X

ಕರಾಳ ಗರ್ಭ ಭಾಗ -13


ಇನ್ನು ಆ ಪತ್ತೇದಾರ ಮತ್ತು ಆತನ ಜತೆಗಾತಿ ಲಾಯರ್ ಲೂಸಿ ಮಿಕ್ಕೆಲ್ಲವನ್ನು ಪತ್ತೆ ಹಚ್ಚಿ ರಾಮನ್’ನನ್ನೂ ಕರೆದುಕೊಂಡು ಇಲ್ಲಿಗೆ ಬಂದೇ ಬರುತ್ತಾರೆ. ರಾಮನ್’ಗೆ ನನ್ನನ್ನು ಅರೆಸ್ಟ್ ಮಾಡಲು ಮನಸ್ಸು –ಧೈರ್ಯ ಇರುವುದಿಲ್ಲಾ, ‘ತಾನೂ ಸಹಾ ಜಾನಿಗೆ ರಹಸ್ಯ ಬಾಯಿಬಿಟ್ಟುದರಲ್ಲಿ ಶಾಮೀಲಿದ್ದೆನಲ್ಲಾ ’ ಎಂದು ಅವನಿಗೆ ಅಳುಕು ಬರುತ್ತದೆ..

ಇನ್ನು ನಾನು ಬದುಕಿದ್ದರೆ ಎಲ್ಲರಿಗೂ ತೊಂದರೆಯೇ ಹೆಚ್ಚು..ನನಗೂ ಈ ಜೀವನ ಸಾಕು ಸಾಕಾಗಿದೆ….

ನಾನು ನದಿಯ ಬಳಿ ಯಾವಾಗಲೂ ಸೂರ್ಯಾಸ್ತಮ ನೋಡುವಾಗಲೆಲ್ಲಾ. ಆ ದಿಗಂತದಲ್ಲಿ ಒಮ್ಮೆ ಮುಳುಗಿ ಹೋಗಬೇಕೆಂಬ ಯೋಚನೆ ಬರುತ್ತಿರುತ್ತದೆ.. ನನ್ನ ಮಗಳು ಮಾಡುತ್ತಿದ್ದ ಪೆಯಿಂಟಿಂಗ್, ಅವರ ಪ್ರೇಮ, ಆ ಯುವಕನ ಕೊಲೆ ಎಲ್ಲಾ ಅಲ್ಲಿಯೇ ನಡೆದದ್ದು.  ನಾನು ಈ ರಿವಾಲ್ವರನ್ನು ತೆಗೆದುಕೊಂಡು ಅಲ್ಲಿಗೆ ಹೋಗುತ್ತಿದ್ದೇನೆ..ನನ್ನೊಂದಿಗೆ ಅದೂ ಕಾಣೆಯಾಗಿಬಿಟ್ಟರೆ ಈ ಪ್ರಕರಣವೆಲ್ಲಾ ಸುಖಾಂತ್ಯವಾಗುತ್ತದೆ ಎನಿಸುತ್ತಿದೆ…ಇನ್ನು ಬೇರ್ಯಾವ ದಾರಿಯೂ ಇಲ್ಲಾ..  ಈ ಮುದುಕನನ್ನು ಸಾಧ್ಯವಾದರೆ ಕ್ಷಮಿಸಿಬಿಡಿ…ರಚನಾ- ರಾಮನ್, ನೀವೆಲ್ಲಾ ಒಂದೇ ಸಂಸಾರದಂತೆ ಸುಖವಾಗಿದ್ದರೆ ಸಾಕು…

–   ಮಾಧವನ್ ನಂಬೂದರಿ

ನನಗೆ ಎರಡು ಕ್ಷಣ ಇದೆಲ್ಲವನ್ನು ಅರಗಿಸಿಕೊಳ್ಳಲೂ ಸಮಯವಿರಲಿಲಲ್ಲಾ.

ನಾನು ಅಕ್ಕಪಕ್ಕದಲ್ಲಿ ನೋಡಿದೆ..ಆತ ಕುಡಿದಿದ್ದ ಹಾಲಿನ ಲೋಟ ಮೇಜಿನ ಮೇಲೆಯೆ ಇನ್ನೂ ಬೆಚ್ಚಗಿತ್ತು…ಹಾಗಾದರೆ ಅವರು ಮನೆಯಿಂದ ಹೊರಟು ಜಾಸ್ತಿ ಸಮಯವಾಗಿರಲಾರದು!!

