X

ಕರಾಳಗರ್ಭ-8

“ನಾನು ವಿವರಿಸುತ್ತೇನೆ, ತಾಳಿ..ಮೂವತ್ತೈದು ವರ್ಷದ ಹಿಂದೆ ನಿಮ್ಮ ತಾಯಿ ಒಂದು ಹೆಣ್ಣು ಮಗುವನ್ನು ಹೆತ್ತು, ಅದನ್ನು ಬೇರೆ ದಂಪತಿಗಳಿಗೆ ಸಾಕಿಕೊಳ್ಳಲು ದತ್ತು ಕೊಟ್ಟರೆಂದು ನಮಗೆ ತಿಳಿದು ಬಂದಿದೆ..ಇದು ನಿಜವೆ?, ನಿಮಗೆ ಇದರ ಬಗ್ಗೆ ಏನು ಗೊತ್ತು ?”ಎಂದಳು

ಅಕೆಯ ಮುಖ ತಕ್ಷಣವೆ ವಿವರ್ಣವಾಗಿ ತಮ್ಮ ಎದೆಯನ್ನು ಗಾಬರಿಯಿಂದ ಒತ್ತಿಕೊಂಡರು.  “ನಮ್ಮಮ್ಮ?, ನನ್ನ ತಂಗಿ?…ನನಗೇನೂ ಗೊತ್ತಿಲ್ಲಾ…”ಎಂದು ತೊದಲುತ್ತಾ ತಲೆಯಾಡಿಸಿ ಚಡಪಡಿಸಿದರು, ಯಾವುದೋ ಮರೆತು ಹೋದ ಭೂತ ಮತ್ತೆ ಪೀಡಿಸಲು ಬಂದಿತೆಂಬಂತೆ,

ನಾನು ವಿವರಿಸಲು ಮುಂದಾದೆ:

“ ನೋಡಿ ನಮ್ಮ ಕಕ್ಷಿದಾರಳು ಈಗ ಜನಪ್ರಿಯ ಚಿತ್ರರಂಗ ಮತು ಚಿಕ್ಕತೆರೆಯ ನಟಿ., ಆಕೆ ತನ್ನ ಸಾಕು ತಂದೆತಾಯಿಯರಿಂದ ಈ ವಿಷಯ ಅರಿತರಂತೆ…ಅವರಿಗೆ ತಮ್ಮ ಹೆತ್ತಮ್ಮ-ಅಪ್ಪನನ್ನು ನೋಡುವ ಬಯಕೆಯಾಗಿದೆ..ಆ ಕಾಲದಲ್ಲಿ ನಂಬೂದರಿ ಕುಟುಂಬದಲ್ಲೆ ಇಂತಾ ಹೆಣ್ಣುಮಗು ಹುಟ್ಟಿತ್ತೆಂದು ಸೂಲಗಿತ್ತಿ ಸುಬ್ಬಮ್ಮ ಹೇಳಿದರು..”

ಹೊರಗೆ ಜೀಪೊಂದು ಬಿರ್ರನೆ ಬಂದು ನಿಲ್ಲುವ ಸದ್ದಾಗುತಿದೆ. ಪೋಲಿಸ್ ಜೀಪ್?

ನಮ್ಮನ್ನು ಗಾಬರಿ ಕಂಗಳಿಂದ ದಿಟ್ಟಿಸಿದರು ರಚನಾ… ಕೀಚಲು ದನಿಯಲ್ಲಿ ಬೆದರಿದ ಹರಿಣಿಯಂತಾದ ಆಕೆ, “ನಿಮ್ಮನ್ನು ಯಾರು ಕಳಿಸಿದರು…?…ಹೇಗೆ ಗೊತ್ತಾಯಿತು.?.”ಎಂದೆಲ್ಲಾ ತೊದಲಲು ಶುರು ಮಾಡುತ್ತಿರುವಂತೆಯೇ, ದಬದಬನೆ ಕಾಲು ಹಾಕುತ್ತಾ ಪೋಲಿಸ್ ಸಮವಸ್ತ್ರ ಧರಿಸಿದ್ದ ಅಧಿಕಾರಿಯೊಬ್ಬರು ಒಳಗೆ ನುಗ್ಗಿದ್ದರು

“ ಅವರಿಗೇ ಏನೂ ಹೇಳಬೇಡಾ ರಚನಾ..ಕೀಪ್ ಕ್ವೈಟ್..”ಎಂದು ಆತ ಗದರುತ್ತಾ ನಮ್ಮತ್ತ ತಿರುಗಿದರು

ಆತನ ಶರ್ಟ್ ಮೇಲೆ ’ರಾಮನ್, ಕಮಿಶನರ್ ಆಫ್ ಪೋಲೀಸ್’ ಬ್ಯಾಡ್ಜ್ ಇದೆ.

