುವಳಿಯ ಮೂಲ ಧ್ಯೇಯವಾಕ್ಯ “ಭೂಮಿ ನಮ್ಮ ಹಕ್ಕು, ಆಹಾರ ನಮ್ಮ ಆಯ್ಕೆ”. ಸರ್ವ ಸಮ್ಮತ ಉದ್ದೇಶ ಎಂಬುದರಲ್ಲಿ ಬೇರೆ ಮಾತೆ ಇಲ್ಲ. ಆದರೆ ಇವರಡೂ ದಲಿತ, ದಮನಿತರಿಗಷ್ಟೇ ಸೀಮಿತವೂ ಅಲ್ಲ. ಇಂದಿರಾ ಗಾಂಧಿಯವರ ಸಮಯದಲ್ಲಿ ಜಾರಿಯಾದ “ಉಳುವವನೇ ಹೊಲದೊಡೆಯ” ನೀತಿಗನುಗುಣವಾಗಿ ತಮ್ಮ ಒಡೆತನದ ಬಹುಪಾಲು ಭೂಮಿಯನ್ನು ಕೆಳೆದುಕೊಂಡ್ಡಿದ್ದು ಇದೇ ಉಡುಪಿ ಸುತ್ತಮುತ್ತಲಿನ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಮಂಗಳೂರಿನವರೆ.  ಮೇಲ್ವರ್ಗ ಎಂದು ದಲಿತ ದಮನಿತರ ನಾಯಕರು ಗುರುತಿಸುವ ಬ್ರಾಹ್ಮಣ, ಬಂಟ, ಜೈನ ಸಮುದಾಯದ ಜನರೂ ತಂತಮ್ಮ ಭೂಮಿಯ ಒಡೆತನವನ್ನು ಬಿಟ್ಟು ಕೊಟ್ಟವರೇ. ಇದೆ ಕಾರಣಕ್ಕೆ ಇಂದಿಗೂ ಇಲ್ಲಿ ಬೇರೆ ಭಾಗದ ರೈತ ಸಮುದಾಯದವರಂತೆ ಎಕರೆಗಟ್ಟಲೆ ಹಿಡುವಳಿ ಹೊಂದಿರುವ ದೊಡ್ಡ ಹಿಡುವಳಿದಾರರು ಇಂದಿಗೂ ಇಲ್ಲಿ ಕಾಣ ಸಿಗುವುದಿಲ್ಲ. ತಾವೇ ಉತ್ತು ಬೆಳೆಯುತ್ತಿದ್ದ ಮನೆಯಂಗಳದ ತುಂಡು ಭೂಮಿಯನ್ನೂ ಉಳಿಸಿಕೊಳ್ಳಲಾಗದೆ, ನಾನಾ ರೀತಿಯ ಶೋಷಣೆಗೊಳಗಾಗಿ ಬದುಕಿದೆಯಾ ಬಡಜೀವ ಎಂದು ನೀವು ಹೆಸರಿಸುವ ಕೆಳವರ್ಗದವರ ಅಡಿಯಲ್ಲಿ ಕೆಲಸ ಮಾಡಿ ದಿನ ಕಳೆಯುತ್ತಿರುವ ಬ್ರಾಹ್ಮಣ, ಬಂಟ, ಜೈನ ಸಮುದಾಯದವರೂ ಇಲ್ಲಿ ಕಾಣ ಸಿಗುತ್ತಾರೆ. ಹಾಗಾಗಿ ಭೂಮಿ ವಿಚಾರಕ್ಕೆ ಬಂದರೆ, ಉಡುಪಿ ಮತ್ತು ಆಸು ಪಾಸಿನ ನೆಲ ಯಾರದೇ ಭೂಮಿ ಹಕ್ಕನ್ನು ಖಂಡಿತಾ ಕಸಿದುಕೊಂಡಿಲ್ಲ. ಬಗರ್ ಹುಕುಂ ಸಾಗುವಳಿಯ ಪ್ರಶ್ನೆ ಬಂದರೆ, ಇಲ್ಲಿ ಸಮಸ್ಯೆ ಇರುವುದು ಸರ್ಕಾರೀ ಜಮೀನು ಮತ್ತು ಅದರ ಒಡೆತನ ಪ್ರತಿಪಾದಿಸುತ್ತಿರುವ  ಜನರ ನಡುವೆ, ಹಾಗೂ ಇದು  ಉಡುಪಿ ಮತ್ತು ಆಸುಪಾಸಿನ ಪರಿಸರಕ್ಕೆ ಸೀಮಿತವಲ್ಲದ ಸಮಸ್ಯೆ.  