X

ರೈತರ ಸಮಸ್ಯೆಯ ಅರಿವಾಗೋಕೆ ಕಾವೇರಿ ಕೊಳ್ಳ ಬರಿದಾಗಬೇಕಾಯ್ತೆ…?

ಸಂಘಟನೆಗಳಿಗೆ ರೈತರ ಸಮಸ್ಯೆಯ ಅರಿವಾಗೋಕೆ ಕಾವೇರಿ ಕೊಳ್ಳ ಬರಿದಾಗಬೇಕಾಯ್ತೆ…?


ಇಂಥದ್ದೊಂದು ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿದೆ..

ರೈತ ಮತ್ತು ಸಮಸ್ಯೆ ಒಂದು ರೀತಿಯಲ್ಲಿ ಒಂದೇ ನಾಣ್ಯದ ಮುಖಗಳಿದ್ದಂತೆ.. ಸಂಕಷ್ಟಗಳನ್ನು ಬಿಟ್ಟು ಬದುಕಿದ್ದು ಕಡಿಮೆಯೇ, ಜೊತೆಗೆ ಅದಕ್ಕೆ ಸಿಕ್ಕ ಸ್ಪಂದನೆಯೂ ಅಷ್ಟಕ್ಕಷ್ಟೇ.. ಅದರಲ್ಲೂ ಉತ್ತರ ಕರ್ನಾಟಕದ ರೈತರ ಪರಿಸ್ಥಿತಿ ಕೇಳೋದೇ ಬೇಡ.. ಅವರು ಕಷ್ಟದಲ್ಲಿದ್ದಾರೆ ಅಂತ ನಮಗೆ ತಿಳಿಯೋಕೆ ಬೆಳೆದ ಬೆಳೆಯನ್ನು ರಸ್ತೆಗೇ ಚೆಲ್ಲಬೇಕು.. ಬೆಳೆದ ಬೆಳೆಗೆ ಸಕ್ರಮ ಬೆಲೆ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೋತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಆಹಾರ ಬೆಳೆಗಳನ್ನು ರೈತನೇ ನಿರ್ಲಕ್ಷ ಮಾಡುವಂತೆ ಮಾಡಿದ್ದಂತೂ ಸುಳ್ಳಲ್ಲ…

ಆಹಾರ ಬೆಳೆಯ ವಿಷಯಕ್ಕೆ ಬರೋಣ. ಇತ್ತೀಚಿನ ವರ್ಷಗಳಲ್ಲಿ ನಿತ್ಯ ಜೀವನಕ್ಕೆ ಬೇಕಾದ ಈ ಆಹಾರ ಬೆಳೆಗಳಿಗೆ ಬೆಲೆ ಇಲ್ಲದ್ದರಿಂದ, ಬೆಳೆಯುವಿಕೆಯ ಪ್ರಮಾಣ ಮೊದಲಿಗಿಂತ ಕಡಿಮೆಯಾಗಿದೆ. ಇವುಗಳನ್ನು ಬೆಳೆಯಲು ನೀರು, ಗಾಳಿ, ಗೊಬ್ಬರಗಳು ಎಷ್ಟು ಮುಖ್ಯವೊ, ಅದೇ ರೀತಿ ನಿತ್ಯ ಕೆಲಸವೂ ಅಷ್ಟೇ ಮುಖ್ಯ. ಉದಾಹರಣೆಗೆ ಭತ್ತವನ್ನೇ ತೆಗೆದುಕೊಳ್ಳಿ. ನೀರು, ಗೊಬ್ಬರದ ಜೊತೆ ಪ್ರತಿ ನಿತ್ಯ ಗದ್ದೆಗೆ ನೀರು ಕಟ್ಟೋದೂ ಅಷ್ಟೇ ಮುಖ್ಯ.. ನಮಗೆ ಬಂಗಾರದಂತೆ ಹೊಳೆಯೊ ಭತ್ತ ಇಲ್ಲವೇ ಬೆಳ್ಳಿಯ ಮುಖದ ಸೋನಾ ಮಸೂರಿ ಕಾಣುತ್ತದೆಯೇ ಹೊರತು ಅದರ ಹಿಂದಿನ ಶ್ರಮವೊಂದು ಕಾಣದು. ಉಳುವುದು, ಬಿತ್ತುವುದು, ನಾಟಿ, ಕಳೆ ನಿರ್ಮೂಲನೆ, ಗೊಬ್ಬರ ಹಾಕೋದು, ಕಟಾವು, ಒಕ್ಕಲು, ತೂರುವಿಕೆ ಎಲ್ಲವೂ ಕಾಣದ ಕೆಲಸದಂತೆ ಇದೆ.. ಇದರ ಜೊತೆಗೆ ಕೆಜಿಗೆ 20 ರೂಪಾಯಿಯಂತೆ ರೈತನಿಗೆ ನೀಡಿ 45 ರೂಪಾಯಿಗೆ ನಿಮ್ಮ ಕೈನಲ್ಲಿಡುವ ಮಧ್ಯವರ್ತಿ ಮತ್ತು ವ್ಯಾಪಾರಿಗಳ ದೊಡ್ಡ ಹಸ್ತ ರೈತರ ಮೇಲೆಷ್ಟು ಪರಿಣಾಮ ಬೀರ್ತಾ ಇದೆ ಅನ್ನೊ ಅರಿವು ನಮಗೆ ಬರುವುದೇ ಇಲ್ಲ…

