X

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ

ಜಿಟಿ ಜಿಟಿ ಮಳೆ…. ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ ಪ್ರೇಮಿಗಳನ್ನು,ಚಾರಣಪ್ರೀಯರನ್ನು ಹಾಗೂ ಸಾಮಾನ್ಯ ಪ್ರವಾಸಿಗರನ್ನು ಆಕರ್ಷಿಸಿ ಕೈಬೀಸಿ ಕರೆಯುವ ಸಹ್ಯಾದ್ರಿಯ ಮಡಿಲ ರಮ್ಯ ತಾಣವೇ ಅಂಬೋಲಿ. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ  ಬೆಳಗಾವಿಯಿಂದ ಸಾವಂತವಾಡಿ ಮಾರ್ಗದಲ್ಲಿ ಬೆಳಗಾವಿಯಿಂದ ಸುಮಾರು 75ಕಿ.ಮೀ. ದೂರದಲ್ಲಿ,ಸಮುದ್ರ ಮಟ್ಟದಿಂದ 690ಮೀಟರ್ ಎತ್ತರದಲ್ಲಿರುವ ಅಂಬೋಲಿ, ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ. ಪಶ್ಚಿಮ ಘಟ್ಟದ ಅಂಬೋಲಿ ಪರಿಸರದ  ವಿಶ್ವವಿಖ್ಯಾತ‘ಹಾಟ್ ಸ್ಪಾಟ್’’ ಆಗಿದೆ ಮತ್ತು ಅನೇಕ ವಿಧದ ಅಸಾಮಾನ್ಯ ಸಸ್ಯ,  ಪ್ರಾಣಿ – ಪಕ್ಷಿ ಸಂಕುಲಗಳಿಗೂ ಆಶ್ರಯ ತಾಣವಾಗಿದೆ. ಆದರೂ ಅಲ್ಲಲ್ಲಿ ತಲೆ ಎತ್ತುತ್ತಿರುವ ರಿಸಾರ್ಟ್ ಹಾಗೂ ಹೊಟೇಲಗಳು ಪರಿಸರದ ಮೂಲರೂಪವನ್ನು ಹಾಳುಗೆಡುವಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತಿರುವದನ್ನು  ಅಲ್ಲಗಳೆಯಲಾಗುವದಿಲ್ಲ.

ಅಂಬೋಲಿ ಜಲಪಾತ ಅತ್ಯಂತ ಸುರಕ್ಷಿತ ಮತ್ತು ಪ್ರಶಾಂತ ಜಲಪಾತಗಳಲ್ಲೊಂದು, ದೊಡ್ಡವರು ಚಿಕ್ಕವರು ಯಾರಾದರೂ ಕಾಂಕ್ರೀಟನ ಮೆಟ್ಟಿಲುಗಳ ಮುಖಾಂತರ ಜಲಪಾತದ ತುದಿಯ ಸಮೀಪ ತಲುಪಬಹುದು. ಮುಂಗಾರಿನ ಮಳೆಯಲ್ಲಿ ಅಂಬೋಲಿಯ ಭವ್ಯ ಜಲಪಾತದ ವೈಭವವು ದ್ವಿಗುಣವಾಗಿ ದೇಶಾದ್ಯಂತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಜಲಪಾತ ಜೋಗ, ಗೋಕಾಕ ಹಾಗೂ ಗೊಡಚಲಮಲ್ಕಿ ಜಲಪಾತಗಳಂತೆ ರುದ್ರರಮಣೀಯವಲ್ಲದಿದ್ದರೂ ಮನಸ್ಸಿಗೆ ಮುದ ನೀಡಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿ ನೋಡುಗರ ಕಂಗಳಿಗೆ ರಸದೌತಣವನ್ನು ನೀಡುತ್ತದೆ. ಅಂಬೋಲಿ ಜಲಪಾತ ಸಹ್ಯಾದ್ರಿಯ ಪಕೃತಿ    ಸೊಬಗಿಗೆ ಮೆರಗು ತಂದುಕೊಟ್ಟಿದೆ. ಎತ್ತರದಿಂದ ಭೋರ್ಗರೆವ ಈ ಜಲಪಾತದ ನೀರಿಗೆ ಬೆನ್ನೊಡ್ಡಿ ಮೈ ಮನ ಮರೆತು ಮಿಂದರೆ ಧನ್ಯತಾ ಭಾವ ಮನಸ್ಸನ್ನು ಆವರಿಸುತ್ತದೆ.

