ಕೆಲವು ವರ್ಷಗಳ ಹಿಂದಿನ ಕಥೆ ಇದು.. ಅಂದು ರಾತ್ರಿ ಸುಮಾರು 2:30ರ ಹೊತ್ತಿಗೆ ನನ್ನನ್ನು ಎಬ್ಬಿಸಿದಂತಾಯ್ತು.. ನಿದ್ದೆಯಲ್ಲಿಯೇ ಕಣ್ತೆರೆದೆ.. ನನ್ನ ತಂದೆ ಗಾಬರಿ ತುಂಬಿದ ಧ್ವನಿಯಲ್ಲಿ ನನ್ನ ನಿದ್ದೆಯಿಂದ ಏಳಿಸುತ್ತಾ ಇದ್ದರು. ಇನ್ನೂ ಬೆಳಗಾಗಿಲ್ಲ ಅನ್ನಿಸುತ್ತೆ, ಆದರೂ ಯಾಕೆ ಕರೆಯುತ್ತಿದ್ದಾರೆ ಅಂತ ಯೋಚನೆ ಹುಟ್ಟಿತ್ತು ನನ್ನ ಮನಸಲ್ಲಿ. ಸಂಪೂರ್ಣ ಎಚ್ಚರವಾಗುವಾಗ 2 ನಿಮಿಷ ಕಳೆದಿತ್ತು.. ಗಾಬರಿಯ ದನಿ ಕೇಳಿ ದಿಗಿಲಾಯಿತು. ಏನು ಎಂದು ಕೇಳಿದೆ.. “ಬೇಗ ಎದ್ಕ ಲಕ್ಷ್ಮಿಗೆ ಹುಶಾರಿಲ್ಲೆ, ಅಡ್ಡ ಬಿದ್ದಿಗಿದು, ನಾನು ಕ್ಯಾಲ್ಸಿಯಂ ತಗ ಬತ್ತೆ, ನೀ ಬಿಸಿ ನೀರೆಲ್ಲ ತಗೊಂಡು ಹೋಗು” ಎಂದು ಗಡಬಡಿಸಿದರು. ನನಗೂ ಅರ್ಥವಾಯ್ತು, ಜೊತೆಗೆ ನಿದ್ದೆಯೂ ಹಾರಿ ಹೋಗಿತ್ತು. ಲಕ್ಷ್ಮಿ ಕರು ಹಾಕಿ ಆಗತಾನೇ 2 ದಿನವಾಗಿದ್ದ ಆಳೆತ್ತರದ ಹಾಲಿಸ್ಟಿನ್ ಫ್ರಿಶನ್ (ಹೆಚ್.ಎಫ್) ಹಸು. “ಹಿಂದಿನ ಕರುವಲ್ಲಿ 25 ಲೀಟರ್ ಹಾಲು ಕರ್ದೀನ್ರಿ.. ನೀವು ಮೊದ್ಲು ತಗಂಡು ಹೋಗ್ರಿ. ಹಾಲು ಕಡಿಮೆ ಬಂದ್ರೆ ವಾಪಸ್ ತಗಂಡ್ ಹೋಗ್ತೀನಿ” ಅಂತ ಬಾಗೇವಾಡಿ ಸಂತೆಯಲ್ಲಿ ರೈತ ಮತ್ತೆ ಮತ್ತೆ ಹೇಳಿ ಕಳಿಸಿದ್ದ.. ಅದನ್ನು ನಮ್ಮ ಮನೆಗೆ ತರುವಾಗ ಅದು 8ತಿಂಗಳ ತುಂಬು ಗಬ್ಬದ ಹಸು. ಕರು ಹಾಕಿದ 2 ದಿನಗಳ ನಂತರ ಅಂದು ರಾತ್ರಿ ಅಡ್ಡ ಮಲಗಿತ್ತು..