ಇದಕ್ಕೆ ಪರಿಹಾರ ಕೊಡಿಸಬೇಕಾದ ಸರಕಾರ, ಅದನ್ನು ನೆಡೆಸುತ್ತಿರುವ ನಾಯಕರು ಮತ್ತು ಸರ್ಕಾರಕ್ಕೆ ಮಾರ್ಗದರ್ಶನ  ಮಾಡುತ್ತಿರುವ  ಮಂದಿಯೇ ನಿಮ್ಮೊಂದಿಗೆ ಇದ್ದರೂ, ಅವರೊಡನೆ ಚರ್ಚಿಸಿ, ದಲಿತ ದಮನಿತರಿಗೆ ನ್ಯಾಯಯುತ ಬಾಳು ದೊರಕಿಸಿಕೊಡುವುದನ್ನು ಬಿಟ್ಟು, ಸಂಬಂಧವೇ ಇಲ್ಲದವರೊಂದಿಗೆ ಸಂಘರ್ಷದ ಕಹಳೆ ಊದಿದ್ದು  ನಿಮ್ಮ ನಾಯಕತ್ವ ನಿದರ್ಶನ ಮತ್ತು ರಾಜಕೀಯ ಲಾಭಕ್ಕೆ  ಹೊರತು ದಲಿತ ದಮನಿತರಿಗೆ ಶಕ್ತಿ ತುಂಬಲು ಅಲ್ಲ ಅನಿಸುವುದಿಲ್ಲವೇ?

ಇನ್ನು “ಆಹಾರ ನಿಮ್ಮ ಆಯ್ಕೆ”, ವಿಷಯಕ್ಕೆ ಬಂದರೆ,  ಅವರವರ ಆಹಾರದ ಆಯ್ಕೆ ಅವರವರ ಹಕ್ಕು ಎಂಬ ವಿಷಯ ಎಲ್ಲರೂ ಒಪ್ಪಲೇಬೇಕಾದ ಸಾರ್ವಕಾಲೀಕ, ಸಮ್ಮತ ಸತ್ಯ. ಅವರವರ ಆಹಾರದ ಆಯ್ಕೆಯ ಜೊತೆ ಜೊತೆಗೆ ನಾನು ಎಲ್ಲಿ ಏನು ತಿನ್ನಬೇಕು ಮತ್ತು ಯಾರಿಗೆ ತಿನ್ನಲು ಏನು ಕೊಡಬೇಕು ಎಂಬುದು ಕೂಡಾ ಅವರವರ ವಿವೇಚನೆಗೆ ಸಂಬಂಧಿಸಿದ ವಿಚಾರ ಎಂದು ನಿಮಗನಿಸುವುದಿಲ್ಲವೇ? ಈ  ಸಮಾವೇಶದಲ್ಲಿ ನೆಡೆದ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆಯಾಗಲಿ,  ಪೇಜಾವರ ಸ್ವಾಮಿಗಳ ಕುರಿತ ಪುಂಖಾನುಪುಂಖ ದೂಷಣೆ ಎಷ್ಟು ಸರಿ? ಆಕ್ರೋಶ ಮೋದಿಯವರ ಮಾತು, ಆಡಳಿತ, ನೀತಿ ಮತ್ತು ಅವರ ಬೆಂಬಲಿಗರ ಕುರಿತಾಗಿದ್ದರೆ, ಉಡುಪಿ ಮೋದಿಯವರ ಹುಟ್ಟುರಾಗಲಿ, ಕರ್ಮ ಭೂಮಿಯಾಗಲಿ ಅಲ್ಲವೇ ಅಲ್ಲ. ಇಲ್ಲಿಯೂ ಎಲ್ಲ ಉರಿನಂತೆ ಮೋದಿ, ಬಿಜೆಪಿ ಬೆಂಬಲಿಸುವ ಹಲವರಿದ್ದಾರೆ ಅಷ್ಟೇ. ಇನ್ನೂ  ಅಚ್ಚರಿಯ ಅಂಶವೆಂದರೆ ಉಡುಪಿ ಜಿಲ್ಲೆಯ ಬಹುತೇಕ ಶಾಸಕರು ದಲಿತ ದಮನಿತರ ಅಭಿವೃದ್ಧಿಗಾಗಿಯೇ ದುಡಿ ದುಡಿದು ಸದ್ಯ ಸೊರಗಿರುವ ಕಾಂಗ್ರೆಸ್ ಪಕ್ಷದವರೇ. ಇದೆಲ್ಲ ಗಮನಿಸಿದಾಗ, ಉಡುಪಿಯ ಆಯ್ಕೆಯ ಹಿಂದಿನ ಒಳ ಸಂಚು ಬಯಲಾಗುತ್ತದೆ. ಬೇರೆ ಮಠ ಮಾನ್ಯಗಳಿಗೆ ಹೋಲಿಸಿದರೆ, ಉಡುಪಿಯದೋ ಬ್ರಾಹ್ಮಣ ಸಮುದಾಯಕ್ಕೆ ಸೇರಿದ, ಆರ್ಥಿಕವಾಗಿಯೂ ಅಷ್ಟೊಂದು ಶ್ರೀಮಂತವಲ್ಲದ, ಒಗ್ಗಟ್ಟನಿಂದ ನಿಮ್ಮ ಮೇಲೆರಗಿ ಉತ್ತರಿಸಲಾಗದ ಮಠ.  ಮೇಲಾಗಿ ಇಲ್ಲಿನ ಜನ  ಎಲ್ಲದಕ್ಕೂ ತಗ್ಗಿ ಬಗ್ಗಿ, ಈ ಗಲಾಟೆಯ ಉಸಾಬಾರಿ ಬೇಡಾ ಮಾರಾಯರೇ …, ಎಂದು ಎಲ್ಲಾದಕ್ಕೂ ಹೊಂದಿಕೊಂಡು ಹೋಗುತ್ತಿರುವುದೇ ಕಾರಣ ಎಂಬುದು ಸ್ಪಷ್ಟವಲ್ಲವೇ? ಇದು ನಾಯಕತ್ವ ಪ್ರದರ್ಶನದ ಪ್ರಹಸನಕ್ಕೆ ಉಡುಪಿ ನಿಮ್ಮ ರಂಗಸಜ್ಜಿಕೆಯಾದ ಪ್ರಾಮಾಣಿಕ ಹಿನ್ನೆಲೆ.

ಇನ್ನು ಕೃಷ್ಣ ಮಠದ ಪಂಕ್ತಿ ಭೇದದ ವಿಚಾರ, ಇಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಲ್ಲ ಯಾತ್ರಿಕರಿಗೂ ನಿಯಮಿತ ಕಾಲದಲ್ಲಿ ಮೃಷ್ಟಾನ್ನ  ಭೋಜನ ಒದಗಿಸಲಾಗುತ್ತದೆ. ಯಾವುದೇ ಪಂಕ್ತಿಯಾದರೂ ಒಂದೇ ತರದ ಅದೇ ಗುಣ ಮಟ್ಟದ ಊಟ ದಿನ ನಿತ್ಯ ಬಡಿಸಲಾಗುತ್ತದೆ. ಕೆಲವೊಮ್ಮೆ ನನ್ನ ತಿಳುವಳಿಕೆಯಂತೆ ಬ್ರಾಹ್ಮಣರು, ಸ್ವಾಮಿಗಳಿಗೆ ಸಿದ್ದ ಪಡಿಸಿದಕ್ಕಿಂತ ಉತ್ಕೃಷ್ಟ ಮಟ್ಟದ ಮತ್ತು ರುಚಿಯಾದ (ಸ್ವಾಮಿಗಳಿಗೆ, ಉಪ್ಪು ಖಾರ ಹಾಕದ, ಬೇಯಿಸದ, ಕೆಲವು ಧಾನ್ಯಗಳನ್ನೇ ಬಳಸದ ಆಹಾರ ಕೊಡಲಾಗುತ್ತದೆ) ಅಡುಗೆಯೇ ಭಕ್ತ ಗಣಕ್ಕೆ ಬಡಿಸಲಾಗುತ್ತದೆ. ಇಂತಹದರಲ್ಲಿ ಅಗೋ ಇಲ್ಲಿ ನೋಡಿ, ನಮಗೆ ಬೇರೆ ಕಡೆ ಬಡಿಸಿ ತುಳಿಯುತ್ತಿದ್ದಾರೆ ಎಂಬುದು ಎಷ್ಟು ಸರಿ? ಈ ಮೊದಲೇ ಹೇಳಿದಂತೆ ಯಾರು, ಯಾರಿಗೆ, ಮತ್ತು