ಆತನನ್ನು ಆತ್ಮಹತ್ಯೆಯಿಂದ ರಕ್ಷಿಸಬೇಕೆಂದು ನನ್ನ ಮನಸ್ಸಾಕ್ಷಿ ನುಡಿಯುತಿತ್ತು. ಆ ಮೇಜಿನ ಮೇಲೆಯೆ ಆ ಪತ್ರವನ್ನು ಬಿಟ್ಟು ಹುಚ್ಚನೆಂತೆ ವೇಗವಾಗಿ ಮನೆಬಿಟ್ಟು ಹೊರಕ್ಕೆ ಓಡಿದೆ..ನದಿಯ ಬದಿಯ ಮರಳಿನಲ್ಲಿ ಕಾಲುಗಳು ಕುಸಿಯುತ್ತಿದ್ದರೂ ಗಮನಿಸದೇ ದಾಪುಗಾಲು ಹಾಕುತ್ತಾ ನದಿ ತಲುಪಿ ನೋಡಹತ್ತಿದೆ.

ಅದೋ!.. ಏರಿಳಿಯುತ್ತಿರುವ ನದಿಯ ಅಲೆಗಳ ನಡುವೆ ಆತ ಎದ್ದು ಬಿದ್ದೂ ನಡೆದುಹೋಗುತ್ತಿರುವ ದೃಶ್ಯ ಕಾಣಿಸಿತು. ತಡ ಮಾಡದೇ ನದಿಗೆ ಧುಮುಕಿದೆ..ಯಾವಾಗ ನಡೆಯುವುದನ್ನು ನಿಲ್ಲಿಸಿದೆನೋ, ಈಜಹತ್ತಿದ್ದೆನೋ ನನಗೇ ಗೊತ್ತಿಲ್ಲ..ನೀರಿಳಿಯುವ ನನ್ನ ಕಣ್ಮುಂದೆ ದೂರದೂರಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ನಂಬೂದರಿಯ ಆಕೃತಿ ಕಾಣಿಸಿತು.ಅದರ ಮೇಲೆ ಮಾತ್ರ ನನ್ನ ನಿಗಾ ಇತ್ತು.

ಒಮ್ಮೆ ಹಿಂದೆ ತಿರುಗಿ ನೋಡಿದಾಗ ಲೂಸಿ- ರಚನಾ- ರಾಮನ್ ಸಹಿತಾ ದಡಕ್ಕೆ ಓಡಿ ಬರಹತ್ತಿದ್ದು ಕಾಣುತ್ತಿತು.

ನಾನು ಏದುಸಿರು ಬಿಡುತ್ತಾ ವೇಗವಾಗಿ ನಂಬೂದರಿಯ ಅಕೃತಿಯತ್ತ ಈಜಹತ್ತಿದ್ದೆ..ನದಿಯ ಅಲೆಗಳ ಭೋರ್ಗರೆತ ಹೆಚ್ಚುತ್ತಿದ್ದು ನಾವು ಸಮುದ್ರದ ಸಂಗಮದತ್ತ ಸಾಗುತ್ತಿದ್ದೇವೆಂಬುದನ್ನು ನೆನೆಪಿಸುತ್ತಿತ್ತು. ನೀರು ಎದೆ ಮಟ್ಟ ಮುಟ್ಟಿ ಅಲೆಗಳ ಸೆಳೆತ ಭಯಂಕರವಾಗಿತ್ತು..

