X

ಮಾತು ಮಾತು ಮಥಿಸಿ ಬರಲಿ ಮಾತಿನ ನವನೀತ

ಮಾತು ಒಂದು ಕಲೆ. ಮಾತೇ ಜ್ಯೋತಿರ್ಲಿಂಗ ಅಂದರು ಹಿರಿಯರು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯನ್ನು ಹಳ್ಳಿಗರು ಸುಮ್ಮನೆ ಕಟ್ಟಿಲ್ಲ. ಮಾತೆಂಬುದು ಬರೆದು ಪೋಸ್ಟಿಸಿದ ಫೇಸ್‍ಬುಕ್ ಸ್ಟೇಟಸ್ಸಿನಂತೆ. ಆಡಿ ಬಿಟ್ಟ ಮೇಲೆ ನಾಲಗೆ ಕಚ್ಚಿ ಕ್ಷಮೆ ಕೇಳಿದರೂ ಆಗಬೇಕಾದ ಡ್ಯಾಮೇಜು ಆಗಿ ಹೋಗಿರುತ್ತದೆ; ಫೇಸ್‍ಬುಕ್ಕಿನ ಪೋಸ್ಟು ಸ್ಕ್ರೀನ್‍ಶಾಟ್ ಆಗಿ ಅಮರವಾದಂತೆ. ಹಾಗಾಗಿ ಆಡುವ ಮುನ್ನ ಯೋಚಿಸಬೇಕು; ಸಿಟ್ಟಿನ ಕೈಗೆ ನಾಲಗೆ ಕೊಡಬಾರದು. ಎಲುಬಿಲ್ಲದ ನಾಲಗೆ ಅಡ್ಡಾದಿಡ್ಡಿ ಹೊರಳಾಡಿಬಿಟ್ಟರೆ ಅದರ ಪರಿಣಾಮವನ್ನು ಅದರ ನೆರೆಹೊರೆಯ ಮೂವತ್ತೆರಡು ಹಲ್ಲುಗಳು ಅನುಭವಿಸಬೇಕಾಗುತ್ತದೆ.

ಮಾತಿಗೆ ಪ್ರತಿಮಾತು ಹೆಣೆಯುವುದು ಕೂಡ ಒಂದು ಕಲೆಯೇ. ಇಂಗ್ಲೆಂಡಿನ ಪ್ರಧಾನಮಂತ್ರಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ಮತ್ತು ಸಂಸದೆ ನ್ಯಾನ್ಸಿ ಆಸ್ಟರ್ ನಡುವೆ ನಡೆಯುತ್ತಿದ್ದ ವಾಕ್ಸಮರಗಳದ್ದೇ ಗ್ರಂಥವಾಗುವಷ್ಟು ದೊಡ್ಡ ಸಂಗ್ರಹವಿದೆ. ಒಮ್ಮೆ ಮಾತಿಗೆ ಮಾತು ಬೆಳೆದು ಜಗಳವೆನ್ನುವ ಮಟ್ಟಕ್ಕೆ ಬೆಳೆದಾಗ ಆಸ್ಟರ್, “ವಿನ್‍ಸ್ಟನ್, ನೀವು ನನ್ನ ಪತಿಯಾಗಿದ್ದರೆ ಕಾಫಿಯಲ್ಲಿ ವಿಷ ಬೆರೆಸಿ ಕೊಡುತ್ತಿದ್ದೆ” ಎಂದು ಬಿಟ್ಟಳಂತೆ. ಒಂದು ಪ್ರತಿಷ್ಠಿತ ದೇಶದ ಪ್ರಧಾನಿ, ಹೆಣ್ಣೊಬ್ಬಳ ಇಂತಹ ಟೀಕೆಯನ್ನು ಸಾರ್ವಜನಿಕವಾಗಿ ಹೇಗೆ ಎದುರಿಸಬಹುದು? ಕಪಾಳಕ್ಕೆ ಬಿಗಿದೇ ಬಿಟ್ಟರೆ ಮರುದಿನದ ಪತ್ರಿಕೆಗಳಲ್ಲಿ ಅದೇ ದೊಡ್ಡ ಹೆಡ್‍ಲೈನ್ ಆಗಿಬಿಡುತ್ತದೆ. ಹಾಗೆಂದು ಸುಮ್ಮನಿರುವಂತೆಯೂ ಇಲ್ಲ; “ಪ್ರಧಾನಿಯ ಬುಡವನ್ನೇ ಅಲ್ಲಾಡಿಸಿದ ನ್ಯಾನ್ಸಿ” ಎಂಬ ಗಡಿಗೆ ಗಾತ್ರದ ಹೆಡ್ಡಿಂಗ್ ಕೊಟ್ಟು ಪತ್ರಿಕೆಗಳು ಚರ್ಚಿಲ್‍ನ ಮಾನ ಹರಾಜು ಹಾಕಿ ಬಿಡುತ್ತವೆ. ಚರ್ಚಿಲ್ ಆಕೆಯನ್ನೇ ಒಂದೆರಡು ಕ್ಷಣ ತದೇಕ ಚಿತ್ತದಿಂದ ನೋಡಿ, “ನ್ಯಾನ್ಸಿ, ನೀನು ನನ್ನ ಪತ್ನಿಯಾಗಿದ್ದರೆ ನಾನು ಆ ಕಾಫಿಯನ್ನು ಸಂತೋಷದಿಂದ ಕುಡಿಯುತ್ತಿದ್ದೆ” ಎಂದು ಬಿಟ್ಟರು. ಅದರ ಅರ್ಥ ಏನು? ನ್ಯಾನ್ಸಿ ಆಸ್ಟರ್‍ನಂಥ ಜಗಳಗಂಟಿಯನ್ನು ಪತ್ನಿಯಾಗಿ ಪಡೆಯುತ್ತಿದ್ದರೆ ವಿಷ ಕುಡಿಯುತ್ತಿದ್ದೆ ಎಂದೇ ಅಥವಾ ಆಕೆಯಂತಹ ರೋಚಕ ಪತ್ನಿ ವಿಷವನ್ನೇ ಕೊಟ್ಟರೂ ಸಂತೋಷದಿಂದ ಕುಡಿದು ವಿಧೇಯತೆ ತೋರಿಸುತ್ತಿದ್ದೆನೆಂದೇ? ಯಾರಿಗೂ ಚರ್ಚಿಲ್ ಮಾತಿನ ಅರ್ಥ ಕೇಳುವ ಧೈರ್ಯ ಇರಲಿಲ್ಲವಾದರೂ ವಾರಕ್ಕಾಗುವಷ್ಟು ಭರಪೂರ ಚರ್ಚೆಗಳಿಗಂತೂ ಆ ಮಾತುಕತೆ ದಾರಿ ಮಾಡಿಕೊಟ್ಟಿತು.

ಚರ್ಚಿಲ್ ಇಂತಹ ಪ್ರತ್ಯುತ್ಪನ್ನಮತಿಗೆ ಹೆಸರುವಾಸಿ. ಇಂಗ್ಲೆಂಡಿನ ಪ್ರಸಿದ್ಧ ವ್ಯಕ್ತಿಯೂ ಅಭಿನವ ಷೇಕ್ಸ್’ಪಿಯರ್ ಎಂದು ಹೊಗಳಿಸಿಕೊಂಡ ನಾಟಕಕಾರನೂ ಆಗಿದ್ದ ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಚರ್ಚಿಲ್‍ಗೆ ಒಂದು ಸಂದೇಶ ಕಳಿಸಿದರು. “ಪ್ರಧಾನಮಂತ್ರಿಗಳೇ, ನನ್ನ ಹೊಸ ನಾಟಕದ ಮೊದಲ ರಂಗ ಪ್ರದರ್ಶನವಿದೆ. ಈ ಪತ್ರದ ಜೊತೆಗೆ ಎರಡು ಟಿಕೇಟುಗಳನ್ನಿಟ್ಟಿದ್ದೇನೆ. ನೀವು ಬರಬೇಕು; ಗೆಳೆಯರನ್ನೂ ತರಬೇಕು – ಇದ್ದರೆ” – ಇದು ಒಕ್ಕಣೆ. ಚರ್ಚಿಲ್ ಎಂಬ ಕೋಪಿಷ್ಟ, ಜಗಳಗಂಟನಿಗೆ ಗೆಳೆಯರೇ ಇಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿ ಚುಚ್ಚುವ ಇರಾದೆ ಷಾ ಅವರದ್ದಾಗಿತ್ತು. ಚರ್ಚಿಲ್ ಮಾರೋಲೆ ಬರೆದರು. “ಮಿಸ್ಟರ್ ಷಾ, ಕ್ಷಮಿಸಬೇಕು. ಮೊದಲ ಪ್ರದರ್ಶನಕ್ಕೆ ಬರಲಾಗುತ್ತಿಲ್ಲ. ಎರಡನೇ ಪ್ರದರ್ಶನ ಮಿಸ್ ಮಾಡುವುದಿಲ್ಲ – ಇದ್ದರೆ”. ಹೀಗೆ ಸೇರಿಗೆ ಸವ್ವಾಸೇರು ಮರಳಿಸಿ ಲೆಕ್ಕ ಚುಕ್ತಾ ಮಾಡುವುದರಲ್ಲಿ ಚರ್ಚಿಲ್ ಎತ್ತಿದ ಕೈಯಾಗಿದ್ದರು. ಒಮ್ಮೆ ವಿಪಕ್ಷದಲ್ಲಿದ್ದ ಸಂಸದೆ ಬೆಸ್ಸೀ ಬ್ರಾಡಕ್ ಯಾವುದೋ ಪಾನಗೋಷ್ಠಿಯಲ್ಲಿ, ಕುಡಿದು ಮತ್ತೇರಿದ್ದ ಚರ್ಚಿಲ್ ಬಳಿ ಬಂದು “ನೀವು ಮಿತಿ ಮೀರಿ ಕುಡಿದು ಬಿಟ್ಟಿದ್ದೀರಿ. ಇದು ಅಸಹ್ಯ” ಎಂದು ಹೇಳಿ ಬಿಟ್ಟಳು. ಈ ಬಿಳಿಯರಿಗೆ ಬೇರೆ ಯಾವ ಅವಮಾನವನ್ನೂ ಸಹಿಸಿಕೊಳ್ಳುವ ಸಂಯಮ, ತಾಳ್ಮೆ ಇದ್ದೀತು. ಆದರೆ “ಕುಡಿದು ಟೈಟ್ ಆಗಿದ್ದೀ” ಎನ್ನುವುದು ಮಾತ್ರ ಗುಂಡಿಗೆಗೆ ಚೂರಿ ಇರಿದಷ್ಟೇ ದೊಡ್ಡ ಆಘಾತ. ಅದನ್ನು ಮಾತ್ರ ಯಾವ ಬಿಳಿಯನೂ ಸಹಿಸಲಿಕ್ಕೇ ಆರ. ಹಾಗಿರುವಾಗ ಪರಂಗಿಗಳಲ್ಲೇ ತಾನು ಉಚ್ಚ ವ್ಯಕ್ತಿಯೆಂದು ನಂಬಿಕೊಂಡಿದ್ದ ಚರ್ಚಿಲ್ ಸಾಹೇಬರಿಗೆ ಒಬ್ಬ ಹೆಂಗಸು, ಕುಡಿದು ತೂರಾಡುತ್ತಿದ್ದೀಯಾ ಎಂದರೆ ಹೇಗಾಗಿರಬೇಡ! ಚರ್ಚಿಲ್ಲರ ತಾಪ ತಾರಕಕ್ಕೇರಿತು. “ಡಿಯರ್ ಬೆಸ್ಸೀ. ಹೌದು, ನಾನು ಕುಡಿದಿದ್ದೇನೆ ಮತ್ತು ನೀನು ಕುರೂಪಿ. ನಾಳೆ ಮುಂಜಾನೆಯ ಹೊತ್ತಿಗೆ ನನ್ನ ಅಮಲು ಇಳಿದಿರುತ್ತದೆ, ಆದರೆ ನಿನ್ನ ಕುರೂಪ ಹಾಗೇ ಇರುತ್ತಲ್ಲಾ?” ಎಂದರು. ಆ ಕಾಲದಲ್ಲಿ ಇದ್ದದ್ದರಿಂದ ಬಚಾವಾಗಿರಬೇಕು. ಈಗೇನಾದರೂ ಇಂಥದೊಂದು ಪ್ರತಿಕ್ರಿಯೆಯನ್ನು ಬ್ರಿಟನ್ ಪ್ರಧಾನಿ ಹೆಂಗಸೊಬ್ಬಳ ಮೇಲೆ ಮಾಡಿದ್ದರೆ ಆತ ಪಟ್ಟ ಇಳಿದು ರಾಜೀನಾಮೆ ಕೊಡುವಷ್ಟರ ಮಟ್ಟಿಗೆ ಅಂತಾರಾಷ್ಟ್ರೀಯ ಒತ್ತಡ ಅವನ ಮೇಲೆ ಬೀಳುತ್ತಿತ್ತೇನೋ. ಏನೇ ಇರಲಿ, ಚರ್ಚಿಲ್ ಒಬ್ಬ ವ್ಯಕ್ತಿಯ ರೂಪವನ್ನು ಆಡಿಕೊಂಡು ಪರಿಹಾಸ್ಯ ಮಾಡಿದ್ದು ಒಳ್ಳೆಯ ಅಭಿರುಚಿಯ ಹಾಸ್ಯ ಎಂದೇನೂ ಅನಿಸಿಕೊಳ್ಳುವುದಿಲ್ಲ.