ಎಲ್ಲಿ ಉಣ ಬಡಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಡುವುದೂ,  ಸಮಾನತೆಯ ಬೇಡಿಕೆಯಿಡುತ್ತಿರುವ ನಿಮಗೆ ಸೂಕ್ತವೆನಿಸುವುದಿಲ್ಲವೇ? ಮುಸ್ಲಿಂ ಭಾಂದವರ ಮನೆಯಲ್ಲಿ ಅವರ ಧಾರ್ಮಿಕ ನಂಬಿಕೆಗೆ ಸಮ್ಮತವಲ್ಲದ ಆಹಾರವನ್ನೂ , ಕ್ರೈಸ್ತ ಭಾಂದವರ ಮನೆಯಲ್ಲಿ ಮಜ್ಜಿಗೆ ಹುಳಿ, ತಂಬುಳಿಯ ಊಟವನ್ನೂ, ಸಸ್ಯಾಹಾರಿಯ ಮನೆಯಲ್ಲಿ ಮಾಂಸದೂಟ ಕೊಡಿ ಎಂದು ಹಕ್ಕೊತ್ತಾಯ ಮಂಡಿಸುವುದು  ಸಮರ್ಪಕವಲ್ಲವಲ್ಲವೇ?  ಒಂದೊಮ್ಮೆ ಭೋಜನ ಶಾಲೆಯಲ್ಲಿ ನೀರು ಸಾರು, ಬೇಯಿಸದ ಅನ್ನ, ಕಡಿಮೆ ಗುಣ ಮಟ್ಟದ ಅಕ್ಕಿ, ಬೇಳೆ ಬಳಸಿದ ಅಡುಗೆಯೋ , ಅಥವಾ ಶುಚಿತ್ವವಿಲ್ಲದ ಜಾಗದಲ್ಲಿ ಬೇಕೆಂದೇ ಉಣ ಬಡಿಸಿದ್ದರೆ, ತಿಳಿದೂ ಮಾಡುತ್ತಿರುವ ತಾರತಮ್ಯ ಎಂದು ಖಂಡಿಸಬಹುದು. ಆದರೆ ಇದ್ಯಾವ ಸಮಸ್ಯೆಯೋ ಇಲ್ಲಿಲ್ಲವಲ್ಲ.  ನಿಮ್ಮ ನೇತಾರರಲ್ಲಿ ಎಷ್ಟು ಜನ ತಮ್ಮ ಡ್ರೈವರ್ ಜೊತೆಗೆ ಎದುರು ಬದುರು ಕುಳಿತು ಸಮಾನವಾಗಿ ಹೋಟೆಲ್ನಲ್ಲಿ(ಅಯ್ಯೋ ಮನೆಯಲಿ ಬೇಡಾ, ಬಿಟ್ಟು ಬಿಡಿ !) ಕುಳಿತು ತಿಂಡಿ ತಿನ್ನುತ್ತಾರೆ ಎಂಬುದನ್ನು ಒಮ್ಮೆ ಗಮನಿಸಿದರೆ, ಹೋರಾಟದ ಆದ್ಯತೆ ಎಲ್ಲಿದೆ, ಯಾರು ಯಾರನ್ನು ಮತ್ತು ಎಲ್ಲಿ ಶೋಷಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರಬಹುದು ಎಂದು ನನ್ನ ಕಲ್ಪನೆ. ಇದೆಲ್ಲ ಗೊತ್ತಿದ್ದೂ ಜಾಣ ಕುರುಡಾಗಿ, ನಿಮ್ಮ ಅಸ್ತಿತ್ವ, ರಾಜಕೀಯ ಲಾಭಕ್ಕಾಗಿಯೇ ಈ ಹೋರಾಟವಾದರೆ, ಸರಿ ಅದನ್ನು ತುಂಬು ಮನಸ್ಸಿನಿಂದ ಒಪ್ಪಿ, ಯಾರನ್ನು ಯಾವಾಗ ನಂಬಬೇಕು ಎಂಬ ನಿರ್ಧಾರವನ್ನೂ ದಲಿತ ದಮನಿತರ ವಿವೇಚನೆಗೆ ಬಿಟ್ಟು ಬಿಡಿ.

