X

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೭

ಅಶನ ವಶನವಷ್ಟೇ ಮನುಜ ಜೀವನದ ಗುರಿಯೆ ?
___________________________________

ಧರೆಯ ಬದುಕೇನದರ ಗುರಿಯೇನು? ಫಲವೇನು ? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು ? ಮಂಕುತಿಮ್ಮ || ೨೭ ||

ಈ ಲೌಕಿಕ ಜಗದಲ್ಲಿ ಮೊದಮೊದಲ ಅಶನವಶನದ (ಹೊಟ್ಟೆ ಬಟ್ಟೆಯ) ಹೋರಾಟದ ಹಂತವನ್ನು ದಾಟಿ ತುಸು ಸ್ವತಂತ್ರವಾಗಿ ಜೀವಿಸತೊಡಗಿದಂತೆ, ಬಹುತೇಕ ವಿಚಾರವಂತರನ್ನು ಸಾಕಷ್ಟು ಬಾರಿ ಕಾಡತೊಡಗುವ ಪ್ರಶ್ನೆಯೆಂದರೆ ‘ತಾವ್ಹೀಗೆ ಬದುಕುತ್ತಿರುವ ಜೀವನದ ಗುರಿ, ಗಮ್ಯ, ಅಂತಿಮ ಉದ್ದೇಶ ಏನಿರಬಹುದು?’ ಎಂಬುದು. ಈ ಕಗ್ಗದಲ್ಲಿ ಮಂಕುತಿಮ್ಮನನ್ನು ಕಾಡಿರುವ ಪ್ರಶ್ನೆಯೂ ಇದೇ.

ಭೂಮಿಯ ಮೇಲಿನ ಬದುಕಿನ ಕುರಿತಾದ ವೇದಾಂತಿಕ, ನಿರ್ಲಿಪ್ತ, ವೈರಾಗ್ಯಭಾವದ ಸಾರಾಂಶ ಈ ಕಗ್ಗದಲ್ಲಿ ಕಾಣುತ್ತದೆ. ಈ ಇಳೆಯ ಮೇಲಿನ ಬದುಕಿನ ಗುರಿ, ಗಮ್ಯವೇನೆಂದು ಯಾರು ಬಲ್ಲರು ? ಹೀಗ್ಹೀಗೆ ಬದುಕಬೇಕೆಂದು ರೀತಿ, ನೀತಿ, ನಿಯಮಾದಿಗಳನ್ನು ಹಾಕಿಕೊಂಡು ನಡೆಯುತ್ತಿದ್ದರೂ ಕೂಡ, ಅದು ಎಲ್ಲಿಗೆ ಹೋಗುವ ಉದ್ದೇಶದಿಂದ ಎಂಬುದು ಮಾತ್ರ ಯಾರಿಗೂ ಗೊತ್ತಿರದ ಗೊಂದಲವೆ. ಇನ್ನು ಗಮ್ಯ ತಿಳಿಯದಿದ್ದರು ಅದರ ಅಂತಿಮ ಫಲದ ಖಚಿತ ಅರಿವಾದರೂ ಇದೆಯೆ ? ಎಂದರೆ ಅಲ್ಲೂ ಅನಿಶ್ಚಿತತೆಯೆ. ಉದ್ದೇಶ, ಗಮ್ಯ, ಫಲಿತಗಳನ್ನು ಸಾರುವ ನೂರಾರು ತತ್ವ, ಸಿದ್ದಾಂತ, ಸಾರಗಳಿದ್ದರು ಅವೆಲ್ಲ ಬರಿಯ ನಂಬಿಕೆಯ ಆಧಾರದಲ್ಲಿ ಪ್ರಸ್ತುತಪಡಿಸಿದ ವಾದಗಳೆ ಹೊರತು, ಅದರ ಸತ್ಯಾಸತ್ಯತೆಯ ಖಚಿತ ಅರಿವು ಯಾರಿಗೂ ಇದ್ದಂತಿಲ್ಲ.

