1965. ಚೀನಾ ಜೊತೆ ಕಾದಾಡಿ ಮುಗಿಯಿತು ಎನ್ನುವಾಗಲೇ ನಮ್ಮೊಡನೆ ಇತ್ತ ಪಾಕಿಸ್ತಾನ ಸಮಯ ಸಾಧಿಸಿ ಜಗಳಕ್ಕೆ ನಿಂತಿತು. ಅದಕ್ಕೆ ತಕ್ಕ ಪಾಠ ಕಲಿಸಿದ ಭಾರತ, ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭೂಮಿಯನ್ನು ವೀರೋಚಿತವಾಗಿ ಹೋರಾಡಿ ವಾಪಸ್ ಪಡೆಯಿತು. ಎರಡೂ ದೇಶಗಳ ನಡುವಿನ ಶಾಂತಿ ಒಪ್ಪಂದಕ್ಕಾಗಿ ಆಗ ಮಧ್ಯಸ್ಥಿಕೆ ವಹಿಸಿದ್ದು ಮಾತ್ರ ಸೋವಿಯೆಟ್ ರಷ್ಯ. ಅದರ ಅಂದಿನ ಅಧ್ಯಕ್ಷ ಅಲೆಕ್ಸಿ ಕಸಿಗಿನ್ ಪಾಕ್ ಮತ್ತು ಭಾರತದ ಪ್ರಧಾನಿಗಳನ್ನು ತಾಷ್ಕೆಂಟ್‍ಗೆ ಕರೆದು ಸಂಧಾನ ನಡೆಸುವವರಿದ್ದರು. ಪಾಕಿಸ್ತಾನದ ಆಗಿನ ಅಧ್ಯಕ್ಷ ಅಯೂಬ್ ಖಾನ್ ಬರೋಬ್ಬರಿ ಆರೂವರೆ ಅಡಿ ಎತ್ತರದ ಮನುಷ್ಯ. ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಗಳೋ ಕೇವಲ ಐದು ಅಡಿಯ ವಾಮನಮೂರ್ತಿ. ತಾಷ್ಕೆಂಟ್‍ಗೆ ಹೊರಟುನಿಂತಿದ್ದ ಶಾಸ್ತ್ರಿಗಳ ಬಳಿ ಪತ್ರಕರ್ತನೊಬ್ಬ “ಪ್ರಧಾನಿಯವರೇ, ಪಾಕಿಸ್ತಾನದ ಜೊತೆಗೆ ಯುದ್ಧ ಗೆದ್ದು 4000 ಚದರ ಕಿಲೋಮೀಟರ್‍ಗಳಷ್ಟು ಜಾಗವನ್ನು ನಾವು ಅವರಿಂದ ಕಸಿದು ಉಳಿಸಿಕೊಂಡಿದ್ದೇವೆ ಎನ್ನುವುದೇನೋ ದೊಡ್ಡ ವಿಷಯವೇ. ಆದರೆ, ನಮ್ಮ ಬೇಡಿಕೆಯನ್ನು ಅವರು ಪುರಸ್ಕರಿಸುವಂತೆ ಮಾಡಲು ನೀವು ಆಯುಬ್ ಖಾನರೊಡನೆ ಹೇಗೆ ಮಾತಾಡುವವರಿದ್ದೀರಿ?” ಎಂದು ಕೇಳಿದ. ಶಾಸ್ತ್ರೀಜಿ ತುಂಬು ಆತ್ಮವಿಶ್ವಾಸದಿಂದ “ಹಮ್ ಸರ್ ಉಠಾ ಕೆ ಬಾತ್ ಕರೇಂಗೆ ಔರ್ ವೋ ಸರ್ ಝುಕಾ ಕೆ” (ನಾನು ತಲೆಯೆತ್ತಿ ಮಾತಾಡುತ್ತೇನೆ; ಆತ ತಲೆತಗ್ಗಿಸಿ ನನ್ನ ಮಾತು ಕೇಳುವಂತೆ ಮಾಡುತ್ತೇನೆ) ಎಂದು ಹೇಳಿದರು. ಆ ಪುಟ್ಟ ಜೀವದಲ್ಲಿ ಅದೆಂಥ ಅದಮ್ಯ ಉತ್ಸಾಹ, ಪುಟಿಯುವ ರಾಷ್ಟ್ರಭಕ್ತಿ!
ಬೆಳೆಯ ಸಿರಿ ಮೊಳಕೆಯಲ್ಲಿ
ಶಾಸ್ತ್ರೀಜಿ ಇದ್ದದ್ದೇ ಹಾಗೆ. ಅವರು ಹುಟ್ಟಿದ್ದು 1904ರ ಅಕ್ಟೋಬರ್ 2ರಂದು; ಕಾಶಿಯಿಂದ ಏಳು ಮೈಲಿ ದೂರದಲ್ಲಿದ್ದ ಮುಘಲ್ ಸರಾಯ್ ಎಂಬಲ್ಲಿ. ಹೇಳಿಕೇಳಿ ಅದು ಗಾಂಧಿಯ ಜನ್ಮದಿನ. ಶಾಸ್ತ್ರಿಗಳು ಹುಟ್ಟಿದ ಸಮಯದಲ್ಲಿ ಭಾರತದಲ್ಲಿ ಗಾಂಧಿಯ ಹೆಸರು ಅಷ್ಟೇನೂ ಚಲಾವಣೆಯಲ್ಲಿರಲಿಲ್ಲ. ಶಾಸ್ತ್ರಿಗಳ ತಂದೆ ಶಾರದಾಪ್ರಸಾದ್ ಶ್ರೀವಾಸ್ತವ ಶಾಲಾ ಮೇಷ್ಟರಾಗಿದ್ದರು. ಕೆಲವು ವರ್ಷಗಳ ನಂತರ ತನ್ನ ಮಾಸ್ತರಿಕೆಯನ್ನು ಬಿಟ್ಟು ರೆವಿನ್ಯೂ ಇಲಾಖೆಯಲ್ಲಿ ಗುಮಾಸ್ತನಾಗಿ ಸೇರಿಕೊಂಡಿದ್ದರು. ಶಾಸ್ತ್ರಿಗಳ ದೌರ್ಭಾಗ್ಯವೋ ಏನೋ, ಹುಟ್ಟಿದ ಒಂದೂವರೆ ವರ್ಷಕ್ಕೆ ಅವರ ತಂದೆ ಪ್ಲೇಗ್ ಮಾರಿಗೆ ತುತ್ತಾಗಿ ತೀರಿಕೊಂಡರು. ತಾಯಿ ರಾಮ್‍ದುಲಾರಿ ದೇವಿ, ಪುಟ್ಟ ಮಗನನ್ನೂ ಇಬ್ಬರು ಹೆಣ್ಣುಮಕ್ಕಳನ್ನೂ ಕಟ್ಟಿಕೊಂಡು ತನ್ನ ತಂದೆಯ ಮನೆಗೆ ಬಂದರು. ಹೀಗಾಗಿ ಶಾಸ್ತ್ರಿಗಳ ಬಾಲ್ಯ ತನ್ನ ಅಜ್ಜನ ಮನೆಯಲ್ಲಿ ಕಳೆಯಿತು. ಹುಡುಗನಿಗೆ ಹತ್ತು ವರ್ಷವಾದ ಮೇಲೆ ತಾಯಿ ಆತನನ್ನು ತನ್ನ ಅಣ್ಣನ ಮನೆಗೆ ಕಳಿಸಿದಳು. ಅಲ್ಲಿದ್ದುಕೊಂಡೇ ಶಾಸ್ತ್ರಿಗಳ ಪ್ರಥಮ ಶಾಲಾಭ್ಯಾಸ ನಡೆಯಿತು.
ಶಾಸ್ತ್ರಿಗಳು ಶಾಲೆಗೆ ಹೋಗಿಬರಬೇಕಾದರೆ ಶಾಲೆ ಮತ್ತು ಮನೆಯ ನಡುವೆ ಹರಿಯುತ್ತಿದ್ದ ಗಂಗೆಯನ್ನು ದಾಟಬೇಕಾಗಿತ್ತು. ನದಿಗೆ ಅಡ್ಡಲಾಗಿ ಸೇತುವೆ ಇರಲಿಲ್ಲ. ದೋಣಿಯವನು ಬಂದರೆ ಬಂದ; ಇಲ್ಲವಾದರೆ ಇಲ್ಲ. ದೋಣಿ ಇದ್ದರೂ ಅವನಿಗೆ ಕೊಡಲು ಕಾಸು ಈ ಹುಡುಗನ ಕೈಯಲ್ಲಿ ಇರಬೇಕಲ್ಲ! ಒಂದು ದಿನ ಹುಡುಗ ಗಟ್ಟಿ ನಿರ್ಧಾರ ಮಾಡೇ ಬಿಟ್ಟ. ತನ್ನ ಪುಸ್ತಕಗಳನ್ನು ಗಂಟು ಕಟ್ಟಿ ತಲೆಯ ಮೇಲಿಟ್ಟು ಕಟ್ಟಿಕೊಂಡು ನೀರಿಗೆ ಜಿಗಿದ. ಸಾಗರದಂತೆ ವಿಶಾಲವಾಗಿ ಹರಡಿದ ಗಂಗೆಯ ಮಡಿಲನ್ನು ಈಜೇ ಈಜಿದ! ಮುಂದೆ, ಮನೆಯಿಂದ ಶಾಲೆಗೆ – ಶಾಲೆಯಿಂದ ಮನೆಗೆ ಹೋಗಿಬರಲು ಈ ಈಜಾಟವೇ ದಾರಿಯಾಯಿತು. ದೋಣಿಯವನಿಗೆ ಕೊಡದೆ ಉಳಿಸಿದ ದುಡ್ಡಿಂದ ಒಂದಷ್ಟು ಪುಸ್ತಕಗಳನ್ನು ಕೊಳ್ಳಲು ಅನುಕೂಲವಾಯಿತು. ಶಾಸ್ತ್ರಿಗಳ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾಸ್ತವ ಎಂದು. ಅವರದ್ದು ಕಾಯಸ್ಥ ಮನೆತನ. ಆದರೆ, ತನ್ನ ಹನ್ನೆರಡನೆ ವಯಸ್ಸಿನಲ್ಲಿದ್ದಾಗ ಈ ಹುಡುಗ ಶಾಲೆಯ ಹೆಡ್‍ಮಾಸ್ತರರ ಬಳಿ ಹೋಗಿ ತನ್ನ ಜಾತಿಸೂಚಕ ಹೆಸರನ್ನು ತೆಗೆಸಿಬಿಟ್ಟ! ದಾಖಲೆಗಳಲ್ಲಿ ಮುಂದೆ ಕೆಲವು ವರ್ಷಗಳ ಕಾಲ ಅವರ ಹೆಸರು ಲಾಲ್ ಬಹದ್ದೂರ್ ಎಂದಷ್ಟೇ ಇತ್ತು. ಉತ್ತರ ಪ್ರದೇಶದಂಥ ಜಾತಿಪ್ರಾಬಲ್ಯವಿರುವ ಊರಲ್ಲಿ ತನ್ನ ಹೆಸರಿಂದ ಅದನ್ನು ಕಿತ್ತೊಗೆಯಲು ಧೈರ್ಯವಷ್ಟೇ ಅಲ್ಲ, ದಾಢಸಿತನವೂ ಬೇಕು! ನೋಡಲು ಸಣಕಲನಾಗಿದ್ದ ಈ ವ್ಯಕ್ತಿ ಒಳಗಿನಿಂದ ಅದೆಷ್ಟು ಬಲಭೀಮನಾಗಿದ್ದರೆನ್ನುವುದಕ್ಕೆ ಇವೆರಡು ಘಟನೆಗಳೇ ಸಾಕ್ಷಿ.
1915ರ ಸುಮಾರಿಗೆ ಮಹಾತ್ಮಾಗಾಂಧಿಯ ಹವೆ ದೇಶದಲ್ಲಿ ಜೋರಾಗಿ ಬೀಸತೊಡಗಿತ್ತು. ಅವರ ಬರ್ತ್‍ಡೇ ಹಂಚಿಕೊಂಡ ಬಾಲಕ ಬಹದ್ದೂರನಿಗೆ ಅವರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಕಷ್ಟವೇ ಆಗಿತ್ತು. 1915ರಲ್ಲಿ, ತನ್ನ ಹನ್ನೊಂದನೇ ವಯಸ್ಸಿನಲ್ಲಿ ಅವನು ಮೊತ್ತಮೊದಲ ಬಾರಿಗೆ ಗಾಂಧಿಯ ಭಾಷಣ ಕೇಳಿದ. ಕೇಳಿ ರೋಮಾಂಚಿತನಾದ. ಅದೆಷ್ಟು ಗಾಢವಾಗಿ ಆ ಭಾಷಣ ಪ್ರಭಾವ ಬೀರಿತೆಂದರೆ, ಅವನು ತನ್ನ ಇಡೀ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಸಂಕಲ್ಪ ಮಾಡಿಬಿಟ್ಟ. ದೇಶದ ಯುವಕರು, ಹುಡುಗರು ತಮ್ಮ ಶಾಲಾಕಾಲೇಜುಗಳನ್ನು ಬಿಟ್ಟು ಹೊರಬಂದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಗಾಂಧಿಯ ಕರೆಯಾಗಿತ್ತು. ಬಿಟ್ಟೇಬಿಟ್ಟೆ ಎನ್ನುತ್ತ ಬಹದ್ದೂರ ತನ್ನ ಶಾಲೆಯನ್ನು ತ್ಯಜಿಸಿ ಹೋರಾಟದಲ್ಲಿ ಸಕ್ರಿಯನಾಗಿ ಭಾಗಿಯಾದ. 1921ರಲ್ಲಿ ಅವನನ್ನು ಬಂಧಿಸಿ ಜೈಲಿಗಟ್ಟಲಾಯಿತು. ಆದರೆ ಈ ಹುಡುಗನಿಗೆ ಇನ್ನೂ 17 ವರ್ಷ; ಮೈನರ್ ಎಂಬ ಕಾರಣಕ್ಕೆ ಕೆಲವು ದಿನಗಳ ನಂತರ ಹುಡುಗನನ್ನು ಬಿಡುಗಡೆ ಮಾಡಿದರು. ಜೈಲಿಂದ ಹೊರಬಂದ ಮೇಲೆ ಹುಡುಗ; ಹುಡುಗ ಎನ್ನುವುದಕ್ಕಿಂತಲೂ ಹೆಚ್ಚಾಗಿ ಬಿಸಿರಕ್ತದ, ಇನ್ನೂ ಮೀಸೆ ಮೂಡದ ತರುಣ, ಗಾಂಧೀಜಿ ಉದ್ಘಾಟಿಸಿದ್ದ ಕಾಶೀ ವಿದ್ಯಾಪೀಠವನ್ನು ಸೇರಿದ. ವಿದ್ಯಾಪೀಠ ಅವನ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತಂದಿತು. ಅಲ್ಲಿದ್ದ ಸಮಯದಲ್ಲಿ ಅವನು ಆಲ್ಡಸ್ ಹಕ್ಸ್ಲೀ, ಬಟ್ರ್ರಂಡ್ ರಸಲ್, ಮಾಕ್ರ್ಸ್, ಎಂಗೆಲ್ಸ್ ಮುಂತಾದ ಪ್ರಪಂಚದ ಮಹಾ ವಿದ್ವಾಂಸರುಗಳೆಲ್ಲರ ವಿಚಾರಧಾರೆಗಳನ್ನು ಓದಿಕೊಂಡ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಬಾಲ ಗಂಗಾಧರ ತಿಲಕರ ವಿಚಾರಗಳು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ಜೊತೆಗೆ ವಿವೇಕಾನಂದ ಮತ್ತು ಗುರು ರಾಮಕೃಷ್ಣರ ಜೀವನ ಮತ್ತು ಸಂದೇಶಗಳ ಕಡೆ ಕೂಡ ಮನಸ್ಸು ಒಲಿಯಿತು. ಕಾಶೀ ವಿದ್ಯಾಪೀಠದ ಉಪಕುಲಪತಿಗಳಾಗಿದ್ದ ಭಗವಾನ್ ದಾಸ್ ಒಳ್ಳೆಯ ಪ್ರಾಜ್ಞ, ಹಲವು ದರ್ಶನಗಳಲ್ಲಿ ಆಳವಾದ ಪಾಂಡಿತ್ಯ ಇದ್ದವರು, ಸೌಜನ್ಯದ ಮೂರ್ತಿ. ಹುಡುಗನನ್ನು ತಿದ್ದಿ ತೀಡಿ ಬೆಳೆಸಿದ, ಕಣ್ಣೆದುರಿನ ಗುರುದೇವ ಅವರು.
