X

ಮುಖ್ಯಮಂತ್ರಿಗಳೇ, ದಯವಿಟ್ಟು ವಾನಪ್ರಸ್ತಕ್ಕೆ ಹೊರಟು ಹೋಗಿ!

ಅಂತರ್ಜಾಲದ ಜಾಲತಾಣವೊಂದರಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು: ಕರ್ನಾಟಕದ ಇದುವರೆಗಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು?, ಎಂದು. ಅದಕ್ಕೆ ಉತ್ತರಿಸಿದ ಮಹನೀಯರೊಬ್ಬರು, “ಕರ್ನಾಟಕ ಕಂಡ ಇದುವರೆಗಿನ ಅಯೋಗ್ಯ ಮತ್ತು ಅಸಮರ್ಥ (ಇನ್ನೂ ಎಷ್ಟೋ ವಿಶೇಷಣಗಳನ್ನು ಬೇಕಾದರೂ ಕೊಡಿ; ಅವೆಲ್ಲ ಈ ವ್ಯಕ್ತಿಯ ಪೂರ್ಣ ವ್ಯಕ್ತಿತ್ವವನ್ನು ಹಿಡಿದಿಡುವುದಿಲ್ಲವೆಂದೇ ಅನಿಸುತ್ತದೆ) ಮುಖ್ಯಮಂತ್ರಿ ನಿದ್ರಾಮಯ್ಯ. ಇಂಥ ವ್ಯಕ್ತಿ ಕರ್ನಾಟಕದಲ್ಲಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಅಸಂಭವ. ಆದ್ದರಿಂದ ಸಾಧ್ಯವಾದರೆ ಒಮ್ಮೆ ಅವರ ದರ್ಶನ ಭಾಗ್ಯ ಪಡೆದು ಆಶೀರ್ವಾದ ಪಡೆದು ಬನ್ನಿ. ಈ ವ್ಯಕ್ತಿ ಬಿಹಾರದ ಲಾಲೂ, ನಿತೀಶ್, ಉತ್ತರಪ್ರದೇಶದ ಮುಲಾಯಂ, ಮಾಯಾವತಿ, ಮಹಾರಾಷ್ಟ್ರದ ಶರದ್ ಪವಾರ್ ಈ ಎಲ್ಲರನ್ನೂ ತನ್ನ ಅಸಮರ್ಥತೆ ಮತ್ತು ಉಡಾಫೆಯಲ್ಲಿ ಮೀರುತ್ತಾರೆ” ಎಂದು ಬರೆದಿದ್ದರು. ಅವರ ಶಬ್ದಗಳು ಕೆಲವು ಕಡೆಗಳಲ್ಲಿ ತೀರಾ ಕಟುವಾದವೆಂದು ಅನ್ನಿಸಿದರೂ ಅದು ಜನಸಾಮಾನ್ಯನೊಬ್ಬನ ಅತ್ಯಂತ ನೋವಿನ ಪ್ರತಿಕ್ರಿಯೆ ಎಂದಷ್ಟೇ ಭಾವಿಸಿಕೊಂಡರೆ ಮೇಲಿನ ಮಾತುಗಳಲ್ಲಿ ಉತ್ಪ್ರೇಕ್ಷೆಯೇನೂ ಕಾಣುವುದಿಲ್ಲ. ಬೇರೆ ರಾಜ್ಯಗಳಲ್ಲಿ ಹದಿನೈದಿಪ್ಪತ್ತು ವರ್ಷ ಒಂದೇ ಪಕ್ಷ, ಒಬ್ಬರೇ ವ್ಯಕ್ತಿ ರಾಜ್ಯವಾಳಿದಾಗ ಜನ ರೋಸಿ ಹೋಗಿ ಚುನಾವಣೆಯಲ್ಲಿ ಭಿನ್ನ ಪಕ್ಷವನ್ನು ಆರಿಸಿ ತಂದದ್ದುಂಟು. ಆದರೆ, ಸಿದ್ದರಾಮಯ್ಯನವರು ತನ್ನ ಮೊದಲ ಟರ್ಮ್ ಮುಗಿಯುವುದಕ್ಕೆ ಇನ್ನೂ ಎರಡು ವರ್ಷ ಇರುವಾಗಲೇ ಜನರ ಕಣ್ಣಲ್ಲಿ ಸಣ್ಣವರಾಗಿದ್ದಾರೆ. ಜನತಾ ಜನಾರ್ದನನಿಗೆ ರೇಜಿಗೆ ಹುಟ್ಟಿಸಿದ್ದಾರೆ. ಈ ಮನುಷ್ಯನ ಆಡಳಿತ ಸಾಕಪ್ಪಾ ಸಾಕು ಎಂದು ಸ್ವತಃ ಕಾಂಗ್ರೆಸ್ ಪಕ್ಷದೊಳಗಿನ ನಾಯಕರಿಗೇ ಅನ್ನಿಸತೊಡಗಿದೆ.

ಇವರು ಮೂರು ವರ್ಷಗಳಲ್ಲಿ ಮಾಡಿಟ್ಟ ಅಧ್ವಾನಗಳನ್ನು ಪಕ್ಕಕ್ಕಿಟ್ಟು ಸದ್ಯಕ್ಕೆ ಸುಡುಸುಡುವ ಸುದ್ದಿಯಾಗಿರುವ ಕಾವೇರಿ ವಿವಾದದಲ್ಲಿ ಸಿದ್ದರಾಮಯ್ಯನವರು ಹೇಗೆ ನಡೆದುಕೊಂಡರು ಎಂಬುದನ್ನು ವಿಶ್ಲೇಷಿಸೋಣ. ಕಾವೇರಿ ಸಮಸ್ಯೆ ಪ್ರತಿ ವರ್ಷ ಯಾವ ತಿಂಗಳಲ್ಲಿ ಬಿಗಡಾಯಿಸುತ್ತದೆ ಎಂದು ತಿಳಿಯಲು ನಾವು ಪಿಎಚ್‍ಡಿ ಮಾಡಬೇಕಿಲ್ಲ; ಈ ಹಿಂದಿನ 8-10 ವರ್ಷಗಳ ಪತ್ರಿಕಾ ವರದಿಗಳನ್ನು ಅವಲೋಕಿಸಿದರೆ ಸಾಕು. 1997ರಿಂದ ಇಂದಿನವರೆಗೂ ಪ್ರತಿ ವರ್ಷ ಕಾವೇರಿ ಸಮಸ್ಯೆ ಭುಗಿಲೆದ್ದಿರುವುದು ಸೆಪ್ಟೆಂಬರ್ ತಿಂಗಳಲ್ಲೇ. ಇದಕ್ಕೆ ಕಾರಣವೂ ಇದೆ. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಕರ್ನಾಟಕದ ಮೇಲೆ ಒಳ್ಳೆಯ ಮುಂಗಾರು ಬಿದ್ದರೆ ಕಾವೇರಿ ತುಂಬಿ ಹರಿಯುತ್ತಾಳೆ. ಆಗ ಕರ್ನಾಟಕಕ್ಕೆ ಕಾವೇರಿ ನೀರನ್ನು ಮೆಟ್ಟೂರಿನತ್ತ ಹರಿಸಲು ಯಾವ ತೊಂದರೆಯೂ ಇಲ್ಲ. ತಮಿಳುನಾಡಿನಲ್ಲಿ ಮಳೆ ಶುರುವಾಗುವುದು ಸೆಪ್ಟೆಂಬರ್ ಕೊನೆಯ ವಾರದಲ್ಲಿ, ಇಲ್ಲವೇ ಅಕ್ಟೋಬರ್ ಪ್ರಾರಂಭದಲ್ಲಿ. ಹಾಗಾಗಿ ತಮಿಳುನಾಡಿನಲ್ಲಿ ಸೆಪ್ಟೆಂಬರ್ ಎಂಬುದು ನಮ್ಮ ಎಪ್ರೀಲ್-ಮೇ ತಿಂಗಳ ಸಮಸ್ಯೆಗೆ ಸಮ. ಸೆಪ್ಟೆಂಬರ್ ಹೊತ್ತಿಗೆ ಕರ್ನಾಟಕದಲ್ಲಿ ಮುಂಗಾರು ಕ್ಷೀಣವಾದರೆ ಅದರ ನೇರ ಪರಿಣಾಮ ಕಾಣಿಸಿಕೊಳ್ಳುವುದು ಕನ್ನಂಬಾಡಿಯ ನೀರಿನ ಮಟ್ಟದಲ್ಲಿ. ಇದುವರೆಗೆ ನೀರು ಬಿಟ್ಟಿದ್ದೀರಿ, ಈಗಲೂ ಬಿಡಿ ಎಂದು ತಮಿಳುನಾಡು ಕ್ಯಾತೆ ತೆಗೆಯುವ ಮೂಲಕ ಕಾವೇರಿಯ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಸೆಪ್ಟೆಂಬರ್ ತಿಂಗಳ ಕಾವೇರಿ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರಕಾರ ಎರಡು ಮೂರು ತಿಂಗಳ ಮೊದಲೇ ತಕ್ಕ ತಯಾರಿ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ. ಆದರೆ, ಸಿದ್ದರಾಮಯ್ಯ ಆಗಲೀ ಅವರ ಪಕ್ಷಕ್ಕಾಗಲೀ ಕಾವೇರಿ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲವಾಗಿದೆ. ಇಂಥದೊಂದು ವಿವಾದ ಅತಿ ಶೀಘ್ರದಲ್ಲೇ ಸುತ್ತಿಕೊಳ್ಳಲಿದೆ ಎಂಬ ವಿಷಯ ಗೊತ್ತಿದ್ದೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೂನ್ 14ರಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಾವೇರಿ ನದಿ ನೀರಿನ ನಿರ್ವಹಣಾ ಮಂಡಳಿಯೊಂದನ್ನು ಸ್ಥಾಪಿಸಬೇಕು ಎಂಬುದು ತಮಿಳುನಾಡಿನ ಬೇಡಿಕೆ. ಆಕೆ ಅಂಥದೊಂದು ಬೇಡಿಕೆ ಇಟ್ಟಾಗ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಅದನ್ನು ಸ್ವಾಗತಿಸಬೇಕಾಗಿತ್ತು. “ಆ ಮಂಡಳಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ತಜ್ಞರ ಉಪಸ್ಥಿತಿ ಸಮಪ್ರಮಾಣದಲ್ಲಿರಲಿ. ಯಾರಿಗೆ ಅನ್ಯಾಯವಾಗಿದೆ ಎಂಬುದರ ವೈಜ್ಞಾನಿಕವಾದ ವಿಶ್ಲೇಷಣೆ ನಡೆಯಲಿ” ಎಂದು ಅವರು ಹೇಳಬೇಕಾಗಿತ್ತು. ಆದರೆ ಮಂಡಳಿ ರಚನೆ ಬೇಡವೇ ಬೇಡ ಎಂದು ಸಿದ್ದರಾಮಯ್ಯ ನಾಲ್ಕು ಸಾಲಿನ ಪತ್ರ ಬರೆದು ಕೈತೊಳೆದುಕೊಂಡರು. ಇದರಿಂದ ತಮಿಳುನಾಡು ಮತ್ತು ಕೇಂದ್ರ ಸರಕಾರಗಳೆರಡೂ ಇದುವರೆಗೆ ಅನ್ಯಾಯವಾಗಿರುವುದು ತಮಿಳುನಾಡಿಗೇನೇ; ನಿರ್ವಹಣಾ ಮಂಡಳಿ ರಚನೆಯಾದರೆ ವಸ್ತುನಿಷ್ಠವಾದ ತನಿಖೆ ನಡೆದು ಸರಿಯಾದ ತೀರ್ಪು ಬರುತ್ತದೆಂಬ ಭಯದಿಂದಲೇ ಕರ್ನಾಟಕ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಭಾವಿಸುವಂತಾಯಿತು.

2002ರ ಪರಿಸ್ಥಿತಿಯನ್ನೊಮ್ಮೆ ನೆನಪಿಸಿಕೊಳ್ಳೋಣ. ಆಗ ಕೇಂದ್ರದಲ್ಲಿದ್ದದ್ದು ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ; ಎಸ್.ಎಂ. ಕೃಷ್ಣ ಮುಖ್ಯಮಂತ್ರಿ. ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ಆಡಳಿತ. ಎಂದಿನಂತೆ ಆಗಲೂ ಆಕೆಯದ್ದು ಇದೇ ವರಾತ. ಕಾವೇರಿ ಎಂದೊಡನೆ ಸಿಕ್ಕಸಿಕ್ಕ ವೇದಿಕೆಗಳನ್ನು ಬಳಸಿಕೊಂಡು ತನ್ನ ದಯನೀಯಾವಸ್ಥೆಯನ್ನು ಲೋಕಕ್ಕೆ ತೋರಿಸುವ ಆಕೆಯ ಗುಣ ಆಗೇನೂ ಬೇರೆಯಾಗಿರಲಿಲ್ಲ. ಪ್ರಧಾನಿಯ ಬಳಿ ನಿಯೋಗ ಒಯ್ಯುವುದು, ಕರ್ನಾಟಕದ ಮೇಲೆ ಒತ್ತಡ ತರುವಂತೆ ಒತ್ತಾಯಿಸುವುದು ಎಲ್ಲವೂ ನಡೆದಿತ್ತು. ಆದರೆ ಮಾಧ್ಯಮಗಳ ಮೂಲಕ ದೊಂಬರಾಟ ನಡೆಸಲು ಬಯಸದ ಎಸ್.ಎಂ. ಕೃಷ್ಣ ಮೌನವಾಗಿದ್ದುಕೊಂಡೇ ಪರದೆಯ ಹಿಂದೆ ಬಹಳಷ್ಟು ಕಾರ್ಯತಂತ್ರಗಳನ್ನು ಹೆಣೆದರು. ಸಂಸದರಾಗಿದ್ದ ಅನಂತ್ ಕುಮಾರ್ ಅವರನ್ನು ಬಳಸಿಕೊಂಡು ವಾಜಪೇಯಿಯವರ ವಿಶ್ವಾಸ ಸಂಪಾದಿಸಿದ ಕೃಷ್ಣ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದರು. ಇದರಿಂದಾಗಿ ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ಐತೀರ್ಪು ಕರ್ನಾಟಕದ ಪರವಾಗಿ ಬರುವಂತೆ ನೋಡಿಕೊಂಡರು. ಅದಕ್ಕೂ ಹಿಂದೆ ವಾಜಪೇಯಿಯವರು ಕಾವೇರಿ ನೀರು ಬಿಡುವಂತೆ ಸೂಚಿಸಿದ್ದಾಗ ಕೃಷ್ಣ, “ನನ್ನ ಮೊದಲ ಆದ್ಯತೆ ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವುದು. ಅದನ್ನು ಬದಿಗಿಟ್ಟು ತಮಿಳುನಾಡಿಗೆ ಬೇಸಾಯಕ್ಕಾಗಿ ನೀರು ಬಿಡಲು ಸಾಧ್ಯವೇ ಇಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದರು. ರಾಜ್ಯದ ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ರಾಜ್ಯವೇ ಒಗ್ಗಟ್ಟಾಗಿ ನಿಂತಿದೆ ಎಂಬ ಸಂದೇಶವನ್ನು ಪಕ್ಕದ ತಮಿಳುನಾಡಿಗೂ ಕೇಂದ್ರಕ್ಕೂ ರವಾನಿಸಿದ್ದರು. ಕೃಷ್ಣ ಅವರ ನಡೆಯನ್ನು ಹದಿನೈದು ವರ್ಷಗಳ ನಂತರವೂ ನಾವು ನೆನೆಸಿಕೊಳ್ಳುತ್ತೇವೆಂದರೆ ಅದಕ್ಕೆ ಕಾರಣ ಅವರ ಚಾಣಾಕ್ಷತನ, ಮುತ್ಸದ್ದಿತನಗಳ ಆಡಳಿತವೇ ಅಲ್ಲವೆ?

ನಮ್ಮ ಈಗಿನ ಮುಖ್ಯಮಂತ್ರಿಗಳು ಮಾಡಿದ್ದೇನು? ಜೂನ್ 14ರಿಂದ ಸೆಪ್ಟೆಂಬರ್ 13ನೇ ತಾರೀಖಿನವರೆಗಿನ ಮೂರು ತಿಂಗಳ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಒಂದೇ ಒಂದು ಬಾರಿಯೂ ಪ್ರಧಾನಿಗಳು ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲವೇ? ಸೆಪ್ಟೆಂಬರ್ ಎರಡನೇ ವಾರದಲ್ಲಿ ಇನ್ನೇನು ಸುಪ್ರೀಂ ಕೋರ್ಟ್‍ನಿಂದ ತೀರ್ಪು ಹೊರ ಬೀಳುತ್ತದೆ ಎಂಬುದು ಖಾತರಿಯಾದ ಮೇಲೆ ಮುಖ್ಯಮಂತ್ರಿಗಳು ಮೇಲಿಂದ ಮೇಲೆ ಪತ್ರಗಳನ್ನು ಬರೆದಿದ್ದಾರೆ. ಪ್ರಧಾನಿಗೆ ಎಂಟು ಪತ್ರ ಬರೆದೆ ಎಂದೇ ನಿಡುಸುಯ್ಯುತ್ತಿರುವ ಮುಖ್ಯಮಂತ್ರಿಗಳಿಗೆ ಆ ಸಮಯದಲ್ಲಿ ಒಂದು ಫೋನ್ ಕರೆ ಮಾಡಿ ನೇರವಾಗಿ ಮಾತಾಡಿ ಸಮಸ್ಯೆಯನ್ನು ವಿವರಿಸೋಣ ಎಂದು ಏಕೆ ಅನ್ನಿಸಲಿಲ್ಲ? ಮುಖ್ಯಮಂತ್ರಿಗಳು ಎಂಟು ಪತ್ರ ಬರೆದೆ ಎಂದದ್ದೂ ಸುಳ್ಳು ಎಂದು ಇದೀಗ ಗೊತ್ತಾಗಿದೆ. ಪತ್ರಿಕೆಗಳಿಗೆ ಅವರು ಕೊಟ್ಟಿರುವುದು ಐದು ಪತ್ರಗಳ ವಿವರವನ್ನು ಮಾತ್ರ. ಇದರಲ್ಲಿ ಎರಡು ಪತ್ರಗಳು ಮಹದಾಯಿಗೆ ಸಂಬಂಧಿಸಿದವು. ಇನ್ನುಳಿದ ಪತ್ರಗಳಲ್ಲಿ ನೇರವಾಗಿ ಕಾವೇರಿ ಸಮಸ್ಯೆಯನ್ನು ಪ್ರಸ್ತಾಪಿಸಿ “ಪ್ರಧಾನಿಗಳೇ, ನ್ಯಾಯ ಕೊಡಿಸಿ” ಎಂದು ಕೇಳಿದ್ದು ಕೇವಲ ಒಂದು ಪತ್ರದಲ್ಲಿ ಮಾತ್ರ! ಅದನ್ನು ಅವರು ಪ್ರಧಾನಿಗೆ ರವಾನಿಸಿದ್ದು ಸೆಪ್ಟೆಂಬರ್ 9ರಂದು; ಅಂದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ!

ಒಂದು ಇಂಗ್ಲೀಷ್ ಸುದ್ದಿ  ವಾಹಿನಿಯಲ್ಲಿ ಒಬ್ಬ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದರು: “ಈ ಕಾವೇರಿ ಸಮಸ್ಯೆಯೇನೂ ಇಂದು ನಿನ್ನೆಯದಲ್ಲ. ರಾಮಕೃಷ್ಣ ಹೆಗಡೆ, ಎಂ.ಜಿ. ರಾಮಚಂದ್ರನ್ ಕಾಲದಲ್ಲೂ ಎರಡೂ ರಾಜ್ಯಗಳು ಕೈಕೈ ಮಿಲಾಯಿಸುವಷ್ಟು ತೀವ್ರತೆ ಪಡೆದುಕೊಳ್ಳುತ್ತಿತ್ತು. ಆದರೆ ಆಗೆಲ್ಲ ಎಂಜಿಆರ್, ಹೆಗಡೆಯವರಿಗೆ ಒಂದು ಫೋನ್ ಕರೆ ಮಾಡಿ, ನಾನು ಅಲ್ಲಿಗೇ ಬರುತ್ತಿದ್ದೇನೆ ಎಂದು ಹೇಳುತ್ತಿದ್ದರು. ಇಬ್ಬರೂ ಬೆಂಗಳೂರಲ್ಲಿ ಕೂತು ಸಮಸ್ಯೆಯನ್ನು ಉಭಯ ಪಕ್ಷಗಳಿಗೂ ಸಮ್ಮತವಾಗುವ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು”. ಹೌದು, ಆ ಕಾಲದಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಾಯಕರಿಗೆ ಹೆಗಲ ಮೇಲೆ ಕೈ ಹಾಕಿ ಕುಶಲ ಕೇಳುವಷ್ಟು ಸ್ನೇಹ ಸಂಬಂಧ ಇತ್ತು. ಇಂಥ ಜಟಿಲ ಸಮಸ್ಯೆಗಳನ್ನು ಕೋರ್ಟಿಗೆಳೆದು ವರ್ಷಾನುಗಟ್ಟಲೆ ಅಲೆದಾಡುವ ಬದಲು ದ್ವಿಪಕ್ಷೀಯ ಮಾತುಕತೆಯಲ್ಲಿ ಪರಿಹರಿಸಿಕೊಳ್ಳುವ ಜಾಣತನ ಇತ್ತು. ತಮ್ಮ ರಾಜ್ಯದ ಹಿತಾಸಕ್ತಿ ಕಾಪಾಡುವುದರ ಜೊತೆಗೆ ನೆರೆ ರಾಜ್ಯದ ರೈತರ ಸಂಕಷ್ಟವನ್ನೂ ಅರ್ಥ ಮಾಡಿಕೊಳ್ಳುವ ಹೃದಯ ವೈಶಾಲ್ಯವಿತ್ತು. ಪ್ರತಿ ವರ್ಷ ಜನರ ಆಕ್ರೋಶ ಭುಗಿಲೇಳುವ ಮೊದಲೇ ಅದನ್ನು ಗ್ರಹಿಸಿ ಸಮಸ್ಯೆಗೊಂದು ಇತಿಶ್ರೀ ಹಾಡುವ ಮುತ್ಸದ್ದಿತನ ಇಬ್ಬರಲ್ಲೂ ಇತ್ತು. ಆದರೆ ಈಗ ಮಾತ್ರ ಅಂಥ ಯಾವ ಜಾಣ ನಡೆಗಳನ್ನೂ ನಾವು ಇಬ್ಬರು ಮುಖ್ಯಮಂತ್ರಿಗಳಿಂದಲೂ ನಿರೀಕ್ಷಿಸದಂತಾಗಿದೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಮೂರು ವರ್ಷಗಳಲ್ಲಿ ತನ್ನ ನೆರೆಯ ಯಾವ ರಾಜ್ಯದೊಂದಿಗೂ ಸ್ನೇಹ ಸೌಹಾರ್ದದ ಸಂಬಂಧವನ್ನು ಗಟ್ಟಿಗೊಳಿಸಿಕೊಂಡ ಉದಾಹರಣೆ ಇಲ್ಲ. ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ – ಈ ಯಾವ ರಾಜ್ಯದ ಮುಖ್ಯಮಂತ್ರಿಗಳ ಜೊತೆಗಾದರೂ ಇವರು ವೇದಿಕೆ ಹಂಚಿಕೊಂಡ, ಕೈ ಕುಲುಕಿ ಕುಶಲ ವಿಚಾರಿಸಿದ, “ಬನ್ನಿ, ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ” ಎಂದ ದೃಷ್ಟಾಂತ ಇವೆಯೇ ಹೇಳಿ! ಒಂದು ರೀತಿಯಲ್ಲಿ ಕರ್ನಾಟಕ ಉಳಿದೆಲ್ಲ ರಾಜ್ಯಗಳಿಂದ ಸಂಬಂಧಗಳನ್ನು ಬಲವಂತವಾಗಿ ಕಡಿದುಕೊಂಡು ಗೃಹಬಂಧನದಲ್ಲಿ ಕೂತಿರುವಂತೆ ವರ್ತಿಸುತ್ತಿದೆ. ನೀವು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತಾಡಿ. ನಂತರ ಅಗತ್ಯ ಬಿದ್ದರೆ ಕೇಂದ್ರ ಮಧ್ಯ ಪ್ರವೇಶಿಸಲಿದೆ – ಎಂದು ಹೇಳಿದರೂ ಸಿದ್ದರಾಮಯ್ಯನವರು ಯಾರೊಂದಿಗೂ ಮಾತುಕತೆಗಿಳಿದಿರಲಿಲ್ಲ. ಅಹಂಕಾರ, ದಾಷ್ಟ್ರ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಇವರಿಗೊಂದು ಅವ್ಯಕ್ತ ಭಯ ಕಾಡುವಂತಿದೆ. ಕರ್ನಾಟಕ ಇದುವರೆಗೆ ಸ್ಪಷ್ಟ ಜಲನೀತಿ ರೂಪಿಸಿಕೊಂಡಿಲ್ಲ. ರಾಜ್ಯದಲ್ಲಿ ಬರ ಬಿದ್ದಾಗ ಯಾವ ಬಗೆಯ ಪರಿಹಾರೋಪಾಯಗಳನ್ನು ರೂಪಿಸಿಕೊಳ್ಳಬೇಕೆಂಬ ವಿಚಾರವೂ ಸ್ಪಷ್ಟವಿಲ್ಲ. ಕಾವೇರಿ ವಿಚಾರದಲ್ಲಿ ತಮಿಳುನಾಡು ಹೇಗೋ ಕೃಷ್ಣಾ ವಿಚಾರದಲ್ಲಿ ಕರ್ನಾಟಕ ಹಾಗೆ; ಅಂದರೆ ಮುಖಜಭೂಮಿಯನ್ನು ಪಡೆದ ರಾಜ್ಯ. ಆದರೆ ಕಾವೇರಿಯನ್ನು ತಮಿಳುನಾಡು ಹಕ್ಕಿನಿಂದ ದಕ್ಕಿಸಿಕೊಳ್ಳುತ್ತಿರುವಂತೆ ಕರ್ನಾಟಕ ಕೃಷ್ಣಾ ವಿಷಯದಲ್ಲಿ ತಲೆಕೆಡಿಸಿಕೊಂಡಿಲ್ಲ. ಆಂಧ್ರದಲ್ಲಿ ಒಂದರ ಮೇಲೊಂದು ಅಣೆಕಟ್ಟುಗಳು ಎದ್ದು ನಿಂತು ನೀರಿನ ವಿತರಣೆ ನಡೆಯುತ್ತಿದ್ದರೂ ಕರ್ನಾಟಕದ್ದು ಆ ವಿಷಯದಲ್ಲಿ ದಿವ್ಯಮೌನ. ಬೇರೆ ರಾಜ್ಯಗಳ ಜೊತೆ ನದಿ ನೀರನ್ನು ಹಂಚಿಕೊಂಡು ತನ್ನ ಪಾಲನ್ನು ದಕ್ಕಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ ತನ್ನೆಲ್ಲ ಪೌರುಷವನ್ನು ತೋರಿಸುತ್ತಿರುವುದು ನೇತ್ರಾವತಿಯ ವಿಚಾರದಲ್ಲಿ, ಕರಾವಳಿಗರ ಮೇಲೆ! ಬೀದಿಯಲ್ಲಿ ಇಲಿಯಾಗಿ ಓಡಾಡುವ ಗಂಡ ಮನೆಯಲ್ಲಿ ಧರ್ಮಪತ್ನಿಗೆ ಬಡಿಗೆಯಿಂದ ಬಾರಿಸಿದಂತಿದೆ ಇದು!