ಆಗೊಮ್ಮೆ ಸ್ವಲ್ಪ ನನ್ನ ಮಾತು ಕೇಳಲು ಆತನಿಗೆ ಕೊನೆಯ ಅವಕಾಶ ಇದೇ ಎನಿಸಿದಾಗ, ನಾನೆ ಎದೆ ಮಟ್ಟದ ನೀರಿನಲ್ಲಿ ನಿಂತು ಆತನತ್ತ ಅರಚಿದೆ: “ನಿಲ್ಲಿ ಸಾರ್!!, ಮುಂದೆ ಹೋಗಬೇಡಿ, ನಾನು ನಿಮ್ಮನ್ನು ರಕ್ಷಿಸುತ್ತೇನೆ..ಅಲ್ಲೆ ನಿಲ್ಲಿ ಪ್ಲೀಸ್!!”ಎಂದು..ನನ್ನ  ಧ್ವನಿ ಆ ಅಲೆಗಳ ಬೊಬ್ಬಿರಿಯುವ ಸದ್ದಿನಲ್ಲಿಯೂ ಅವರ ಕಿವಿ ಮುಟ್ಟಿರಲು ಸಾಧ್ಯ..ಅದಕ್ಕೇ ಆತ ಮೊದಲ ಬಾರಿಗೆ ಹಿಂತಿರುಗಿ ನನ್ನನ್ನು ನೋಡಿದರು….ಅವರ ಕಂಗಳಲ್ಲಿ ಅದೇನೋ ಅಲೌಕಿಕ ಶಾಂತಿಯಿದ್ದಂತೆ ನನಗೆ ಭಾಸವಾಯಿತು..ಆದರೆ ಮರುಕ್ಷಣವೇ ಇನ್ನೊಂದು ದೊಡ್ದ ಅಲೆ ಏರಿ ಬಂದು ನಂಬೂದರಿಯವರನ್ನು ಪೂರ್ಣವಾಗಿ ತನ್ನ ಆಳಕ್ಕೆ ಸೆಳೆದುಕೊಂಡು ಹೋಗಿಬಿಟ್ಟಿತ್ತು.

ನಾನು ನಿರಾಸೆಯಿಂದ “ಓಹ್ ಹ್ ಹ್ !”..ಎಂದು ಕೂಗಿದ್ದೆ..ಆದರೆ ಈ ಬಾರಿ ನನ್ನ ದನಿಯನ್ನು ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲಾ..ಸುತ್ತಲೂ ಎಲ್ಲೆಲ್ಲೂ ನೀರು, ಆದರೆ ಮನಸ್ಸು ಮಾತ್ರ ಖಾಲಿಯಾಗಿ ಒಣಗಿತ್ತು…

ದಡಕ್ಕೆ ನಿಧಾನವಾಗಿ ಈಜುತ್ತಾ ವಾಪಸ್ ತಲುಪಿದಾಗ ಲೂಸಿ ನನ್ನ ಬಳಿ ಧಾವಿಸಿ ಬಂದು, ನೆಂದು ತೊಪ್ಪೆಯಾಗಿ ತೂರಾಡುತ್ತಿದ್ದ ನಾನು ಆಯ ತಪ್ಪಿ ಬೀಳದಂತೆ ಭದ್ರವಾಗಿ ಹಿಡಿದುಕೊಂಡಳು..

ರಚನಾ ಕಣ್ಣಲ್ಲಿ ನೀರಿತ್ತು, ಅಲ್ಲಿಯೂ ಭೋರ್ಗರೆವ ಭಾವನೆಗಳಿದ್ದವು:

“ಈ ಕಪ್ಪು ನದಿ ಅಪ್ಪನನ್ನೂ ನುಂಗಿ ಬಿಡ್ತು…” ಎಂದಳು ಕ್ಷೀಣ ದನಿಯಲ್ಲಿ…

ಆಗ ರಾಮನ್ ಆಕೆಯ ಭುಜವೊತ್ತಿ ಸಂತೈಸಿದರು ” ಮೃದುಲಾ ಮನೆಯಲ್ಲಿ ಕಾಯುತ್ತಿದ್ದಾಳೆ, ಬಾ” ಎಂದರು..

ಆಕೆ ಕಣ್ಣೊರೆಸಿಕೊಂಡು ಪತಿಯ ಮುಖ ನೋಡಿದರು. ಕಂಗಳಿದ ದು:ಖದ ಕಾರ್ಮುಗಿಲು ಸರಿದು ಹೊಳಪಾಯಿತೋ ಎನಿಸಿತು.