ಹುಡುಗನ ವಿದ್ಯಾಪೀಠದ ಜೀವನ ಸರಳವಾಗಿತ್ತು. ಬಡತನವನ್ನು ಹುಟ್ಟುತ್ತ ಬಳುವಳಿಯಾಗಿ ಪಡೆದಿದ್ದ ಹುಡುಗನಿಗೆ ವಿದ್ಯಾರ್ಥಿಜೀವನ ಕಷ್ಟವೆನಿಸಲಿಲ್ಲ. ಅಲ್ಲದೆ ಎತ್ತೆತ್ತ ತಿರುಗಿದರೂ ಸಾಧುಸಂತರು, ತಂಬೂರಿ ದಾಸರು, ತ್ರಿಪಾಠಿಗಳು, ಚತುರ್ವೇದಿಗಳು ಕಾಣುವ ಕಾಶಿಯ ಗಾಳಿ-ಮಣ್ಣು-ನೀರುಗಳ ಪ್ರಭಾವವೂ ಬಹಳ ಮಟ್ಟಿಗೆ ಅವನ ಮೇಲೆ ಆಯಿತು ಎನ್ನಬೇಕು. ದಾಸಾನುದಾಸನಂತೆ ತನ್ನನ್ನು ಕೃಷ್ಣನಿಗೆ ಸಮರ್ಪಿಸಿಕೊಂಡು ತುಲಸೀದಾಸರು ಬರೆದ ವಿನಯ ಪತ್ರಿಕಾ ಅವನಿಗಿಷ್ಟ. ಹಾಗೆಯೇ ಬಂಡಾಯಗಾರನಂತೆ ತಲೆಯೆತ್ತಿ ಗರ್ಜಿಸುವ ಕಬೀರನ ಸಾಹಿತ್ಯವೂ ಅಚ್ಚುಮೆಚ್ಚು. ವಿನಯಪತ್ರಿಕೆ ಗುಣಕ್ಕೆ ಬಾಗುವುದನ್ನು ಕಲಿಸಿದರೆ ಕಬೀರನ ದೋಹೆಗಳು ಅಧರ್ಮಕ್ಕೆ ಸೆಟೆವುದನ್ನು ಕಲಿಸಿದವು. ಆ ಯುವಕ ಧರ್ಮ, ವಿಜ್ಞಾನ, ಇತಿಹಾಸ, ಮಾನವೀಯತೆಗಳ ರಸಪಾಕವಾಗಿ ಬೆಳೆಯುತ್ತಿದುದಕ್ಕೆ ಆ ವಯಸ್ಸಿನಲ್ಲೇ ವಿಜ್ಞಾನಿ ಮೇರಿ ಕ್ಯೂರಿಯ ಜೀವನಚರಿತ್ರೆಯನ್ನು ಹಿಂದಿಗೆ ಅನುವಾದ ಮಾಡಿದ್ದೊಂದು ಸಾಕ್ಷಿ. ಕಾಶಿಯಲ್ಲಿ ಹುಟ್ಟಿಬೆಳೆದರೂ ಬೈರಾಗಿಗಳ ಬೂದಿ, ರುದ್ರಾಕ್ಷಿಗಳಲ್ಲಿ ಕಳೆದುಹೋಗದೆ, ಇತ್ತ ಎಲ್ಲವನ್ನೂ ತಿರಸ್ಕರಿಸುವ ಬಂಡಾಯಗಾರನಾಗಿಯೂ ಬೆಳೆಯದೆ ಸಮಚಿತ್ತದ ಪ್ರಬಲ ವ್ಯಕ್ತಿತ್ವವಾಗಿ ಬೆಳೆದ. 1926ರಲ್ಲಿ ಅವನಿಗೆ ವಿದ್ಯಾಪೀಠದ ಬ್ಯಾಚುಲರ್ ಡಿಗ್ರಿ ಸಿಕ್ಕಿತು. ಡಿಗ್ರಿಯ ಕಾರಣದಿಂದ “ಶಾಸ್ತ್ರಿ” ಎಂಬ ಉಪಾಧಿ ಸಿಕ್ಕಿತು. ಹೀಗೆ ತಾನು ವಿದ್ಯಾರ್ಜನೆ ಮಾಡಿ ಗಳಿಸಿದ ಉಪಾಧಿಯನ್ನು ತರುಣ ತನ್ನ ಹೆಸರಿನೊಂದಿಗೆ ಹೆಮ್ಮೆಯಿಂದ ಧರಿಸಿದ. ಲಾಲ್ ಬಹದ್ದೂರ್ ಶಾಸ್ತ್ರಿ ಆದ.
ಜನನಾಯಕನಾಗಿ ಬೆಳೆಯುತ್ತ..
ಶಾಸ್ತ್ರೀಜಿ ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ “ಲೋಕ ಸೇವಕ ಮಂಡಳ” ಎಂಬ ಸಣ್ಣದೊಂದು ಅಭಿಯಾನದ ಸದಸ್ಯರಾಗಿದ್ದರು. ಗೋಖಲೆ, ಗಾಂಧಿ ಮುಂತಾದ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರು ಸದಸ್ಯರಾಗಿದ್ದ ಮತ್ತು ಲಾಲಾ ಲಜಪತ್ ರಾಯ್ ಅವರಿಂದ ಪ್ರಾರಂಭವಾಗಿದ್ದ ಮಂಡಳ ಅದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ 20 ವರ್ಷ ಜನಸೇವೆ ಮಾಡುತ್ತೇನೆ ಮತ್ತು ಕನಿಷ್ಠ ಹತ್ತು ವರ್ಷಗಳವರೆಗೆ ಯಾವುದೇ ಹುದ್ದೆಯನ್ನೂ ಅಪೇಕ್ಷಿಸುವುದಿಲ್ಲ ಎಂದು ಈ ಅಭಿಯಾನವನ್ನು ಸೇರುವವರು ಶಪಥ ಮಾಡಬೇಕಿತ್ತು. ಶಾಸ್ತ್ರಿಗಳು ಖಾದಿಯನ್ನು ಪ್ರಚಾರಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡರು. ಹಳ್ಳಿಹಳ್ಳಿಗಳಿಗೆ ಖಾದಿಬಟ್ಟೆಯ ದೊಡ್ಡ ಬಂಡಲುಗಳನ್ನು ತಲೆ ಮೇಲೆ ಹೊತ್ತು ಸಾಗಿಸಿದರು. ಮನೆಮನೆಗೂ ಖಾದಿಯ ಪ್ರಚಾರ ಮಾಡಿದರು. ನಡುವೆ ಹಲವು ಸ್ವಾತಂತ್ರ್ಯ ಚಳುವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸತೊಡಗಿದರು. ಮದುವೆಯಾಗಿ ಎರಡು ವರ್ಷವಾಗಿತ್ತಷ್ಟೆ, ದೇಶದೆಲ್ಲೆಡೆ ಉಪ್ಪಿನ ಸತ್ಯಾಗ್ರಹದ ಕಾವು ಏರತೊಡಗಿತ್ತು. ಅದೇ ವರ್ಷ ಅಸಹಕಾರ ಚಳವಳಿಯೂ ಪ್ರಾರಂಭವಾಯಿತು. ಸರಕಾರಕ್ಕೆ ಜನ ಯಾವುದೇ ಕರ ಸಂದಾಯ ಮಾಡಬೇಕಿಲ್ಲ; ಇದು ನಮ್ಮ ನೆಲವಾದ್ದರಿಂದ ಬ್ರಿಟಿಷರಿಗೆ ಎಲ್ಲಾ ವಿಷಯಗಳಲ್ಲೂ ಅಸಹಕಾರ ಪ್ರದರ್ಶಿಸೋಣ ಎಂಬ ಆಶಯದ ಈ ಚಳವಳಿ ವೇಗ ಪಡೆಯುತ್ತಿದ್ದಂತೆ ಬಿಳಿಯರಿಗೆ ಬಿಸಿ ಮುಟ್ಟತೊಡಗಿತು. ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಶಾಸ್ತ್ರಿಗಳು ಎರಡೂವರೆ ವರ್ಷಗಳ ಕಾಲ ಕಂಬಿಯ ಹಿಂದೆ ಕೂರಬೇಕಾಗಿ ಬಂತು. ಅಷ್ಟೂ ಸಮಯವನ್ನು ಶಾಸ್ತ್ರೀಜಿ ಓದು, ಅಧ್ಯಯನಗಳಲ್ಲಿ ಕಳೆದರು. 1940ರಲ್ಲಿ ವ್ಯಕ್ತಿಗತ ಸತ್ಯಾಗ್ರಹ ಶುರುವಾದಾಗ, ಶಾಸ್ತ್ರಿಗಳು ಮತ್ತೆ ಒಂದು ವರ್ಷ ಜೈಲಿಗೆ ಹೋಗಬೇಕಾಯಿತು. 1942ರ ಆಗಸ್ಟ್ 8ರಂದು ಶುರುವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಶಾಸ್ತ್ರಿಗಳ ಮುಂದಾಳುತ್ವ ಎಷ್ಟರಮಟ್ಟಿಗೆ ಇತ್ತು ಎಂದರೆ ಪರಂಗಿಗಳು ಈ ಬಾರಿ ಅವರನ್ನು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಸೆರೆಮನೆಯಲ್ಲಿ ಕೂಡಿಹಾಕಬೇಕಾಯಿತು. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕಾಯಾ ವಾಚಾ ಮನಸಾ ದುಡಿದ ತಪ್ಪಿಗೆ ಶಾಸ್ತ್ರಿಗಳು ಒಟ್ಟು ಒಂಬತ್ತು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದರು!
ಅಲಹಾಬಾದ್ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗಿನ್ನೂ ಇಪ್ಪತ್ತಾರು ವರ್ಷಗಳಷ್ಟೇ. ಮರುವರ್ಷವೇ ಅವರು ಉತ್ತರಪ್ರದೇಶದ ರಾಜ್ಯ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಶಾಸ್ತ್ರಿಗಳ ನಿಷ್ಕಪಟ, ನಿರ್ವಂಚನೆ, ನಿರ್ಮೋಹ, ಪ್ರಾಮಾಣಿಕತೆ, ಕಷ್ಟಸಹಿಷ್ಣುತೆ, ಪರಿಶ್ರಮಗಳು ಎಲ್ಲರ ಹೃದಯ ಗೆದ್ದವು. ಮೆಲುದನಿಯ ವಾಮನಮೂರ್ತಿಯಾದರೂ ಅವರ ಮಾತುಗಳನ್ನು ಯಾರೂ ತಳ್ಳಿಹಾಕುವಂತಿರಲಿಲ್ಲ. ಒಂದೊಂದು ಮಾತನ್ನೂ ಯೋಚಿಸಿ ತೂಗಿ ಅವಶ್ಯವಿದ್ದರಷ್ಟೇ ಆಡುತ್ತಿದ್ದುದರಿಂದ ಅವರ ಮಾತುಗಳನ್ನು ಗಮನವಿಟ್ಟು ಕೇಳುವವರ ಸಂಖ್ಯೆ ಹೆಚ್ಚಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಎಲ್ಲ ರಾಜ್ಯಗಳಲ್ಲೂ ಸ್ವತಂತ್ರ, ಪ್ರಜೆಗಳಿಂದ ಚುನಾಯಿತವಾದ ರಾಜ್ಯ ಸರಕಾರಗಳು ಅಧಿಕಾರಕ್ಕೆ ಬಂದಾಗ ಶಾಸ್ತ್ರೀಜಿ ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿಯಲ್ಲಿ ಸದಸ್ಯರಾಗಿದ್ದರು. ಜೊತೆಗೆ ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಗೋವಿಂದ ವಲ್ಲಭ ಪಂತ್ ಅವರಿಗೆ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1947ರಲ್ಲಿ ಅದೇ ಪಂತ್ ಅವರ ಸರಕಾರದಲ್ಲಿ ಶಾಸ್ತ್ರಿಗಳು ಮಹತ್ವದ ಪೋಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳ ಸಚಿವರಾಗಿ ನಿಯುಕ್ತರಾದರು. ಎಲ್ಲಾದರೂ ಹರತಾಳಗಳು, ಮುಷ್ಕರಗಳು ನಡೆದರೆ ಅಲ್ಲಿ ಪೋಲೀಸರು ಲಾಟಿ ಬೀಸುವುದು ಸಾಮಾನ್ಯವಾಗಿತ್ತು. ಎಷ್ಟೋ ಸಲ ನ್ಯಾಯಯುತವಾದ ಬೇಡಿಕೆ ಇಟ್ಟುಕೊಂಡು ಜನ ಮಾಡುತ್ತಿದ್ದ ಸತ್ಯಾಗ್ರಹಗಳಿಗೂ ಪೋಲೀಸರು ಲಾಟಿ ರುಚಿ ತೋರಿಸಿದ್ದರು. ಹಾಗಾದರೆ ಇದೊಂದು ಗೂಂಡಾ ವ್ಯವಸ್ಥೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನಕ್ಕೆ ತಮ್ಮ ಬೇಡಿಕೆಗಳನ್ನು ಗಟ್ಟಿದನಿಯಲ್ಲಿ ಹೇಳುವ ಸ್ವಾತಂತ್ರ್ಯ ಇಲ್ಲವೆ? ಎಂಬ ದನಿ ಗಟ್ಟಿಯಾಗುತ್ತಿತ್ತು. ಜನರ ಗುಂಪುಗಳ ಮೇಲೆ ಲಾಟಿ ಬೀಸುವುದು ಅಮಾನವೀಯ ಎಂದು ಬಗೆದ ಶಾಸ್ತ್ರಿಗಳು, ಜನರನ್ನು ಚದುರಿಸಲು ಪೈಪ್‍ಗಳಲ್ಲಿ ನೀರು ಬಿಡುವ ಕ್ರಮವನ್ನು ಜಾರಿಗೆ ತಂದರು. ಹಾಗೆಯೇ ಸಾರಿಗೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಅವರು ತಂದ ಕೆಲವು ಕ್ರಾಂತಿಕಾರಿ ಬದಲಾವಣೆಗಳಲ್ಲಿ ಒಂದು – ಮಹಿಳಾ ಕಂಡಕ್ಟರುಗಳನ್ನೂ ಡ್ರೈವರುಗಳನ್ನೂ ನೇಮಿಸಿದ್ದು. ಅದುವರೆಗೂ ಸಾರಿಗೆ ಇಲಾಖೆಯಲ್ಲಿ ಮಹಿಳೆಯರಿಗೆ ಯಾವ ಉದ್ಯೋಗವೂ ಇರಲಿಲ್ಲ ಎನ್ನುವುದನ್ನು ಗಮನಿಸಿದರೆ ಶಾಸ್ತ್ರಿಗಳದ್ದು ಎಷ್ಟು ದೊಡ್ಡ ಹೆಜ್ಜೆ ಎನ್ನುವುದು ಅರಿವಾಗುತ್ತದೆ. ಸಾರಿಗೆ ಸಚಿವನಾಗಿದ್ದ ಸಮಯದಲ್ಲಿ ಹೆಚ್ಚಿನ ಸಲ ಅವರು ಬಸ್ಸುಗಳಲ್ಲೇ ಓಡಾಟ ಮಾಡುತ್ತಿದ್ದರು ಎನ್ನುವುದು ಇನ್ನೊಂದು ಕುತೂಹಲಕರ ಅಂಶ.
1951ರಲ್ಲಿ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಜವಾಬ್ದಾರಿ ಅವರ ತಲೆಗೇರಿತು. ಶಾಸ್ತ್ರೀಜಿ ಆ ವರ್ಷ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜನರಲ್ ಸೆಕ್ರೆಟರಿಯಾಗಿ ಅಧಿಕಾರ ವಹಿಸಿದರು. ಕಾಂಗ್ರೆಸ್ ಪಕ್ಷದೊಳಗಿನ ಚುನಾವಣೆಗಳನ್ನು ನಡೆಸುವ ಅಧಿಕಾರ ಮತ್ತು ಹೊಣೆಗಾರಿಕೆ ಅವರ ಮೇಲೆ ಬಿತ್ತು. ಅದೇ ವರ್ಷದಲ್ಲಿ ಅವರು ಕೇಂದ್ರ ಸರಕಾರದಲ್ಲಿ ರೈಲು ಮತ್ತು ರಸ್ತೆಸಾರಿಗೆಯ ಸಚಿವರಾಗಿ ಭಡ್ತಿ ಪಡೆದರು. ಶಾಸ್ತ್ರಿಗಳಂಥ ಒಬ್ಬ ನಾಯಕ ರಾಜ್ಯರಾಜಕಾರಣದಲ್ಲಿ ಕಳೆದುಹೋಗಬಾರದು; ಅವರು ರಾಷ್ಟ್ರಮಟ್ಟದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎನ್ನುವುದು ಎಲ್ಲ ರಾಜಕೀಯ ನಾಯಕರ ಆಸೆಯಾಗಿತ್ತು. ಹಾಗಾಗಿ ಶಾಸ್ತ್ರಿಗಳನ್ನು ರಾಜ್ಯಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಕೇಂದ್ರ ಸಚಿವನಾಗಿ ಶಾಸ್ತ್ರಿ ರಸ್ತೆ ಮತ್ತು ರೈಲು ಮಾರ್ಗಗಳ ಸಂಚಾರ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ತಂದರು. ರೈಲಿನ ಮೂರನೇ ದರ್ಜೆಯ ಪ್ರಯಾಣಿಕರಿಗೆ ಹಲವು ಅನುಕೂಲತೆಗಳನ್ನು ಮಾಡಿಕೊಟ್ಟರು. ದರಗಳನ್ನು ಇಳಿಸಿದರು. ಸೌಲಭ್ಯಗಳನ್ನು ಹೆಚ್ಚಿಸಿದರು. ಮಹಾರಾಷ್ಟ್ರದ ಮೆಹಬೂಬ್‍ನಗರ್ ಎಂಬಲ್ಲಿ 1956ರ ಸೆಪ್ಟೆಂಬರ್‍ನಲ್ಲಿ ನಡೆದ ಒಂದು ರೈಲು ಅಪಘಾತದ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ಶಾಸ್ತ್ರಿ ತನ್ನ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ನೆಹರೂ ರಾಜೀನಾಮೆಯನ್ನು ಆಂಗೀಕರಿಸದೆ, ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟರು. ಆದರೆ ದುರದೃಷ್ಟ ಬೆನ್ನು ಬಿಡಲಿಲ್ಲ. ಅದೇ ವರ್ಷದ ಡಿಸೆಂಬರ್‍ನಲ್ಲಿ ತಮಿಳುನಾಡಿನ ಅರಿಯಲೂರು ಎಂಬಲ್ಲಿ ಎರಡನೇ ರೈಲು ಅಪಘಾತ ಸಂಭವಿಸಿತು. ಈ ಬಾರಿಯೂ ಅಷ್ಟೇ, ರೈಲು ಅಪಘಾತಕ್ಕೂ ಅವರ ಮಂತ್ರಿಗಿರಿಗೂ ಯಾವ ಸಂಬಂಧವೂ ಇರಲಿಲ್ಲ. ದೇಶದ ಒಂದು ಮೂಲೆಯಲ್ಲಿ ನಡೆದ ರೈಲು ಅಪಘಾತಕ್ಕೆ ಹೊಣೆ ಹೊತ್ತು ಸಚಿವರು ರಾಜೀನಾಮೆ ಮಾಡುವ ಅಗತ್ಯವೂ ಇರಲಿಲ್ಲ. ಆದರೆ, ಶಾಸ್ತ್ರಿಗಳು ಮಾತ್ರ ತನ್ನ ಪದವಿಯಿಂದ ಮತ್ತೆ ಕೆಳಗಿಳಿದೇಬಿಟ್ಟರು. “ಅಪಘಾತಕ್ಕೂ ಶಾಸ್ತ್ರಿಗಳ ಹೊಣೆಗಾರಿಕೆಗಳಿಗೂ ಸಂಬಂಧ ಇಲ್ಲ. ಇದರಲ್ಲಿ ಅವರ ಕರ್ತವ್ಯಲೋಪದ ಬಗ್ಗೆ ಬೆರಳು ತೋರಲು ಸಾಧ್ಯವಿಲ್ಲ. ಆದರೂ ಅವರು ಕೊಡುತ್ತಿರುವ ರಾಜೀನಾಮೆಯನ್ನು ನಾನು ಆಂಗೀಕರಿಸುತ್ತಿದ್ದೇನೆ. ಯಾಕೆಂದರೆ, ಇದು ಮುಂದಿನ ದಿನಗಳ ಪ್ರಜಾಪ್ರಭುತ್ವಕ್ಕೆ ಒಂದು ಮಾದರಿಯಾಗಲಿ ಎಂಬ ಉದ್ಧೇಶದಿಂದಷ್ಟೇ” ಎಂದಿದ್ದರಂತೆ ಅಂದಿನ ಪ್ರಧಾನಿ ನೆಹರೂ. ಆದರೆ ಇದೇ ಪ್ರಧಾನಿಗಳು ಮುಂದೆ ಚೀನಾದೊಂದಿಗೆ ಸೋತು ನಮ್ಮ ದೇಶದ ಕೆಲಭಾಗಗಳನ್ನು ಕಳೆದುಕೊಳ್ಳಬೇಕಾಗಿ ಬಂದಾಗ ನೈತಿಕ ಹೊಣೆಗಾರಿಕೆ ಮೆರೆದು ಪಟ್ಟವನ್ನು ಬಿಡಲಿಲ್ಲ ಎನ್ನುವುದು ವಿರೋಧಾಭಾಸ!
1957ರಲ್ಲಿ ಅವರನ್ನು ಸಾರಿಗೆ ಮತ್ತು ಸಂವಹನ ಸಚಿವರಾಗಿ ನೇಮಿಸಲಾಯಿತು. ನಂತರ ಕೈಗಾರಿಕಾ ಸಚಿವನಾಗಿ ಶಾಸ್ತ್ರಿ ಕೆಲಸ ಮಾಡಿದರು. ಒಂದೊಂದೇ ಹಂತಗಳನ್ನು ಏರುತ್ತ ಹೋಗಿ 1961ರಲ್ಲಿ ಪಂತ್ ನಿಧನದ ನಂತರ ಶಾಸ್ತ್ರಿಗಳು ಗೃಹಖಾತೆಯನ್ನೂ ನಿರ್ವಹಿಸಿದರು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅವರು ರೂಪಿಸಿ ಕಾರ್ಯಗತಗೊಳಿಸಿದ ಅತ್ಯಂತ ಮಹತ್ವದ ಕೆಲಸ.
ಶಾಸ್ತ್ರಿಗಳ ಬದುಕಿನ ಒಂದಷ್ಟು ಉದಾಹರಣೆಗಳು
ಶಾಸ್ತ್ರಿಗಳು ಎಂದೊಡನೆ ಮನಸ್ಸಿಗೆ ತಟ್ಟನೆ ಹೊಳೆಯುವ ಶಬ್ದ – ಸರಳತೆ. ಅದನ್ನು ಅವರಷ್ಟು ಚೆನ್ನಾಗಿ ಪಾಲಿಸಿದವರು ಸ್ವತಂತ್ರ ಭಾರತದಲ್ಲಿ ಒಬ್ಬರೂ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ದೇಶದ ಪ್ರಧಾನಿಯಾಗಿದ್ದಾಗಲೂ ಅವರ ಬಳಿ ಹೊಸತಾದ ಎರಡು ಜೊತೆ ಬಟ್ಟೆ ಇರಲಿಲ್ಲ. ಒಮ್ಮೆ ಶಾಸ್ತ್ರಿಗಳು ಬಿಹಾರಕ್ಕೆ ಹೋಗಬೇಕಾಯಿತು. ಅದು ಚಳಿಗಾಲ. ಬಿಹಾರದಲ್ಲಿ ಅದು ರುದ್ರರೂಪ ತಾಳಿದೆ ಎಂಬ ಮಾಹಿತಿ ಬಂತು. ಆದರೆ, ಶಾಸ್ತ್ರಿಗಳ ಬಳಿ ಇದ್ದದ್ದು ಖಾದಿಯ ಕೋಟುಗಳು. ಅವೂ ಅಲ್ಲಲ್ಲಿ ಹರಿದಿದ್ದವು ಬೇರೆ. ಶಾಸ್ತ್ರಿಗಳು ತಮ್ಮ ನಾಲ್ಕು ಕೋಟುಗಳನ್ನು ಹುಡುಕಿ ತೆಗೆದು, ಅವನ್ನೆಲ್ಲ ತನ್ನ ದರ್ಜಿಯ ಬಳಿ ಒಯ್ದು, ಆ ನಾಲ್ಕರಿಂದ ಒಂದು ಹೊಸ ಕೋಟು ಹೊಲಿದುಕೊಡುವಂತೆ ಕೇಳಿದರಂತೆ. ಶಾಸ್ತ್ರಿಗಳು ಒಮ್ಮೆ ವಾರಾಣಸಿಗೆ ಭೇಟಿ ಕೊಟ್ಟಿದ್ದಾಗ ಅವರ ಕಾಲಿಗೆ ಸಾಕ್ಸ್ ಇಲ್ಲದ್ದನ್ನು ಅವರ ಜೊತೆಗಿದ್ದ ಪ್ರಸಿದ್ಧ ಹಿಂದಿ ಕವಿ ಮಹಾದೇವಿ ವರ್ಮಾ ಗಮನಿಸಿದರು. ಅದರ ಬಗ್ಗೆ ಗಮನ ಸೆಳೆದಾಗ, ಶಾಸ್ತ್ರಿಗಳು ಹೇಳಿದರಂತೆ, “ನನ್ನ ಬಳಿ ಎರಡು ಒಳ್ಳೆಯ ಜಾತಿಯ ಸಾಕ್ಸ್‍ಗಳಿವೆ. ಅವನ್ನು ನಾನು ರಷ್ಯಾದಂಥ ಚಳಿದೇಶಗಳಿಗೆ ಪ್ರವಾಸ ಹೋದಾಗ ಮಾತ್ರ ಬಳಸುತ್ತೇನೆ. ಅವನ್ನು ಬಿಟ್ಟರೆ ಬೇರೆ ಏನೂ ನನ್ನಲಿಲ್ಲ. ನನ್ನ ದೇಶದಲ್ಲಿ ಸಂಚರಿಸುವಾಗ ಚಪ್ಪಲಿಯೇ ಗತಿ”. ಅವರು ಗೃಹಮಂತ್ರಿಯಾಗಿದ್ದಾಗ ಒಮ್ಮೆ ಕಾಶ್ಮೀರಕ್ಕೆ ಹೋಗಬೇಕಾಗಿ ಬಂತು. ಅವರ ಸರಳತೆ, ಬಡತನ ಎರಡನ್ನೂ ಹತ್ತಿರದಿಂದ ನೋಡಿ ಗೊತ್ತಿದ್ದ ಪ್ರಧಾನಿ ನೆಹರೂ ಸ್ವತಃ ತಾನೇ ಒಂದು ಮಿಂಕ್ ಕೋಟ್ ಖರೀದಿಸಿ ಶಾಸ್ತ್ರಿಗಳಿಗೆ ಕೊಟ್ಟರಂತೆ.
ಇನ್ನೊಮ್ಮೆ ಅವರು ಉತ್ತರ ಪ್ರದೇಶದ ಸರಕಾರದಲ್ಲಿ ಮಂತ್ರಿಗಳಾಗಿದ್ದ ಸಮಯ; ಒಬ್ಬರು ಹಿರಿಯ ಅಧಿಕಾರಿಗಳು (ಜೊತೆಗೆ ಗೆಳೆಯರು ಕೂಡ), ಶಾಸ್ತ್ರಿಗಳಿಗೆ ಫೋನ್ ಮಾಡಿದರು. ಶಾಸ್ತ್ರಿಗಳು ಮಾತಾಡುತ್ತ ಆ ವ್ಯಕ್ತಿಯನ್ನು ಮನೆಗೆ ಕರೆದರು. ಜೊತೆಗೆ “ಅಂದ ಹಾಗೆ, ಇವೊತ್ತು ನಿನ್ನ ಅಕ್ಕ (ಶಾಸ್ತ್ರಿಗಳ ಪತ್ನಿ) ಮನೆಯಲ್ಲಿಲ್ಲ. ಹಾಗಾಗಿ, ಒಳ್ಳೆಯ ಊಟ ಎಲ್ಲ ಸಿಗೋದಿಲ್ಲ. ಮನೆಯಲ್ಲಿ ಏನಿದೆಯೋ ಅದರಲ್ಲೇ ನಾವಿಬ್ಬರೂ ಸುಧಾರಿಸಿಕೊಳ್ಳಬೇಕು” ಎಂದರು. ಅಧಿಕಾರಿಗೆ ಈ ಮಾತು ಕೇಳಿ ಆಶ್ಚರ್ಯವಾಯಿತಂತೆ. ಸಚಿವರ ಪತ್ನಿ ಮನೆಯಲ್ಲಿ ಅಡುಗೆ ಮಾಡುತ್ತಾರೆಯೇ? ಆಕೆ ಹೊರಹೋದರೆ ಸಚಿವರು ತಮ್ಮ ಅಡುಗೆಯನ್ನು ತಾವೇ ತಯಾರಿಸಿಕೊಳ್ಳುತ್ತಾರೆಯೇ? ಬೇರೆಯವರ ವಿಷಯದಲ್ಲಾಗಿದ್ದರೆ ಜೋಕ್ ಅನ್ನಿಸಬಹುದಾಗಿದ್ದ ಸಂಗತಿ ಶಾಸ್ತ್ರಿಗಳ ವಿಷಯದಲ್ಲಿ ವಾಸ್ತವವಾಗಿತ್ತು.
ಅವರ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠತೆಗಳ ಬಗ್ಗೆ ಇದ್ದ ಕತೆಗಳು ಅಸಂಖ್ಯಾತ. ಅವುಗಳಲ್ಲಿ ನಮ್ಮ ಹೃದಯಕ್ಕೆ ತೀವ್ರವಾಗಿ ಚುಚ್ಚುವ ಒಂದು ಘಟನೆಯೂ ಸೇರಿಕೊಂಡಿದೆ. ಅದು ಸ್ವಾತಂತ್ರ್ಯಪೂರ್ವ ಕಾಲ. ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿರುತ್ತಿದ್ದ ಶಾಸ್ತ್ರೀಜಿ ಹಲವು ಸಲ ಸೆರೆಮನೆವಾಸ ಅನುಭವಿಸಬೇಕಾಗಿ ಬಂತು. ಒಮ್ಮೆ, ಮಗಳ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಾಗ ಶಾಸ್ತ್ರಿಗಳು ಜೈಲಿನಲ್ಲಿದ್ದರು. ಅವರನ್ನು ಹದಿನೈದು ದಿನಗಳ ಮಟ್ಟಿಗೆ ಪೆರೋಲ್ ಕೊಟ್ಟು ಮನೆಗೆ ಕಳಿಸಲಾಯಿತು. ಮಗಳನ್ನು ಉಳಿಸಿಕೊಳ್ಳಲು ಶಾಸ್ತ್ರೀಜಿ ಎಷ್ಟು ಪ್ರಯತ್ನ ಪಟ್ಟರೂ ಸಫಲರಾಗಲಿಲ್ಲ. ವೈದ್ಯರು ಕೊಟ್ಟಿದ್ದ ಚೀಟಿಯ ಎಲ್ಲ ಮಾತ್ರೆ-ಔಷಧಗಳನ್ನು ತರಲು ಅವರಲ್ಲಿ ದುಡ್ಡೂ ಇರಲಿಲ್ಲ. ಕೊನೆಗೆ ಮಗಳ ಸಾವಿನ ನಂತರ ಅಂತ್ಯಕ್ರಿಯೆಯ ಕೆಲಸಗಳನ್ನು ಮುಗಿಸಿ ಅವರು ವಾಪಸು ಜೈಲಿಗೆ ಹೋದರು. ಹದಿನೈದು ದಿನಗಳ ಪೆರೋಲ್ ಕೊಡಲಾಗಿದೆ. ಇನ್ನೂ ಮೂರ್ನಾಲ್ಕು ದಿನಗಳು ಬಾಕಿ ಇವೆ ಎಂದು ಪೋಲೀಸ್ ಅಧಿಕಾರಿ ಹೇಳಿದಾಗ, ಶಾಸ್ತ್ರೀಜಿ ಹೇಳಿದರಂತೆ: “ಹೆಚ್ಚಿನ ದಿನಗಳ ಅವಶ್ಯಕತೆ ಇಲ್ಲ. ನನ್ನನ್ನು ಯಾವ ಕಾರಣಕ್ಕಾಗಿ ಹೊರಬಿಡಲಾಗಿತ್ತೋ ಆ ಕೆಲಸ ಮುಗಿದಿದೆ. ಹಾಗಾಗಿ ಈಗ ಮತ್ತೆ ನನ್ನನ್ನು ಕಂಬಿಯ ಹಿಂದೆ ಹಾಕಬಹುದು”
ಇನ್ನು, ಶಾಸ್ತ್ರೀಜಿಯವರ ಮಗುವಿನಂಥ ಮನಸ್ಸಿನ ಅನಾವರಣ ಮಾಡುವ ಒಂದು ಘಟನೆ ಇದು: ಸ್ವಾತಂತ್ರ್ಯಪೂರ್ವದಲ್ಲಿ ಶಾಸ್ತ್ರಿಗಳ ಜೊತೆ ಸೆರೆಮನೆವಾಸ ಅನುಭವಿಸಿದ್ದ ಒಬ್ಬ ಹಳ್ಳಿಯ ಬಡ ರೈತನ ಮಗಳ ಮದುವೆ ಏರ್ಪಾಟಾಗಿತ್ತು. ಆ ಸುದ್ದಿ ತಿಳಿದ ಶಾಸ್ತ್ರಿಗಳು ಹಳ್ಳಿಯಲ್ಲಿ ನಡೆದ ಆ ಮದುವೆಗೆ ಹೆಲಿಕಾಪ್ಟರ್ ಕಳಿಸಿ ಪುಷ್ಪವೃಷ್ಟಿ ಮಾಡಿಸಿದರು!