ಹೋಗಲಿ ಯಾವುದೊ ಒಂದನ್ನು ನಂಬಿಯಾದರೂ ಮುನ್ನಡೆಯುವ ಎನ್ನಲುಂಟೆ ? ಅದಕ್ಕೂ ಅಡ್ಡಗಾಲು ಹಾಕುವಂತೆ ಆ ತತ್ವ, ಸಿದ್ದಾಂತಗಳಲ್ಲೂ ಹಲವಾರು ಬಗೆಬಗೆ ರೀತಿ, ನೀತಿ, ವಾದ, ವಿವಾದಗಳ ತಿಕ್ಕಾಟ. ಯಾವುದೊ ಒಂದು ದಾರಿ ಹಿಡಿದು ಹೋಗಲಿಕ್ಕೆ ಬಿಡದ ಹಲವಾರು ನಂಬಿಕೆ, ಜಾತಿ, ಮತ, ಧರ್ಮ, ಶ್ರದ್ದೆಗಳು ಪ್ರಭಾವ ಬೀರುತ್ತಾ ತಾನು ಹೆಚ್ಚು, ನಾನು ಹೆಚ್ಚು ಎಂದು ಬಡಿದಾಟಕ್ಕೆ ನಿಲ್ಲುತ್ತವೆ. ಹೀಗೆ ಆ ದಾರಿ ಹಿಡಿದು ನಡೆದರು ಬರಿ ಭ್ರಮ ನಿರಸನ, ನೇರವಲ್ಲದ ಪರೋಕ್ಷ ದಾರಿಯ ಸುತ್ತಾಟ, ಕೊನೆಗೆ ಸುತ್ತಿದುದರ ಸುತ್ತಲೆ ಮತ್ತೆ ಮತ್ತೆ ಸುತ್ತಿ ಪರಿಭ್ರಮಿಸುವ ಹಣೆ ಬರಹ.

ಈ ಎರಡನೇ ಸಾಲಿನಲ್ಲಿರುವ ‘ಬರಿ ಬಳಸು ಬಡಿದಾಟ’ ಪ್ರಯೋಗ ನಿಜಕ್ಕೂ ಚಿಂತನೆಗೆ ಹಚ್ಚುವಂತದ್ದು. ಕೆಲವೊಮ್ಮೆ ಗಮ್ಯ ಸರಳವಿರುವಂತೆ ಕಂಡರೂ ಅದನ್ನು ತಲುಪುವ ಹಾದಿ ಮಾತ್ರ ಯಾಕೆ ಬರಿ ಬಳಸು ದಾರಿಯಂತೆ ಕಾಣುತ್ತದೆ ? ಹೋಗಲಿ ಬಳಸಿಕೊಂಡಾದರು ಹೋಗೋಣವೆಂದರೆ ಅಲ್ಲಿಯೂ ಆರಾಮವಿಲ್ಲ; ಏನೇನೋ ಹೊಡೆದಾಟ, ಬಡಿದಾಟಗಳ ನಡುವೆ ಸಾಗಬೇಕಾದ ಒತ್ತಡ, ಅನಿವಾರ್ಯ ಗುರಿಯತ್ತ ಕರೆದೊಯ್ಯದೆ ದಿಕ್ಕು ತಪ್ಪಿಸುವ ಸಾಧ್ಯತೆಯೇ ಹೆಚ್ಚು. ಯಾಕ್ಹೀಗೆ ಅಲೆದಾಡಿಸುವ ಪ್ರವೃತ್ತಿ ವಿಧಿಯಾಟಕ್ಕೆ ? ಎನ್ನುವ ಪ್ರಶ್ನೆ ಇಲ್ಲಿನ ಅಂತರ್ಗತ ಭಾವ

ಇದೆಲ್ಲಾ ನೋಡಿ ತುಲನೆಗಿಳಿದರೆ, ಕೇವಲ ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಬೇಟೆಗಿಳಿದು ಸಿಕ್ಕಿದ್ದನ್ನು ಕಬಳಿಸಿ ಹೊಟ್ಟೆ ಹೊರೆದುಕೊಳ್ಳುವ ಪ್ರಾಣಿ ಪಕ್ಷಿಗಳಿಗು, ನಮಗೂ ಅಂತಿಮ ಸಾಧನೆಯ ಮಾನದಂಡದಲ್ಲಿ ಇರುವ ವ್ಯತ್ಯಾಸವಾದರೂ ಏನು ? ಅವು ಕೂಡ ಗೊತ್ತು, ಗುರಿಯಿಲ್ಲದೆ ಉಂಡಲೆದಾಡಿ ಕೊನೆಗೊಮ್ಮೆ ‘ಶಿವಾಯ ನಮಃ’ ಎನ್ನುತ್ತವೆ – ಸಾವೆಂಬ ಅಂತಿಮದಲ್ಲಿ. ಇರುವತನಕ ಏನೇನೊ ಬಡಿದಾಡಿ ಹಾರಾಡುವ ಮನುಜ ಜನ್ಮದ ಕತೆಯೂ ಅಷ್ಟೆ – ಆ ಪ್ರಾಣಿಪಕ್ಷಿಗಳಿಗಿಂತ ಹೆಚ್ಚೇನು ಸಾಧಿಸನು. ಅಂದ ಮೇಲೆ ನರ ಜನ್ಮವೆ ಮಿಕ್ಕೆಲ್ಲದಕ್ಕಿಂತ ಶ್ರೇಷ್ಠ, ಉತ್ತಮ ಎಂದು ಬೀಗುತ್ತಾ, ಅಹಂಕಾರ ಪಡುವುದರಲ್ಲಿ ಅರ್ಥವಿದೆಯೆ ?

ಹೀಗೆ ಹೋಲಿಕೆಯಲ್ಲಿ ಯಕಃಶ್ಚಿತ್ ಪಶುಪ್ರಾಣಿಗಳಿಗೂ , ಉಚ್ಚಶ್ರೇಣಿಯ ಜೀವಿಗಳೆಂದು ಗರ್ವಿಸುವ ನಮಗೂ ಅಗಾಧ ಅಂತರವೇನು ಇಲ್ಲವೆಂದಾಗಿಬಿಟ್ಟರೆ ನಮ್ಮದೇನು ಮಹಾ ಹೆಚ್ಚುಗಾರಿಕೆಯಿಲ್ಲಿ ? ಎಂಬ ಪ್ರಶ್ನೆ ಮೂಡಿ ಬರುವುದು ಸಹಜ. ನಾವು ಅವುಗಳ ಹಾಗೆ ಬದುಕಿ ಕಾಲ ಬಂದಾಗ ಹೋಗುವುದು ಸುಲಭದ ದಾರಿಯಲ್ಲವೇ? ಆದರೆ ಇಲ್ಲಿ ಎತ್ತಿರುವ ಪ್ರಶ್ನೆಯ ಇಂಗಿತ ಭಾವ ಬರಿ ಹೋಲಿಕೆಗೆ ಮಾತ್ರವಲ್ಲ. ಈ ಹೋಲಿಕೆಯ ಮೂಲಕ ಮನುಜ ಜನ್ಮದ್ದೇನೊ ಬೇರೆಯದೆ ಉದ್ದೇಶ, ಗಮ್ಯ ಇರುವುದನ್ನು ಅರುಹುವ, ಎತ್ತಿ ತೋರಿಸುವ ಆಶಯ.

ಆ ವ್ಯತ್ಯಾಸದ ಅರಿವು ನಾವು ಬೇರೆಯದೆ ರೀತಿಯಲ್ಲಿ ನಡೆಯಬೇಕೆಂಬ ಇಚ್ಛೆಗೆ ಇಂಬುಕೊಡುವಂತಾಗಬೇಕು. ಆ ದಿಸೆಯಲ್ಲಿ ನಡೆಯಬೇಕೆನ್ನುವ ಆಸೆ, ಉತ್ಸಾಹ, ಛಲ ಮೂಡಿಸಬೇಕು. ಹಾಗೆ ಕ್ರಮಿಸುವ ಪಥದಲ್ಲಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುವಂತೆ ನಮ್ಮದೇ ಛಾಪು ಮೂಡಿಸಬೇಕೆನ್ನುವ ಮಹದಾಶಯ. ಆದರೆ ಅದೆಲ್ಲ ಸಾಧನೆಗೆ ಅಡ್ಡಿಯಾಗುವ ಅಹಮಿಕೆ, ಗರ್ವ, ಸ್ವಾರ್ಥಾದಿ ಕ್ರಿಮಿಕೀಟಗಳಿಗೆ ಅವಕಾಶ ಕೊಡದ ವಿನಯ, ಸನ್ನಡತೆಯು ಜತೆಯಲ್ಲಿರಬೇಕು. ಇದಾವುದೂ ಒಗ್ಗೂಡದ ರೀತಿಯಲ್ಲಿ ಬದುಕು ನಡೆಸಿದರೆ ನಮಗೂ ಪಶುಪ್ರಾಣಿಗಳಿಗೂ ಯಾವ ಅಂತರವು ಇರದೆನ್ನುವ ತಿಳುವಳಿಕೆಯ ವಿನಮ್ರತೆಯಲ್ಲಿ ಬಾಳು ಸಾಗಿಸಿ ಈ ಜೀವನ ಯಾತ್ರೆ ಮುಗಿಸುವುದೊಳಿತು – ಎನ್ನುವ ನೀತಿ ಪಾಠ ಇಲ್ಲಿನ ಆಂತರ್ಯದಲ್ಲಿ ಅಡಗಿದೆ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post