ಬಕ್ಕತಲೆ, ಸ್ವಲ್ಪ ಬೊಜ್ಜು, ಆಜಾನುಬಾಹು.. ಆದರೆ ಈಗೀಗ ನಿವೃತ್ತಿ ವಯಸ್ಸು ಹತ್ತಿರವಾಗಿದೆ..ಇಷ್ಟನ್ನು ಗ್ರಹಿಸಿದೆ ನನ್ನ ಅನುಭವೀ ಕಂಗಳಿದ.

ನಮ್ಮಿಬ್ಬರತ್ತ ದುರುಗುಟ್ಟಿ ನೋಡುತ್ತಾ ರಾಮನ್:

“ ನಿಮಗೇನು ಅಧಿಕಾರವಿದೆ ಇಲ್ಲಿಗೆ ಬಂದು ನನ್ನ ಹೆಂಡತಿಯನ್ನು ಪ್ರಶ್ನಿಸಲು..? ಯಾರು ಅನುಮತಿ ಕೊಟ್ಟರು.?.” ಎಂದು ಗುಡುಗಿದರು

ಮಧ್ಯೆ ಬಾಯಿ ಹಾಕಿದ ಲೂಸಿ, “ ನಾವು ಕಾನೂನಿನ ಅಧಿಕಾರಿಗಳು..ನಿಮಗೇ ಗೊತ್ತು ಕಮೀಶನರ್, ಸಿವಿಲ್ ಕೇಸಿನಲ್ಲಿ ವಿಚಾರಿಸಲು ಯಾರ ಅನುಮತಿಯು ಬೇಕಿಲ್ಲಾ….” ಎಂದಾಗ,

“ನಾನೂ ನಮ್ಮ ಲಾಯರನ್ನು ಕರೆಸುತ್ತೇನೆ, ಅವರೊಂದಿಗೇ ಮಾತಾಡಿ..ಈಗ ಹೊರಡಿ ಇಲ್ಲಿಂದ..!” ಎಂದು ಗದರಿಸಿ,  “ನೀನು ಮೊದಲು ಒಳಗೆ ಹೋಗು, ನಿನ್ನ ಜತೆ ಆಮೇಲೆ ಮಾತಾಡುತ್ತೇನೆ” ಎಂದು ಹೆಂಡತಿಯನ್ನು ಅಂಗಡಿಯ ಒಳಕೋಣೆಗೆ ಅಟ್ಟಿದರು

ಇವರ ಕೋಪಕ್ಕೆ ಬೆದರಿ ಮುಖ ಬಿಳಿಚಿಕೊಂಡ ರಚನಾ ಒಳಗೋಡಿದರು.

ಹಾಗೂ ಬೆದರದ ಲೂಸಿ,” ಇದರಲ್ಲಿ ಮುಚ್ಚಿಡುವುದು, ಬಚ್ಚಿಡುವುದು ಏನಿದೆ?..ನಿಮಗೆ ಈ ಬಗ್ಗೆ ಗೊತ್ತಿದ್ದನ್ನು ಹೇಳಿದರೆ ನಾವು ಹೋಗುತ್ತೇವೆ..”

“ ನನ್ನ ಹೆಂಡತಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲಾ, ನೀವಿನ್ನು ಹೊರಡಬಹುದು!!… ಔಟ್!” ಎಂದರು ಮುಖ ರಂಗೇರಿ ಸಿಡುಕಿದರು ಕಮೀಶನರ್. ಕ್ಷಣಕ್ಷಣಕ್ಕೂ ಆತನ ಅಸಹನೆ ಕೋಪ ಮಿತಿ ಮೀರುತ್ತಿದೆ…

.” ಬಾ, ಲೂಸಿ, ನಾವು ಆಮೇಲೆ ಬರೋಣಾ..”ಎಂದು ನಾನು ಅವರೊಂದಿಗೆ ವಾದ ಮಾದಲು ಸಿದ್ಧಳಾಗಿದ್ದವಳನ್ನು ಮೆತ್ತಗೆ ಮೊಳಕೈ ಹಿಡಿದು ಅಂಗಡಿಯ ಹೊರತಂದೆ.  ‘ಬೀಸೋ ದೊಣ್ಣೆ ತಪ್ಪಿದರೆ… ’ ಎನ್ನುತ್ತಾರಲ್ಲಾ ಅದು ಈಗ ಅನ್ವಯವಾಗುವಂತಿತ್ತು.

“ಬಟ್, ವಿಜಯ್, ಇದಕ್ಕೆ ಅರ್ಥವೇನು?…ಯಾರಾದರೂ ಮಾತಾಡಿಸಿದರೆ ಹೀಗೆ ಅಟ್ಟುತ್ತಾರೆಯೆ?..ಅಂತಾ ಯಾವುದೇ ಕಾನೂನಿಲ್ಲಾ” ಎಂದು ಮುಖವುಬ್ಬಿಸಿದಳು ಲೂಸಿ.