ಪ್ರಧಾನಿಯಾದ ಮೇಲೆ..
1964ರ ಮೇ 27ರಂದು ನೆಹರೂ ತೀರಿಕೊಂಡರು. “ನೆಹರೂ ನಂತರ ಯಾರು?” ಎಂಬ ದೊಡ್ಡ ಪ್ರಶ್ನೆಯನ್ನು ಅವರು ಹಿಂದೆಯೇ ಹುಟ್ಟುಹಾಕಿಯಾಗಿತ್ತು. ಎರಡು ಚುನಾವಣೆಗಳಲ್ಲಿ ಗೆದ್ದು ಪ್ರಧಾನಿಯಾದ ಮೇಲೆ ಮುಂದಿನ ಸಲವಾದರೂ ಅವರು ಪ್ರಧಾನಮಂತ್ರಿಯ ಪಟ್ಟವನ್ನು ಕಾಂಗ್ರೆಸ್‍ನ ಉಳಿದ ನಾಯಕರಿಗೆ ಬಿಟ್ಟುಕೊಡುತ್ತಾರೆಂಬ ಊಹೆ ಮುಂಚೆ ಇತ್ತು. ಆದರೆ, ತಾನು ಸಾಯುವವರೆಗೂ ಅಧಿಕಾರದ ಗದ್ದುಗೆ ಏರಿಯೇ ಇರುತ್ತೇನೆ ಮತ್ತು ಇರಬೇಕು ಎಂದು ಆತ ನಿರ್ಧರಿಸಿದ್ದರೇನೋ. ಅವರ ನಿವೃತ್ತಿಯ ಬಗ್ಗೆ ಇದ್ದ ಊಹಾಪೋಹಗಳು, ಜೋಕುಗಳ ಸುತ್ತ ಗೋಪಾಲಕೃಷ್ಣ ಅಡಿಗರು “ನೆಹರೂ ನಿವೃತ್ತರಾಗುವುದಿಲ್ಲ” ಎಂಬ ಪ್ರಸಿದ್ಧ ಕವಿತೆಯನ್ನೂ ಬರೆದಿದ್ದರು. ನೆಹರೂ ತೀರಿಕೊಂಡಾಗ ಅವರೇ ಬಯಸಿದ್ದಂತೆ ಒಂದು ದೊಡ್ಡ ನಿರ್ವಾತ ಸೃಷ್ಟಿಯಾಯಿತು. ಅವರಷ್ಟು ಸಮರ್ಥರು ದೇಶದಲ್ಲಿ ಇದ್ದಾರೆಯೇ ಎಂಬ ಹುಸಿ ಸಂದೇಹವನ್ನು ಅವರ ಆಜ್ಞಾನುವರ್ತಿಗಳು, ಹಿಂಬಾಲಕರು ಹರಡತೊಡಗಿದರು. ಇಂಥದೊಂದು ಭಯಭೀತ ವಾತಾವರಣವನ್ನು ಸೃಷ್ಟಿಸಿ ಕೊನೆಗೆ ತನ್ನ ಮಗಳಿಗೆ ಪಟ್ಟ ಸಿಗುವಂತೆ ಮಾಡುವುದೇ ಅವರ ಉದ್ಧೇಶವಾಗಿತ್ತೆಂದು ಕೆಲವರು ಹೇಳುತ್ತಿದ್ದರು. ಸ್ವಾರಸ್ಯವೆಂದರೆ, ಸ್ವತಃ ಶಾಸ್ತ್ರೀಜಿಯವರಲ್ಲಿ ಆತ್ಮೀಯರೊಬ್ಬರು “ನೆಹರೂ ಮನಸ್ಸಿನಲ್ಲಿ ಅವರ ಉತ್ತರಾಧಿಕಾರಿ ಯಾರಾಗಬೇಕೆಂಬ ಆಸೆ ಇದೆ?” ಎಂದು ಕೇಳಿದಾಗ ಶಾಸ್ತ್ರೀಜಿ “ಮತ್ತಾರು, ಅವರ ಸುಪುತ್ರಿ” ಎಂದು ಚುಟುಕಾಗಿ ಉತ್ತರಿಸಿದ್ದರು. ಅದಕ್ಕೆ ತಕ್ಕಂತೆ ನೆಹರೂ ನಿಧನದ ನಂತರ ಇಂದಿರಾ ಹೆಸರು ಸಾಕಷ್ಟು ಚಾಲ್ತಿಗೆ ಬಂದಿತ್ತು. ಆಕೆ ನೆಹರೂ ಸರಕಾರದಲ್ಲಿ ಸಚಿವೆಯಾಗಿದ್ದದ್ದು ಮುಂದಿನ ಪ್ರಧಾನಿಯಾಗಲು ಅರ್ಹತೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ಸಿಗರು ಶಾಸ್ತ್ರಿಯನ್ನು ಪ್ರಧಾನಿಯಾಗಿ ಆರಿಸುವುದಕ್ಕೆ ಒಪ್ಪಿಕೊಂಡರು. ಅದುವರೆಗೆ ಗೃಹಖಾತೆ ನಿರ್ವಹಿಸುತ್ತಿದ್ದುದರಿಂದ ಮತ್ತು ಸೀನಿಯಾರಿಟಿ ಪಟ್ಟಿಯಲ್ಲಿ ಮೊದಲಿಗರಾಗಿದ್ದರಿಂದ ಶಾಸ್ತ್ರಿಗಳನ್ನು ತಡೆಯುವುದಕ್ಕೆ ಯಾರಿಗೂ ಕಾರಣಗಳಿರಲಿಲ್ಲ. ಶಾಸ್ತ್ರಿಗಳನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದರಲ್ಲಿ ಎಲ್ಲರಿಗಿಂತ ಹೆಚ್ಚಿನ ಪಾತ್ರ ವಹಿಸಿದವರು ಆಗಿನ ಪಕ್ಷಾಧ್ಯಕ್ಷರಾಗಿದ್ದ ಕಾಮರಾಜ್ ಎನ್ನುವುದು ನಿರ್ವಿವಾದ.
1964ರ ಜೂನ್ 9ರಂದು ಶಾಸ್ತ್ರಿಗಳನ್ನು ಭಾರತದ ಪ್ರಧಾನಿಯಾಗಿ ಘೋಷಿಸಲಾಯಿತು. ಜೂನ್ 11ರಂದು ಅವರು ದೇಶವನ್ನುದ್ಧೇಶಿಸಿ ತನ್ನ ಪ್ರಥಮ ಭಾಷಣ ಮಾಡಿದರು. ಸಾಮಾನ್ಯವಾಗಿ ಅವರನ್ನು ದುರ್ಬಲ ವ್ಯಕ್ತಿ, ಅಷ್ಟೇನೂ ಪ್ರಭಾವಶಾಲಿ ಅಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಅದಕ್ಕೆ ಒಂದು ಕಾರಣ, ಅವರ ಕುಳ್ಳಶರೀರ. ಕೆಲವು ಬುದ್ಧಿಜೀವಿಗಳು ಅವರನ್ನು ಕಾಮಿಕ್ಸ್ ಪಾತ್ರಕ್ಕೆ ಸಮೀಕರಿಸಿ “ಡೊನಾಲ್ಡ್ ಡಕ್” ಎನ್ನುತ್ತ ಹಾಸ್ಯ ಮಾಡುತ್ತಿದ್ದದ್ದೂ ಉಂಟು. “ದೈಹಿಕವಾಗಿ ನಾನು ಕಡಿಮೆ ಎತ್ತರದವನು ಎಂಬ ಕಾರಣಕ್ಕೇ ಕೆಲವರು ನನ್ನನ್ನು ತಪ್ಪಾಗಿ ತಿಳಿದಿದ್ದಾರೆ. ನಾನು ದುರ್ಬಲ ಎಂದು ನನಗನ್ನಿಸುವುದಿಲ್ಲ. ಆಂತರಿಕವಾಗಿ ನಾನು ಬಹಳ ಸದೃಢ, ಗಟ್ಟಿ ಮನುಷ್ಯ” ಎಂದು ಸ್ವತಃ ಶಾಸ್ತ್ರಿಗಳು ಹೇಳಿದ್ದರೊಮ್ಮೆ. ಕಾಂಗ್ರೆಸ್ ಪಕ್ಷದೊಳಗಿದ್ದೂ, ನೆಹರು ಮರೆತ ಗಾಂಧೀತತ್ತ್ವಗಳನ್ನು ಕೊನೆಯವರೆಗೆ ನಂಬಿದ್ದ ವ್ಯಕ್ತಿ ಶಾಸ್ತ್ರಿ. 1960ರ ದಶಕದ ಪ್ರಾರಂಭದಲ್ಲಿ ನೆಹರೂ-ಶಾಸ್ತ್ರಿ ಸಂಬಂಧ ಸ್ವಲ್ಪ ಮಟ್ಟಿಗೆ ಹಳಸಲು ಪ್ರಾರಂಭವಾಗಿತ್ತು. ಗೃಹಮಂತ್ರಿಯಾಗಿದ್ದರೂ ಅವರಿಗೆ ನೇರವಾಗಿ ನೆಹರೂ ಜೊತೆ ಮಾತಾಡುವ ಅವಕಾಶ ಸಿಗುತ್ತಿರಲಿಲ್ಲ. ಕೆಲವು ಕಡತಗಳನ್ನು ಇಂದಿರಾ ಗಾಂಧಿ ನೇರವಾಗಿ ತಂದೆಗೆ ತಲುಪಿಸುವ ಸಂಪ್ರದಾಯ ಶುರುವಾಗಿತ್ತು. ಹಾಗಾಗಿ ಶಾಸ್ತ್ರೀಜಿ, ನೆಹರೂ ಅವರಿಂದ ಒಂದು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರು. ಒಮ್ಮೆ ರಷ್ಯ ಪ್ರವಾಸಕ್ಕೆ ಹೊರಟು ನಿಂತಿದ್ದ ಶಾಸ್ತ್ರಿಗಳಿಗೆ ತನ್ನ ಕೋಟು ಕೊಡಲು ಬಂದ ನೆಹರೂಗೆ “ಕ್ಷಮಿಸಿ, ನಿಮ್ಮ ಕೋಟು ಬಹಳ ದೊಡ್ಡದು. ಅದರೊಳಗೆ ತೂರಿಕೊಂಡರೆ ನಾನು ಹಾಸ್ಯಾಸ್ಪದವಾಗಿ ಕಾಣುತ್ತೇನೆ. ನಿಮ್ಮ ಕೋಟು ನಿಮ್ಮಲ್ಲೇ ಇರಲಿ; ನನ್ನದನ್ನು ನಾನು ಇಟ್ಟುಕೊಳ್ಳುತ್ತೇನೆ” ಎಂಬ ಖಡಕ್ ಉತ್ತರ ಶಾಸ್ತ್ರಿಗಳಿಂದ ಬಂದಿತ್ತು.
ಆದರೆ ಶಾಸ್ತ್ರೀಜಿ ಅನಗತ್ಯ ಹಠ ಸಾಧಿಸುವ, ದ್ವೇಷದ ರಾಜಕಾರಣ ಮಾಡುವ ವ್ಯಕ್ತಿಯಾಗಿರಲಿಲ್ಲ. ಪ್ರಧಾನಿಯಾದ ಮೇಲೆ ನೆಹರೂ ಸರಕಾರದಲ್ಲಿದ್ದ ಹಲವರನ್ನು ಅವರ ಹಳೆಯ ಖಾತೆಯಲ್ಲೇ ಮುಂದುವರೆಸಿಕೊಂಡು ಹೋದರು. ರಕ್ಷಣಾ ಸಚಿವನಾಗಿ ಯಶವಂತರಾವ್ ಚೌಹಾಣ್, ವಿದೇಶಾಂಗ ಖಾತೆಯ ಸಚಿವರಾಗಿ ಸ್ವರಣ್ ಸಿಂಗ್, ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವರಾಗಿ ಇಂದಿರಾ ಗಾಂಧಿ, ವಿತ್ತಸಚಿವರಾಗಿ ಟಿ.ಟಿ. ಕೃಷ್ಣಮಾಚಾರಿ ಮುಂದುವರಿದರು. ಇವರೆಲ್ಲರೂ ನೆಹರೂ ಕ್ಯಾಬಿನೆಟ್ಟಿನಲ್ಲಿ ಅವವೇ ಖಾತೆಗಳನ್ನು ನಿರ್ವಹಿಸಿದ್ದರೆನ್ನುವುದು ಮುಖ್ಯ. 1963ರಲ್ಲಿ “ಕಾಮರಾಜ ಪ್ಲ್ಯಾನ್” ಪ್ರಕಾರ ಇಡೀ ಕಾಂಗ್ರೆಸ್ ಪಕ್ಷದ ಪುನಾರಚನೆ ಮಾಡುವ ಸಲುವಾಗಿ ಶಾಸ್ತ್ರೀಜಿ ತನ್ನ ಖಾತೆಗೆ ರಾಜಿನಾಮೆ ಕೊಟ್ಟು ಸಚಿವಸಂಪುಟದಿಂದ ಹೊರಬಂದಿದ್ದರು. ಆಗ ಗುಲ್ಜಾರಿಲಾಲ್ ನಂದಾ ಗೃಹಖಾತೆಯನ್ನು ವಹಿಸಿಕೊಂಡಿದ್ದರು. ಶಾಸ್ತ್ರಿಗಳು ಪ್ರಧಾನಿಯಾದ ಮೇಲೆ ನಂದಾ ಅವರನ್ನು ಗೃಹಖಾತೆಯಲ್ಲೇ ಮುಂದುವರಿಸಲಾಯಿತು.
ಶಾಸ್ತ್ರಿ ಪ್ರಧಾನಿಯೇನೋ ಆದರು. ಆದರೆ ದೇಶ ಮಾತ್ರ ಕೈಕಾಲು ಬೆನ್ನುಗಳಿಗೆ ಬ್ಯಾಂಡೇಜ್ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಮಲಗಿದಂತಿತ್ತು. ಚೀನಾದೊಂದಿಗೆ ನಡೆದ ಯುದ್ಧ ದೇಶಕ್ಕೆ ದುಬಾರಿಯಾಗಿತ್ತು. ನಾವು ನಮ್ಮ ದೇಶದ ಜಾಗವನ್ನಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆಯನ್ನೂ ಕಳೆದುಕೊಂಡು ಜೋಲುಮುಖ ಹೊತ್ತಿದ್ದೆವು. ಚೀನಾದ ತೆಕ್ಕೆಗೆ ಭಾರತದ, ಅದರಲ್ಲೂ ಪೂರ್ವ ಕಾಶ್ಮೀರದ ಒಂದಷ್ಟು ಭಾಗ ಹೋದಾಗ ಆಗಿನ ಪ್ರಧಾನಿಯಾಗಿದ್ದ ನೆಹರೂ “ಆ ಪ್ರದೇಶವನ್ನು ಕಳೆದುಕೊಂಡರೂ ನಷ್ಟವೇನಿಲ್ಲ. ಅಲ್ಲಿ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ” ಎಂಬ ಉಡಾಫೆ ಉತ್ತರವನ್ನು ಸಂಸತ್ತಿನಲ್ಲಿ ಕೊಟ್ಟಿದ್ದರು. ಇದರಿಂದ ಕೆರಳಿದ ಮಹಾವೀರ್ ತ್ಯಾಗಿ ಎಂಬ ಸಂಸದ ಎದ್ದು ನಿಂತು ತನ್ನ ತಲೆಯನ್ನು ತೋರಿಸುತ್ತ “ನೆಹರೂಜೀ, ಇಲ್ಲೂ ಏನೂ ಬೆಳೆಯುವುದಿಲ್ಲ. ಹಾಗಂತ ಇದನ್ನು ನಾನು ಬೇರೆಯವರಿಗೆ ಬಿಟ್ಟುಕೊಡುವುದಕ್ಕೆ ಆಗುತ್ತದೇನು?” ಎಂದು ಕೇಳಿ ಬೆವರಿಳಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ನೆಹರೂ ಎಡಬಿಡಂಗಿತನದಿಂದಾಗಿ ನಾವು ಯುದ್ಧವನ್ನೂ ಸೋತೆವು; ಅಕಸಾಯಿ ಚಿನ್ ಎಂಬ ಭೂಪ್ರದೇಶವನ್ನೂ ಕಳೆದುಕೊಂಡೆವು. ಯುದ್ಧದ ಉಪ ಉತ್ಪನ್ನಗಳಾಗಿ ಬಂದ ಆಹಾರ ಕ್ಷಾಮ, ಹಣದುಬ್ಬರ, ಬಡತನ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಿರುಕು ಇತ್ಯಾದಿ ಎಲ್ಲ ಅಪಸವ್ಯಗಳಿಂದ ಭಾರತ ಚಿತ್ರಾನ್ನವಾಗಿತ್ತು. ಹಾಗಾಗಿ ಶಾಸ್ತ್ರಿಗಳ ಮೇಲೆ ದೇಶವಾಸಿಗಳು ದೊಡ್ಡ ಭರವಸೆಯ ಮೂಟೆಯನ್ನೇ ಹೇರಿದ್ದರು.