ಉಡುಪಿ ಆಯ್ಕೆಗೆ ಸ್ವಲ್ಪ ಸಮಂಜಸವೆನಿಸುವ ನಿಮ್ಮ ಒಂದೇ ಮಾತು ಪ್ರವೀಣ್ ಪೂಜಾರಿ ಕೊಲೆಯ ವಿಚಾರ.  ಅದು  ಖಂಡಿತಕ್ಕೂ ಅಮಾನವೀಯ. ಉಡುಪಿಯೇ ಊಹಿಸಲಾಗದ, ಸಹಿಸಲಾಗದ ಘಟನೆ.  ಊಹಿಸಲಾಗದ ರೀತಿಯಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿಯವರ ಅಮಾನವೀಯ ಕೊಲೆ ಕೂಡಾ ಇಲ್ಲಿ ನೆಡೆದು ಉಡುಪಿಯ ಜನ ತಲೆ ತಗ್ಗಿಸುವ ಕೃತ್ಯ ಕೂಡಾ ಆಗಿದೆ. ಎಲ್ಲದಕ್ಕೂ ಅಪವಾದ ಅಂತ ಇರುತ್ತಲ್ಲ, ಹಾಗೆಯೇ, ಪ್ರವೀಣ್ ಪೂಜಾರಿ ಪ್ರಕರಣ. ಗೋ ಸಂರಕ್ಷಣೆಯ ನೇತಾರರೆಂದು ಬಿಂಬಿಸಿಕೊಂಡು ಅದೇ ದಂದೆಯಲ್ಲಿ ತೊಡಗಿರುವ ಗೋಮುಖ ವ್ಯಾಘ್ರರನ್ನೂ ನಾವು ನೋಡಿದ್ದೇವೆ.  ಇದು ನಿಜಕ್ಕೂ ಖಂಡನೀಯ.  ತತ್ವ ಬದ್ದವಾಗಿ ಯಾವುದೇ ವಿಷಯವನ್ನು ವಿರೋಧಿಸಬಾರದು ಎಂದೇನಿಲ್ಲ, ಆದರೆ ಒಂದು  ಸಿದ್ದಾಂತಕ್ಕೆ ಒಪ್ಪಿಕೊಂಡರೆ ಅದಕ್ಕೆ ಬದ್ದವಾಗಿ ತನ್ನ ನುಡಿ ನಡೆ ಉಳಿಸಿಕೊಳ್ಳುವ ಬದ್ಧತೆ ಕೂಡ ಪ್ರಬುದ್ದನಿಗೆ ಅಗತ್ಯ. ಇದೊಂದೇ ದೃಷ್ಟಿಯಲ್ಲಿ ನಿಮ್ಮ ಮಾತು ಒಪ್ಪಿಕೊಳ್ಳಬಹುದೆನಿಸಿದರೂ, ಇಲ್ಲಿ ನಡೆದ ಅನಗತ್ಯ ಆಲಾಪ, ನಿಮ್ಮ ವ್ಯಯಕ್ತಿಕ ಲಾಭಕ್ಕೆ ಹೊಂಚು ಹಾಕಿದಿರೆ ಹೊರತು, ದಿವಂಗತ ಪ್ರವೀಣ್ ಪೂಜಾರಿಯವರ ಕುಟುಂಬಕ್ಕೆ ಸ್ಥೈರ್ಯ, ನ್ಯಾಯ, ಬಲ ದೊರಕಿಸಿಕೂಡುವ ಪ್ರಾಮಾಣಿಕ ಪ್ರಯತ್ನ ಅಲ್ಲಿ ನೆಡೆಯಲಿಲ್ಲ.  ಒಟ್ಟಿನಲ್ಲಿ ನಿಮ್ಮ ಇಡೀ ಸಿನೆಮಾದಲ್ಲಿ ಇದೊಂದೇ ಅಲ್ಪ ಸ್ವಲ್ಪ ಸಂಬಂಧವೆನಿಸಬಲ್ಲ ಹಾಡು, ಬಾಕಿ ಎಲ್ಲಾ ಪ್ರಚಾರಕ್ಕಾಗಿಯೇ ಇದ್ದ ಐಟಂ ಸಾಂಗ್ ಗಳೇ!

