ಈ ಜಗತ್ತು ಸೃಷ್ಟಿಯಾಗಿ ಸುಮಾರು 13.8 ಬಿಲಿಯನ್ ವರ್ಷಗಳು ಕಳೆದಿವೆ. ನಮ್ಮ ಸೌರಮಂಡಲ ಸೃಷ್ಟಿಯಾಗಿ ಸುಮಾರು 4.6 ಬಿಲಿಯನ್ ವರ್ಷಗಳಾಗಿವೆ. ನಮಗೆ ನಮ್ಮ ಸೌರಮಂಡಲದ ಸದಸ್ಯರುಗಳ ಬಗ್ಗೆ ಒಂದಷ್ಟು ತಿಳಿದಿದೆ. ಆದರೆ ನಮ್ಮ ಸೌರಮಂಡಲದಂತೆ ಅದೆಷ್ಟು ಬೇರೆ ಸೌರಮಂಡಲಗಳಿವೆ ಅನ್ನುವ ವಿಷಯ ಸರಿಯಾಗಿ ತಿಳಿದಿಲ್ಲ. ತಾನೇ ಬುದ್ಧಿ ಜೀವಿ ಎಂದು ತಿಳಿದಿರುವ ಮಾನವನಿಗೆ ಬೇರೇ ಗ್ರಹದಲ್ಲಿ ತನಗಿಂತ ಬುದ್ಧಿವಂತ ಜೀವಿಗಳಿರುವ ಮಾಹಿತಿ ಇದೆಯೇ ಹೊರತು ಇನ್ನೂ ಅವುಗಳ ಜೊತೆ ಜಿದ್ದಾ ಜಿದ್ದಿ ನಡೆದಿಲ್ಲ. ಈ ಸೃಷ್ಟಿಯ ರಹಸ್ಯವನ್ನು ಸಂಪೂರ್ಣವಾಗಿ ಅರಿಯಲು ಮನುಷ್ಯನ ಜೀವಮಾನದಲ್ಲಿ ಸಾಧ್ಯವಿಲ್ಲ. ನಮ್ಮ ಸೌರಮಂಡಲದ ಸೃಷ್ಟಿಯೇ ಒಂದು ಅದ್ಭುತ. ನಮ್ಮ ಸೌರಮಂಡಲದ ಎಂಟೂ ಗ್ರಹಗಳೂ ವಿಭಿನ್ನವಾಗಿವೆ(9ನೇ ಗ್ರಹ ಎಂದು ಕರೆಯಲ್ಪಡುವ ಪ್ಲೂಟೊ ಗ್ರಹವಲ್ಲ). ಅವುಗಳ ರಚನೆ, ಗುಣ ಲಕ್ಷಣಗಳು ಹಾಗೂ ಸೂರ್ಯನ ಸುತ್ತ ಹಾಗೂ ತನ್ನ ಸುತ್ತ ಗಿರಕಿ ಹೊಡೆಯಲು ತೆಗೆದುಕೊಳ್ಳುವ ಸಮಯ ಎಲ್ಲದರಲ್ಲೂ ತನ್ನದೇ ಆದ ರೀತಿ ನೀತಿ. ನಾವು ನೆಲೆಸಿರುವ ಗ್ರಹ ಭೂಮಿ, ಎಂದು ನಮಗೆ ಚೆನ್ನಾಗಿ ತಿಳಿದಿದೆ. ಭೂಮಿಯನ್ನು ಹೊರತುಪಡಿಸಿ ಉಳಿದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳೂ ಸಹ ನಮ್ಮ ಸೌರಮಂಡಲದ ಸದಸ್ಯರುಗಳು. ಈ ಗ್ರಹಗಳ ಜೊತೆ ಹೇಗೆ ಭೂಮಿಗೆ ಚಂದ್ರನಿದ್ದಾನೋ ಹಾಗೆ ಕೆಲವೊಂದು ಗ್ರಹಗಳಿಗೆ ಚಂದ್ರನಂತಹ ಹಲವಾರು ಉಪಗ್ರಹಗಳಿವೆ. ಬುಧ ಹಾಗೂ ಶುಕ್ರ ಗ್ರಹಗಳನ್ನು ಹೊರತುಪಡಿಸಿ ಬೇರೆ ಗ್ರಹಗಳಿಗೆ ಉಪಗ್ರಹಗಳಿವೆ.