ಆ ರೋಗದ ಹೆಸರು ಮಿಲ್ಕ್ ಫಿವರ್.. ನನ್ನ ತಂದೆ ಹೈನುಗಾರಿಕೆಯಲ್ಲಿ ತೊಡಗಿ ಸುಮಾರು 40 ವರ್ಷಗಳಾಯ್ತು.. ಅವರಿಗೆ ತಕ್ಷಣವೇ ಆಕಳ ಪರಿಸ್ಥಿತಿ ಅರ್ಥವಾಗಿತ್ತು. ಇದು ಹಸುಗಳಿಗೆ ಬರುವ ಒಂದು ವಿಚಿತ್ರ ರೋಗ.. ಎಲ್ಲ ಹಸುಗಳಲ್ಲಿ ಕಾಣದು… ಅದರಲ್ಲೂ ದೇಸೀ ಥಳಿಗಳಲ್ಲಿ ಇದು ತುಂಬಾನೇ ಅಪರೂಪ.. ಆದರೆ ಜರ್ಸಿ, ಹಾಲಿಸ್ಟಿನ್ ಫ್ರಿಶನ್ ಅಂಥ ಉತ್ತಮ ಹಾಲು ನೀಡುವ ವಿದೇಶೀ ಥಳಿಗಳಲ್ಲಿ ಕಂಡು ಬರುವ ರೋಗ.. ಇದೊಂದು ಸಣ್ಣ ಜ್ವರವಷ್ಟೇ.. ಆದರೆ ತಕ್ಷಣಕ್ಕೆ ಔಷಧ ಬೀಳದಿದ್ದರೆ ಹಸುವಿನ ಆಯಸ್ಸು 2-3 ಘಂಟೆಯನ್ನು ದಾಟಲಾರದು.. ಅದೇ ರೀತಿ ಔಷಧಿ ಬಿದ್ದ ಅದೇ 2-3 ಘಂಟೆಯಲ್ಲಿ ಏನೂ ಆಗಿಲ್ಲ ಎನ್ನುವಷ್ಟು ಆರಾಮದಲ್ಲಿ ಎದ್ದು ನಿಂತು ಬಿಡುತ್ತೆ..
ಕರು ಹಾಕಿದ ಸಮಯದಲ್ಲಿ ಹಸು ಹಾಲು ನೀಡಲು ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಆದರೆ, ಅದರ ಪ್ರಮಾಣ ಕಡಿಮೆಯಾದಾಗ ಮಿಲ್ಕ್ ಫಿವರ್ ಕಾಣಿಸುತ್ತದೆ. ಹಸುವಿಗೆ ಮೂರನೇ ಕರು ಹಾಕುವಾಗಿನಿಂದ ಏಳನೇ ಕರು ಹಾಕುವಾಗಿನ ಮಧ್ಯದ ಸಮಯದಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.. ಕೆಲವೊಮ್ಮೆ ಕರು ಹಾಕಿದ ಎರಡನೇ ದಿನಕ್ಕೇ ಕಾಣಿಸಿಕೊಂಡರೆ ಕೆಲವೊಮ್ಮೆ 8-10 ದಿನಗಳ ನಂತರವೂ ಕಂಡುಬರುತ್ತದೆ. ಆದರೆ ಮಿಲ್ಕ್ ಫಿವರ’ನ ಮೂಲ ಕ್ಯಾಲ್ಸಿಯಂ ಕೊರತೆ.
ಸಾಮಾನ್ಯವಾಗಿ ಹಸುವಿನ ದೇಹದಲ್ಲಿರುವ ಕ್ಯಾಲ್ಸಿಯಂ ಅಂಶ ಸುಮಾರು 8-10 ಮಿ.ಗ್ರಾಂ. ಕರು ಹಾಕಿದ ಸಮಯದಲ್ಲಿ ಅದು ಇಳಿಕೆಯಾಗುತ್ತೆ ಮತ್ತು ಹಾಲು ನೀಡುವುದರಿಂದ ಮತ್ತೂ ಇಳಿಮುಖವಾಗುತ್ತೆ. ಅದರ ಪ್ರಮಾಣ 5.5 ಮಿ.ಗ್ರಾಂ.ಗೆ ಇಳಿದಾಗ ರೋಗ ಲಕ್ಷಣಗಳು ಕಾಣಿಸುತ್ತವೆ. ಇದರಿಂದ ಸುಸ್ತಾಗುತ್ತವೆ. ಹೃದಯ ಬಡಿತ ಕ್ಷೀಣವಾಗುತ್ತದೆ. ರಕ್ತದೊತ್ತಡವೂ ಕಡಿಮೆಯಾಗುತ್ತದೆ. ಹೊಟ್ಟೆಯ ಸ್ನಾಯುಗಳ ಚಲನೆ ಕುಂಠಿತಗೊಂಡು, ಸ್ನಾಯು ಸೆಳೆತ ಜಾಸ್ತಿಯಾಗಿ ದನವು ಕೈ ಕಾಲು ಬಡಿಯಲು ಆರಂಭಿಸುತ್ತದೆ. ಸಕ್ಕರೆ ಅಂಶವೂ ಕುಸಿಯುತ್ತದೆ. ಸಾಮಾನ್ಯವಾಗಿ ಮಿಲ್ಕ್ ಫಿವರ್ ಬಂದ ಹಸುಗಳಿಗೆ ಏಳಲು ಸಾಧ್ಯವಾಗುವುದೇ ಇಲ್ಲ..