ನಮ್ಮ ಉಡುಪಿಯವರೇ ಆದ, ಜಿಲ್ಲಾ ಉಸ್ತುವಾರಿ ಸಚಿವರು, ನಿಮ್ಮ ಸಮಾವೇಶದ ನಂತರ ವಿನೂತನ ಮಧ್ವರಾಜ ಪುರಾಣ ವಾಚಿಸುತ್ತಾರೆ. ಅವರ ಪ್ರಕಾರ ರಾಮ, ಕೃಷ್ಣರಂತಹ ದೇವರೂ, ವಾಲ್ಮೀಕಿಯವರಂತಹ ಮಹಾಪುರುಷರೂ ಮಾಂಸ ಆಹಾರ ಮಾಡಿದ್ದಕ್ಕೆ ಸಾಕ್ಷಿ ಇದೆ, ಅದರಲ್ಲಿ ತಪ್ಪೇನಿಲ್ಲ ಎಂಬರ್ಥದ ಮಾತನಾಡಿ, ತಾವೂ ಪ್ರಸ್ತುತ ಎಂಬುದನ್ನು ಪ್ರಚುರ ಪಡಿಸುತ್ತಾರೆ. ಇಲ್ಲಾ ಅಂದವರು ಯಾರು ಸಾರ್? ಆಹಾರ ಅವರವರ ಆಯ್ಕೆ ಅಲ್ಲವೇ? ಬೇರೆ ಸಂದರ್ಭಗಳಲ್ಲಿ ರಾಮಾಯಣ, ಮಹಾ ಭಾರತ ಮತ್ತು  ಭಗವದ್ಗೀತೆ ಕಪೋಲ ಕಲ್ಪಿತ ಕಥೆಗಳು,  ಈ ಎಲ್ಲ ಗ್ರಂಥಗಳ ಉದ್ದೇಶವೇ ವರ್ಗೀಕೃತ ಸಮಾಜದ ನಿರ್ಮಾಣ, ಮತ್ತು ನೀವು ಗುರುತಿಸುವ ಕೆಳಸ್ತರದ ಜನರ ತುಳಿತ ಎಂದು ನಂಬಿರುವ ನೀವು ಮತ್ತು ಪ್ರಗತಿಪರರು, ದೇವರ ಇರುವಿಕೆ ಮತ್ತು ಪುರಾಣದ ಉಲ್ಲೇಖವನ್ನೇ ನಿಮ್ಮ ವಾದ ಬೆಂಬಲಿಸಲು ಬಳಸುತ್ತಿರುವುದೇ ಗಮನಾರ್ಹ ತಿರುವು.  ನಾಳೆಯಿಂದಲೇ ರಾಮ, ಕೃಷ್ಣರ ದೇವಾಲಯಗಳಲ್ಲಿ ಮಾಂಸ ನೈವೇದ್ಯ ನಡೆಯಲಿ, ನನ್ನ ಇಲಾಖೆಯಿಂದ ಎಲ್ಲ ದೇವಸ್ಥಾನಗಳಿಗೆ “ಮೀನು ಭಾಗ್ಯ”  ಎಂಬ ಆಗ್ರಹ ಮಾಡಿಲ್ಲವೆಂಬುದೇ ಉಡುಪಿ ಕೃಷ್ಣನ ಸದ್ಯದ ನೆಮ್ಮದಿಗೆ ಕಾರಣವೆನಿಸುತ್ತದೆ!

ಅನಂತರ ನೆಡೆದಿದ್ದೆ ಬಹಿರಂಗ ಪತ್ರಗಳ ಸಮರ. ಇದರ ವಿವರ, ಸವಿವರವಾಗಿ ಟಿ.ವಿ. , ಫೇಸ್ ಬುಕಿನಲ್ಲಿ ಲೈಕ್, ಬ್ಲಾಕು, ಷೇರು,ಸವ್ವಾ ಷೇರು ಅನ್ನುತ್ತಲೇ ನೆಡೆದಿದ್ದು ರಂಪ ರಾಮಾಯಾಣ.  ನಾನು ನಿಮ್ಮನ್ನೂ ಬಹಳ ಗೌರವಿಸುತ್ತೇನೆ ಎಂದು ಶುರುವಾದ ಪಂಥಾಹ್ವಾನ, ಶಾಂತಿ ಸಂಧಾನದ ಆಹ್ವಾನ,  ನಿಮ್ಮ ವಿರುದ್ಧ ತೆರೆ ಹಿಂದೆ  ಸಮರ ಸಾರಿದ್ದು ನಾನೇ ಎಂಬ ತಪ್ಪೊಪ್ಪಿಗೆಯಾ? ಈ ನಡುವೆ ನಮಗೆ ಇಂತಹ ಪ್ರಸ್ತಾಪ ಆಗುತ್ತದೆ ಎಂಬ ಅರಿವಿರಲಿಲ್ಲ, ಅದಕ್ಕೆ ನಮ್ಮದಂತೂ  ಸಮ್ಮತಿ ಇಲ್ಲ. ನಮ್ಮನ್ನು ಆಹ್ವಾನಿಸಿದಾಗ ತಿಳಿಸಿದ ಉದ್ದೇಶವೇ ಬೇರೆ ಇತ್ತು, ಎನ್ನುತ್ತಲೇ, ನಿಮ್ಮ ನಡುವಿನ ಗೆಳೆಯರೇ ಹೊರ ನಡೆದಿದ್ದರಿಂದ ಪೇಚಿಗೀಡಾಗಿ,  ಸಾಮಾಜಿಕ ಶಾಂತಿಯ ಮಾತು ಆರಂಭಿಸಿದ್ದೂ  ನನ್ನ ದೃಷ್ಟಿಯಲ್ಲಿ ಗಮನೀಯ ಬೆಳವಣಿಗೆ.

