ಕೆಲವರ ಅತಿಯಾದ ಯಶಸ್ಸು ಅವರಿಗೆ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳ ಸಮೂಹವನ್ನೇ ನಿರ್ಮಾಣ ಮಾಡಿ ಬಿಡುತ್ತದೆ. ಅವರ ಸ್ಥಾನವನ್ನು ಈ ಜನುಮದಲ್ಲಿ ತಿಪ್ಪರಲಾಗ ಹಾಕಿದರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಆ ಗುಂಪಿನವರ ಮನಸ್ಸಿನ ಕೊರಗು. ಈ ಕೊರಗು ಬೆಳೆಯುತ್ತಾ ಹೋದಂತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆ ಖಿನ್ನತೆ ಹೆಚ್ಚಾದ ವ್ಯಕ್ತಿಗಳು, ಯಶಸ್ವೀ ವ್ಯಕ್ತಿಯ ಕುರಿತಾಗಿ ವೈಯಕ್ತಿಕ ನಿಂದನೆ, ಕೀಳು ಮಟ್ಟದ ಬರವಣಿಗೆಯ ರೂಪದಲ್ಲಿ ಅಥವಾ ಬೇರಾವುದೋ ಥರದಲ್ಲಿ ತನ್ನ ಭಾವನೆಯನ್ನು ಜನರ ಎದುರು ಪ್ರದರ್ಶಿಸಲು ಹಪ ಹಪಿಸುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂಥವರ ಸಂಖ್ಯೆ ಹೆಚ್ಚುತ್ತಿರಲು ಕಾರಣ, ತಲುಪಲಾರದ ಯಶಸ್ಸನ್ನು ಪಡೆಯುವ ಹಮ್ಮಿನಲ್ಲಿ ವೈಯಕ್ತಿಕ ನಿಂದನೆ ಎಂಬ ಶಾರ್ಟ್ ಕರ್ಟ್ ಮಾರ್ಗಕ್ಕೆ ಇಳಿದಿರುವುದು.
ಮೊನ್ನೆ ಹೀಗೆ ಒಂದು ಲೇಖನವನ್ನು ಓದುವ ಪ್ರಮೇಯ ಬಂದೊದಗಿತು. ಆ ಲೇಖನದಲ್ಲಿ ಲೇಖಕರು ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳಲು ವೈಯಕ್ತಿಕ ನಿಂದನೆಗೆ ಆರಿಸಿಕೊಂಡಂತಹ ವ್ಯಕ್ತಿ ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರನ್ನು. ನಾನು ಪ್ರತಾಪ್ ಸಿಂಹ ಅವರ ಅಭಿಮಾನಿಯಲ್ಲವಾದರೂ, ಲೇಖನ ಓದಿ ಮುಗಿಸಿದ ನಂತರ ಲೇಖಕರು ತಾವು ಏನು ಹೇಳಲು ಹೊರಟಿದ್ದಾರೆ ಎಂಬುದು ಸ್ವತಃ ಅವರಿಗೇ ಅರಿವಿಗೆ ಬಾರದಿರುವದು ಸ್ಪಷ್ಟವಾಗಿ ಕಂಡಿತು.
ವರದಿಯನ್ನು ಓದುತ್ತಾ ಹೋದಂತೆ ಲೇಖಕರಿಗೆ ಸರ್ಕಾರ ಹೇಗೆ ನಡೆಯುತ್ತದೆ, ರಾಜಕೀಯ ಪಕ್ಷಗಳ ನಿರ್ಣಯಗಳಿಗೆ ಪಕ್ಷದ ಸದಸ್ಯರು ಹೇಗೆ ಸ್ಪಂದಿಸಬೇಕಾಗುತ್ತದೆ, ಇತ್ಯಾದಿಗಳ ಕಿಂಚಿತ್ತೂ ಅರಿವಿಲ್ಲದಿರುವದು ಕಂಡು ಬಂದಿತು. ಆ ಮನುಷ್ಯ ಪ್ರತಾಪ್ ಸಿಂಹ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಗಳು ಎಂದುಕೊಂಡಿದ್ದಾರೋ ಏನೊ! ಅಥವಾ ಪ್ರತಾಪ್ ಸಿಂಹ ಅವರನ್ನು ಹಾಲಿವುಡ್ ಮಾರ್ವೆಲ್ ಚಿತ್ರಗಳಲ್ಲಿ ತೋರಿಸುವ ಅತಿಮಾನುಷ ಶಕ್ತಿ ಇರುವ ವ್ಯಕ್ತಿ ಎಂದುಕೊಂಡಿದ್ದಾರೋ ಏನೋ ಗೊತ್ತಿಲ್ಲ. ಲೇಖನದಲ್ಲಿ, ಇರುವ ಬರುವ ಎಲ್ಲ ಸಮಸ್ಯೆಗಳಿಗೆ ಮೈಸೂರು ಸಂಸದರ ಪ್ರತಿಯೊಂದು ನಡೆಯೇ ಕಾರಣ ಎಂಬಂತೆ ಬಿಂಬಿಸಲಾಗಿತ್ತು.
ಸಂಸದರು ‘ಲೆಟ್ಸ್ ಫೇಸ್ ಇಟ್’ ಎಂದು ಮುಖ್ಯ ಮಂತ್ರಿಗಳಿಗೆ ಟ್ವೀಟ್ ಮಾಡಿ ನಂತರ ಸರ್ವಪಕ್ಷ ಸಭೆಯಿಂದ ಎಸ್ಕೇಪ್ ಆದರಂತೆ. ಪಕ್ಷವೇ ಯಾವ ಸಂಸದರೂ ಹೋಗದಂತೆ ನಿರ್ಣಯಕ್ಕೆ ಬಂದು, ಯಾವ ಹದಿನೇಳೂ ಸಂಸದರೂ ಹೋಗದ ಆ ಸಂದರ್ಭದಲ್ಲಿ ಕೇವಲ ಪ್ರತಾಪ್ ಸಿಂಹ ಅವರನ್ನು ಮಾತ್ರ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡಿರುವುದರ ಹಿಂದಿನ ಉದ್ದೇಶವಾದರೂ ಏನು? ಆದರೂ ಸಿಂಹ ಅವರು “ಯಾರು ಬರಲಿ ಬಿಡಲಿ ತಾನು ಸಭೆಗೆ ಹೋಗಿಯೇ ತೀರುತ್ತೇನೆ” ಎಂದು ಹೇಳಿದ್ದರೂ, ಕೊನೆಯಲ್ಲಿ ಪಕ್ಷದ ಮುಖಂಡರು ತೆಗೆದುಕೊಂಡ ನಿರ್ಣಯಕ್ಕೆ ಅವರು ತಲೆ ಬಾಗಲೇಬೇಕಾಯಿತು. ಯಾಕೆಂದರೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಲ್ಲ ಎಂಬ ಅರಿವು ಮಾನ್ಯ ಸಂಸದರಿಗೂ ಗೊತ್ತು. ಆದರೆ ಲೇಖಕರ ಪ್ರಕಾರ ಮುಖ್ಯಮಂತ್ರಿಗಳಿಂದ ಇಷ್ಟು ದಿನ ನೀರು ಬಿಟ್ಟು ಡ್ಯಾಮ್ ಖಾಲಿ ಮಾಡಿಸಿದ್ದೇ ಪ್ರತಾಪ್ ಸಿಂಹ ಅವರು ಎಂಬಂತೆ ಲೇಖನದಲ್ಲಿ ಬಿಂಬಿಸಲು ಹೊರಟಿದ್ದು ಮಾತ್ರ ಹಾಸ್ಯಾಸ್ಪದ.
ಸಂಸದರು ಟ್ವೀಟ್ ನಲ್ಲಿ ತಾನು ಇಂದು ರಾತ್ರಿ ಮಾಧ್ಯಮದಲ್ಲಿ ನೇರ ಸಂವಾದಕ್ಕೆ ಲಭ್ಯವಿರುವುದಾಗಿ “you all must sympathise me at least for being available and taking your criticism”. ಎಂಬ ವಾಕ್ಯವನ್ನು ಬಳಸಿದ್ದಾರೆ. “ಪಕ್ಷದ ನಿರ್ಣಯಗಳು ತನ್ನ ವೈಯಕ್ತಿಕ ನಿರ್ಧಾರಗಳನ್ನು ಕಟ್ಟಿ ಹಾಕಿದೆ, ಆ ತಪ್ಪಿಗೆ ತಾನು ನಿಮ್ಮ ಟೀಕೆಗಳಿಗೆ ನೇರವಾಗಿ ಲಭ್ಯನಿದ್ದೆನೆ. ಅದಕ್ಕಾಗಿಯಾದರೂ ನನ್ನ ಮೇಲೆ ಕರುಣೆಯಿರಲಿ”. ಎಂಬ ಅರ್ಥದಲ್ಲಿ ಜನರಿಗೆ ವಿಜ್ಞಾಪನೆ ಮಾಡಿರುವ ಸಂದೇಶವದು. ಆಂಗ್ಲಭಾಷೆಯ ಜ್ಞಾನದ ಕೊರತೆಯಿಂದಲೋ ಅಥವ ಸಂಸದರ ಮೇಲಿನ ವೈಯಕ್ತಿಕ ದ್ವೇಷದಿಂದಲೋ ಏನೋ! ಬರೆದ ಭಾವಾರ್ಥವನ್ನ ಅರಿಯಲು ವಿಫಲರಾಗಿದ್ದರಿಂದಲೋ ಗೊತ್ತಿಲ್ಲ, ಆ ಶಬ್ದಗಳ ಕಾಳಜಿಯನ್ನು ತಿರುಚಲು ತುಂಬ ಶ್ರಮ ಪಟ್ಟಿರುವುದು ಅವರ ಬರವಣಿಗೆಯಲ್ಲೇ ಸ್ಪಷ್ಟವಾಗುತ್ತದೆ. ಅವರ ಆ ಶ್ರಮಕ್ಕೆ ನನ್ನ ವೈಯಕ್ತಿಕ ಸಂತಾಪವಿದೆ.