ಮೃದುಲಾ ಮತ್ತು ಫರ್ನಾಂಡೆಸ್ ಈಗ ನಂಬೂದರಿ ಮನೆಯಲ್ಲೇ ನಮಗಾಗಿ ಕಾಯುತ್ತಿದ್ದರು. ಅವರೀಗೋ ಈಗ ಎಲ್ಲಾ ಒಂದೊಂದೇ ತಿಳಿಯಾಗುತಿತ್ತು..ಅವರ ಮನದ ಭಾವನೆಗಳೂ, ಅಭಿಪ್ರಾಯಗಳೂ ಇನ್ನು ಹಸಿಯಾಗಿದ್ದವು. ಹಾಗಾಗಿ ಮೂಕವಿಸ್ಮಿತರಾಗಿದ್ದರು!

ಫರ್ನಾಂಡೆಸ್ ನನ್ನ ಕೈ ಒತ್ತಿ ಕಣ್ಣಲ್ಲಿಯೇ ತಮ್ಮ ಕೃತಜ್ಞತೆಯನ್ನು ಸೂಚಿಸುತ್ತಿದ್ದವರು:

“ನೀವು ನಾವಂದು ಕೊಂಡಿದ್ದಿಕ್ಕಿಂತಾ ಹೆಚ್ಚು ಚೆನ್ನಾಗಿ ನಿಮ್ಮ ಕೆಲಸ ಮಾಡಿಕೊಟ್ಟಿರಿ..ಪ್ರಾಣವನ್ನೂ ಲೆಕ್ಕಿಸದೆ ಕರ್ತವ್ಯ ಮಾಡಿದಿರಿ… ಬಹಳ ಚತುರರಪ್ಪಾ ನೀವು!”:ಎಂದರು

ನಾನು ಪ್ರತ್ಯುತ್ತರವಾಗಿ ಜೊರಾಗಿ ನಕ್ಕೆ: “ಇದೇ ಮೊದಲ ಬಾರಿಗೆ ಯಾವ ಅಪರಾಧಿಯನ್ನೂ ಹಿಡಿಯದೆಯೇ ಕೇಸ್ ಯಶಸ್ವಿಯಾಗಿ ಮುಗಿದು ಹೋಗಿದ್ದು!!” ಎಂದೆ. ರಚನಾರನ್ನು ಅಪ್ಪಿಕೊಂಡಿದ್ದ ಮೃದುಲಾ, ಇತ್ತ ಬಂದು ನನ್ನ ಮತ್ತು ಲೂಸಿಯ ಕೈ ಕುಲಕಿದರು.

“ ನಮಗೆ ನಮ್ಮ ಸಂಸಾರವನ್ನೇ ಒಂದು ಮಾಡಿಕೊಟ್ಟಿರಿ..ನಿಜವಾಗಿಯೂ ಇದೇ ’ಸುಂದರ ಸಂಸಾರ ’, ನನ್ನ ಸೀರಿಯಲ್ ಅಲ್ಲಾ!!”ಎಂದರು…

“ ವಿಜಯ್, ನಿಮಗೆ ಇದಕ್ಕಾಗಿ ಒಂದು ದೊಡ್ಡ ಬೋನಸ್ ಕೊಡಿಸುತ್ತೇನೆ, ಊರಿಗೆ ವಾಪಸ್ ಹೋಗಿ” ಎಂದರು ಫರ್ನಾಂಡೆಸ್. ಶ್ರೀಮಂತ ಲಾಯರಿಗೆ ಈ ಕೇಸಿಗೆ ನಾ ಪಡೆದ ಫೀಸ್ ಕಳಪೆಯೆನಿಸಿರಬೇಕು!

“ದೊಡ್ಡ ಬೋನಸ್ ನನಗೆ ಇಲ್ಲಿಗೆ ಬಂದಾಗಲೇ ಸಿಕ್ಕಿತು, ಸಾರ್..”ಎಂದು ಬಿಟ್ಟೆ,

ಫರ್ನಾಂಡೆಸಿಗೆ ಅರ್ಥವಾಗಲಿಲ್ಲಾ, ಕಣ್ಣು ಕಣ್ಣು ಬಿಟ್ಟರು..ಆದರೆ ಮೃದುಲಾಗೆ ತಕ್ಷಣ ಅರ್ಥವಾಗಿತ್ತು

“ ಗುಡ್ ಚಾಯ್ಸ್!!…”ಎಂದಷ್ಟೆ ಹೇಳಿ ಮುಗುಳ್ನಕ್ಕು ನಮ್ಮಿಬ್ಬರನ್ನೂ ಬಿಟ್ಟು ಮನೆಯವರತ್ತ ನೆಡೆದರು.