ನಾರಾಯಣ ಗುರುಗಳ ಕ್ರಾಂತಿಕಾರಿ ತತ್ವ ಒಪ್ಪಿ ಕೊಂಡಾಡುವ ನಿಮಗೆ, ಪೇಜಾವಾರ ಯತಿಗಳು ತಮ್ಮ ಪರ್ಯಾಯದ ಹೊತ್ತಿನಲ್ಲಿ ಆರಂಭಿಸಿದ ವಿನೂತನ “ದುಶ್ಚಟ ನಿವಾರಣ ಹುಂಡಿ”, ದಲಿತ, ದಮನಿತರೂ ಸೇರಿ ಎಲ್ಲ ವರ್ಗದವರ ಜೀವನ ಮಟ್ಟ ಸುಧಾರಣೆಗೆ ಮಾಡಿದ ಪ್ರಾಮಾಣಿಕ ಪ್ರಯತ್ನ ಎಂದು ಅನಿಸಿಲ್ಲವೇ? ಅವರಿಗೆ ಈ ಕುರಿತು ನಿಷ್ಕಲ್ಮಶ ಕಾಳಜಿ ಇಲ್ಲದಿದ್ದರೆ, ಇನ್ನ್ಯಾವುದೋ ಕಾರ್ಯಕ್ರಮದ ಹೆಸರಿನಲ್ಲಿ ಹಣವನ್ನೇ ಸಂಗ್ರಹಿಸುವ ಹುಂಡಿಯೇ ಘೋಷಿಸಬಹುದಿತ್ತು.  ಧರ್ಮಸ್ಥಳದಂತಹ ದೇವಸ್ಥಾನಗಳು ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ,  ಹಳ್ಳಿ ಹಳ್ಳಿಗಳಲ್ಲಿ ಸ್ವದ್ಯೋಗ ಸೃಷ್ಟಿಸಿ, ಅವರ ಕಸುಬು ಮತ್ತು ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವ ಮಾರುಕಟ್ಟೆ ದೊರಕಿಸಿದ್ದೂ ಅಲ್ಲದೇ,  ದಮನಿತರಲ್ಲಿ ಆತ್ಮವಿಶ್ವಾಸ ಬೆಳೆಸಿ, ಉತ್ತಮ ಗುಣ ಮಟ್ಟದ ಜೀವನ ನಾವೂ  ನಡೆಸಬಹುದು ಎಂಬ ಭರವಸೆ ಮೂಡಿಸಿಲ್ಲವೇ? ದಲಿತ ದಮನಿತರ ಉನ್ನತಿಯೇ ನಿಮ್ಮ ಪ್ರಾಮಾಣಿಕ ಧ್ಯೇಯವಾಗಿದ್ದರೆ, ಅಂತಹ ಕಾರ್ಯಕ್ರಮ ರೂಪಿಸಿ ನಿಮ್ಮ ಕಳಕಳಿಯನ್ನು ಸಾಕಾರಗೊಳಿಸಬಹುದಿತ್ತಲ್ಲವೇ? ಅದು ಬಿಟ್ಟು, ಏಳಿ ಎದ್ದೇಳಿ, ನಿಮ್ಮ ಸುತ್ತಲಿನ ಜನರೊಂದಿಗೆ ಬಡಿದಾಡಿ ಎಂಬರ್ಥದ ಕಿಡಿ ಹಚ್ಚುವ ಉದ್ಘೋಷ ನಿಜವಾಗಿ ಬೇಕಿತ್ತಾ?