ನಮ್ಮ ಸೌರಮಂಡಲದ ಅತೀ ದೊಡ್ಡ ಗ್ರಹ ಗುರು ಗ್ರಹ. ನಾವು ಭಾರತೀಯರು ಗುರು ಗ್ರಹವನ್ನು ಬೃಹಸ್ಪತಿ ಎಂದೇ ಕರೆಯುತ್ತೇವೆ. ರೋಮನ್ ಪುರಾಣದಲ್ಲಿ ಗುರುವನ್ನು ದೇವತೆಗಳ ರಾಜ ಎಂದೇ ಕರೆಯಲಾಗುತ್ತದೆ. ಗುರು ಗ್ರಹ ನಾವು ಈ ಬ್ರಹ್ಮಾಂಡವನ್ನು ವೀಕ್ಷಿಸುವ ಹಾಗೂ ಗಮನಿಸುವ ರೀತಿಗೆ ಹೊಸ ಪರಿಕಲ್ಪನೆ ಕೊಟ್ಟ ಗ್ರಹ. 1610ರಲ್ಲಿ ಗೆಲಿಲಿಯೋ ಗೆಲಿಲಿ ತನ್ನ ದೂರದರ್ಶಕದ ಮೂಲಕ ಗುರು ಗ್ರಹದ ನಾಲ್ಕು ಉಪಗ್ರಹಗಗಳನ್ನು (Moons) ಅನ್ವೇಷಿಸಿದ್ದಾನೆ. ಈ ಉಪಗ್ರಹಗಳನ್ನು ಗೆಲಿಲಿಯನ್ ಮೂನ್ಸ್(Galilean Moons) ಎಂದೇ ಕರೆಯಲಾಗುತ್ತದೆ. ಈ ಅನ್ವೇಷಣೆಯಿಂದಾಗಿ ಹಲವಾರು ಕ್ಲಿಷ್ಟಕರ ಸಮಸ್ಯೆಗಳಿಗೆ ಹಾಗೂ ಗೊಂದಲಗಳಿಗೆ ಉತ್ತರ ದೊರೆತಿದೆ. ಈ ಅನ್ವೇಷಣೆಯ ಮೂಲಕ ತಿಳಿದ ಮುಖ್ಯ ವಿಷಯವೆಂದರೆ ಬರೀ ಭೂಮಿಯ ಸುತ್ತ ಅಷ್ಟೇ ಅಲ್ಲ, ಬೇರೇ ಗ್ರಹಗಳ ಸುತ್ತಲೂ ಉಪಗ್ರಹಗಳು ಗಿರಕಿ ಹೊಡೆಯುತ್ತಿವೆ ಎಂದು. ಹಾಗೂ ಕೊಪರ್ನಿಕಸ್’ನ ಸೂರ್ಯ ಕೇಂದ್ರಿತ ಮಾದರಿಗೆ(ಸೂರ್ಯ ಮಧ್ಯದಲ್ಲಿದ್ದಾನೆ ಹಾಗೂ ಸೂರ್ಯನ ಸುತ್ತ ಎಲ್ಲಾ ಗ್ರಹಗಳು ಸುತ್ತುತ್ತಿವೆ ಎಂಬ ಮಾದರಿಯೇ ಸೂರ್ಯ ಕೇಂದ್ರಿತ ಮಾದರಿ(HelioCentric Model)) ದೊರೆತ ಬಹು ಮುಖ್ಯವಾದ ಪುರಾವೆ. ಈ ಹೊಸ ಅನ್ವೇಷಣೆ ನಡೆಯುವ ತನಕವೂ ಭೂಕೇಂದ್ರಿತ ಮಾದರಿಯನ್ನೇ(GeoCentric Model) ಸರಿ ಎಂದು ನಂಬಲಾಗಿತ್ತು. ಅಂದರೆ ಭೂಮಿ ಮಧ್ಯದಲ್ಲಿದೆ ಹಾಗೂ ಅದರ ಸುತ್ತ ಸೂರ್ಯನೂ ಸೇರಿದಂತೆ ಎಲ್ಲಾ ಗ್ರಹಗಳು ಹಾಗೂ ಆಕಾಶಕಾಯಗಳು ಭೂಮಿಯ ಸುತ್ತ ಸುತ್ತುತ್ತಿವೆ ಎಂದು.