೧೬

ಮುಂದಿನ ದಿನ ಕೆಲವು ಮಹತ್ವದ ಬೆಳವಣಿಗೆಗಳು ಅಲ್ಲಿದ್ದ ಎಲ್ಲರ ಜೀವನದಲ್ಲೂ ನೆಡೆದವು.

ಕಮೀಶನರ್ ರಾಮನ್ ಬೆಳಿಗ್ಗೆಯೇ ತಮ್ಮ ರಾಜೀನಾಮೆಯಿತ್ತು ತಮ್ಮ ಕೈ ಕೆಳಗಿನ ಅಸಿಸ್ಟೆಂಟ್ ಕಮೀಶನರಿಗೆ ತಮ್ಮ ಸ್ಥಾನವನ್ನು ತೆರವು ಮಾಡಿಕೊಟ್ಟರು. ತಾವು ಸತ್ಯವನ್ನು ಮುಚ್ಚಿಟ್ಟು ಹಳೆಯ ಕೊಲೆ ಅಪರಾಧವನ್ನು ಮಾಡಿದ್ದ ಮಾವನನ್ನು ಅರೆಸ್ಟ್ ಮಾಡದ ಲೋಪಕ್ಕೆ ಮತ್ತು ಬ್ಲ್ಯಾಕ್’ಮೈಲ್ ಮಾಡುತ್ತಿದ್ದ ಜಾನಿಯನ್ನೂ ಗುಪ್ತವಾಗಿಟ್ಟಿದ್ದ ಕಾರಣಗಳಿಗೆ ತಮ್ಮ ಮೇಲೆ ಕೇಸ್ ಜರುಗಿಸುವಂತೆ ವಿನಂತಿಸಿಕೊಂಡರು. ಆಗ ನಾನೂ ಅಲ್ಲೆ ಇದ್ದೆ.

ಬಹಳ ವರ್ಷಗಳಿಂದ ಈ ಪ್ರಾಮಾಣಿಕ ಅಧಿಕಾರಿಯನ್ನು ನೋಡಿದ್ದ ಅವರ ಅಸಿಸ್ಟೆಂಟ್ ಸಪ್ಪಗೆ ನಗುತ್ತಾ ಹೇಳಿದ್ದು ಇಷ್ಟೆ:

‘ಜಾನಿಯೂ ಇಲ್ಲಾ, ಅವನನ್ನು ಕೊಲೆ ಮಾಡಿದ ನಂಬೂದರಿಯೂ ಇಲ್ಲಾ..ಆ ಕೇಸಿನ ದಾಖಲೆಗಳನ್ನು ಕದ್ದ ಶಾಂತಿಯೂ ಇಲ್ಲಾ..ಕೊಲೆ ಮಾಡಿದ್ದ ಆಯುಧವೂ ಇಲ್ಲಾ,,ಹಾಗಾಗಿ ಈ ಕೇಸಿನಲ್ಲಿ ಯಾವುದೇ ಹುರುಳಿಲ್ಲ…ಇದು ಕೇವಲ ನೇರವಾದ ಆತ್ಮಹತ್ಯೆ ಕೇಸ್. ಓಪನ್ ಎಂಡ್ ಶಟ್ ಎನ್ನುವಂತೆ.ಇದರಲ್ಲಿ ನಿಮ್ಮ ಅಪರಾಧವೇನೂ ಇಲ್ಲ ’ಎಂದು ಕೇಸ್ ಫೈಲನ್ನು ಪಕ್ಕಕ್ಕಿಟ್ಟನು. ಇನ್ನು ಅದು ನಾನು ನೋಡಿದ್ದ ರಿಜಿಸ್ಟ್ರಾರ್ ಆಫೀಸ್ ತರಹದ ಒಂದು ಹಳೆ ಕಡತಗಳ ಕೋಣೆಗೆ ಸೇರಿ ಬೆಚ್ಚಗೆ ಮಲಗಲಿದೆ ಎಂದು ಭಾವಿಸಿದೆ.