ಹೀಗೆ ಇಂತಹ ಹತ್ತು ಹಲವು ಕಾರಣಗಳಿಂದ ಆಹಾರ ಬೆಳೆಯನ್ನು ಕಡಿಮೆ ಮಾಡಿರುವ ರೈತ, ವಾಣಿಜ್ಯ ಬೆಳೆಯ ಕಡೆ ಮುಖ ಮಾಡಿದ್ದಾನೆ.. ಅಡಿಕೆ, ಕಾಫೀ, ವೇನಿಲ್ಲಾ, ರಬ್ಬರ್, ಶುಂಠಿ ಹೀಗೆ ಲಾಭದಾಯಕ ಬೆಳೆಯನ್ನು ಬೆಳೆಯುವ ಕನಸನ್ನು ಕಾಣ ತೊಡಗಿ ಆಹಾರ ಬೆಳೆಗಳಿಗೆ ಎಳ್ಳು ನೀರು ಬಿಡುತ್ತಿದ್ದಾನೆ.. ಇದು ಇನ್ನೂ ಮುಂದುವರಿದರೆ, ಮುಂದೊಮ್ಮೆ ಪಶ್ಚಿಮ ಆಫ್ರಿಕಾ ಮತ್ತು ರಷ್ಯಾದಂತೆ ಆಹಾರಕ್ಕಾಗಿ ಹಾಹಾಕಾರ ಏಳುವುದರಲ್ಲಿ ಯಾವ ಸಂಶಯವೂ ಇಲ್ಲ… ಇನ್ನು ವಾಣಿಜ್ಯ ಬೆಳೆಯಲ್ಲಾದರೂ ಸಮಾಧಾನ ಕಾಣುತ್ತಿದ್ದಾನಾ..? ಎಂದರೆ ಅದೂ ಇಲ್ಲ.. ಅಡಿಕೆ ಬೆಳೆಗಾರರ ಸಂಕಷ್ಟ ಇಂದು ನೆನ್ನೆಯದಲ್ಲವೇ ಅಲ್ಲ… ಒಂದು ತೊಲ(10ಗ್ರಾಂ) ಚಿನ್ನದ ಬೆಲೆ ಒಂದು ಕ್ವಿಂಟಾಲ್ ಅಡಿಕೆಗೆ ಸಮನಾಗಿರುತ್ತೆ ಅನ್ನೋ ಅಲಿಖಿತ ಸಿದ್ಧಾಂತವೊಂದು ಒಂದಾನೊಂದು ಕಾಲದಲ್ಲಿತ್ತು.. ಈಗ ಎರಡೂ ಬೆಲೆಗಳು ಉತ್ತರ ಧ್ರುವ ದಕ್ಷಿಣ ಧ್ರುವದಂತಾಗಿದೆ… ಅಡಿಕೆ ಬೆಳೆಗಾರರ ಪರವಾಗಿ ನಾವಿದ್ದೇವೆ ಎಂದು ಹೇಳಿ ಕೇಂದ್ರ ಸರ್ಕಾರದ ಬಳಿ ಮಾತನಾಡಲು ಹೋದ ಆಯೋಗ ಮಾಡಿದ್ದಾದರೂ ಏನು..?? ಬೆಂಬಲ ಬೆಲೆ ಕೇಳುತ್ತಿದೆ.. ಹಿಂದೊಮ್ಮೆ ಬೆಂಬಲ ಬೆಲೆಯಿಂದಾದ ಸಹಾಯ ಗೊತ್ತಿಲ್ಲವೇ..?? ಬೆಂಬಲ ಬೆಲೆ ಬಂದಾಗ ಜರಡಿ ಹಿಡಿಯುವ ಕಾರ್ಯಕ್ರಮವೊಂದು ಪ್ರಾರಂಭವಾಗುತ್ತೆ. ಇದು ತಪ್ಪು ಎಂದು ಹೇಳುತ್ತಿಲ್ಲ. ಜರಡಿ ಹಿಡಿಯುವವರು ಮಾಡುವುದಾದರೂ ಏನು?? ಆರಿಸಿ ಬೇರೆ ಬೇರೆ ವರ್ಗಗಳನ್ನಾಗಿ ಬೇರ್ಪಡಿಸಿದ ಅಡಿಕೆಗಳನ್ನು ಮತ್ತೆ ಮತ್ತೆ ಬೇರ್ಪಡಿಸುತ್ತಾರೆ, ಅದರಲ್ಲಿ ಅತ್ಯುತ್ತಮ ಅಡಿಕೆಗಳಿಗೆ ಬೆಂಬಲ ಬೆಲೆ ಘೋಷಣೆ ಆಗುತ್ತದೆ. ಹೀಗಾದಾಗ ಸುಮಾರು ನೂರು ಕೆಜಿ ಅಡಿಕೆಯಿದ್ದರೆ ಇಪ್ಪತ್ತೊ ಇಪ್ಪತ್ತೈದೊ ಕೆಜಿ ಅಡಿಕೆಗೆ ಬೆಂಬಲ ಬೆಲೆ ಸಿಗುತ್ತೆ. ಕೊನೆಗೆ ಸರಾಸರಿ ತೆಗೆದರೆ, ತೆನೆ ಪೂಜೆಯ ದಕ್ಷಿಣೆಯಂತೆ ನೂರೊ ಇನ್ನೂರೊ ರೂಪಾಯಿ ಬೆಂಬಲ ಬೆಲೆ ಸಿಕ್ಕಂತಾಗುತ್ತದೆ.. ಇದ್ಯಾವ ಪುರುಷಾರ್ಥಕ್ಕೆ..?? ಆಮದು ನಿಲ್ಲಿಸಿ ಎಂದಾಗ ವಿದೇಶಾಂಗ ನೀತಿಯ ಚರ್ಚೆಯಾಗುತ್ತೆ.. ಆಮದು ನಿಲ್ಲಿಸಬೇಡಿ, ಬದಲಾಗಿ ಅದರ ಪ್ರಮಾಣ ಕಡಿಮೆ ಮಾಡಿ ಎಂದರೆ ಉತ್ತರವಾಗಿ ಸಿಗೋದು ಸ್ಮಶಾನ ಮೌನವೇ..

ಹಾಗೆ ನೋಡಿದರೆ ಕಾಫಿ ಬೆಳೆಗಾರರು ಸ್ವಲ್ಪ ಮಟ್ಟಿಗೆ ಅದೃಷ್ಟವಂತರು. ಎರಡು ಬಾರಿ ಸಾಲ ಮನ್ನಾ ಆಗಿ ಬದುಕಿಕೊಂಡರು. ಅಕಾಲಿಕ ಮಳೆಯಿಂದಾಗಿ ಸಾಲ ಮನ್ನಾ ಆಗ್ರಹವೂ ಜೋರಾಗಿತ್ತು ಬಿಡಿ. ಆದರೆ ಅಡಿಕೆಯ ವಿಷಯದಲ್ಲಿ ಮಾತ್ರ ರೈತನ ಸ್ಥಿತಿ ಕೇಳುವಂತಿಲ್ಲ ಮತ್ತು ಇದರ ಬಗ್ಗೆ ಚಿಂತಿಸುವ ನಾಯಕನೂ ಒಬ್ಬ ಇಲ್ಲ. ಕೇಂದ್ರದ ನಿಯೋಗ ಎಂದವರು ನಮ್ಮಿಂದಾಗದು ಎಂದು ಕೈ ಎತ್ತಿದ್ದಾರೆ. ನಾವುಗಳಿನ್ನೂ ಅಗುಳು ಸಿಗಬಹುದೆಂದು ತಿಳಿ ಕುಡಿಯುತ್ತಿದ್ದೇವೆ. ಇದೆಲ್ಲಕ್ಕಿಂತ ದುಸ್ಥಿತಿಯಲ್ಲಿ ಇರುವದು ಹಣ್ಣು ಮತ್ತು ತರಕಾರಿಗಳು. ಒಂದು ಸ್ಥಿರ ಬೆಲೆ ಸಿಗದೆ ಪ್ರತೀ ವರ್ಷ ಒದ್ದಾಡುತ್ತಿರುವ ಬೆಳೆಗಾರರು ಕೆಲವೊಮ್ಮೆ ಒಂದೆರಡು ರೂಪಾಯಿಗಳಿಗೂ ಮಾರಾಟ ಮಾಡಿದ್ದಿದೆ. ಈಗ ಕೆಲವೇ ತಿಂಗಳುಗಳ ಹಿಂದೆ ಕೆಜಿಗೆ ನೂರು ರೂಪಾಯಿ ತಲುಪಿದ್ದ ಟೊಮ್ಯಾಟೊ ಕೊನೆಗೆ ಐದು ರೂಪಾಯಿಗೆ ಇಳಿಯಿತು. ಈಗ ಹದಿನೈದು ರೂಪಾಯಿ. ನಾನು ಹೇಳುತ್ತಿರುವುದು ಮಾರುಕಟ್ಟೆಯ ಬೆಲೆ. ಅಂದರೆ ರೈತನ ಹತ್ತಿರ ತೆಗೆದುಕೊಂಡು ಮಾರಾಟ ಮಾಡುವ ಬೆಲೆ. ಹಾಗಾದರೆ ರೈತನಿಗೆ ಎಷ್ಟು ಹಣ ಸಿಗಬಹುದು ಎಂದು ಒಮ್ಮೆ ಯೋಚಿಸಿ ನೋಡಿ.. ಹೀಗಾದರೆ ಹೇಗೆ ಸ್ವಾಮಿ..?? ಒಂದು ಸ್ಥಿರ ಮತ್ತು ನಿರ್ದಿಷ್ಟ ಬೆಲೆ ಸಾಧ್ಯವಿಲ್ಲವೇ..??