“ ಕಾನೂನಿನ ಚೌಕಟ್ಟಿನಿಂದ ಹೊರಗೆ ಕೆಲಸ ಮಾಡುವವರಿಗೆ ಅಂತಾ ಉಲ್ಲಂಘನೆ ಸಾಧ್ಯವಿದೆ” ಎಂದು ಸಂತೈಸಿದೆ ನಾನು. ಆದರೆ ಪೋಲೀಸ್ ಕಮೀಶನರ್ ಏನು ಬಚ್ಚಿಡುತ್ತಿದ್ದಾರೆ?

ಕಾರಿನ ಬಳಿ ಬಂದು ” ನೋಡು ಲೂಸಿ, ಇದ್ಯಾಕೋ ಕೈ ಮೀರುತ್ತಿದೆ..ನೀನು ತೆಪ್ಪಗೆ ಆಫೀಸಿಗೆ ಹೋಗು..ನಾನು ಸಂಜೆ ನಿನಗೆ ಸಿಗುತ್ತೇನೆ, ನನಗೀಗ ಕೆಲಸವಿದೆ!..”ಎಂದು ಅವಳನ್ನು ಅಲ್ಲಿಂದ ಸಾಗಿ ಹಾಕಿದೆ.

ನಾನು ಮಾಡಿದ ಮುಂದಿನ ಕೆಲಸವೆಂದರೆ ರಚನಾಳ ಅಂಗಡಿಯ ಹಿತ್ತಲನ್ನು ಹುಡುಕಿದ್ದು!

ಅತ್ತಿತ್ತ ನೋಡಿದೆ, ಯಾರೂ ನನ್ನತ್ತ ನೋಡುತ್ತಿಲ್ಲಾ…ಕಮಿಶನರ್ ಮತ್ತು ರಚನಾರ ಸಂವಾದವನ್ನು ಕದ್ದಾದರೂ ಕೇಳುವುದು ನನಗೆ ಬಹಳ ಅವಶ್ಯಕವಿತ್ತು..

ತಡ ಮಾಡದೆ ಕಾಂಪೌಂಡ್ ಗೋಡೆಯನ್ನೂ ಹಾರಿ,ಅಂಗಡಿಯ ಹಿಂದಿನ ರೂಮಿನ ಕಿಟಕಿ ಬಳಿ ಮೆತ್ತಗೆ ಹೊಗಿ ನಿಂತೆ..ಸುತ್ತಲಿನ ಆಫೀಸುಗಳಿಂದ ಯಾರೂ ನನ್ನತ್ತ ನೋಡುತ್ತಿರಲಿಲ್ಲ ಸದ್ಯಾ..

ಕಿಟಕಿಯಿಂದ ರಾಮನ್ ಅವರ ಏರಿದ ದನಿ ಸ್ಪಷ್ಟವಾಗಿ ಕೇಳಿಬರುತ್ತಿದೆ..

“ ನಾನು ಎಷ್ಟು ಸಲ ಹೇಳಿದ್ದೀನಿ..ಇಂತವರು ಬರುತ್ತಲೇ ಇರುತ್ತಾರೆ..ನಮ್ಮ ಹಳೆ ವಿಷಯವನ್ನು ಕೆದಕಲು..ನೀನು ಯಾರಿಗೂ ಆಸ್ಪದ ಕೊಡಬೇಡಾ ಅಂತಾ..”

ರಚನಾ ಕ್ಷೀಣ ದನಿಯಲ್ಲಿ: “ ಇಲ್ಲಾ ರೀ, ನಾನು ಭಯ ಬಿದ್ದೆನೇ ವಿನಾ ಅವರಿಗೆ ಏನೂ ಹೇಳಲಿಲ್ಲ..ಆದರೆ ಈ ವಿಷಯವನ್ನು ಇನ್ನೆಷ್ಟು ವರ್ಷ ಬಚ್ಚಿಡಲಿ..ನನ್ನ ಮನಸ್ಸು ನನ್ನ ಮಗಳಿಗಾಗಿ ಕಾತರಿಸುತ್ತಿದೆ, ಅದು ನಿಮಗೇನು ಗೊತ್ತು..?”

ನನಗೆ ಉಸಿರಾಡಲು ಕಷ್ಟವಾಗುತ್ತಿದೆ..ಯಾವ ಮಗಳು?

ರಾಮನ್ ದಬಾಯಿಸುತ್ತಿದ್ದಾರೆ: ” ಯಾಕೆ… ಅವಳು ನನ್ನ ಮಗಳಲ್ಲ ಅಂತಾ ತಾನೆ?..ನೀನು ಅವನೂ ಆ ಕಾಲದಲ್ಲಿ ತಪು ಹೆಜ್ಜೆ ಇಡದಿದ್ದರೆ ನಾವೇಕೆ ಇಷ್ಟು ವರ್ಷ ಇಂತಾ ಸೀಕ್ರೇಟ್ ಗುಪ್ತವಾಗೇ ಇಟ್ಟುಕೊಳ್ಳಬೇಕಾಗಿತ್ತು??