ಲೇಖನದ ನಡುವೆ ಕೆಲವು ಅಭೂತಪೂರ್ವ ಸಲಹೆಗಳನ್ನೂ ಲೇಖಕರು ಮಾನ್ಯ ಸಂಸದರಿಗೆ ನೀಡಿದ್ದಾರೆ. “ನೋಡಿ ನಮ್ಮ ರೈತರಿಗೆ ಇಷ್ಟು ನೀರು ಬೇಕು, ಅದಕ್ಕಿಂತ ಹೆಚ್ಚಿನದನ್ನು ತಮಿಳುನಾಡಿಗೆ ಬಿಡಲು ಸಾಧ್ಯವೇ ಇಲ್ಲ” ಎನ್ನುವ ಅಧ್ಯಯನ ವರದಿಯೊಂದನ್ನು ತಯಾರಿಸಿ ಸರ್ಕಾರಕ್ಕೆ ನೀಡಬೇಕಿತ್ತಂತೆ. ಇಂಥಹ ಬಾಲಿಶ ಸಲಹೆ ಕೊಡುವುದಕ್ಕಿಂತ ಮುಂಚೆ ಲೇಖಕರು ತಾನು ಏನು ಹೇಳಲು ಹೊರಟಿದ್ದೇನೆ ಎಂಬುದನ್ನು ಸ್ವತಃ ಅವರೇ ಅರಿಯುವ ಅಗತ್ಯವಿದೆ. ಅಲ್ಲ ಸ್ವಾಮಿ ಕಾವೇರಿ ಜಲಾನಯನ ಪ್ರದೇಶದ ಅಳತೆ ಎಷ್ಟು, ಯಾವ ಯಾವ ಬೆಳೆಗಳನ್ನು ಅಲ್ಲಿ ಬೆಳೆಯಲಾಗುತ್ತದೆ, ಅದಕ್ಕೆ ಎಷ್ಟು ನೀರು ಬೇಕು ಎಂಬ ಅಂಕಿ ಅಂಶಗಳು ಈಗಾಗಲೇ ಸರ್ಕಾರದ ಬಳಿ ಲಭ್ಯವಿರುತ್ತದೆ. ಅವು ವರುಷದಿಂದ ವರುಷಕ್ಕೆ ಮಹತ್ತರವಾಗಿ ಬದಲಾಗುವಂತಹ ಅಂಕಿ ಅಂಶಗಳಲ್ಲ. ಈಗಾಗಲೇ ಲಭ್ಯವಿರುವ ಅಂಕಿ ಅಂಶಗಳನ್ನು ಸಂಸದರು ಪುನಃ ಸರ್ವೆ ಮಾಡಿ ಸರ್ಕಾರಕ್ಕೆ ಕೊಡಬೇಕಿತ್ತಂತೆ. ಹೋಗಲಿ ಈ ಸಲಹೆಗಳನ್ನು ತಾವೇ ನಾಲ್ಕು ತಿಂಗಳ ಮುಂಚೆ ಸಂಸದರಿಗೆ ನೀಡಬಹುದಿತ್ತಲ್ಲ. ಅಥವಾ ಮುಂದೆ ಸಂಸದರ ನಡೆ ಯಾವ ರೀತಿಯಾಗಿರಬೇಕು, ಆ ಭಾಗದ ಜನರ ಕಲ್ಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಲೇಖನದಲ್ಲಿ ವಿವರಿಸಬಹುದಿತ್ತು. ಇದ್ಯಾವದೂ ಇಲ್ಲದೇ ನಂಜು ಕಾರುವ ಇಂಥಹ ಬರವಣಿಗೆಗಳು ಲೇಖಕರಲ್ಲಿನ ಸಾಮಾನ್ಯ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಲೇಖಕರು ಅರ್ಥಮಾಡಿಕೊಳ್ಳಲು ಪ್ರಯತ್ನಿಸ ಬೇಕಾದ ಕೆಲವು ಸಂಗತಿಗಳು.