ಬ್ರಿಟನ್ನಿನ ಜನರ ಹಾಸ್ಯ, ಗೇಲಿ, ಕಾಲೆಳೆಯುವಿಕೆಗಳಿಗೆ ಹೋಲಿಸಿದರೆ ಅಮೆರಿಕನ್ನರದ್ದು ಸ್ವಲ್ಪ ಓಕೆ ಅನ್ನಬಹುದಾದ ಮನರಂಜನಾ ಪ್ರವೃತ್ತಿ. ಇನ್ನೊಬ್ಬನ ಮೇಲೆ ಬೆಟ್ಟು ಮಾಡಿ ಕಿಚಾಯಿಸುವುದಕ್ಕಿಂತ ತಮ್ಮನ್ನೇ ಗುರಿಯಾಗಿಸಿಕೊಂಡು ಹಾಸ್ಯ ಮಾಡಿಕೊಂಡು ನಗುವಷ್ಟು ಚೇತೋಹಾರಿ ಮನಸ್ಸಾದರೂ ಅಮೆರಿಕನ್ನರಿಗಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ ಇಬ್ಬರೂ ನಾಯಕರನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸಿ ಅವರಿಬ್ಬರ ನಡುವೆ ಸಂವಾದ ಏರ್ಪಡಿಸುವ ಗುಣಾತ್ಮಕ ಪದ್ಧತಿ ಆ ದೇಶದಲ್ಲಿದೆ. ಅಂಥದೊಂದು ಸಂದರ್ಭದಲ್ಲಿ ಅಬ್ರಹಾಂ ಲಿಂಕನ್ ಮತ್ತು ಸ್ಟೀಫನ್ ಡಗ್ಲಾಸ್ ಎದುರಾಬದುರಾದರು. ಚರ್ಚೆಯ ನಡುವೆ ಡಗ್ಲಾಸ್, “ಲಿಂಕನ್ ಎರಡು ಮುಖದ ವ್ಯಕ್ತಿ” ಎಂದು ಆರೋಪಿಸಿದ. ತಾನು ಅಂಥವನಲ್ಲ ಎಂಬುದನ್ನು ಲಿಂಕನ್ ಸಾಧಿಸಿ ತೋರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆದರೆ ಅದಕ್ಕಾಗಿ ದೀರ್ಘವಾದ ಭಾಷಣ ಮಾಡುವ ಇಚ್ಛೆ ಲಿಂಕನ್‍ಗಿರಲಿಲ್ಲ. ಸಣ್ಣದೊಂದು ಮಾತಿನಲ್ಲೇ ಡಗ್ಲಾಸ್‍ನ ಆರೋಪವನ್ನು ಅಲ್ಲಗಳೆಯಬೇಕೆಂದುಕೊಂಡ ಲಿಂಕನ್ ಹೇಳಿದ: “ನಾನು ಈ ಮಾತಿನ ಸತ್ಯಾಸತ್ಯತೆಯನ್ನು ನಿರ್ಧರಿಸುವ ಕೆಲಸವನ್ನು ಎದುರಿನ ಪ್ರೇಕ್ಷಕರಿಗೇ ಬಿಟ್ಟು ಬಿಡುತ್ತೇನೆ. ನನಗೇನಾದರೂ ಇನ್ನೊಂದು ಮುಖ ಇದ್ದದ್ದೇ ಆದರೆ, ನಾನು ಈ ನನ್ನ ಸುಟ್ಟ ಬದನೇಕಾಯಿಯಂತಿರುವ ಮುಖವನ್ನು ಹೊತ್ತು ತಿರುಗುವ ಅವಶ್ಯಕತೆ ಇತ್ತೇ?”. ತನ್ನ ಒಂದೇ ಮಾತಿನಲ್ಲಿ ಲಿಂಕನ್, ಡಗ್ಲಾಸ್‍ನನ್ನೂ ತನ್ನ ಕುರೂಪವನ್ನು ಆಡಿಕೊಂಡು ನಗುತ್ತಿದ್ದ ಮಿಕ್ಕ ವಿರೋಧಿಗಳನ್ನೂ ಹೆಡೆಮುರಿ ಕಟ್ಟಿ ಕೂರಿಸಿಬಿಟ್ಟಿದ್ದ. ಡಗ್ಲಾಸ್ ಮಾಡಿದ ಆರೋಪ ಮರೆತೇ ಹೋಗಿ ದೇಶದ ಜನರಿಗೆ ಲಿಂಕನ್‍ನ ಮೇಲೆ ಪ್ರೀತಿ-ಅಭಿಮಾನ ಉಕ್ಕಿತೆಂದು ಬೇರೆ ಹೇಳಬೇಕಿಲ್ಲವಲ್ಲ? ಬೆಸ್ಸಿಗೆ ಮುಳುವಾಗಿದ್ದ ಕುರೂಪ ಲಿಂಕನ್‍ಗೆ ವರದಾನವಾಗಿ ಒದಗಿ ಬಂತು.