….ನೋಡು.ರಚನಾ, ಮೃದುಲಾ ಮಗಳಲ್ಲಾ, ನಮ್ಮ ಪಾಲಿನ ಶನಿ!!.ನನಗೆ ನಿನಗೆ ಹುಟ್ಟಿದ ರಾಜನ್ ಮಾತ್ರವೇ ನಮ್ಮ ಸಂತಾನ .ನೀನು ಅವಳನ್ನು ಮರೆತು ಬಿಡು, ನೀನೂ ಅವನೂ, ಜತೆಗೆ ನಿಮ್ಮಪ್ಪ ಮಾಡಿದ ಆ ಕಾಲದ ತಪ್ಪುಗಳಿಗೆ ನಾನು ಜೀವನ ಪರ್ಯಂತಾ ಈ ಸತ್ಯ ಮುಚ್ಚಿಟ್ಟುಕೊಂಡು ಹೀಗೆ ಬದುಕಬೇಕಾಗಿದೆ..ಅಷ್ಟು ಸಾಲದೆ?”

ಓಹ್!!!, ಅದಕ್ಕೇ ಮೃದುಲಾಗೂ ಈಕೆಗೂ ಅಷ್ಟೊಂದು ಹೋಲಿಕೆಯಿರುವುದು…ರಚಾನಾ ಮೃದುಲಾರ ತಾಯಿ!…ಅಕ್ಕತಂಗಿಯರೆಂದು ನಾನೂ ಲೂಸಿ ಮೋಸ ಹೋದೆವಲ್ಲಾ..!!!

ಆಗ ರಚನಾ ಅತ್ತು ಬಿಕ್ಕುತ್ತಿರುವ ಸದ್ದು ಕೇಳಿಸುತ್ತಿದೆ…” ನೋಡಿ, ಇನ್ನು ಆ ಜಾನಿ ಬೇರೆ ಬಂದು ಬಂದು ನಮ್ಮನ್ನು ಕಾಡುತ್ತಾನೆ.. ಅವನನ್ನಾದರೂ ತಡೆಯಿರಿ ಅಂದರೆ ಅದೂ ನಿಮ್ಮ ಕೈಲಿ…”

ರಾಮನ್ ಸಿಟ್ಟಿನಿಂದ ಕೂಗುತ್ತಾರೆ “ ನನ್ನ ಕೈಲಾಗಲ್ಲಾ ಅಂತಾ ತಾನೇ?…ಪೋಲಿಸ್ ಕಮೀಶನರ್ ಆಗಿಯೂ ನನ್ನ ಕೈ ಕಟ್ಟಿಹಾಕುವಂತಾ ಘಟನೆ ಇದು..ಇಲ್ಲದಿದ್ದರೆ ಅಂತಾ ಚಿಕ್ಕ ಪುಟ್ಟ ಕ್ರಿಮಿನಲ್ಸ್’ಗಳನ್ನು ನಾನು ಎರಡು ನಿಮಿಷದಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಜೈಲಿಗೆ ತಳ್ತಾ ಇದ್ದೆ…”

ರಚನಾ: “ ಇಲ್ಲಿ ಇವರೂ ಕೇಳುತ್ತಿದ್ದಾರೆ.. ಅಲ್ಲಿ ಅವನೂ ೨೫-೩೦ ಸಾವಿರ ಅಂತಾ ಕೇಳುತ್ತಲೆ ಇದ್ದಾನೆ..ಯಾವಾಗ ನನ್ನ ವಿಷಯ ಇಷ್ಟು ವರ್ಷ ಗೋಪ್ಯವಾಗಿದ್ದಿದ್ದು, ಈಗ ಹೊರಗೆ ಬರುತ್ತೇನೋ ಅಂತಾ ಭಯವಾಗ್ತಿದೆ … ಹಾಗೇನಾದರೂ ಆದರೆ ನನಗೂ, ಅವಳಿಗೂ ಇಬ್ಬರಿಗೂ ಮಾನ ಹೋಗುತ್ತದೆ…”.