ಶಾಸ್ತ್ರಿ ಪ್ರಧಾನಿಯಾದ ಮೇಲೆ ಮೊದಲು ಮಾಡಿದ ಕೆಲಸ ಎಂದರೆ ಆಹಾರ ಉತ್ಪನ್ನವನ್ನು ಹೆಚ್ಚು ಮಾಡುವ ಕಡೆ ಗಮನ ಕೊಟ್ಟಿದ್ದು. ಹಸಿರುಕ್ರಾಂತಿಗೆ ಇನ್ನಿಲ್ಲದ ಪ್ರೋತ್ಸಾಹ ಕೊಟ್ಟರು. ರೈತರಿಗೆ ಆಹಾರ ಬೆಳೆಗಳನ್ನು ಹೇಗೆ ಬೆಳೆಯಬೇಕು; ಹೆಚ್ಚಿನ ಇಳುವರಿ ಪಡೆಯುವುದು ಹೇಗೆ ಎಂಬ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಹೆಚ್ಚು ಆದಾಯ ತರುವ ಆರ್ಥಿಕ ಬೆಳೆಗಳನ್ನು ಬದಿಗಿಟ್ಟು ಜನರಿಗೆ ಆಹಾರ ಕೊಡಬಲ್ಲ ಬೆಳೆಗಳನ್ನು ಬೆಳೆಯಿರಿ ಎಂದು ಶಾಸ್ತ್ರೀಜಿ ಕರೆಕೊಟ್ಟರು. ರೈತರಿಗೆ ನೈತಿಕ ಬಲ ಕೊಡುವುದಕ್ಕಾಗಿ ತನ್ನ ಪ್ರಧಾನಿ ನಿವಾಸದ ತೋಟದಲ್ಲಿ ಬೆಳೆಸುತ್ತಿದ್ದ ಅಲಂಕಾರಿಕ ಗಿಡಗಳನ್ನು ತೆಗೆಸಿ ಅಲ್ಲಿ ಗೋಧಿಯ ನಾಟಿ ಮಾಡಿದರು.
1965ರಲ್ಲಿ ಅವರು ಅಮೆರಿಕವನ್ನು ಸಂದರ್ಶಿಸುವ ಕಾರ್ಯಕ್ರಮ ಇತ್ತು. ಆದರೆ ಅಮೆರಿಕದ ಅಧ್ಯಕ್ಷ ಲಿಂಡನ್ ಜಾನ್‍ಸನ್, ಶಾಸ್ತ್ರಿಗಳು ತಮ್ಮ ಭೇಟಿಯ ದಿನಾಂಕವನ್ನು ಬದಲಿಸಬೇಕು; ಪಾಕಿಸ್ತಾನದ ಪ್ರಧಾನಿಯೂ ಅಮೆರಿಕಕ್ಕೆ ಬರುವ ಕಾರ್ಯಕ್ರಮ ಇರುವುದರಿಂದ ಇಬ್ಬರೂ ಭೇಟಿಯಾಗಲು ಅನುಕೂಲವಾಗುವಂತೆ ದಿನಾಂಕ ಹೊಂದಿಸಬೇಕು ಎಂಬ ಬೇಡಿಕೆ ಇಟ್ಟರು. ಶಾಸ್ತ್ರಿಗಳಿಗೆ ಇದು ಒಪ್ಪಿಗೆಯಾಗಲಿಲ್ಲ. ಪಾಕಿಸ್ತಾನ ಅಧ್ಯಕ್ಷನ ಭೇಟಿಗೂ ತನ್ನ ಭೇಟಿಗೂ ಸಂಬಂಧವಿಲ್ಲ; ಅಲ್ಲದೆ ಆತನ ಭೇಟಿಗೆ ತಕ್ಕಂತೆ ತಾನು ದಿನಾಂಕ ಹೊಂದಿಸುವುದು ಸಾಧ್ಯವಿಲ್ಲ ಎಂದು ಅಮೆರಿಕಕ್ಕೆ ಸ್ಪಷ್ಟವಾದ ಸಂದೇಶ ರವಾನಿಸಿದರು. ಅಮೆರಿಕದ ಜೊತೆಗೆ ಕೆನಡಾ ದೇಶದ ಪ್ರವಾಸವೂ ಪೂರ್ವನಿಗದಿಯಾಗಿತ್ತು. ಶಾಸ್ತ್ರೀಜಿ, ಪ್ರತಿಭಟನೆ ಎಂಬಂತೆ ಅಮೆರಿಕದ ಭೇಟಿಯನ್ನು ರದ್ದುಗೊಳಿಸಿ ಕೆನಡಾ ಪ್ರವಾಸವನ್ನು ಮಾತ್ರ ಉಳಿಸಿಕೊಂಡರು. ನೀವು ಜಗತ್ತಿಗೆ ದೊಡ್ಡಣ್ಣನಾಗಿರಬಹುದು, ಆದರೆ ನನಗಲ್ಲ ಎಂದು ಅಮೆರಿಕದ ಮೂತಿಗೆ ತಿವಿದ ಮೊದಲ ಪ್ರಧಾನಿ ಶಾಸ್ತ್ರಿ. ಅಮೆರಿಕ ಆಗ, ವಿಶ್ವದ ಬಡದೇಶಗಳಿಗೆ ಸಹಾಯ ಮಾಡಲಿಕ್ಕೆಂದು ಪ್ರತಿವರ್ಷದ ಬಜೆಟ್‍ನಲ್ಲಿ ಒಂದಷ್ಟು ದುಡ್ಡು ಎತ್ತಿಡುತ್ತಿತ್ತು. ಇದನ್ನು ಆ ದೇಶದ ಸಂವಿಧಾನದ ಪಿಎಲ್ 480 ಎಂಬ ವಿಧಿಯಲ್ಲಿ ಹೇಳಲಾಗಿತ್ತು. ಅಮೆರಿಕ ಭಾರತವೆಂಬ ಬಡದೇಶಕ್ಕೆ ಸಹಾಯ ಮಾಡುವ ನಾಟಕವಾಡುತ್ತ ಅತ್ಯಂತ ಕಳಪೆ ದರ್ಜೆಯ ಗೋಧಿಯನ್ನು ಕಳಿಸಿತು. ಶಾಸ್ತ್ರಿಗಳು ಮುಖಕ್ಕೆ ಹೊಡೆದಂತೆ ಇದನ್ನು ತಿರಸ್ಕರಿಸಿದರು. ಭಾರತೀಯರನ್ನು ಉದ್ಧೇಶಿಸಿ ಮಾತಾಡುತ್ತ ಅವರು, “ನನ್ನ ದೇಶದಲ್ಲಿ ಬಡತನ ಇರಬಹುದು; ಆದರೆ ಗೌರವವನ್ನು ಕಳೆದುಕೊಂಡು ಅದೆಂದೂ ಬೇರೆಯವರಿಗೆ ತಲೆಬಾಗದು. ಕಳಪೆ ಗೋಧಿ ಕಳಿಸಿ ಅವಮಾನ ಮಾಡುತ್ತಿರುವ ದೇಶಗಳ ನಯಾಪೈಸೆಯನ್ನೂ ನಾವು ಸ್ವೀಕರಿಸುವುದಿಲ್ಲ. ಬಡತನದಲ್ಲಿ ಬದುಕಿಯೇವು, ಆದರೆ ಆತ್ಮಗೌರವವನ್ನು ಬಿಟ್ಟುಕೊಡೆವು. ದೇಶದಲ್ಲಿ ಆಹಾರ ಸಮಸ್ಯೆ ಉಲ್ಭಣವಾಗಿರುವುದರಿಂದ, ದೇಶವಾಸಿಗಳು ವಾರದಲ್ಲಿ ಒಂದು ಹೊತ್ತು ಊಟ ತ್ಯಜಿಸಿ ಆ ಆಹಾರ ಬಡವರ ಪಾಲಿಗೆ ಸಲ್ಲುವಂತೆ ನೋಡಿಕೊಳ್ಳಬೇಕು” ಎಂದರು. ಶಾಸ್ತ್ರಿಗಳ ಮಾತಿಗೆ ಇಡೀ ದೇಶವೇ ತಲೆ ಬಾಗಿತು. ದೇಶದ ಪ್ರತಿಯೊಬ್ಬ ಪ್ರಜೆಯೂ ಸೋಮವಾರ ರಾತ್ರಿಯ ಊಟ ತ್ಯಜಿಸಿದ. ಉಳಿದೆಲ್ಲರಿಗೂ ಆದರ್ಶವಾಗುವಂತೆ ಶಾಸ್ತ್ರೀಜಿ ಪ್ರತಿದಿನದ ರಾತ್ರಿಯೂಟವನ್ನು ತ್ಯಜಿಸಿದರು. ತನ್ನ ಒಂದು ವಿನಂತಿಯ ಮೂಲಕವೂ ಇಡೀ ದೇಶವನ್ನು ನಿಯಂತ್ರಿಸಬಲ್ಲ ಪುಟ್ಟ ಶಾಸ್ತ್ರೀಜಿಯ ಬೃಹತ್‍ಶಕ್ತಿಗೆ ಅಮೆರಿಕವೇ ಬೆರಗಾಯಿತು.
ಚಕ್ರವ್ಯೂಹದ ನಡುವೆ ಅಭಿಮನ್ಯು
ಶಾಸ್ತ್ರೀಜಿ ಒಂದು ರೀತಿಯಲ್ಲಿ ತನ್ನ ಒಂದೂವರೆ ವರ್ಷದ ಆಡಳಿತವನ್ನು ಅಭಿಮನ್ಯುವಿನಂತೆ ಹೋರಾಡಿ ಕಳೆದರು ಎನ್ನಬಹುದು. ಅವರು ಪ್ರಧಾನಿಯಾದ ಪ್ರಥಮ ದಿನದಿಂದಲೂ ಪಾಕಿಸ್ತಾನ ಒಂದಿಲ್ಲೊಂದು ವಿಷಯದಲ್ಲಿ ಕ್ಯಾತೆ ತೆಗೆಯುತ್ತಲೇ ಇತ್ತು. 1965ರ ಮಾರ್ಚ್ ನಂತರವಂತೂ ಪರಿಸ್ಥಿತಿ ಬಿಗಡಾಯಿಸಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ಎರಡೂ ದೇಶಗಳ ನಡುವೆ ಯುದ್ಧ ನಡೆಯಬಹುದು ಎಂಬ ಭಯ ಎಲ್ಲರಲ್ಲೂ ಇತ್ತು. ಮುಖ್ಯವಾಗಿ ಪಾಕಿಸ್ತಾನದ ಬೇಡಿಕೆ ಇದ್ದದ್ದು ಕಾಶ್ಮೀರದ ಕೆಲವು ಭಾಗಗಳನ್ನು ತನಗೆ ಬಿಟ್ಟುಕೊಡಬೇಕು ಎಂಬುದು. ಬೇಕಾದರೆ ವೀರಮರಣವನ್ನು ಪಡೆದೇವು, ಆದರೆ ಒಂದಿಂಚು ಭೂಮಿಯನ್ನೂ ಶತ್ರುವಿಗೆ ಬಿಟ್ಟುಕೊಡೆವು ಎನ್ನುವುದು ಶಾಸ್ತ್ರಿಗಳ ವಾದ. ಆ ವರ್ಷದ ಆಗಸ್ಟ್ 13ರಂದು ದೇಶವನ್ನು ಉದ್ಧೇಶಿಸಿ ಮಾತನಾಡಿದ ಶಾಸ್ತ್ರಿಗಳು “ಕತ್ತಿಯನ್ನು ಕತ್ತಿಯಷ್ಟೇ ಎದುರಿಸಬಲ್ಲದು. ನಾವು ಉಳಿಯುತ್ತೇವೋ ನಾಶವಾಗಿ ಹೋಗುತ್ತೇವೋ ಎನ್ನುವುದು ಪ್ರಶ್ನೆಯಲ್ಲ. ಕೊಟ್ಟಕೊನೆಯ ಉಸಿರಿರುವವರೆಗೂ ನಾವು ಭಾರತದ ಅಸ್ಮಿತೆಯನ್ನು ಉಳಿಸುವುದಕ್ಕಾಗಿ ಮತ್ತು ನಮ್ಮ ರಾಷ್ಟ್ರಧ್ವಜ ಭೂಸ್ಪರ್ಶ ಮಾಡುವುದನ್ನು ತಡೆಯುವುದಕ್ಕಾಗಿ ವೀರೋಚಿತವಾಗಿ ಹೋರಾಡುತ್ತೇವೆ” ಎಂದು ಘರ್ಜಿಸಿದರು.
1965ರ ಆಗಸ್ಟ್ 31ರ ರಾತ್ರಿ ಮೂರು ಗಂಟೆಗೆ ಅವರಿಗೆ, ಪಾಕಿಸ್ತಾನವು ಗಡಿಯನ್ನು ಮೀರಿ ಭಾರತದೊಳಗೆ ಬಂದಿದೆ; ಚಾಂಬ್ ಎಂಬ ಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬ ಸುದ್ದಿ ಬಂತು. ಪಾಕಿಸ್ತಾನಿ ಸೇನೆ ರಾವಲ್ಪಿಂಡಿಯಿಂದ ಹೊರಟು ಅಖ್‍ನೂರ್ ಮತ್ತು ಜಮ್ಮು ಪ್ರಾಂತ್ಯಗಳಲ್ಲಿ ದೊಡ್ಡಮಟ್ಟದಲ್ಲಿ ಬಂದೂಕಿನ ಸಮರ ಶುರು ಮಾಡಿತ್ತು. ಕೇವಲ ಐದೇ ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಗಳಿಂದ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಜೆ. ಎನ್. ಚೌಧರಿಗೆ ಆದೇಶ ಹೋಯಿತು. “ಪಾಕಿಸ್ತಾನದ ಸೇನೆ ಕಾಶ್ಮೀರಕ್ಕೆ ಬರುವ ಮೊದಲು ನನ್ನ ದೇಶದ ಸೇನೆ ಲಾಹೋರ್‍ಅನ್ನು ವಶಪಡಿಸಿಕೊಳ್ಳಬೇಕು”! ಬಹುಶಃ ಈ ಆಜ್ಞೆ ಕೇವಲ ಐದು ನಿಮಿಷಗಳಲ್ಲಿ ಪ್ರಧಾನಿಯಿಂದ ಬಂದದ್ದನ್ನು ಕೇಳಿ ಜನರಲ್‍ರ ರಕ್ತವೂ ಒಂದುಕ್ಷಣ ಹೆಪ್ಪುಗಟ್ಟಿರಬೇಕು! ಯಾಕೆಂದರೆ ಹಿಂದೆ ನೆಹರೂ ಪ್ರಧಾನಿಯಾಗಿದ್ದಾಗ ಅವರು ಇಂಥ ಕ್ಷಿಪ್ರ ಮತ್ತು ಕಠಿಣ ಆಜ್ಞೆಯನ್ನು ಕೇಳಿರಲೇ ಇಲ್ಲ. ಎಲ್ಲವನ್ನೂ ಮಾತುಕತೆ ಮಾತುಕತೆ ಎನ್ನುತ್ತ ಹದಿನೇಳು ವರ್ಷಗಳನ್ನು ಕಳೆದಾಗಿತ್ತು. ಜೊತೆಗೆ ಎರಡು ಯುದ್ಧಗಳಲ್ಲಿ ತೀವ್ರ ಮುಖಭಂಗವನ್ನೂ ಉಂಡಾಗಿತ್ತು. ರಾತ್ರೋರಾತ್ರಿಯಲ್ಲಿ ಬಂದ ಪ್ರಧಾನಿಗಳ ಆದೇಶಕ್ಕೆ ಶಿರಬಾಗಿ ಭಾರತದ ಸೇನೆ ಅಂತಾರಾಷ್ಟ್ರೀಯ ಗಡಿರೇಖೆ ದಾಟಿ ಮುಂದೆ ಹೋಯಿತು. ಇಂತಹ ಪ್ರಬಲ ಪ್ರತಿರೋಧವನ್ನು ನಿರೀಕ್ಷಿಸಿರದಿದ್ದ ಪಾಕಿಸ್ತಾನ ಕಂಗೆಟ್ಟಿತು. ತನ್ನನ್ನು ಕಾಪಾಡಲು ಕಳ್ಳಗೆಳೆಯ ಅಮೆರಿಕಾವನ್ನು ಅಂಗಲಾಚಿತು. ಇತ್ತ ಶಾಸ್ತ್ರೀಜಿ ದೇಶವನ್ನುದ್ಧೇಶಿಸಿ ಭಾಷಣ ಮಾಡಿ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆ ಮಾಡಿದರು. ಅವರು ಹೇಳಿದ ಈ ಹೇಳಿಕೆ ದೇಶದ ಘೋಷಮಂತ್ರವೇ ಆಗಿಹೋಯಿತು. ಪಾಕಿಸ್ತಾನದ ಪ್ರಮುಖ ಭಾಗಗಳನ್ನೆಲ್ಲ ಆಕ್ರಮಿಸಿದ ಭಾರತದ ಸೇನೆ ಲಾಹೋರ್‍ಅನ್ನು ವಶಪಡಿಸಿಕೊಳ್ಳಲು ಇನ್ನು ಸ್ವಲ್ಪ ದೂರವಷ್ಟೇ ಉಳಿದಿತ್ತು. ಶಾಸ್ತ್ರಿಗಳು ಪಾಕಿಸ್ತಾನದ ಭಾರತ ಆಕ್ರಮಿತ ಪ್ರದೇಶಗಳಿಗೆ ಭೇಟಿ ಕೊಟ್ಟು, ಸೇನೆ ವಶಪಡಿಸಿಕೊಂಡ ಪಾಕಿಸ್ತಾನದ ಯುದ್ಧ ಟ್ಯಾಂಕ್ ಮೇಲೆ ಭಾರತೀಯ ಯೋಧರ ಜೊತೆ ನಿಂತು ಫೋಟೋಗೆ ಪೋಸು ಕೊಟ್ಟರು! ಆ ಕ್ಷಣ ಭಾರತ ಅನುಭವಿಸಿರಬಹುದಾದ ರೋಮಾಂಚನ ಎಂಥದ್ದು!