ಮಹಾರಾಷ್ಟ್ರದ ಸಿಂಧುದುರ್ಗ  ಜಿಲ್ಲೆಯ ವೆಂಗುರ್ಲಾ ಬಂದರು ಮತ್ತು ಕರ್ನಾಟಕದ ಬೆಳಗಾವಿ ನಗರದ ಮಾರ್ಗಮಧ್ಯದಲ್ಲಿ ಬರುವ ಅಂಬೋಲಿ ಗ್ರಾಮ,ಬ್ರಿಟಿಷರು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ತಮ್ಮ ರಕ್ಷಣಾ ಸಾಮಗ್ರಿ ಸರಬರಾಜು ಮಾಡಲು  ವ್ಯಾಪಕವಾಗಿ ಬಳಸಿದಾಗಿನಿಂದ  ಐತಿಹಾಸಿಕವಾಗಿ ಬೆಳಕಿಗೆ ಬಂತು. ಬ್ರಿಟಿಷರ ನೆಚ್ಚಿನ ತಾಣವಾಗಿ ಅಂಬೋಲಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಕರ್ನಲ್ ವೆಸ್ಟ್ರೋಪ್ ವಿಶೇಷ ಆಸಕ್ತಿ ವಹಿಸಿದ್ದನೆಂದು ಹೇಳಲಾಗುತ್ತದೆ. ಜಲಪಾತಕ್ಕೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಪ್ರವಾಸಿಗರ ಹಸಿವು ಹಿಂಗಿಸಲು ವಡಾ- ಪಾವ್, ಚುನಮುರಿ-ಭಡಂಗ, ಸಮೋಸಾ, ಸುಟ್ಟ ಮತ್ತು ಕುದಿಸಿದ ಗೊಂಜಾಳ ತೆನೆ, ಬಿಸಿ ಬಿಸಿ ಚಹಾ ಯತೇಚ್ಚವಾಗಿ ದೊರಕುತ್ತವೆ.

ಅಂಬೋಲಿ ಜಲಪಾತದಿಂದ ಬೆಳಗಾವಿ ಕಡೆಯ ರಸ್ತೆಯಲ್ಲಿ 3 ಕಿಲೋಮೀಟರ್ ಕ್ರಮಿಸಿದರೆ ನಾವು ತಲುಪುವದು ಪುರಾಣ ಪ್ರಸಿದ್ಧ ಹಿರಣ್ಯಕೇಶಿ ನದಿಯ ಉಗಮ ಸ್ಥಾನ. ಇಲ್ಲಿರುವ ಬಂಡೆಗಳ ಗುಹೆಗಳಲ್ಲಿ ಹಿರಣ್ಯಕೇಶಿ ನದಿ ಹುಟ್ಟುತ್ತದೆ, ಗುಹೆಗಳ ಸುತ್ತ ನಿರ್ಮಿಸಲ್ಪಟ್ಟಿರುವ  ಪುರಾತನವಾದ ಹಿರಣ್ಯಕೇಶ್ವರ ದೇವಾಲಯದ ಪ್ರಶಾಂತ ಪರಿಸರ ಪ್ರವಾಸಿಗರಲ್ಲಿ ಭಕ್ತಿ ಹುಟ್ಟಿಸಿ ಅಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ. ದಂತಕಥೆಯೊಂದರ ಪ್ರಕಾರ ಅಂಬೋಲಿಯ ಸುತ್ತಮುತ್ತ ಪುರಾಣ ಕಾಲದ ಸುಮಾರು  108 ಶಿವ ದೇವಾಲಯಗಳಿವೆ. ಆದರೆ ಈ ವರೆಗೆ ಕೇವಲ ಒಂದು ಡಜನ್ ದೇವಾಲಯಗಳು ಮಾತ್ರ ಬೆಳಕಿಗೆ ಬಂದಿವೆ. ಇಂತಹ ಡಜನ್ ಶಿವಾಲಯಗಳಲ್ಲಿ ಹಿರಣ್ಯಕೇಶಿ ನದಿಯ ಉಗಮಸ್ಥಾನದ ಹಿರಣ್ಯಕೇಶ್ವರ ದೇವಾಲಯವು ಒಂದು. ಮುಂದೆ ಇದೇ  ಹಿರಣ್ಯಕೇಶಿ ನದಿ ಕರ್ನಾಟಕದಲ್ಲಿ ಘಟಪ್ರಭಾ ನದಿಯಾಗಿ ಹರಿಯುತ್ತದೆ.