ಗುರು ನಮ್ಮ ಸೌರಮಂಡಲದ ದೈತ್ಯ ಗ್ರಹ. ನಮ್ಮ ಸೌರಮಂಡಲದ ಉಳಿದ ಎಲ್ಲಾ ಗ್ರಹಗಳನ್ನು ಸೇರಿಸಿದರೂ ಅದು ಗುರು ಗ್ರಹದ ಅರ್ಧದಷ್ಟು ಭಾಗವನ್ನು ತುಂಬುತ್ತದೆ ಅಷ್ಟೇ. ಕಲ್ಪಿಸಿಕೊಳ್ಳಿ ಹಾಗಾದರೆ ಅದೆಂತಾ ದೈತ್ಯನಿರಬಹುದು ಈ ಬೃಹಸ್ಪತಿ ಗುರು ಗ್ರಹ. ಭೂಮಿಯೇ ಬಹಳ ದೊಡ್ಡದು ಎಂದು ತಿಳಿದಿರುವ ಬಾವಿಯೊಳಗಿನ ಕಪ್ಪೆ ಮನುಷ್ಯನಿಗೆ ಗುರು ಗ್ರಹದ ಮುಂದೆ ಭೂಮಿ ಏನೇನೂ ಅಲ್ಲಾ ಎಂಬ ವಿಷಯವನ್ನು ಬಹುಶಃ ನಂಬಲು ಅಸಾಧ್ಯವಾದರೂ ಇದು ಸತ್ಯ. ಗುರು ಒಂದು ನಕ್ಷತ್ರವಾಗಬೇಕಿತ್ತು. ಆದರೆ ಗ್ರಹವಾಗಿ ನಮ್ಮ ಸೌರಮಂಡಲದಲ್ಲಿ ಗಿರಕಿ ಹೊಡೆಯುತ್ತಿದೆ. ಯಾಕೆಂದರೆ ಗುರು ಗ್ರಹದ ಮೇಲ್ಮೈ ವಾತಾವರಣ ಸೂರ್ಯನ ಮೇಲ್ಮೈ ವಾತಾವರಣವನ್ನೇ ಹೋಲುತ್ತದೆ. ಗುರು ಗ್ರಹ 90% ಹೈಡ್ರೋಜನ್ ಹಾಗೂ 10% ಹೀಲಿಯಂ ಅನಿಲವನ್ನು ಹೊಂದಿದೆ. ಗುರು ಗ್ರಹ ಒಂದು ರೀತಿಯ ಅನಿಲ ದೈತ್ಯ(Gas Giant). ಗುರು ಗ್ರಹದ ವಾತಾವರಣದಲ್ಲಿ ಹೈಡ್ರೋಜನ್ ಅನಿಲವೇ ಅಧಿಕವಾಗಿದೆ, ಜೊತೆಗೆ ಹೀಲಿಯಂ, ಮೀಥೇನ್, ಅಮೋನಿಯಾ, ಹೈಡ್ರೋಜನ್ ಸಲ್ಫೈಡ್ ಹಾಗೂ ನೀರು ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಗುರು ಗ್ರಹದ ವಾತಾವರಣ ಸದಾ ಗುಡುಗು, ಸಿಡಿಲು ಹಾಗೂ ಚಂಡಮಾರುತಗಳಿಂದಲೇ ಆವರಿಸಿರುತ್ತದೆ. ಗುರು ಗ್ರಹಕ್ಕೆ ನಾಲ್ಕು ದೊಡ್ಡ ಉಪಗ್ರಹಗಳು ಹಾಗೂ ಒಂದಷ್ಟು ಸಣ್ಣ ಸಣ್ಣ ಉಪಗ್ರಹಗಳಿವೆ. ಗುರು ಗ್ರಹ ಒಂದು ರೀತಿಯಲ್ಲಿ ಸೌರಮಂಡಲದಂತಹ ರಚನೆಯನ್ನೇ ಹೋಲುತ್ತದೆ. ಅಂದಾಜು ಸುಮಾರು 1300 ಕ್ಕೂ ಹೆಚ್ಚು ಭೂಮಿಗಳನ್ನು(1300 Earths = Jupiter) ಗುರು ಗ್ರಹ ತನ್ನೋಳಗೆ ತುಂಬಿಸಿಕೊಳ್ಳುವಷ್ಟು ದೊಡ್ಡದು.
ಗುರು ಗ್ರಹದ ಬಹು ಮುಖ್ಯವಾದ ವೈಶಿಷ್ಟ್ಯವೆಂದರೆ ಅದುವೆ ಬೃಹತ್ ಕೆಂಪು ಚುಕ್ಕೆ(Great Red Spot). ಇದು ಗುರು ಗ್ರಹದ ಮೇಲಿರುವ ಒಂದು ರೀತಿಯ ಬೃಹತ್ ಚಂಡಮಾರುತ. ಈ ಬೃಹತ್ ಕೆಂಪು ಚುಕ್ಕೆ ಸುಮಾರು 300 ವರ್ಷಗಳಿಂದ ಕಂಡು ಬರುತ್ತಿದೆ. ನಂಬಲಸಾಧ್ಯವಾದ ಸಂಗತಿಯೆಂದರೆ ಈ ಕೆಂಪು ಚುಕ್ಕೆಯ ವ್ಯಾಸ(Diameter) ಭೂಮಿಯ ವ್ಯಾಸಕ್ಕಿಂತ(Diameter) ಮೂರು ಪಟ್ಟು ದೊಡ್ಡದು. ಈ ಬೃಹತ್ ಕೆಂಪು ಚುಕ್ಕೆ ಗಂಟೆಗೆ 360 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿಯಂತೆ ಸುರುಳಿಯನ್ನು ಸುತ್ತುತ್ತಿದೆ. ಈ ಚಂಡಮಾರುತದ ಬಣ್ಣ ಇಟ್ಟಿಗೆ ಕೆಂಪು ಅಥವಾ ಕಡು ಕಂದು ಬಣ್ಣವನ್ನು ಹೊಂದಿದೆ. ಈ ಬೃಹತ್ ಕೆಂಪು ಚುಕ್ಕೆಯನ್ನು ದೂರದರ್ಶಕದ ಮೂಲಕ ನೋಡಬಹುದು.