ದೇಶದಲ್ಲಿ ಆಹಾರ ಬೆಳೆಯನ್ನು ಮೊದಲಿನಷ್ಟು ಬೆಳೆಯುತ್ತಿಲ್ಲ. ರೈತರು ವಾಣಿಜ್ಯ ಬೆಳೆಗಳಲ್ಲಿ ಲಾಭವಿದೆ ಅಂತ ಅದರತ್ತ ಮುಖ ಮಾಡಿದ್ದಾರೆ ಎನ್ನುವ ಆರೋಪವಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಸೋದು ಆರೋಪ ಮಾಡಿದಷ್ಟು ಸುಲಭವಿಲ್ಲ. ಮತ್ತೊಮ್ಮೆ ಭತ್ತದ ಉದಾಹರಣೆ ತೆಗೆದುಕೊಳ್ಳಿ. ನೀವು ಮಾರುಕಟ್ಟೆಯಲ್ಲಿ ತೆಗೆದುಕೊಳ್ಳೊ ಅಕ್ಕಿಯ ಆರಂಭದ ಬೆಲೆ ಮೂವತ್ತೈದು ರೂಪಾಯಿ, ಅದೇ ಭತ್ತವಾದಲ್ಲಿ ಸ್ವಲ್ಪ ಕಡಿಮೆ. ಆದರೆ ರೈತನಿಗೆ ಸಿಗುವ ಬೆಲೆ ಎಷ್ಟು ಎಂದು ಯೋಚಿಸಿದ್ದೀರಾ..?? ಇದೇ ಮೂವತ್ತೈದು ರೂಪಾಯಿಯ ಅಕ್ಕಿಯನ್ನು ಕೊಳ್ಳುವುದು ಸುಮಾರು ಹದಿನೆಂಟರಿಂದ ಇಪ್ಪತ್ತೆರಡು ರೂಪಾಯಿಗಳಿಗೆ. ನಂತರ ಮಧ್ಯವರ್ತಿಗಳು, ವ್ಯಾಪಾರಿಗಳು, ಸಾರಿಗೆ ಮತ್ತು ಲಾಭ ಎಲ್ಲ ಸೇರಿದಾಗ ಮೂವತ್ತೈದು ರೂಪಾಯಿಗಳಾಗುತ್ತೆ. ಅದನ್ನೇ ಸೂಪರ್ ಮಾರ್ಕೇಟ್’ಗಳಲ್ಲಿ ಕೊಂಡರೆ ನಲವತ್ತೈದು ರೂಪಾಯಿಗಿಂತ ಕಡಿಮೆ ಬೆಲೆಗೆ ದೊರೆಯಲಾರದು. ನಾಟಿ, ಕಟಾವು, ಒಕ್ಕಲು ಮುಂತಾದವುಗಳ ಕೂಲಿ, ಗೊಬ್ಬರ ಹೀಗೆ ಹತ್ತು ಹಲವು ಕೆಲಸಕ್ಕೆ ಹಣ ವ್ಯಯ ಮಾಡಿದ ನಂತರ ಕಡಿಮೆ ಬೆಲೆಗೆ ಮಾರಾಟವಾದರೆ ಅಥವಾ ಸರಿಯಾದ ಬೆಲೆ ಸಿಗದೇ ಇದ್ದರೆ ಲಾಭವೆಲ್ಲಿ..?? ರೈತನಿಗೂ ಬದುಕಿದೆ, ಆತ ಬೆಳೆಗಿಂತ ಹೆಚ್ಚು ಸಾಲ ಮಾಡಿ ಕೃಷಿ ಮಾಡಿದಾಗ ಅದನ್ನು ತೀರಿಸಿ, ಮನೆ ನಡೆಸಿಕೊಂಡು ಮುಂದಿನ ಭವಿಷ್ಯವನ್ನು ಯೋಚಿಸುವುದು ಬೇಡವೇ..?? ಅವನ ಆದಾಯ ತಿಂಗಳ ಸಂಬಳದಂತಲ್ಲ. ತುಫಾನು, ಅತಿವೃಷ್ಟಿ, ಅನಾವೃಷ್ಟಿಗಳಾದರೆ ಅವನ ಬದುಕನ್ನು ಕಾಯುವವರು ಯಾರು ನೀವೇ ಹೇಳಿ..??

ಕೆಲವು ಸಮಯದ ಹಿಂದೆ ಕನ್ನಡ ಪತ್ರಿಕೆಯೊಂದರಲ್ಲಿ ಶುಂಠಿ ಬೇಸಾಯದ ವರದಿಯೊಂದು ಬಂದಿತ್ತು… ಅದರಲ್ಲಿ ಹೀಗೆ ಉಲ್ಲೇಖಿಸಿದ್ದರು “ಮಲೆನಾಡಿನಲ್ಲಿ ಶುಂಠಿ ಬೇಸಾಯ ವ್ಯಾಪಕವಾಗಿ ಹಬ್ಬುತ್ತಿದೆ: ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ. ಕೇರಳದವರು ಇಲ್ಲಿನ ಫ‌ಲವತ್ತಾದ ಹೊಲಗಳಿಗೂ ಅರಣ್ಯದಂಚಿನ ಪ್ರದೇಶಗಳಿಗೂ ಲಗ್ಗೆಯಿಡುತ್ತಿದ್ದಾರೆ  ಶುಂಠಿ ಬೆಳೆಯಲಿಕ್ಕಾಗಿ. ಕೇರಳ ಶುಂಠಿ ಬೆಳೆಗಾರರ ಸಂಘದ ಅಂಕಿ ಸಂಖ್ಯೆಗಳ ಅನುಸಾರ, ಕೇರಳದ 13,000 ರೈತ ತಂಡಗಳು ಮಲೆನಾಡಿನಲ್ಲಿ ಶುಂಠಿ ಬೆಳೆದ ಪ್ರದೇಶದ ವಿಸ್ತೀರ್ಣ 50,000 ಹೆಕ್ಟೇರು! ಶಿಕಾರಿಪುರದಲ್ಲಿ ಶುಂಠಿ ಬೇಸಾಯ ಪ್ರದೇಶ 2013ರಲ್ಲಿದ್ದ 5,200 ಹೆಕ್ಟೇರಿನಿಂದ 2014ರಲ್ಲಿ 6,000 ಹೆಕ್ಟೇರಿಗೆ ಹೆಚ್ಚಳ. ಭತ್ತ, ಜೋಳ ಇತ್ಯಾದಿ ಆಹಾರದ ಬೆಳೆ ಬೆಳೆಯುತ್ತಿದ್ದ ಹೊಲಗಳು ಈಗ ಶುಂಠಿ ಬೆಳೆಗೆ ಬಳಕೆ.” ಎಂಬುದು ವರದಿಯ ಸಾರಾಂಶ. ನಿಜ ಕೇರಳಿಗರೊಂದೇ ಅಲ್ಲ, ಕನ್ನಡಿಗರೂ ಶುಂಠಿ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಶುಂಠಿ ಇಳುವರಿಯ ಜೊತೆಗೆ ಲಾಭದಾಯಕ ಬೆಳೆ. ಇದರ ಅನನುಕೂಲವೆಂದರೆ ಇದಕ್ಕೆ ಹಾಕುವ ರಾಸಾಯನಿಕ. ಲಾಭಕ್ಕಾಗಿ ಮಾಡುವುದರಿಂದ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಮಾಡಲೇಬೇಕು, ಅದೇ ಕಾರಣದಿಂದ ವಿಷಯುಕ್ತವಾಗುವ ಅದೇ ಭೂಮಿಯಲ್ಲಿ ಶುಂಠಿಯನ್ನು ಪ್ರತೀ ವರ್ಷ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಹಾಳಾಗುತ್ತೆ. ಆ ಭೂಮಿಯಲ್ಲಿ ಬೆರೆ ಆಹಾರ ಯೋಗ್ಯ ಬೆಳೆ ಬೆಳೆದಾಗ ಶುಂಠಿಗೆ ಬಳಕೆಯಾಗಿ ಉಳಿದ ರಾಸಾಯನಿಕಗಳು ಬೆಳೆದ ಬೆಳೆಯಲ್ಲಿ ಸೇರುತ್ತವೆ. ಅದನ್ನು ಸೇವಿಸಿದರೆ ಕೆಲವೊಮ್ಮೆ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಯಾವ ರೈತನೂ ಇಷ್ಟೊಂದು ರಾಸಾಯನಿಕವನ್ನು ಸೇರಿಸಿ ಮಣ್ಣನ್ನು ವಿಷಯುಕ್ತ ಮಾಡುವ ಪಣ ತೊಡಲಾರ. ಆದರೆ ಬೇರೆ ದಾರಿಯಿಲ್ಲ, ಕಾರಣ ರೈತನೂ ಸಹ ತನ್ನ ಉಳಿವನ್ನು ನೋಡಬೇಕಲ್ಲವೇ..??