ಯುದ್ಧಪರಿಸ್ಥಿತಿಯಿಂದಾಗಿ ನಮ್ಮ ದೇಶದೊಳಗೆ ಪೋಲೀಸರ ಅಭಾವ ತಲೆದೋರಿತು. ಉತ್ತರ ಭಾರತದ ಪೋಲೀಸರಲ್ಲಿ ಹೆಚ್ಚಿನವರು ಯುದ್ಧಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ದುಡಿಯುತ್ತಿದ್ದರು. ರಾಜಧಾನಿ ದೆಹಲಿಯಲ್ಲಿ ಟ್ರಾಫಿಕ್ ನಿಯಂತ್ರಿಸುವ ಕೆಲಸಕ್ಕೂ ತತ್ವಾರ ಸೃಷ್ಟಿಯಾಯಿತು. ಆ ಸಮಯದಲ್ಲಿ ಶಾಸ್ತ್ರೀಜಿ, ಆರೆಸ್ಸೆಸ್ ಸ್ವಯಂಸೇವಕರನ್ನು ಬಳಸಿಕೊಂಡರು. ಟ್ರಾಫಿಕ್ ನಿಯಂತ್ರಣ ಮಾಡುವ ಕೆಲಸವನ್ನು ಸ್ವಯಂಸೇವಕರು ವಹಿಸಿಕೊಂಡರು. ಇದು ಕಾಂಗ್ರೆಸ್‍ನೊಳಗಿದ್ದ ಕೆಲವರ ಕಣ್ಣು ಕೆಂಪಗಾಗಿಸಿದ್ದೂ ಉಂಟು. ಆದರೆ ಶಾಸ್ತ್ರಿಗಳ ಚಿಂತನೆಯಲ್ಲಿ ಗೊಂದಲಕ್ಕೆ ಅವಕಾಶವೇ ಇರಲಿಲ್ಲ. ದೇಶ ಮೊದಲು; ಹಾಗಾಗಿ ದೇಶವನ್ನು ಕಟ್ಟುವ ಮತ್ತು ರಕ್ಷಿಸುವ ಕೆಲಸದಲ್ಲಿ ಯಾರು ಕೈಜೋಡಿಸಿದರೂ ಅವರ ಸಹಾಯ ಪಡೆಯಬೇಕು – ಎನ್ನುವುದು ಅವರ ಅಭಿಮತವಾಗಿತ್ತು. ಆರೆಸ್ಸೆಸ್‍ಅನ್ನು ಅವರು ಬಳಸಿಕೊಂಡರು ಎಂಬ ಕಾರಣಕ್ಕಾಗಿಯೇ, ಶಾಸ್ತ್ರೀಜಿ ಮುಸ್ಲಿಮರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ಸುಳ್ಳುಗಳನ್ನು ಆ ಯುದ್ಧದ ಪರಿಸ್ಥಿತಿಯಲ್ಲೂ ಹರಡುವ ದೇಶದ್ರೋಹಿಗಳು ಆಗ ಇದ್ದರು. ಅತ್ತ ಪಾಕಿಸ್ತಾನದ ಜೊತೆ ಭಾರತ ಮೈಮರೆತು ಸಮರ ನಿರತವಾಗಿದ್ದ ಅವಕಾಶವನ್ನು ಉಪಯೋಗಿಸಿಕೊಳ್ಳಲು ಹವಣಿಸಿದ್ದು ಮಗ್ಗುಲ ತೋಳ ಚೀನಾ! “ಭಾರತ ನಮ್ಮ ಗಡಿಯಗುಂಟ ಇರುವ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಇದು ಸರಿಯಲ್ಲ. ಈ ಕೂಡಲೇ ಅದು ನಿಯೋಜಿಸಿರುವ ಸೈನಿಕರನ್ನು ಆ ಪ್ರದೇಶಗಳಿಂದ ವಾಪಸು ಕರೆಸಿಕೊಳ್ಳಬೇಕು. ಇಲ್ಲವಾದರೆ ಚೀನಾದ ಶಕ್ತಿ ಏನೆಂಬುದನ್ನು ನಾವು ತೋರಿಸಬೇಕಾಗುತ್ತದೆ” – ಇದು ಚೀನಾ ನಮ್ಮ ಪ್ರಧಾನಿಗಳಿಗೆ ಕಳಿಸಿದ ಪತ್ರದ ಒಕ್ಕಣೆ. ಪತ್ರವು ಸೆಪ್ಟೆಂಬರ್ 17ರಂದು ಶಾಸ್ತ್ರಿಗಳ ಕೈ ತಲುಪಿತು. ಅತ್ತ ಪಾಕಿಸ್ತಾನದ ಜೊತೆ ಕಾಳಗ ಮಾಡುತ್ತ ಭಾರತದ ಸೈನ್ಯ ಪಶ್ಚಿಮ ಭಾಗಕ್ಕೆ ಹೋಗಿದೆ ಎಂಬುದು ಗೊತ್ತಿದ್ದೇ ಸಮಯ ಸಾಧಿಸಿ ನಮ್ಮ ದೇಶದ ಮೇಲೆ ದಾಳಿ ಮಾಡಲು ಚೀನಾ ಮಾಡಿದ ತಂತ್ರ ಇದು. ಚೀನಾದ ಧಮಕಿಗೆ ಹೆದರಿ ಭಾರತ ಸೈನಿಕರನ್ನು ವಾಪಸು ಕರೆಸಿಕೊಂಡರೆ ಚೀನಾ ಹೇಳಿದ ಮಾತು ಸತ್ಯ ಎಂದಾಗಿಬಿಡುತ್ತದೆ; ಇಲ್ಲವಾದರೆ ಚೀನಾ ಯುದ್ಧ ಸಾರುತ್ತದೆ ಎಂಬ ಸಂದಿಗ್ಧ ಸನ್ನಿವೇಶ! ಇಡೀ ಜಗತ್ತಿನ ನಾಯಕರೆಲ್ಲ ಶಾಸ್ತ್ರೀಜಿ ಈಗ ಏನು ಮಾಡುತ್ತಾರೆ ಎಂದು ಉಸಿರು ಬಿಗಿಹಿಡಿದು ಕಾದಿದ್ದರು. ಶಾಸ್ತ್ರಿಗಳು ಪತ್ರ ತಲುಪಿದ ಅದೇ ದಿನ ಅಪರಾಹ್ನ ಪ್ರಧಾನಿ ಶಾಸ್ತ್ರಿಗಳು ಲೋಕಸಭೆಯಲ್ಲಿ ಚೀನಾದ ಪತ್ರ ಬಂದ ಸಂಗತಿಯನ್ನು ತಿಳಿಸಿದರು. ಜೊತೆಗೆ “ಚೀನಾ ಹೇಳುತ್ತಿರುವ ಮಾತು ಸತ್ಯಕ್ಕೆ ದೂರವಾದದ್ದು. ಭಾರತ ಇದುವರೆಗೂ ಯಾವುದೇ ಪ್ರಚೋದನೆ ಇಲ್ಲದೆ ತಾನಾಗಿ ಯಾವ ದೇಶದ ಮೇಲೂ ದಂಡೆತ್ತಿ ಹೋದ ಉದಾಹರಣೆಯೇ ಇಲ್ಲ. ಚೀನಾದ ಗಡಿರೇಖೆಗಳನ್ನು ನಾವು ಗೌರವಿಸುತ್ತೇವೆ. ನಿಯಂತ್ರಣ ರೇಖೆ ದಾಟಿ ನಮ್ಮ ಸೈನಿಕರು ಎಂದೂ ಚೀನಾದ ನೆಲದ ಮೇಲೆ ಕಾಲಿಡುವುದಿಲ್ಲ. ಚೀನಾ ದೇಶ ಸುಳ್ಳು ಹೇಳಿ ನಮ್ಮ ಮೇಲೆ ಯುದ್ಧಕ್ಕೆ ಬರುವ ಹಂಚಿಕೆ ಹಾಕಿದ್ದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ”! ಸುಮ್ಮನೆ ಯೋಚಿಸಿ ನೋಡಿ. ಭಾರತಕ್ಕೆ ನೇರವಾದ ಶತ್ರು ಪಾಕಿಸ್ತಾನ. ಅದಕ್ಕೆ ಅಮೆರಿಕಾದ ಬೆಂಬಲ ಇತ್ತು. ಆ ಕಾಲದಲ್ಲಿ ರಷ್ಯದ ಅಧ್ಯಕ್ಷನೂ ಭಾರತದ ಪರವಾಗಿರಲಿಲ್ಲ. ಇತ್ತ ಈಗಾಗಲೇ ಒಮ್ಮೆ ಯುದ್ಧಕ್ಕೆ ಬಂದು ಭಾರತವನ್ನು ಸೋಲಿಸಿ ಹೋಗಿದ್ದ ಡ್ರ್ಯಾಗನ್ ಚೀನಾ. ಒಟ್ಟು ನಾಲ್ಕು ದೇಶಗಳು ತನ್ನತ್ತ ಗುರಿ ಇಟ್ಟು ಗುಟುರು ಹಾಕುತ್ತಿದ್ದಾಗಲೂ ಶಾಸ್ತ್ರೀಜಿ, ಅಂಥದೊಂದು ದಿಟ್ಟ ಉತ್ತರವನ್ನು ಲೋಕಸಭೆಯಲ್ಲಿ ಕೊಟ್ಟು ಚೀನಾಕ್ಕೆ ಬಿಸಿ ಮುಟ್ಟಿಸಿದ್ದರು! ತೀರಿಕೊಂಡು ಐವತ್ತು ವರ್ಷಗಳಾದರೂ ಅವರ ಹೆಸರು ಕೇಳಿದಾಗೆಲ್ಲ ದೇಶಭಕ್ತ ಭಾರತೀಯರು ರೋಮಾಂಚನ ಅನುಭವಿಸುವುದು ಇದೇ ಕಾರಣಕ್ಕೆ.
ತಾಷ್ಕೆಂಟ್‍ನಲ್ಲಿ ಶಾಂತಿಮಂತ್ರ
ಶಾಸ್ತ್ರಿಗಳ ಉತ್ತರ ಕೇಳಿ ಚೀನಾ ತಣ್ಣಗಾಯಿತು. ಅಸಲಿಗೆ ಭಾರತದ ಯಾವ ಯೋಧನೂ ಚೀನಾ ನೆಲಕ್ಕೆ ಕಾಲಿಟ್ಟಿರಲಿಲ್ಲ. ಇತ್ತ ಪಾಕಿಸ್ತಾನದ ಜೊತೆಗೆ ನಡೆಯುತ್ತಿದ್ದ ಯುದ್ಧದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಭಾರತ ಮಾತ್ರ ದಿನದಿನವೂ ಲಾಹೋರಿಗೆ ಹತ್ತಿರವಾಗುತ್ತಿತ್ತು. ಕೊನೆಗೆ ಪಾಕಿಸ್ತಾನದ ಜನ್ಮದ ಗೆಳೆಯ ಅಮೆರಿಕಾ ಮಧ್ಯಪ್ರವೇಶಿಸಿ ಭಾರತದ ಜೊತೆ ವಿನಂತಿ ಮಾಡಿಕೊಂಡ ಮೇಲೆ ಶಾಸ್ತ್ರಿಗಳು ಯುದ್ಧವನ್ನು ನಿಲ್ಲಿಸಿದರು. ಸೆಪ್ಟೆಂಬರ್ 23ನೇ ತಾರೀಕು ಭಾರತ ಸಮರ ನಿಲ್ಲಿಸಿ ತಾನು ಅದುವರೆಗೆ ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಭಾಗಗಳನ್ನು ವಾಪಸು ಮಾಡಲು ಒಪ್ಪಿಕೊಂಡಿತು. ಸ್ವಾತಂತ್ರ್ಯಾನಂತರದ ಎರಡನೆ ವಿಜಯ ಭಾರತದ್ದಾಯಿತು. “ಧೋತಿ ಪ್ರಸಾದ್” ಎಂದು ಕರೆಸಿಕೊಳ್ಳುತ್ತ ಗೇಲಿಯ ವಸ್ತುವಾಗಿದ್ದ ಶಾಸ್ತ್ರಿ ತನ್ನ ಶಕ್ತಿ ಏನು ಎನ್ನುವುದನ್ನು ಜಗತ್ತಿಗೆ ತೋರಿಸಿದರು. ಮರುವರ್ಷ 1966ರ ಜನವರಿಯ 10ನೇ ತಾರೀಕಿನಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಒಪ್ಪಂದ ಏರ್ಪಡಿಸುವ ಕಾರ್ಯಕ್ರಮವನ್ನು ರಷ್ಯದ ಅಧ್ಯಕ್ಷ ಅಲೆಕ್ಸಿ ಕಸಿಗಿನ್ ಏರ್ಪಡಿಸಿದ. ಆಯೂಬ್ ಖಾನ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಷ್ಯದ ತಾಷ್ಕೆಂಟ್ ಎಂಬಲ್ಲಿ ಅಂದು ಪರಸ್ಪರರ ನಡುವಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದೆಂದು ನಿರ್ಣಯವಾಯಿತು. ಈ ಒಪ್ಪಂದಕ್ಕೆ ರಷ್ಯ ನೇತೃತ್ವ ವಹಿಸಿದ್ದಕ್ಕೂ ಒಂದು ಕಾರಣ ಇದೆ. ಅಮೆರಿಕಾದ ವಿನಂತಿಯ ಮೇರೆಗೆ ಭಾರತ ಯುದ್ಧವನ್ನು ನಿಲ್ಲಿಸಿತ್ತು. ಹಾಗಾಗಿ ಅಮೆರಿಕಾ ಇವೆರಡೂ ದೇಶಗಳನ್ನು ತನಗೆ ಬೇಕಾದಂತೆ ಆಡಿಸುತ್ತಿದೆ; ಅದರ ಮಾತನ್ನು ಭಾರತವೂ ಕೇಳುತ್ತದೆ ಎಂಬ ಹುಸಿನಂಬಿಕೆ ರಷ್ಯಾ ಅಧ್ಯಕ್ಷನಿಗಿತ್ತು. ಜನವರಿ 10ರಂದು ಉಭಯ ನಾಯಕರೂ ತಾಷ್ಕೆಂಟ್‍ನಲ್ಲಿ ಭೇಟಿಯಾದರು. ಶಾಂತಿ ಒಪ್ಪಂದವನ್ನು ಇಬ್ಬರ ಎದುರು ಇಡಲಾಯಿತು. ಇನ್ನೇನು ಸಹಿ ಹಾಕಬೇಕೆನ್ನುವಷ್ಟರಲ್ಲಿ ಶಾಸ್ತ್ರಿ, ಒಪ್ಪಂದದ ಮುಖ್ಯ ಭಾಗವೇ ಕಾಣೆಯಾಗಿರುವುದರ ಬಗ್ಗೆ ಗಮನ ಸೆಳೆದರು. “ಇನ್ನು ಮುಂದೆಂದೂ ಪರಸ್ಪರರ ನಡುವಿನ ಮನಸ್ತಾಪಗಳನ್ನು ಬಗೆಹರಿಸಲು ಸೇನೆಯನ್ನು ಬಳಸುವುದಿಲ್ಲ” ಎಂಬ ಕರಾರು ಒಪ್ಪಂದದಲ್ಲಿ ಸೇರಬೇಕೆಂದು ಶಾಸ್ತ್ರಿ ಹೇಳಿದರು. ಇದಕ್ಕೆ ಆಯೂಬ್ ಖಾನ್ ಒಪ್ಪಲಿಲ್ಲ. ಅದನ್ನು ಈಗಲೇ ಹೇಳುವುದು ಹೇಗೆ, ಕಾಲ ಬಂದಾಗ ನೋಡಿಕೊಳ್ಳೋಣ ಎಂಬ ಹಾರಿಕೆಯ ಉತ್ತರ ನೀಡಿದ. “ಹಾಗಾದರೆ ಈ ಶಾಂತಿ ಒಪ್ಪಂದ ಸಾಧ್ಯವಿಲ್ಲ. ಮುಂದೆ ಬೇರೆ ಯಾರಾದರೂ ಪ್ರಧಾನಿಯಾಗುವಾಗ ಇದನ್ನು ಇಟ್ಟುಕೊಳ್ಳಿರಿ. ನನ್ನ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಆ ಕರಾರು ಸೇರಲೇಬೇಕು” ಎಂದು ಶಾಸ್ತ್ರೀಜಿ ಪಟ್ಟು ಹಿಡಿದರು. ಕೊನೆಗೆ ಆಯೂಬ್ ಖಾನ್ ಒಪ್ಪಿ ಒಪ್ಪಂದ ಪತ್ರದಲ್ಲಿ ತನ್ನ ಪೆನ್ನಲ್ಲಿ ಆ ಒಂದು ವಾಕ್ಯವನ್ನು ಸೇರಿಸಿ ನಂತರ ಸಹಿ ಹಾಕಿದ. ಆಯೂಬ್ ಖಾನನ ಹಸ್ತಾಕ್ಷರದಲ್ಲಿರುವ ಈ ಒಪ್ಪಂದ ಇಂದಿಗೂ ಭಾರತದ ಸಂಗ್ರಹದಲ್ಲಿದೆ. ಶಾಂತಿದೂತನ ಪೋಸು ಕೊಡುತ್ತ ಪಾರಿವಾಳ ಹಾರಿಸಿದ ಹುಸಿ ನಾಯಕರಿಗಿಂತ ಶಾಸ್ತ್ರೀಜಿಯೇ ನೈಜಾರ್ಥದಲ್ಲಿ ಶಾಂತಿಯ ಪ್ರತಿಪಾದಕ ಎಂದು ಹೇಳಬೇಕು.
ವಿವಶವಾಯಿತು ಪ್ರಾಣ ಹಾ..!
ಅಂದಿನ ಕಾರ್ಯಕ್ರಮ ಮುಗಿದು ಎಲ್ಲರೂ ತಮ್ಮ ಕೊಠಡಿಗಳಿಗೆ ಹೋದ ಮೇಲೆ ರಾತ್ರಿಯ ಸುಮಾರು ಮೂರು ಗಂಟೆಯ ನಡೆಯಬಾರದ ಘಟನೆಯೊಂದು ನಡೆದುಹೋಯಿತು. ಅದುವರೆಗೂ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದ್ದ, ಆರೂವರೆ ಅಡಿ ಎತ್ತರದ ಆಯೂಬನನ್ನೂ ತನ್ನ ಮಾತಿಗೆ ಬಗ್ಗಿಸಿ ಒಪ್ಪಿಸಿದ್ದ, ನಮ್ಮ ದೇಶದ ಕಣ್ಮಣಿಯಾಗಿದ್ದ ಶಾಸ್ತ್ರೀಜಿ ಹಠಾತ್ತನೆ ತೀರಿಕೊಂಡರು. ಮರುದಿನ, ಅಂದರೆ 11ನೇ ತಾರೀಕು ನಸುಕಿನ ನಾಲ್ಕು ಗಂಟೆಗೆ ಶಾಸ್ತ್ರಿಗಳು ತೀರಿಕೊಂಡದ್ದು ಸುದ್ದಿಯಾಯಿತು. ರಷ್ಯದ ಉನ್ನತ ಅಧಿಕಾರಿಗಳು ಸೇರಿದರು. ಆಯೂಬ್ ಖಾನ್ ಕೂಡ ಅಲ್ಲಿ ಕಾಣಿಸಿಕೊಂಡ. ಸಾವಿಗೆ ಕಾರಣ ಏನು ಎನ್ನುವುದು ತಿಳಿಯದ್ದರಿಂದ ಹಿಂದಿನ ರಾತ್ರಿ ಊಟ ತಯಾರಿಸಿದ್ದ ಮತ್ತು ಬಡಿಸಿದ್ದ ಎಲ್ಲರನ್ನೂ ಕೂಡಿಹಾಕಿ ವಿಚಾರಣೆ ಮಾಡಲಾಯಿತು. ವೈದ್ಯರು ಬಂದು ದೇಹವನ್ನು ಪರಿಶೀಲಿಸದ ಮೇಲೆ, ಹೃದಯಾಘಾತದಿಂದ ತೀರಿಕೊಂಡಿದ್ದಾರೆ ಎಂದು ತಿಳಿಸಿದರು. ಮುಂಜಾನೆ ಆರು ಗಂಟೆ ಹೊತ್ತಿಗೆ ಶಾಸ್ತ್ರಿಗಳ ನಿಧನವಾರ್ತೆ ಭಾರತ ತಲುಪಿತು. ವಿಶೇಷ ವಿಮಾನದಲ್ಲಿ ಅವರ ಮೃತದೇಹವನ್ನು ಇಲ್ಲಿಗೆ ತರಲಾಯಿತು. ಅದು ಕೊಲೆಯೋ ಸಹಜ ಸಾವೋ ಎಂಬ ಅನುಮಾನ ಹುತ್ತದಂತೆ ಬೆಳೆಯಿತು. ಸಶಕ್ತ ನಾಯಕನೊಬ್ಬ ತನ್ನ ಶತ್ರು ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮೂರನೇ ರಾಷ್ಟ್ರದಲ್ಲಿ ತಂಗಿದ್ದಾಗ ಸಾವಿನಂಥ ದುರ್ಘಟನೆ ನಡೆದುಹೋದರೆ ಅನುಮಾನ ಹುಟ್ಟುವುದು ಸಹಜ ತಾನೆ? ಅಲ್ಲದೆ ಜನರಿಗೆ ಅನುಮಾನ ಬಲಗೊಳ್ಳುವಂತಹ ಹಲವು ಘಟನೆಗಳು ಆ ಸಂದರ್ಭದಲ್ಲಿ ನಡೆದವು.
ನಿಮಗೆ ಆಶ್ಚರ್ಯವಾಗಬಹುದು; ಶಾಸ್ತ್ರೀಜಿಯ ಸಾವಿಗೆ ಸಂಬಂಧಪಟ್ಟಂತೆ ರಾಜ್ ನಾರಾಯಣ್ ಎಂಬವರ ನೇತೃತ್ವದಲ್ಲಿ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು. ಆದರೆ ಅದೆಷ್ಟು ವಾರಗಳು ಕಳೆದರೂ ಅವರಿಗೆ ಯಾವೊಂದು ಮಾಹಿತಿಯನ್ನೂ ಕಲೆ ಹಾಕಲು ಆಗಲಿಲ್ಲ. ಶಾಸ್ತ್ರಿ ಸಾವಿಗೆ ಸಂಬಂಧಪಟ್ಟಂತೆ ಲೋಕಸಭೆಯ ಗ್ರಂಥಾಲಯದಲ್ಲಿರುವ ಕಡತ ಒಂದೇ ಒಂದು ಎಂದರೆ ನಂಬುತ್ತೀರಾ? ಹಾಗಾದರೆ ಅವರ ಸಾವನ್ನು ಅಷ್ಟೊಂದು ಲಘುವಾಗಿ ಭಾರತ ಪರಿಗಣಿಸಿತೆ? ಅಥವಾ ದಾಖಲೆಗಳು ಸಿಕ್ಕರೂ ಅವನ್ನು ಉದ್ಧೇಶಪೂರ್ವಕ ನಾಶ ಮಾಡಲಾಯಿತೆ? ಈ ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗೇ ಉಳಿದುಕೊಂಡಿವೆ. ಪ್ರಕರಣ ನಡೆದು ಬರೋಬ್ಬರಿ 44 ವರ್ಷಗಳು ಕಳೆದ ಮೇಲೆ 2009ರಲ್ಲಿ ಅನುಜ್ ಧರ್ ಎಂಬ ಪತ್ರಕರ್ತ ಮಾಹಿತಿ ಹಕ್ಕು ಕಾಯ್ದೆಯಡಿ, ಶಾಸ್ತ್ರೀಜಿಯ ಸಾವಿಗೆ ಸಂಬಂಧಪಟ್ಟ ದಾಖಲೆಗಳ ಮಾಹಿತಿ ಕೋರಿದರು. ಅನುಜ್ ಈ ಹಿಂದೆ ಸುಭಾಸ್ ಚಂದ್ರ ಬೋಸ್‍ರ ಸಾವಿನ ರಹಸ್ಯದ ಬಗ್ಗೆಯೂ ಆಳವಾದ ಸಂಶೋಧನೆ ಮಾಡಿದ ವ್ಯಕ್ತಿ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನಿರಾಕರಿಸಲಾಯಿತು. ಉತ್ತರ ಸಿಗಲಾರದು ಎಂಬುದು ಬಹುತೇಕ ಅವರಿಗೂ ಖಚಿತವಾಗಿತ್ತು. ಆದರೆ, ನಿರಾಕರಣೆಗೆ ಕೊಟ್ಟ ಕಾರಣ ಅವರ ಕುತೂಹಲವನ್ನು ಕೆರಳಿಸಿತು. “ಭಾರತ ಇದುವರೆಗೆ ಬೆಳೆಸಿರುವ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆ ಬರುವ ಸಾಧ್ಯತೆ ಇರುವುದರಿಂದ ಈ ಮಾಹಿತಿಗಳನ್ನು ಸಾರ್ವಜನಿಕರಿಗೆ ಕೊಡುವುದನ್ನು ನಿರಾಕರಿಸಲಾಗಿದೆ” ಎಂಬ ಒಕ್ಕಣೆ ಇತ್ತು ಅದರಲ್ಲಿ. ಅಂದರೆ, ಭಾರತದ ಹೊರಗಿನ ಯಾವುದೋ ಒಂದು ದೇಶದ ಕೈವಾಡ ಇದರಲ್ಲಿ ಇರುವ ಸಾಧ್ಯತೆ ನಿಚ್ಚಳ ಎಂದು ಅನುಜ್ ಬಗೆದರು.
ಸಾವಿನ ಸುತ್ತ ಸಂಶಯದ ಹುತ್ತ
ನಂಬಿದರೆ ನಂಬಿ, ಶಾಸ್ತ್ರಿಗಳ ಸಾವಿನ ಬಗ್ಗೆ ಹಲವಾರು ಸಂಶಯಗಳು ಹೆಡೆ ಎತ್ತಿದರೂ ರಷ್ಯವಾಗಲೀ ಭಾರತವಾಗಲೀ ಅವರ ಶವಪರೀಕ್ಷೆ ಮಾಡಲಿಲ್ಲ! ಯಾವುದೇ ಸಾಮಾನ್ಯ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸತ್ತರೆ ಅವರ ಶವಪರೀಕ್ಷೆ ಮಾಡಲಾಗುತ್ತದೆ. ಆದರೆ ದೇಶದ ಪ್ರಧಾನಿ ಎಂಬ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ ಹೊರದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸತ್ತರೂ ನಮ್ಮ ದೇಶ ಪೋಸ್ಟ್‍ಮಾರ್ಟಂ ಮಾಡುವ ಅಗತ್ಯ ಇಲ್ಲ ಎಂದುಬಿಟ್ಟಿತು! ಹೃದಯಾಘಾತ ಎಂದು ವೈದ್ಯರು ಹೇಳಿದ ಮಾತನ್ನೇ ಇವರೆಲ್ಲ ನಂಬಿಬಿಟ್ಟಿದ್ದರು. ಅಥವಾ ಅವರನ್ನು ನಂಬಿಸಲಾಗಿತ್ತು. ಈ ವೈದ್ಯರಾದರೂ ಯಾರು? ರಷ್ಯನ್ನರು! ಶಾಸ್ತ್ರಿಗಳ ವೈದ್ಯರಾಗಿದ್ದ ಡಾ. ಆರ್. ಎನ್. ಛಗ್ ಎಂಬವರ ಅಭಿಪ್ರಾಯವನ್ನು ದಾಖಲಿಸಿಕೊಳ್ಳಲು ಯಾರೂ ಆಸಕ್ತಿ ವಹಿಸಲಿಲ್ಲ. ರಷ್ಯನ್ ವೈದ್ಯರು ಹೇಳುವ ಪ್ರಕಾರ ಇದು ಶಾಸ್ತ್ರೀಜಿಯ ನಾಲ್ಕನೇ ಹೃದಯಾಘಾತ. ಆದರೆ ಛಗ್ ಪ್ರಕಾರ ಶಾಸ್ತ್ರಿಗಳು ಹಿಂದೆಂದೂ ಹೃದಯದ ಸಮಸ್ಯೆಗಳಿಂದ ಬಳಲಿದವರೇ ಅಲ್ಲ! ಹೀಗೆ ಭಿನ್ನಾಭಿಪ್ರಾಯಗಳಿದ್ದಾಗಲೂ ಪೋಸ್ಟ್ ಮಾರ್ಟಂ ಯಾಕೆ ಮಾಡಲಿಲ್ಲ? ಇದು ಚಿದಂಬರ ರಹಸ್ಯ! ಎಲ್ಲರಿಗಿಂತ ಹೆಚ್ಚಾಗಿ ಶಾಸ್ತ್ರಿಗಳ ಜೊತೆ ಹಲವು ದಶಕಗಳನ್ನು ಕಳೆದ, ಅವರ ಎಲ್ಲ ವೈಯಕ್ತಿಕ ಮಾಹಿತಿಗಳನ್ನೂ ಬಲ್ಲ ಪತ್ನಿ ಲಲಿತಾ ಶಾಸ್ತ್ರಿ, ತನ್ನ ಪತಿಯ ದೇಹದಲ್ಲಿ ಹಲವು ಕಡೆ ಗಾಯಗಳನ್ನು ಕಂಡರಂತೆ. ಅಲ್ಲದೆ ದೇಹ ನೀಲಿಗಟ್ಟಿತ್ತು ಎಂದೂ ಆಕೆ ಹೇಳಿದ್ದಾರೆ. ಹೃದಯಾಘಾತದಲ್ಲಿ ದೇಹ ನೀಲಿಬಣ್ಣಕ್ಕೆ ತಿರುಗುವುದಿಲ್ಲ; ವಿಷಪ್ರಾಶನದಲ್ಲಿ ಮಾತ್ರ ಆ ಸಾಧ್ಯತೆ ಇದೆ ಎನ್ನುವುದು ವೈದ್ಯರಿಗೆ ಗೊತ್ತಿದೆ. ಹಾಗಿರುವಾಗ ಲಲಿತಾ ಅವರ ದೂರನ್ನು ಯಾಕೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ? ಶಾಸ್ತ್ರಿಯವರ ಕುಟುಂಬ ಹಲವು ವರ್ಷಗಳವರೆಗೆ ಕಾನೂನು ಹೋರಾಟ ಮಾಡಿತು. ಶಾಸ್ತ್ರಿಗಳದ್ದು ಸಹಜ ಸಾವಲ್ಲ; ಅದೊಂದು ಕೊಲೆ ಎಂದು ಪತ್ನಿ ಲಲಿತಾ ಕೊನೆಯವರೆಗೂ ಬಲವಾಗಿ ಪ್ರತಿಪಾದಿಸಿದರು.