ನಮ್ಮ ಸೌರಮಂಡಲದಲ್ಲಿ ಅತೀ ಹೆಚ್ಚು ಬಲವಾದ ಗುರುತ್ವಾಕರ್ಷಣೆಯನ್ನು ಹೊಂದಿರುವ ಗ್ರಹ ಗುರು ಗ್ರಹ. ಗುರು ಗ್ರಹದ ಗುರುತ್ವಾಕರ್ಷಣೆ ಭೂಮಿಯ ಗುರುತ್ವಾಕರ್ಷಣೆಗಿಂತ 2.5ರಷ್ಟು ಹೆಚ್ಚು. ಗುರು ಗ್ರಹ ಸೌರಮಂಡಲದ ಒಳಗೆ ನುಸುಳಿ ಬರುವ ಆಕಾಶ ಕಾಯಗಳನ್ನು ಹಾಗೂ ಚಿಕ್ಕ ಚಿಕ್ಕ ಉಪಗ್ರಹಗಳನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಹಾಗೂ ಗುರು ಗ್ರಹದ ಬೃಹತ್ ಪ್ರಮಾಣದ ಗುರುತ್ವದಿಂದಾಗಿ ಗುರು ಗ್ರಹದತ್ತ ನುಸುಳಿ ಬರುವ ಆಕಾಶಕಾಯಗಳು ಚೂರು ಚೂರಾಗಿ ಹೋಗುತ್ತದೆ. ಇದರಿಂದಾಗಿ ನಮ್ಮ ಭೂಮಗೆ ಗುರು ಗ್ರಹ ಒಂದು ರೀತಿಯ ರಕ್ಷಣೆಯನ್ನು ನೀಡುತ್ತಿದೆ. ಒಂದು ವೇಳೆ ಗುರು ಗ್ರಹಕ್ಕೆ ಈ ಪ್ರಮಾಣದ ಗುರುತ್ವಾಕರ್ಷಣೆ ಇಲ್ಲದೇ ಇದ್ದಲ್ಲಿ ನಮ್ಮ ಭೂಮಿಯ ಮೇಲೆ ಅದೆಷ್ಟು ಆಕಾಶ ಕಾಯಗಳು ಧಾಳಿ ಮಾಡಿರುತ್ತಿದ್ದವೋ. ಮನುಷ್ಯ ಭೂಮಿಯಿಂದ ಮಾಯವಾಗದೆ ಇನ್ನೂ ಉಳಿದುಕೊಂಡಿದ್ದಾನೆ ಎಂದರೆ ಅದಕ್ಕೆ ಕಾರಣ ಗುರು ಗ್ರಹದ ಗುರುತ್ವಾಕರ್ಷಣೆ. ಗುರು ಗ್ರಹ ತನ್ನ ಸುತ್ತ ಅತ್ಯಂತ ವೇಗದಲ್ಲಿ ಸುತ್ತುತ್ತಿದೆ. ಅದು ತನ್ನ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಸಮಯ 9 ಗಂಟೆ 56 ನಿಮಿಷಗಳು.
ನಮಗೆಲ್ಲಾ ತಿಳಿದಿದೆ ಭೂಮಿ ತನ್ನ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಸಮಯ 24 ಗಂಟೆಗಳು. ಅಂದರೆ ಗುರುಗ್ರಹದಲ್ಲಿ ಒಂದು ದಿನದ ಸಮಯ 9 ಗಂಟೆ 56 ನಿಮಿಷಗಳು. ಭೂಮಿಗಿಂತ ಗಾತ್ರದಲ್ಲಿ ಸಾವಿರ ಪಟ್ಟು ದೊಡ್ಡದಾಗಿರುವ ಗುರು ತನ್ನ ಸುತ್ತ ಗಿರಕಿ ಹೊಡೆಯಲು ತೆಗೆದು ಕೊಳ್ಳುವ ಕಾಲ ಭೂಮಿ ತೆಗೆದುಕೊಳ್ಳುವುದಕ್ಕಿಂತಲೂ ಕಡಿಮೆ. ನಮ್ಮಲ್ಲಿ 24 ಗಂಟೆಗಳು ಕಳೆದರೆ ಒಂದು ದಿನ ಮುಗಿದಂತೆ. ಆದರೆ ಗುರು ಗ್ರಹದಲ್ಲಿ 9 ಗಂಟೆ 56 ನಿಮಿಷಗಳು ಕಳೆದರೆ ಒಂದು ದಿನ ಮುಗಿದಂತೆ. ಗುರು ಗ್ರಹದಲ್ಲಿ ಒಂದು ವರ್ಷಕ್ಕೆ ಎಷ್ಟು ದಿನಗಳು ಗೊತ್ತೇ, ಬರೋಬ್ಬರಿ ಸುಮಾರು 4,300 ಭೂದಿನಗಳು. ಅಂದರೆ ಗುರು ಗ್ರಹ ಸೂರ್ಯನನ್ನು ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಕಾಲ 11.8 ಭೂ ವರ್ಷಗಳು(Earth Years). ಅತ್ಯಂತ ವೇಗದಲ್ಲಿ ಗುರು ತನ್ನ ಸುತ್ತ ತಿರುಗುತ್ತಿರುವುದರಿಂದ ಗುರು ಗ್ರಹದ ಭೂಮಧ್ಯ (Equator) ಉಬ್ಬಾಗಿದೆ ಹಾಗೂ ಧ್ರುವಗಳು(Poles) ಸಮತಟ್ಟಾಗಿವೆ.