1986ರಲ್ಲಿ ಅಮೆರಿಕಾದಲ್ಲಿ ನಡೆದ ಸೆನೆಟ್ ಚುನಾವಣೆಯ ಸಂದರ್ಭದಲ್ಲಿ ಕಾದುತ್ತಿದ್ದವರು ರಿಪಬ್ಲಿಕನ್ ಪಕ್ಷದ ಹೆನ್ರಿ ಮ್ಯಾಕ್‍ಮಾಸ್ಟರ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಫ್ರಿಟ್ಜ್ ಹಾಲಿಂಗ್ಸ್. ಇಬ್ಬರ ನಡುವಿನ ಚರ್ಚೆಯಲ್ಲಿ ಮಾತು ವೈಯಕ್ತಿಕ ನೆಲೆಯ ಟೀಕೆ-ಆರೋಪಗಳಿಗೆ ತಿರುಗಿತು. ಹೆನ್ರಿ, “ಹಾಲಿಂಗ್ಸ್ ಡ್ರಗ್ ಟೆಸ್ಟ್’ಗೆ ಒಳಪಡಲಿ” ಎಂದ. ಮಾದಕ ವಸ್ತು ಸೇವಿಸಿ ಅಮಲೇರಿದಂತೆ ಮಾತಾಡುತ್ತಿದ್ದಾನೆ ಎಂಬುದು ಅದರ ಭಾವಾರ್ಥ. ಅದನ್ನು ಗ್ರಹಿಸಲು ಹಾಲಿಂಗ್ಸ್’ಗೇನೂ ಕಷ್ಟವಾಗಲಿಲ್ಲ. ಕೂಡಲೇ ಆತ, “ನಾನೇನೋ ಡ್ರಗ್ ಪರೀಕ್ಷೆಗೆ ಒಳಪಡಲು ತಯಾರಿದ್ದೇನೆ. ಆದರೆ ಹೆನ್ರಿ ಐಕ್ಯೂ ಪರೀಕ್ಷೆಗೆ ಗುರಿಯಾಗಲಿ” ಎಂದು ಜಾಡಿಸಿದ. ಅಂಥದ್ದೇ ಇನ್ನೊಂದು ಘಟನೆ 1984ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ನಡೆಯಿತು. ಆಗ ಎರಡನೇ ಬಾರಿಗೆ ಆಯ್ಕೆ ಬಯಸಿ 73 ವರ್ಷದ ರೊನಾಲ್ಡ್ ರೇಗನ್ ಕಣಕ್ಕಿಳಿದಿದ್ದ. ಅವನಿಗೆ ಪ್ರತಿಸ್ಪರ್ಧಿಯಾಗಿದ್ದವನು ಇಪ್ಪತ್ತು ವರ್ಷ ಕಿರಿಯವನಾದ ವಾಲ್ಟರ್ ಮಾಂಡೆಲ್. ರೇಗನ್ ತನ್ನ ಇಳಿವಯಸ್ಸನ್ನೂ ಲೆಕ್ಕಿಸದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದುದೇ ದೊಡ್ಡ ಸುದ್ದಿಯಾಗಿತ್ತು. ಅವನನ್ನು ಶತಾಯಗತಾಯ ಸೋಲಿಸಬೇಕೆಂದು ಹವಣಿಸುತ್ತಿದ್ದ ಡೆಮೋಕ್ರಾಟಿಕ್ ಪಕ್ಷದ ಕಾರ್ಯಕರ್ತರು, ಈ ಮುದುಕಪ್ಪನಿಗೆ ಇನ್ನೊಂದು ಛಾನ್ಸ್ ಕೊಡೋದು ಸರೀನಾ ಎಂಬುದನ್ನೇ ದೊಡ್ಡ ಚುನಾವಣಾ ವಿಷಯವನ್ನಾಗಿ ಮಾಡಿ ಜನಾಭಿಪ್ರಾಯ ರೂಪಿಸುತ್ತಿದ್ದರು. ರೇಗನ್ ಮತ್ತು ವಾಲ್ಟರ್ ನಡುವಿನ ವಾಕ್ಸಮರಕ್ಕೆ ವೇದಿಕೆ ತಯಾರಾಯಿತು. ಆದರೆ ಅಲ್ಲೂ ರೇಗನ್‍ಗೆ ವಯಸ್ಸಿನ ಭೂತ ಬೆಂಬಿಡಲಿಲ್ಲ. “ಮಿಸ್ಟರ್ ಪ್ರೆಸಿಡೆಂಟ್, ಈ ಚುನಾವಣೆಯಲ್ಲಿ ವಯಸ್ಸೇ ಒಂದು ದೊಡ್ಡ ಚರ್ಚಾ ವಿಷಯವಾಗಿದೆ” ಎನ್ನುತ್ತ ಸಂವಾದ ನಡೆಸಿ ಕೊಡುತ್ತಿದ್ದ ನಿರೂಪಕಿ ರೇಗನ್‍ನ ಕಾಲೆಳೆದಳು. ಕೂಡಲೇ ಆತ, “ಇದು ನಿಜಕ್ಕೂ ಮುಜುಗರದ ವಿಷಯ. ರಾಷ್ಟ್ರವೊಂದರ ಅಧ್ಯಕ್ಷೀಯ ಚುನಾವಣೆಯಲ್ಲಿ ವಯಸ್ಸು ಚರ್ಚೆಯ ವಸ್ತು ಆಗಬಾರದು. ನಾನು ಅಂಥ ತಪ್ಪನ್ನು ಖಂಡಿತಾ ಮಾಡಲಾರೆ. ನನ್ನ ಪ್ರತಿಸ್ಪರ್ಧಿಯ ಕಿರಿ ವಯಸ್ಸು ಮತ್ತು ಅನನುಭವಗಳನ್ನು ಖಂಡಿತವಾಗಿಯೂ ಚುನಾವಣಾ ವಿಷಯವಾಗಿ ಬಳಸಲಾರೆ” ಎಂದು ಹೇಳಿ ತನಗೆ ವಯಸ್ಸಾಗಿದ್ದಷ್ಟೇ ಅಲ್ಲ ಅನುಭವವೂ ಇದೆ ಎಂಬ ಸಂದೇಶವನ್ನು ಸೂಚ್ಯವಾಗಿ ದಾಟಿಸಿದ.

