ಅದೊಂದು ಸುಂದರ ಬೆಟ್ಟ. ಕಣ್ಣು ಹಾಯಿಸಿದಷ್ಟೂ ಕಾಣುವ ಸಾಲು ಸಾಲು ಮರಗಳು, ಅಲ್ಲಲ್ಲಿ ಹರಿಯುವ ನೀರಿನ ತೊರೆಗಳು, ವಿಧವಿಧವಾದ ಹಣ್ಣಿನ ಮರಗಳು. ಆ ಬೆಟ್ಟದ ಮೇಲೊಂದು ಸಣ್ಣ ಗುಡಿಯಿತ್ತು. ಅಲ್ಲಿಗೆ ಹೋಗಲು ರಸ್ತೆಯಿರಲಿಲ್ಲ, ಕಾಲುದಾರಿಯೇ ಅಲ್ಲಿಗೆ ತಲುಪುವ ಮಾರ್ಗ. ಸುತ್ತಮುತ್ತಲಿನ ಹಳ್ಳಿಯವರೆಲ್ಲರೂ ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದರು. ಹೀಗಿರುವಾಗ, ರಜೆಯ ಸಮಯದಲ್ಲಿ ಪಟ್ಟಣದಿಂದ ಹಳ್ಳಿಯ ಸಂಬಂಧಿಕರ ಮನೆಗೆ ಬಂದ ಒಂದು ಕುಟುಂಬ ಆ ಮನೆಯವರ ಜೊತೆ ಬೆಟ್ಟಕ್ಕೆ ಹೊರಟಿತು. ಅವರೆಲ್ಲರೂ ತಮ್ಮ smartphoneನಿಂದ ಆ ಬೆಟ್ಟದ ಸುಂದರ ಚಿತ್ರಗಳನ್ನ ತೆಗೆದುಕೊಂಡರು. ಪಟ್ಟಣಕ್ಕೆ ಮರಳಿದ ಬಳಿಕ ತಮ್ಮ ತಮ್ಮ whatsapp groupಗಳಲ್ಲಿ facebookನಲ್ಲಿ(ನಮ್ಮಂತೆ!) share ಮಾಡಿದರು. ತುಂಬಾ ಜನಗಳಿಂದ ಲೈಕ್, ಕಮೆಂಟ್ಗಳು ಬಂದವು. ಒಂದಷ್ಟು ಜನ ಜಾಗದ ಬಗ್ಗೆ ವಿಚಾರಿಸಿದರು. ಮತ್ತೊಂದಷ್ಟು ಜನ ಬೆಟ್ಟವನ್ನ ನೋಡಲು ಉತ್ಸುಕರಾದರು. ಪಟ್ಟಣದಿಂದ ಬೆಟ್ಟವನ್ನ ನೋಡಲು ಜನ ಆಗಮಿಸತೊಡಗಿದರು. ದಿನಕಳೆದಂತೆ ಬೆಟ್ಟವನ್ನ ನೋಡಲು ಬರುವ ಜನರು ಜಾಸ್ತಿಯಾಗತೊಡಗಿದರು. ಆ ಬೆಟ್ಟಕ್ಕೊಂದು ರಸ್ತೆ ಸರಿಯಿಲ್ಲ ಎಂಬ ಕೂಗು ಕೇಳತೊಡಗಿತು. ಆ ಕರೆಗೆ ಸ್ಪಂದಿಸಿದ ಜಿಲ್ಲಾಡಳಿತ ನೂರಾರು ಮರಗಳನ್ನ ಕಡಿದು ಅಲ್ಲಿಗೊಂದು ರಸ್ತೆ ಮಾಡಿ ಪ್ರವೇಶ ಶುಲ್ಕವನ್ನಿಟ್ಟಿತು. ಈಗ ಕಾರು ಬೈಕಿನಲ್ಲಿ ಜನ ಬರತೊಡಗಿದರು. ಪ್ರಶಾಂತವಾಗಿದ್ದ ವಾತಾವರಣವನ್ನ ವಾಹನಗಳ ಶಬ್ಧ ಆಕ್ರಮಿಸಿಕೊಂಡಿತು. ರಸ್ತೆಯ ಬದಿಯಲ್ಲಿ ಹೋಟೆಲ್ಗಳು ತಲೆಯೆತ್ತಿದವು. ಕಾರು ಬೈಕಿನಲ್ಲಿ ಬಂದವರು ತಮ್ಮ ಜೊತೆಗೆ ಮದ್ಯದ ಬಾಟಲಿಗಳನ್ನ ತಂದರು. ತಮಗೆ ಇಷ್ಟ ಬಂದ ಕಡೆ ಗಾಡಿ ನಿಲ್ಲಿಸಿ ಕುಡಿದು ಬಾಟಲಿಗಳನ್ನ ಎಸೆದು ಹೋಗುತ್ತಿದ್ದರು. ಈಗ ಆ ಬೆಟ್ಟದಲ್ಲಿ ಮರಗಳಿಗಿಂತ ಬಾಟಲಿಗಳೇ ಜಾಸ್ತಿ ಕಾಣಿಸುತ್ತಿವೆ.
– ಚೇತನ್ ಕೋಡುವಳ್ಳಿ
ಚಿತ್ರ: ಪ್ರತೀಕ್ ಪುಂಚತ್ತೋಡಿ
Facebook ಕಾಮೆಂಟ್ಸ್