ಅಂಬೋಲಿ ಘಟ್ಟದಲ್ಲಿ ನೋಡಲೇಬೇಕಾದ ಇನ್ನೊ೦ದು ಸ್ಥಳ ಕವಳಾ ಸೇಠ್ ಅಥವಾ ಕವಳೆಸೇಡ (ವೀಕ್ಷಣಾ ಸ್ಥಳ) ವ್ಯೂ ಪಾಯಿಂಟ್. ಅಂಬೋಲಿ ಜಲಪಾತದಿಂದ ಬೆಳಗಾವಿ ಕಡೆಯ ರಸ್ತೆಯಲ್ಲಿ ಸುಮಾರು 9 ಕಿಲೋಮೀಟರ್ ಕ್ರಮಿಸಿ ಮುಖ್ಯ ರಸ್ತೆಯಿಂದ ಎಡಗಡೆ ತಿರುಗಿ ಮತ್ತೆ 3 ಕಿಲೋಮೀಟರ್ ಸಾಗಿದರೆ ಸಿಗುವ  ನಿಸರ್ಗದ ಅದ್ಭುತ ಸೃಷ್ಟಿಗಳೊಲ್ಲೊಂದಾದ ಕಣಿವೆ ಪ್ರದೇಶವೇ ಕವಳಾ ಸೇಠ್ ! ಈ ಕಣಿವೆ ಪ್ರದೇಶದಲ್ಲಿ ವಿವಿಧೆಡೆಯಿಂದ ಬೀಳುವ ಹಲವು ಚಿಕ್ಕ ಜಲಪಾತಗಳನ್ನು ಕಾಣಬಹುದು. ಈ ಕಣಿವೆಯ ಜಲಪಾತಗಳ ವಿಶೇಷತೆಯಂದರೆ, ಮುಂಗಾರಿನಲ್ಲಿ ಬೀಸುವ ಗಾಳಿಯ ರಭಸಕ್ಕೆ  ಜಲಪಾತವು ಹಿಮ್ಮುಖವಾಗಿ ನೀರನ್ನು ಮೇಲಕ್ಕೆ ದಬ್ಬಿ ನೋಡುಗರನ್ನು ಒದ್ದೆಗೊಳಿಸಿ ನಿಬ್ಬೆರಗಾಗಿಸುತ್ತದೆ! ಇದೇ ಕಾರಣಕ್ಕಾಗಿ  ಇಲ್ಲಿಯ ಜಲಪಾತ ಹಿಮ್ಮುಖ ಜಲಪಾತ (ರಿವರ್ಸ್ ವಾಟರ್ ಫಾಲ್ಸ್) ಎಂದು ಪ್ರಸಿದ್ಧಿ ಪಡೆದಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಯಾವುದೇ ಅವಘಡಗಳು ಸಂಭವಿಸುವದನ್ನು ತಡೆಯಲು ಕವಳಾ ಸೇಠ್ ಕಣಿವೆಯ ಸುತ್ತ ಸುರಕ್ಷಿತ ಕಟ-ಕಟೆಯನ್ನು ನಿರ್ಮಿಸಿದೆ.

ಭರ್ತಿ ಮಳೆಗಾಲದಲ್ಲಿ ದಟ್ಟವಾದ ಮಂಜು ಇಡೀ ಪ್ರದೇಶವನ್ನು ಆವರಿಸಿ ಆಗಾಗ ಸೂರ್ಯನ ರಶ್ಮಿ-ಗಳು ಮೋಡದ ಮಂಜನ್ನು ಭೇದಿಸಿ ಬರುವ ದೃಶ್ಯ,ರವಿಯು ಪ್ರಕೃತಿಯ ಮಡಿಲಲ್ಲಿ ಕಣ್ಣು ಮುಚ್ಚಾಲೆಯಾಡುತ್ತಿರುವನೆನೋ ಎಂಬಂತೆ ಭಾಸವಾಗುತ್ತದೆ!  ಮೋಡಗಳು ಮರೆಯಾಗಿ ಕೆಲ ಕ್ಷಣ ಹೊಂಬಿಸಿಲು ಹೊರಸೂಸುವ ನಸು ಬೆಳಕಿನಲ್ಲಿ ನೋಡ ಸಿಗುವ ಕವಳಾ ಸೇಠ್ ಕಣಿವೆಯ ನೋಟ ನಿಜಕ್ಕೂ ಸೌಂದರ್ಯ ದೇವತೆಯ ದರ್ಶನವಾದಂತೆ ಭಾಸವಾಗುತ್ತದೆ! ನಿಸರ್ಗದ ವಿವಿಧ ಬಗೆಯ ಸದ್ದುಗಳಿಂದ   ಉತ್ಪತ್ತಿಯಾಗುವ ಸಂಗೀತದೊಂದಿಗೆ ಪ್ರಕೃತಿಯ ಮೌನವನ್ನು ಅನುಭವಿಸಲು ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಪ್ರದೇಶ ಕವಳಾ ಸೇಠ್.  ಕವಳಾ ಸೇಠ್’ಗೆ ಭರ್ಜರಿ ಮುಂಗಾರಿನ ಸಮಯದಲ್ಲಿ ಅಂದರೆ ಜೂನ್ ಮಧ್ಯ ಭಾಗದಿಂದ   ಆಗಸ್ಟ್’ನ ಮಧ್ಯ ಭಾಗದವರೆಗೂ ಭೇಟಿ ನೀಡುವದು ಸೂಕ್ತ.