ಮಿಲ್ಕ್ ಫಿವರ್ ಬಂದಾಗ ಆರಂಭದಲ್ಲಿ ಹಸು ತಿನ್ನುವುದನ್ನು ಕಡಿಮೆ ಮಾಡುತ್ತದೆ. ತಲೆ ಅಲ್ಲಾಡಿಸುವುದು, ಕಣ್ಣು ಅಗಲಿಸುವುದು, ನಾಲಿಗೆ ಹೊರಗೆ ಹಾಕುವುದು ಇತ್ಯಾದಿ. ನಂತರ ದೇಹದ ಉಷ್ಣತೆ ಕಡಿಮೆಯಾಗುತ್ತ ಹೋಗುತ್ತದೆ.. ಹಸು ಮಲಗಿಯೇ ಇರುತ್ತದೆ. ಕತ್ತನ್ನು ಹೊಟ್ಟೆಯ ಕಡೆಗೆ ವಾಲಿಸುವುದು. ಕೈ ಕಾಲು ತಣ್ಣಗಾಗುವುದು, ಕೊನೆ ಕೊನೆಗೆ ಹೊಟ್ಟೆ ಉಬ್ಬರವೂ ಕಾಣಿಸುವುದುಂಟು. ಸೂಕ್ತ ಚಿಕಿತ್ಸೆ ನೀಡದಿದ್ದರೆ 12ರಿಂದ 24 ಗಂಟೆಯೊಳಗೆ ದನ ಕೊನೆಯುಸಿರೆಳೆಯುವ ಸಾಧ್ಯತೆ ಇರುತ್ತದೆ.
ಕರು ಹಾಕಿದ ಕೆಲವು ದಿನ ಹಸುವನ್ನು ಗಮನಿಸುತ್ತಿರಬೇಕು. ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಬೇಕು. ಈ ಸ್ಥಿತಿಯಲ್ಲಿ ದನಕ್ಕೆ ಚಿಕಿತ್ಸೆ ನೀಡದಿದ್ದರೆ ಅವುಗಳ ಪ್ರಾಣಕ್ಕೇ ಅಪಾಯ.. ಹಸು ಮಲಗಿಯೇ ಇರುವುದರಿಂದ ಕೆಚ್ಚಲು ಘಾಸಿಯಾಗಿ ಬಾವು ಬರಬಹುದು. ಕೆಲವೊಮ್ಮೆ ಕರು ಹಾಕುವ ಮುಂಚೆಯೂ ಈ ಕಾಯಿಲೆ ಕಾಣಬಹುದು. ಅಂತಹ ಸಂದರ್ಭದಲ್ಲಿ ಕರು ಹಾಕಲು ಕಷ್ಟವಾಗಬಹುದು. ಈ ನಡುವೆ ಗರ್ಭಕೋಶದ ಊತ ಕಾಣಿಸಿಕೊಳ್ಳುತ್ತದೆ. ಪಶು ವೈದ್ಯರನ್ನು ಕಾಣಬೇಕು. ಎಲ್ಲಕ್ಕಿಂತಲೂ ಪರಿಣಾಮಕಾರಿ ಔಷಧಿ ಎಂದರೆ ಕ್ಯಾಲ್ಸಿಯಂ ಅನ್ನು ನೀಡುವುದು.. ಶೇ.75ರಷ್ಟು ಕ್ಯಾಲ್ಸಿಯಂ ನೀಡಿದ ತಕ್ಷಣವೇ ಹಸು ಎದ್ದು ನಿಲ್ಲುತ್ತದೆ, ಕಾರಣ ಅಷ್ಟು ಕ್ಯಾಲ್ಸಿಯಂ ಆಗುವ ತನಕ ನೀಡುತ್ತಲೇ ಇರಬೇಕು..