ವಿಚಿತ್ರವೆಂದರೆ, ಪ್ರಕರಣವನ್ನು ತೀರಾ ಹತ್ತಿರದಿಂದ ನೋಡಿದ್ದ ಇಬ್ಬರು ವ್ಯಕ್ತಿಗಳು – ವೈದ್ಯ ಡಾ. ಆರ್.ಎನ್. ಛಗ್ ಮತ್ತು ಶಾಸ್ತ್ರಿಯವರ ಕೆಲಸಗಾರ ರಾಮನಾಥ. ಡಾ. ಛಗ್ ಅಂತೂ ಇದೊಂದು ಅಸಹಜ ಸಾವು ಎಂದೇ ನೇರವಾಗಿ ಹೇಳುತ್ತಿದ್ದರು. ಲಲಿತಾರನ್ನು ಭೇಟಿ ಮಾಡಿದಾಗಲೂ ಅವರು ಅವೇ ಮಾತುಗಳನ್ನು ಪುನರುಚ್ಚರಿಸಿದ್ದರು. ಶಾಸ್ತ್ರಿಯವರ ದೇಹಾರೋಗ್ಯವನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡುತ್ತಿದ್ದುದರಿಂದ ಛಗ್‍ರಿಗೆ ಇದು ಹೃದಯಾಘಾತವಾಗಿರಲು ಸಾಧ್ಯವಿಲ್ಲ ಎನ್ನುವುದು ಖಚಿತವಿತ್ತು. ಸಾವಿನ ಕುರಿತು ತನಿಖೆ ನಡೆಸಲು ಸಂಸದೀಯ ಸಮಿತಿಯೊಂದು ರಚನೆಯಾದಾಗ ಅದರೆದುರು ಬಂದು ಛಗ್ ತಾನು ಕಂಡ ಸತ್ಯಗಳನ್ನು ಹೇಳುವವರಿದ್ದರು. ದುರದೃಷ್ಟವೆಂದರೆ, ಅವರು ಸಮಿತಿಯನ್ನು ಭೇಟಿಯಾಗಲು ಬರುತ್ತಿದ್ದಾಗ ದಾರಿಯಲ್ಲಿ ಟ್ರಕ್ ಬಡಿದು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಸಾಕ್ಷಿಯಾಗಿದ್ದ ರಾಮನಾಥ, ಲಲಿತಾ ಅವರಲ್ಲಿ ಫೊನಿನಲ್ಲಿ ಮಾತಾಡುತ್ತ “ಬಹುತ್ ದಿನ್ ಕಾ ಭೋಜ್ ಥಾ ಅಮ್ಮ. ಆಜ್ ಸಬ್ ಬತಾದೇಂಗೇ” (ಹಲವು ದಿನಗಳಿಂದ ಈ ಹೊರೆ ಹೊತ್ತಿದ್ದೇನೆ. ಇಂದು ಎಲ್ಲವನ್ನೂ ಹೇಳಿಬಿಡುತ್ತೇನೆ) ಎಂದಿದ್ದ. ಆದರೆ ಆತ ಲಲಿತಾರನ್ನು ಭೇಟಿಯಾಗಲು ಬರುತ್ತಿದ್ದಾಗ ದಾರಿಯಲ್ಲಿ ಕಾರು ಅಪಘಾತವಾಗಿ ತಲೆಗೆ ತೀವ್ರವಾಗಿ ಪೆಟ್ಟಾಯಿತು. ಅಪಘಾತದಲ್ಲಿ ರಾಮನಾಥ ಕಾಲುಗಳೆರಡನ್ನೂ ಕಳೆದುಕೊಂಡ. ಸ್ಮೃತಿಯೂ ಹೋಯಿತು. ಬದುಕಿನ ಉಳಿದ ವರ್ಷಗಳನ್ನು ಅವನು ಪ್ರಜ್ಞಾಶೂನ್ಯನಾಗಿ ಕಳೆದ. ಹೀಗೆ ಘಟನೆಯ ಎರಡೇ ಎರಡು ಸಾಕ್ಷಿಗಳು ಇನ್ನೇನು ಎಲ್ಲವನ್ನೂ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿ ಬರುತ್ತಿದ್ದಾಗಲೇ ಸಿನಿಮೀಯ ರೀತಿಯಲ್ಲಿ ಅಪಘಾತಕ್ಕೆ ತುತ್ತಾಗಲು ಕಾರಣ ಏನು? ಇದೂ ಒಂದು ರಹಸ್ಯ.
ಪ್ರಕರಣ ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತ ಗೊಂದಲಗಳ ಸಂತೆಯಾಗುತ್ತಿದ್ದಾಗ, “ಇದೆಲ್ಲವನ್ನೂ ನಡೆಸಿದ್ದು ಅಮೆರಿಕಾದ ಗುಪ್ತಚರ ಇಲಾಖೆಯಾದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ)” ಎಂಬ ಹೊಸ ಬಾಂಬ್ ಹಾಕಿದವನು ರಾಬರ್ಟ್ ಕ್ರಾಲಿ ಎಂಬ ಅದೇ ಸಿಐಎಯ ಸೀಕ್ರೆಟ್ ಏಜೆಂಟ್. ಈತನನ್ನು ಗ್ರೆಗರಿ ಡಗ್ಲಾಸ್ ಎಂಬ ಪತ್ರಕರ್ತ 1993ರಲ್ಲಿ ಮೊದಲ ಬಾರಿಗೆ ಸಂಪರ್ಕಿಸಿದ. ಮೊದಮೊದಲು ತನ್ನ ಕೆಲಸದ ಗೌಪ್ಯವಿಷಯಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದ ಕ್ರಾಲಿ ನಂತರ ಹಲವು ಸಂಗತಿಗಳನ್ನು ಮೊದಲ ಬಾರಿಗೆನ್ನುವಂತೆ ಹೇಳುತ್ತಾ ಹೋದ. ಕೊನೆಗೆ ಈತ ತನ್ನ ಮಗನಿಗೆ ಒಂದು ದೊಡ್ಡ ಪೆಟ್ಟಿಗೆ ಕೊಟ್ಟು, ಅದನ್ನು ತನ್ನ ಮರಣದ ನಂತರ ಡಗ್ಲಾಸ್‍ನಿಗೆ ಕೊಡಲು ಹೇಳಿದ. ಅದರಂತೆ, ಆತನ ಮರಣಾನಂತರ ತೆರೆದು ನೋಡಿದಾಗ ಆ ಪೆಟ್ಟಿಗೆಯಲ್ಲಿ ಬರೋಬ್ಬರಿ 15,000 ಪುಟಗಳಾಗುವಷ್ಟು ಗೌಪ್ಯ ಮಾಹಿತಿಗಳಿದ್ದವು. ಅಮೆರಿಕಾ ಮತ್ತು ರಷ್ಯಗಳ ಮಧ್ಯೆ ಶೀತಲ ಸಮರ ನಡೆಯುತ್ತಿದ್ದ ಸಮಯದಲ್ಲಿ ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಏನೆಲ್ಲ ಮಾಹಿತಿಗಳನ್ನು ಸಂಗ್ರಹಿಸಿತು, ಏನೇನು ಕೆಲಸಗಳನ್ನು ಮಾಡಿತ್ತು ಎಂಬ ಎಲ್ಲ ಮಾಹಿತಿಗಳೂ ಅದರಲ್ಲಿದ್ದವು. ಕ್ರಾಲಿಯ ಪ್ರಕಾರ ಭಾರತದ ಎರಡು ಅತ್ಯಂತ ಪ್ರತಿಭಾಪೂರ್ಣ ವ್ಯಕ್ತಿಗಳು ತೀರಿಕೊಂಡದ್ದು ಸಿಐಎ ಕೈಯಲ್ಲಿ. ಅವರು – ಭಾರತದ ಪರಮಾಣು ಕಾರ್ಯಕ್ರಮಗಳ ಅಧ್ವರ್ಯುವಾಗಿದ್ದ ಹೋಮಿ ಜಹಾಂಗೀರ್ ಭಾಭಾ ಮತ್ತು ಅಮೆರಿಕಾಕ್ಕೆ ಸೆಡ್ಡು ಹೊಡೆದು ಪರಮಾಣು ಕಾರ್ಯಕ್ರಮಗಳನ್ನು ಮುಂದುವರಿಸಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ. ಒಬ್ಬರು ವಿಜ್ಞಾನಿ, ಇನ್ನೊಬ್ಬರು ಮುತ್ಸದ್ದಿ. ಇಬ್ಬರ ಸಾವೂ ಭಾರತದ ಹೊರಗೆ ಆಯಿತು. ಸಂಶಯಾಸ್ಪದ ರೀತಿಯಲ್ಲಾಯಿತು ಮತ್ತು ಸಾವಿಗೆ ಕಾರಣ ಏನು ಎನ್ನುವುದು ಕೊನೆಗೂ ತಿಳಿದುಬರಲಿಲ್ಲ. ಇಬ್ಬರೂ ಕೇವಲ ಹದಿಮೂರು ದಿನಗಳ ಅಂತರದಲ್ಲಿ ತೀರಿಕೊಂಡರು. ಈ ಇಬ್ಬರ ಸಾವಿಗೂ ಸಿಐಎ ನೇರ ಹೊಣೆ ಎಂದು ಕ್ರಾಲಿ ಹೇಳಿದ್ದಾನೆ. ಅಮೆರಿಕಾಕ್ಕೆ ಭಾರತದ ನ್ಯೂಕ್ಲಿಯಾರ್ ಪ್ರೋಗ್ರಾಮ್ ಮೇಲೆ ಒಂದು ಕಣ್ಣು ಇದ್ದೇ ಇತ್ತು. ಭಾರತ ತನ್ನನ್ನು ಮೀರಿಸಿ ಸೂಪರ್ ಪವರ್ ಆಗಬಹುದೆಂಬ ಆತಂಕ ಇತ್ತು. ನೆಹರೂ ಯುಗದಲ್ಲಿ ಭಾರತ ರಷ್ಯದ ಪರಮಾಪ್ತನೆಂದು ಗುರುತಿಸಿಕೊಂಡಿದ್ದರಿಂದ ಸಹಜವಾಗಿಯೇ ಅಮೆರಿಕಾ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿತ್ತು. ಅಮೆರಿಕಾ ಮತ್ತು ರಷ್ಯಗಳ ನಡುವೆ ಹಲವು ಡಬ್ಬಲ್ ಏಜೆಂಟ್‍ಗಳು (ಅಂದರೆ ಎರಡೂ ಕಡೆಯೂ ಕೆಲಸ ಮಾಡುವವರು. ರಷ್ಯನ್ ಏಜೆಂಟ್ ಎಂದು ಗುರುತಿಸಿಕೊಂಡು ಅಮೆರಿಕಾ ದೇಶಕ್ಕೆ ಮಾಹಿತಿ ಒದಗಿಸುವವರು. ಹಾಗೆಯೇ, ಅಮೆರಿಕಾ ಗೂಢಚಾರರೆಂದು ಹೇಳಿಕೊಂಡು ರಷ್ಯನ್ನರಿಗೆ ಸಹಾಯ ಮಾಡುವವರು) ಇದ್ದದ್ದನ್ನೂ ಕ್ರಾಲಿ ಒಪ್ಪಿಕೊಂಡಿದ್ದಾನೆ. ಇಂಥಾದ್ದೇ ಯಾವುದಾದರೂ ಡಬ್ಬಲ್ ಏಜೆಂಟ್ ಮುಖಾಂತರ ಅಮೆರಿಕಾ ತನ್ನ ಕಾರ್ಯ ಸಾಧಿಸಿಕೊಂಡಿರಬಹುದು ಎನ್ನುವುದು ಕ್ರಾಲಿಯ ಅಭಿಪ್ರಾಯ.
ಶಾಸ್ತ್ರಿಗಳನ್ನು ಕೊಂದದ್ದು ಅಮೆರಿಕಾದ ಸೀಕ್ರೆಟ್ ಏಜೆಂಟ್‍ಗಳೇ ಎಂದಾದರೆ ರಷ್ಯ ಯಾಕೆ ಅವರನ್ನು ಹಿಡಿಯಲಿಲ್ಲ? ಹಾಗೆ ಹಿಡಿಯುವ ಸಾಧ್ಯತೆ ಕಡಿಮೆ ಇತ್ತು. ಯಾಕೆಂದರೆ, ರಷ್ಯವೇನಾದರೂ ಶಾಸ್ತ್ರೀಜಿಯ ಕೊಲೆಗಾರ ಅಮೆರಿಕನ್ ಏಜೆಂಟ್ ಎಂದು ಒಪ್ಪಿಕೊಂಡಿದ್ದರೆ ಅದು ರಷ್ಯಕ್ಕೇ ದೊಡ್ಡ ಅವಮಾನವಾಗುತ್ತಿತ್ತು. ತನ್ನ ದೇಶದಲ್ಲಿ, ತನ್ನ ಸರಕಾರದಲ್ಲೇ ಅಮೆರಿಕನ್ ಏಜೆಂಟ್‍ಗಳು ಇದ್ದರೂ ಅವರ ಬಗ್ಗೆ ಮಾಹಿತಿ ಇಲ್ಲದ ರಾಷ್ಟ್ರ ಎಂಬ ಗೇಲಿಯನ್ನು ಅದು ಎದುರಿಸಬೇಕಾಗಿತ್ತು. ಹಾಗಾಗಿ ಅದು ಯಾವ ಕಾರಣಕ್ಕೂ ಸಾವಿನ ರಹಸ್ಯವನ್ನು ಬಿಟ್ಟುಕೊಡದೆ ಹೃದಯಾಘಾತ ಎಂಬ ಸಬೂಬು ಕೊಟ್ಟಿತು. ಸಾಕ್ಷಿ ಹೇಳಲಿದ್ದವರನ್ನು ಕೊಂದು ಸತ್ಯವನ್ನು ಚರಿತ್ರೆಯ ಗರ್ಭದಲ್ಲಿ ಹುಗಿದುಹಾಕಿತು. ಬಹುಶಃ ಕೆಲವು ವರ್ಷಗಳು ಕಳೆದ ಮೇಲೆ ಭಾರತದ ಪ್ರಧಾನಿ ಇಂದಿರಾ ಗಾಂಧಿಗೆ ಈ ವಿವರಗಳು ಸಿಕ್ಕಿರಲೂ ಸಾಕು. ಆದರೆ, ಅಷ್ಟರಲ್ಲಾಗಲೇ ಅಮೆರಿಕಾ ಮತ್ತು ರಷ್ಯಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಆಕೆಗೆ ಇತಿಹಾಸದಲ್ಲಿ ಮುಚ್ಚಿಹೋದ ಸತ್ಯವನ್ನು ಮತ್ತೆ ಕೆದಕಿ ರಾಡಿ ಮಾಡಿಕೊಳ್ಳುವುದು ಬೇಡ ಅನ್ನಿಸಿರಬಹುದು. ಸತ್ಯಕ್ಕೆಷ್ಟು ಮುಖಗಳೋ ಯಾರಿಗೆ ಗೊತ್ತು!
ಶಾಸ್ತ್ರಿಯವರ ಸಾವು – ಅದು ನಿಜವಾದ ಪ್ರಾಕೃತಿಕ ಸಾವೋ ಹೃದಯಾಘಾತವೋ ವಿಷಪ್ರಾಶನವೋ ಯಾವೊಂದು ನಿರ್ಣಯಕ್ಕೂ ಇದುವರೆಗೆ ಬರಲು ಸಾಧ್ಯವಾಗಿಲ್ಲ. ಭಾರತ, ರಷ್ಯ, ಪಾಕಿಸ್ತಾನ, ಅಮೆರಿಕ, ಚೀನಾ ಹೀಗೆ ಸಂದೇಹದ ಬಳ್ಳಿ ಹಲವು ರಾಷ್ಟ್ರಗಳಿಗೆ ಹಬ್ಬಿದೆ. ಆದರೆ ನಿಜವಾದ ಕಾರಣ ಏನು ಎನ್ನುವುದು ಸುಭಾಸ್ ಚಂದ್ರ ಬೋಸ್‍ರ ನಿಧನದಂತೆ ಚಿದಂಬರ ರಹಸ್ಯವಾಗಿಯೇ ಉಳಿದುಬಿಟ್ಟಿದೆ. ನೇತಾಜಿಯ ಸಾವಿನ ರಹಸ್ಯವನ್ನು ಬಯಲು ಮಾಡುವೆ ಎಂದು ಘೋಷಿಸಿರುವ ಸದ್ಯದ ಕೇಂದ್ರ ಸರಕಾರ ಅದೇ ಆಸ್ಥೆಯನ್ನು ಶಾಸ್ತ್ರಿಯವರ ಸಾವಿನಲ್ಲೂ ತೋರಿಸಬೇಕು. ರಷ್ಯಾ, ಪಾಕಿಸ್ತಾನ, ಅಮೆರಿಕಗಳನ್ನು ಸಂಪರ್ಕಿಸಿ ಈ ಸಾವಿನ ರಹಸ್ಯವನ್ನು ಬಯಲಿಗೆಳೆಯಬೇಕು. ಭಾರತ ಕಂಡ ಧೀಮಂತ ನಾಯಕನ ಸಾವನ್ನು ಹೀಗೆ ಕಾಲಗರ್ಭದಲ್ಲಿ ಹುದುಗಿಸಿಡುವುದು ಶಾಸ್ತ್ರೀಜಿಯವರಿಗೆ ಅಗೌರವ ತೋರಿಸಿದಂತೆ. ಶಾಸ್ತ್ರಿಯವರು ತೀರಿಕೊಂಡು ಇಂದಿಗೆ ಸರಿಯಾಗಿ ಐವತ್ತು ವರ್ಷಗಳೇ ಕಳೆದವು. ರಹಸ್ಯ ಬಯಲು ಈಗಲ್ಲವಾದರೆ ಇನ್ನು ಯಾವಾಗ, ಅಲ್ಲವೆ?
(ಶಾಸ್ತ್ರೀಜಿಯವರು ತೀರಿಕೊಂಡು ಐವತ್ತು ವರ್ಷಗಳಾದ ಸಂದರ್ಭದಲ್ಲಿ “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹ)
Facebook ಕಾಮೆಂಟ್ಸ್