ಅಮೆರಿಕಾ ಮಾತ್ರವಲ್ಲ ಪ್ರಪಂಚದ ಯಾವ ದೇಶವನ್ನು ತೆಗೆದುಕೊಂಡರೂ ಒಂದು ವಿಷಯ ಸ್ಪಷ್ಟ. ಮಾತು ಬಲ್ಲವರು ದೇಶ ಆಳುತ್ತಾರೆ. ಮಾತಿಗೆ ಪ್ರತ್ಯುತ್ತರ ಹೆಣೆಯಲು ಬಾರದವರು ಜನತೆಯ ಕಣ್ಣಲ್ಲಿ ಸಣ್ಣವರಾಗುತ್ತಾರೆ. ಅಂಥ ಅದ್ಭುತ ಮಾತುಗಾರನಾಗಿದ್ದ ಥಿಯೋಡೋರ್ ರೂಸ್‍ವೆಲ್ಟ್’ಗೂ ಜನಸಾಮಾನ್ಯನೊಬ್ಬ ಬಾಯಿ ಕಟ್ಟಿಸಿ ಹಾಕಿದ ವಿಚಿತ್ರ ಪ್ರಸಂಗವೊಂದು 1904ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ನಡೆಯಿತು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ರೂಸ್‍ವೆಲ್ಟ್ ಪ್ರಚಾರ ಭಾಷಣ ಮಾಡುತ್ತಿದ್ದಾಗ ಸಭೆಯಲ್ಲಿದ್ದ ಕುಡುಕನೊಬ್ಬ ಎದ್ದುನಿಂತು “ನಾನು ಡೆಮೋಕ್ರಾಟಿಕ್” ಎಂದು ಘೋಷಿಸಿದ. ಭಾಷಣ ನಿಲ್ಲಿಸಿದ ರೂಸ್‍ವೆಲ್ಟ್, “ಹೌದೇ? ನೀನೇಕೆ ಡೆಮೋಕ್ರಾಟಿಕ್?” ಎಂದು ಪ್ರಶ್ನಿಸಿದ. “ಯಾಕೇ ಅಂದ್ರೆ ನನ್ನಜ್ಜ ಡೆಮೋಕ್ರಾಟಿಕ್ ಆಗಿದ್ದೋನು. ನನ್ನಪ್ಪನೂ ಡೆಮೋಕ್ರಾಟಿಕ್ ಆಗಿದ್ದ. ಹಾಗಾಗಿ ನಾನೂ ಡೆಮೋಕ್ರಾಟಿಕ್” ಎಂಬ ಉತ್ತರ ಬಂತು. ರೂಸ್‍ವೆಲ್ಟ್ ಹುರುಪುಗೊಂಡ. ಈ ಬಕರಾನನ್ನು ಮುಂದಿಟ್ಟುಕೊಂಡು ಒಂದಿಷ್ಟು ಮಜಾ ತೆಗೆದುಕೊಳ್ಳೋಣ ಎನ್ನಿಸಿತವನಿಗೆ. “ಓಹೋ ಹಾಗೋ? ಹಾಗಾದರೆ ಒಂದು ವೇಳೆ ನಿನ್ನ ಅಜ್ಜ ಮುಟ್ಟಾಳ, ನಿನ್ನ ಅಪ್ಪನೂ ಮುಟ್ಟಾಳ ಆಗಿದ್ರೆ ನೀನೇನಾಗುತ್ತೀ?” ಎಂದು ಪ್ರಶ್ನಿಸಿದ. ಕಪಾಳಕ್ಕೆ ಹೊಡೆದಂತೆ ಥಟ್ಟನೆ ಉತ್ತರ ಸಿಡಿಯಿತು: “ಆಗ ನಾನು ರಿಪಬ್ಲಿಕನ್ ಆಗಿರ್ತಿದ್ದೆ!”. ಕುಡುಕನನ್ನು ಮುಂದಿಟ್ಟುಕೊಂಡು ಪರಿಹಾಸ್ಯ ಮಾಡಲು ಹೊರಟಿದ್ದ ರೂಸ್‍ವೆಲ್ಟ್ ಸಾಹೇಬರದ್ದು ಇಂಗು ತಿಂದ ಮಂಗನ ಮುಸುಡಿಯಾಗಿತ್ತು. ಅಮೆರಿಕನ್ ಸಂಸತ್ತಿನಲ್ಲಿ “ಚಾಪ್ಲೇನ್ ಆಫ್ ದ ಸೆನೆಟ್” ಎಂಬ ಪದವಿ ಇದೆ. ಚಾಪ್ಲೇನ್ ಎಂದರೆ ಒಂದು ನಿರ್ದಿಷ್ಟ ಸಂಸ್ಥೆಗಾಗಿ ನಿಯೋಜನೆಗೊಂಡ ಧರ್ಮಗುರು ಎಂದು ಅರ್ಥ. ಧಾರ್ಮಿಕ ಮುಖಂಡರನ್ನು ಪ್ರತಿನಿಧಿಸುವ ಓರ್ವ ವ್ಯಕ್ತಿಯನ್ನು