ನಿಮ್ಮ ಹೋರಾಟ ನರೇಂದ್ರ ಮೋದಿಯವರ ಮೇಲೆ ಅವರ ಸರ್ಕಾರದ ಮೇಲೆ, ಬಿ.ಜೆ.ಪಿ ಸರ್ಕಾರದ ಮೇಲಾದರೆ ಅದನ್ನು ನೇರವಾಗಿ ಮಾಡಿ. ಆದರೆ ಅದ್ಕಕಾಗಿ ಜಾತಿ ಪದ್ದತಿಯೇ ನಮ್ಮ ಸಮಾಜಕ್ಕೆ ಅಂಟಿದ ಬಹು ದೊಡ್ಡ ಕಳಂಕ ಎಂಬುದನ್ನೇ ನಂಬಿದ ನೀವು, ಜಾತಿವಾರು ಸಂಘಟನೆ ಮಾಡಿಕೊಂಡು ಉಳಿದ ಜಾತಿಯವರ ಮೇಲೆ ಕಿಡಿ ಕಾರುವ ಸಾಮಾಜಿಕ ಶಾಂತಿಯ ಫೈರ್ ಡ್ರಿಲ್ ದಯವಿಟ್ಟು ನೆಡೆಸಬೇಡಿ.  ದೇವರು ಧರ್ಮವನ್ನೇ ನಂಬದ ನಿಮ್ಮ ಬಹುತೇಕ ನೇತಾರರು ತಮ್ಮ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗುವುದು ಚುನಾವಣೆ ಬಂದಾಗ ಮಾತ್ರ.  ಆಗಲೇ ರಾಮ, ಕೃಷ್ಣ, ಯೇಸು, ಪೈಗಂಬರ್’ರ ಆದಿಯಾಗಿ ಎಲ್ಲರನ್ನೂ ನಂಬುವ ಇವರು ಮತಗಳ ಸಂಖ್ಯೆಗನುಗುಣವಾಗಿ ಹಣ ಹಂಚಿ ತಮ್ಮ ಸಮಾನತೆಯನ್ನು ತತ್ವಬದ್ದವಾಗಿ ಪ್ರದರ್ಶಿಸುವುದು. ಅನಂತರ ಅವರದ್ದೂ ಭೂಮಿಗಾಗಿ, ಸಂಪತ್ತಿಗಾಗಿ, ಅಧಿಕಾರಕ್ಕಾಗಿ ನಿರಂತರ ಹೋರಾಟ! ಈ ಚುನಾವಣೆಯ ಸಮಯದ ಸಮಾನತೆಯ ಆಚರಣೆಯೇ ಹೆಚ್ಚುತ್ತಿರುವ ಅಸಮಾನತೆಗೆ ಮೂಲ ಕಾರಣವಲ್ಲವೇ? ಗೆದ್ದ ನಂತರ ಬಹುತೇಕ ನಾಯಕರೂ ಅವರ ಬೆಂಬಲಿಗರು ಮಾತ್ರ ನಡೆಸುವ ಹಣ, ಭೂಮಿಗೆ ಬರುವ ಊಟದ ಪಂಕ್ತಿಯಲ್ಲೇಕೆ ಪಂಕ್ತಿ ಬೇಧ? ಅಲ್ಲಿಯೂ ವಿರೋಧಿಗಳಿಗೂ ಸಮನಾಗಿಗೆ ಬರುವ ಅವಕಾಶ ಕಲ್ಪಿಸಿ ಸಹಪಂಕ್ತಿ ಭೋಜನಕ್ಕೆ ಎಡೆ ಮಾಡಿಕೊಟ್ಟರೆ, ನೋಡ ನೋಡುತ್ತಿದ್ದಂತೆಯೇ ಅಸಮಾನತೆ ಇಲ್ಲವಾಗುತ್ತದೆ. ಆದರೆ, ಹಾಗಾದರೆ ಮುಂದೆ ನಿಮ್ಮ ಅಸ್ತಿತ್ವ ಹೇಗೆ? ಎಂಬ ಯೋಚನೆಯೇ ನಿಮ್ಮ ವಿರಾಟ್ ಓ…ರಾಟದ ಕೆಸರೆರಾಚಾಟಕ್ಕೆ ಮೂಲ ಹೊರತು, ದಲಿತ ದಮನಿತರ ಅಭಿವೃದ್ಧಿ, ಸರ್ವರಿಗೂ ಸಮ ಬಾಳು ಸಮ ಪಾಲು ಅಲ್ಲ ಅಲ್ಲವೇ?

-ಜಿ. ಪ್ರತಾಪ ಕೊಡಂಚ.

pratap.kodancha@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post