ರಾಘವ್ ಹೆಗಡೆಯವರು ಮಾಡಿರುವ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರತಾಪ್ ಸಿಂಹರು ಇತ್ತೀಚೆಗಿನ ದಿನಗಳಲ್ಲಿ ಶತ್ರುಗಳನ್ನು ಸಂಪಾದಿಸಿಕೊಂಡಿದ್ದು ಅವರ ಯಶಸ್ಸಿನಿಂದ ಅನ್ನೋದಕ್ಕಿಂತಲೂ ಅವರ ಇಬ್ಬಂದಿತನದ ನಡವಳಿಕೆಗಳಿಂದ ಎಂಬುದು ಗಮನದಲ್ಲಿರಲಿ. ಲೇಖನದಲ್ಲಿ ನಾನು ನೇರವಾಗಿ ಪ್ರತಾಪ್ ಸಿಂಹರ ಬಗ್ಗೆಯೇ ಬರೆದಿದ್ದಾದರೂ ಎಲ್ಲಿಯೂ ವೈಯಕ್ತಿಕ ವಿಚಾರಗಳನ್ನೆತ್ತಿಲ್ಲ. ಬಿಜೆಪಿ ಪಕ್ಷ ಎನ್ನುವುದಕ್ಕಿಂತಲೂ ಕಾವೇರಿ ಕಣಿವೆಯ ಭಾಗದ ಸಂಸದರಾಗಿ ಪ್ರತಾಪ್ ಸಿಂಹರ ಜವಾಬ್ದಾರಿಗಳೇನು, ಅವರ ನಡವಳಿಕೆಗಳೇನಿರಬೇಕಿತ್ತು ಎನ್ನುವ ಕುರಿತಾಗಿ ನನ್ನನ್ನೂ ಸೇರಿದಂತೆ ಬಹುತೇಕರಿಗಿರುವ ಅಭಿಪಾಯವನ್ನು ನೇರವಾಗಿ ಅಕ್ಷರ ರೂಪಕ್ಕಿಳಿಸಿದ್ದೆ. ಅದಕ್ಕಿಂತ ಹೆಚ್ಚಾಗಿ ಇದ್ದಬದ್ದ ಸಮಸ್ಯೆಗಳಿಗೆಲ್ಲಾ ಪ್ರತಾಪ್ ಸಿಂಹ ಅವರೇ ಕಾರಣ ಅಂತ ನಾನೆಲ್ಲೂ ಹೇಳಿಲ್ಲ. ಸಮಸ್ಯೆಗಳಿಗೆಲ್ಲಾ ಮೂಲ ಕಾಂಗ್ರೆಸ್ಸೇ ಎಂಬ ಲೋಕ ಸತ್ಯ ಗೊತ್ತಿದ್ದೂ ಅನಾವಶ್ಯಕವಾಗಿ ಪ್ರತಾಪರ ಮೇಲೆ ಕಟ್ಟುವಷ್ಟು ಬೌದ್ಧಿಕ ದಿವಾಳಿ ನಾನಲ್ಲ. ಇನ್ನು, ಶ್ರೀಯುತ ಸಂಸದರು “”you all must sympathise me at least for being available and taking your criticism” ಎನ್ನುವ ಟ್ವೀಟ್ ಮಾಡಿದ್ದು ಮಾಜಿ ಸಂಸದ ವಿಶ್ವನಾಥ್ ಅವರು ಮಾಡಿದ್ದ ಟೀಕೆಗುತ್ತರಿಸುವ ಸಲುವಾಗಿಯೇ ಹೊರತು ನನ್ನ ಮೇಲೆ ಕರುಣೆಯಿರಲಿ ಎನ್ನುವ ವಿಜ್ಞಾಪನೆ ಮಾಡುವುದಕ್ಕಾಗಿ ಅಲ್ಲ, ನಾಡೇ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಇಂತಹ ಕ್ಷುಲ್ಲಕ ರಾಜಕೀಯವನ್ನಷ್ಟೇ ನಾನು ಟೀಕಿಸಿ ಬರೆದಿದ್ದು ಎನ್ನುವುದು ಶ್ರೀಯುತ ರಾಘವರ ಗಮನದಲ್ಲಿರಲಿ. ವಾಸ್ತವ ಗೊತ್ತಿಲ್ಲದೆ, ನಾನು ಯಾವ perspectiveನಲ್ಲಿ ಹೇಳಿದ್ದೇನೆ ಎನ್ನುವುದನ್ನು ಅರಿಯದೆ ನನ್ನ ಇಂಗ್ಲೀಷ್ ಜ್ಞಾನವನ್ನು, ಸಾಮಾನ್ಯ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುವ ರಾಘವರ ಪ್ರಯತ್ನಕ್ಕೆ ನಾನು ಸಂತಾಪ ಸೂಚಿಸುವುದಿಲ್ಲ, ಬದಲಾಗಿ ಮುಕ್ತ ಮನಸ್ಸಿನಿಂದ ಪ್ರಶಂಸಿಸುತ್ತೇನೆ.