ಇದು ಸಣ್ಣ ಪುಟ್ಟ ಉದಾಹರಣೆ ಅಷ್ಟೇ ಮತ್ತು ಉತ್ತರ ಕರ್ನಾಟಕದ ಕೆಲವೇ ಕೆಲವು ಕಡೆಯ ರೈತ ಎದುರಿಸುತ್ತಿರುವ ಸಮಸ್ಯೆ.. ಇನ್ನು ಮೆಣಸು, ಜೋಳ, ಧಾನ್ಯ ಬೆಳೆಯುವವರು, ಈರುಳ್ಳಿ, ತೆಂಗು ಹೀಗೆ ಹತ್ತು ಹಲವು ಬೆಳೆ ಬೆಳೆಯುವವರ ಸಮಸ್ಯೆ ಬೇರೆಯೇ ಇದೆ. ಬಯಲು ಸೀಮೆಯಲ್ಲಿ ಅದೆಷ್ಟೊ ಜನ ಅಡಿಕೆ ಬೆಳೆಯಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಯಾಕೆಂದರೆ ಅಲ್ಲಿ ಅವರು ಬೆಳೆಯುವ ಬೆಳೆಗೆ ಬೆಲೆ ಸಿಗದು, ಅಡಿಕೆಯಲ್ಲಿ ಅವರು ಬೆಳೆಯುವ ಬೆಳೆಗಿಂತ ಹೆಚ್ಚು ಲಾಭವಿದೆ ಎಂದು.. ಆದರೆ ಅದೇ ಅಡಿಕೆ ಬೆಳೆಗಾರರು ಸೋತಿರುವುದು ಅರಿವಿಲ್ಲ.. ಜೊತೆಗೆ ಅಡಿಕೆ ಅಲ್ಲಿ ಉತ್ತಮವಾಗಿ ಫಲ ನೀಡುವುದೂ ಇಲ್ಲ.. ಆದರೂ ಬೆಳೆಯುವ ಹಠ ಮತ್ತು ಉಳಿವಿನ ಹೋರಾಟ.. ಈ ವರ್ಷ ಮಳೆಯ ಪ್ರಮಾಣ ಕಡಿಮೆ. ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚಾಗಿ ಮಳೆಯಾಗಿದೆ ಮತ್ತು ಕೃಷಿಗೂ ತುಂಬಾ ಕೊರತೆಗಳು ಆಗಿಲ್ಲ.. ಆದರೆ ದಕ್ಷಿಣ ಭಾಗ ಮಾತ್ರ ಮಳೆಗೆ ಬರ ಎದುರಿಸಿದ್ದು ನಿಜ. ಇದರ ಜೊತೆ ಜೀವನದಿ ಕಾವೇರಿಯ ಸಮಸ್ಯೆಯಿಂದಾಗಿ ಕೃಷಿಯ ಬಗ್ಗೆ ಕೇಳೋದೇ ಬೇಡ.. ಹೀಗಿರುವಾಗ ರೈತಪರವಾಗಿ ಹೋರಾಡಲು ಕೆಲವು ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ. ಕರ್ನಾಟಕದಲ್ಲಿ ಎರಡನೇ ಬಾರಿಗೆ ಬರ ಬಡಿಯುತ್ತಿದೆ, ಕಾವೇರಿ ಬತ್ತಿದೆ, ಅದೆಷ್ಟೋ ಜನ ರೈತರು ಕೃಷಿಯನ್ನೇ ಮಾಡಿಲ್ಲ ಹಾಗಾಗಿ ಈ ವರ್ಷ ರೈತರ ಪರವಾಗಿ ನಿಲ್ಲೋದು ನಮ್ಮ ಕರ್ತವ್ಯ, ಅವರಿಗೆ ಪರಿಹಾರ ನೀಡಬೇಕು ಅಂತ ಒತ್ತಾಯಿಸೋಣ ಎಂದು ಹೇಳುತ್ತಿವೆ.. ಇದು ತಪ್ಪಲ್ಲ ಆದರೆ ಇಲ್ಲಿ ನನ್ನ ಪ್ರಶ್ನೆ ಒಂದಿದೆ.. ಅದೇನೆಂದರೆ, ರೈತರ ಸಮಸ್ಯೆಯ ಅರಿವಾಗೋಕೆ ಕಾವೇರಿ ಕೊಳ್ಳವೇ ಬರಿದಾಗಬೇಕಾಯ್ತೇ…?