ಇದೇ ಮಿಲ್ಕ್ ಫಿವರ್ ಬಂದಿದೆ ಎಂದು ಅಂದು ರಾತ್ರಿ ನನ್ನ ತಂದೆ ನನ್ನ ಎಚ್ಚರಿಸಿದಾಗ ನಾನು ಯೋಚಿಸತೊಡಗಿದ್ದೆ.. ನಾನು ಮುಖ್ಯವಾಗಿ ಅದರ ತಳಿಯ ಬಗ್ಗೆ ಯೋಚಿಸುತ್ತಿದ್ದೆ. ಹಸುವಿನ ತಳಿಗಳಲ್ಲಿ ಮುಖ್ಯವಾಗಿ ಎರಡು ವಿಧ. ಒಂದು ಶುದ್ಧ ತಳಿ ಮತ್ತೊಂದು ಮಿಶ್ರ ತಳಿ. ಮಿಶ್ರ ತಳಿಗಳಲ್ಲಿ ಈ ರೋಗ ಕಂಡುಬರುವ ಸಾಧ್ಯತೆಗಳು ಸ್ವಲ್ಪ ಕಡಿಮೆ, ಶುದ್ಧ ತಳಿಗಳಲ್ಲಿ ಅದರಲ್ಲೂ ಹೆಚ್ಚು ಹಾಲು ನೀಡುವ ವಿದೇಶಿ ತಳಿಗಳಲ್ಲಿ ಇದು ಹೆಚ್ಚು.. ದೇಸೀ ತಳಿಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡು ಬರುವ ಮಿಲ್ಕ್ ಫಿವರ್ ವಿದೇಶಿ ಮಿಶ್ರ ತಳಿಯಲ್ಲಿಯೂ ಸಹ ಅಷ್ಟೇನೂ ಕಂಡುಬರಲಾರದು.
ಹೆಚ್ಚಿನ ಹಸುಗಳಿಗೆ 8 ತಿಂಗಳು ಮುಗಿಯುವ ಹೊತ್ತಿಗೆ ಒಮ್ಮೆ ಕ್ಯಾಲ್ಸಿಯಂ ಕೊಡುತ್ತಾರೆ. ಕೆಲವು ಹಸುಗಳಿಗೆ ಏಳನೇ ತಿಂಗಳಿನಿಂದಲೇ ತಿಂಗಳಿಗೊಮ್ಮೆ ಎಂದು ಪ್ರಾರಂಭವಾಗುತ್ತೆ. ಅವರು ಯಾಕೆ ಹೀಗೆ ಮಾಡೋದು ಅಂತ ತಿಳಿದಿರಲಿಲ್ಲ. ಕೊನೆಗೆ ಒಮ್ಮೆ ತಿಳಿದದ್ದು ಏನೆಂದರೆ ಇದು ಅವರು ತೆಗೆದುಕೊಳ್ಳುತ್ತಿರುವ ಮುಂಜಾಗೃತಾ ಕ್ರಮ ಎಂಬುದು.. “ಕರು ಹಾಕಿದ ನಂತರ ಹಸು ಮಿಲ್ಕ್ ಫಿವರ್’ಗೆ ಒಳಗಾದರೆ ಹಾಲು ಕೊಡುವುದರ ಪ್ರಮಾಣ ಇಳಿಮುಖವಾಗುತ್ತದೆ, ಅದರ ಬದಲು ಅದು ಬಾರದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳೋದು ಒಳ್ಳೆ ಉಪಾಯ ಅಲ್ಲವೇ” ಅಂತ ತಂದೆ ಯಾವತ್ತೂ ಹೇಳುತ್ತಿದ್ದುದು ನೆನಪಾಗಿತ್ತು.. ಆ ಮುಂಜಾಗ್ರತೆಯ ನಂತರವೂ ಬರುತ್ತೆ, ಆದರೆ ಅದರ ಸಂಖ್ಯೆ ಕಡಿಮೆ ಇರುತ್ತೆ ಅಂತ ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತ ಲಕ್ಷ್ಮಿಯೆಡೆಗೆ ಓಡಿದ್ದೆ…
Facebook ಕಾಮೆಂಟ್ಸ್