#ನ್ಯಾಯಾಲಯಕ್ಕೆ ತಪ್ಪು ಮಾಹಿತಿಯನ್ನು ಕೊಟ್ಡಿದ್ದು ಸಿದ್ರಾಮಯ್ಯನವರ ಸರ್ಕಾರ.
#ವಿರೋಧ ಪಕ್ಷಗಳಿಗೂ ಅರಿವಿಲ್ಲದೇ 10000 ಕ್ಯೂಸಕ್ಸ್ ನೀರನ್ನು ತಾನಾಗಿಯೇ ಬಿಡಲು ಒಪ್ಪಿಕೊಂಡಿದ್ದು ಸಿದ್ರಾಮಯ್ಯ ಸರ್ಕಾರ.
#ನೀರು ಬಿಡುತ್ತೇವೆ ಎಂಬುದು ಮುಖ್ಯಮಂತ್ರಿಯಾದ ತನಗೇ ಗೊತ್ತಿರಲಿಲ್ಲ ಎಂದು ಉಢಾಫೆಯಿಂದ, ನಿಷ್ಕಾಳಜಿಯಿಂದ ಮಾತನಾಡಿದವರು ಸಿದ್ರಾಮಯ್ಯ.
#ಎರಡು ಬಾರಿ ಸರ್ವಪಕ್ಷ ಸಭೆಯ ನಿರ್ಣಯದ ವಿರುದ್ಧವಾಗಿ ತಮಿಳುನಾಡಿಗೆ ನೀರು ಹರಿಸಿದ್ದು ಸಿದ್ರಾಮಯ್ಯ ಸರ್ಕಾರ.
#ಒಂದೇ ಪತ್ರವನ್ನು ಕಾವೇರಿ ಸಮಸ್ಯೆಯ ಬಗ್ಗೆ ಕೇಂದ್ರಕ್ಕೆ ಬರೆದು, ಅದೂ ಕೋರ್ಟ್ ನೀರು ಬಿಡಲು ಆಜ್ಞೆ ಮಾಡಿ ಐದು ದಿನಗಳಾದ ನಂತರ ಎಂಬ ವಾಸ್ತವದ ನಡುವೆ, ಜನರಿಗೆ ಎಂಟು ಪತ್ರ ಬರೆದಿರುವುದಾಗಿ ಅವೆಲ್ಲವೂ ಕಾವೇರಿ ಸಮಸ್ಯೆಯ ಕುರಿತಾದದ್ದು ಎಂಬಂತೆ ಬಿಂಬಿಸಿ, ಜನರನ್ನು ಯಾಮಾರಿಸಿದ್ದು ಸಿದ್ರಾಮಯ್ಯ ಸರ್ಕಾರ.
#ಇನ್ನು ಹರಿಸಲು ನೀರೇ ಇಲ್ಲವಾದಾಗ, ಗೇಟ್ ತೆರೆದರೂ ಹರಿಯದ ನೀರನ್ನು ನ್ಯಾಯಾಂಗ ನಿಂದನೆಯಾದರೂ ಸರಿ ತಮಿಳುನಾಡಿಗೆ ಹರಿಸಲಾರೆವು ಎಂದು ಘರ್ಜಿಸುತ್ತಾ ಜನರಿಗೆ ದಾರಿ ತಪ್ಪಿಸುತ್ತಿರುವುದು ಇದೇ ಸಿದ್ರಾಮಯ್ಯ ಸರ್ಕಾರ. ಇದು ಹೇಗಿದೆಯೆಂದರೆ ಸತ್ತ ಹಾವನ್ನು ಹೊಡೆಯುವ ಪೌರುಷದಂತೆ.
#ಪ್ರತಾಪ್ ಸಿಂಹ ಅವರು ಈ ರಾಜ್ಯದ ಮುಖ್ಯಮಂತ್ರಿಗಳಲ್ಲ ಎಂಬುದು ಲೇಖಕರು ಅರಿಯಬೇಕಾದ ಬಹು ಮುಖ್ಯ ಅಂಶ.