ರಾಮನ್ ಗುಟುರು ಹಾಕುತ್ತಾರೆ: ” ನಿಮಗಲ್ಲಾ ಕಣೆ…ಮುಂದಿನ ವರ್ಷ ರಿಟೈರ್ ಆದ ಮೇಲೆ ಎಮ್ ಎಲ್ ಏ ಚುನಾವಣೆಗೆ ನಿಲ್ಲಬೇಕೂಂತಾ ಇದೀನಲ್ಲ ನಾನು..ನನಗೆ! ನನಗೆ ಮಾನ ಮೂರು ಕಾಸಿಗೆ ಹೋಗುತ್ತೆ ಈ ಊರಲ್ಲಿ… ಅದಕ್ಕೆ ನಾನು ಬಿಡಲ್ಲಾ..” ಎಂದವರು ಸ್ವಲ್ಪ ದನಿ ತಗ್ಗಿಸಿ:

“ ರಚನಾ, ನೋಡು ಆ ಜಾನಿಗೆ ಹೇಗೋ ಬುದ್ದಿ ಕಲಿಸುತ್ತೇನೆ, ಯೋಚಿಸಲು ಬಿಡು… ಅವನಿಂದಲೇ ಅನಿಸುತ್ತೆ  ಈ ಲಾಯರ್ರೂ. ಡಿಟೆಕ್ಟಿವ್ವೂ ಇಲ್ಲಿವರೆಗೂ ಹುಡುಕ್ಕೊಂಡು ಬಂದಿದ್ದು..ಇರಲಿ, ನೀನು ಇದರಲ್ಲಿ ತಲೆಯೇ ಕೆಡಿಸಿಕೊಳ್ಳಬೇಡಾ..ಇಷ್ಟು ವರ್ಷ ಹೇಗಿದ್ದೆಯೊ, ಹಾಗೇ ಇದ್ದುಬಿಡು…” ಎಂದು ಪತ್ನಿಗೆ ಸಾಂತ್ವನ ಹೇಳುತ್ತಿದ್ದಾರೆ

“ ಹೂಂ!..ಸರಿ…” ಎನ್ನುತ್ತಾ ಆಕೆ ಬಿಕ್ಕುವುದನ್ನು ನಿಲ್ಲಿಸುತ್ತಾ, ಸದ್ಯಕ್ಕೆ ಸಮಾಧಾನ ಪಟ್ಟುಕೊಳ್ಳುತ್ತಿರುವಂತಿದೆ

” ಸರಿ, ನಾನಿನ್ನು ಅಪ್ಪನ್ನ ನೋಡಿಕೊಂಡು ಬರ್ತೀನಿ… ಅವರಿಗೆ ಔಷಧಿ, ಹಾಲು ಕೊಟ್ಟು ಬರ್ತೀನಿ…”ಎಂದರು ರಚನಾ ಒಂದು ನಿಮಿಷ ತಡೆದು.

 ನನ್ನ ತಲೆಯಲ್ಲಿ ಜೇನು ಗೂಡು ಕೆದರಿಂತಿದೆ, ಮಿದುಳು ಗುಂಯ್-ಗುಡುತ್ತಿದೆ. ಅಲ್ಲಿಂದ ಜಾಗ ಖಾಲಿ ಮಾಡುವುದು ಉಚಿತ ಎಂದರಿತ ನಾನು ಮತ್ತೆ ಕಾಂಪೌಂಡ್ ಗೋಡೆ ಹಾರಿ ಸುರಕ್ಷಿತವಾಗಿ ನನ್ನ ಕಾರ್ ತಲುಪಿದೆ…ಲೂಸಿಗೆ ಈ ವಿಷಯ ಹೇಳೋಣವೆಂದು ಕಾತರದಿಂದ ಮೊಬೈಲ್ ಕೈಗೆತ್ತಿಕೊಳ್ಳುವಷ್ಟರಲ್ಲಿ, ಅತ್ತ ರಾಮನ್’ರವರು ಜೀಪಿನಲ್ಲಿ ಹೋಗುವುದಕ್ಕೂ, ಇತ್ತ ಅಂಗಡಿಗೆ ಬೀಗ ಹಾಕಿಕೊಂಡು, ರಚನಾ ತಮ್ಮ ಕಾರಿನತ್ತ ಹೋಗುವುದಕ್ಕೂ ಸರಿಹೋಯಿತು..

ನಾನು ಬೇಗ ಯೋಚನೆ ಮಾಡಿದೆ: ತನ್ನ ವಯಸ್ಸಾದ ತಂದೆಯನ್ನು ನೋಡಲು ಹೊರಟಳಲ್ಲವೆ?…ಈಕೆಯ ವಯಸ್ಸು ಈಗ ೫೦ರ ಆಜುಬಾಜಿನಲ್ಲಿರಬಹುದು, ಮೃದುಲಾಗೆ ಈಗೀಗ ೩೫ ವರ್ಷ ತುಂಬಿದ್ದೂ ಗಮನಿಸಿದರೆ, ರಚನಾಗೆ ೧೬ ರ ವಯಸ್ಸಿನಲ್ಲೇ ಗರ್ಭಿಣಿಯಾಗಿರಲು ಸಾಧ್ಯ..ಸಾಮಾನ್ಯವಾಗಿ ನಂಭೂದರಿಗಳು ಬಹಳ ಆಚಾರವಂತರು ಎಂದು ಕೇಳಿದ್ದೆ. ಇದೊಂದು ಅಪ್ರಾಪ್ತ ವಯಸ್ಸಿನ ಯುವತಿಯು ಗರ್ಭಿಣಿಯಾದ ಕತೆ ಎಂದಾಯಿತು… ಆ ಮೃದುಲಾರ ಜನ್ಮ ವಿಚಾರ ಏನೇ ನಡೆದಿದ್ದರೂ ಆ ಕಾಲದಲ್ಲಿ ಈಕೆಯ ಅಪ್ಪ ಅಮ್ಮನೇ ಆ ಮಗುವನ್ನು ದತ್ತು ಕೊಡಿಸಿ ಸಮಾಜದ ಕಂಗಳಿಂದ ಕುಲಗೌರವವನ್ನು ಕಾಪಾಡಿಕೊಂಡಿರಲು ಸಾಧ್ಯ ….

