ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ವಿಶ್ವ ನಾಯಕರು ನಂಬುವರು ಎಂಬ ಭ್ರಮೆಯಲ್ಲಿ ಭಾರತದ ಕುರಿತು ಮತ್ತು ಭಾರತಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರ ಕುರಿತು ಸರಣಿ ಸುಳ್ಳುಗಳನ್ನು ಹೇಳುತ್ತಾ ಹೋದರು. ತಾವೊ೦ದು ದೇಶದ ಮುಖ್ಯಸ್ಥ ಎಂಬುದನ್ನೂ ಮರೆತು ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಹೀದೀನ್’ನ ಸುಪ್ರೀಮ್ ಕಮಾಂಡರನಂತೆ ವರ್ತಿಸಿದರು. ನವಾಜ್ ಷರೀಫ್’ರನ್ನು ಅತ್ಯಂತ ನಗೆಪಾಟಲಿಗೀಡುಮಾಡಿದ೦ತಹ ಸಂಗತಿಯೆಂದರೆ ಹಿಜಬುಲ್ ಮುಜಾಹೀದೀನ್’ನ ಭಯೋತ್ಪಾದಕ ಬುರಹಾನ್ ವಾನಿಯನ್ನು ಮುಗ್ಧ,ಅಮಾಯಕ, ಹುತಾತ್ಮ ನಾಯಕನೆಂದು ಹೇಳಿದ್ದು. ಬುರಹಾನ್ ವಾನಿ ಮಾರಕ ಅಸ್ತ್ರಗಳಾದ ಎಕೆ-47 ಬಂದೂಕುಗಳು,ಗ್ರಾನೈಡಗಳನ್ನು ಹೊತ್ತು ನಿಂತ ವಿಡಿಯೋ ಮತ್ತು ಫೋಟೋಗಳನ್ನು ಜಗತ್ತೇ ನೋಡಿದೆ. ನವಾಜ್ ಷರೀಫ್ ಪ್ರಕಾರ ಭಾರತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಹರಣ ಮಾಡುತ್ತಿದೆಯಂತೆ! ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ಸೂರ್ಯ ಚಂದ್ರರಷ್ಟೇ ಸಾರ್ವತ್ರಿಕ ಸತ್ಯ. ಪಾಕಿಸ್ತಾನದ ಸರಕಾರಿ ಪ್ರಾಯೋಜಿತ ತಾಲಿಬಾನಿಗಳ ವೇಷದಲ್ಲಿರುವ ಪಾಕಿಸ್ತಾನಿ ಸೈನಿಕರು ಮತ್ತು ನೇರವಾಗಿ ಪಾಕಿಸ್ತಾನಿ ಸೈನ್ಯವೇ ಬಲೂಚಿಸ್ತಾನ ಮತ್ತು ಪಿ.ಒ.ಕೆ.ಯಲ್ಲಿಯ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಬಲೂಚಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾವಿರ ಸಾವಿರ ಬಲೂಚಿಗಳ ಅಮಾನವೀಯ ಮಾರಣ ಹೋಮ…ನರಮೇಧ,ಪಿ,ಓ,ಕೆ.ಯಲ್ಲಿ ಅಮಾಯಕ ಜನರ ಮೇಲೆ ಹಲ್ಲೆ ಮಾನವ ಅಧಿಕಾರಗಳ ಸಬಲಿಕರಣವೇ?? ನ್ಯೂಯಾರ್ಕನ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆ ನಡೆಯುತ್ತಿರುವ ಸ್ಥಳದ ಮುಂದೆಯೇ ಬಲುಚೀ ಹೊರಾಟಗಾರರು ಪ್ರದರ್ಶನ ನಡೆಸುತ್ತಿದ್ದಾರೆ, ಅಂಗೈ ಹುಣ್ಣಿಗೆ ಕನ್ನಡಿಯ ಸಾಕ್ಷಿ ಬೇಕೇ?
1947 ಮತ್ತು 1948ರ ಸಂಯುಕ್ತ ರಾಷ್ಟ್ರದ ಗೊತ್ತುವಳಿಯಂತೆ ಕಾಶ್ಮೀರದಲ್ಲಿ ಜನಮತ ಸಂಗ್ರಹವಾಗಬೇಕೆಂದು ನವಾಜ್ ಷರೀಫ್ ಮತ್ತೆ ಒತ್ತಾಯಿಸಿದರು. ಸಂಯುಕ್ತ ರಾಷ್ಟ್ರದ ಗೊತ್ತುವಳಿಯನ್ನು ಸರಿಯಾಗಿ ಓದದೆ ತನ್ನದೇ ರಾಗವನ್ನು ಆಲಾಪಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿಭ್ರಮಣೆಯಾಗಿದೆ. ಈ ಗೊತ್ತುವಳಿಗಳ ಕರಡನ್ನು ಕೂಲಂಕುಷವಾಗಿ ಓದಿದಾಗ ತಿಳಿಯುವ ಸಂಗತಿಯೆಂದರೆ ಈ ಗೊತ್ತುವಳಿಗಳ್ಯಾವೂ ಬಾಧ್ಯವೇ ಅಲ್ಲ. ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವುದು ನಿಯಮಿತವಾಗಿ ಚುನಾವಣೆ ನಡೆದು ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರಕಾರ, ಮುಂದೆ ಬಾಲ ಇರುವ ನಾಯಿಯಂತಿರುವ, ಪಾಕಿಸ್ತಾನಿ ಸ್ಯೂಡೊಡೆಮೋಕ್ರೆಟಿಕ್ (ಹುಸಿ ಪ್ರಜಾಪ್ರಭುತ್ವದ) ಸರಕಾರವಲ್ಲ. ಚುನಾವಣೆಗಿಂತ ದೊಡ್ಡ ಜನಮತಗಣನೆ ಯಾವುದಾದರೂ ಇದೆಯಾ? ಅಮೆರಿಕಾದ ಸೆನೆಟ್ ಸದಸ್ಯರು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವ ಕುರಿತು ಗೊತ್ತುವಳಿಯನ್ನು ಅಮೇರಿಕಾದ ಸೆನೆಟ್’ನಲ್ಲಿ ಮಂಡಿಸಿದ್ದಾರೆ. ಭಾರತದಲ್ಲಿರುವ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವ ಮತ್ತು ಪಾಕಿಸ್ತಾನ ಕುರಿತು ಭಾರತದ ನೀತಿ ಮತ್ತು ದೃಷ್ಟಿಕೋನದಲ್ಲಾದ (paradigm shift -ಪ್ಯಾರಾಡೈಮ್ ಶಿಫ್ಟ್) ಆಮೂಲಾಗ್ರ ಬದಲಾವಣೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ರಿಯಾಕ್ಟೀವ್’ನಿಂದ ಪ್ರೋಯಾಕ್ಟೀವ್ ಆಗಿ ಕೆಂಪು ಕೋಟೆ ಮೇಲಿಂದ ಪ್ರಧಾನ ಮಂತ್ರಿಗಳು ಬಲುಚೀ ಜನರ ಬಗ್ಗೆ ಸಂವೇದನೆ ವ್ಯಕ್ತಪಡಿಸಿದ್ದು,ಅವರ ಬೆಂಬಲಕ್ಕೆ ನಿಂತು ಆಕಾಶವಾಣಿಯಲ್ಲಿ ಬಲುಚೀ ಭಾಷೆಯ ಸೇವೆಗಳನ್ನು ಆರಂಭಿಸಿದ್ದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಪಾಕಿಸ್ತಾನವನ್ನು ಎಲ್ಲಾ ರೀತಿಯಿಂದಲೂ ಬಗ್ಗು ಬಡಿಯಲು ಭಾರತ ಸರಕಾರ ಸಜ್ಜಾಗಿದೆ ಎಂಬ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ರವಾನೆಯಾಗಿದೆ..