ಮೃದುಲಾ ತಾನು ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಪತ್ರಿಕಾಗೋಷ್ಠಿ ನಡೆಸುವೆ, ಕಳಿಸಿಕೊಡಿ ಎಂದೂ ರಾಮನ್’ಗೆ ಕೋರಿದರು..ಅದರಲ್ಲಿ ರಾಜಕೀಯಕ್ಕೆ ಇನ್ನೇನು ಇಳಿದು ನಿರಾಶ್ರಿತರ ಪುನರ್ವಸತಿಯನ್ನೇ ಮುಖ್ಯ ಭೂಮಿಕೆ ಮಾಡಿಕೊಳ್ಳಬೇಕೆಂದಿದ್ದ ತನಗೆ ಲಾಭವೇ ಆಯಿತು ಎಂದರಿತ ರಾಮನ್ ತಕ್ಷಣ ಒಪಿದ್ದರು.

ಚಿಕ್ಕ ತೆರೆಯ ಟಿ ಆರ್ ಪಿ., ಪ್ರಚಾರ ಮತ್ತು ಜನಪ್ರಿಯತೆಯೆ ಆಧಾರವಾಗಿದ್ದ ಆ ಬಣ್ಣದ ಲೋಕದಲ್ಲಿ ಇವೆಲ್ಲಾ ಸಹಜವೇ ಆಗಿತ್ತು..

ಇದಕ್ಕಿಂತಾ ಇನ್ನು ಸಹಜ ಮತ್ತು ಪ್ರಿಯವಾದ ಘಟನೆಯೆಂದರೆ ಲೂಸಿ ಸ್ವಲ್ಪ ದಿನಗಳ ಕಾಲ ತನ್ನ ಮಾಂಡಿಚೆರ್ರಿ ಆಫೀಸಿನಿಂದ ಹೊರಬಂದು ಬೆಂಗಳೂರಿಗೆ ಶಿಫ್ಟ್ ಆಗಿ ಅಲ್ಲಿ ಮೃದುಲಾ ಮತ್ತು ರಚನಾಗೆ ಸಂಬಂಧಿಸಿದ ಕಾನೂನು ಸಹಾಯಗಳನ್ನು ಮಾಡಲೆಂದು ಸ್ವತಃ ಬಹಳ ಬಿಝಿಯಿದ್ದ ಫರ್ನಾಂಡೆಸ್ ಅವಳಿಗೆ ಹೇಳಿದರು. ಅದಕ್ಕೆ ಲೂಸಿ ಒಪ್ಪಲೇ ಬೇಕಾಯಿತು. ಅದೇ ರೊಟ್ಟಿ ಜಾರಿ ತುಪ್ಪಕ್ಕೆ ಬೀಳಲಿದೆ ಎಂದಿದ್ದೆನಲ್ಲಾ, ಹಾಗೆ!

ಅಂದು ಸಂಜೆ ನಾನಿಳಿದಿದ್ದ ಲಾಡ್ಜಿನ ಬಿಲ್ ತೆತ್ತು, ಕಾರನ್ನು ಬಾಡಿಗೆ ಅಂಗಡಿಗೆ ವಾಪಸ್ ನೀಡಿ ಹೊರಬಂದಾಗ , ಸುಯ್ಯನೆ ಲೂಸಿಯ ಹ್ಯುಂಡೈ ಕಾರ್ ನನ್ನ ಪಕ್ಕವೇ ಬಂದು ನಿಂತಿತು.

ಕಾರಿನಿಂದ ಹೊರಬಂದ ಲೂಸಿ ನನ್ನ ಕೈಗೆ ಕಾರಿನ ಕೀ ಕೊಟ್ಟು, “ಇಲ್ಲಿಂದ ಬೆಂಗಳೂರಿನ ದಾರಿ ನನಗೆ ಗೊತ್ತಿಲ್ಲವಲ್ಲಾ?” ಎಂದು ಚೇಷ್ಟೆಯ ದೃಷ್ಟಿ ಬೀರುತ್ತಾ ನುಡಿದಳು.