ಸರಿ,ನಾನು ರಚನಾಳನ್ನು ಹಿಂಬಾಲಿಸುತ್ತಾ ಹೋಗಿ, ಆಕೆಯ ತಂದೆಯ ಮನೆಯನ್ನೂ ಒಮ್ಮೆ ನೋಡಿ ಬಿಟ್ಟರೆ ವಾಸಿ ಎಂದೆನಿಸಿ ನನ್ನ ಕಾರಿನ ಚಾವಿ ತಿರುಗಿಸಿ ರೆಡಿಯಾದೆ..ರಚನಾ ತಮ್ಮ ಡಿಝೈರ್ ಕಾರನ್ನು ನಡೆಸಲಾರಂಭಿಸಿದಾಗ ನಿಧಾನವಾಗಿ ನಾನೂ ಆ ಕಾರಿನ ಹಿಂದೆ ನಡೆಸಿದೆ.

ಊರಿನ ಜನಜಂಗುಳಿಯಿದ್ದ ಮುಖ್ಯ ರಸ್ತೆ ಬಿಟ್ಟು ಊರಾಚೆಯ ನದಿ ಪಕ್ಕದ ಕಾಲೋನಿಗಳ ಧೂಳಿನ ರಸ್ತೆಗಳಲ್ಲಿ ಸಾಗುತ್ತಿದ್ದೇವೆ..ಈ ರಸ್ತೆಗಳಲ್ಲಿ ನಾನು ನಿರೀಕ್ಷಿಸುದಕ್ಕಿಂತಾ ಕಡಿಮೆ ಜನಗಳಿದ್ದುದರಿಂದಾ ಆಕೆಗೆ ಅನುಮಾನ ಬರದಂತೆ ಕಾರುಗಳ ನಡುವೆ ಅಂತರವನ್ನು ಕಾಪಾಡಿಕೊಂಡಿದ್ದೇನೆ.

ನದಿಗೆ ಅನತಿದೂರದ ಚಿಕ್ಕ ಕೆಂಪು ಹಳದಿ ಬಳಿದ ಗೋಡೆಗಳ ಹಳೆ ಬಂಗಲೆಯ ಮುಂದೆ ಕಾರು ನಿಲ್ಲುತ್ತಿದೆ. ಮನೆಯ ಆವರಣದಲ್ಲಿ ಗಿಡ ಪೊದೆಗಳು ಹುಚ್ಚಾಪಟ್ಟೆ ಬೆಳಿದಿದೆ, ಖಂಡಿತಾ ಇದಕ್ಕೆ ಮಾಲಿಯಂತೂ ಇಲ್ಲಾ…ಈಕೆಯೇ ಇಳಿದು ಗೇಟ್ ತೆಗೆದು ಮತ್ತೆ ಕಾರನ್ನು ಒಳನಡೆಸುತ್ತಿದ್ದಾರೆ…ಅಲ್ಲಿ ಮತ್ಯಾರೂ ಇಲ್ಲ, ಹಾಗಾದರೆ..

ರಚನಾರ ಕಾರ್ ಮನೆಯ ಪೋರ್ಚ್’ನಲ್ಲಿ ನಿಲ್ಲಿಸುವುದನ್ನು ನೋಡುತ್ತಾ ನಾನು ಆ ಬಂಗಲೆಯನ್ನು ದಾಟಿ ಮುಂದಿನ ರಸ್ತೆಯ ನಿರ್ಜನ ಮೂಲೆಗೆ ಹೋಗಿ ಕಾರ್ ನಿಲ್ಲಿಸಿದೆ. ವಾಪಸ್ ಆಕೆಯನ್ನು ಫಾಲೋ ಮಾಡಲು ಸುಲಭವಾಗುವಂತೆ..ನಾನು ಕಾರಿನಲ್ಲೇ ಕುಳಿತರೂ ಆ ಮನೆಯ ಮುಂಬಾಗಿಲು ಕಾಣಿಸುತ್ತಿದೆ. ಹೊರಗಿನ ಗೇಟ್ ಪಕ್ಕದ ಮಾಸಿಹೋದ ನಾಮ ಫಲಕದಲ್ಲಿ “ಮಾಧವನ್ ನಂಬೂದರಿ, ರೆಟೈರ್ಡ್ ಡಿಸ್ಟ್ರಿಕ್ಟ್ ಕಲೆಕ್ಟರ್” ಎಂದಿದೆ..