ನಾನಿಲ್ಲಿ ರೈತ ಸಂಘಟನೆಗಳ ಬಗ್ಗೆ ಹೇಳ್ತಾ ಇಲ್ಲ.. ಕರ್ನಾಟಕವನ್ನು ವಿಭಕ್ತವಾಗಿ ನೋಡದೇ ಹೋರಾಟ ಮಾಡಿ ಲಾಠಿ ಪೆಟ್ಟು ತಿಂದವರೆಂದರೆ ರೈತ ಸಂಘಟನೆಯ ಸದಸ್ಯರು ಮಾತ್ರ.. ಉಳಿದವರ್ಯಾರೂ ರೈತರದ್ದು ಸಮಸ್ಯೆ ಎಂದೇ ಪರಿಗಣಿಸಲಿಲ್ಲ.. ಕಳಸಾ ಬಂಡೂರಿನ ಮಧ್ಯಂತರ ವರದಿಯ ಪರಿಣಾಮದಿಂದ ಬೇಸರಗೊಂಡ ರೈತ ಹೋರಾಟ ಮಾಡುತ್ತಿದ್ದಾಗ ಯಮನೂರಿನಂಥ ಊರುಗಳಲ್ಲಿ ಮನ ಬಂದಂತೆ ರೈತರನ್ನು, ಅವರ ಹೆಂಡತಿ ಮಕ್ಕಳನ್ನು ಥಳಿಸುತ್ತುದ್ದಾಗಲೂ ಹೋರಾಡಬೇಕು ಅಂತ ಅನ್ನಿಸಲಿಲ್ಲ.. ಆ ಘಟನೆ ಹೇಗೆ ಮರೆತು ಹೋಯ್ತು ಎಂದು ಮತ್ತೆ ಹೇಳಬೇಕಿಲ್ಲ ಅಲ್ಲವೇ..? ಹಿಂದಿನ ವರ್ಷ ಉತ್ತರ ಕರ್ನಾಟಕದ ಮಂದಿ ತುಂಬಾ ನೀರಿನ ಸಮಸ್ಯೆ ಎದುರಿಸಿದರು, ಅದೆಷ್ಟೊ ವರ್ಷಗಳ ನಂತರ ಕರಾವಳಿಯ ಜನ ಭೀಕರ ಬರ ಎದುರಿಸಿದರು. ಆದರೆ ಒಂದು ಮಾಧ್ಯಮ ಮಾತ್ರ ಇದರ ಜೊತೆ ನಿಂತು ಆ ಸ್ಥಳಕ್ಕೆ ಹೋಗಿ, ಪರಿಸ್ಥಿತಿಯನ್ನು ನೋಡಿ ಅಲ್ಲಿನ ಜನ ಪ್ರತಿನಿಧಿಗಳಿಗೆ ನೇರ ಪ್ರಸಾರದಲ್ಲೇ ದೂರವಾಣಿ ಕರೆ ಮಾಡಿ ನೀರು ತರಿಸುವ ಪ್ರಯತ್ನ ಮಾಡಿತು.. ಉಳಿದ ಅದೆಷ್ಟೋ ಸಂಘಟನೆಗಳು ಎತ್ತಿನ ಹೊಳೆ ಯೋಜನೆ ಹಿಡಿದುಕೊಂಡು ಕರಾವಳಿಗರನ್ನು ದೂರಿದವೇ ಹೊರತು ಪರಿಸ್ಥಿತಿಯನ್ನು ಅರಿತು ಕೊಳ್ಳಲೇ ಇಲ್ಲ.. ಹೀಗಿರುವಾಗ ಈ ವರ್ಷ ರೈತರ ಜೊತೆ ನಿಲ್ಲೋಣ ಎಂದು ಆದರ್ಶದ ಮಾತುಗಳನ್ನಾಡುತ್ತ  ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.. ಕಳೆದ ವರ್ಷ ರೈತ ಆತ್ಮಹತ್ಯೆ ಮಾಡಿಕೊಂಡು  ಸಾಯುತ್ತಿದ್ದಾಗಲೂ ಸಹ ನಿಮ್ಮ ಸಾಂತ್ವನ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿತ್ತೇ ಹೊರತು, ಆ ರೈತರ ಕುಟುಂಬಗಳ ಜಮೀನಿನ ಅಂಚನ್ನೂ ತಲುಪಲಿಲ್ಲ… ಇದನ್ನು ನಾನು ಕೇವಲ ಒಬ್ಬ ಸಾಮಾನ್ಯ ನಾಗರೀಕನಾಗಿ ಹೇಳುತ್ತಿಲ್ಲ.. ಒಬ್ಬ ಕೃಷಿಕನಾಗಿ, ಕೃಷಿಯೇ ಜೀವನ ಎಂದು ಬದುಕುತ್ತಿರುವ ಒಬ್ಬ ರೈತನ ಮಗನಾಗಿ, ರೈತರ ಸಮಸ್ಯೆಯನ್ನು ಅರಿತು ಹೇಳುತ್ತಿದ್ದೇನೆ…

ರೈತರ ಸಮಸ್ಯೆಗೆ ಸ್ಪಂದಿಸುವುದಾದರೆ ಮೊದಲು ಸಮಸ್ಯೆಗಳ ಅನುಭವ ಇರಬೇಕು. ನೀರಿಲ್ಲದಾಗ, ಆತ್ಮಹತ್ಯೆಗೊಳಗಾದಾಗ ರೈತರ ನೆನಪಾಗೊ ಸಂಘಗಳು ಒಂದು ನಾಲ್ಕೈದು ದಿನ ಕೂಗಿ ಆಮೇಲೆ ಸುಮ್ಮನಾಗಿ ಬಿಡುತ್ತಾರೆ. ಆಮೇಲಿನ ಪರಿಸ್ಥಿತಿ ನೋಡೋದಕ್ಕೂ ನೆನಪಿರಲಾರದು. ಮತ್ತೆ ರೈತ ನೆನಪಾಗಬೇಕು ಎಂದರೆ ಬರ ಬರಬೇಕು ಇಲ್ಲವೇ ರೈತ ವಿಷ ಕುಡಿಯಬೇಕು.. ರೈತರಿಗಾಗಿ ಮಿಡಿಯಬೇಕು ಅಂತೆಲ್ಲ ಅನ್ನಿಸಿದರೆ ಆತ ಕೆಳಗೆ ಬೀಳದಂತೆ ತಡೆಯಿರಿ. ಬೆಳೆದ ಬೆಳೆಯ ಶಾಶ್ವತ ಸ್ಥಿರ ಬೆಲೆಗಾಗಿ ಎಷ್ಟೋ ವರ್ಷಗಳಿಂದ ಒದ್ದಾಡುತ್ತಿದ್ದಾನೆ. ಅದಕ್ಕೆ ನಿಮ್ಮಿಂದ ಏನು ಸಹಾಯವಾಗಬಹುದೊ ಅದನ್ನು ಮಾಡಿ. ಇದ್ಯಾವುದೂ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಆದರೆ ಏನಾದರೂ ಮಾಡಲೇಬೇಕು ಅನ್ನೋ ತುಡಿತ ನಿಮ್ಮಲ್ಲಿದ್ದರೆ ಸೂಪರ್ ಮಾರ್ಕೆಟ್’ನಲ್ಲಿ ವಸ್ತುವಿನ ಮೇಲೆ ಬರೆದಷ್ಟೂ ಹಣವನ್ನು ನೀಡಿ ಹೇಗೆ ಅದನ್ನು ಕೊಳ್ಳುತ್ತೀರೊ ಹಾಗೆಯೇ ಸಂತೆಗೆ ಹೋದಾಗಲೂ ಸಹ ಸೊಪ್ಪು ತರಕಾರಿಯನ್ನು ತಂದಿಟ್ಟುಕೊಂಡ ರೈತನ ಹತ್ತಿರ ಏನಪ್ಪಾ ಇಷ್ಟು ಹಣ ಹೇಳ್ತೀಯಾ ಕಡಿಮೆ ಮಾಡ್ಕೊ ಅಂತ ಚೌಕಾಸಿ ಮಾಡದೆ ಆತ ಹೇಳಿದಷ್ಟು ಹಣ ಕೊಟ್ಟು ಕೊಂಡುಕೊಳ್ಳಿ. ಆತನೂ ಬದುಕಲಿ.

Facebook ಕಾಮೆಂಟ್ಸ್

Manjunath Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..
Related Post