ಕೆಲವೊಂದು ವಿಚಾರಗಳಲ್ಲಿ ನಾನು ಪ್ರತಾಪರ ಕಟು ವಿರೋಧಿ, ನನ್ನ ವಿರೋಧವನ್ನು ಐದಾರು ವರ್ಷಗಳಿಂದ ನಿರ್ಭೀತಿಯಿಂದ ವ್ಯಕ್ತ ಪಡಿಸುತ್ತಿದ್ದೇನೆ ಎನ್ನುವುದು ಎಷ್ಟು ಸತ್ಯವೋ ಅವರನ್ನು ಹೀಗೆ ಟೀಕಿಸುವುದರಿಂದ ನನಗೇನು ಲಾಭವೂ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಇದನ್ನೇ ಯಶಸ್ಸಿನ ಶಾರ್ಟ್ ಕಟ್ ದಾರಿ ಎನ್ನುವುದಾದರೆ ಒಂದಾನೊಂದು ಕಾಲದಲ್ಲಿ ಹೀಗೆಯೇ ರಾಜಕೀಯದವರನ್ನು ಟೀಕಿಸಿ ಯಶಸ್ಸಿನ ಮೆಟ್ಟಿಲೇರಿರುವ ಪ್ರತಾಪರು ಮಾಡಿದ್ದೂ ಅದನ್ನೇ ಎಂದು ಹೇಳಬೇಕಾಗುತ್ತದೆ. ಇನ್ನು ಯುವ ಸಂಸದರೆನ್ನುವ ಕಾರಣಕ್ಕೆ ಅವರು ಮಾಡಿದ್ದಕ್ಕೆಲ್ಲಾ ಜೀ ಹುಜೂರ್ ಹೇಳುತ್ತಾ ಹೋದರೆ ಅದು ಮತ ಹಾಕುವ ನಮ್ಮಂತಹ ಯುವಕರ ಮೂರ್ಖತನವಾದೀತು. ಕಳೆದ ವರ್ಷ ಇದೇ ಸಂಸದರು ವೇತನ ಹೆಚ್ಚಳಕ್ಕಾಗಿ ನೀಡಿದ ಬಾಲಿಶ ಕಾರಣವನ್ನು ಸಾವಿರಾರು ಪ್ರಜ್ಞಾವಂತ ನಾಗರೀಕರು ಟೀಕಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಇನ್ನು, ಯಾರು ಏನೇ ಹೇಳಿದರೂ, ಎಷ್ಟೇ ಸಮರ್ಥನೆಗಳನ್ನು ಬರೆಸಿ ಫೇಸ್ಬುಕ್, ವಾಟ್ಸಾಪಿನಲ್ಲಿ ಹರಿಯ ಬಿಟ್ಟರೂ, ಮೊನ್ನೆ ಬಿಜೆಪಿ ಸರ್ವಪಕ್ಷ ಸಭೆಗೆ ಹೋಗದೇ ಇದ್ದಿದ್ದು ತಪ್ಪು ತಪ್ಪೇ. ಸರಕಾರ ಇವರ ಮಾತು ಕೇಳುತ್ತೋ ಬಿಡುತ್ತೋ, ಜೆ.ಡಿ.ಎಸ್ ಮತ್ತು ಕಾಂಗ್ರೆಸ್ಸಿನವರದ್ದು ನಾಟಕವೇ ಆಗಿದ್ದರೂ ಬಿಜೆಪಿ ಸರ್ವ ಪಕ್ಷ ಸಭೆಗೆ ಹೋಗದೇ ಇದ್ದಿದ್ದು ಘನಘೋರವಾದ ತಪ್ಪು ಎನ್ನುವುದು ನನ್ನದು ಮಾತ್ರವಲ್ಲ, ಸಾವಿರಾರು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವೂ ಹೌದು.
ಇರಲಿ, ನನ್ನ ಲೇಖನಕ್ಕೆ ಬಂದಿರುವ ಮೇಲಿನ ಪ್ರತಿಕ್ರಿಯೆಯನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೆನೆ ಹಾಗೂ ರೀಡೂ ತಂಡ ಅದನ್ನು ಪ್ರಕಟಿಸಿದೆ. ಆದರೆ “ವೈಯಕ್ತಿಕ ನಿಂದನೆ ಎಂಬ ಯಶಸ್ಸಿನ ಶಾರ್ಟ್ ಕಟ್ ಮಾರ್ಗ” ಎನುವ ತಲೆ ಬರಹವಿರುವ ಲೇಖನದಲ್ಲೇ ವಿಷಯಕ್ಕಿಂತ ವೈಯಕ್ತಿಕ ನಿಂದನೆಯೇ ಹೆಚ್ಚು ಕಂಡು ಬಂದಿರುವುದರಿಂದ ಮತ್ತು ಮುಂದುವರಿಸಿಕೊಂಡು ಹೋದರೆ ವಿಷಯಕ್ಕಿಂತ ಹೆಚ್ಚು ವ್ಯಕ್ತಿಗತ ವಿಷಯಗಳೇ ರಾರಾಜಿಸಬಹುದಾದ ಅಪಾಯವಿರುವುದರಿಂದ ಈ ಚರ್ಚೆಗೆ ಇಲ್ಲಿಯೇ ಮಂಗಳ ಹಾಡುತ್ತಿದ್ದೇನೆ. ಟೀಕೆಗಳಿಂದ ದೊಡ್ಡವರಾಗುತ್ತೇವೆ ಎನ್ನುವ ಭ್ರಮೆಯಲ್ಲಿ ನಾನಿಲ್ಲದಿದ್ದರೂ ನಮ್ಮ ಮೇಲೆ ಬಂದಿರುವ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದರಿಂದ, ಸಮಚಿತ್ತ ಕಾಯ್ದುಕ್ಕೊಳ್ಳುವುದರಿಂದ ದೊಡ್ಡವರಾಗುತ್ತೇವೆ ಎನ್ನುವ ಭರವಸೆಯಲ್ಲಿ ನಾನಿದ್ದೇನೆ.
Facebook ಕಾಮೆಂಟ್ಸ್