ಇನ್ನೂ ವಿದೇಶಾಂಗ ನೀತಿಯ ತಜ್ಞರಾದ ಪಾಕಿಸ್ತಾನದಲ್ಲಿ ಭಾರತದ ಉಚ್ಚಾಯುಕ್ತರಾಗಿ ಸೇವೆ ಸಲ್ಲಿಸಿದ ಪಾರ್ಥಸಾರಥಿ ಹಾಗೂ ಮತ್ತೊರ್ವ ತಜ್ಞ ಕೆ ಸಿ ಸಿಂಗ್’ರಂಥವರ ಸೇವೆಗಳನ್ನು ಸರಕಾರ ಉಪಯೋಗಿಸಿಕೊಳ್ಳಬೇಕು. ಇಂಥರಾಜತಾಂತ್ರಿಕರನ್ನು ದೇಶ ವಿದೇಶಗಳಿಗೆ ಕಳುಹಿಸಿ ಭಾರತದ ವಾದವನ್ನು ಸಮರ್ಥವಾಗಿ ಮಂಡಿಸಿ ಭಾರತದ ಪರ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳಬೇಕು. ಈಗಾಗಲೇ ಸಂಯುಕ್ತ ರಾಷ್ಟ್ರದಲ್ಲಿ ಭಾರತದ ಪ್ರತಿನಿಧಿ ಪಾಕ್ ಪ್ರಧಾನಿಯ ಭಾಷಣಕ್ಕೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿ ಭಯೋತ್ಪಾದಕರ ಕಾರ್ಖಾನೆಯಾದ ಪಾಕಿಸ್ತಾನದ ಉಪದ್ಯಾಪಿತನವನ್ನು ಮತ್ತು ಕುಚೋದ್ಯವನ್ನು ಜಗತ್ತಿನ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟು ಭಾರತ ಭಯೋತ್ಪಾದಕರ ವಿರುದ್ಧ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಹೊಂದಿದೆ ಎಂದು ವಿಶ್ವ ನಾಯಕರ ಮುಂದೆ ಯಶಸ್ವಿಯಾಗಿ ಪ್ರತಿಪಾದಿಸಿದ್ದಾರೆ. ವಿದೇಶಾಂಗ ರಾಜ್ಯ ಸಚಿವರಾದ ಎಂ ಜೆ ಅಕ್ಬರ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನು ಭಾರತದ ಅತ್ಯಂತ ಸಮರ್ಥ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಪಾಕ್’ನ ಹತಾಶೆಯ ಪ್ರತೀಕದಂತಿದ್ದ ನವಾಜ್ ಷರೀಫ್ ಭಾಷಣಕ್ಕೆ ದಿಟ್ಟ ಉತ್ತರ ಕೊಟ್ಟು ಜಗತ್ತಿನ ಮುಂದೆ ಪಾಕಿಸ್ತಾನವನ್ನು ಬೆತ್ತಲುಗೊಳಿಸಿ ಭಯೋತ್ಪಾದಕ ರಾಷ್ಟ್ರದ ಹುಟ್ಟಡಗಿಸುತ್ತಾರೆಂಬುದರಲ್ಲಿ ಎರಡು ಮಾತಿಲ್ಲ.
ಟೈಮ್ಸ್ ನೌ ಸುದ್ದಿ ವಾಹಿನಿಯಲ್ಲಿ ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ತಜ್ಞರೊಂದಿಗಿನ ಸ್ವಾರಸ್ಯಕರ ಚರ್ಚೆ, ಭಾರತ ಪಿ.ಒ.ಕೆ.