ರಚನಾ ಒಳಗೆ ಹೋಗಿದ್ದಾರೆ…ಯಾವಾಗ ಹೊರ ಬರುತ್ತಾರೋ? ಎಂದು ಆಕಳಿಸಿದ ನಾನು ಮಿಕ್ಕ ಬಿಸ್ಕೆಟ್ಸ್ ಸೇವಿಸಿ ಫ್ಲಾಸ್ಕ್’ನಲ್ಲಿದ ಕಾಫಿಯನ್ನು ಕುಡಿಯಲಾರಂಭಿಸಿದೆ.. ಓಹ್, ನಾನು ಲೂಸಿಗೆ ಫೋನ್ ಮಾಡಿಯೇ ಇಲ್ಲ ಎನಿಸಿದರೂ…ಇರಲಿ, ಇಲ್ಲಿಯ ವಿಷಯವನ್ನೂ ಅರಿತು ಸಂಜೆ ಒಟ್ಟಿಗೇ ವರದಿ ಮಾಡಿದರಾಯಿತು ಎಂದು ಸುಮ್ಮನಾದೆ.

ಅರ್ಧಗಂಟೆ ನಂತರವೇ ಅಲ್ಲಿ ಸ್ವಲ್ಪ ಚಟುವಟಿಕೆ ಶುರುವಾದದ್ದು.. ಮೊದಲು ಬಾಗಿಲು ಹಾರು ಹೊಡೆದು ರಚನಾ ಹೊರಬಂದರು..ಆಕೆಯ ಮುಖಚರ್ಯೆ, ನಡೆಯುವ ರೀತಿ ನೋಡಿದರೆ ಸ್ವಲ್ಪ ಉದ್ವಿಗ್ನಗೊಂಡಂತಿದೆ..ಹಿಂದಿನಿಂದ ಸಣ್ಣಗಿನ ಸ್ವಲ್ಪ ಬೆನ್ನು ಬಾಗಿದಂತ ವೃದ್ಧರೊಬ್ಬರು ಆಕೆಯನ್ನು ಮಾತಾಡಿಸುತ್ತಲೇ ಬರುತ್ತಿದ್ದಾರೆ..‘ನಿಲ್ಲು  ’ಎಂದು ಹೇಳುತ್ತಿರುವಂತಿದೆ..ನಾನು ಬಹಳ ದೂರವಿರುವುದರಿಂದ ಏನೂ ಕೇಳಿಸುತ್ತಿಲ್ಲ..

ಹಳೆಯ ಜೀನ್ಸ್ ಮತ್ತು ಜ್ಯಾಕೆಟ್ ಧರಿಸಿ ವುಲ್ಲನ್ ಮಫ್ಲರ್ ಕಟ್ಟಿದ್ದ ನಂಬೂದರಿಯವರು ವಯೋವೃದ್ಧರು ಎಂಬುದು ನಿಶ್ಚಿತ… ರಚನಾ ಕಾರಿಗೆ ಹತ್ತುವುದನ್ನು ತಡೆಯುತ್ತಾ, ಆಕೆಗೆ ಏನೋ ಸಮಜಾಯಿಷಿ ಮಾಡಹತ್ತಿದ್ದಾರೆ ನಂಬೂದರಿ..ರಚನಾ ಕುಪಿತಳಾಗಿ ನಿರಾಕರಿಸುತ್ತಿದ್ದರೆ, ಆತ ಇನ್ನೂ ಒತ್ತಾಯಿಸುತ್ತಾ, ಆಕೆಯ ಬೆನ್ನು ಮೇಲೆ ಕೈಯಿಟ್ಟು ಏನೋ ವಿವರಿಸುತ್ತಿದ್ದಾರೆ..ಆಗ ರಚನಾ ಏಕ್ ದಂ ಅಪ್ಪನ ಕೈನೂಕಿ, ಸಿಟ್ಟಿನಿಂದ ಕಾರ್ ಹತ್ತಿಯೇ ಬಿಡುತ್ತಾರೆ..ಮುದುಕ ನಂಬೂದರಿಯವರ ಮುಖ ದುಃಖ-ಅವಮಾನದಿಂದ ಕೆಂಪಾಗಿದೆ…ಅವರು ಆಕೆಯ ಕಾರ್ ಹೋಗುವುದನ್ನೇ ದಿಟ್ಟಿಸಿನೋಡಿ ಮನೆಯೊಳಕ್ಕೆ ಹೋದರು…ನಾನು ಕಾಯುತ್ತಲೆ ಇದ್ದೇನೆ…ಆತ ಇನ್ನೈದು ನಿಮಿಷಕ್ಕೆ ಒಂದು ಆಲ್ಸೇಷಿಯನ್ ನಾಯಿಯೊಂದಿಗೆ ಹೊರಬಂದರು…ನದಿಯ ಬದಿಗೆ ವಾಕಿಂಗ್ ಹೊರಟರು…ಇನ್ನು ನನಗೆ ಅಲ್ಲಿರಲು ಯಾವುದೇ ಕಾರಣವಿರಲಿಲ್ಲಾ ಎನಿಸಿತು..