ಅನೇಕ ವಿಧದ ವನ್ಯ ಜೀವಿಗಳಿಗೆ ಆಶ್ರಯತಾಣವಾಗಿರುವ ಅಂಬೋಲಿ ಘಟ್ಟದಲ್ಲಿ ಕಾಡೆಮ್ಮೆ,ಕಾಡು ಹಂದಿ,ಮಂಗ, ಹುಲ್ಲೆಗಳು (ಎಂಟೆಲೋಪಗಳು), ಜಿ೦ಕೆಗಳೂ ಕೂಡ ಕಾಣಸಿಗುತ್ತವೆ, ಸಮಯ ಸಂದರ್ಭ ಸರಿಯಾಗಿದ್ದಾರೆ ಕೆಲ ಬಾರಿ ಚಿರತೆಯನ್ನು ನೋಡಬಹುದು.    ಅಂಬೋಲಿ ಘಟ್ಟ, ತಮ್ಮ ಕೆಮೆರಾದಲ್ಲಿ ವಿವಿಧ ಬಗೆಯ ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಉತ್ಸುಕರಾಗಿರುವ ಪಕ್ಷಿ ವೀಕ್ಷಕರಿಗೂ ಕುತೂಹಲ ಹುಟ್ಟಿಸುವ  ಸ್ಥಳ. ಮಂಗಟ್ಟೆಗಳು (ಹಾರ್ನ್ ಬಿಲ್), ಪ್ಯಾರಾಡೈಸ್ ನೊಣಹಿಡುಕ   (ಪ್ಯಾರಡೈಸ್ ಫ್ಲೈ ಕ್ಯಾಚರ್), ಕಾಜಾಣ (ಡ್ರೋ೦ಗೊ), ಹಳದಿ ಹುಬ್ಬಿನ ಪಿಕಳಾರ (ಯಲ್ಲೋ ಬ್ರೌಡ ಬುಲ್-ಬುಲ್), ಕೆಂಪು-ಮೀಸೆಯ ಪಿಕಳಾರ (ರೆಡ್ ವಿಸ್ಕರ್ಡ್ ಬುಲ್-ಬುಲ್), ಹಳದಿ ಬೆನ್ನಿನ ಸೂರಕ್ಕಿ (ಕ್ರಿಮ್ಸನ್ ಬ್ಯಾಕ್ದ್ ಸನ್ ಬರ್ಡ್), ಕಿತ್ತಳೆ-ತಲೆಯ ನೆಲ ಸಿಳ್ಳಾರ (ಆರೆಂಜ್ ಹೆಡೆಡ್ ಗ್ರೌಂಡ್ ಥ್ರಶ್), ಹರಟೆಮಲ್ಲಗಳು(ಬ್ಯಾಬ್ಲರ್) ಇವೆ ಮುಂತಾದ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಇಷ್ಟೇ ಅಲ್ಲದೇ ಅನೇಕ ವಿಧದ ಚಿಟ್ಟೆಗಳು, ಕಪ್ಪೆಗಳು  ಹಾಗೂ ಸರಿಸೃಪಗಳು ಅಂಬೋಲಿ ಘಟ್ಟದ ಕಾಡಿನಲ್ಲಿ ಮನೆ ಮಾಡಿವೆ. ಈ ಸ್ಥಳದಲ್ಲಿ ಕಂಡು ಬರುವ ಸಸ್ಯ – ಗಿಡಗಳಲ್ಲಿ  ಹೊಳೆ ಮತ್ತಿ, ಬೀಟೆ,ನಂದಿ,  ಹಿರ್ದಾ, ಐನ್, ಅಂಜಾನ್, ಶೀಗೆಕಾಯಿ,ಮಾವು, ಫರ್ನ್ ಮುಖ್ಯವಾದವುಗಳು.

ಒಟ್ಟಾರೆಯಾಗಿ ಹೇಳುವಾದದರೆ ಸಹ್ಯಾದ್ರಿ ಮಡಿಲ ರಮ್ಯ ತಾಣವಾದ ಅಂಬೋಲಿಯನ್ನು ಒಮ್ಮೆ ನೋಡಿ ಅನುಭವಿಸಿ ಆನಂದಿಸಬೇಕು.

Facebook ಕಾಮೆಂಟ್ಸ್

Srinivas N Panchmukhi: ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.
Related Post