ಗುರು ಗ್ರಹ ಅಂದಾಜು 63 ಉಪಗ್ರಹಗಳನ್ನು(Moons) ಹೊಂದಿದೆ. ಈ ಉಪಗ್ರಹಗಳಿಗೆ ರೋಮನ್ ದೇವರ ಹೆಸರುಗಳನ್ನು ಇಡಲಾಗಿದೆ. ಗುರು ಗ್ರಹದ ನಾಲ್ಕು ದೊಡ್ಡ ಉಪಗ್ರಹಗಳೆಂದರೆ ಐಯೋ(Io), ಯುರೋಪಾ(Europa), ಗೈನಿಮೀಡ್(Ganymede) ಹಾಗೂ ಕ್ಯಾಲಿಸ್ಟೋ(Callisto). ಈ ನಾಲ್ಕೂ ಉಪಗ್ರಹಗಳನ್ನು ಪತ್ತೆ ಹಚ್ಚಿದ್ದು ಗೆಲಿಲಿಯೋ ಗೆಲಿಲಿ. ಗೈನಿಮೀಡ್ ನಮ್ಮ ಸೌರಮಂಡಲ ಅತ್ಯಂತ ದೊಡ್ಡ ಉಪಗ್ರಹ. ಈ ಉಪಗ್ರಹ ಬುಧ ಗ್ರಹ ಹಾಗೂ ಪ್ಲೂಟೊಗಿಂತಲೂ ದೊಡ್ಡದು. ಹಾಗೂ ಆಯಸ್ಕಾಂತೀಯ ಶಕ್ತಿಯನ್ನು ಹೊಂದಿರುವ ಏಕೈಕ ಉಪಗ್ರಹ. ಗುರು ಗ್ರಹದ ಮೂರು ರಿಂಗ್’ಗಳನ್ನು ಪತ್ತೆ ಹಚ್ಚಿದ್ದು ನಾಸಾದ ವಾಯೇಜರ್ 1 ವ್ಯೋಮನೌಕೆ, 1979ರಲ್ಲಿ. ಈ ಮೂರೂ ರಿಂಗ್’ಗಳು ಬಹಳ ಅಸ್ಪಷ್ಟವಾಗಿದೆ. ಈ ಗುರು ಗ್ರಹದ ರಿಂಗ್’ಗಳನ್ನು ಪತ್ತೆ ಹಚ್ಚುವುದಕ್ಕಿಂತ ಮುಂಚೆ, ಬರೀ ಶನಿ ಹಾಗೂ ಯುರೇನಸ್ ಗ್ರಹಗಳಿಗೆ ಮಾತ್ರ ರಿಂಗ್ ಇದೆ ಎಂದು ನಂಬಲಾಗಿತ್ತು.