ತಮಾಷೆಯೆಂದರೆ ಬೇರೆ ರಾಜ್ಯದಿಂದ ನೀರು ಬೇಕು ಎಂದು ಮಹದಾಯಿ ವಿಚಾರದಲ್ಲಿ ವಾದಿಸಿದ ವಕೀಲರೇ ಬೇರೆ ರಾಜ್ಯಕ್ಕೆ ನೀರು ಬಿಡೆವೆಂದು ಕಾವೇರಿಯ ವಿಚಾರದಲ್ಲಿ ವಾದಿಸಿದ್ದಾರೆ ಮತ್ತು ಎರಡರಲ್ಲೂ ಅಮೋಘವಾಗಿ ಸೋತಿದ್ದಾರೆ! ನ್ಯಾಯಾಲಯದಲ್ಲಿ ಕರ್ನಾಟಕ ಪದೇ ಪದೇ ಸೋಲುತ್ತಿರುವುದಕ್ಕೆ ನಮ್ಮ ರಾಜ್ಯ ಸರಕಾರವೇ ಕಾರಣ; ಯಾವ ವಿಚಾರದಲ್ಲೂ ಇವರು ಸಂಪೂರ್ಣ ಮತ್ತು ಸತ್ಯವಾದ ಮಾಹಿತಿಯನ್ನು ನ್ಯಾಯವಾದಿಗಳಿಗೆ ಒದಗಿಸುತ್ತಿಲ್ಲ ಎಂದು ಕರ್ನಾಟಕದ ವಕೀಲರು ಹೇಳುತ್ತಿದ್ದಾರೆ. ಇದಕ್ಕೆ ಅತ್ಯಂತ ಸ್ಪಷ್ಟವಾದ ಪುರಾವೆಯೆನ್ನುವಂತೆ ಸೆಪ್ಟೆಂಬರ್ 12ರಂದು ರಾಜ್ಯದ ಅಧಿಕೃತ ನ್ಯಾಯವಾದಿಗಳಾಗಿರುವ ಫಾಲಿ ನಾರಿಮನ್ ಅವರೇ ತಾನು ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಪ್ಪುಗಳಿವೆ ಎಂದು ಒಪ್ಪಿಕೊಂಡಿದ್ದಾರೆ! ಸರ್ವೋಚ್ಚ ನ್ಯಾಯಾಲಯಕ್ಕೆ ಸರಿಯಾದ ಅಫಿಡವಿಟ್ ಕೂಡ ಸಲ್ಲಿಸಲಾಗದ ಸರಕಾರ ಇನ್ನು ಪ್ರಕರಣವನ್ನು ಹೇಗೆ ನಿಭಾಯಿಸೀತು ಎಂಬುದೇ ಪ್ರಶ್ನೆ! ಕೇವಲ ಅರ್ಧ ದಿನದ ಅಂತರದಲ್ಲಿ ಮುಖ್ಯಮಂತ್ರಿಗಳು ಒಮ್ಮೆ “ಒಂದೇ ಒಂದು ಹನಿ ನೀರು ಬಿಡೆವು” ಎಂದು ಹೂಂಕರಿಸಿ ನಂತರ, “ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ನೀರು ಬಿಟ್ಟೇ ಬಿಡುತ್ತೇವೆ” ಎಂದರು. ಕನ್ನಡಿಗರ ಹಿತ ಕಾಪಾಡುವದಕ್ಕಿಂತ ತನ್ನ ಕುರ್ಚಿ ಕಾಪಾಡಿಕೊಳ್ಳುವುದೇ ಅತ್ಯಂತ ತುರ್ತಿನ ಅಗತ್ಯ ಎಂದವರಿಗೆ ಅನ್ನಿಸಿರಬೇಕು!

ಎಲ್ಲ ವಿವಾದಕ್ಕೆ ಕಲಶವಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೆಪ್ಟೆಂಬರ್ 13ರಂದು ಫೇಸ್‍ಬುಕ್‍ನಲ್ಲಿ ಒಂದು ಪೋಸ್ಟ್ ಬರೆದರು. “ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ನೋವಾಗಿದೆ. ಅದರ ಆದೇಶದನ್ವಯ 18,000 ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ನಾವು ತಮಿಳುನಾಡಿಗೆ ಬಿಡಬೇಕಾಗಿ ಬಂದಿದೆ. ಆದರೆ ಭಯ ಬೇಡ. ಮುಂದಿನ ಜೂನ್‍ವರೆಗೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನೂ ಕೃಷಿಗೆ ಬೇಕಾದ ನೀರನ್ನೂ ನಾವು ಹರಿಸುತ್ತೇವೆ” ಎಂದು ಹೇಳಿದರು. ಇದಂತೂ ಸಂಪೂರ್ಣವಾಗಿ ಜನರನ್ನು ದಿಕ್ಕು ತಪ್ಪಿಸುವ ಯತ್ನವಲ್ಲದೆ ಬೇರೇನೂ ಅಲ್ಲ. ಮುಖ್ಯಮಂತ್ರಿಗಳು ತಮ್ಮ ಸಲಹೆಗಾರರನ್ನು ಆದಷ್ಟು ಶೀಘ್ರವಾಗಿ ಬದಲಾಯಿಸಿಕೊಂಡರೆ ಅವರಿಗೂ ಒಳ್ಳೆಯದು, ರಾಜ್ಯಕ್ಕೂ ಒಳ್ಳೆಯದು. ಸುಪ್ರೀಂ ಕೋರ್ಟ್‍ನ ಆದೇಶದನ್ವಯ ಕರ್ನಾಟಕ ಹೆಚ್ಚುವರಿಯಾಗಿ ಬಿಡಬೇಕಾಗಿರುವ ನೀರು 18,000 ಕ್ಯೂಸೆಕ್ ಅಲ್ಲ; 63,000 ಕ್ಯೂಸೆಕ್! ಮೊದಲು ನ್ಯಾಯಾಲಯ 15,000 ಕ್ಯೂಸೆಕ್‍ನಂತೆ 10 ದಿನ ನೀರು ಬಿಡುವಂತೆ ಆದೇಶಿಸಿತ್ತು. ಆದರೆ ಕರ್ನಾಟಕ ಮೇಲ್ವಿಚಾರಣೆ ಅರ್ಜಿ ಹಾಕಿದ ಮೇಲೆ, ಮೊದಲ 7 ದಿನದ ನಂತರ ಮತ್ತೆ 9 ದಿನ ತಲಾ 12,000 ಕ್ಯೂಸೆಕ್ ಬಿಡುವಂತೆ ಆದೇಶಿಸಿತು. ಅಂದರೆ ಮೊದಲ ತೀರ್ಪಿನನ್ವಯ ನಾವು ಬಿಡಬೇಕಿದ್ದದ್ದು 1,50,000 ಕ್ಯೂಸೆಕ್. ನಂತರದ ಆದೇಶದ ಪ್ರಕಾರ ಬಿಡಬೇಕಾಗಿ ಬಂದದ್ದು (7 * 15,000) + (9 * 12,000) = 2,13,000 ಕ್ಯೂಸೆಕ್ ನೀರು. ಇಂಥ ಸರಳ ಲೆಕ್ಕ ಅರ್ಥವಾಗದ ನಾಡ ದೊರೆಗಳು ಅದು ಹೇಗೆ ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯವನ್ನು ಸಮರ್ಥಿಸಿಕೊಳ್ಳುತ್ತಾರೋ ದೇವರೇ ಬಲ್ಲ! ಇನ್ನು “ಮುಂದಿನ ವರ್ಷದ ಜೂನ್‍ವರೆಗೆ ನಾವು ಕನ್ನಡದ ಜನಕ್ಕೆ ಕುಡಿಯುವ ನೀರನ್ನೂ ಕೃಷಿಗೆ ಬೇಕಾದ ನೀರನ್ನೂ ಪೂರೈಸುತ್ತೇವೆ” ಎಂದು ಜಗಜ್ಜಾಹೀರಾಗುವ ಪೋಸ್ಟ್ ಹಾಕಿದ ಮೇಲೆ ಇದನ್ನೇ ಸರ್ವೋಚ್ಚ ನ್ಯಾಯಾಲಯ ಪ್ರಮುಖ ಸಾಕ್ಷಿ ಎಂದು ಪರಿಗಣಿಸಿಬಿಟ್ಟರೆ ಗತಿಯೇನು? ಆಗಸ್ಟ್ 28ರ ಸರ್ವಪಕ್ಷ ಸಭೆಯಲ್ಲಿ “ಕರ್ನಾಟಕದಲ್ಲಿ ಕುಡಿವ ನೀರಿಗೇ ಅಲೆದಾಡುವ ಪರಿಸ್ಥಿತಿ ಇದೆ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಅಬ್ಬರಿಸಿದ ಮುಖ್ಯಮಂತ್ರಿಗಳು ನ್ಯಾಯಾಲಯದ ಆದೇಶ ಹೊರ ಬಿದ್ದ ಬಳಿಕ ತೆಪ್ಪಗಾಗಿದ್ದೇಕೆ? ನ್ಯಾಯಾಂಗ ನಿಂದನೆಯಾದರೂ ಪರವಾಯಿಲ್ಲ; ನೀರು ಬಿಡೆವು; ಜನಾದೇಶವನ್ನು ಎದುರಿಸುತ್ತೇವೆ ಎಂದು ಥೇಟ್ ಸುಯೋಧನನಂತೆ ತೊಡೆ ತಟ್ಟಿದ್ದವರಿಗೆ ಅರ್ಧ ದಿನದಲ್ಲೇ ಜ್ಞಾನೋದಯವಾಯಿತೇ ಇಲ್ಲಾ ಮಂಕು ಕವಿಯಿತೇ? ಯಾಕೆ ದಿನಾಂತ್ಯದೊಳಗೆ ಪ್ಲೇಟ್ ಬದಲಾಯಿಸಿ, “ನ್ಯಾಯಾಂಗದ ಆದೇಶವನ್ನು ಸದಾ ಸರ್ವದಾ ಪಾಲಿಸುತ್ತೇವೆ” ಎಂಬ ಶರಣಾಗತಿ ಪ್ರದರ್ಶಿಸಿದರು? ಇವರು ಹೇಳುವಂತೆ ಮುಂದಿನ ಜೂನ್‍ವರೆಗೆ ಎಲ್ಲ ಕೆಲಸ ಕಾರ್ಯಗಳಿಗೂ ಬೇಕಾದಷ್ಟು ನೀರು ನಮ್ಮಲ್ಲಿ ಇದೆಯೆಂದಾದರೆ ಕಾವೇರಿ ನೀರಿನ ವಿಚಾರದಲ್ಲಿ ನಾವು ಬಡಿದಾಡುವುದಕ್ಕೆ ಕಾರಣವಾದರೂ ಏನಿದೆ? ಮುಖ್ಯಮಂತ್ರಿಗಳು ಯಾವ ಕಾರಣಕ್ಕಾಗಿ ಪ್ರಧಾನಿಗೆ ಪತ್ರಗಳನ್ನು ಬರೆದಿದ್ದಾರೆ? ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಮೈಸೂರಿಗೆ ನೇತ್ರಾವತಿಯ ನೀರು ಕುಡಿಸುವ ಯೋಚನೆ ಸರಕಾರದ್ದಾಗಿರಬಹುದು. ಆದರೆ ನೇತ್ರಾವತಿ ಹರಿಯುವ ಕರಾವಳಿ ಜನರು ನೀರಿಗಾಗಿ ಎಲ್ಲಿಗೆ ಹೋಗಬೇಕು? ಅರಬ್ಬೀ ಸಮುದ್ರಕ್ಕೆ ಬೀಳಬೇಕೆ?

ಕಾವೇರಿಯ ವಿಚಾರದಲ್ಲಿ ನಾವು ನತದೃಷ್ಟರೋ ಅಥವಾ ಕಾವೇರಿಯೇ ಈ ವಿಷಯದಲ್ಲಿ ಹತಭಾಗ್ಯಳೋ ಗೊತ್ತಿಲ್ಲ. ಜೀವನದಿಯ ವಿಷಯದಲ್ಲಿ ನಮ್ಮೆಲ್ಲ ಪ್ರೀತ್ಯಭಿಮಾನಗಳು ಕೇವಲ ಘೋಷಣೆಯ ಮಟ್ಟದಲ್ಲೇ ನಿಂತು ಬಿಟ್ಟಿವೆ. ಅದಕ್ಕೆ ಸರಿಯಾಗಿ ಮುಖ್ಯಮಂತ್ರಿಗಳೂ “ಜೀವ ಕೊಟ್ಟೇವು ನೀರು ಬಿಡೆವು” ಎಂಬ ಹಳೇ ಘೋಷಣೆಗೆ ತಕ್ಕಂತೆ ಜನರ ಮುಂದೆ ಹೂಂಕರಿಸಿ ಕೊನೆಗೆ ನೀರು ಬಿಡುತ್ತೇವೆಂದು ಮೆತ್ತಗೆ ಹೇಳಿಬಿಟ್ಟಿದ್ದಾರೆ. ಇಲ್ಲಿ ನಾವು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ:

ಫಾಲಿ ನಾರಿಮನ್ ಎಂಬ ಕರ್ನಾಟಕದ ಪರವಾದ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಕಾವೇರಿ ನೀರು ಬಿಡಲು ಕರ್ನಾಟಕ ಬದ್ಧವಾಗಿದೆ, ಸಿದ್ಧವಾಗಿದೆ ಎಂದು ಹೇಳಿಕೆ ಕೊಟ್ಟರು. ನಾರಿಮನ್ ಅಂಥ ಮಾತುಗಳನ್ನು ಹೇಳುತ್ತಾರೆಂದು ನನಗೆ ಗೊತ್ತೇ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅವರ ಈ “ಗೊತ್ತಿಲ್ಲ”ಗಳು ಇತ್ತೀಚೆಗೆ ತೋಳ ಬಂತು ತೋಳ ಕತೆಯಂತಾಗಿವೆ. ಅದೆಂಥಾ ಗಂಭೀರತೆಯ ಪ್ರಶ್ನೆಯನ್ನು ಅವರ ಮುಂದಿಟ್ಟರೂ ಸಿದ್ದರ ಸಿದ್ಧ ಉತ್ತರ: ಗೊತ್ತಿಲ್ಲ. ಹಾಗಾದರೆ ಇವರಿಗೆ ಗೊತ್ತಿರುವುದಾದರೂ ಏನು? ನಾರಿಮನ್ ಸಾಹೇಬರು ನ್ಯಾಯಾಲಯದಲ್ಲಿ ಏನು ಹೇಳುತ್ತಾರೆಂಬುದು ಗೊತ್ತಿಲ್ಲದಿದ್ದರೆ ಅವರನ್ನೇ ಯಾಕೆ ಇನ್ನೂ ಮುಂದುವರಿಸಿದ್ದಾರೆ? ನ್ಯಾಯಾಲಯಕ್ಕೆ ತನ್ನ ನಡೆಯನ್ನು ವಿವರಿಸುವ ಹೇಳಿಕೆಯನ್ನು ದಾಖಲಿಸಬೇಕಾದದ್ದು ನ್ಯಾಯವಾದಿಗಳೇ ಆದರೂ ಅವರು ಅದನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಂದ ಪಡೆಯಬೇಕು. ಮತ್ತು ಈ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಂದ ಸಲಹೆ-ಸೂಚನೆ ಪಡೆದಿರಬೇಕು. ನ್ಯಾಯವಾದಿ ಏನು ಹೇಳಿದರೋ ನನಗೆ ಗೊತ್ತಿಲ್ಲ ಎನ್ನುವ ಮುಖ್ಯಮಂತ್ರಿಗಳು ಮೂಲತಃ ತನ್ನ ಕೆಲಸವನ್ನೇ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದಾಗುತ್ತದೆ.

ನೀರಾವರಿ ಸಚಿವ ಎಂ.ಬಿ. ಪಾಟೀಲ್, “ನಾರಿಮನ್‍ರಿಗೆ ಸರ್ವಾಧಿಕಾರ ಕೊಟ್ಟಿದ್ದೇವೆ” ಎನ್ನುತ್ತಾರೆ. ವಕೀಲರಿಗೆ ಸರ್ವಾಧಿಕಾರ ಕೊಡುವ ಪದ್ಧತಿ ನಮ್ಮಲ್ಲಿ ಎಂದಿನಿಂದ ಪ್ರಾರಂಭವಾಯಿತು? ಕಕ್ಷಿದಾರನಿಗೆ ಏನು ಬೇಕೋ ಅದನ್ನು ನ್ಯಾಯದ ಮೂಲಕ ವಾದಿಸಿ ಕೊಡಿಸುವುದು ವಕೀಲರ ಜವಾಬ್ದಾರಿಯೇ ಹೊರತು ತಮಗೆ ಬೇಕಾದಂತೆ ವಾದಿಸಿ ಕಕ್ಷಿದಾರನನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲ.

ಸದ್ಭಾವನೆಯ ದೃಷ್ಟಿಯಿಂದ ತಮಿಳುನಾಡಿಗೆ ನೀರು ಹರಿಸುವೆನೆಂದು ನಾರಿಮನ್ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದನ್ನು ಅವರು ಯಾರನ್ನು ಕೇಳಿ ಸಿದ್ಧಪಡಿಸಿದರು? ಅದಕ್ಕೆ ಮುಖ್ಯಮಂತ್ರಿಗಳ ಅಂಕಿತ ಬಿದ್ದಿದೆಯೇ? ಈ ಪ್ರಮಾಣಪತ್ರದ ವಿವರಗಳನ್ನು ಸರಕಾರ ಮತ್ತು ಮುಖ್ಯಮಂತ್ರಿಗಳು ಯಾಕೆ ಸಾರ್ವಜನಿಕಗೊಳಿಸುತ್ತಿಲ್ಲ?

ಮಹದಾಯಿ ವಿಚಾರದಲ್ಲೂ ಕರ್ನಾಟಕ ಸರಕಾರ ಎಡವಿತು. ಕುಡಿಯಲು ನೀರು ಕೊಡಿ ಎಂದು ಕೇಳಿ ಮೇಲ್ಮನವಿ ಸಲ್ಲಿಸಿ, ಅದನ್ನು ನ್ಯಾಯಾಧಿಕರಣ ವಿಚಾರಣೆಗೆತ್ತಿಕೊಂಡ ಮೇಲೆ ಬೇಸಾಯಕ್ಕೂ ಬೇಕು ಎಂದು ಹೇಳಿ ಉಗಿಸಿಕೊಂಡಿತು. ಅದೇ ರೀತಿಯಲ್ಲಿ ಈಗಲೂ ಕರ್ನಾಟಕ ಸರ್ವೋಚ್ಚ ನ್ಯಾಯಾಲಯದಲ್ಲಿ “ಹೆಚ್ಚು ನೀರು ಬಿಟ್ಟರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ” ಎಂಬ ಕಾರಣವೊಡ್ಡಿ ಉಗಿಸಿಕೊಂಡಿದೆ. ಶಾಂತಿ ಸುವ್ಯವಸ್ಥೆಗಳನ್ನು ಕಾಪಾಡುವುದು ರಾಜ್ಯ ಸರಕಾರದ ಜವಾಬ್ದಾರಿ; ಅದನ್ನು ಮುಂದಿಟ್ಟುಕೊಂಡು ನೀರು ಕೊಡುವುದಿಲ್ಲ ಎನ್ನುತ್ತೀರಲ್ಲಾ ಎಂದು ನ್ಯಾಯಾಲಯ ಸರಕಾರಕ್ಕೆ ಛೀಮಾರಿ ಹಾಕಿತು. ಅದಾದ ಮೇಲೆ ಬೆಂಗಳೂರಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಸೆಪ್ಟೆಂಬರ್ 12ರಂದು ನಡೆದು ಹೋದ ಬಂದ್ ಅನ್ನು ಹದ್ದುಬಸ್ತಿನಲ್ಲಿಡಲಾಗದೆ ಸರಕಾರ ತನ್ನ ಅಸಮರ್ಥತೆಯನ್ನು ಜಗಜ್ಜಾಹೀರುಗೊಳಸಿತು.

ಮಾನ್ಯ ಸಿದ್ದರಾಮಯ್ಯನವರು ಈಗಿಂದೀಗ ಎತ್ತಿಕೊಳ್ಳಲೇಬೇಕಾದ ಕೆಲವೊಂದು ಸುಧಾರಣಾ ಕ್ರಮಗಳಿವೆ. ಮೊದಲನೆಯದಾಗಿ ಅವರು, ರಾಜ್ಯದ ಎಲ್ಲ ನೀರಾವರಿ ಸಮಸ್ಯೆಗಳ ವಿಚಾರದಲ್ಲೂ ತನಗೆ ಸರ್ವಾಧಿಕಾರವಿದೆ ಎಂಬಂತೆ ವರ್ತಿಸುತ್ತಿರುವ ನಾರಿಮನ್‍ರನ್ನೂ ಅವರ ವಕೀಲರ ಗುಂಪನ್ನೂ ಕೂಡಲೇ ಕೈಬಿಡಬೇಕು. ಸರಕಾರದ ಸಮಸ್ಯೆಗಳ ಆಳ-ಅಗಲ ಬಲ್ಲ, ಕನ್ನಡ ಬರುವ, ಕನ್ನಡಿಗರ ಸಂವೇದನೆಗಳನ್ನು ಅರ್ಥೈಸಿಕೊಳ್ಳುವ ಸಮರ್ಥ ನ್ಯಾಯವಾದಿಗಳನ್ನು ನೇಮಿಸಿಕೊಳ್ಳಬೇಕು. ಕೋಟಿಗಟ್ಟಲೆ ಸುರಿದು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಸಾಕಿಯೂ ಈ ನ್ಯಾಯವಾದಿಗಳಿಂದ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗುವ ತೀರ್ಪು ಪಡೆಯುತ್ತಿರುವುದು ಸರಿಯಲ್ಲ. ಎರಡನೆಯದಾಗಿ ಸೆಪ್ಟೆಂಬರ್‍ನಲ್ಲಿ ಕಾಣಿಸಿಕೊಳ್ಳುವ ಕಾವೇರಿ ಸಮಸ್ಯೆಗೆ ಮೂರ್ನಾಲ್ಕು ತಿಂಗಳ ಮೊದಲೇ ತಯಾರಿ ನಡೆಸಿಕೊಳ್ಳಬೇಕು. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬೋರ್‍ವೆಲ್ ತೋಡಲು ಕೂತರೆ ಪ್ರಯೋಜನವಿಲ್ಲ. ತನ್ನ ಅಹಂಕಾರ, ದರ್ಪ, ಜಗಮೊಂಡತನವನ್ನು ಆದಷ್ಟೂ ಕಡಿಮೆ ಮಾಡಿಕೊಂಡು ನೆರೆಹೊರೆಯ ದೊರೆಗಳೊಂದಿಗೂ ಒಂದಷ್ಟು ಸೌಹಾರ್ದದ ಸಂಬಂಧ ಬೆಳೆಸಿಕೊಳ್ಳುವುದು ಒಳ್ಳೆಯದು. ಎಲ್ಲ ಸಮಸ್ಯೆಗಳನ್ನೂ ನ್ಯಾಯಾಲಯದಲ್ಲೇ ನೋಡಿಕೊಳ್ಳುತ್ತೇನೆಂಬ ಉಡಾಫೆ ಬೇಡ. ನ್ಯಾಯಾಲಯದ ಹೊರಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಎಸ್.