ಸಂಸತ್ತಿನಲ್ಲಿ ಚಾಪ್ಲೇನ್ ಆಗಿ ಆರಿಸುವುದು ಅಲ್ಲಿನ ವಾಡಿಕೆ. ಹಾಗೆ ಆಯ್ಕೆಯಾಗಿ ಬಂದಿದ್ದವರು ರೆವರೆಂಡ್ ಎಡ್ವರ್ಡ್ ಎವರೆಟ್ ಹೇಲ್. ಅವರನ್ನೊಮ್ಮೆ ಸಂಸತ್ತಿನ ಹೊರಗೆ ಪತ್ರಕರ್ತರು ಸಂದರ್ಶಿಸುತ್ತ “ನೀವು ಪ್ರತಿದಿನ ಸಂಸತ್ತಿನಲ್ಲಿ ಏನು ಮಾಡುತ್ತೀರಿ? ಸಂಸದರಿಗಾಗಿ ಪ್ರಾರ್ಥಿಸುತ್ತೀರಾ?” ಎಂದು ಕೇಳಿದರು. ರೆವರೆಂಡ್ ದೀರ್ಘವಾದ ಉಸಿರೆಳೆದುಕೊಂಡು, “ಇಲ್ಲ. ನಾನು ಸಂಸದರನ್ನು ನೋಡಿ ದೇಶಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದರು. ಎಲ್ಲರ ಮನೆಯ ದೋಸೆ ತೂತಾದರೆ ಅಮೆರಿಕಾದ ಕಾವಲಿಯೇ ತೂತು ಎಂದು ನಾವು ಸ್ವಲ್ಪ ಸಮಾಧಾನ ಪಡಬಹುದೇನೋ!

ಹೊರದೇಶಗಳ ರಾಜಕಾರಣಿಗಳ ಹಾಸ್ಯ ಪ್ರಸಂಗಗಳಿಗೆ ಹೋಲಿಸಿದರೆ ನಮ್ಮವರು ಶುದ್ಧ, ದ್ವಂದ್ವಾರ್ಥವಿಲ್ಲದ ಹಾಸ್ಯವನ್ನು ಮಾಡಿದ್ದು, ಆಸ್ವಾದಿಸಿದ್ದು ಕಡಿಮೆಯೇ. ಹೆಚ್ಚಿನ ರಾಜಕಾರಣಿಗಳು ಹಾಸ್ಯಕ್ಕಿಂತ ಹಾಸ್ಯಾಸ್ಪದರಾಗಿ ಹೆಸರು ಮಾಡಿದ್ದೇ ಹೆಚ್ಚು. ಇನ್ನು ರಕ್ತ ಸುರಿಯದಂತೆ ಮೂಳೆ ಮುರಿಯುವ ಕಲೆ ನಮ್ಮ ರಾಜಕಾರಣಿಗಳಿಗೆ ಇಲ್ಲವೆಂದೇ ಹೇಳಬೇಕು. ಒಬ್ಬ ನಾಯಿ ಎಂದರೆ ಇನ್ನೊಬ್ಬ ಕತ್ತೆ ಎಂದು ಪ್ರತ್ಯುತ್ತರ ಕೊಟ್ಟು ತಾನು ಎದುರಾಳಿಗಿಂತ ದೊಡ್ಡ ಮೂರ್ಖ ಎಂಬುದನ್ನು ತೋರಿಸಿಕೊಳ್ಳುತ್ತಾನೆ. ಜಗಳಕ್ಕೆ ಆಸ್ಪದವಿಲ್ಲದಂತೆ ಏಟಿಗೆ ಇದಿರೇಟು ಕೊಟ್ಟು ಕೂರಿಸುತ್ತಿದ್ದ ಕರ್ನಾಟಕದ ಕೊನೆಯ ಮುಖ್ಯಮಂತ್ರಿ ಬಹುಶಃ ಜೆ.ಎಚ್. ಪಟೇಲರು ಎಂದು ಕಾಣುತ್ತದೆ. ಎಂತಹ ಸಂದರ್ಭದಲ್ಲೂ ತನ್ನ ಆವೇಶ, ಆಕ್ರೋಶಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಜಾಣ್ಮೆ ಅವರಿಗಿತ್ತು. ಒಮ್ಮೆ ಪಟೇಲರ ಟಿವಿ ಸಂದರ್ಶನ ಆಯೋಜನೆಯಾಗಿತ್ತು. ಎದುರು ಕೂತಿದ್ದ ಸಂದರ್ಶಕಿ ಹಲವು ಪ್ರಶ್ನೆಗಳನ್ನು ಕೇಳುಕೇಳುತ್ತ ಕೊನೆಗೆ “ಶ್ರೀ ಪಟೇಲರೇ, ನಿಮಗೆ ಹೆಣ್ಣಿನ ದೌರ್ಬಲ್ಯ ಇದೆ ಎಂಬ ಗಾಳಿಮಾತು ಇದೆ. ರಾಜಕೀಯ ವಲಯದಲ್ಲಿ ಪ್ಲೇಬಾಯ್ ಅಂತಲೂ ಕರೆಯುವುದುಂಟು. ಇದರ ಬಗ್ಗೆ ಏನು ಹೇಳುತ್ತೀರಿ?” ಎಂದು ಕೇಳಿದಳು. ಸಾಧಾರಣವಾಗಿ ಇಂಥ ಸಂದರ್ಶನಗಳಲ್ಲಿ ನಿರೂಪಕರು ಕೇಳುವ ಪ್ರಶ್ನೆಗಳನ್ನು ಮೊದಲೇ ರಾಜಕಾರಣಿಗೆ ಕಳಿಸಿಕೊಡುವುದು ವಾಡಿಕೆ. ಆಗ, ಅವರೂ ಉತ್ತರಗಳನ್ನು ಸಿದ್ಧಪಡಿಸಿಕೊಂಡು ಬರಲು ಅನುಕೂಲ. ಆದರೆ ಪಟೇಲರಿಗೆ ಕೇಳಿದ ಪ್ಲೇಬಾಯ್ ಪ್ರಶ್ನೆ ಅಂತಹ ಪೂರ್ವಯೋಜಿತ ಪಟ್ಟಿಯಲ್ಲಿ ಇರಲಿಲ್ಲ. ತನ್ನನ್ನು ಮುಜುಗರಕ್ಕೆ ಸಿಕ್ಕಿಸಲೆಂದೇ ಈ ಪ್ರಶ್ನೆಯನ್ನು ಕೇಳಲಾಗಿದೆಯೆಂದು ಊಹಿಸಲು ಪಟೇಲರಿಗೆ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ. ಪಳಗಿದ ಮುತ್ಸದ್ದಿಯಲ್ಲವೆ? “ನೋಡಮ್ಮ, ಈಗ ನೀನು ಸ್ಟುಡಿಯೋದಿಂದ ಬೀದಿಗೆ ಇಳಿದರೂ ಜನ ನಿನ್ನ ಬೆನ್ನ ಹಿಂದೆ ನೂರೆಂಟು ಮಾತಾಡಿಕೊಳ್ಳುತ್ತಾರೆ. ನಿನ್ನ ಶೀಲವನ್ನೂ ಸಂಶಯಿಸುವವರು ಇರಬಹುದು. ಆ ವಿಷಯಗಳ ಬಗ್ಗೆ ಎಲ್ಲ ಇಲ್ಲಿ ಕೂತು ಮಾತಾಡೋಣವೇ?” ಎಂದು ಚುಚ್ಚಿದರು. ನಿರೂಪಕಿಗೆ ತಕ್ಷಣ ತನ್ನ ತಪ್ಪಿನ ಅರಿವಾಯಿತು. ಸ್ಸಾರಿ ಸ್ಸಾರಿ ಎನ್ನುತ್ತ ನಾಲಗೆ ಕಚ್ಚಿ ಮುಂದಿನ ಪ್ರಶ್ನೆಗೆ ಹಾರಿದಳು.

ಮಾತನ್ನು ಲಾಂಗು, ಮಚ್ಚುಗಳಂತೆ ತಲೆ ಕಡಿಯುವುದಕ್ಕೂ ಬಳಸಬಹುದು; ಮುಳ್ಳಿನಂತೆ ಕಾಲು ಚುಚ್ಚಿ ಎಚ್ಚರಿಸುವುದಕ್ಕೂ ಬಳಸಬಹುದು. ಹೆಚ್ಚು ಮಾತು, ಹುಚ್ಚು ಮಾತು ಎಂಬ ಮಾತಿದೆ. ಮಾತನ್ನು ಕೊಚ್ಚುತ್ತಾ ಹೋದಂತೆ ವ್ಯಕ್ತಿ ತನ್ನ ಒಳಹೊರಗನ್ನೆಲ್ಲ ತೆರೆದುಕೊಂಡು ಜಗತ್ತಿನೆದುರು ಬತ್ತಲಾಗಿ ಬರಿದಾಗಿ ಬಿಡುವ ಸಾಧ್ಯತೆಯುಂಟು. ಹಾಗಾಗಿ ತಿಳಿದವರು ಹೇಳುತ್ತಾರೆ: ಮಾತು ಹೆಣ್ಣಿನ ಮಿಡಿಯಂತಿರಬೇಕು. ಬೇಕಾದ್ದನ್ನು ಬಚ್ಚಿಡುವ, ಬೇಕಾದಷ್ಟೇ ಬಿಚ್ಚಿಡುವ ಮಾತು ಕುತೂಹಲ ಕೆರಳಿಸುತ್ತದೆ. ಇಲ್ಲದೇ ಹೋದರೆ ಆಡಿದವನನ್ನು ಮಾತು ಕಾಮಿಡಿ ಪೀಸ್ ಆಗಿಸಿ ಹಾಸ್ಯಾಸ್ಪದನಾಗಿಸಬಹುದು. ಮಾತೇ ಮುತ್ತು, ತಪ್ಪಿದರೆ, ಮಾತೇ ಮೃತ್ಯು.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post