ಯಲ್ಲಿಯ ಭಯೋತ್ಪಾದಕರ ಶಿಬಿರಗಳ ಮೇಲೆ ಮಾಡಬಹುದಾದ ಸೀಮಿತವಾದ ಆದರೆ ನಿಖರ ದಾಳಿ (surgical strike), ಪರಿಸ್ಥಿತಿ ಉಲ್ಬಣಿಸಿದರೆ ಭಾರತದೊಂದಿಗೆ ಯಾವ್ಯಾವ ದೇಶಗಳು ನಿಲ್ಲಬಹುದು ಮತ್ತು ಈ ಸಂದರ್ಭದಲ್ಲಿ ಚೀನಾದ ಪಾತ್ರ, ಭಾರತ ಅನುಸರಿಸಬೇಕಾದ ನೀತಿ ಮತ್ತು ಸಧ್ಯ ಭಾರತದ ಮುಂದಿರುವ ವಿಕಲ್ಪಗಳ ಕುರಿತು ಬೆಳಕು ಚೆಲ್ಲುತ್ತಿದೆ. ಅಮೇರಿಕಾದಲ್ಲಿ ಪಾಕಿಸ್ತಾನದ ಪತ್ರಿಕಾಗೋಷ್ಟಿಯಿಂದ ಹೊರದಬ್ಬಲ್ಪಟ್ಟು, ಪಾಕಿಸ್ತಾನಿ ಪತ್ರಕರ್ತರೆನಾದರೂ ಭಾರತದ ಪತ್ರಿಕಾಗೋಷ್ಟಿಗೆ ಬಂದಿದ್ದರೆ ಭಾರತವೂ ಹೀಗೆ ಮಾಡುತ್ತಿತ್ತು ಎಂದು ಅಸಂಬದ್ಧ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಎನ್.ಡಿ.ಟಿ.ವಿ.ಯ ಅವಿವೇಕಿ ಪತ್ರಕರ್ತೆ ಹಾಗೂ ಇಂತಹುದೇ ಗುಂಪಿಗೆ ಸೇರಿದ ತಿಳಿದು ತಿಳಿಯದೆನೋ ಭಯೋತ್ಪಾದಕ ಗುಂಪುಗಳನ್ನು ಸಮರ್ಥಿಸುವವರು (apologists) ಭಾರತದ ಮಾನ ಹರಾಜು ಹಾಕುವದಕ್ಕೂ ಹಿಂಜರಿಯುವದಿಲ್ಲ. ಇಂದು(22-09-2016) ರಾತ್ರಿಯ ಟೈಮ್ಸ್ ನೌ ನ ಡಿಬೆಟ್’ನಲ್ಲಿ ಅರ್ಣಬ ಕೇಳಿದ ನೇರ ಪ್ರಶ್ನೆ ‘ನೀವು ಪಾಕ್ ಪ್ರಧಾನಿಯ ಬುರಹಾನ್ ಕುರಿತಾದ ಹೇಳಿಕೆಯನ್ನು ಖಂಡಿಸುವಿರಾ?’ಪಾಕ್ ಪ್ರಧಾನಿಯ ಹೇಳಿಕೆಯನ್ನು ಖಂಡಿಸದೇ ಬುರಹಾನ್ ವಾನಿಯನ್ನು ಸಮರ್ಥಿಸಿಕೊಂಡು ಮಾತನಾಡಿದ ಸುಪ್ರೀಮ್ ಕೊರ್ಟನ ಅಡ್ವೊಕೇಟ ಶಬನಮ್ ಲೋನ್ ಭಾರತದಲ್ಲಿಯೇ ಇದ್ದು ಭಾರತೀಯ ಸೇನೆಯನ್ನು ಖಂಡಿಸಿ ಮಾತನಾಡಿ ಕೊನೆಗೆ ಅರ್ಣಬ ಗೋಸ್ವಾಮಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸಿ ಡಿಬೇಟ್-ನಿಂದ ಹೊರ ನಡೆದರು. ಭಾರತದಲ್ಲಿಯೇ ಇದ್ದು ಪಾಕ್ ಪರ ಮತ್ತು ಉಗ್ರರ ಪರ ಒಲವು ಮತ್ತು ನಿಲುವು ಹೊಂದಿರುವ ಇಂತಹ ದೇಶ ವಿರೋಧಿ ಶಕ್ತಿಗಳನ್ನು ಮೊದಲು ಮಟ್ಟ ಹಾಕಬೇಕು. ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಗಂಟಲು ಹರಿಯುವಂತೆ ಕಿರುಚುತ್ತಿದ್ದ ಅವಾರ್ಡ್ ವಾಪಸಿ ಬ್ರಿಗೇಡ, ಜೆಎನ್.ಯು. ವಿಷಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬೆಂಬಲಿಸಿದ ತಥಾಕಥಿತ ಬುದ್ಧಿಜೀವಿಗಳಿಗೆ ಭಾರತದ ಮಾತೃಭೂಮಿಗಾಗಿ ಜೀವ ತ್ಯಾಗ ಮಾಡಿದ ಸೈನಿಕರು ಕಾಣುತ್ತಿಲ್ಲವೇ??
ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಟ್ಟುಕೊಳ್ಳವಂತೆ ಯಾವುದೇ ಪೂರ್ವಾಗ್ರಹವಿಲ್ಲದೆ ದೇಶಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧ ಅತ್ಯಂತ ಗಟ್ಟಿಯಾಗಿ,ನೇರವಾಗಿ 120ಕೋಟಿ ಭಾರತಿಯರ ಧ್ವನಿಯಾಗಿ ಭಯೋತ್ಪಾದಕರ ಸಮರ್ಥಕರನ್ನು ಎಕ್ಸ್ಪೋಸ್ ಮಾಡುವ ಟೈಮ್ಸ್ ನೌ’ನ ಅರ್ಣಬ ಗೋಸ್ವಾಮಿಯವರನ್ನು ಮೆಚ್ಚಲೆಬೇಕು.
1993-1994ರಲ್ಲಿ ಇಂಡಿಯಾ ಟುಡೇಯಲ್ಲಿ ಓದಿದ ಲೇಖನವೊಂದನ್ನು ಮೆಲುಕು ಹಾಕುವದು ಇಲ್ಲಿ ಪ್ರಸ್ತುತವೆನಿಸುತ್ತದೆ. ಆ ಲೇಖನದ ಪ್ರಕಾರ 1984ರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಸ್ರೇಲ್’ನ ಸಹಕಾರದಿಂದ ಪಾಕ್’ನ ಪರಮಾಣು ಕೇಂದ್ರವಾದ ಖೌತಾದ ಮೇಲೆ ದಾಳಿ ನಡೆಸುವ ತಯಾರಿಯಲ್ಲಿದ್ದರಂತೆ. ಪಾಕಿಸ್ತಾನದ ಖೌತಾದಲ್ಲಿ ಚೀನಾದ ಸಹಯೋಗದಿಂದ ಪರಮಾಣು ಬಾಂಬ್ ತಯಾರಿಸಲು ಬೇಕಾದ ಎನ್ರಿಚ್ಡ್ಯುರೇನಿಯಮ್ ಸ೦ಸ್ಕರಿಸುವ ಘಟಕ ಕಾರ್ಯಾರಂಭ ಮಾಡುವ ಪ್ರಾರಂಭಿಕ ಹಂತದಲ್ಲಿತ್ತು. ಹಾಗೇನಾದರೂ ಆಗಿದ್ದರೆ ಪಾಕಿಸ್ತಾನದ ಪರಮಾಣು ಬಾಂಬ್ ತಯಾರಿಸುವ ಕನಸು ನನಸಾಗುತ್ತಿರಲಿಲ್ಲ ಮತ್ತು ಪಾಕಿಸ್ತಾನ ಜಗತ್ತನ್ನು ನ್ಯೂಕ್ಲೀಯರ ಬಾಂಬ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಲೂ ಆಗುತ್ತಿರಲಿಲ್ಲ. ಆದರೆ ಈ ಸುದ್ದಿ ಹೇಗೋ ಸೋರಿಕೆಯಾಗಿ ಅಮೇರಿಕದ ಅಧ್ಯಕ್ಷರ ಕಿವಿ ತಲುಪಿ, ಅಮೇರಿಕದ ಒತ್ತಡದಿಂದ ಭಾರತದ ಮಾಸ್ಟರ್ ಪ್ಲ್ಯಾನ್ ವಿಫಲವಾಗಿತ್ತು. ವಿಪರ್ಯಾಸವೆಂದರೆ ಮುಂದೆ ಕೆಲ ಕಾಲದ ನಂತರ ಇಂದಿರಾ ಗಾಂಧಿ ಹಂತಕರ ಗುಂಡಿಗೆ ಬಲಿಯಾಗಿದ್ದರು.