ಈ ಎಲ್ಲ ಎಡಬಿಡಂಗಿ ಕೆಲಸಗಳಿಂದ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡು, ಇದ್ದ ಬದ್ದ ನೀರನ್ನೆಲ್ಲಾ ಹರಿಸಿ, ಈಗ ಸಭೆಗೆ ಹಾಜರಾಗದ ವಿರೋಧ ಪಕ್ಷವನ್ನು ಜನರೆದುರು ವಿಲನ್ ಮಾಡಲು ಹೊರಟಿರುವ ಕಾಂಗ್ರೆಸ್ಸಿನ ಎಮೋಷನಲ್ ಅತ್ಯಾಚಾರವನ್ನು ಅರಿಯದ ಲೇಖಕರು ಸಂಸದರ ವೈಯಕ್ತಿಕ ನಿಂನೆಗೆ ಇಳಿದಿರುವದು ಅವರ ಪೂರ್ವಾಗ್ರಹ ಪೀಡೀತ ಮನೋಭಾವನೆಗೆ ಸಾಕ್ಷಿ.
ಸದ್ಯದ ರಾಜಕೀಯದಲ್ಲಿ ಉತ್ಸಾಹವಿಲ್ಲದ, ಮುಂದಾಲೋಚನೆಗಳೇ ಇಲ್ಲದ ವೃಧ್ದ ರಾಜಕೀಯ ನಾಯಕರುಗಳೇ ತುಂಬಿರುವ ಈ ಸಂದರ್ಭದಲ್ಲಿ, ರಾಜಕೀಯ ಹಿನ್ನೆಲೆಯೇ ಇಲ್ಲದ, ಹಣ ಬಲವಿಲ್ಲದ ಒಬ್ಬ ಯುವ ನೇತಾರ ಹುಟ್ಟಿದ್ದಾನೆಂದರೆ, ಆತನಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೂ ಆತನ ಕಾಲು ಎಳೆಯುವುದು ಬಿಟ್ಟು, ಆತನ ಕಾರ್ಯಗಳಲ್ಲಿ ಸಲಹೆಗಳನ್ನು ನೀಡುತ್ತಾ, ಆತನ ಚಿಕ್ಕ ಚಿಕ್ಕ ಜನೋಪಾಯ ಕೆಲಸಗಳಿಗೂ ಬೆನ್ನು ತಟ್ಟುತ್ತಾ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವಂತೆ ಹುರಿದುಂಬಿಸಬೇಕಾದದ್ದು ಒಬ್ಬ ಪ್ರಭುದ್ಧ ಲೇಖಕನ ಕರ್ತವ್ಯ. ಅದನ್ನು ಬಿಟ್ಟು ಪಕ್ಷದ ನಿರ್ಣಯಗಳಿಗೆ ತಲೆ ಬಾಗಿದ ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ವಿಷ ಕಾರುವುದರಿಂದ ಯಾವ ಸಾಧನೆಯನ್ನೂ ಸಾಧಿಸಿದಂತಾಗದು.
ತನ್ನಲ್ಲಿಯೇ ಸಮಸ್ಯೆಗಳಿಗೆ ಪರಿಹಾರವಿಲ್ಲದ ಲೇಖಕರು ಸಂಸದರ ವೈಯಕ್ತಿಕ ನಿಂದನೆ ಮಾಡುವ ಯೋಗ್ಯತೆಯನ್ನು ಗಳಿಸಿದ್ದಾದರೂ ಎಲ್ಲಿಂದ?? ಪರಿಹಾರವಿಲ್ಲದ ಟೀಕೆಗಳಿಂದ ದೊಡ್ಡವರಾಗುತ್ತೆವೆ ಎಂಬ ಭ್ರಮೆಯಲ್ಲಿ ಲೇಖಕರಿದ್ದರೆ ಅವರಿಗೆ ಮಾನಸಿಕ ಚಿಕಿತ್ಸೆಯ ಅವಶ್ಯಕತೆಯಂತೂ ಖಂಡಿತಾ ಇದೆ. ಕೈಲಾದರೆ ಬೆನ್ನುತಟ್ಟಿ ಇಲ್ಲವೇ ವಾಸ್ತವವನ್ನು ಅರಿಯಲು ಪ್ರಯತ್ನಿಸಿ ಎಂದು ಮಾತ್ರ ನಾನು ಹೇಳಬಲ್ಲೆ.
ರಾಘವ ಆರ್ ಹೆಗಡೆ
ನೇರ್ಲಹದ್ದ, ಶಿರಸಿ
ಮೇಲಿನ ಪ್ರತಿಕ್ರಿಯೆಗೆ ಶಿವಪ್ರಸಾದ್ ಭಟ್ ನೀಡಿರುವ ಮರು ಪ್ರತಿಕ್ರಿಯೆ:
Facebook ಕಾಮೆಂಟ್ಸ್