ಎಂ. ಕೃಷ್ಣ, ರಾಮಕೃಷ್ಣ ಹೆಗಡೆ ಮಾದರಿಯಾಗಲಿ. ಮೂರನೆಯದಾಗಿ ಬೆಂಗಳೂರು, ಮೈಸೂರು ನಗರಗಳಿಗೆ ಕಾವೇರಿ ನೀರಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹೇಗೆ ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಬೆಂಗಳೂರಿನ ಕೆರೆಗಳು ದೇವರಿಗೇ ಪ್ರೀತಿ ಎಂಬ ಮಟ್ಟಕ್ಕೆ ಹಾಳಾಗಿ ಹೋಗಿವೆ. ಸಾವಿರಾರು ಎಕರೆ ಹರಡಿಕೊಂಡಿರುವ ಇಂಥ ಕೆರೆಗಳನ್ನು ಬೇಸಿಗೆಯಲ್ಲಿ ಸ್ವಚ್ಛಗೊಳಿಸಿ ಮುಂಗಾರು ಮಳೆಯ ನೀರು ತುಂಬಿಕೊಳ್ಳಲು ಅಣಿಗೊಳಿಸಿದ್ದರೂ ಕಾವೇರಿ ನೀರನ್ನು ಬೆಂಗಳೂರು ನೆಚ್ಚಿಕೊಳ್ಳುವುದನ್ನು ತಡೆಯಬಹುದಾಗಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷಗಳು ಸಂದರೂ ಮುಖ್ಯಮಂತ್ರಿಗಳಿಗೆ ಬೆಳ್ಳಂದೂರು ಎಂಬ ಒಂದೇ ಒಂದು ಕೆರೆಯ ಸ್ಥಿತಿಯನ್ನು ಕೂಡ ಸುಧಾರಿಸಲು ಆಗಿಲ್ಲ ಎಂದರೆ ಏನು ಹೇಳೋಣ? ಬೆಂಗಳೂರಿನ ಕೆರೆಗಳನ್ನು ಸ್ವಚ್ಛಗೊಳಿಸಿದರೆ ಕಾವೇರಿಯ ಮೇಲಿನ ಹೊರೆಯನ್ನು 10% ತಗ್ಗಿಸಬಹುದು ಎಂಬುದು ಇವರಿಗೆ ಅರ್ಥವಾಗುವುದು ಇನ್ನು ಯಾವಾಗಲೋ! ನಾಲ್ಕನೆಯದಾಗಿ ನೇತ್ರಾವತಿಯ ನೀರನ್ನು ಮೈಸೂರು ಪ್ರಾಂತ್ಯಕ್ಕೆ ಹರಿಸುವ ಯೋಚನೆಯನ್ನು ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಕೈಬಿಡಬೇಕು. ಈಗಾಗಲೇ ಅಂತರ್‍ರಾಜ್ಯ ಸಮಸ್ಯೆಗಳಿಂದ ಹೈರಾಣಾಗಿರುವ ನಮಗೆ ಇನ್ನೊಂದು ಸಮಸ್ಯೆ ರಾಜ್ಯದೊಳಗೇ ಭುಗಿಲೆದ್ದು ಎರಡು ಪ್ರಾಂತ್ಯಗಳ ಜನರು ಹೊಡೆದಾಡಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗುವುದು ಬೇಕಿಲ್ಲ. ಸಾಧ್ಯವಾದರೆ ಕಾರವಾರದಲ್ಲೋ ಮಂಗಳೂರಿನಲ್ಲೋ ನಿರ್ಲವಣಾಗಾರ (ಡೀ-ಸ್ಯಾಲಿನೇಶನ್ ಪ್ಲಾಂಟ್)ಗಳನ್ನು ಸ್ಥಾಪಿಸಿ ಸಾಗರದ ನೀರನ್ನು ಶುದ್ಧೀಕರಿಸಿ ಒಳನಾಡಿಗೆ ಹರಿಸುವ ಯೋಜನೆ ಹಾಕಿಕೊಳ್ಳಿ. ಆದರೆ ಮಲೆನಾಡಿನಲ್ಲಿ ಹುಟ್ಟಿ ಕರಾವಳಿಯಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಕರಾವಳಿಯ ಜೀವನದಿಯ ಕೊರಳು ತಿರುಗಿಸಿ ನೈಸರ್ಗಿಕ ವ್ಯವಸ್ಥೆಯನ್ನು ಹಾಳುಗೆಡವಬೇಡಿ. ಕೊನೆಯದಾಗಿ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನುಳಿದ ಎರಡು ವರ್ಷಗಳಲ್ಲಾದರೂ ಯಾವುದೇ ಸಮಸ್ಯೆಯಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯಲಿ. ತಮಿಳುನಾಡಿನ ಅಮ್ಮನೆದುರು ಸಿದ್ದರಾಮಯ್ಯನವರ ಪೌರುಷ ಅದೆಷ್ಟೊಂದು ಬಲಹೀನ ಎಂಬುದು ಸಾಬೀತಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕೂಡ ನೆಟ್ಟಗೆ ನಿರ್ವಹಿಸಲಾರದ ಖ್ಯಾತಿ ಈಗಾಗಲೇ ಮುಖ್ಯಮಂತ್ರಿಗಳನ್ನು ಸುತ್ತಿಕೊಂಡಿದೆ. ಕನ್ನಡ ನೆಲದ ಹಿತಾಸಕ್ತಿಯನ್ನು ಕಾವೇರಿ ವಿಷಯದಲ್ಲಿ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆಂಬ ನಂಬಿಕೆ ಬಹುತೇಕ ಎಲ್ಲ ಕನ್ನಡಿಗರಲ್ಲೂ ಮನೆ ಮಾಡಿದೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯ ತಾನೇ ಮುಂದಾಗಿ ಸದ್ಭಾವನೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಲೇ ಇದ್ದಾರೆ! ಇವರು ಮುಖ್ಯಮಂತ್ರಿಯಾಗಿರುವುದು ಕರ್ನಾಟಕಕ್ಕೋ ತಮಿಳುನಾಡಿಗೋ ಎಂಬ ಆತಂಕ ಜನರಿಗೆ ಹುಟ್ಟಿದೆ. ನೀರು ಬಿಡದೆ ನ್ಯಾಯಾಂಗ ನಿಂದನೆ ಮಾಡಿದರೆ ಪದಚ್ಯುತಗೊಂಡು ಜನರ ಮುಂದೆ ಬರಬೇಕಾಗುತ್ತದೆ; ಆಗ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ದೂಳೀಪಟವಾಗಬಹುದೆಂಬ ಆತಂಕವೇ ಸಿದ್ದರಾಮಯ್ಯನವರನ್ನು ಈಗ ನೀರು ಬಿಡುವಂತೆ ಮಾಡಿದೆ. ಇಷ್ಟೊಂದು ದುರ್ಬಲವಾಗಿರುವ ಮುಖ್ಯಮಂತ್ರಿಗಳು ನಮಗೆ ಬೇಕೇ? ಇವರು ರಾಜಕೀಯ ಸಂನ್ಯಾಸ ಸ್ವೀಕರಿಸಿ ವಾನಪ್ರಸ್ತಕ್ಕೆ ಹೊರಟು ಹೋದರೆ ರಾಜ್ಯದ ರಾಜಕೀಯ ಕ್ಷಿತಿಜದಲ್ಲಿ ಇದುವರೆಗೆ ಹರಡಿರುವ ದಟ್ಟ ಕಾರ್ಮೋಡ ತಿಳಿಯಾಗಿ ಒಂದಷ್ಟು ಭರವಸೆಯ ಕಿರಣಗಳು ಮೂಡಬಹುದೇನೋ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post