ಸೂರ್ಯನನ್ನು ಬಿಟ್ಟರೆ ನಮ್ಮ ಸೌರಮಂಡಲದ ಎರಡನೇ ದೈತ್ಯ ಗುರು ಗ್ರಹದ ಬೃಹತ್ ಪ್ರಮಾಣದ ಗುರುತ್ವಾಕರ್ಷಣೆ ನಮ್ಮ ಸೌರಮಂಡಲ ರೂಪವನ್ನು ಸರಿಯಾದ ರೀತಿಯಲ್ಲಿ ಹಿಡಿದಿಟ್ಟಿದೆ. ಗುರು ಗ್ರಹದ ಗುರುತ್ವ ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಹೊರ ಕಕ್ಷೆಗೆ ತಳ್ಳಿದೆ. ಗ್ರಹದ ಗುಣಲಕ್ಷಣಗಳು ಅದೇನೇ ಇರಲಿ, ಮನುಷ್ಯ ಅಥವಾ ಯಾವುದೇ ಜೀವಿಗಳಿಗೆ ಗುರು ಗ್ರಹದಲ್ಲಿ ಬದುಕಲು ಸಾಧ್ಯವಿದೆಯೇ ? ಗುರು ಗ್ರಹ ಪ್ರಮುಖವಾಗಿ ಒಂದು ಅನಿಲ ದೈತ್ಯ(Gas Giant). ಗುರು ಗ್ರಹದಲ್ಲಿ ಯಾವುದೇ ರೀತಿಯ ಜಲ ಮೂಲವಿಲ್ಲ. ಹಾಗಾಗಿ ಯಾವುದೇ ಜೀವಿಗಳಿಗೆ ಗುರು ಗ್ರಹದ ಮೇಲೆ ಬದುಕಲು ಸಾಧ್ಯವಿಲ್ಲ. ಆದರೆ ಗುರು ಗ್ರಹದ ಉಪಗ್ರಹ ಯುರೋಪದ ಮೇಲೆ ಮನುಷ್ಯ ಬದುಕಲು ಅಥವಾ ಜೀವಸಂಕುಲದ ಇರುವಿಕೆ ಸಾಧ್ಯವಿದೆ ಎಂಬ ಪ್ರಸ್ತಾವನೆ ಇದೆ. ಯುರೋಪಿನ ಮೇಲೆ ನೀರು ಮಂಜುಗಡ್ಡೆಯ ರೀತಿಯಲ್ಲಿದೆ. ಹಾಗಾಗಿ ಜೀವಿಸಲು ಸಾಧ್ಯವಿರಬಹುದೆಂಬ ಚರ್ಚೆಗಳು ಹಾಗೂ ಊಹಾಪೋಹಗಳು ನಡೆದಿವೆ.
ಗುರು ಗ್ರಹವನ್ನು ನಾವು ಬರಿಗಣ್ಣಿನಿಂದ ನೋಡಲು ಸಾಧ್ಯ. ಗುರು ಗ್ರಹದ ಜೊತೆಗೆ ಶುಕ್ರ, ಬುಧ, ಶನಿ ಹಾಗೂ ಮಂಗಳ ಗ್ರಹಗಳನ್ನು ನಾವು ಆಕಾಶದಲ್ಲಿ ಗುರುತಿಸಬಹುದು. ಹಾಗಾದರೆ ಹೇಗೆ ? ಎಲ್ಲಿ ? ಹಾಗೂ ಯಾವ ಸಮಯದಲ್ಲಿ ? ಈ ಎಲ್ಲಾ ಗ್ರಹಗಳು ಒಂದೇ ಸಮಯದಲ್ಲಿ ಕಾಣುವುದಿಲ್ಲ. ಕೆಲವೊಂದು ಗ್ರಹಗಳು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಅಂದರೆ ಬೆಳಗಿನ ಜಾವದಲ್ಲಿ ಚೆನ್ನಾಗಿ ಕಂಡರೆ ಕೆಲವೊಂದು ಗ್ರಹಗಳು ತಡ ರಾತ್ರಿಯಲ್ಲಿ ಹಾಗೂ ಸೂರ್ಯ ಮುಳುಗಿ ಕತ್ತಲಾದ ಮೇಲೆ ಕೆಲವೇ ಕೆಲವು ಸಮಯದಲ್ಲಿ ಕಂಡು ಬರುತ್ತವೆ. ನಿಮಗೆ ಒಂದು ಸಣ್ಣ ಉಪಯುಕ್ತವಾದ ಮಾಹಿತಿ ನೀಡುವುದಾದರೆ, ಪ್ರತೀ ದಿನ ಸೂರ್ಯ ಹುಟ್ಟಿ ಮುಳುಗುವ ತನಕ ಯಾವ ಸಾಲಿನಲ್ಲಿ ಸಾಗುತ್ತಾನೆ ಎಂದು ಗಮನಿಸಿ. ಇದು ಪೂರ್ವದಿಂದ ಪಶ್ಚಿಮಕ್ಕೆ ಎಳೆದ ಒಂದು ಗೆರೆಯ ರೀತಿ. ಹೆಚ್ಚು ಕಮ್ಮಿ ಚಂದ್ರನೂ ಇದೇ ಗೆರೆಯನ್ನು ಅನುಸರಿಸುತ್ತಾನೆ. ಸ್ವಲ್ಪ ಬದಲಾವಣೆ ಇರಬಹುದು. ಗುರು, ಶುಕ್ರ, ಶನಿ, ಬುಧ ಹಾಗೂ ಮಂಗಳ ಗ್ರಹಗಳೂ ಈ ಹಾದಿಯಲ್ಲೆ ಹುಟ್ಟಿ ಮುಳುಗುತ್ತವೆ. ಹೆಚ್ಚೆಂದರೆ 10 ರಿಂದ 20 ಡಿಗ್ರಿ ವ್ಯತ್ಯಾಸವಿರಬಹುದು. ಇನ್ನೂ ನಿಮಗೆ ಇದು ಅರ್ಥವಾಗಿಲ್ಲವಾದರೆ ಚಿಂತಿಸಬೇಡಿ. ತಂತ್ರಜ್ಞಾನ ಬಹಳಾ ಮುಂದುವರೆದಿದೆ. ನಿಮ್ಮ ಕೈಯಲ್ಲಿ ಸ್ಮಾರ್ಟ್’ಫೋನ್ ಇದ್ದರೆ ಗೂಗಲ್ ಪ್ಲೇ ಸ್ಟೋರ್’ನಲ್ಲಿ ಹಲವಾರು ಅಪ್ಲಿಕೇಷನ್’ಗಳು ಲಭ್ಯವಿದೆ. ಅವುಗಳಲ್ಲಿ ಕೆಲ ಪ್ರಮುಖ ಅಪ್ಲಿಕೇಶನ್’ಗಳನ್ನು ಕೆಳಗೆ ಪಟ್ಟಿ ಮಾಡಿದ್ದೇನೆ. ಈ ಎಲ್ಲಾ ಅಪ್ಲಿಕೇಶನ್’ಗಳು ನಿಮಗೆ ಗ್ರಹಗಳನ್ನು, ನಕ್ಷತ್ರಗಳನ್ನು, ರಾಶಿಗಳನ್ನು ಹಾಗೂ ಇನ್ನಿತರ ಆಕಾಶಕಾಯಗಳನ್ನು ನೋಡಲು ಮಾರ್ಗದರ್ಶನ ನೀಡುತ್ತವೆ. ನೆನಪಿರಲಿ ರಾತ್ರಿ ವೇಳೆಯಲ್ಲಿ ಹಗಲಿನಲ್ಲಿ ಅಲ್ಲ.
ಕೆಳಗೆ ಪಟ್ಟಿಮಾಡಿರುವ ಅಪ್ಲಿಕೇಶನ್’ಗಳು ಆಕಾಶಕಾಯಗಳನ್ನು ವೀಕ್ಷಿಸಲು ಸಹಾಯಕಾರಿಯಾಗಿವೆ.
1. Star Chart
2. Sky Map
3. Solar System Scope
4. Night Sky Lite
5. Sky View Free
6. GoSkyWatch Planetarium
7. ISS Detector
Facebook ಕಾಮೆಂಟ್ಸ್