ನಾನೂ ಲೂಸಿಯ ಆಫೀಸಿನತ್ತ ಕಾರ್ ತಿರುಗಿ ಹೊರಟೆ…ರಸ್ತೆಯಲ್ಲಿ ಯೋಚಿಸುತ್ತಿದ್ದೇನೆ..

ನಾನು ಒಪ್ಪಿ ಬಂದ ಕೆಲಸದ ಉದ್ದೇಶ ಎರಡು ಬಗೆಯದ್ದು:

ಮೊದಲಾಗಿ ಮೂಲಭೂತ ಸಮಸ್ಯೆಯಾದ ಮೃದುಲಾರ ಹೆತ್ತ ತಂದೆ-ತಾಯಿಗಳ ಅನ್ವೇಷಣೆಯಲ್ಲಿ ಅರ್ಧ ಮಾತ್ರ ಯಶಸ್ಸಾಗಿದೆ:ತಾಯಿ ಸಿಕ್ಕಿದ್ದಾರೆ ,ಆದರೆ ತಂದೆಯ ಪತ್ತೆಯಾಗಿಲ್ಲಾ..ಜತೆಗೆ ಈ ಹೆತ್ತ ತಾಯಿ ಬೇರೆ ಮದುವೆಯಾಗಿ, ಕಮೀಶನರ್’ರವರ ಪತ್ನಿಯಾಗಿದ್ದೂ, ಜಾನಿಯಂತವನ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದು ಅವನ ಬಾಯ್ಮುಚ್ಚಲು ಹಣ ತೆರುತ್ತಿದ್ದಾರೆ. ಕಮಿಶನರ್ ಮತ್ತು ರಚನಾ ಇಬ್ಬರೂ ಈ ಹಳೇ ರಹಸ್ಯವನ್ನು ಯಾವ ಬೆಲೆ ತೆತ್ತಿಯಾದರೂ ಮುಚ್ಚಿಡುವ ಯತ್ನದಲ್ಲಿದ್ದಾರೆ ಎನ್ನುವುದು ಸ್ಪಷ್ಟ, ಅದಕ್ಕೇ ಅವರು ನನ್ನನ್ನೂ ಲೂಸಿಯನ್ನೂ ಮುಂದೆ ವಿಚಾರಿಸದಂತೆ ಹೊರಗಟ್ಟಿದ್ದಾರೆ..

ಇನ್ನು ಬ್ಲ್ಯಾಕ್ ಮೈಲ್ ಮಾಡುತ್ತಿದ್ದವನು ಜಾನಿಯೇ ಎಂದು ಗೊತ್ತಾದರೂ ನಾನು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲಾ..ಏಕೆಂದರೆ ನನ್ನ ಕಕ್ಷಿದಾರ ಮೃದುಲಾ, ಲಾಯರ್ ಫೆರ್ನಾಂಡೆಸ್ ಸದ್ಯಕ್ಕಂತೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ…

ಅಂದರೆ ಈ ಸಮಸ್ಯೆಯಲ್ಲಿ ಇನ್ನೂ ಒಂದು ತಿಳಿಯದ ಮುಖವಿದೆ. ಇದು ಬರೇ ಅನೈತಿಕವಾಗಿ ಜನಿಸಿದ ಮಗುವನ್ನು ದತ್ತು ಪಡೆದ ಬ್ಲ್ಯಾಕ್ ಮೈಲ್ ಕೇಸಿನಲ್ಲೇ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇನ್ನೇನೋ ಅಡಗಿದೆ, ಬೆಳಕಿಗೆ ಬಂದಿಲ್ಲಾ.. ಇನ್ನು ಕಮೀಶನರ್ ಈಗ ತಾನೆ ತಮ್ಮ ಪತ್ನಿಗೆ ಹೇಳಿದಂತೆ ಅವರೇ ಜಾನಿಯ ಮೇಲೆ ಏನಾದರೂ ಕ್ರಮ ತೆಗೆದುಕೊಂಡರೆ ಮಾತ್ರ ಆ ಕಳೆದುಹೋಗಿರುವ ಮೃದುಲಾರ ತಂದೆಯ ಬಗ್ಗೆ ಬೆಳಕು ಚೆಲ್ಲುವುದು!

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Related Post