ನಾನು ಕಾರ್ ಹತ್ತಿದೆ, ನನ್ನ ಕಂಕುಳಲ್ಲಿ ಕೊರೆಯುತ್ತಿದ್ದ ರಿವಾಲ್ವರ್ ಹೋಲ್ಸ್ಟರ್’ನ್ನು ಹಿಂದಿನ ಸೀಟಿನಲ್ಲಿ ನಮ್ಮ ಬ್ಯಾಗುಗಳ ಜತೆಗೆ ಎಸೆದೆ. ಸದ್ಯದಲ್ಲಿ ಅದಕ್ಕೆ ಕೆಲಸವಿರಲಾರದು ಎಂದು.

ಕಾರ್ ಸ್ಟಾರ್ಟ್ ಮಾಡುತ್ತ, “ಲೂಸಿ, ದಾರಿ ಗೊತ್ತಿಲ್ಲವೆನ್ನುತ್ತೀಯಲ್ಲಾ?..ಅಲ್ಲಿ ಎಲ್ಲಿ ಇಳಿದುಕೊಳ್ಳುತ್ತೀಯಾ, ಯಾರ ಜತೆ ಇರುತ್ತೀಯಾ?” ಎಂದೆ ಮುಗ್ಧನಂತೆ. ನನಗೆ ಬೇಕಿದ್ದ ಉತ್ತರವೇ ಬರುತ್ತದೆಯೆ ಎಂದು ನಿರೀಕ್ಷಿಸುತ್ತಾ!

ಲೂಸಿ ಭುಜ ಕುಣಿಸುತ್ತಾ ನಿರಾತಂಕದಿಂದ “ಅದಕ್ಕೇನು?..ನನಗೆ ತುಂಬಾ ಹತ್ತಿರದವರೊಬ್ಬರಿದ್ದಾರೆ, ಅವರು ನನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುವರು…”ಎಂದಳು.

ಕಾರ್ ಊರು ಬಿಟ್ಟು ಸೇತುವೆಯತ್ತಾ ಸಾಗುತ್ತಿದೆ.

ನಾನು “ಯಾರು, ಫರ್ನಾಂಡೆಸ್ ಅಂಕಲ್ ತಾನೆ?” ಎಂದೆ ಸ್ಪಷ್ಟೀಕರಣ ಕೇಳುತ್ತ.

“ಹೌದು…ಆದರೆ ಅವರು ಹೇಳಿದ ಜಾಗದಲ್ಲೇ ಯಾವಾಗಲೂ ಇರಬೇಕಿಲ್ಲಾ..ಆಗಾಗ ನಿಮ್ಮನ್ನೂ ಬಂದು ನೋಡುತ್ತಿರಬಹುದು!” ಎಂದು ನನ್ನ ಪಕ್ಕೆ ತಿವಿದು,” ಈಗ ತೃಪ್ತಿಯಾಯಿತೆ ?”ಎಂದು ತುಂಟಿಯಂತೆ ನಕ್ಕಳು. ಅವಳ ಕೆನ್ನೆಯ ಗುಳಿಗಳಲ್ಲಿ ಎರಡು ನಕ್ಷತ್ರಗಳು ಮಿನುಗಿದಂತೆನಿಸಿತು.

ನಾವು ಸೇತುವೆ ಮೇಲೆ ಬಂದಾಗ ಬೆಳದಿಂಗಳು ದಟ್ಟವಾಗಿ ಹಬ್ಬಿ ಕಾರಿನಲ್ಲಿ ಇಣುಕಿತ್ತು. ಲೂಸಿಯ ಅಮೃತಶಿಲೆಯಂತಾ ಕೈಗಳ ಮೇಲೆ ಹಾಲು ಸುರಿದಂತೆ.

ಒಮ್ಮೆ ತಿರುಗಿ ನೋಡಿದಾಗ ಕೆಳಗೆ ಕರ್ಫೂರಿ ನದಿಯ ತೆರೆಗಳ ಮೇಲೆ ಚಂದ್ರ ಬಿಂಬ ತೇಲುತ್ತಿತ್ತು.

ನಾವು ಮತ್ತೆ ಹಿಂತಿರುಗಿ ನೋಡಲಿಲ್ಲ.

< ಮುಗಿಯಿತು>

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Related Post