ಭಾರತ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವುದೇ ಟಿ.ವಿ. ಚಾನಲ್’ನ ಡಿಬೇಟ್’ನಲ್ಲಿ ನಿರ್ಧರಿಸಲಾಗುವದಿಲ್ಲ,ಈಗಾಗಲೇ ಪ್ರಧಾನ ಮಂತ್ರಿಗಳು ದೇಶದ ಸೈನ್ಯಕ್ಕೆ ಉರಿ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು ಸಂಪೂರ್ಣ ಅಧಿಕಾರ ನೀಡಿದ್ದಾರೆ. ನಮ್ಮ ಸೈನ್ಯ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸುವದೆಂಬ ವಿಶ್ವಾಸ ಪ್ರತಿಯೊಬ್ಬ ಭಾರತಿಯನಿಗೂ ಇದೆ. ಭಾರತ ಅನುಸರಿಸಬೇಕಾದ ನೀತಿ ಮತ್ತು ರಣತಂತ್ರಗಳ ಕುರಿತು ನಿರ್ಧರಿಸಲು ರಾಷ್ಟ್ರೀಯ ಭದ್ರತಾ ಸಲಹಾಕಾರರಾದ ಚಾಣಕ್ಯ ತಂತ್ರಗಳಲ್ಲಿ ನಿಸ್ಸೀಮರಾದ ಅಜಿತ್ ದೋವಾಲ್ ಇದ್ದಾರೆ. ಅನೇಕ ವರ್ಷಗಳಿಂದ ಕಾಡುತ್ತಿದ್ದ ರಾಜಕೀಯ ಇಚ್ಛಾಶಕ್ತಿಯ ಮತ್ತು ಸಮರ್ಥ ನಾಯಕತ್ವದ ಕೊರತೆ ನರೇಂದ್ರ ಮೋದಿಯ ನಿರ್ಣಾಯಕ ನಾಯಕತ್ವದಿಂದ ದೂರವಾಗಿದೆ. ಊರಿಯ ಉರಿ ಆರಿ ತಣ್ಣಗಾಗುವ ಮೊದಲೇ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸದಿದ್ದಲ್ಲಿ ಭಾರತ ಪ್ರತಿಕ್ರಿಸುವ ಅವಕಾಶವನ್ನು ಕಳೆದುಕೊಳ್ಳಬಹುದೇನೋ ಎಂಬ ಶಂಕೆ ಜನರಲ್ಲಿ ಮೂಡುತ್ತಿದೆ.
ಸೈನಿಕ ಹಾಗೂ ರಾಜತಾಂತ್ರಿಕ ಮಾರ್ಗಗಳ ಹೊರತಾಗಿಯೂ ಭಾರತ ಅಂತರಿಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಯೋತ್ಪಾದಕರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವರ ವಿರುದ್ದಕಠಿಣ ಕ್ರಮ ಜರುಗಿಸಬೇಕು. ಭಾರತೀಯ ಸೇನೆಯನ್ನು ಜರಿಯುವ,ಭಯೋತ್ಪಾದಕರನ್ನು ವೈಭವಿಕರಿಸುವ ಯಾವುದೇ ಚಲನ ಚಿತ್ರ , ಸಾಹಿತ್ಯ,ನಾಟಕಗಳಿಗೆ ಅವಕಾಶ ನೀಡಬಾರದು. ದೇಶಕ್ಕಾಗಿ ಪ್ರಾಣತ್ತೆತ್ತ ಮಹನೀಯರ ಚರಿತ್ರೆಗಳು,ದೇಶ ಭಕ್ತಿಯನ್ನು ಜಾಗೃತಗೊಳಿಸುವ ಭಾರತೀಯ ಸಂಸ್ಕೃತಿಯ ಶ್ರೇಷ್ಟತೆಯನ್ನು ಸಾರುವ ಗದ್ಯ ಪದ್ಯಗಳನ್ನು ಶಾಲಾ ಕಾಲೇಜ್’ಗಳ ಪಠ್ಯ ಕ್ರಮದಲ್ಲಿ ಅಳವಡಿಸಬೇಕು. ಅಂದಾಗ ಮಾತ್ರ ನಿಜ ಅರ್ಥದಲ್ಲಿ ಭಾರತದ ರಾಷ್ಟ್ರ ನಿರ್ಮಾಣ ಸಾಧ್ಯ.
Facebook ಕಾಮೆಂಟ್ಸ್